ರಾತ್ರಿಯ ಕಡು ಕತ್ತಲೆ ಬೆಂಗಳೂರನ್ನು ಆವರಿಸಿದ್ದರೂ, ಆದರ್ಶ್‌ನ ಕಣ್ಣುಗಳಲ್ಲಿ ಮಾತ್ರ ಒಂದು ಅತಿಮಾನುಷವಾದ ಕೆಂಪು ಬೆಳಕು ಮಿನುಗುತ್ತಿತ್ತು. ಅವನು ತನ್ನ ಹಳೆಯ ಹೆಚ್.ಎಫ್ ಡಿಲಕ್ಸ್ ಬೈಕ್ ಅನ್ನು ರಶ್ಮಿಯ ಮನೆಯ ಕಡೆಗೆ ಗಾಳಿಯ ವೇಗದಲ್ಲಿ ಓಡಿಸುತ್ತಿದ್ದ. ರಶ್ಮಿಯ ಫೋನ್‌ನಲ್ಲಿ ಕೇಳಿದ ಆ ನಡುಗುವ ದನಿ ಅವನ ಕಿವಿಯಲ್ಲಿ ಪದೇ ಪದೇ ಪ್ರತಿಧ್ವನಿಸುತ್ತಿತ್ತು. ಯಾರೋ ನಮ್ಮ ಮನೆಯ ಹಿತ್ತಲಿನಲ್ಲಿ ಏನೋ ಹೂತು ಹಾಕುತ್ತಿದ್ದಾರೆ. ಮಣ್ಣು ತಾನಾಗಿಯೇ ಅಲುಗಾಡುತ್ತಿದೆ ಇದು ಕೇವಲ ಮಣ್ಣಿನ ಅಲುಗಾಟವಲ್ಲ, ಇದು ಅಶ್ವತ್ಥಾಮನ ಐದು ಸಾವಿರ ವರ್ಷಗಳ ಹಳೆಯ ಹಸಿವು ಮರಳಿ ಜಾಗೃತವಾಗುತ್ತಿರುವ ಸೂಚನೆ ಎಂದು ಆದರ್ಶ್‌ಗೆ ಮನದಟ್ಟಾಗಿತ್ತು. ಆದರ್ಶ್ ರಶ್ಮಿಯ ಮನೆ ತಲುಪಿದಾಗ ಅಲ್ಲಿ ಮೃತ್ಯುವಿನ ಮೌನ ಆವರಿಸಿತ್ತು. ಬೀದಿ ದೀಪಗಳು ಮಿಣುಗುತ್ತಾ ವಿಚಿತ್ರವಾದ ಕರ್ಕಶ ಶಬ್ದ ಮಾಡುತ್ತಿದ್ದವು. ರಶ್ಮಿ ಮನೆಯ ಬಾಗಿಲನ್ನು ಒಳಗಿನಿಂದ ಗಟ್ಟಿಯಾಗಿ ಹಾಕಿಕೊಂಡಿದ್ದಳು, ಕಿಟಕಿಯ ಗಾಜಿನಿಂದ ಅವಳ ಬೆವರಿಳಿಯುತ್ತಿದ್ದ ಮುಖ ಮಸುಕಾಗಿ ಕಾಣುತ್ತಿತ್ತು. ಆದರ್ಶ್ ಹಿತ್ತಲಿಗೆ ಹೋದಾಗ ಅಲ್ಲಿನ ದೃಶ್ಯ ಕಂಡು ಅವನ ರಕ್ತ ಹೆಪ್ಪುಗಟ್ಟಿದಂತಾಯಿತು.