Where there is talent, there is success in Kannada Short Stories by Vaman Acharya books and stories PDF | ಪ್ರತಿಭೆ ಎಲ್ಲಿದೆಯೋ ಅಲ್ಲಿ ಯಶಸ್ಸು

Featured Books
  • Mosadapreethi - 2

    ಇಲ್ಲಿ ತಾರಾ ಹಳ್ಳಿಯಿಂದ ನಗರಕ್ಕೆ ಬಂದ ಮುಗ್ಧ ಹುಡುಗಿ, ಆದರೆ ಜೂಲಿ ತಾರ...

  • Mosadapreethi - 1

    ಏರೋಪ್ಲೇನ್ ಸೀಟಿನ ಮೇಲೆ ಕುಳಿತ ತಾರಾ ನೆಮ್ಮದಿಯ ನಿಟ್ಟುಸಿರು ಬಿಡುತ್ತಾ...

  • सन्यासी -- भाग - 27

    सुमेर सिंह की फाँसी की सजा माँफ होने पर वरदा ने जयन्त को धन्...

  • ಹರ್ಷನ ಕೀರ್ತಿಗೆ ವರ್ಷಳ ಸ್ಪೂರ್ತಿ

    ಹರ್ಷನ ಕೀರ್ತಿಗೆ ವರ್ಷಳ ಸ್ಪೂರ್ತಿ(ಆದರ್ಶ ದಂಪತಿಗಳ ಕಥೆ)      ಲೇಖಕ -...

  • ಚೂರು ಪಾರು

    ಚೂರು ಪಾರು (ವಿಭಿನ್ನ ಪ್ರೇಮ ಕಥೆ) (ಲೇಖಕ ವಾಮನಾ ಚಾರ್ಯ) ಅಂದು ಪವನ್ ಪ...

Categories
Share

ಪ್ರತಿಭೆ ಎಲ್ಲಿದೆಯೋ ಅಲ್ಲಿ ಯಶಸ್ಸು

ಪ್ರತಿಭೆ ಎಲ್ಲಿದೆಯೋ ಅಲ್ಲಿದೆ ಯಶಸ್ಸು

ಕಿರು ಕಥೆ

ಲೇಖಕ- ವಾಮನಾಚಾರ್ಯ

ರಾಮಪ್ರಸಾದ್ ಗೆ ಧಿಕ್ಕಾರ ಧಿಕ್ಕಾರ. ಬೇಕೇ ಬೇಕು ನಮ್ಮ ಬೇಡಿಕೆಗಳು ಈಡೇರಿಸಲೇ ಬೇಕು." ಎನ್ನುವ ನಾಮಫಲಕ ಹಿಡಿದು ಕೊಂಡು ಹೋಟೆಲ್ ಅಶೋಕಾ ಡಿಲಕ್ಸ, ಪವನ ಪೂರ, ಮುಂದೆ ಎಲ್ಲಾ ಸಿಬ್ಬಂದಿಗಳು ಶಾಂತಿಯುತ ವಾಗಿ ಪ್ರತಿಭಟನೆ ಮಾಡುತ್ತಿದ್ದರು.

ಅಂದು ಭಾನುವಾರ ಪ್ರವಾಸಿಗರು ಇದೇ ಹೋಟೆಲ್ ಗೆ ಬರುವವರ ಸಂಖ್ಯೆ ಜಾಸ್ತಿ. ಅಕಸ್ಮಾತ್ ಅದೇ ದಿವಸ ಕೆಲಸಗಾರರು ಪ್ರತಿಭಟನೆ ನಡೆಸಿರುವದು ಹೋಟೆಲ್ ಮಾಲೀಕ ರಾಮಪ್ರಸಾದ್ ಶೆಣೈ ಅವರಿಗೆ ಅನಿರೀಕ್ಷಿತ ಆಘಾತ ವಾಯಿತು.

ಪವನಪುರ ಊರು ಚಿಕ್ಕ ದಾದರೂ ವಿಶ್ವದ ಗಮನ ಸೆಳೆದ ಪ್ರವಾಸಿ ಕೇಂದ್ರ. ನಗರದ ಪ್ರವೇಶ ದ್ವಾರದ ಮೇಲೆ ಐವತ್ತು ಅಡಿ ಎತ್ತರ ಇರುವ ಸುಂದರ ವಾದ ಆಂಜನೇಯ ಮೂರ್ತಿ. ಒಳಗೆ ಪ್ರವೇಶ ಮಾಡಿದಮೇಲೆ ಬಲ ಭಾಗದಲ್ಲಿ ಒಂದು ದೊಡ್ಡದಾದ ಬೋರ್ಡ್. ಅದರಲ್ಲಿ ಪವನಪುರ ಪ್ರವಾಸಿ ಕೇಂದ್ರದ ಬಗ್ಗೆ ವಿವರವಾದ ಮಾಹಿತಿ.

