ಅಧ್ಯಾಯ ೧: ಅಕ್ಷರಗಳ ಜಾಲ ಮತ್ತು ಅರಿವಿನ ಆಳ
ನಮ್ಮ ಸುತ್ತಲಿನ ಜಗತ್ತಿನಲ್ಲಿ ಧರ್ಮ, ದೇವರು ಮತ್ತು ಸತ್ಯದ ಬಗ್ಗೆ ಮಾತನಾಡುವವರ ಸಂಖ್ಯೆಗೆ ಕೊರತೆಯಿಲ್ಲ. ಗ್ರಂಥಾಲಯಗಳು ಧರ್ಮಗ್ರಂಥಗಳಿಂದ ತುಂಬಿವೆ, ಮಠ-ಮಂದಿರಗಳಲ್ಲಿ ಪ್ರವಚನಗಳ ಸುರಿಮಳೆಯಾಗುತ್ತಿದೆ. ಆದರೆ, ಇಷ್ಟೆಲ್ಲಾ 'ಮಾತು'ಗಳ ನಡುವೆ 'ಮೌನ'ದ ಸಾರ ನಮಗೆ ದಕ್ಕಿದೆಯೇ? ಸತ್ಯದ ಹತ್ತಿರ ಹೋಗುತ್ತಿದ್ದೇವೆಯೇ ಅಥವಾ ಸತ್ಯದ ಬಗ್ಗೆ ಬರೆದ ಪುಸ್ತಕಗಳನ್ನೇ ಸತ್ಯವೆಂದು ನಂಬಿ ಕುಳಿತಿದ್ದೇವೆಯೇ?
ಅಲ್ಲಮಪ್ರಭುಗಳು ಒಂದು ಕಡೆ ಮಾರ್ಮಿಕವಾಗಿ ಹೇಳುತ್ತಾರೆ:
ವೇದ ಘನವೆಂಬುದೊಂದು ಸಂಪಾದನೆ.
ಶಾಸ್ತ್ರ ಘನವೆಂಬುದೊಂದು ಸಂಪಾದನೆ.
ಪುರಾಣ ಘನವೆಂಬುದೊಂದು ಸಂಪಾದನೆ.
ಆಗಮ ಘನವೆಂಬುದೊಂದು ಸಂಪಾದನೆ.
ಅಹುದೆಂಬುದೊಂದು ಸಂಪಾದನೆ.
ಅಲ್ಲವೆಂಬುದೊಂದು ಸಂಪಾದನೆ.
ಗುಹೇಶ್ವರನೆಂಬ ಮಹಾಘನದ
ನಿಜಾನುಭಾವಸಂಪಾದನೆಯ ಅರಿಯದ ಕಾರಣ
ಹಲವು ಸಂಪಾದನೆಗಳಾದವು
ಇಲ್ಲಿ 'ಸಂಪಾದನೆ' ಎಂದರೆ ಕೇವಲ ಹಣ ಗಳಿಸುವುದಲ್ಲ, ಬದಲಾಗಿ ನಮ್ಮ ಬುದ್ಧಿ ಸಂಗ್ರಹಿಸಿಟ್ಟುಕೊಂಡಿರುವ 'ಅಭಿಪ್ರಾಯಗಳು'. ನಾವೇ ಸೃಷ್ಟಿಸಿಕೊಂಡಿರುವ 'ಬೌದ್ಧಿಕ ಅಹಂಕಾರ'.
ಪಾಂಡಿತ್ಯದ ಮರುಳು
ಇಂದು ವೇದಾಂತ ಎನ್ನುವುದು ಕೇವಲ ಸಂಸ್ಕೃತದ ಪಾಂಡಿತ್ಯ ಪ್ರದರ್ಶನದ ವೇದಿಕೆಯಾಗಿ ಮಾರ್ಪಟ್ಟಿದೆ. ಎಷ್ಟೋ ಸಂಸ್ಕೃತ ಪಂಡಿತರು ವ್ಯಾಕರಣದ ಚೌಕಟ್ಟಿನಲ್ಲಿ ಪದಗಳನ್ನು ಒಡೆದು, ಸಂಧಿ-ಸಮಾಸಗಳ ಜಗ್ಗಾಟದಲ್ಲಿ ತೊಡಗುತ್ತಾರೆ. ಒಂದು ಶ್ಲೋಕದ ಅರ್ಥವನ್ನು ಹೇಳುವಾಗ ನೂರು ಅರ್ಥಗಳನ್ನು ಸೃಷ್ಟಿಸಿ, ಕೇಳುವವರ ತಲೆ ಬಿಸಿ ಮಾಡುತ್ತಾರೆ. ಇವರಿಗೆ ಭಾಷೆಯ ಮೇಲೆ ಹಿಡಿತವಿರಬಹುದು, ಆದರೆ ಆ ಪದಗಳು ಸೂಚಿಸುವ 'ಅರಿವಿನ' ಅರಿವಿದೆಯೇ ?
