"ಅಪ್ಪು.. ತಯಾರಾಗಿದಿಯಾ..?" ಎಂದು ಕೂಗುತ್ತಾ.. ತನ್ನ ತಮ್ಮ ಉಪನ್ಯಾಸನನ್ನು ಹುಡುಕುತ್ತಾ ಬರುತ್ತಾಳೆ ಅವನ ಅಕ್ಕ ಊರ್ವಿ.
ತಾಯಾರಗದೆಯೇ.. ಕನ್ನಡಿ ಮುಂದೆ ಮೌನಾಳ ಫೋಟೋ ಹಿಡಿದು.. ಅವಳ ಮುಖವನ್ನೇ ನೋಡುತ್ತಾ ಮುಖದಲ್ಲೊಂದು ಸಣ್ಣ ನಗು ಹೊತ್ತು ಕುಳಿತ್ತಿದ್ದ ನಮ್ಮ ನಾಯಕ ಉಪನ್ಯಾಸ್ ಚಕ್ರವರ್ತಿ.
ಅವನು ಆ ಫೋಟೋ ನೋಡುತ್ತಾ.. ತನ್ನದೇ ನೆನಪುಗಳಲ್ಲಿ ಕಳೆದು ಕುಳಿತಿದ್ದ. ಅದನ್ನು ಗಮನಿಸಿದ ಊರ್ವಿ, "ಅಪ್ಪು.. ನಿನ್ನಾ ಮತ್ತೆ ಮೌನಾಳ ಮದುವೆ ಕಣೋ.. ಇನ್ನೊಂದ್ ಅರ್ಧ ಘಂಟೆಗೆ ಅರಿಶಿನದ ಶಾಸ್ತ್ರ. ನೀನ್ ನೋಡಿದ್ರೆ ಇನ್ನೂ ಫೋಟೋ ನೋಡಿಕೊಂಡೇ ಕಳೆದು ಹೋಗಿದ್ದೀಯ.. ತಯಾರಾಗುವುದು ಯಾವಾಗ..??" ಎನ್ನುತ್ತಾ ಅವನ ಫೋನನ್ನು ಕಸಿಯುತ್ತಾಳೆ ಊರ್ವಿ.
"ಅಕ್ಕಾ... ಯಾಕೆ ನಂಗಿಷ್ಟು ನೋವು ಕೊಡುತ್ತಿರುವಿ... ಕೊಡು ಆ ಫೋನನ್ನಾ.." ಎನ್ನುತ್ತಿರುವಾಗ ಉಪನ್ಯಾಸನ ಮುಖದಲ್ಲಿ ಇಷ್ಟು ಹೊತ್ತು ಇದ್ದ ಆ ಮುಗುಳುನಗೆ ಮರೆಯಾಗುತ್ತದೆ.
"ನಾಡಿದ್ದೇ ಮೌನಾ ಜೊತೆ ಮದುವೆ ಕಣೋ.. ಈ ಫೋಟೋ ನೋಡಿಕೊಂಡೇ ಇನ್ನೂ ಖುಷಿ ಪಡುತ್ತಿದ್ದರೆ, ಹೇಗೋ... ಎದ್ದೇಳು.. ಈಗ ಅರಿಶಿನ ಶಾಸ್ತ್ರಕ್ಕೆ ಬೇಗ ರೆಡಿ ಆಗು.." ಎಂದು ಉಪನ್ಯಾಸನನ್ನು ಎಬ್ಬಿಸಿ ಕನ್ನಡಿ ಮುಂದೆ ತಂದು ನಿಲ್ಲಿಸಿ ತಯಾರು ಮಾಡುತ್ತಾಳೆ.
