ಮಂಟಪದ ಸುತ್ತಲೂ ಆವರಿಸಿದ್ದ ಆ ನಿಗೂಢ ನೀಲಿ ಬೆಳಕು ವಿಕ್ರಂನ ಕಣ್ಣುಗಳನ್ನು ಕುರುಡು ಮಾಡುವಂತಿತ್ತು. ಕಪ್ಪು ಮುಖವಾಡ ಧರಿಸಿದ್ದ ವ್ಯಕ್ತಿಗಳು ಆ ಬೆಳಕನ್ನು ಕಂಡು ಬೆಚ್ಚಿಬಿದ್ದರು. ಅವರು ಪಠಿಸುತ್ತಿದ್ದ ಮಂತ್ರಗಳು ಒಮ್ಮೆಲೇ ನಿಂತುಹೋದವು. ವಿಕ್ರಂಗೆ ಇದು ಸುಸಮಯವೆನಿಸಿತು. ಅವನು ತನ್ನ ಕೈಯಲ್ಲಿದ್ದ ಭಾರವಾದ ಟಾರ್ಚ್ ಅನ್ನು ಎಸೆದು, ಹತ್ತಿರವಿದ್ದ ಪಂಜೊಂದನ್ನು ಎತ್ತಿಕೊಂಡು ಮುನ್ನುಗ್ಗಿದ. ಕಾವ್ಯಾ ಎಂದು ಕಿರುಚುತ್ತಾ ಅವಳನ್ನು ಕಟ್ಟಿದ್ದ ಹಗ್ಗವನ್ನು ಬಿಡಿಸಲು ಹೋದ. ಆದರೆ, ವಿಕ್ರಂ ಕಾವ್ಯಳ ಹತ್ತಿರ ಹೋಗುತ್ತಿದ್ದಂತೆ ಅವಳ ಕಣ್ಣುಗಳು ಸಂಪೂರ್ಣವಾಗಿ ಬಿಳಿಯಾಗಿದ್ದವು. ಅವಳು ಮನುಷ್ಯ ಸಹಜವಾದ ಸ್ಥಿತಿಯಲ್ಲಿ ಇರಲಿಲ್ಲ. ಹತ್ತಿರ ಹೋಗಬೇಡ ವಿಕ್ರಂ ಇವಳು ಈಗ ಕಾವ್ಯಳಲ್ಲ, ಇವಳು ಬ್ರಹ್ಮಗಿರಿಯ ರಕ್ತ ಚಾಮುಂಡಿಯ ವಾಹಕ ಎಂದು ಆ ಗುಂಪಿನ ನಾಯಕ ಅಬ್ಬರಿಸಿದ. ಅವನ ಧ್ವನಿ ಮೃತ್ಯುವಿನಂತೆ ಕಠೋರವಾಗಿತ್ತು. ವಿಕ್ರಂ ಹಿಂದೆ ಸರಿಯಲಿಲ್ಲ. ಅಘೋರಿ ನೀಡಿದ್ದ ಆ ಪಂಚಲೋಹದ ಕಂಕಣ ಈಗ ಬೆಂಕಿಯಂತೆ ಉರಿಯುತ್ತಿತ್ತು. ವಿಕ್ರಂ ಆ ಕಂಕಣವಿದ್ದ ಕೈಯಿಂದ ಕಾವ್ಯಳ ಹಣೆಯನ್ನು ಮುಟ್ಟಿದ ತಕ್ಷಣ, ಅವಳ ಮೈಯಲ್ಲಿದ್ದ ಆ ನೀಲಿ ಬೆಳಕು ಒಮ್ಮೆಲೇ ವಿಕ್ರಂನ ದೇಹಕ್ಕೆ ವರ್ಗಾವಣೆಯಾದಂತೆ ಭಾಸವಾಯಿತು. ಕಾವ್ಯ ಪ್ರಜ್ಞೆ ತಪ್ಪಿ ವಿಕ್ರಂನ ತೋಳುಗಳ ಮೇಲೆ ಬಿದ್ದಳು.
