ನಮ್ಮದೊಂದು ಚಿಕ್ಕ ಕುಟುಂಬ ಅದರಲ್ಲಿ ನಾನು ಅಮ್ಮ, ಅಪ್ಪ. ನನ್ನ ಹೆಸರು ರಮ್ಯಾ ಅಂತ. ನಾನು ೬ ನೇ ತರಗತಿಯಲ್ಲಿ ಓದುತ್ತಿದ್ದೆ. ಒಂದು ದಿನ ನಾನು ಮತ್ತು ನನ್ನ ಚಿಕ್ಕಪ್ಪನ ಮಗಳು ಶಾಲೆಗೆ ಹೋಗುವಾಗ ದಾರಿಯಲ್ಲಿ ಒಂದು ದೊಡ್ಡ ಹೆಣ್ಣು ನಾಯಿ ಸತ್ತು ಬಿದ್ದಿತ್ತು.
ಆ ಹೆಣ್ಣು ನಾಯಿಗೆ ೪-೫ ಮರಿಗಳು ಇದ್ದವು. ಪಾಪ ಆ ಮರಿಗಳಿಗೆ ಅರಿವಿಲ್ಲ ತಮ್ಮ ತಾಯಿ ಸತ್ತಿದ್ದಾಳೆ ಅಂತ, ಪಾಪ ಆ ಏನೂ ಅರಿಯದ ಪುಟ್ಟ ಮರಿಗಳು ಸತ್ತು ಬಿದ್ದಿದ್ದ ತಮ್ಮ ತಾಯಿಯ ಮೊಲೆ ಹಾಲನ್ನು ಕುಡಿಯುತಿತ್ತು. ಆ ದೃಶ್ಯವನ್ನು ನೋಡಿದ ನನಗೆ ಕರುಳುಹಿಂಡುವಂತಾಯಿತು . ನನಗೆ ಅಲ್ಲಿಂದ ಆ ನಾಯಿ ಮರಿಗಳನ್ನು ಬಿಟ್ಟು ಹೋಗಲು ಮನಸ್ಸೇ ಬರಲಿಲ್ಲ ಆದರೂ ನಾನು ಹೇಗಾದರೂ ಅಲ್ಲಿಂದ ಬೇಸರದಿಂದ ಶಾಲೆಗೆ ಹೊರಟೆ .
ಆಗ ನನ್ನ ತಲೆಗೊಂದು ಯೋಚನೆ ಬಂದಿತು ಏನೆಂದರೆ ಅದರಲ್ಲಿ ಒಂದು ಮರಿಯನ್ನು ಮನೆಗೆ ತೆಗೆದುಕೊಂಡು ಹೋಗುವ ಎಂದು. ಹೀಗೆ ಯೋಚನೆ ಮಾಡುತ್ತಾ ನಾನು ಶಾಲೆಗೆ ಹೋದೆ. ನಾನು ಶಾಲೆಗೆ ಬಂದರು ಸಹ ನನ್ನ ಗಮನ ಎಲ್ಲಾ ಆ ನಾಯಿ ಮರಿಗಳ ಹತ್ತಿರವೇ ಇತ್ತು.
ಹೇಗಾದರೂ ಸಂಜೆಯಾಯಿತು ಶಾಲೆ ಬಿಟ್ಟಿತು , ನನಗೆ ಒಂದು ಕಡೆ ಖುಷಿ ಇನ್ನೊಂದು ಕಡೆ ಬೇಜಾರು. ಬೇಜಾರು ಏಕೆಂದರೆ, ಆ ಒಂದು ನಾಯಿ ಮರಿಯನ್ನು ಮನೆಗೆ ತೆಗೆದುಕೊಂಡು ಹೋದರೆ ಎಲ್ಲಿ ಮನೆಯಲ್ಲಿ ಅಪ್ಪ ಅಮ್ಮ ಬೈಯುತ್ತಾರೆ ಅಂತ. ಖುಷಿ ಏಕೆಂದರೆ ನನ್ನ ಮನೆಗೆ ಒಬ್ಬರು ಹೊಸ ಜನ ಬರುತ್ತಾರಲ್ಲ ಅಂತ. ಹೀಗೆ ಗೊಂದಲದಲ್ಲಿ ಶಾಲೆಯಿಂದ ಹೊರಟು ಆ ಮರಿಗಳು ಇದ್ದ ಜಾಗಕ್ಕೆ ನಾನು ನನ್ನ ಚಿಕ್ಕಪ್ಪನ ಮಗಳು ಹೋದೆವು.