ಅರಿಶಿನದ ಶಾಸ್ತ್ರಕ್ಕೆ.. ಹಳದಿ ಬಣ್ಣದ ಜುಬ್ಬಾ ಪೈಜಾಮವನ್ನು ತೊಟ್ಟು ನಿಂತಿದ್ದ ನಮ್ಮ ನಾಯಕ💛. ೬ಅಡಿ ಎತ್ತರದ ದಷ್ಟ ಪುಷ್ಟ ಮೈಕಟ್ಟಿನ ಹುಡುಗ. ೭೦ ರಿಂದ ೮೦ ಕೆಜಿ ತೂಕ ಇವನದ್ದು. ಜಿಮ್ಮಿಗೆ ಹೋಗದಿದ್ದರೂ.. ತನ್ನಕ್ಕ ಪ್ರತಿದಿನ ಕೊಡುವ ಆರೋಗ್ಯ ಭೋಜನದಿಂದ ಚಂದವಾಗಿ ಬೆಳೆದಿರುವ ಮುದ್ದು ಹುಡುಗ. ದಪ್ಪ ಕಣ್ಣುಗಳು.. ಅದಕ್ಕೆ ತಕ್ಕಂತಹ ಹುಬ್ಬುಗಳು. ಅವನ ಕಣ್ಣುಗಳಿಗೆ ಜಗವನ್ನೇ ಮರೆಸುವಂತಹ ಶಕ್ತಿ. ಮುಖದಲ್ಲಿ ಸದಾ ಮೂಡುವ ಮಂದಹಾಸವೇ ಅವನಿಗೆ ಅಭಾರಣ. ಕಿವಿಗಳಲ್ಲಿ ಚಿಕ್ಕದಾದ ರತ್ನದ ಓಲೆ. ಕಂಠಕ್ಕೊಂದು ತೆಳುವಾದ ಚಿನ್ನದ ಸರ. ಬಲಗಯ್ಯಿಗೆ ಸಿಂಹಮುಖದ ಖಡ್ಗ. ಇಷ್ಟು ಸಾಕಲ್ಲವೇ ನಮ್ಮ ನಾಯಕನಿಗೆ ಚಂದವಾಗಿ ಕಾಣಲು. ಅವನ ಈ ಅಲಂಕಾರವೆಲ್ಲಾ ಮೌನಳಿಗಾಗಿ. ಅವಳು ಇವನನ್ನು ಸದಾ ಹೀಗೆಯೇ ನೋಡಲು ಬಯಸುತ್ತಾಳೆ.
ಆದರಿಂದು.. ಅವನ ಮುಖದಲ್ಲಿ ಸದಾ, ಮೌನಾಳಿಗಾಗಿ ಮೂಡುತ್ತಿದ್ದ ಮಂದಹಾಸ ಇರಲಿಲ್ಲ. ಉಳಿದೆಲ್ಲವೂ ಇತ್ತು. ಇವನನ್ನೊಮ್ಮೆ ನೋಡಿದ ಅವಳ ಅಕ್ಕ.. ಅವನಿಗೆ ದೃಷ್ಟಿ ತೆಗೆಯುತ್ತಾ.. "ನನ್ನಪ್ಪು ಕಣೋ ನೀನು.. ತುಂಬಾ ಮುದ್ದಾಗಿ ಕಾಣುತ್ತಿದ್ದೀಯ.. ಬಾ ಅರಿಶಿಣ ಶಾಸ್ತ್ರಕ್ಕೆ ತಡವಾಯಿತು.. ಹೊರಡಬೇಕು" ಎಂದು ಅವನನ್ನು ಕರೆದುಕೊಂಡು ಶಾಸ್ತ್ರದ ಕಡೆ ಹೆಜ್ಜೆ ಹಾಕುತ್ತಾಳೆ ಊರ್ವಿ.
ಸದಾ ಕಾಲ ನಮ್ಮ ಹುಡುಗನಿಗೆ ಮೌನಾಳದ್ದೇ ಚಿಂತೆ. ಈಗಲೂ.. ಅರಿಷಿಣ ಶಾಸ್ತ್ರದ ಕಡೆ ತನ್ನಕ್ಕನೊಂದಿಗೆ ಹೆಜ್ಜೆ ಹಾಕುತ್ತಿದ್ದವನಿಗೆ ಮೌನಾಳ ನೆನಪುಗಳು ಕಣ್ಣು ಮುಂದೆ ಬರುತ್ತಿತ್ತು.