ಆಂಜನಾ ನದಿ ದಡದ ಮೇಲೆ ಇರುವ ಊರು ಪವನಪುರ. ಮೂರು ಕಿಲೋ ಮೀಟರ್ ದೂರದಲ್ಲಿ ಪುರಾತನ ಅಂಜನೇಯ ದೇವಸ್ಥಾನ. ರಮಣೀಯವಾದ ಬೆಟ್ಟಗಳ ಸಾಲು, ಎತ್ತರವಾಗಿ ಬೆಳೆದ ಗಿಡಗಳು, ಅಂಜನಾ ನದಿ ಮೇಲೆ ಆಕಾಶದಲ್ಲಿ ಕಾಣುವ ಸುಂದರ ಸೂರ್ಯಾಸ್ತ ನೋಡುಗರ ಕಣ್ಮನ ಸೆಳೆಯುವದು. ವಿವಿಧ ಹಕ್ಕಿಗಳ ಚಿಲಿಪಿಲಿ ಇಂಚರ ಆಕರ್ಷಕ ದೃಶ್ಯ. ಪ್ರಕೃತಿ ಸೌಂದರ್ಯ ವೀಕ್ಷಿಸಿ ಪ್ರವಾಸಿಗರು ಖುಷಿ ಪಡುವರು. ಕವಿಗಳಿಗೆ ಕವನ ರಚಿಸುವ ಉತ್ತಮ ಸ್ದಳ. ಅಲ್ಲಿಯೇ ಎಷ್ಟು ಹೊತ್ತು ನಿಂತರೂ ಬೇಸರ ಆಗುವದಿಲ್ಲ.

ಹೊರಗಿನಿಂದ ಬರುವ ಪ್ರವಾಸಿಗರಿಗೆ ರೈಲು ಹಾಗೂ ಬಸ್ ಸೌಲಭ್ಯ ಉತ್ತಮ ವಾಗಿದ್ದು ಬೇರೆ ಬೇರೆ ಪ್ರದೇಶಗಳಿಂದ ಪ್ರವಾಸಿಗರು ಬರುವರು. ಇವರಲ್ಲಿ ವಿದೇಶಿಯರು ಇರುವರು. ಹೋಟೆಲ್ ಅಶೋಕಾ ಡಿಲಕ್ಸ ಹೆಸರು ವಾಸಿ ಆಗಿದೆ. ಕಳೆದ ಹದಿನೈದು ವರ್ಷಗಳಿಂದ ಇರುವ ಈ ಹೋಟೆಲ್ ವ್ಯಾಪಾರ ಬೆಳೆಯುತ್ತಾ ಹೋದ ಹಾಗೆ ಸಮಸ್ಯೆಗಳು ಉದ್ಭವಿಸುವದು ಸಹಜ. ಇವುಗಳ ಪರಿಹಾರ ಹುಡುಕುವುದರಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ಮಾಡಿದರೆ ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಆಗುವದು ಕೂಡಾ ಸಹಜ.

ಅಂದು ಸಮಯಕ್ಕೆ ಸರಿಯಾಗಿ ಬೆಳಗಿನ ಐದು ಗಂಟೆಗೆ ರಾಮಪ್ರಸಾದ್ ಹಾಗೂ ಅವರ ಹದಿನೆಂಟು ವರ್ಷದ ಮಗ ಕಿರಣ ಹೋಟೆಲ್ ಗೆ ಆಗಮಿಸಿದರು. ಹೋಟೆಲ್ ಮುಖ್ಯದ್ವಾರ ಹಾಗೂ ಒಳಗಡೆ ಇರುವ ಗ್ರಿಲ್ ಡೋರ್ ತೆಗೆದರು. ಇಬ್ಬರೂ ಕೂಡಿ ಸ್ವಚ್ಛತೆ ಕೆಲಸ ಮುಗಿಸಿದರು. ಎಂಟು ಗಂಟೆ ಆದರೂ ಕೆಲಸಗಾರರು ಬರದೇ ಇರುವ ದರಿಂದ ರಾಮಪ್ರಸಾದ್ ಅವರಿಗೆ ಕಾಳಜಿ ಆಯಿತು. ಬಂದ ಗ್ರಾಹಕರು ವಾಪಸ್ ಹೋಗ ತೊಡಗಿದರು.

ರಾಮದಾಸ್ ಅವರಿಗೆ ಹೊರಗಿನ ದೃಶ್ಯ ಕೆಲಸಗಾರರ ಪ್ರತಿಭಟನೆ ನೋಡಿ ಗಾಬರಿ ಆದರು. ಆಪ್ಪ ಮಗ ಹೊರಗೆ ಬಂದರು. ಕಿರಣ ಅವರೆಲ್ಲರಿಗೂ ಕೈ ಜೋಡಿಸಿ, 'ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗು ವದು.ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಮೊದಲು ಕೆಲಸಕ್ಕೆ ಬನ್ನಿ.' ಎಂದು ಕೈ ಜೋಡಿಸಿ ವಿನಂತಿ ಮಾಡಿದ.