ಆಗ ಅಲ್ಲಿ ಆ ನಾಯಿ ಮರಿಗಳು ಇರಲಿಲ್ಲ, ಎಲ್ಲಿ ಹೋಗಿದೆ ಅಂತ ಗೊತ್ತಿಲ್ಲ. ನಾನು ಮತ್ತು ನನ್ನ ಚಿಕ್ಕಪ್ಪನ ಮಗಳು ಎಲ್ಲಾ ಕಡೆ ಹುಡುಕಿದೆವು. ಆಗ ಒಂದು ಕಡೆಯಿಂದ ನಾಯಿ ಮರಿ ಅಳುವ ಶಬ್ಧ ಕೇಳಿಸಿತು . ಅದನ್ನು ನಾನು ನನ್ನ ಚಿಕ್ಕಪ್ಪನ ಮಗಳ ಬಳಿ ಹೇಳಿದೆ, ಆಗ ಆ ಶಬ್ದ ಅವಳಿಗೂ ಕೇಳಿಸಿತು, ನಾವು ಆ ಶಬ್ದ ಬರುವ ಕಡೆ ಹೋದೆವು.
ಹೋಗಿ ನೋಡಿದಾಗ ಒಂದು ಯಾವುದೋ ಒಂದು ಪ್ರಾಣಿ ಮಾಡಿ ಇಟ್ಟ ಬಿಲದೊಳಗೆ ಎರಡು ಮುದ್ದಾದ ನಾಯಿ ಮರಿಗಳು ಇದ್ದವು ನಮಗೆ ನೋಡಿ ಖುಷಿಯೋ ಖುಷಿ . ಉಳಿದ ಆ ನಾಯಿ ಮರಿಗಳನ್ನು ಯಾರೋ ತೆಗೆದುಕೊಂಡು ಹೋಗಿರಬಹುದೆಂದು ಎಂದು ಯೋಚಿಸಿ ಸುಮ್ಮನಾದೆ.
ಆ ಎರಡು ಮುದ್ದಾದ ನಾಯಿ ಮರಿಗಳು ನೋಡಲು ಹೇಗಿದ್ದವು ಅಂದರೆ, ಅದರ ಮುಖಗಳು ಗುಂಡು ಗುಂಡು ಆಗಿ ಇದ್ದವು, ಪುಟ್ಟ ಪುಟ್ಟ ಕೈ ಕಾಲುಗಳು, ಪಿಳಿ ಪಿಳಿ ಅನ್ನುವ ಎರಡು ಮುದ್ದಾದ ಕಣ್ಣುಗಳು, ಒಂದು ನಾಯಿ ಮರಿಯ ಬಣ್ಣ ಕಪ್ಪು, ಇನ್ನೊಂದು ನಾಯಿ ಮರಿಯ ಬಣ್ಣ ಕಂದು ಮತ್ತು ಬಿಳಿ.
