Chapter 4: The Secret of Brahmagiri in Kannada Thriller by Danger Writer books and stories PDF | ಅಧ್ಯಾಯ 4: ಬ್ರಹ್ಮಗಿರಿ ರಹಸ್ಯ

Featured Books
Categories
Share

ಅಧ್ಯಾಯ 4: ಬ್ರಹ್ಮಗಿರಿ ರಹಸ್ಯ

ಸುರಂಗದ ಗೋಡೆಗಳ ಮೇಲೆ ಬರೆಯಲಾದ ರಕ್ತವರ್ಣದ ಸಂಖ್ಯೆಗಳು ಮಿನುಗುತ್ತಿದ್ದವು. ಅಘೋರಿ ಶಿವಾನಂದರು ನೀಡಿ ಹೋದ ಆ ಹಳೆಯ ನಕ್ಷೆಯನ್ನು ವಿಕ್ರಂ ಕೈಯಲ್ಲಿ ಹಿಡಿದು ನಡುಗುತ್ತಿದ್ದ. ನಕ್ಷೆಯ ಮಧ್ಯಭಾಗದಲ್ಲಿ ಒಂದು ದೊಡ್ಡ ಸುಳಿಯ ಚಿತ್ರವಿತ್ತು, ಅದರ ಕೆಳಗೆ ಹಳೆಗನ್ನಡದಲ್ಲಿ ಅಧೋಲೋಕದ ದ್ವಾರ ಎಂದು ಬರೆಯಲಾಗಿತ್ತು. ವಿಕ್ರಂ, ನಕ್ಷೆ ಏನು ಹೇಳುತ್ತಿದೆ? ಕಾವ್ಯ ಮೆಲ್ಲಗೆ ಕೇಳಿದಳು. ಅವಳ ಧ್ವನಿ ಸುರಂಗದ ಗೋಡೆಗಳಿಗೆ ಬಡಿದು ಪ್ರತಿಧ್ವನಿಸುತ್ತಿತ್ತು.
ಕಾವ್ಯಾ, ನಾವು ಇಲ್ಲಿಯವರೆಗೆ ಬೆಟ್ಟದ ಮೇಲೆ ರಹಸ್ಯವಿದೆ ಎಂದುಕೊಂಡಿದ್ದೆವು. ಆದರೆ ಈ ನಕ್ಷೆಯ ಪ್ರಕಾರ, ನಾವು ಈಗಿರುವ ಸುರಂಗವು ಬೆಟ್ಟದ ಕೆಳಭಾಗಕ್ಕೆ, ಅಂದರೆ ಭೂಮಿಯ ಆಳಕ್ಕೆ ಹೋಗುತ್ತದೆ. ಬ್ರಹ್ಮಗಿರಿಯ ನಿಜವಾದ ಶಕ್ತಿ ಇರುವುದು ಅದರ ಗರ್ಭದಲ್ಲಿ ವಿಕ್ರಂ ವಿವರಿಸಿದ.
ಅವರು ಸುರಂಗದೊಳಗೆ ಹೆಜ್ಜೆ ಹಾಕತೊಡಗಿದರು. ಹೋದಂತೆಲ್ಲಾ ಉಸಿರಾಡಲು ಗಾಳಿ ಕಡಿಮೆಯಾಗುತ್ತಿತ್ತು ಮತ್ತು ವಿಚಿತ್ರವಾದ ಗಂಧಕದ  ವಾಸನೆ ಬರತೊಡಗಿತು. ಇದ್ದಕ್ಕಿದ್ದಂತೆ, ಸುರಂಗದ ಇನ್ನೊಂದು ತುದಿಯಿಂದ ಬೂಟುಗಳ ಸದ್ದು ಕೇಳಿಸಿತು. ಯಾರೋ ಒಂದು ಸೈನ್ಯದಂತೆ ಬರುತ್ತಿದ್ದರು. ಅವರು ಬಂದೇ ಬಿಟ್ಟರು ರುದ್ರಪ್ಪನ ತಂಡ ವಿಕ್ರಂ ಪಿಸುಗುಟ್ಟಿದ. ಅವರಿಬ್ಬರೂ ಒಂದು ದೊಡ್ಡ ಕಲ್ಲಿನ ಚಾಚಿನ ಹಿಂದೆ ಅಡಗಿಕೊಂಡರು. ಸ್ವಲ್ಪ ಸಮಯದಲ್ಲೇ ಹತ್ತಾರು ಜನ ಸಶಸ್ತ್ರಧಾರಿಗಳು ಅಲ್ಲಿಗೆ ಬಂದರು. ಅವರ ಮಧ್ಯೆ ಒಬ್ಬ ಎತ್ತರದ, ಬಲಶಾಲಿ ವ್ಯಕ್ತಿ ನಡೆದು ಬರುತ್ತಿದ್ದ. ಅವನ ಕುತ್ತಿಗೆಯ ಮೇಲೆ ಒಂದು ದೊಡ್ಡ ಚೇಳಿನ ಹಚ್ಚೆಯಿತ್ತು. ಅವನೇ ರುದ್ರಪ್ಪ. ರುದ್ರಪ್ಪನ ಕೈಯಲ್ಲಿ ಒಂದು ಅತ್ಯಾಧುನಿಕವಾದ ಸ್ಕ್ಯಾನರ್ ಇತ್ತು. ಅವನು ಗೋಡೆಯ ಮೇಲಿದ್ದ ಸಂಖ್ಯೆಗಳ ಹತ್ತಿರ ಬಂದು ನಿಂತನು. ನೋಡಿ, ಇಲ್ಲಿ ಯಾರೋ ಈಗಾಗಲೇ ಬಂದಿದ್ದಾರೆ. ರಕ್ತದ ಗುರುತುಗಳು ಇನ್ನೂ ಹಸಿಯಾಗಿವೆ. ಆ ವಿಕ್ರಂ ಮತ್ತು ಹುಡುಗಿ ನಮ್ಮ ಹತ್ತಿರವೇ ಇದ್ದಾರೆ ರುದ್ರಪ್ಪನ ಕರ್ಕಶ ಧ್ವನಿ ಸುರಂಗದಲ್ಲಿ ಮೊಳಗಿತು. ಅವನ ಪಕ್ಕದಲ್ಲಿದ್ದ ಒಬ್ಬ ಶೂಟರ್, ಸರ್, ಆ ಹಸ್ತಪ್ರತಿಯ 65ನೇ ಪುಟ ಸಿಗದಿದ್ದರೆ ನಾವು ಶೂನ್ಯ ಬಿಂದುವನ್ನು ತಲುಪಲು ಸಾಧ್ಯವಿಲ್ಲ. ಅಘೋರಿ ಅದನ್ನು ಎಲ್ಲಿ ಅಡಗಿಸಿದ್ದಾನೆ? ಎಂದು ಕೇಳಿದ. ರುದ್ರಪ್ಪ ನಕ್ಕನು. ಆ ಪುಟ ವಿಕ್ರಂನ ಕೈಯಲ್ಲಿದೆ. ಅವನು ನಮಗಾಗಿ ದಾರಿ ಹುಡುಕುತ್ತಿದ್ದಾನೆ. ಅವನನ್ನು ಈಗಲೇ ಕೊಲ್ಲಬೇಡಿ, ಅವನು ನಮ್ಮನ್ನು ಗುರಿಯ ಹತ್ತಿರ ಕರೆದುಕೊಂಡು ಹೋಗಲಿ. ಆಮೇಲೆ ಇಬ್ಬರನ್ನೂ ಇಲ್ಲೇ ಹೂತು ಹಾಕೋಣ. ಅವರು ಮುಂದೆ ಸಾಗಿದ ನಂತರ ವಿಕ್ರಂ ಮತ್ತು ಕಾವ್ಯ ಹೊರಬಂದರು. ವಿಕ್ರಂನ ಮುಖ ಬೆವತು ಹೋಗಿತ್ತು. ರುದ್ರಪ್ಪನ ಬಳಿ ಆಧುನಿಕ ತಂತ್ರಜ್ಞಾನವಿದ್ದರೆ, ವಿಕ್ರಂ ಬಳಿ ಇದ್ದದ್ದು ಕೇವಲ ಪ್ರೊಫೆಸರ್ ಹೇಳಿಕೊಟ್ಟ ಇತಿಹಾಸದ ಜ್ಞಾನ ಮತ್ತು ಅಘೋರಿ ನೀಡಿದ ಆ ಕಂಕಣ. ಕಾವ್ಯಾ, ನಾವು ಅವರಿಗಿಂತ ವೇಗವಾಗಿ ಎರಡನೇ ಬಾಗಿಲನ್ನು ತಲುಪಬೇಕು. ಈ ನಕ್ಷೆಯಲ್ಲಿ ಒಂದು ಗುಪ್ತ ಹಾದಿಯಿದೆ ವಿಕ್ರಂ ಹೇಳುತ್ತಾ ಗೋಡೆಯ ಮೇಲಿದ್ದ ಒಂದು ನಿರ್ದಿಷ್ಟ ಕಲ್ಲನ್ನು ಒತ್ತಿದನು.