ಕೇವಲ ಪದಗಳ ಅರ್ಥ ತಿಳಿದುಕೊಳ್ಳುವುದು ಹಸಿವಾದಾಗ 'ಊಟ' ಎಂಬ ಪದವನ್ನು ಜಪಿಸಿದಂತೆ. 'ಊಟ' ಎಂಬ ಪದ ಹೊಟ್ಟೆ ತುಂಬಿಸುವುದಿಲ್ಲ, ಅದಕ್ಕೆ ಅನ್ನವನ್ನು ಉಣ್ಣಲೇಬೇಕು. ಹಾಗೆಯೇ, ಬ್ರಹ್ಮದ ಬಗ್ಗೆ ಸಾವಿರ ಭಾಷಣ ಮಾಡಿದರೂ ಅದು ಬೌದ್ಧಿಕ ಮಟ್ಟದ ಮನರಂಜನೆಯಾಗುತ್ತದೆಯೇ ಹೊರತು ಆತ್ಮದ ಅರಿವಾಗದು. ಇತರರಿಗೆ ಬೋಧಿಸುವ ಈ ಪಂಡಿತರು ತಾವೂ ಒಂದು ಅಂಧಕಾರದಲ್ಲಿರುತ್ತಾರೆ, ಅನ್ವೇಷಣೆಯ ಹಾದಿಯಲ್ಲಿರುವವರನ್ನೂ ದಾರಿ ತಪ್ಪಿಸುತ್ತಾರೆ.
ಜ್ಞಾನದ ಬೂತಾಟ ಮತ್ತು ಮರುಳಾಟ
ಅಲ್ಲಮಪ್ರಭುಗಳ ವಿಮರ್ಶೆ ಕೇವಲ ಮೇಲ್ಪದರದ ಪಂಡಿತರಿಗೆ ಸೀಮಿತವಾಗಿಲ್ಲ. ಅವರು ಜ್ಞಾನದ ಮೂಲಗಳೆಂದೇ ಬಿಂಬಿತವಾಗಿರುವ ವೇದ-ಶಾಸ್ತ್ರಗಳ ಆಂತರ್ಯವನ್ನೇ ಅತ್ಯಂತ ಕಟುವಾಗಿ ಪ್ರಶ್ನಿಸುತ್ತಾರೆ:
ವೇದಂಗಳೆಂಬವು ಬ್ರಹ್ಮನ ಬೂತಾಟ.
ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ.
ಆಗಮಗಳೆಂಬವು ಋಷಿಯ ಮರುಳಾಟ.
ಪುರಾಣಗಳೆಂಬವು ಪೂರ್ವದವರ ಗೊಡ್ಡಾಟ (ಒದ್ದಾಟ?)
ಇಂತು ಇವನು ಅರಿದವರ ನೇತಿಗಳೆದು
ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು
ಅಲ್ಲಮರು ವೇದಗಳನ್ನು 'ಬ್ರಹ್ಮನ ಬೂತಾಟ' ಎನ್ನುತ್ತಾರೆ. ಅಂದರೆ, ಸೃಷ್ಟಿಕರ್ತನೇ ಸೃಷ್ಟಿಸಿದ ಈ ಶಬ್ದಜಾಲಗಳು ಅಂತಿಮ ಸತ್ಯವಲ್ಲ, ಅವು ಕೇವಲ ಒಂದು ಲೀಲೆ ಅಥವಾ ಆಟವಷ್ಟೇ. ಯಾವ ಶಾಸ್ತ್ರವು ಮನುಷ್ಯನಿಗೆ ಅಂತಿಮ ಬಿಡುಗಡೆಯನ್ನು ನೀಡುವುದಿಲ್ಲವೋ, ಅದು ಕೇವಲ ಬೌದ್ಧಿಕ ಕಸರತ್ತಿನ 'ಗೊಡ್ಡಾಟ' (ಫಲವಿಲ್ಲದ ಪ್ರಯತ್ನ). ನಮ್ಮ ಪೂರ್ವಜರು ಬರೆದ ಪುರಾಣಗಳು ಅವರ ಕಾಲದ ಸಂಘರ್ಷ ಮತ್ತು ಒದ್ದಾಟಗಳ ಪ್ರತಿಬಿಂಬಗಳಾಗಿರಬಹುದು. ಆದರೆ ಅವುಗಳನ್ನೇ ಅಂತಿಮ ಸತ್ಯವೆಂದು ತಲೆಮೇಲೆ ಹೊತ್ತು ಮೆರವಣಿಗೆ ಮಾಡುವುದು 'ಮರುಳಾಟ' (ಹುಚ್ಚಾಟ) ಎಂದು ಅಲ್ಲಮರು ಎಚ್ಚರಿಸುತ್ತಾರೆ. ಸತ್ಯದ ಅನ್ವೇಷಕನಾದವನು ಈ ಎಲ್ಲವನ್ನೂ 'ನೇತಿ' (ಇದಲ್ಲ, ಇದಲ್ಲ) ಎಂದು ಕಳೆದು ಹಾಕಿ ತನ್ನ 'ನಿಜ'ದಲ್ಲಿ ನಿಲ್ಲಬೇಕು.