"ಈ ಕಂದು ಮತ್ತು ಬಿಳಿ ಬಣ್ಣದ ನಾಯಿಯೇ ಈ ಕಥೆಯ ಮುಖ್ಯ ಪಾತ್ರಧಾರಿ" ನಂತರ ನಾವು ಏನು ಮಾಡಿದೆವು ಅಂದರೆ , ಆ ಕಪ್ಪು ಬಣ್ಣದ ನಾಯಿ ಮರಿಯನ್ನು ನನ್ನ ಚಿಕ್ಕಪ್ಪನ ಮಗಳು ತೆಗೆದು ಕೊಂಡಳು ನಾನು ಇನ್ನೊಂದು ನಾಯಿಮರಿಯನ್ನು ತೆಗೆದುಕೊಂಡೆ. ಇಬ್ಬರು ನಾಯಿ ಮರಿಗಳನ್ನು ಕಯ್ಯಲ್ಲಿ ಹಿಡಿದುಕೊಂಡು ಮನೆಯತ್ತ ಸಾಗಿದೆವು.
ನನಗೆ ಎಲ್ಲಿಲ್ಲದ ಸಂಭ್ರಮ ಸಂತೋಷ ಯಾಕಂದ್ರೆ ನಾನು ಪ್ರಾಣಿ ಪಕ್ಷಿಗಳನ್ನು ತುಂಬ ಇಷ್ಟಪಡುತ್ತೇನೆ ಅದರಲ್ಲಿಯೂ ಬೆಕ್ಕು ನಾಯಿ ಅಂದರೆ ನನ್ನ ಪ್ರಾಣ. ನಾನು ಮನುಷ್ಯನಿಗಿಂತ ಪ್ರಾಣಿಯನ್ನು ತುಂಬಾ ಇಷ್ಟಪಡುತ್ತೇನೆ . ಏಕೆಂದರೆ ಆ ಮೂಕ ಪ್ರಾಣಿಗಳು ಮನುಷ್ಯರ ಭಾವನೆಯನ್ನ ಅರ್ಥ ಮಾಡಿಕೊಳ್ಳುತ್ತೆ . ಆದರೆ ಮನುಷ್ಯರು ತಮ್ಮ ಆತ್ಮೀಯರ ಭಾವನೆಗಳಿಗೆಯೇ ಸ್ಪಂದಿಸುವುದಿಲ್ಲ.ನನ್ನದು, ನನಗೆ , ಬೇಕು ಅಂತಾ ಸ್ವಾರ್ಥದಲ್ಲಿಯೇ ಬದುಕುತ್ತಾರೆ. ಈ ಕಲಿಯುಗದಲ್ಲಿ ಬೆನ್ನಿಗೆ ಚೂರಿ ಹಾಕುವ ಜನರ ನಡುವೆ ನಿಷ್ಕಲ್ಮಶವಾದ ಪ್ರೀತಿ ಕೊಡುವ ಏಕೈಕ ಜೀವಿ ಅಂದರೆ ಅದು ನಾಯಿ. ಅದು ನಮ್ಮ ಹತ್ತಿರ ಆಸ್ತಿ , ಅಂತಸ್ತು ಏನು ಕೇಳಲ್ಲ, ಬರೀ ಅದಕ್ಕೆ ಬೇಕಾಗಿರುವುದು ಮೂರು ಹೊತ್ತಿನ ಊಟ ಮತ್ತು ಪ್ರೀತಿ. ನಾವು ಅದಕ್ಕೆ ಒಂದು ಮುಷ್ಟಿಯಷ್ಟು ಪ್ರೀತಿ ಕೊಟ್ಟರೆ ಅದು ತನ್ನ ಜೀವವನ್ನೇ ಅರ್ಪಿಸಿ ಬಿಡುತ್ತೆ.