"" ನಾಲಕ್ಕು ವರ್ಷಗಳ ಹಿಂದೆ.. ಉಪನ್ಯಾಸನ ಸಂಗೀತ ಕಛೇರಿ ಅಂದು. 'ತಾನ್ಸೇನ್ ಸಂಗೀತ್ ಸಮಾರೋಹ್'- ಇದು ಗ್ವಾಲಿಯರ್ ನಲ್ಲಿ ನಡೆಯುವ ಸಂಗೀತೋತ್ಸವ. ಇಲ್ಲಿ.. ನಮ್ಮ ಹುಡುಗನ ಕಛೇರಿ. ಇಲ್ಲಿಯೇ ನಾಯಕ ಹಾಗೂ ನಾಯಕಿಯರ ಮೊದಲ ಭೇಟಿಯಾದದ್ದು. ಅವನ ಹಾಡು ಕೇಳಬೇಕೆಂದೇ.. ನಮ್ಮ ಮೌನಾ ಹರಸಹಾಸ ಮಾಡಿ ತನ್ನ ಗೆಳತಿಯರೊಂದಿಗೆ ಗ್ವಾಲಿಯರ್ ಗೆ ಬಂದಿದ್ದಾಳೆ.
"ಓಯ್.. ಬೇಗ ಬನ್ನಿ.. ಪ್ರೋಗ್ರಾಮ್ ಶುರು ಆಗೋಯ್ತು.." ಎನ್ನುತ್ತಾ ತನ್ನ ಗೆಳತಿಯರನ್ನು ಕಛೇರಿಯತ್ತ ಕರೆದೊಯುತ್ತಾಳೆ ಮೌನಾ. ದೀಪಾ ಹಾಗೂ ಅನುಷಾ ಜೊತೆ ಕುಳಿತ ನಮ್ಮ ನಾಯಕಿ ಮೌನಾ.. ೩ಘಂಟೆಗಳ ಕಾಲ ತನ್ನ ದೃಷ್ಟಿಯನ್ನು ಬದಲಿಸದೆಯೇ ಉಪನ್ಯಾಸನನ್ನೇ ನೋಡುತ್ತಾ ಅವನ ಧ್ವನಿಯನ್ನು ಆಸ್ವಾದಿಸುತ್ತಿದ್ದಳು.
ಕೊನೆಗೂ... ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿ.. ತನ್ನ ಅಚ್ಚುಮೆಚ್ಚಿನ ಸಂಗೀತಗಾರನ ಸಂಗೀತ ಕೇಳಲು ಇಬ್ಬರು ಗೆಳತಿಯರೊಂದಿಗೆ ಬೆಂಗಳೂರಿನಿಂದ ದೂರದ ಊರಿಗೆ ಬಂದು ಅವನ ಹಾಡನ್ನು ಕೇಳಿದಳು.
ಕಛೇರಿ ಮುಗಿಯಿತು.. ಉಪನ್ಯಾಸ್ ಅಲ್ಲಿಂದ ಹೊರಡುವಾಗ.. ಅವನೊಂದಿಗೆ ಫೋಟೋ ತೆಗೆಸಿಕೊಳ್ಳಲು ಜನಸಾಗರ. ಎಲ್ಲರೂ ಅವನೊಂದಿಗೆ ಫೋಟೋಗಾಗಿ ಒದ್ದಾಡುತ್ತಿದ್ದರು. ಮೌನಾಳಿಗೆ ಚಿಕ್ಕಂದಿನಿಂದಲೂ ಹಾಡುವುದು.. ಹಾಗೂ ಹಾಡುಗಳನ್ನು ಕೇಳುವುದು ಬಹಳ ಇಷ್ಟ. ಆದರೆ, ಅವಳ ದುರಾದೃಷ್ಟಕ್ಕೆ ಥ್ರೋಟ್ ಕಾನ್ಸರ್ ಇರುವುದರಿಂದ ಹಾಡಲು ಆಗುವುದಿಲ್ಲ. ಹಾಗಂತ ಕೇಳುವುದನ್ನು ಬಿಟ್ಟಿದ್ದಾಳೆಯೇ..? ಖಂಡಿತ ಇಲ್ಲ. ಸದಾ ಸಂಗೀತವನ್ನು ಆಲಿಸುತ್ತಲೇ ಇರುತ್ತಾಳೆ ನಮ್ಮ ಹುಡುಗಿ. ಅದರಲ್ಲಿಯೂ ಉಪನ್ಯಾಸನ ಸಂಗೀತವೆಂದರೆ ಇವಳಿಗೆ ಬಹಳ ಇಷ್ಟ. ಇಷ್ಟು ದಿನ ಕೇವಲ ಫೋನಿನಲ್ಲಿ ಕೇಳುತ್ತಿದ್ದ ಹುಡುಗಿ.. ಇಂದು ಮೊದಲ ಬಾರಿಗೆ.. ನೇರವಾಗಿ ಕೇಳಲು ಗ್ವಾಲಿಯರ್ ವರೆಗೂ ಬಂದಿದ್ದಾಳೆ.