ಅಷ್ಟರಲ್ಲಿ ಮುಖವಾಡ ಧರಿಸಿದವರು ಇವರನ್ನು ಸುತ್ತುವರಿದರು. ಆ ಹಸ್ತಪ್ರತಿಯ 65ನೇ ಪುಟದಲ್ಲಿ ಬರೆದಂತೆ, ಇಂದು ರಾತ್ರಿ ರಕ್ತ ಹರಿಯಲೇಬೇಕು. ಇವರನ್ನು ಜೀವಂತವಾಗಿ ಬಿಡಬೇಡಿ ಎಂದು ನಾಯಕ ಆಜ್ಞೆ ಮಾಡಿದ.
ವಿಕ್ರಂ ಕಾವ್ಯಳನ್ನು ಎತ್ತಿಕೊಂಡು ದಟ್ಟವಾದ ಪೊದೆಯೊಳಗೆ ನುಗ್ಗಿದ. ಹಿಂದೆ ಬಾಣಗಳು ಮತ್ತು ಈಟಿಗಳು ಗಾಳಿಯಲ್ಲಿ ಸೀಳಿಕೊಂಡು ಬರುತ್ತಿದ್ದವು. ಕಾಡಿನ ದಾರಿ ಈಗ ಬದಲಾದಂತೆ ಕಾಣುತ್ತಿತ್ತು. ಅಘೋರಿ ಹೇಳಿದ ಮಾತು ನೆನಪಾಯಿತು ಕಾಡು ನಿನ್ನ ದಾರಿ ತಪ್ಪಿಸುತ್ತದೆ ವಿಕ್ರಂಗೆ ಹೋಗಬೇಕಾದ ದಾರಿ ಕಾಣುತ್ತಿರಲಿಲ್ಲ, ಆದರೆ ಅವನ ಕೈಯಲ್ಲಿದ್ದ ಕಂಕಣವು ಒಂದು ದಿಕ್ಕಿನತ್ತ ಸೆಳೆಯುತ್ತಿತ್ತು.
ಅವನು ಓಡುತ್ತಾ ಒಂದು ದೊಡ್ಡ ಪ್ರಪಾತದ ಅಂಚಿಗೆ ಬಂದು ನಿಂತನು. ಕೆಳಗೆ ಭೋರ್ಗರೆಯುವ ಕಬಿನಿ ನದಿ. ಹಿಂದೆ ಸಾವಿನ ಸದ್ದು ಮಾಡುತ್ತಾ ಬರುತ್ತಿರುವ ಶತ್ರುಗಳು. ಬೇರೆ ದಾರಿಯಿಲ್ಲದೆ ವಿಕ್ರಂ, ಪ್ರಜ್ಞಾಹೀನಳಾಗಿದ್ದ ಕಾವ್ಯಳನ್ನು ಗಟ್ಟಿಯಾಗಿ ಹಿಡಿದು ನದಿಗೆ ಜಿಗಿದನು. ಕೆಲವು ಗಂಟೆಗಳ ನಂತರ ವಿಕ್ರಂ ಕಣ್ಣು ಬಿಟ್ಟಾಗ ಅವನು ನದಿಯ ದಡದಲ್ಲಿದ್ದನು. ಮಳೆ ನಿಂತಿತ್ತು, ಬೆಳಗಿನ ಜಾವದ ಮೊದಲ ಕಿರಣಗಳು ಮರಗಳ ನಡುವೆ ಇಣುಕುತ್ತಿದ್ದವು. ಅವನ ಪಕ್ಕದಲ್ಲೇ ಕಾವ್ಯ ಮಲಗಿದ್ದಳು. ಅವಳು ನಿಧಾನವಾಗಿ ಕಣ್ಣು ಬಿಟ್ಟಳು. ವಿಕ್ರಂ ನಾವು ಎಲ್ಲಿಗೆ ಬಂದಿದ್ದೇವೆ? ಏನಾಯಿತು ರಾತ್ರಿ? ಅವಳು ಏನೂ ತಿಳಿಯದವಳಂತೆ ಕೇಳಿದಳು.