ಪ್ರಮಾಣದ ಗುಲಾಮಗಿರಿ
ಯಾವಾಗ ನಾವು ಈ ವೇದ-ಪುರಾಣಗಳ 'ಬೂತಾಟ'ಕ್ಕೆ ಮರುಳಾಗುತ್ತೇವೆಯೋ, ಆಗ ನಾವು 'ಪ್ರಮಾಣದ ಗುಲಾಮ'ರಾಗುತ್ತೇವೆ. ಅಂದರೆ, ನಮ್ಮ ಸ್ವಂತ ಅನುಭವಕ್ಕಿಂತ ಯಾವುದೋ ಪುಸ್ತಕದ ಸಾಲುಗಳೇ ನಮಗೆ ಮುಖ್ಯವಾಗುತ್ತವೆ. ಅವರು ತರ್ಕ ಮಾಡುವುದಿಲ್ಲ, ಅನ್ವೇಷಣೆ ಮಾಡುವುದಿಲ್ಲ. "ಗ್ರಂಥದಲ್ಲಿ ಹೇಳಿದೆ, ಹಾಗಾಗಿ ಅದು ಸತ್ಯ" ಎಂದು ಕಣ್ಣು ಮುಚ್ಚಿ ನಂಬುತ್ತಾರೆ. ಸತ್ಯವು ನಂಬಿಕೆಯ ವಿಷಯವಲ್ಲ, ಅದು ದರ್ಶನದ ವಿಷಯ. ಒಬ್ಬರು ಸಕ್ಕರೆ ಸಿಹಿಯಾಗಿದೆ ಎಂದು ಹೇಳಿದಾಗ ಅದನ್ನು ನಂಬುವುದು ಸುಲಭ, ಆದರೆ ಆ ಸಕ್ಕರೆಯನ್ನು ನಾಲಿಗೆಯ ಮೇಲಿಟ್ಟು ಸವಿಯುವ ತನಕ ಆ ಸಿಹಿಯ ನಿಜವಾದ ಅರಿವು ನಮಗಾಗುವುದಿಲ್ಲ. ವೇದಾಂತವನ್ನು ಅನ್ವೇಷಣೆ ಮಾಡದೆ ಕೇವಲ 'ಪ್ರಮಾಣ'ವೆಂದು ಒಪ್ಪಿಕೊಳ್ಳುವುದು ಮೌಢ್ಯ.
ಅನುಭವದ ಏಣಿ: ಸ್ಥೂಲದಿಂದ ಶೂನ್ಯಕ್ಕೆ
ಸತ್ಯವು ಕೇವಲ ಬಾಯಿಪಾಠ ಮಾಡುವ ಶ್ಲೋಕಗಳಲ್ಲಿಲ್ಲ, ಅದು ಲಯವಾಗುತ್ತಾ ಹೋಗುವ ಸ್ಥಿತಿಯಲ್ಲಿದೆ. ಅಲ್ಲಮರು ಸತ್ಯದ ಹಾದಿಯನ್ನು ಅದ್ಭುತವಾಗಿ ವಿವರಿಸಿದ್ದಾರೆ:
ವೇದ ಘನವೆಂಬೆನೆ, ವೇದ ನಾದದೊಳಗಡಗಿತ್ತು.
ನಾದ ಘನವೆಂಬೆನೆ, ನಾದ ಬಿಂದುವಿನೊಳಗಡಗಿತ್ತು.
ಬಿಂದು ಘನವೆಂಬೆನೆ, ಬಿಂದು ಅಂಗದೊಳಗಡಗಿತ್ತು.
ಅಂಗ ಘನವೆಂಬೆನೆ, ಅಂಗ ಲಿಂಗದೊಳಗಡಗಿತ್ತು.
ಲಿಂಗ ಘನವೆಂಬೆನೆ, ಲಿಂಗ ನಿಶ್ಚಿಂತದೊಳಗಡಗಿತ್ತು.
ನಿಶ್ಚಿಂತ ಘನವೆಂಬೆನೆ, ನಿಶ್ಚಿಂತ ನಿರಾಳದೊಳಗಡಗಿತ್ತು.
ನಿರಾಳ ಘನವೆಂಬೆನೆ, ನಿರಾಳ ನಿರೂಪದೊಳಗಡಗಿತ್ತು.