ಎಲ್ಲರೂ ಅವನೊಂದಿಗೆ ಫೋಟೋ ತೆಗಿಸಿಕೊಳ್ಳುತ್ತಿದ್ದಾರೆ. ಇವಳಿಗೂ ಆಸೆ ಇದೆ. ಆದರೂ ಏಕೋ ಕೊಂಚ ಭಯ. "ಮೌನಾ.. ಬೇಗ ಕಣೇ.. ಆಮೇಲೆ ಅವ್ರು ಹೋಗಿಬಿಟ್ರೆ ಏನೇ ಮಾಡ್ತೀಯಾ.. ಬಾ ಹೋಗಿ ಫೋಟೋ ತೆಗೆಸಿಕೊಳ್ಳೋಣ" ಎನ್ನುತ್ತಾ ಅನುಷಾ ಅವಳನ್ನು ಉಪನ್ಯಾಸನ ಬಳಿ ಕರೆದೊಯ್ಯುತ್ತಾಳೆ. ಎಲ್ಲರದ್ದೂ ಆಗಲಿ.. ಆಮೇಲೆ ನಾವು ಹೋಗೋಣ ಎಂದುಕೊಂಡ ಮೌನಾ ತನ್ನ ಗೆಳತಿಯರನ್ನೂ ನಿಲ್ಲಿಸಿ.. ತಾನೂ ಕಾಯುತ್ತಾ ನಿಲ್ಲುತ್ತಾಳೆ.
ಸಮಯ ಮೀರಿತು ಎಂದುಕೊಂಡ ಉಪನ್ಯಾಸ್.. "ನನಗೀಗ ಲೇಟ್ ಆಯ್ತು.. ಫ್ಲೈಯ್ಟ್ ಗೆ ಟೈಮ್ ಆಗ್ತಿದೆ.. ನೆಕ್ಸ್ಟ್ ಟೈಮ್ ಮತ್ತೆ ಸಿಗೋಣ.." ಎಂದು ಹೇಳಿ ಹೊರಡಲು ನಿಲ್ಲುತ್ತಾನೆ ಉಪನ್ಯಾಸ್.
ಆದರೆ, ಜನ ಅವನನ್ನು ಕಳಿಸಬೇಕಲ್ಲವೇ.. 'ಸರ್.. ಪ್ಲೀಸ್ ಒಂದು ಫೋಟೋ..' ಎನ್ನುತ್ತಾ ಜನರು ಅವನ್ನತ್ತ ಇನ್ನೂ ನಿಂತಿದ್ದರು. ಅವರನ್ನು ನಿರಾಸೆ ಮಾಡಿಸಬಾರದೆಂದು ಬೇಗ ಬೇಗನೆ ಫೋಟೋ ತೆಗಿಸಿಕೊಂಡು.. ವಿಮಾನಕ್ಕೆ ಸಮಯವಾಯಿತು ಎಂದು ನಮ್ಮ ಹುಡುಗಿಯೊಡನೆ ಫೋಟೋ ತೆಗಿಸಿಕೊಳ್ಳದೆಯೇ ಅಲ್ಲಿಂದ ಹೊರಟುಬಿಡುತ್ತಾನೆ ಉಪನ್ಯಾಸ್.
"ನೋಡಿದ್ಯಾ.. ಅವ್ರು ಹೋಗಿಯೇ ಬಿಟ್ರು.. ಎಲ್ಲರದ್ದೂ ಆಗಲಿ ಅಂತ ಕಾಯುತ್ತಾ ಇದ್ದರೇ.. ಹೀಗೆ ಆಗೋದು.. ಇಷ್ಟು ದೂರ ಅವರಿಗಾಗಿ ಬಂದಿದ್ದೇವೆ.. ಒಂದು ಫೋಟೋ ಕೂಡ ತೆಗೆಸಿಕೊಳ್ಳಲಾಗಲಿಲ್ಲ ನಮ್ಮಿಂದ" ಎಂದು ದೀಪಾ ಮುನಿಸು ತೋರಿಸಿದರೆ, "ಬಾ ನನ್ ಜೊತೆ" ಎಂದು ಅವಳ ಕಯ್ಯನ್ನು ಹಿಡಿದು.. ಉಪನ್ಯಾಸ್ ಹೋದ ಕಡೆ ಹೆಜ್ಜೆ ಹಾಕುತ್ತಾಳೆ ಮೌನಾ.
