ಅಂದು ಭಾನುವಾರವಾದ್ದರಿಂದ ಕಚೇರಿಗೆ ಹೋಗುವ ಗಡಿಬಿಡಿ ಇರಲಿಲ್ಲ. ನಿಧಾನಕ್ಕೆ ಎದ್ದು ನಿತ್ಯಕರ್ಮಗಳನ್ನೆಲ್ಲ ಮುಗಿಸಿ ಕಾಫಿ, ತಿಂಡಿ ಮುಗಿಸಿ ಲ್ಯಾಪ್ಟಾಪ್ ತೆಗೆದೆ. ಒಂದು ವಾರದಿಂದ ಇಮೇಲ್ ನೋಡಿರಲಿಲ್ಲ. ಆದರೆ ಅವತ್ತು ಇಮೇಲ್ ತೆಗೆದು ನೋಡುತ್ತಿದ್ದಂತೆ ನನಗೊಂದು ಆಶ್ಚರ್ಯ ಕಾದಿತ್ತು. ಖ್ಯಾತ ಜಾದೂಗಾರ ಬೆನ್ ಫ್ಯಾಂಟಮ್ನಿಂದ ಒಂದು ಮೇಲ್ ಬಂದಿತ್ತು! ಎರಡು ದಿನಗಳ ಹಿಂದೆಯೇ ಬಂದಿದ್ದ ಅದರ ಒಕ್ಕಣೆ ಹೀಗಿತ್ತು “ಪ್ರಿಯ ಮಿತ್ರ, ನೀವು ಜಾದೂ ವಿದ್ಯೆಯಲ್ಲಿ ಆಸಕ್ತಿ ಹೊಂದಿದ್ದೀರಿ ಹಾಗೂ ಪ್ರಾಣಿಪಕ್ಷಿಗಳ ಬಗ್ಗೆ ಬಹಳ ಪ್ರೀತಿ ಹೊಂದಿದ್ದೀರಿ ಎಂಬುದು ನಿಮ್ಮ ಫೇಸ್ಬುಕ್ ಪ್ರೊಫೈಲ್ನಲ್ಲಿ ನೋಡಿ ತಿಳಿಯಿತು. ಆದ್ದರಿಂದ ನಿಮ್ಮನ್ನು ನನ್ನ ಖಾಸಗಿ ಅರಣ್ಯಕ್ಕೆ ಆಹ್ವಾನಿಸುತ್ತಿದ್ದೇನೆ. ನೀವು ಕೆಲವು ದಿನಗಳ ಮಟ್ಟಿಗೆ ಬಿಡುವು ಮಾಡಿಕೊಂಡು ನನ್ನ ಅತಿಥಿಯಾಗಿ ಬಂದಿರುವುದಾದರೆ ನನಗೆ ಬಹಳ ಸಂತೋಷವಾಗುತ್ತದೆ. ನೀವು ಯಾವಾಗ ಬಿಡುವಾಗಿದ್ದೀರಿ ಎಂದು ಮೊದಲೇ ತಿಳಿಸಿದರೆ ಆ ದಿನಕ್ಕೆ ನಿಮ್ಮ ವಿಮಾನದ ಟಿಕೆಟನ್ನು ನಾನೇ ಬುಕ್ ಮಾಡಿ ಕಳುಹಿಸುತ್ತೇನೆ. ಅಲ್ಲದೆ ನಿಲ್ದಾಣದಿಂದ ನಿಮ್ಮನ್ನು ನನ್ನ