ಕೆಲಸಗಾರರ ನಾಯಕ ಶಂಭುನಾಥ, "ಸ್ವಾಮಿ, ನಿಮಗೆ ಕಾಲಾವಕಾಶ ಎರಡು ವರ್ಷಗಳಿಂದ ಕೊಡುತ್ತ ಬಂದಿದ್ದೇವೆ. ಈಗ ನಮ್ಮ ಜೊತೆಗೆ ಬರಹದಲ್ಲಿ ಒಪ್ಪಂದ ಮಾಡಿ ಕಮಿಟ್ಮೆಂಟ್ ಮಾಡಿಕೊಂಡರೆ ಮಾತ್ರ ಕೆಲಸಕ್ಕೆ ಬರುತ್ತೇವೆ.' ಎಂದ

ಅವರ ಬೇಡಿಕೆಗಳನ್ನು ಈಡೇರಿಸುವದು ಕಷ್ಟ ಸಾಧ್ಯ ವಾಗಿರುವದರಿಂದ ಬಹಳ ದಿವಸಗಳಿಂದ ಅದನ್ನು ಮುಂದೂಡತ್ತ ಬಂದಿದ್ದರು. ಹೋಟೆಲ್ ನಲ್ಲಿ ಹತ್ತು ಪುರುಷರು ಹಾಗೂ ಐದು ಮಹಿಳೆಯರು ಕೆಲಸಗಾರರು. ಆಶಾ ಎನ್ನುವ ಯುವತಿ ಅಡುಗೆ ಮನೆ ಇಂಚಾರ್ಜ. ಪ್ರತಿಭಟನೆಯನ್ನು ಆಕೆ ವಿರೋಧಿಸಿ ಅಪ್ಪ ಮಗ ಕುಳಿತ ಸ್ಥಳದಲ್ಲಿ ಬಂದು ಅವರ ಪಕ್ಕದಲ್ಲಿ ಕುಳಿತಳು. ಆಕೆ ರಾಮಪ್ರಸಾದ್ ಊರಿನ ಕಡೆಯವಳು. ಹೈಸ್ಕೂಲ್ ಮುಗಿಸಿದ ಅನಾಥೆಯನ್ನು ನೋಡಿ ಆಕೆಯಲ್ಲಿ ಇರುವ ಪ್ರತಿಭೆ ಗಮನಿಸಿದರು. ಆಕೆಯನ್ನು ಕರೆದುಕೊಂಡು ಬಂದು ತಮ್ಮ ಹೋಟೆಲ್ ನಲ್ಲಿ ಕೆಲಸ ಕೊಟ್ಟರು. ಹತ್ತು ವರ್ಷದಿಂದ ಆಶಾ ಪ್ರಾಮಾಣಿಕತೆ ಯಿಂದ ಕೆಲಸ ಮಾಡಿ ರಾಮ ಪ್ರಸಾದ್ ಅವರ ಅಚ್ಚುಮೆಚ್ಚಿನವಳಾಗಿದ್ದಳು.

ಪ್ರತಿಭಟನೆ ನಡೆಸುತ್ತಿದ ಕೆಲಸಗಾರರ ಮುಖಂಡ ಶಂಭುನಾಥ ಮೂರು ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ. ಅವನು ಕಿತಾಪತಿಯ ಮನುಷ್ಯ ಎಂದು ಗೊತ್ತಿದ್ದರೂ ರಾಮದಾಸ್ ಅವನಿಗೆ ಕೆಲಸ ಕೊಟ್ಟರು. ಇಂತಹ ಸಂಕಷ್ಟ ಸಮಯದಲ್ಲಿ ಹೊಟೇಲ್ ಮುಚ್ಚದೇ ಅನ್ಯ ಮಾರ್ಗ ಇರಲಿಲ್ಲ. ಕೆಲಸಗಾರರು ಬೇರೆ ಕಡೆ ಕೆಲಸಕ್ಕೆ ಸೇರಿ ಕೊಂಡರು. ಸಾಲ ಕೊಟ್ಟ ಬ್ಯಾಂಕ್ ನವರು ಮತ್ತು ಇತರ ಸಾಲಗಾರರು ಸಾಲ ಮರು ಪಾವತಿ ಮಾಡುವ ತಗಾದೆ ಮಾಡಿದರು. ಕಷ್ಟಗಳು ಕಡಿಮೆ ಆಗುವ ಬದಲು ಹೆಚ್ಚಿಗೆ ಆಗುವದರಿಂದ ರಾಮದಾಸ್ ಬಹಳ ನೊಂದುಕೊಂಡು ಹಾಸಿಗೆ ಹಿಡಿದರು. ವೈದ್ಯಕೀಯ ಚಿಕಿತ್ಸೆ ಅವರಿಗೆ ಫಲಕಾರಿ ಆಗಲಿಲ್ಲ. ಒಂದು ತಿಂಗಳು ಕಳೆಯಿತು. ಒಂದು ದಿವಸ ಬೆಳಗ್ಗೆ ಆರು ಗಂಟೆಗೆ ರಾಮದಾಸ್ ಅವರು ಮಗ ಕಿರಣ ಹಾಗೂ ಆಶಾ ಇಬ್ಬರನ್ನೂ ಕರೆದು ತಮ್ಮ ಮನದ ಇಂಗಿತ ತಿಳಿಸಿದರು.

"ಮಕ್ಕಳೇ, ಪರಿಸ್ಥಿತಿ ತುಂಬಾ ಗಂಭೀರ ವಾಗಿರುವದರಿಂದ ಸರ್ವಸ್ವವನ್ನು ಕಳೆದುಕೊಂಡು ಬೀದಿಗೆ ಹೋಗುವದು ನಿಶ್ಚಿತವಾಗಿದೆ. ಅದಕ್ಕಾಗಿ ನೀವಿಬ್ಬರೂ ಧೃತಿಗೆಡದೇ ಕಷ್ಟ ಪಟ್ಟು ಹೋಟೆಲ್ ಮೊದಲಿನ ಹಾಗೆ ಮಾಡಬೇಕು. ಇದು ನನ್ನ ಕೊನೆಯ ಬಯಕೆ. ಇಬ್ಬರೂ ಹೆಸರಿಗೆ ತಕ್ಕಂತೆ ರೇ ಆಫ ಹೋಪ ಇರುವ ದರಿಂದ ನನ್ನ ಕೊನೆಯ ಆಸೆ ಪೂರೈ ಸುವಿರಿ ಎನ್ನುವ ವಿಶ್ವಾಸ ಇದೆ. ಅವರಿಬ್ಬರ ಕೈ ಕೂಡಿಸಿ ಅವರ ತಲೆಯ ಮೇಲೆ ಕೈ ಇಟ್ಟು ಬಾಳ ಸಂಗಾತಿ ಆಗಿರಿ," ಎಂದು ಆಶೀರ್ವಾದ ಮಾಡಿದ ಮರು ಕ್ಷಣವೇ ಇಹಲೋಕ ತ್ಯಜಿಸಿದರು. ಕಿರಣ ತಾಯಿ ಒಂದು ವರ್ಷದ ಹಿಂದೆ ಅನಾರೋಗ್ಯ ದಿಂದ ಬಳಲುತ್ತ ಮರಳಿ ಬಾರದೇ ಇರುವ ಲೋಕಕ್ಕೆ ಹೋದರು.

ಅಪ್ಪನಿಗೆ ವ್ಯಾಪಾರದಲ್ಲಿ ಸಹಾಯ ಮಾಡಲು ಕಿರಣ ಹತ್ತನೇ ತರಗತಿ ವರೆಗೆ ಓದಿ ವಿದ್ಯಾಭ್ಯಾಸಕ್ಕೆ ಇತಿಶ್ರೀ ಮಾಡಿದ್ದ. ಕಿರಣ ಅನಾಥನಾಗಿ ಹೋಟೆಲ್ ಹಾಗೂ ಹಣ ಎಲ್ಲವನ್ನೂ ಕಳೆದು ಕೊಂಡು ಬೀದಿಗೆ ಬಂದ. ಆಶಾ ಹಾಗೂ ಕಿರಣ ಒಂದಾದರು. ರಾಮ ಪ್ರಸಾದ್ ಅವರ ಚಿಕ್ಕ ಮನೆಯಲ್ಲಿ ಇಬ್ಬರೂ ಇದ್ದರು. ಮುಂದೆ ಏನು ಮಾಡಬೇಕು ಎನ್ನುವದರ ಬಗ್ಗೆ ಬಹಳ ವಿಚಾರ ಮಾಡಿದರು. ಹಾಗೆ ದಿನಗಳು ಉರುಳಿದವು. ಏನೂ ಅವರಿಗೆ ಗೊತ್ತಾಗದೇ ಇರುವದ ರಿಂದ ತುಂಬಾ ಚಿಂತೆ ಮಾಡಿದರು. ಒಂದು ತಿಂಗಳು ತುಂಬಾ ಕಷ್ಟ ದಿಂದ ಕಳೆದರು. ಅಲ್ಪ ಸ್ವಲ್ಪ ಉಳಿತಾಯ ಮುಗಿಯಿತು.

ಒಂದು ದಿವಸ ಆಶಾ ತನ್ನ ಪತಿಗೆ, 'ಸಂಕಟ ಬಂದಾಗ ವೆಂಕಟರಮಣ' ಎಂದಳು. ಕಿರಣ ಅದನ್ನು ಅರ್ಥ ಮಾಡಿಕೊಂಡ. ಆಗ ಸಮಯ ಬೆಳಗಿನ ಜಾವ ಏಳು ಗಂಟೆ ಸಮಯ. ಇಬ್ಬರೂ ಬೇಗನೆ ಸ್ನಾನ ಮಾಡಿ ಒಂದು ಕಿಲೋಮೀಟರ್ ದೂರ ಇರುವ ವೇಂಕಟೇಶ್ವರ ದೇವಸ್ಥಾನಕ್ಕೆ ನಡೆದುಕೊಂಡು ಹೋದರು. ಪ್ರದಕ್ಷಿಣೆ ಹಾಕಿ ಮಂಗಳಾರತಿ ಆಗುವವರಿಗೆ ಕಾದು ತೀರ್ಥ, ಪ್ರಸಾದ ತೆಗೆದುಕೊಂಡು ಇನ್ನೇನು ಹೊರಡಬೇಕು ಎನ್ನುವಾಗ ಯಾರೋ ಕಿರಣ್ ಬೆನ್ನು ತಟ್ಟಿದರು. ಯಾರು ಎಂದು ಹಿಂದೆ ನೋಡಿದ ಕಿರಣ್ ಗೆ ಆಶ್ಚರ್ಯ ಕಾದಿತ್ತು. ಅವರು ಬೇರೆ ಯಾರು ಆಗಿರದೇ ರಾಮಪ್ರಸಾದ್ ಅವರ ಬಾಲ್ಯ ಸ್ನೇಹಿತ ಹಾಗೂ ಪವನಪುರದ ಪ್ರಖ್ಯಾತ ಪೀಠೋಪಕರಣಗಳ ಉದ್ಯಮಿ ಜಯಪ್ರಕಾಶ ಕಾಮತ್.

"ಕಿರಣ್, ನಿನ್ನ ತಂದೆ ರಾಮಪ್ರಸಾದ್ ನಮ್ಮೆಲ್ಲರನ್ನು ಆಗಲಿರುವದು, ಹೋಟೆಲ್ ಕ್ಲೋಜ್ ಆಗಿರುವದು, ನೀನು ನಿರ್ಗತಿಕನಾಗಿರುವದು ತಿಳಿದು ತುಂಬಾ ದು:ಖವಾಯಿತು. ಅಂದಹಾಗೆ ನಿನ್ನ ಜೊತೆಗೆ ಇರುವ ಹುಡುಗಿ ಯಾರು?"

"ಅಂಕಲ್, ಆಗುವದೆಲ್ಲ ಆಗಿಹೋಯಿತು. ನನ್ನ ಮೇಲೆ ಕಾಳಜಿ ತೋರಿಸಿರುವದಕ್ಕೆ ಧನ್ಯವಾದ. ಈಕೆ ನಮ್ಮ ಹೋಟೆಲ್ ನಲ್ಲಿ ಕೆಲಸಮಾಡುತ್ತಿದ್ದ ಆಶಾ. ಡ್ಯಾಡಿ ಇಚ್ಛೆಯಂತೆ ಇವಳ ಜೊತೆಗೆ ಮದುವೆ ಆಗಿದೆ." ಎಂದ

"ಒಳ್ಳೆಯದಾಯಿತು. ಇಬ್ಬರೂ ನನ್ನ ಜೊತೆಗೆ ಕಾರಿನಲ್ಲಿ ಬನ್ನಿ," ಎಂದರು.

ಯಾಕೆ ಕರೆದರು ಎನ್ನುವುದು ಅವರಿಬ್ಬರಿಗೆ ತಿಳಿಯಲಿಲ್ಲ. ಇಬ್ಬರೂ ಕಾರಿನಲ್ಲಿ ಜಯಪ್ರಕಾಶ್ ಅವರ ಆಫೀಸ್ ಗೆ ಹೋದರು. ಸುಮಾರು ಒಂದು ಗಂಟೆ ಇಬ್ಬರ ಜೊತೆಗೆ ಜಯಪ್ರಕಾಶ್ ಮಾತನಾಡಿದರು. ಇಬ್ಬರೂ ಅಷ್ಟೇನೂ ಓದದೇ ಇದ್ದರೂ ಅವರಲ್ಲಿ ಇರುವ ವಿಶಿಷ್ಟವಾದ ಪ್ರತಿಭೆಯನ್ನು ಗುರುತಿಸಿದ ಜಯಪ್ರಕಾಶ್ ಅವರಿಗೆ ತುಂಬಾ ಪ್ರಭಾವ ಬೀರಿತು. ಆಶಾ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಕಲೆ ಇದ್ದರೆ ಕಿರಣ ಗೆ ಕಂಪ್ಯೂಟರ್ ನಲ್ಲಿ ಅದ್ಭುತ ಜ್ಞಾನ ಆಲ್ಲದೇ ಕಾರು, ಬಸ್ ಚಾಲನೆ ಮಾಡುವದರಲ್ಲಿ ನಿಸ್ಸೀಮ. ಜಯಪ್ರಕಾಶ್ ಅವರಿಗೆ ಒಂದು ಐಡಿಯಾ ಫ್ಲ್ಯಾಶ್ ಆಯಿತು.