ಜನ ಎಲ್ಲಾ.. ಅದಾಗಲೇ.. ಹೋಗಿದ್ದರು. ಕೆಲವರು ಫೋಟೋ ಸಿಕ್ಕಿತು ಎಂಬ ಖುಷಿಯಲ್ಲಿ.. ಇನ್ ಕೆಲವರು ಮತ್ತೊಮ್ಮೆ ತೆಗೆಸಿಕೊಂಡರಾಯಿತು ಎಂಬ ದುಃಖದಲ್ಲಿ.. ಮುಂದಿನ ಕಾರ್ಯಕ್ರಮಕ್ಕೆ ತೆರಳಿದ್ದರು. ಮೌನಾ ಮಾತ್ರ.. ಉಪನ್ಯಾಸ್ ಇದ್ದ ಕೊಠಡಿಯತ್ತ ಗೆಳತಿಯರೊಂದಿಗೆ ಹೋಗುತ್ತಾಳೆ.
ಕೊಠಡಿಯತ್ತ ಇದ್ದ ಕಾವಲುಗಾರನೊಬ್ಬ.. "ಒಳಗೆ ಯಾರಿಗೂ ಪರ್ಮಿಷನ್ ಇಲ್ಲ. ಇನ್ನೊಂದ್ ಸ್ವಲ್ಪ ಹೊತ್ತಿಗೆ ಸರ್ ಹೊರಡಬೇಕು. ನೀವು ದೂರ ಹೋಗಿ" ಎಂದು ತಡೆಯುತ್ತಾನೆ.
ಹೆಸರಿಗೆ ಮೌನಾ ಆದರೂ ನಮ್ಮ ಹುಡುಗಿಯ ಮಾತು ಚಿಟ ಪಟ ಅನ್ನುವ ಪಟಾಕಿ ತರಹ. ಇನ್ನು ತನ್ನವನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮಾತನಾಡದೆಯೇ ಇರುತ್ತಾಳೆಯೇ..??
"ನಿಮ್ಗೆ ನಾನ್ ರೆಸ್ಪೆಕ್ಟ್ ಕೊಡ್ತೀನಿ... ಹಾಗೇ ನೀವು ನನಗೆ ರೇಸ್ಪೆಕ್ಟ್ ಕೊಡಬೇಕು ತಾನೇ.. ಬೆಂಗಳೂರಿನಿಂದ ಗ್ವಾಲಿಯರ್ ವರೆಗೂ ಬಂದಿದ್ದೀನಿ. ನಾನ್ ಇವರ ತುಂಬಾ ದೊಡ್ಡ ಅಭಿಮಾನಿ. ಇವರ ಜೊತೆ ಫೋಟೋ ತೆಗೆಸಿಕೊಳ್ಳಲೇ ಬೇಕು. ಮನೆಯಲ್ಲಿ ಅಪ್ಪ ಅಮ್ಮನ ಹತ್ತಿರ ಹಠ ಮಾಡಿಕೊಂಡು ಬಂದಿದ್ದೀನಿ. ಪ್ಲೀಸ್ ಒಂದ್ ಚಾನ್ಸ್ ಕೊಡಿ. ಒಂದೇ ನಿಮಿಷ ಅಷ್ಟೇ. ಆಮೇಲೆ ನಾನ್ ಹೋಗ್ತೀನಿ" ಎಂದು ಮೃದುವಾಗಿಯೇ ಕೇಳಿಕೊಳ್ಳುತ್ತಾಳೆ.