ನಿರೂಪ ನಿಃಕಳಂಕ ನಿಃಶೂನ್ಯ ನಿರಂಜನ ಪರಾಪರ ನೀನೇ
ಗುಹೇಶ್ವರಾ
ಈ ವಚನವು ನಮಗೆ ದಿಕ್ಸೂಚಿಯಾಗಿದೆ. ವೇದವೆಂಬ ಶಬ್ದವು 'ನಾದ'ದಲ್ಲಿ ಅಡಗಬೇಕು, ಅಂದರೆ ಮಾತು ಹೋಗಿ ಕಂಪನವಾಗಬೇಕು. ಆ ಕಂಪನವು 'ಬಿಂದು'ವಿನಂತೆ ಏಕಾಗ್ರವಾಗಬೇಕು. ಅದು ನಮ್ಮ 'ಅಂಗ' ಅಂದರೆ ಪ್ರಜ್ಞೆಯ ಭಾಗವಾಗಬೇಕು. ಅಲ್ಲಿಂದ ಲಿಂಗದ ಜೊತೆಗಿನ ಒಂದಾಗುವಿಕೆ, ತದನಂತರ 'ನಿಶ್ಚಿಂತ' ಅಂದರೆ ಆಲೋಚನೆಗಳೇ ಇಲ್ಲದ ಸ್ಥಿತಿ ಉಂಟಾಗಬೇಕು. ಆ ಸ್ಥಿತಿಯಲ್ಲಿ ನಮ್ಮ ಮನಸ್ಸು 'ನಿರಾಳ'ವಾಗಿ, ಅಂತಿಮವಾಗಿ ರೂಪವಿಲ್ಲದ 'ನಿರೂಪ'ದ, ನಿಃಶೂನ್ಯದ ಅರಿವ ಪಡೆಯಬೇಕು.
ನಮ್ಮ ಮುಂದಿನ ಪಯಣ
ಈ ಪುಸ್ತಕದ ಉದ್ದೇಶ ವೇದಾಂತವನ್ನು ನಿಮಗೆ ಕಲಿಸುವುದಲ್ಲ. ಬದಲಾಗಿ, ನೀವು ಕಲಿತಿರುವ ತಪ್ಪು ಮಾಹಿತಿಗಳ ಹೊರೆಯನ್ನು ಇಳಿಸುವುದು. ವೇದದಿಂದ ನಿಶ್ಶೂನ್ಯದವರೆಗೆ ಅಲ್ಲಮರು ತೋರಿಸಿದ ಈ ಹಾದಿಯಲ್ಲಿ ನಾವು ಪ್ರಾಯೋಗಿಕವಾಗಿ ಹೇಗೆ ಸಾಗಬಹುದು? ನಮ್ಮ ದೈನಂದಿನ ಗದ್ದಲದ ನಡುವೆ ಆ 'ನಿಶ್ಚಿಂತ' ಸ್ಥಿತಿಯನ್ನು ತಲುಪುವುದು ಹೇಗೆ?
ಮುಂದಿನ ಅಧ್ಯಾಯಗಳಲ್ಲಿ, ನಾವು ಕೇವಲ ಪುಸ್ತಕದ ಸಾಲುಗಳನ್ನಲ್ಲ, ನಮ್ಮ ಒಳಗಿನ ಅರಿವಿನ ಪದರಗಳನ್ನು ಒಂದೊಂದಾಗಿ ಅನ್ವೇಷಣೆ ಮಾಡೋಣ. ನೆನಪಿಡಿ, ಈ ಪಯಣದಲ್ಲಿ ನಾನೊಬ್ಬ ಗುರುವಲ್ಲ, ನೀವು ಕೇವಲ ಓದುಗರಲ್ಲ; ನಾವಿಬ್ಬರೂ ಸತ್ಯದ ಅನ್ವೇಷಕರು.
ಅಧ್ಯಾಯ ೨: ಅರಿವಿನ ಅನ್ವೇಷಣೆ - ದೃಗ್-ದೃಶ್ಯ ವಿವೇಕ
ನಮ್ಮ ಅನ್ವೇಷಣೆಯ ಆರಂಭದಲ್ಲಿ ಅಲ್ಲಮಪ್ರಭುಗಳ ಈ ಕ್ರಾಂತಿಕಾರಿ ವಚನವನ್ನು ಸ್ಮರಿಸೋಣ:
ವೇದಶಾಸ್ತ್ರ ಪುರಾಣ ಆಗಮಂಗಳೆಲ್ಲವೂ ಐವತ್ತೆರಡಕ್ಷರದೊಳಗು
ಐವತ್ತೆರಡಕ್ಷರಂಗಳೆಲ್ಲವು ಒಂದು ಜಿಹ್ವೆಯೊಳಗು.
ಆ ಜಿಹ್ವೆ ಮನದೊಳಗು, ಆ ಮನ ಪ್ರಾಣದೊಳಗು.
ಆ ಪ್ರಾಣ ನಾದದೊಳಗು, ಆ ನಾದ ಬ್ರಹ್ಮದೊಳಗು.