ಅಂತೂ ಇಂತೂ ಮನೆಗೆ ಹತ್ತಿರವಾದೆ, ಆಗ ಇದ್ದ ಸಂಭ್ರಮ ಸಂತೋಷ ಎಲ್ಲಾ ಮನೆಗೆ ಹತ್ತಿರವಾಗುವಾಗ ಎಲ್ಲಾ ಹೋಯಿತು.ಸಂಭ್ರಮ ಸಂತೋಷ ಇದ್ದ ಜಾಗದಲ್ಲಿ ಭಯ ಆಗಲು ಶುರುವಾಯಿತು ಏಕೆಂದರೆ ನಾನು ಆಗಲೇ ಹೇಳಿದೆಯಲ್ಲ ಮನೆಯಲ್ಲಿ ಅಪ್ಪ ಮತ್ತು ಅಮ್ಮ ಬೈಯುತ್ತಾರೆ ಎಂದು. ಆಗ ಖುಷಿಯಿಂದ ಕುದುರೆಯ ಹಾಗೆ ಓಡೋಡಿ ಬಂದೆ, ಮನೆಗೆ ತಲುಪುವಾಗ ಇರುವೆಯ ಹಾಗೆ ಬಂದೆ. ಅಂತೂ ಇಂತೂ ಇರುವೆಯ ಹಾಗೆ ಬಂದು ಮನೆಗೆ ತಲುಪಿದೆ.
ಅಮ್ಮ ಹೊರಗಡೆ ಕುಳಿತುಕೊಂಡು ಬೀಡಿ ಕಟ್ಟುತ್ತಿದ್ದರು , ಅಪ್ಪ ಕೆಲಸಕ್ಕೆ ಹೋಗಿದ್ದರು. ಆ ನಾಯಿ ಮರಿಯನ್ನು ಅಮ್ಮನಿಗೆ ತೋರಿಸಿದೆ ಮೊದಲು ಸ್ವಲ್ಪ ಬೈದರು ಆಮೇಲೆ ಅವರೇ ನಾಯಿ ಮರಿಯನ್ನು ಮಡಿಲಲ್ಲಿ ಕೂರಿಸಿ ಮುದ್ದಾಡಿದರು. ಏಕೆಂದರೆ ಅವರು ಸಹ ನನ್ನ ಹಾಗೆ ಪ್ರಾಣಿ ಪಕ್ಷಿಗಳ ಪ್ರೇಮಿ.
ಸ್ವಲ್ಪ ಹೊತ್ತಾದ ಮೇಲೆ ಅಪ್ಪ ಬಂದರು , ಅಪ್ಪನಿಗೆ ಆ ನಾಯಿ ಮರಿಯನ್ನು ತೋರಿಸಿದೆ ಮೊದಲು ಅವರು ಸಹ ಹಾಗೆ ಬೈದರು ನಂತರ ಏನು ಹೇಳಲಿಲ್ಲ. ಅವರು ಸಹ ಪ್ರಾಣಿ ಪ್ರೇಮಿಯೇ ಆದರೆ ನನ್ನ ಹಾಗೆ ತುಂಬ ಮುದ್ದಾಡಲ್ಲ. ನಂತರ ನಾನು ಅದಕ್ಕೆ ರಾತ್ರಿ ಮಲಗಲು ಒಂದು ಪೆಟ್ಟಿಗೆಯನ್ನು ತಯಾರಿಸಿದೆ. ನಾನು ಆ ನಾಯಿ ಮರಿಗೆ "ರಾಂಬೊ" ಎಂದು ಹೆಸರಿಟ್ಟೆ, ಅದಕ್ಕೆ ಅಮ್ಮ ಹೇಳಿದರು ರಾಂಬೊ ಬೇಡ "ರಾಮು "ಅಂತ ಆಗಬಹುದು. ಆದರೆ ನನಗೆ ಆ ಹೆಸರು ಇಡಲು ಇಷ್ಟವಿರಲಿಲ್ಲ . ನನಗೆ ಇಷ್ಟವಿಲ್ಲದಕ್ಕೆ ಕಾರಣವೇನೆಂದರೆ , ಒಂದನೆಯ ಕಾರಣ ರಾಮು ಎಂದರೆ ನಮ್ಮ ದೇವರ ಹೆಸರು , ಎರಡನೇಯ ಕಾರಣ ಆ ಹೆಸರು ಸ್ಟೈಲ್ ಆಗಿ ಇರಲಿಲ್ಲ. ನಾನು ಅಮ್ಮನ ಹತ್ತಿರ ಹಠ ಮಾಡಿದೆ. " ರಾಂಬೊ " ಅಂತ ಹೆಸರು