ಆದರೆ.. ಆ ಕಾವಲುಗಾರ.. ಕೊಂಚ ಎತ್ತರದ ಧ್ವನಿಯಲ್ಲಿ.. "ಏನ್ ನೀನೊಬ್ಬಳೇ ನೋಡು ಬೆಂಗಳೂರಿನಿಂದ ಬಂದಿರೋದು.. ನಿನ್ ಥರಾನೇ.. ಸಾವಿರಾರು ಜನ ಇದ್ದಾರೆ. ಅವರಿಗೂ ಸರ್ ಜೊತೆ ಫೋಟೋ ತೆಗೆಸಿಕೊಳ್ಬೇಕು ಅಂತ ಆಸೆ ಇರತ್ತೆ. ಅವ್ರೆಲ್ಲಾ ಸುಮ್ನೆ ಅಲ್ಲಿ ಹೋಗಿ ಕುಳಿತಿಲ್ವಾ.. ನೀನು ಹಾಗೆ ಹೋಗು.." ಎಂದು ಅವರನ್ನು ಹೊರ ಕಳಿಸುವ ಪ್ರಯತ್ನ ಮಾಡುತ್ತಾನೆ.
ಅಷ್ಟು ಸುಲಭವಾಗಿ ತಗ್ಗುವುದಿಲ್ಲ ನಮ್ಮ ಹುಡುಗಿ.. "ರೆಸ್ಪೆಕ್ಟ್ ಕೊಡ್ತಾ ಇದೀನಿ.. ನೀವು ಕೊಡಿ ಅಂತ ಆಗ್ಲೇ ಹೇಳ್ದೆ ತಾನೇ.. ನನ್ನಷ್ಟು ಆಸೆ ಬೇರೆ ಅವರಿಗೂ ಇದ್ದಿದ್ದರೆ.. ಅವರು ನನ್ನ ರೀತಿಯೇ ಬರುತ್ತಿದ್ದರು.. ಆದರೆ, ಅವರೆಲ್ಲಿ ಬಂದರು..?? ಸುಮ್ಮನೇ ಹೋಗಿ ಕುಳಿತುಕೊಂಡಿಲ್ಲವೇ..?? ನಿಮ್ ಸರ್ ಟೈಮಿಂಗ್ಸ್ ಗೆ ಬೆಲೆ ಕೊಡ್ತೀನಿ. ಒಂದುವೇಳೆ ಫ್ಲೈಟ್ ಮಿಸ್ ಆದರೂ ಇನ್ನೊಂದು ಫ್ಲೈಟ್ ಬುಕ್ ಮಾಡಿಕೊಂಡು ಹೋಗುವಷ್ಟು ಶ್ರೀಮಂತರು ಅವರು. ಆದ್ರೆ.. ನಿಮಗೇನ್ ಗೊತ್ತು.. ನಾನೆಷ್ಟು ಕಷ್ಟ ಪಟ್ಟು ಈ ಒಂದೇ ಒಂದು ಚ್ಯಾನ್ಸ್ ನ ಪಡೆದುಕೊಂಡಿದೀನಿ ಅಂತ. ಬೇರೆಯವರ ಜೊತೆ ನನ್ನ ಕಂಪೇರ್ ಮಾಡ್ತಿದಿರಲಾ..? ನನ್ನಷ್ಟೇ ಅವರಿಗೂ ಸರ್ ನ ಮೀಟ್ ಮಾಡ್ಬೇಕು ಅನ್ನೋ ಆಸೆ ಇದ್ದಿದ್ರೆ ಬಂದಿರೋರು. ಇದ್ರಲ್ಲೇ ಗೊತ್ತಾಗತ್ತೆ.. ಎಲ್ಲರಗಿಂತ ನಾನೇ ದೊಡ್ಡ ಅಭಿಮಾನಿ ಅಂತ.. ಸೋ.. ಈಗ ನನ್ನ ಒಳಗೆ ಬಿಡಿ.. ನಾನು ಟ್ರೈನಿನಲ್ಲಿ ಊರಿಗೆ ವಾಪಸ್ ಹೋಗ್ಬೇಕು.. ನಂಗೂ ಲೇಟ್ ಆಗ್ತಿದೆ.." ಎಂದು ಮೊದಲಿಗೆ ಜೋರು ಧ್ವನಿಯಲ್ಲಿ ಮಾತನಾಡಿದರೂ.. ಮಾತನಾಡುತ್ತಾ ಅವಳ ಧ್ವನಿ ಕಡಿಮೆ ಆಗುತ್ತಿತ್ತು.