ವಿಕ್ರಂ ಅವಳನ್ನು ಸಂಶಯದಿಂದ ನೋಡಿದ. ನಿನಗೆ ಏನೂ ನೆನಪಿಲ್ಲವೇ ಕಾವ್ಯ? ನಿನ್ನ ಮೈಯಿಂದ ಆ ನೀಲಿ ಬೆಳಕು, ಆ ಮಂತ್ರಗಳು ನೀನು ಯಾರು ನಿಜ ಹೇಳು? ಕಾವ್ಯ ಒಂದು ಕ್ಷಣ ಮೌನವಾದಳು. ಅವಳ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿತು. ವಿಕ್ರಂ, ನನ್ನ ಅಣ್ಣ ಆರ್ಯನ್ ಬ್ರಹ್ಮಗಿರಿಗೆ ಬಂದಿದ್ದು ಸಂಶೋಧನೆಗಾಗಿ ಅಲ್ಲ. ನಮ್ಮ ಕುಟುಂಬಕ್ಕೆ ಈ ಬೆಟ್ಟದ ಜೊತೆ ಸಾವಿರ ವರ್ಷಗಳ ಸಂಬಂಧವಿದೆ. ನಮ್ಮ ಮುತ್ತಜ್ಜ ಈ ಬೆಟ್ಟದ ಗುಹೆಯ ಕಾವಲುಗಾರನಾಗಿದ್ದನಂತೆ. ನನ್ನ ಅಣ್ಣನನ್ನು ಆ ಪಂಗಡದವರು ಬಲಿ ಕೊಡಲು ಕರೆದೊಯ್ದಿದ್ದಾರೆ ಎಂಬುದು ನನಗೆ ಗೊತ್ತು. ಆ ನೀಲಿ ಬೆಳಕು ಅದು ನನ್ನ ರಕ್ತದಲ್ಲಿರುವ ಬ್ರಹ್ಮ ಮುದ್ರೆಯ ಶಕ್ತಿ. ಆದರೆ ಅದನ್ನು ಹೇಗೆ ನಿಯಂತ್ರಿಸಬೇಕೆಂದು ನನಗೆ ಗೊತ್ತಿಲ್ಲ.
ವಿಕ್ರಂ ಅವಳ ಮಾತನ್ನು ಕೇಳಿ ದಂಗಾದನು. ಅಂದರೆ, ಕಾವ್ಯ ತನಗೇ ತಿಳಿಯದಂತೆ ಈ ರಹಸ್ಯದ ಒಂದು ಭಾಗವಾಗಿದ್ದಳು.
ಅವರು ಎದ್ದು ನಿಂತಾಗ, ಮರಳಿನ ಮೇಲೆ ಒಂದು ವಿಚಿತ್ರವಾದ ನಾಣ್ಯ ಬಿದ್ದಿರುವುದು ಕಂಡಿತು. ಅದು ರುದ್ರಪ್ಪನ ಪಂಗಡದವರು ಬಿಟ್ಟುಹೋದ ನಾಣ್ಯವಾಗಿತ್ತು. ಅದರ ಮೇಲೆ ಒಂದು ಗುಹೆಯ ನಕ್ಷೆಯಿತ್ತು. ಆ ನಕ್ಷೆಯ ಕೆಳಗೆ ಕೇವಲ ಒಂದು ವಾಕ್ಯವಿತ್ತು ಸಾವಿರ ಮೆಟ್ಟಿಲುಗಳು, 65 ಬಾಗಿಲುಗಳು ಸತ್ಯ ಅಡಗಿರುವುದು ಶೂನ್ಯದಲ್ಲಿ.