ಅಂತಹ ಐಡಿಯಾ ಆದರೂ ಏನು?

ಪವನಪುರ ಪ್ರವಾಸಿ ಕೇಂದ್ರ. ಎಲ್ಲಾ ನಿಸರ್ಗದ ತಾಣಗಳು ಪವನಪುರ ದಿಂದ ಮೂರು ಕಿಲೋಮೀಟರ್ ದಿಂದ ಐದು ಕಿಲೋಮೀಟರ್ ದೂರದಲ್ಲಿ ಇವೆ. ಜಯಪ್ರಕಾಶ್ ಅವರ ಪ್ಲಾನ್ ಪ್ರಕಾರ ಪ್ರವಾಸಿಗರಿಗೆ ಇನ್ನೂ ಆಕರ್ಷಣೆ ಮಾಡಲು, ಹೋಟೆಲ್ ಬಿಜಿನೆಸ್ ಮಾಡಲು ಒಂದು ಟೆಂಪೋ ಟ್ರಾವೆಲರ್ ವೆಹಿಕಲ್ ಹಾಗೂ ಗೈಡ್ ಬೇಕು. ಆಶಾ ಗೈಡ್ ಆದರೆ ಕಿರಣ ಆನಲೈನ್ ಬುಕ್ಕಿಂಗ್ ಜೊತೆಗೆ ವೆಹಿಕಲ್ ಚಾಲಕ ನಾಗುವನು. ಪ್ರವಾಸಿಗರಿಗೆ ಪ್ರವಾಸಿ ತಾಣ ಗಳು ತೋರಿಸುವ ಜೊತೆಗೆ ತಮ್ಮ ಹೊಟೇಲ್ ನಿಂದ ಊಟ ಹಾಗೂ ಲಾಡ್ಜ್ ವ್ಯವಸ್ಥೆ ಆಗುವದು. ಇದರಿಂದ ಹೊಟೇಲ್ ಬಿಜನೆಸ್ ಬೆಳೆಯಬಹುದು. ಈ ಯೋಜನೆಯ ವಿವರ ಜಯಪ್ರಕಾಶ್ ಅವರಿಬ್ಬರಿಗೂ ತಿಳಿಸಿದರು. ಅದಕ್ಕೂ ಮೊದಲು ಪವನ ಪುರ್ ಪ್ರವಾಸಿ ತಾಣಗಳ ಮಾಹಿತಿ ಇರುವ ಪುಸ್ತಕ ಆಶಾಗೆ ಕೊಟ್ಟರು. ಕಿರಣ್ ಗೆ ತಮ್ಮ ಲ್ಯಾಪ್ ಟಾಪ್ ಹಾಗೂ ವಾಹನದ ಕೀ ಕೊಟ್ಟರು. ಆಶಾ ಹಾಗೂ ಕಿರಣ ಗೆ ಸಂತೋಷವಾಯಿತು.

ಆ ಸಮಯದಲ್ಲಿ ಕಿರಣ, " ಅಂಕಲ್, ನನ್ನದೊಂದು ಸಲಹೆ."

ಅದಕ್ಕೆ ಜಯಪ್ರಕಾಶ್, "ಏನಯ್ಯಾ ಬೇಗ ಹೇಳು?"

"ಅಂಕಲ್, ನಾವು ನಡೆಸುತ್ತಿದ್ದ ಹೋಟೆಲ್ ಫರ್ನಿಚರ್, ಕಿಚನ್ ಎಕ್ಯುಪಮೆಂಟ್ಸ, ಇತರ ಸಾಮಾನುಗಳು ಹಾಗೆ ಇವೆ. ಆ ಕಟ್ಟಡ ಇನ್ನೂ ಖಾಲಿ ಇದೆ. ಅಲ್ಲಿ ಹೋಟೆಲ್ ತ್ವರಿತವಾಗಿ ಪ್ರಾರಂಭ ಮಾಡಬಹುದು. ಬಿಲ್ಡಿಂಗ್ ಓನರ್ ನಾಗಭೂಷಣ ದೇವಿಪೂರ ನಿಮಗೆ ಚೆನ್ನಾಗಿ ಗೊತ್ತು."