ಇದಿಷ್ಟನ್ನೂ ಒಳಗಡೆಯೇ ನಿಂತು.. ಉಪನ್ಯಾಸ್ ಕೇಳಿಸಿಕೊಳ್ಳುತ್ತಿದ್ದ. ಇವಳ ಮಾತುಗಳನ್ನು ಕೇಳಿದವನ ಮುಖದಲ್ಲಿ ಮೊದಲ ಬಾರಿಗೆ.. ಹುಡುಗಿಯ ಕಾರಣದಿಂದ ಮುಗುಳುನಗೆ ಮೂಡಿತ್ತು. ಕನ್ನಡಿ ಮುಂದೆ ನಿಂತು.. ಪ್ರಯಾಣಕ್ಕೆ ತಯಾರುಗಿತ್ತಿದ್ದ ನಮ್ಮ ಹುಡುಗ.. ಕಯ್ಯಿಗೆ ವಾಚನ್ನು ಕಟ್ಟುತ್ತಾ.. ಮೌನಾಳ ಮಾತನ್ನು ಕೇಳಿಸಿಕೊಂಡು.. ತುಟಿಯಂಚಿನಲ್ಲಿ ನಗು ಬೀರುತ್ತಿದ್ದ.
ಅವನ ಗೆಳೆಯ ಶರತ್.., "ಏನೋ ಮಗಾ.. ಒಳಗೊಳಗೇ ನಗ್ತಾ ಇದೀಯಾ.. ಫರ್ಸ್ಟ್ ಟೈಮ್ ಒಂದು ಹುಡುಗಿ ಮಾತನ್ನ ಇಷ್ಟೊಂದು ಡೀಪ್ ಆಗಿ ಕೇಳಿಸಿಕೊಳ್ತಾ ಇದೀಯಾ.. ಆಗ್ಲೇ.. ಅವಳನ್ನು ಇಷ್ಟ ಪಡೋಕೆ ಶುರು ಮಾಡ್ತಾ ಇರೋ ಹಾಗಿದೆ.. ಒಂದು ವಾಚ್ ಕಟ್ಟಿಕೊಳ್ಳೋಕೆ.. ಸೆಕೆಂಡ್ಸ್ ಗಳು ಸಾಕು.. ಅಂತಹದ್ರಲ್ಲಿ... ೫ ನಿಮಿಷದಿಂದ ಕಟ್ಟುತ್ತಲೇ ಇದಿಯಲ್ಲೋ.." ಎಂದು ಕಾಡಿಸಿದರೆ.. "ಹೇ..! ಸುಮ್ನಿರೋ.. ಏನೇನೋ ಮಾತಾಡ್ಬೇಡ.. ಇದೇ ಫರ್ಸ್ಟ್ ಟೈಮ್ ಈ ಥರನೂ ನನ್ನ ಅಭಿಮಾನಿಗಳು ಇರ್ತಾರೆ ಅಂತ ಗೊತ್ತಾಗಿರೋದು.. ನನ್ನ ಹಾಡನ್ನು ಎಷ್ಟು ಇಷ್ಟ ಪಡ್ತಿದ್ದಾರೆ ಅವರು.. ಒಬ್ಬ ಹಾಡುಗಾರನಾಗಿ ನಾನು ಗೆದ್ದುಬಿಟ್ಟೆ ಅನ್ನುವಷ್ಟು ಖುಷಿಯಾಗ್ತಿದೆ ಕಣೋ.. ನಮ್ಮಪ್ಪನ ಕಂಪೆನಿಯಲ್ಲಿ ನಾನ್ ಮಾಡೋ ಕೆಲಸ ನನಗೆಂದೂ ಇಷ್ಟು ಖುಷಿ ನೀಡಿರಲಿಲ್ಲ. ಆದರೆ, ಇಂದು ತುಂಬಾ ಖುಷಿಯಾಗ್ತಿದೆ" ಎಂದು.. ವಾಚನ್ನು ಕಟ್ಟಿಕೊಂಡ ಹುಡುಗ.. ಕನ್ನಡಿಗೆ ಬೆನ್ನು ಮುಖ ಮಾಡಿ.. ತನ್ನ ಗೆಳೆಯನೊಂದಿಗೆ ಸಂತೋಷ ಹಂಚಿಕೊಳ್ಳುತ್ತಾನೆ.