ಕೂಡಲೇ ಅವರು ನಿಂತಿದ್ದ ನೆಲವು ಮೆಲ್ಲಗೆ ಕೆಳಕ್ಕೆ ಸರಿಯಿತು. ಅದು ಒಂದು ಪುರಾತನವಾದ ಲಿಫ್ಟ್ ನಂತೆ ಕೆಲಸ ಮಾಡುತ್ತಿತ್ತು. ಅವರು ಸುಮಾರು ಇನ್ನೂರು ಅಡಿ ಕೆಳಕ್ಕೆ ಹೋದಾಗ ಒಂದು ವಿಶಾಲವಾದ ಸಭಾಂಗಣ ಸಿಕ್ಕಿತು.
ಅಲ್ಲಿ ಕಂಡ ದೃಶ್ಯ ಅವರ ಕಣ್ಣುಗಳನ್ನೇ ನಂಬದಂತೆ ಮಾಡಿತು. ಆ ಸಭಾಂಗಣದ ಮಧ್ಯದಲ್ಲಿ ಒಂದು ದೊಡ್ಡದಾದ ಸ್ಫಟಿಕದ ಕಂಬ ಇತ್ತು. ಅದು ತಾನಾಗಿಯೇ ಪ್ರಕಾಶಿಸುತ್ತಿತ್ತು. ಆ ಕಂಬದ ಸುತ್ತಲೂ 65 ಚಿಕ್ಕ ಗುಡಿಗಳಿದ್ದವು. ಇದೇ ಎರಡನೇ ಬಾಗಿಲು, ಆದರೆ ಇಲ್ಲಿ 65 ದಾರಿಗಳಿವೆ ಕಾವ್ಯ ದಂಗಾಗಿ ಹೇಳಿದಳು. ವಿಕ್ರಂ ನಕ್ಷೆಯನ್ನು ನೋಡಿದಾಗ ಅದರಲ್ಲಿ ಬರೆಯಲಾಗಿತ್ತು ಸತ್ಯದ ದಾರಿಯು ಪ್ರತಿಬಿಂಬದಲ್ಲಿದೆ. ವಿಕ್ರಂ ತನ್ನ ಟಾರ್ಚ್ ಅನ್ನು ಆ ಸ್ಫಟಿಕದ ಕಂಬಕ್ಕೆ ಹೊಡೆದನು. ಕಂಬದಿಂದ ಪ್ರತಿಫಲಿಸಿದ ಬೆಳಕು ಒಂದೇ ಒಂದು ಗುಡಿಯ ಬಾಗಿಲಿನ ಮೇಲೆ ಬಿದ್ದಿತು. ಉಳಿದ ಬಾಗಿಲುಗಳು ಕತ್ತಲೆಯಲ್ಲಿ ಮುಳುಗಿದವು. ಅದೇ ದಾರಿ ವಿಕ್ರಂ ಕೂಗಿದ. ಆದರೆ ಅವರು ಆ ಬಾಗಿಲಿನ ಹತ್ತಿರ ಹೋಗುವಷ್ಟರಲ್ಲಿ, ಮೇಲಿಂದ ಒಂದು ಕಬ್ಬಿಣದ ಜಾಲರಿ  ಬಿದ್ದು ಅವರನ್ನು ಬಂಧಿಸಿತು. ರುದ್ರಪ್ಪ ಮತ್ತು ಅವನ ತಂಡ ಮೇಲಿನಿಂದ ನಗುತ್ತಾ ಇಳಿದು ಬಂದರು. ನೀನು ಬುದ್ಧಿವಂತ ವಿಕ್ರಂ ದಾರಿಯನ್ನು ನಮಗಾಗಿ ಸುಲಭ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು, ರುದ್ರಪ್ಪ ಚಪ್ಪಾಳೆ ತಟ್ಟುತ್ತಾ ಹೇಳಿದ. ಅವನ ಕೈಯಲ್ಲಿ ಈಗ ಒಂದು ರಿವಾಲ್ವರ್ ಇತ್ತು, ಅದು ನೇರವಾಗಿ ವಿಕ್ರಂನ ಹಣೆಗೇ ಗುರಿಯಿಟ್ಟಿತ್ತು. ಬ್ರಹ್ಮಗಿರಿಯ ಎರಡನೇ ಬಾಗಿಲಲ್ಲಿ ವಿಕ್ರಂ ಮತ್ತು ಕಾವ್ಯ ಸಿಕ್ಕಿಬಿದ್ದಿದ್ದರು. ರುದ್ರಪ್ಪ ಈಗ ಆ ಸ್ಫಟಿಕದ ಗುಟ್ಟನ್ನು ತಿಳಿಯಲು ಸಿದ್ಧನಾಗಿದ್ದ.