ವಿಕ್ರಂ ಕಾವ್ಯಳ ಕೈ ಹಿಡಿದು ಹೇಳಿದ, ಈಗ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ. ನಿನ್ನ ಅಣ್ಣನನ್ನು ಹುಡುಕಲು ಮತ್ತು ಈ 65 ಸಂಖ್ಯೆಯ ರಹಸ್ಯ ತಿಳಿಯಲು ನಾವು ಬ್ರಹ್ಮಗಿರಿಯ ಶಿಖರವನ್ನು ಹತ್ತಲೇಬೇಕು. ಅವರು ಬೆಟ್ಟದತ್ತ ನೋಡಿದಾಗ, ಶಿಖರದ ತುದಿಯಲ್ಲಿ ಸಾವಿರಾರು ಕಾಗೆಗಳು ಸುತ್ತು ಹೊಡೆಯುತ್ತಿದ್ದವು. ಅದು ಏನೋ ಒಂದು ಅಹಿತಕರ ಘಟನೆ ನಡೆಯಲಿದೆ ಎಂಬ ಮುನ್ಸೂಚನೆಯಾಗಿತ್ತು.
ನದಿಯ ದಡದಿಂದ ಬ್ರಹ್ಮಗಿರಿ ಶಿಖರದತ್ತ ನೋಡಿದಾಗ ಅದು ಆಕಾಶವನ್ನೇ ಮುಟ್ಟುವಂತೆ ಬೃಹತ್ತಾಗಿ ಕಾಣುತ್ತಿತ್ತು. ಕಾಡಿನ ದಾರಿಯ ನಡುವೆ ಈಗ ಒಂದು ಪುರಾತನವಾದ ಕಲ್ಲಿನ ಮೆಟ್ಟಿಲುಗಳ ಸಾಲು ಗೋಚರಿಸಿತು. ಈ ಮೆಟ್ಟಿಲುಗಳು ಸಾಧಾರಣವಾದವುಗಳಲ್ಲ ಅವುಗಳ ಮೇಲೆ ವಿಚಿತ್ರವಾದ ಜೀವಿಗಳ ಚಿತ್ರಗಳನ್ನು ಕೆತ್ತಲಾಗಿತ್ತು. ಇವೇ ಸಾವಿರ ಮೆಟ್ಟಿಲುಗಳು ವಿಕ್ರಂ ಪಿಸುಗುಟ್ಟಿದ.ಅವರು ಮೆಟ್ಟಿಲುಗಳನ್ನು ಹತ್ತಲು ಶುರು ಮಾಡಿದರು. ಸುಮಾರು ನೂರು ಮೆಟ್ಟಿಲು ಹತ್ತುವಷ್ಟರಲ್ಲಿ ವಾತಾವರಣದಲ್ಲಿ ವಿಚಿತ್ರ ಬದಲಾವಣೆಯಾಯಿತು. ಮಧ್ಯಾಹ್ನವಾಗಿದ್ದರೂ ಸೂರ್ಯನ ಬೆಳಕು ಮರೆಯಾಗಿ ದಟ್ಟವಾದ ಮಂಜು ಕವಿಯಿತು. ಹಕ್ಕಿಗಳ ಚಿಲಿಪಿಲಿ ನಿಂತುಹೋಗಿ, ಎಲ್ಲೋ ದೂರದಲ್ಲಿ ನರಿಗಳು ಊಳಿಡುವ ಸದ್ದು ಕೇಳಿಸತೊಡಗಿತು. ವಿಕ್ರಂ ನನಗೆ ಏನೋ ವಿಚಿತ್ರವಾಗಿ ಅನಿಸುತ್ತಿದೆ. ಯಾರೋ ನಮ್ಮನ್ನು ಗಮನಿಸುತ್ತಿದ್ದಾರೆ ಕಾವ್ಯ ಗಾಬರಿಯಿಂದ ಸುತ್ತಲೂ ನೋಡಿದಳು.