ಚೆನ್ನಾಗಿದೆ ಅಮ್ಮ ಈ ಹೆಸರೇ ಆಗಬಹುದು ಎಂದು ಅಮ್ಮನ ಬಳಿ ಹೇಳಿದೆ. ಆದರೆ ಅಮ್ಮ ಅದಕ್ಕೆ ಒಪ್ಪಲಿಲ್ಲ ಅವರು "ರಾಮು" ಅಂತ ಹೆಸರು ಇಟ್ಟೆ ನಾಯಿಯನ್ನು ಕರೆಯುತ್ತಾ ಇದ್ದರು. ಆಮೇಲೆ ನಾನು ಸುಮ್ಮನಾದೆ , ಆ ಹೆಸರೇ ಇರಲಿ ಎಂದು. ಆದರೆ ಅಮ್ಮ ನಾಯಿಗೆ ಒಳ್ಳೆ ಹೆಸರಿಟ್ಟಿದ್ದಾರೆ , ಏಕೆಂದರೆ ನನ್ನ ಹೆಸರು ರಮ್ಯಾ ನನ್ನ ನಾಯಿಯ ಹೆಸರು ರಾಮು . ಇಬ್ಬರ ಹೆಸರು ಒಳ್ಳೆ ಹೊಂದಾಣಿಕೆಯಾಗುತ್ತೆ.
ನನ್ನ ರಾಮು ರಾತ್ರಿ ಎಲ್ಲಾ ತುಂಬಾ ಅಳುತ್ತಿತ್ತು ಏಕೆಂದರೆ ಅದು ರಾತ್ರಿ ಒಬ್ಬಂಟಿಯಾಗಿತ್ತು ಅದರ ಜೊತೆ ಆಟವಾಡಲು ಬೇರೆ ನಾಯಿ ಇರಲಿಲ್ಲ. ಮತ್ತು ಅದಕ್ಕೆ ಅದರ ಅಮ್ಮನ ನೆನಪು ಆಗುತಿತ್ತು. ಹಗಲು ಎಲ್ಲಾ ಅಳುತ್ತಿರಲಿಲ್ಲ ಏಕೆಂದರೆ ಅಮ್ಮ ಅದನ್ನ ಆಟ ಆಡಿಸುತ್ತಿದ್ದರು , ಮುದ್ದು ಮಾಡುತಿದ್ದರು. ಭಾನುವಾರ ಬಂದಾಗಲೆಲ್ಲ ಮತ್ತು ಶಾಲೆಗೆ ರಜೆ ಇದ್ದಾಗಲೆಲ್ಲ ನಾನು ರಾಮುವಿನ ಜೊತೆ ಆಡುತ್ತಿದ್ದೆ , ನನಗೆ ಯಾವ ಗೆಳೆಯರು ಬೇಕಾಗುತ್ತಿರಲಿಲ್ಲ . ನಾನು ನನ್ನ ರಾಮುವನ್ನು ಕರೆದುಕೊಂಡು ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದೆ ಯಾಕಂದರೆ ಅಲ್ಲಿ ಅವನ ಒಡಹುಟ್ಟಿದವನು ಇದ್ದಾನೆ . ಅದು ಯಾರೆಂದರೆ ಆ ಕಪ್ಪು ನಾಯಿ ಮರಿ. ಅದಕ್ಕೆ ನನ್ನ ಚಿಕ್ಕಪ್ಪನ ಮಗಳು "ಜಾಕಿ " ಎಂದು ಹೆಸರು ಇಟ್ಟಿದ್ದಳು. ಅವನು ಸಹ ತುಂಬ ಮುದ್ದಾಗಿ ಇದ್ದ. ನಾನು ಮತ್ತು ನನ್ನ ಚಿಕ್ಕಪ್ಪನ ಮಗಳು ನಾಯಿ ಮರಿಗಳನ್ನು ತೆಗೆದುಕೊಂಡು ನಮ್ಮ ಮನೆ ಹತ್ತಿರದಲ್ಲಿ ಒಂದು ಬರಡಾದ ಕೃಷಿ ಭೂಮಿ ಇತ್ತು ಅಲ್ಲಿಗೆ ಕರೆದುಕೊಂಡು ಹೋಗಿ ಇಬ್ಬರು ನಾಯಿಮರಿಗಳೊಂದಿಗೆ ಸೇರಿ ಆಡುತ್ತಿದ್ದೆವು.