ಕಬ್ಬಿಣದ ಜಾಲರಿಯ ಒಳಗಿದ್ದ ವಿಕ್ರಂ ಮತ್ತು ಕಾವ್ಯನಿಗೆ ಸಾವು ತೀರ ಹತ್ತಿರ ಬಂದಂತೆ ಭಾಸವಾಯಿತು. ರುದ್ರಪ್ಪ ತನ್ನ ರಿವಾಲ್ವರ್ ಅನ್ನು ವಿಕ್ರಂನ ಹಣೆಗೆ ಒತ್ತಿ ಹಿಡಿದು ಕ್ರೂರವಾಗಿ ನಕ್ಕನು. ಅವನ ಕಣ್ಣುಗಳಲ್ಲಿ ಅಧಿಕಾರದ ಹಪಾಹಪಿಯಿತ್ತು.
ವಿಕ್ರಂ, ನನಗೆ ಗೊತ್ತಿತ್ತು ನೀನು ಇಲ್ಲಿಗೆ ಬಂದೇ ಬರುತ್ತೀಯಾ ಎಂದು. ಈಗ ಹೇಳು, ಆ ಹಸ್ತಪ್ರತಿಯ ಕೊನೆಯ ಪುಟ ಎಲ್ಲಿದೆ? ರುದ್ರಪ್ಪ ಗದರಿಸಿದನು. ವಿಕ್ರಂ ನೋವಿನಲ್ಲೂ ಧೈರ್ಯ ತಂದುಕೊಂಡು ಹೇಳಿದ, "ಅದು ನನ್ನ ಬಳಿ ಇಲ್ಲ ರುದ್ರಪ್ಪ. ಅದು ಈ ಸ್ಫಟಿಕದ ಒಳಗೆ ಅಡಗಿದೆ ಎಂದು ನಿನಗೆ ಗೊತ್ತಿಲ್ಲವೇ? ನೀನು ನನ್ನನ್ನು ಕೊಂದರೆ ಈ ರಹಸ್ಯ ಇಲ್ಲಿಗೇ ಮಣ್ಣಾಗುತ್ತದೆ. ರುದ್ರಪ್ಪ ಒಂದು ಕ್ಷಣ ಯೋಚಿಸಿದನು. ವಿಕ್ರಂ ಸುಳ್ಳು ಹೇಳುತ್ತಿದ್ದಾನೆ ಎಂದು ಅವನಿಗೆ ತಿಳಿದಿದ್ದರೂ, ಆ ಸ್ಫಟಿಕದ ಕಂಬದ ರಹಸ್ಯ ಭೇದಿಸಲು ವಿಕ್ರಂನಂತಹ ಬುದ್ಧಿವಂತನ ಅಗತ್ಯವಿತ್ತು. ಅವನು ಜಾಲರಿಯನ್ನು ಮೆಲ್ಲಗೆ ಮೇಲಕ್ಕೆತ್ತಲು ತನ್ನ ಆಳುಗಳಿಗೆ ಸನ್ನೆ ಮಾಡಿದನು. ಸರಿ, ನಿನಗೆ ಒಂದು ಅವಕಾಶ ಕೊಡುತ್ತೇನೆ. ಈ ಸ್ಫಟಿಕದ ಒಳಗೆ ಹೋಗುವ ದಾರಿ ಯಾವುದು ಎಂದು ಹೇಳು. ಇಲ್ಲದಿದ್ದರೆ ಈ ಹುಡುಗಿ ಕಾವ್ಯಳನ್ನು ನಾನೇ ಈ ಪ್ರಪಾತಕ್ಕೆ ತಳ್ಳುತ್ತೇನೆ ಎಂದು ರುದ್ರಪ್ಪ ಅಬ್ಬರಿಸಿದನು. ಕಾವ್ಯ ವಿಕ್ರಂನತ್ತ ದಿಟ್ಟಿಸಿ ನೋಡಿದಳು. ಅವಳ ಕಣ್ಣುಗಳಲ್ಲಿ ಭಯವಿರಲಿಲ್ಲ, ಬದಲಿಗೆ ಏನೋ ಒಂದು ನಿಗೂಢ ಸಂಕೇತವಿತ್ತು. ಅವಳು ಮೆಲ್ಲಗೆ ತನ್ನ ಕೈಯನ್ನು ಸ್ಫಟಿಕದ ಕಂಬದತ್ತ ಚಾಚಿದಳು. ಅವಳು ಕಂಬವನ್ನು ಮುಟ್ಟುವ ಮೊದಲೇ, ಸ್ಫಟಿಕದಿಂದ ಹೊರಹೊಮ್ಮುತ್ತಿದ್ದ ನೀಲಿ ಬೆಳಕು ಅವಳ ಬೆರಳುಗಳಿಗೆ ಆಕರ್ಷಿತವಾಗತೊಡಗಿತು. ಕಾವ್ಯಾ, ಬೇಡ ಅದು ನಿನ್ನ ಶಕ್ತಿಯನ್ನು ಹೀರಿಕೊಳ್ಳುತ್ತದೆ ವಿಕ್ರಂ ಕೂಗಿದನು. ಆದರೆ ಅಷ್ಟರಲ್ಲಿ ಪವಾಡವೊಂದು ಸಂಭವಿಸಿತು. ಸ್ಫಟಿಕದ ಕಂಬವು ವಿಪರೀತವಾಗಿ ಕಂಪಿಸಲು ಶುರು ಮಾಡಿತು. ಇಡೀ ಸಭಾಂಗಣವೇ ಭೂಕಂಪವಾದಂತೆ ಅಲುಗಾಡತೊಡಗಿತು. ರುದ್ರಪ್ಪನ ಆಳುಗಳು ಸಮತೋಲನ ತಪ್ಪಿ ಕೆಳಗೆ ಬಿದ್ದರು.
ಸ್ಫಟಿಕದಿಂದ ಒಂದು ಪ್ರಬಲವಾದ ಬೆಳಕಿನ ಕಿರಣವು ಹೊರಹೊಮ್ಮಿ ಸಭಾಂಗಣದ ಮೇಲ್ಛಾವಣಿಗೆ ಬಡಿಯಿತು. ಅಲ್ಲಿ ಅಡಗಿದ್ದ ಒಂದು ರಹಸ್ಯ ದ್ವಾರವು ತೆರೆದುಕೊಂಡಿತು. ಆ ದ್ವಾರದ ಒಳಗಿನಿಂದ ಸಾವಿರಾರು ಸಣ್ಣ ಸಣ್ಣ ಚೇಳುಗಳು ಹೊರಬರತೊಡಗಿದವು. ಅವು ಸಾಮಾನ್ಯ ಚೇಳುಗಳಲ್ಲ, ಅವುಗಳ ಮೈಯೆಲ್ಲಾ ಚಿನ್ನದ ಬಣ್ಣದಲ್ಲಿ ಮಿನುಗುತ್ತಿತ್ತು.
ಇವು ಬ್ರಹ್ಮಗಿರಿಯ ಕಾವಲುಗಾರರು ಓಡಿ ಎಲ್ಲರೂ ಓಡಿ ರುದ್ರಪ್ಪನ ತಂಡದ ಒಬ್ಬ ಕಿರುಚಿದನು. ಆ ಚೇಳುಗಳು ಮನುಷ್ಯನ ಮೈಮೇಲೆ ಹತ್ತಿದ ತಕ್ಷಣ ಆ ಮನುಷ್ಯ ಕಲ್ಲಾಗಿ ಬದಲಾಗುತ್ತಿದ್ದನು. ರುದ್ರಪ್ಪ ಗಾಬರಿಯಿಂದ ಹಿಂದೆ ಸರಿದನು. ಈ ಗೊಂದಲದ ಲಾಭ ಪಡೆದ ವಿಕ್ರಂ, ಕಾವ್ಯಳ ಕೈ ಹಿಡಿದು ಆ ಸ್ಫಟಿಕದ ಕಂಬದ ಹಿಂದಿದ್ದ ಒಂದು ಸಣ್ಣ ಕಿಂಡಿಯೊಳಗೆ ನುಗ್ಗಿದನು. ಅವರು ಒಳಗೆ ಹೋದ ತಕ್ಷಣ ಆ ಕಿಂಡಿಯು ಮುಚ್ಚಿಕೊಂಡಿತು. ಬಾಹ್ಯ ಜಗತ್ತಿನ ಸದ್ದುಗಳು ಈಗ ಕೇಳಿಸುತ್ತಿರಲಿಲ್ಲ. ಅವರು ಒಂದು