ಇತ್ತ ಈ ಹುಡುಗಿ, ಎಷ್ಟೇ ಕೇಳಿದರೂ.. ಸರ್ ಪರ್ಮಿಷನ್ ಇಲ್ಲವೆಂದು ಆ ಕಾವಲುಗಾರ.. ಅವಳನ್ನು ಹೊರ ಕಳಿಸುವ ಪ್ರಯತ್ನದಲ್ಲಿಯೇ ಇದ್ದ. ಇವಳೂ ಅಷ್ಟೇ.. ಹಠಮಾರಿ.. ಉಪನ್ಯಾಸನನ್ನು ಇಂದು ನೋಡಲೇ ಬೇಕು ಎನ್ನುವ ಹಠದಲ್ಲಿ.. ತನ್ನ ಪ್ರಯತ್ನ ಮಾಡುತ್ತಲೇ ಇದ್ದಳು.
"ಪ್ಲೀಸ್ ಅರ್ಥ ಮಾಡಿಕೊಳ್ಳಿ.. ನಂಗಿದು ಗೋಲ್ಡೆನ್ ಚಾನ್ಸ್.. ನನಗೆ ಕ್ಯಾನ್ಸರ್ ಇದೆ.. ಅವರ ನೆಕ್ಸ್ಟ್ ಪ್ರೋಗ್ರಾಮ್ ಗೆ ನಾನು ಬದುಕಿರುತ್ತೇನೋ ಇಲ್ಲವೋ ಎಂದೂ ನನಗೆ ತಿಳಿದಿಲ್ಲ. ಈ ಬಾರಿ ನಾನವರನ್ನು ಒಮ್ಮೆ ಮಾತನಾಡಿಸಲೇ ಬೇಕು" ಎಂದು ದುಃಖದಿಂದ ಅವನನ್ನು ನೋಡಲು ಎಷ್ಟು ಆಸೆ ಇದೆ ಎಂಬುದನ್ನು ತೋಡಿಕೊಳ್ಳುತ್ತಾಳೆ ಮೌನಾ.
ಈ ಮಾತು ಒಳಗೆ ಕುಳಿತವನ ಕಿವಿ ತಲುಪಿದ ತಕ್ಷಣವೇ.. ಅವನ ಎದೆ ಒಡೆದಿತ್ತು.. ಅವಳು ಸಾಯುವ ಮಾತನಾಡಿದಳು ಎಂಬ ನೋವಿಗೆ.. ಬಾಗಿಲನ್ನು ತೆರೆಯುತ್ತಾನೆ. ಬಾಗಿಲು ತೆರೆದಾಗ ಎದುರಲ್ಲಿಯೇ.. ಮೌನಾ ನಿಂತಿದ್ದಳು. ಮೌನಾಳ ಆಸೆ ನನಸಾಗುವ ಹೊತ್ತು ಅದಾಗಲೇ ಬಂದಿತ್ತು. ನಾಯಕ ನಾಯಕಿಯರ ಮೊದಲ ಭೇಟಿ ಹೀಗಾಗಿತ್ತು. ""
ತನ್ನವಳನ್ನು ನೋಡಿದ ಮೊದಲ ಕ್ಷಣವನ್ನು ನೆನೆದು.. ತನ್ನ ಮೊಗದಲ್ಲಿ ಮರೆಯಾಗಿದ್ದ ಮುಗುಳುನಗೆ.. ಈಗ ಮೂಡಿತ್ತು. ಅದರ ಆಯಸ್ಸು ಕ್ಷಣಗಳಷ್ಟೇ ಎಂಬಂತೆ.. ಅವನ ಅಕ್ಕ ಊರ್ವಿ, ಅವನನ್ನು ಅರಿಶಿಣದ ಶಾಸ್ತ್ರದತ್ತ ಕರೆತರುತ್ತಾಳೆ. ಆ ಸಂಭ್ರಮವನ್ನು ಕಂಡ ಉಪನ್ಯಾಸನ ಮೊಗದಲ್ಲಿ ಪುನಃ ಆ ಮುಗುಳುನಗೆ ಮರೆಯಾಗುತ್ತದೆ.