ನಾನು ಯಾವಾಗಲೂ ಶಾಲೆಯಿಂದ ಬಂದ ತಕ್ಷಣ ನನ್ನ ರಾಮುವನ್ನು ಮುದ್ದಾದಡದೆ ಮನೆಯ ಒಳಗೆ ಹೋಗುತ್ತಿರಲಿಲ್ಲ. ಅಷ್ಟು ಸಹ ನನಗೆ ಇಷ್ಟವಾಗಿದ್ದ. ಬೆಳಿಗ್ಗೆ ಶಾಲೆಗೆ ಹೋಗುವಾಗಲೂ ಸಹ ಹಾಗೆ ಮುದ್ದಾಡಿ ಹೋಗುತ್ತಿದ್ದೆ. ರಾಮು ನನ್ನ ಮನೆಯವರಿಗೆ ಸಹ ತುಂಬಾ ಇಷ್ಟ.
ಕಾಲಕ್ರಮೇಣ ರಾಮು ದೊಡ್ಡವನಾಗಿ ಬೆಳೆದನು. ರಾಮು ಎಷ್ಟು ದೊಡ್ಡವನಾಗಿ ಬೆಳೆದರೂ ನನಗೆ ಅವನು ಚಿಕ್ಕವನಾಗಿಯೇ ಕಾಣುತ್ತಿದ್ದನು. ರಾಮು ದೊಡ್ಡವನಾದ ಮೇಲೆ ಹೇಗೆ ಕಾಣುತಿದ್ದ ಅಂದರೆ, ಎಲ್ಲರಿಗೂ ಆಶ್ಚರ್ಯ , ಏಕೆಂದರೆ ಅವನು ಎಷ್ಟು ಎತ್ತರವಾಗಿ ಇದ್ದ ಎಂದರೆ, ಸಾಮಾನ್ಯ ನಾಯಿಯ ಎತ್ತರವನ್ನು ಹೊಂದಿರಲಿಲ್ಲ , ಅದಕ್ಕಿಂತ ಎರಡು ಪಟ್ಟು ದೊಡ್ಡವನಾಗಿದ್ದ. ಅವನ ಮುಖ ತೋಳದ ಹಾಗೆ ಉದ್ದ ಇತ್ತು , ಕಿವಿಗಳೆರಡು ದೊಡ್ಡದಾಗಿ ಕೆಳಗೆ ಬಾಗಿತ್ತು . ಬಹಳ ಬಲವಾಗಿ ಕಾಣುತಿದ್ದ. ಅವನು ಬಲವಾಗಿ ಮಾತ್ರ ಕಾಣುತ್ತಿದ್ದದ್ದು , ಆದರೆ ಅವನಿಗೆ ಒಂದು ಚೂರು ಧೈರ್ಯ ಇರಲಿಲ್ಲ ತುಂಬಾ ಹೆದರು ಪುಕ್ಲ . ಆದರೆ ಕೆಲವು ನಾಯಿಗಳು ಇವನ ದೇಹವನ್ನು ನೋಡಿ ಹೆದರುತ್ತಿದ್ದವು. ಆಗ ಇವನು ಆ ನಾಯಿಗಳ ಎದುರು ದೊಡ್ಡ ಜನ ಆಗುತ್ತಿದ್ದ. ಇವನಕ್ಕಿಂತ ಜೋರು ಇರುವ ನಾಯಿ ಬಂದ್ರೆ ಸೀದ ಬಾಲ ಕೆಳಗೆ ಮಾಡಿಕೊಂಡು ನಮ್ಮ ಮನೆಗೆ ಓಡಿ ಬರುತಿದ್ದ. ಇವನ ಕೆಟ್ಟ ಬುದ್ಧಿ ಏನೆಂದರೆ, ಬೆಕ್ಕನ್ನು ಹಿಡಿದು ಸಾಯಿಸುತ್ತಿದ್ದ, ಕೋಳಿಯನ್ನು ಹಿಡಿದು ಸಾಯಿಸುತ್ತಿದ್ದ ಮತ್ತು ದಾರಿಯಲ್ಲಿ ಹೋಗುವವರಿಗೆ ಕಚ್ಚುತಿದ್ದ. ಇವನದೊಂದು ಹವ್ಯಾಸ ಏನೆಂದರೆ, ಯಾರಾದರೂ ಇವನಿಗೆ ಕಲ್ಲು ಬಿಸಾಡಿದರೆ ಅಥವಾ ಹೊಡೆದರೆ ಇವನು ಏನು ಮಾಡುತಿದ್ದ ಅಂದರೆ, ಅವರ ಮೇಲೆ ಹಗೆ ಇಡುತ್ತಿದ್ದ . ಏನಾದರೂ ಇವನಿಗೆ ಕಲ್ಲು ಹೊಡೆದವರು ಸಿಕ್ಕರೆ ತುಂಬಾ ಬೊಗಳುತ್ತಿದ್ದ , ಕಚ್ಚಲು ಹೋಗುತಿದ್ದ.
ನಿಮಗೆ ಅನಿಸಬಹುದು ಇಷ್ಟು ಕೆಟ್ಟ ಬುದ್ಧಿ ಇರುವ ನಾಯಿಯ ಬಗ್ಗೆ ಇವಳು ಯಾಕೆ ಕಥೆ ಬರೆಯಬೇಕು ಅಂತಾ. ಆದರೆ ಇಷ್ಟು ಹೊತ್ತು ಅವನ ಕೆಟ್ಟ ಬುದ್ಧಿ, ಅವನು ಮಾಡುತಿದ್ದ ಕಿತಾಪತಿಯನ್ನು ಕೇಳಿದಿರಿ ಅಲ್ಲವೇ.