ಅದ್ಭುತವಾದ ಸುಂದರ ಲೋಕಕ್ಕೆ ಬಂದಿದ್ದರು. ಅಲ್ಲಿನ ಗೋಡೆಗಳು ವಜ್ರದಂತೆ ಹೊಳೆಯುತ್ತಿದ್ದವು. ಮಧ್ಯದಲ್ಲಿ ಒಂದು ಸಣ್ಣ ನೀರಿನ ಕೊಳವಿತ್ತು. ಆ ಕೊಳದ ಮಧ್ಯದಲ್ಲಿ ಒಂದು ತಾವರೆ ಹೂವು ಇತ್ತು, ಅದರ ಮೇಲೆ ಪ್ರೊಫೆಸರ್ ಹೇಳಿದ್ದ ಆ 65ನೇ ಹಸ್ತಪ್ರತಿ ತೇಲುತ್ತಿತ್ತು. ವಿಕ್ರಂ ಅದನ್ನು ಎತ್ತಿಕೊಳ್ಳಲು ಹೋದಾಗ, ನೀರಿನ ಒಳಗಿನಿಂದ ಒಂದು ದೈತ್ಯಾಕಾರದ ನೆರಳು ಎದ್ದು ಬಂದಿತು. ಅದು ಮನುಷ್ಯನಲ್ಲ, ಬದಲಿಗೆ ಹಾವಿನ ಮೈ ಮತ್ತು ಮನುಷ್ಯನ ತಲೆ ಹೊಂದಿದ್ದ ನಾಗ ಕಾವಲುಗಾರ. ಈ ಹಸ್ತಪ್ರತಿಯನ್ನು ಮುಟ್ಟಲು ಅರ್ಹತೆ ಬೇಕು. ಆ ಅರ್ಹತೆ ನಿನ್ನ ಬಳಿ ಇದೆಯೇ ವಿಕ್ರಂ? ಆ ನೆರಳು ಮಾನವ ಧ್ವನಿಯಲ್ಲಿ ಕೇಳಿತು. ವಿಕ್ರಂ ದಂಗಾದನು. ಅಷ್ಟರಲ್ಲಿ ಕಾವ್ಯ ಮೆಲ್ಲಗೆ ಮುಂದೆ ಬಂದು, ನಾನು ಈ ಬೆಟ್ಟದ ವಂಶದವಳು. ನಮ್ಮ ರಕ್ತದ ಶಕ್ತಿಯನ್ನು ನೀವು ಗುರುತಿಸಬಲ್ಲಿರಿ ಎಂದು ಹೇಳಿ ತನ್ನ ಕೈಯನ್ನು ಸಣ್ಣದಾಗಿ ಕುಯ್ದು ಒಂದು ಹನಿ ರಕ್ತವನ್ನು ಆ ಕೊಳಕ್ಕೆ ಹಾಕಿದಳು.
ನೀರಿನ ಬಣ್ಣ ಒಮ್ಮೆಲೇ ಬದಲಾಯಿತು. ಆ ದೈತ್ಯ ನೆರಳು ಮೆಲ್ಲಗೆ ಮರೆಯಾಯಿತು. ವಿಕ್ರಂ ಆ ಹಸ್ತಪ್ರತಿಯನ್ನು ಕೈಗೆತ್ತಿಕೊಂಡನು. ಅದರ ಮೊದಲ ಪುಟವನ್ನು ತೆರೆದಾಗ ಅವನಿಗೆ ದೊಡ್ಡ ಆಘಾತ ಕಾದಿತ್ತು. ಅದರಲ್ಲಿ ಬರೆಯಲಾಗಿತ್ತು. ಈ 65ನೇ ಪುಟವನ್ನು ಓದುವವನೇ 66ನೇ ಬಲಿಯಾಗುತ್ತಾನೆ.

ಹಸ್ತ ಪ್ರತಿಯನ್ನು ಓದಿದ ನಂತರ ವಿಕ್ರಂ ನ ಸ್ಥಿತಿ ಏನಾಗುತ್ತದೆ? ಕಾವ್ಯಾಳ ನಿಜವಾದ ಉದ್ದೇಶವೇನು?
ಉತ್ತರ ಮುಂದಿನ ಅಧ್ಯಾಯದಲ್ಲಿ.