ಜಯಪ್ರಕಾಶ್ ಬೇಗನೆ ಉತ್ತರ ಕೊಡಲಿಲ್ಲ. ಐದು ನಿಮಿಷ ಬಿಟ್ಟು ಉತ್ತರ ಕೊಟ್ಟರು.

"ಕಿರಣ, ನಿನ್ನ ಸಲಹೆ ನನಗೆ ಒಪ್ಪಿಗೆ ಇದೆ. ಆದರೆ ಒಂದು ಸಮಸ್ಯೆ. ನಾಗಭೂಷಣ ಸಂಶಯ ಪಿಶಾಚಿ. ಈಗಲೇ ಫೋನ್ ಮಾಡುವೆ." ಎಂದರು

ಅದೃಷ್ಟವಶಾತ್ ಆ ವ್ಯಕ್ತಿ ಒಪ್ಪಿದ.

"ಅಂಕಲ್, ನಿಮಗೆ ಇನ್ನೊಂದು ವಿನಂತಿ."

"ಅದೇನಯ್ಯಾ?"

"ಹೊಟೆಲ್ ಹೆಸರು ಅದನ್ನೇ ಮುಂದುವರೆಸಬೇಕು."

"ಹೋಟೆಲ್ ಅಶೋಕಾ ಡಿಲಕ್ಸ ತಾನೆ?"

"ಹೌದು ಸರ್." ಎಂದಳು ಆಶಾ

ಥಂಬ್ ಮೇಲೆ ಮಾಡಿ ಡನ್ ಎಂದರು ಜಯಪ್ರಕಾಶ್.

ಇವೆಲ್ಲ ಕೆಲಸಗಳು ಅಂದುಕೊಂಡಂತೆ ಕಾರ್ಯರೂಪಕ್ಕೆ ಬರಲು ಒಂದು ತಿಂಗಳು ಬೇಕಾಯಿತು. ಈ ಅವಧಿಯಲ್ಲಿ ಆಶಾ ಹಾಗೂ ಕಿರಣ ಯೋಜನೆ ಪ್ರಕಾರ ತಮಗೆ ವಹಿಸಿದ ಕೆಲಸದ ಬಗ್ಗೆ ಪರಿಶ್ರಮ ವಹಿಸಿ ತಿಳಿದುಕೊಂಡು ಬೇರೆ ಪ್ರವಾಸಿ ಕೇಂದ್ರಕ್ಕೆ ಹೋಗಿ ಗೈಡ್ ಕೆಲಸ ಮಾಡುವ ವಿಧಾನ ತಿಳಿದು ಕೊಂಡರೆ ಕಿರಣ ಆನಲೈನ್ ಬುಕ್ಕಿಂಗ್, ವೆಬ್ ಸೈಟ್ ಓಪನ್ ಮಾಡುವದು, ಜಾಹಿರಾತು ಕೊಡುವದು ತಿಳಿದುಕೊಂಡ.

ಒಂದು ಶುಭ ದಿವಸ ಜಯಪ್ರಕಾಶ್ ಅವರು ವಾಹನದ ಪೂಜೆ ನೆರವೇರಿಸಿದರು. ಅದಾದ ಎರಡು ದಿವಸ ಗಳ ನಂತರ ಆಶಾ ಹಾಗೂ ಕಿರಣ ತಮ್ಮ ಕೆಲಸ ಪ್ರಾರಂಭ ಮಾಡಿದರು. ಮೊದಲನೇ ದಿವಸ ಜಯಪ್ರಕಾಶ್ ಅವರು ತಮ್ಮ ಕುಟುಂಬ ಸಮೇತ ಸುಂದರ ತಾಣಗಳಿಗೆ ಕಿರಣ ಚಾಲಕ ನಾಗಿ ಆಶಾ ಗೈಡ್ ಆಗಿ ಇರುವ ಹೊಸ ಟೆಂಪೋ ಟ್ರಾವೆಲರ್ಸ್ ವಾಹನದಲ್ಲಿ ಹೋದರು. ಅಲ್ಲಿ ಆಶಾ ವಿವರಿಸುವ ಶೈಲಿ, ಕೇಳಿದ ಪ್ರಶ್ನೆಗಳಿಗೆ ಉತ್ತರಗಳು, ಜಯಪ್ರಕಾಶ್ ಅವರಿಗೆ ತುಂಬಾ ಹಿಡಿಸಿತು. ತಾವು ಅಂದುಕೊಂಡದ್ದು ಆಗಿರುವದಕ್ಕೆ ಸಂತೋಷ ವಾಯಿತು.