ಆ ನಾದಬ್ರಹ್ಮದ ಸಂಚವ ತಿಳಿದೊಡೆ,
ಗುಹೇಶ್ವರಲಿಂಗವು ತಾನೆ
ನಾವು ಬಹಳ ಪವಿತ್ರವೆಂದು ಪೂಜಿಸುವ ಎಲ್ಲ ವೇದ-ಶಾಸ್ತ್ರಗಳೂ ಅಂತಿಮವಾಗಿ ಇರುವುದು ಐವತ್ತೆರಡು ಅಕ್ಷರಗಳಲ್ಲಿ (ವರ್ಣಮಾಲೆಯಲ್ಲಿ). ಆ ಅಕ್ಷರಗಳು ನಮ್ಮ ನಾಲಿಗೆಯ ಮೇಲಿವೆ, ನಾಲಿಗೆಯು ಮನಸ್ಸಿನ ಸಂಕಲ್ಪದಂತಿದೆ, ಮನಸ್ಸು ಪ್ರಾಣದ ಮೇಲಿದೆ. ಅಂದರೆ, ಇಡೀ ಬ್ರಹ್ಮಾಂಡದ ಜ್ಞಾನವಿರುವುದು ನಮ್ಮ 'ಅರಿವಿ'ನಲ್ಲಿಯೇ ಹೊರತು ಹೊರಗಿನ ಕಾಗದಗಳಲ್ಲಲ್ಲ. ಆ ಅರಿವಿನ ಸಂಚನ್ನು (ಮೂಲವನ್ನು) ತಿಳಿಯುವುದೇ ಈ ಅಧ್ಯಾಯದ ಗುರಿ.
ವಿವೇಕವೆಂದರೇನು?
ಶಂಕರಾಚಾರ್ಯರು ತಮ್ಮ 'ಅಪರೋಕ್ಷಾನುಭೂತಿ'ಯಲ್ಲಿ ಸತ್ಯದ ಅನ್ವೇಷಣೆ ಮಾಡುವವರಿಗೆ 'ವಿವೇಕ' ಬಹಳ ಮುಖ್ಯವೆಂದು ಹೇಳುತ್ತಾರೆ. ವಿವೇಕ ಎಂದರೆ ಕೇವಲ ಬುದ್ಧಿವಂತಿಕೆಯಲ್ಲ. ಅದು 'ಸತ್ಯ' ಮತ್ತು 'ಅಸತ್ಯ'ವನ್ನು ಬೇರ್ಪಡಿಸುವ ಶಕ್ತಿ. ಹಾಲಿನಿಂದ ನೀರನ್ನು ಬೇರ್ಪಡಿಸುವ ಹಂಸದಂತೆ, ನಮ್ಮ ಅನುಭವದಲ್ಲಿ ಯಾವುದು 'ನಾನು' ಮತ್ತು ಯಾವುದು 'ನಾನಲ್ಲ' ಎಂಬುದನ್ನು ಅರಿಯುವುದೇ ನಿಜವಾದ ವಿವೇಕ.
ಇದನ್ನು ನಾವು 'ದೃಗ್-ದೃಶ್ಯ ವಿವೇಕ' ಎಂದು ಕರೆಯೋಣ. ಅಂದರೆ, ನೋಡುವವನು (ದೃಗ್) ಮತ್ತು ನೋಡಲ್ಪಡುವ ವಸ್ತು (ದೃಶ್ಯ) ಒಂದೇ ಆಗಿರಲು ಸಾಧ್ಯವಿಲ್ಲ.
೧. ಇಂದ್ರಿಯಗಳ ಪರೀಕ್ಷೆ
ನಿಮ್ಮ ಅನುಭವವನ್ನೇ ಗಮನಿಸಿ. ನಿಮಗೆ ಬಣ್ಣಗಳ ಅರಿವಿದೆ, ಸ್ಪರ್ಶದ ಅರಿವಿದೆ, ರುಚಿ, ವಾಸನೆ ಮತ್ತು ಶಬ್ದಗಳ ಅರಿವಿದೆ. ಈ ಐದೂ ವಿಷಯಗಳು ನಿಮಗೆ 'ತಿಳಿಯುತ್ತಿವೆ'. ನಿಯಮವೇನೆಂದರೆ: "ನಿಮಗೆ ಯಾವುದರ ಅರಿವಿದೆಯೋ, ಅದು ನೀವಲ್ಲ." ಏಕೆಂದರೆ ನೋಡುವ ಕಣ್ಣು ತಾನೇ ನೋಡುವ ವಸ್ತುವಾಗಲು ಸಾಧ್ಯವಿಲ್ಲ. ಆದ್ದರಿಂದ, ಈ ಬಣ್ಣ-ರುಚಿ-ವಾಸನೆಗಳು ನೀವಲ್ಲ.
೨. ದೇಹ ಅಥವಾ ಒಡಲಿನ ಅರಿವು
ಈಗ ನಿಮ್ಮ ದೇಹವನ್ನೇ ಗಮನಿಸಿ. ಈ ಒಡಲಿನಲ್ಲಿ ಆಗುವ ನೋವು, ಹಸಿವು, ಆಯಾಸ ಅಥವಾ ಸುಖದ ಸಂವೇದನೆಗಳು ನಿಮಗೇ ತಿಳಿಯುತ್ತವೆ. ನೀವು ದೇಹವನ್ನು ಒಂದು ವಸ್ತುವಿನಂತೆ ಅರಿಯಬಲ್ಲಿರಿ. ದೇಹವು ಹುಟ್ಟಿನಿಂದ ಇಂದಿನವರೆಗೆ ಬದಲಾಗುತ್ತಾ ಬಂದಿದೆ, ಆದರೆ ಆ ಬದಲಾವಣೆಯನ್ನು ಗಮನಿಸುತ್ತಿರುವ 'ನೀವು' ಹಾಗೆಯೇ ಇದ್ದೀರಿ. ಹಾಗಾಗಿ, ನೀವು ಈ ಒಡಲಲ್ಲ.
೩. ಯೋಚನೆ ಮತ್ತು ಭಾವನೆಗಳ ಸಂತೆ
ನಮ್ಮ ದೊಡ್ಡ ತಪ್ಪು ಎಂದರೆ ನಾವು ನಮ್ಮ ಯೋಚನೆಗಳೇ 'ನಾನು' ಎಂದು ನಂಬಿರುವುದು. ನಿಮ್ಮ ಮನಸ್ಸಿನಲ್ಲಿ ಹರಿಯುವ ಕೆಟ್ಟ ಯೋಚನೆ, ಒಳ್ಳೆಯ ಯೋಚನೆ, ಕಾಮ, ಕ್ರೋಧ ಅಥವಾ ಪ್ರೀತಿಯ ಭಾವನೆಗಳನ್ನು ಗಮನಿಸಿ. ಆಲೋಚನೆಗಳು ಹೊಳೆಯಂತೆ ವೇಗವಾಗಿ ಹರಿಯುತ್ತಿರಬಹುದು. ಆದರೆ, ಆ ಹರಿವಿನ ಅರಿವು ನಿಮಗಿದೆ ಅಲ್ಲವೇ? ಯೋಚನೆಗಳು ಬಂದಾಗಲೂ ನೀವು ಇರುತ್ತೀರಿ, ಅವು ಹೋದ ಮೇಲೂ ನೀವು ಇರುತ್ತೀರಿ. ಯೋಚನೆಗಳೇ ನೀವಾಗಿದ್ದರೆ, ಯೋಚನೆ ನಿಂತಾಗ ನೀವು ಇರುತ್ತಿರಲಿಲ್ಲ! ಆದ್ದರಿಂದ, ನೀವು ನಿಮ್ಮ ಆಲೋಚನೆಗಳೂ ಅಲ್ಲ, ಭಾವನೆಗಳೂ ಅಲ್ಲ.
೪. ನಿರಾಳದ ಅರಿವು
ಒಮ್ಮೆ ಎಲ್ಲ ಯೋಚನೆಗಳು ನಿಂತು ಹೋದಾಗ ಒಂದು ಕ್ಷಣ 'ನಿರಾಳ' ಅಥವಾ ಶಾಂತಿಯ ಅನುಭವವಾಗುತ್ತದೆ. ಆಗ ನಾವು "ಅಬ್ಬಾ! ಎಷ್ಟು ಶಾಂತವಾಗಿದೆ" ಎಂದುಕೊಳ್ಳುತ್ತೇವೆ. ಆದರೆ ನೆನಪಿಡಿ, ಆ ನಿರಾಳ ಸ್ಥಿತಿಯ ಅಥವಾ ಆ ಶಾಂತಿಯ ಅರಿವೂ ನಿಮಗಿದೆ. ಆ ಶಾಂತಿಯನ್ನು ನೀವು ಅರಿಯುತ್ತಿದ್ದೀರಿ ಎಂದರೆ, ನೀವು ಆ ಶಾಂತಿಗಿಂತಲೂ ಭಿನ್ನವಾದ ಅರಿವು. ಆ ನಿರಾಳವೂ ನೀವಲ್ಲ.
ಹಾಗಾದರೆ ನೀವು ಯಾರು?
ಈಗ ಎಲ್ಲವನ್ನೂ 'ನೇತಿ' (ನಾನಲ್ಲ) ಎಂದು ಕಳೆದ ಮೇಲೆ ಉಳಿಯುವುದು ಏನು? ಯಾವುದು ಎಲ್ಲವನ್ನೂ ಅರಿಯುತ್ತಿದೆಯೋ, ಆ 'ಅರಿವು' (Awareness) ನೀವು.
ಈ ಅರಿವಿನ ಸ್ವರೂಪವನ್ನು ಅನ್ವೇಷಿಸಿದರೆ ನಮಗೆ ಅಚ್ಚರಿಯಾಗುತ್ತದೆ:
ನಿರೂಪ: ಈ ಅರಿವಿಗೆ ಯಾವುದೇ ರೂಪವಿಲ್ಲ.