ವಿಕ್ರಂ ತನ್ನ ಕೈಯಲ್ಲಿದ್ದ ಆ ಪಂಚಲೋಹದ ಕಂಕಣವನ್ನು ನೋಡಿದ. ಅದು ಈಗ ವೇಗವಾಗಿ ಕಂಪಿಸುತ್ತಿತ್ತು. ಜಾಗರೂಕತೆಯಿಂದ ಇರು ಕಾವ್ಯಾ, ಇಲ್ಲಿ ಕಾಣುವ ಪ್ರತಿಯೊಂದೂ ನಿಜವಲ್ಲ.ಅಷ್ಟರಲ್ಲಿ, ಹನ್ನೆರಡನೇ ಮೆಟ್ಟಿಲ ಹತ್ತಿರ ಬಂದಾಗ ಅವರಿಬ್ಬರೂ ಸ್ತಬ್ದರಾದರು. ಅವರ ಕಣ್ಣ ಮುಂದೆ ಮಂಜಿನ ನಡುವೆ ಒಬ್ಬ ವ್ಯಕ್ತಿ ನಿಂತಿದ್ದ. ಅವನು ಮತ್ಯಾರೂ ಅಲ್ಲ, ಕಾವ್ಯಳ ನಾಪತ್ತೆಯಾಗಿದ್ದ ಅಣ್ಣ ಆರ್ಯನ್. ಅಣ್ಣಾ ಕಾವ್ಯ ಕಿರುಚುತ್ತಾ ಅವನ ಹತ್ತಿರ ಓಡಲು ಹೋದಳು.ಆರ್ಯನ್ ಮಂಕಾಗಿ ನಿಂತಿದ್ದ, ಅವನ ಬಟ್ಟೆಗಳು ಹರಿದಿದ್ದವು ಮತ್ತು ಕಣ್ಣುಗಳು ನಿರ್ಜೀವವಾಗಿದ್ದವು. ಅವನು ಮೆಲ್ಲಗೆ ಕೈ ಎತ್ತಿ ವಿಕ್ರಂ ಮತ್ತು ಕಾವ್ಯಳನ್ನು ತನ್ನತ್ತ ಬರುವಂತೆ ಸನ್ನೆ ಮಾಡಿದ. ನಿಲ್ಲು ಕಾವ್ಯಾ ಹೋಗಬೇಡ ವಿಕ್ರಂ ಅವಳ ಕೈ ಹಿಡಿದು ತಡೆದನು. ಅವನು ನನ್ನ ಅಣ್ಣ ವಿಕ್ರಂ, ಬಿಡು ನನ್ನನ್ನು ಕಾವ್ಯ ಹಠ ಮಾಡಿದಳು. ಆದರೆ ವಿಕಂ ತನ್ನ ಟಾರ್ಚ್ ಬೆಳಕನ್ನು ಆರ್ಯನ್‌ನ ಕಾಲಿನ ಮೇಲೆ ಬಿಟ್ಟನು. ಅಲ್ಲಿ ಕಂಡ ದೃಶ್ಯ ಭಯಾನಕವಾಗಿತ್ತು. ಆರ್ಯನ್‌ನ ಪಾದಗಳು ಹಿಂದಕ್ಕೆ ತಿರುಗಿದ್ದವು. ಅವನು ಮನುಷ್ಯನಲ್ಲ, ಬದಲಿಗೆ ಬೆಟ್ಟದ ಶಕ್ತಿಗಳು ಸೃಷ್ಟಿಸಿದ ಒಂದು ಮಾಯಾವಿ ನೆರಳು. ವಿಕ್ರಂ ತಕ್ಷಣ ತನ್ನ ಕೈಯಲ್ಲಿದ್ದ ಕಂಕಣವನ್ನು ಆ ನೆರಳಿನತ್ತ ತೋರಿಸಿದ. ಕಂಕಣದಿಂದ ಹೊರಹೊಮ್ಮಿದ ಕಿಡಿಯೊಂದು ಆ ಆಕೃತಿಯನ್ನು ತಾಕಿದ ತಕ್ಷಣ, ಆರ್ಯನ್‌ನ ರೂಪ ಮಾಯವಾಗಿ ಒಂದು ದೊಡ್ಡ ಕಪ್ಪು ಹಾವಾಗಿ ಬದಲಾಗಿ ಪೊದೆಯೊಳಗೆ ಸರಿದು ಹೋಯಿತು. ಕಾವ್ಯ ನಡುಗುತ್ತಾ ನೆಲದ ಮೇಲೆ ಕುಳಿತಳು. ನನ್ನ ಅಣ್ಣನನ್ನು ನೋಡುವ ಆಸೆಯಲ್ಲಿ ನಾನು ಪ್ರಾಣ ಕಳೆದುಕೊಳ್ಳುತ್ತಿದ್ದೆ. ಹೆದರಬೇಡ, ಇದು ಬ್ರಹ್ಮಗಿರಿಯ ಮೊದಲ ಪರೀಕ್ಷೆ. ಇಲ್ಲಿ ನಮ್ಮ ಮನಸ್ಸಿನ ಆಸೆಗಳನ್ನೇ ಶತ್ರುಗಳು ಅಸ್ತ್ರವನ್ನಾಗಿ ಬಳಸುತ್ತಾರೆ ವಿಕ್ರಂ ಅವಳನ್ನು ಸಮಾಧಾನಪಡಿಸಿದ.ಅವರು ಮುಂದುವರಿದಾಗ, 500ನೇ ಮೆಟ್ಟಿಲ ಬಳಿ ಒಂದು ಪುರಾತನವಾದ ಕಲ್ಲಿನ ಬಾಗಿಲು ಸಿಕ್ಕಿತು. ಆ ಬಾಗಿಲಿನ ಮೇಲೆ 01 ಎಂದು ಕೆತ್ತಲಾಗಿತ್ತು. ಇದು ಪ್ರೊಫೆಸರ್ ಹೇಳಿದ 65 ಬಾಗಿಲುಗಳಲ್ಲಿ ಮೊದಲನೆಯದು ಇರಬೇಕು, ವಿಕ್ರಂ ಆ ಬಾಗಿಲನ್ನು ತಳ್ಳಲು ಪ್ರಯತ್ನಿಸಿದ. ಆದರೆ ಬಾಗಿಲು ಅಲುಗಾಡಲಿಲ್ಲ. ಅದರ ಪಕ್ಕದಲ್ಲಿ ಒಂದು ಸಣ್ಣ ಕುಳಿ ಇತ್ತು. ವಿಕ್ರಂಗೆ ಏನೋ ಹೊಳೆಯಿತು. ಅವನು ನದಿಯ ದಡದಲ್ಲಿ ಸಿಕ್ಕಿದ್ದ ಆ ನಾಣ್ಯವನ್ನು ಆ ಕುಳಿಯಲ್ಲಿ ಇರಿಸಿದ. ಖರ್ರ್ ಎಂಬ ಶಬ್ದದೊಂದಿಗೆ ಆ ಬೃಹತ್ ಕಲ್ಲಿನ ಬಾಗಿಲು ತೆರೆದುಕೊಂಡಿತು. ಬಾಗಿಲಿನ ಆಚೆ ಅವರಿಗೆ ಕಂಡದ್ದು ಒಂದು ಕತ್ತಲೆಯ ಸುರಂಗ. ಆ ಸುರಂಗದ ಗೋಡೆಗಳ ಮೇಲೆ ರಕ್ತದ ಬಣ್ಣದಲ್ಲಿ ಕೆಲವು ಸಂಖ್ಯೆಗಳು ಬರೆಯಲ್ಪಟ್ಟಿದ್ದವು. ವಿಕ್ರಂ ಆ ಸಂಖ್ಯೆಗಳನ್ನು ಕೂಡಿಸಿದಾಗ ಉತ್ತರ 65 ಬಂದಿತು.