ಅವರ ಕುಟುಂಬದ ಇತರ ಸದಸ್ಯರು ಖುಷಿ ಪಟ್ಟರು. ಪ್ರಾರಂಭದಲ್ಲಿ ಆಗಿರುವ ಎಲ್ಲಾ ವಿಘ್ನಗಳನ್ನು ಸಮರ್ಪಕವಾಗಿ ಎದುರಿಸಿದರು. ಈ ವಿನೂತನ ವ್ಯವಸ್ಥೆ ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಯಿತು.

ಒಂದು ದಿವಸ ಕೆಲಸ ಬಿಟ್ಟ ಶಂಭುನಾಥ ಮತ್ತು ಇತರ ಕೆಲಸಗಾರರು ಹೋಟೆಲ್ ಗೆ ಬಂದು ಕಿರಣ ಅವರ ಕಾಲು ಹಿಡಿದು ತಾವು ಮಾಡಿದ ಅಪರಾಧ ಕ್ಷಮಿಸಿ ಕೆಲಸಕ್ಕೆ ತೆಗೆದು ಕೊಳ್ಳುವಂತೆ ಬೇಡಿ ಕೊಂಡರು. ಆಗ ಕೆಲಸಗಾರರ ಅವಶ್ಯಕತೆ ಇತ್ತು. ಅಲ್ಲಿಯೇ ಇದ್ದ ಜಯಪ್ರಕಾಶ್ ಅವರೆಲ್ಲರನ್ನು ಕೆಲಸಕ್ಕೆ ತೆಗೆದು ಕೊಳ್ಳಲು ಒಪ್ಪಿದರು. ದಿನ ಕಳೆದಂತೆ ಪ್ರವಾಸಿಗರ ಸಂಖ್ಯೆ ಪ್ರತಿ ವರ್ಷ ವೃದ್ಧಿ ಆಗುತ್ತ ಹೋಯಿತು. ವಿದೇಶಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬರುವದು ಮುಂದುವರೆದು ಐದನೇ ವರ್ಷದ ಕೊನೆಗೆ ಹೊಟೇಲ್ ಅಶೋಕಾ ಡಿಲಕ್ಸ ಮೊದಲಿನಂತೆ ಪವನಪುರದಲ್ಲಿ ನಂಬರ್ ವನ್ ಹೊಟೇಲ್ ಆಯಿತು.

ಜಯಪ್ರಕಾಶ್ ಅವರು ಹೋಟೆಲ್ ಬಿಜಿನೆಸ್ ನಲ್ಲಿ ನಿರೀಕ್ಷೆ ಗಿಂತ ಹೆಚ್ಚು ಲಾಭ ಗಳಿಸಿದರು. ಇದು ಸಾಧ್ಯ ವಾಗಲು ಆಶಾ ಹಾಗೂ ಕಿರಣ ಅವರ ಪರಿಶ್ರಮ ಗಮನದಲ್ಲಿ ಇಟ್ಟುಕೊಂಡು ಅವರಿಗೆ ಸೂಕ್ತ ಸ್ಥಾನ ಮಾನ ನೀಡಲು ನಿರ್ಧರಿಸಿದರು.

ವಿಜಯ ದಶಮಿ ದಿವಸ ದಿನದಂದು ವಿಜಯೋತ್ಸವ ಸಮಾರಂಭ ಆಯೋಜಿಸಿದ್ದರು. ಅಂದು ಜಯಪ್ರಕಾಶ್ ಅವರು ಆಶಾ, ಕಿರಣ ಅವರಿಗೆ ಸನ್ಮಾನ ಮಾಡಿ ಹಾರ ಹಾಕಿ ಇಬ್ಬರ ಕೈಯಲ್ಲಿ ಬೇರೆ ಬೇರೆ ಕವರ್ ಕೊಟ್ಟರು. ಕವರ್ ಓಪನ್ ಮಾಡಿ ಭಾವುಕರಾಗಿ ಆ ಸಂದರ್ಭದಲ್ಲಿ ರಾಮಪ್ರಸಾದ್ ಅವರನ್ನು ಸ್ಮರಿಸಿದಾಗ ಅವರ ಕಣ್ಣಲ್ಲಿ ಒಂದೇ ಸಮನೆ ಕಣ್ಣೀರು.

ಆ ಕವರ್ ನಲ್ಲಿ ಇರುವದಾದರೂ ಏನು?

ಆಶಾ ಹಾಗೂ ಕಿರಣ ಹೋಟೆಲ್ ಅಶೋಕಾ ಡಿಲಕ್ಸ ಮ್ಯಾನೆಜಿಂಗ್ ಪಾರ್ಟನರ್ಸ ಆದರು.

ಪ್ರತಿಭೆ ಎಲ್ಲಿದೆಯೋ ಅಲ್ಲಿದೆ ಯಶಸ್ಸು ಎನ್ನುವದಕ್ಕೆ ಆಶಾ ಹಾಗೂ ಕಿರಣ ಅವರೇ ಇದಕ್ಕೆ ನಿದರ್ಶನ.