ನಿರಾಕಾರ: ಇದಕ್ಕೆ ಯಾವುದೇ ಆಕಾರವಿಲ್ಲ, ಇದು ಎಲ್ಲವನ್ನೂ ಒಳಗೊಳ್ಳುವ ಆಕಾಶದಂತೆ.
ಆಸೀಮ: ಇದಕ್ಕೆ ಯಾವುದೇ ಗಡಿ ಅಥವಾ ಪರಿಧಿ ಇಲ್ಲ. ಇದು ಎಲ್ಲೆಡೆ ವ್ಯಾಪಿಸಿದೆ.
ಕಾಲತೀತ: ನಿಮ್ಮ ದೇಹ ಬದಲಾಗುತ್ತಿದೆ, ಪ್ರಪಂಚ ಬದಲಾಗುತ್ತಿದೆ, ಆದರೆ ಈ 'ಅರಿವು' ಎಂದಿಗೂ ಬದಲಾಗುತ್ತಿಲ್ಲ. ಏನು ಬದಲಾಗುತ್ತಿದೆಯೋ ಅದನ್ನು ಅರಿಯುತ್ತಿರುವ ಈ ಅರಿವು ಬದಲಾಗಲು ಸಾಧ್ಯವಿಲ್ಲ. ಹಾಗಾಗಿ ನೀವು ಕಾಲಕ್ಕೆ ಸಿಲುಕದವರು.
ದೃಗೇವ ನ ತು ದೃಶ್ಯತೆ: ಅರಿವು ಯಾವತ್ತೂ 'ನೋಟ'ವಲ್ಲ
ನಮ್ಮ ಅನ್ವೇಷಣೆಯಲ್ಲಿ ಒಂದು ಮಹತ್ವದ ಘಟ್ಟವೆಂದರೆ, ನಾವು ಈ ಅರಿವನ್ನು ಒಂದು ವಸ್ತುವಿನಂತೆ ಹೊರಗೆ ಹುಡುಕಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿಯುವುದು. ಸಂಸ್ಕೃತದಲ್ಲಿ ಇದನ್ನು "ದೃಗೇವ ನ ತು ದೃಶ್ಯತೆ" ಎನ್ನಲಾಗುತ್ತದೆ. ಅಂದರೆ, ಅರಿವು ಯಾವತ್ತೂ 'ದೃಕ್' (ನೋಡುವವನು/ಸಾಕ್ಷಿ) ಆಗಿರುತ್ತದೆಯೇ ಹೊರತು, ಅದು ಎಂದಿಗೂ 'ದೃಶ್ಯ' (ನೋಡಲ್ಪಡುವ ವಸ್ತು) ಆಗಲು ಸಾಧ್ಯವಿಲ್ಲ.
ಇದನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆ ಗಮನಿಸಿ: ನಿಮ್ಮ ಕಣ್ಣುಗಳು ಜಗತ್ತಿನ ಎಲ್ಲ ವಸ್ತುಗಳನ್ನು ನೋಡಬಲ್ಲವು. ಆದರೆ ಅದೇ ಕಣ್ಣುಗಳು ತಮಗೆ ತಾವೇ ನೇರವಾಗಿ ಕಾಣಿಸಿಕೊಳ್ಳಲು ಸಾಧ್ಯವೇ? ಕನ್ನಡಿಯ ಸಹಾಯವಿಲ್ಲದೆ ಕಣ್ಣು ತನ್ನನ್ನು ತಾನು ನೋಡಿಕೊಳ್ಳಲಾರದು. ಹಾಗೆಯೇ, ಅರಿವು ಎಲ್ಲವನ್ನೂ ಅರಿಯುತ್ತದೆ, ಆದರೆ ಅದನ್ನು ನಾವು ಕಣ್ಣೆದುರಿನ ವಸ್ತುವಿನಂತೆ ಅಥವಾ ಒಂದು ಆಲೋಚನೆಯಂತೆ 'ನೋಡಲು' ಸಾಧ್ಯವಿಲ್ಲ. ಏಕೆಂದರೆ, ನೀವು ಯಾವುದನ್ನಾದರೂ ನೋಡುತ್ತಿದ್ದೀರಿ ಎಂದರೆ ಅದು 'ದೃಶ್ಯ'ವಾಗಿಬಿಡುತ್ತದೆ, ಅದನ್ನು ನೋಡುತ್ತಿರುವ 'ನೀವು' (ಅರಿವು) ಅದಕ್ಕಿಂತ ಭಿನ್ನವಾಗಿ ಸಾಕ್ಷಿಯಾಗಿರುತ್ತೀರಿ.