ಅಷ್ಟರಲ್ಲಿ ಸುರಂಗದ ಒಳಗಿನಿಂದ ಒಬ್ಬ ವ್ಯಕ್ತಿ ಹೊರಬಂದನು. ಅದು ಅಘೋರಿ ಶಿವಾನಂದರು ಆದರೆ ಅವರ ಮುಖದ ಮೇಲೆ ಗಾಯಗಳಿದ್ದವು. ವಿಕ್ರಂ, ಸಮಯ ಮೀರುತ್ತಿದೆ, ರುದ್ರಪ್ಪ ಮತ್ತು ಅವನ ತಂಡ 65ನೇ ಬಾಗಿಲನ್ನು ತಲುಪಿದ್ದಾರೆ. ಅವರು ಶೂನ್ಯ ಬಿಂದುವಿನ ರಹಸ್ಯವನ್ನು ಭೇದಿಸಿದರೆ ಇಡೀ ಜಗತ್ತಿಗೆ ಅಪಾಯ. ನೀನು ಆ ಹಸ್ತಪ್ರತಿಯ ಕೊನೆಯ ಪುಟವನ್ನು ಪಡೆಯಲೇಬೇಕು ಎಂದು ಹೇಳಿ ಅಘೋರಿ ಒಂದು ಹಳೆಯ ನಕ್ಷೆಯನ್ನು ವಿಕ್ರಂಗೆ ಎಸೆದರು. ಆದರೆ ವಿಕ್ರಂ ಆ ನಕ್ಷೆಯನ್ನು ಹಿಡಿಯುವ ಮೊದಲೇ, ಸುರಂಗದ ಮೇಲ್ಛಾವಣಿಯಿಂದ ನೂರಾರು ಬಾವಲಿಗಳು ಅವರ ಮೇಲೆ ದಾಳಿ ಮಾಡಿದವು. ಆ ಗೊಂದಲದಲ್ಲಿ ಅಘೋರಿ ಮತ್ತೆ ಕಣ್ಮರೆಯಾದರು. ವಿಕ್ರಂ ನಕ್ಷೆಯನ್ನು ಬಿಡಿಸಿ ನೋಡಿದಾಗ ಅವನಿಗೆ ಒಂದು ದೊಡ್ಡ ಆಘಾತ ಕಾದಿತ್ತು. ಆ ನಕ್ಷೆಯ ಪ್ರಕಾರ, ಬ್ರಹ್ಮಗಿರಿಯ ರಹಸ್ಯ ಇರುವುದು ಬೆಟ್ಟದ ಮೇಲಲ್ಲ, ಬದಲಿಗೆ ಬೆಟ್ಟದ ಕೆಳಗಿರುವ ಪಾತಾಳ ಲೋಕದಲ್ಲಿ
ಮೊದಲ ಬಾಗಿಲು ದಾಟಿದ ನಂತರ ವಿಕ್ರಂ ಮತ್ತು ಕಾವ್ಯ ಎದುರಿಸುವ ಭಯಾನಕ ಸವಾಲುಗಳೇನು? ರುದ್ರಪ್ಪನ ತಂಡ ಇವರನ್ನು ಹೇಗೆ ಬೆನ್ನಟ್ಟುತ್ತದೆ? ಆ ನಕ್ಷೆಯಲ್ಲಿರುವ ಶೂನ್ಯ ಬಿಂದುವಿನ ಗುಟ್ಟು ಏನು?
ಉತ್ತರ ಮುಂದಿನ ಅಧ್ಯಾಯದಲ್ಲಿ