ಅರಿವಿನ ಅರಿವು: ಇಲ್ಲಿ ಒಂದು ಚಮತ್ಕಾರವಿದೆ. ಅರಿವಿಗೆ ತನ್ನ ಅರಿವಿದೆ! ನೀವು ಗಾಢ ನಿದ್ರೆಯಲ್ಲಿದ್ದಾಗ ಯಾವುದೇ ಆಲೋಚನೆ ಇರುವುದಿಲ್ಲ, ಯಾವ ದೃಶ್ಯವೂ ಇರುವುದಿಲ್ಲ. ಆದರೂ ಎಚ್ಚರವಾದ ಮೇಲೆ "ನಾನು ಚೆನ್ನಾಗಿ ನಿದ್ದೆ ಮಾಡಿದೆ, ಅಲ್ಲಿ ಏನೂ ಇರಲಿಲ್ಲ" ಎನ್ನುತ್ತೀರಿ. ಅಂದರೆ, "ಏನೂ ಇಲ್ಲದ" ಸ್ಥಿತಿಯನ್ನೂ ಅರಿತವನು ಅಲ್ಲಿ ಸಾಕ್ಷಿಯಾಗಿದ್ದ ಎಂದರ್ಥ.
ಇದು ಹೇಳುವುದಕ್ಕೆ ಸ್ವಲ್ಪ ಕಷ್ಟದ ವಿಷಯ, ಆದರೆ ನಿಮ್ಮ ಅನುಭವದಲ್ಲಿ ಅತ್ಯಂತ ಸುಲಭ. ನೀವು ಈಗ ಈ ಸಾಲುಗಳನ್ನು ಓದುತ್ತಿದ್ದೀರಿ ಎನ್ನುವ ಅರಿವು ನಿಮಗಿದೆ ಅಲ್ಲವೇ? ಆ ಅರಿವು ಎಲ್ಲಿದೆ? ಅದು ನಿಮ್ಮ ಒಳಗಿನ ಯಾವ ಮೂಲೆಯಿಂದ ಬರುತ್ತಿದೆ? ಅದನ್ನು ಹಿಡಿಯಲು ಹೋದರೆ ಅದು ಸಿಗುವುದಿಲ್ಲ, ಏಕೆಂದರೆ ಹಿಡಿಯಲು ಹೋಗುವವನೇ ಆ ಅರಿವು!
"ತನ್ನನ್ನು ತಾನು ಅರಿಯಲು ಅರಿವಿಗೆ ಬೇರೊಂದು ಅರಿವಿನ ಅವಶ್ಯಕತೆಯಿಲ್ಲ. ದೀಪವು ಕತ್ತಲನ್ನು ಹೋಗಲಾಡಿಸಲು ಮತ್ತೊಂದು ದೀಪವನ್ನು ಕೇಳುವುದಿಲ್ಲವೋ, ಹಾಗೆಯೇ ನೀವು ಅರಿವಾಗಿ ನಿಂತಾಗ ಅದು ಸ್ವಯಂಪ್ರಕಾಶವಾಗುತ್ತದೆ."
ಅನುಭವದ ಹಾದಿ
ಇದನ್ನು ಕೇವಲ ಒಂದು ಸಿದ್ಧಾಂತವೆಂದು ಓದಬೇಡಿ. ದಿನಕ್ಕೆ ಹತ್ತು ನಿಮಿಷ ಶಾಂತವಾಗಿ ಕುಳಿತು, "ನನಗೆ ಈಗ ಯಾವುದರ ಅರಿವಾಗುತ್ತಿದೆ? ಆ ಅರಿವಾಗುತ್ತಿರುವ ವಸ್ತು ನಾನಾ?" ಎಂದು ಪ್ರಶ್ನಿಸಿಕೊಳ್ಳಿ. ನೀವು ಅರಿವಾಗಿ ನಿಲ್ಲುವ ಅಭ್ಯಾಸ ಮಾಡಿದಷ್ಟೂ ಈ ಸತ್ಯವು ಸ್ಪಷ್ಟವಾಗುತ್ತಾ ಹೋಗುತ್ತದೆ. ಆರಂಭದಲ್ಲಿ ಇದು ಕೇವಲ ತಾರ್ಕಿಕವಾಗಿ ಕಾಣಬಹುದು, ಆದರೆ ಅನ್ವೇಷಣೆ ಮುಂದುವರಿದಂತೆ ಇದು ನಿಮ್ಮ 'ಅಪರೋಕ್ಷಾನುಭೂತಿ' (Direct Experience) ಆಗುತ್ತದೆ.
ಈ ಅರಿವಿನ ಬೆಳಕಿನಲ್ಲಿ ನಾವು ಇನ್ನೂ ಆಳವಾಗಿ ಹೋಗಬೇಕಿದೆ. ಮುಂದಿನ ಅಧ್ಯಾಯದಲ್ಲಿ ಮತ್ತೊಂದು ವಿವೇಕದ ಮೂಲಕ ನಮ್ಮ ಅಸ್ತಿತ್ವದ ಇನ್ನಷ್ಟು ಪದರಗಳನ್ನು ಅನ್ವೇಷಿಸೋಣ.
ಮುಂದುವರೆಯುವುದು....