ಈಗ ಹೇಳುತ್ತೇನೆ ಅವನು ಯಾಕೆ ಅಷ್ಟು ವಿಶೇಷ ನನಗೆ ಅಂತ. ಒಂದು ತರ ನನಗೆ ಸಿಕ್ಕಿದ ಅಮೂಲ್ಯವಾದ ಉಡುಗೊರೆ, ಯಾಕಂದ್ರೆ ಅವನಿಗೆ ಎಷ್ಟು ಕೆಟ್ಟ ಬುದ್ಧಿ ಇತ್ತೋ ಅದಕ್ಕಿಂತ ಜಾಸ್ತಿ ಒಳ್ಳೆ ಬುದ್ಧಿ ಇತ್ತು. ಅವನು ನಮ್ಮನ್ನು ರಕ್ಷಿಸುತ್ತಿದ್ದ, ನಮ್ಮ ಮನೆಯಲ್ಲದೆ ಇನ್ನೂ ಎರಡು ಮನೆಗಳಿಗೆ ಅಂಗರಕ್ಷಕನಾಗಿದ್ದ. ನನ್ನ ಇನ್ನೊಂದು ಚಿಕ್ಕಪ್ಪನ ಮಗಳು ಸಣ್ಣದಿದ್ದಳು . ಅವಳಿಗೆ ಯಾರಾದರೂ ಹೊಡೆದರೆ ಅಥವಾ ಅಪರಿಚಿತರು ಅವಳನ್ನು ಎತ್ತಿಕೊಂಡರೆ ಅವರಿಗೆ ಹೋಗಿ ಕಚ್ಚುತಿತ್ತು. ಅವಳು ಶಾಲೆಗೆ ಹೋಗುವಾಗ ಅವಳ ವ್ಯಾನ್ ತನಕ ಹೋಗಿ ಅವಳನ್ನು ಬಿಟ್ಟು ಬರುತಿತ್ತು. ಏನಾದರೂ ಅವಳು ಶಾಲೆಗೆ ಹೋಗದಿದ್ದರೆ ಅವಳ ವ್ಯಾನ್ ಮನೆಯ ಹತ್ತಿರ ಬಂದರೆ ಆ ವ್ಯಾನ್ ಚಾಲಕನಲ್ಲಿ ಅವಳು ಇವತ್ತು ಶಾಲೆಗೆ ಬರೋದಿಲ್ಲ ಎಂದು ಅವನ ಭಾಷೆಯಲ್ಲಿ ಬೊಗಳಿ ಹೇಳುತ್ತಿತ್ತು . ಸಂಜೆ ಅವಳ ವ್ಯಾನಿನ ಹಾರನ್ ಕೇಳಿದಾಗ ಓಡಿ ಹೋಗುತ್ತಿತ್ತು ಅವಳನ್ನು ಕರೆದುಕೊಂಡು ಬರಲು. ಅದಕ್ಕಿಂದ ಮುಂಚೆ ಅವನಿಗೆ ಬೇರೆ ಯಾವ ವಾಹನದ ಹಾರನ್ ಕೇಳಿದರೆ ಅವನು ಹೋಗುತ್ತಿರಲಿಲ್ಲ. ಆದರೆ ಅವಳ ವ್ಯಾನಿನ ಹಾರನ್ ಕೇಳಿದಾಗ ಓಡುತ್ತಿತ್ತು. ನಾನು ಸಹ ಶಾಲೆಯಿಂದ ಬರುವಾಗ ತುಂಬಾ ಮುದ್ದಾಗಿ ಬಾಲ ಅಲ್ಲಾಡಿಸಿ ಸ್ವಾಗತ ಮಾಡುತಿದ್ದ. ಮನೆಯಲ್ಲಿ ಯಾರಾದರೂ ಒಬ್ಬರು ಇದ್ದರೆ ಅವರನ್ನು ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳುತಿತ್ತು ಎಲ್ಲಿಗೂ ಮನೆ ಬಿಟ್ಟು ಹೋಗುತ್ತಿರಲಿಲ್ಲ. ಅವನಿಗೆ ನಮ್ಮ ಮನೆಯವರನ್ನು ಮತ್ತು ಅಮ್ಮ ಅಪ್ಪನ ಕುಟುಂಬದವರನ್ನು ಕಂಡರೆ ಅದಕ್ಕೆ ಬಹಳ ಪ್ರೀತಿ. ತುಂಬಾ ಜನ ರಾಮುವನ್ನು ಕೇಳಿದ್ದರು . ಒಬ್ಬರು ಗಾಡಿ ತೆಗೆದುಕೊಂಡು ಬಂದು , ನಿಮಗೆ ನಾನು ಹಣ ಕೊಡುತ್ತೇನೆ ನಾಯಿಯನ್ನು ಕೊಡಿ ಅಂದರು. ಆದರೆ ನಾನು ನನ್ನ ಅಮ್ಮ ಕೊಡಲು ಬಿಡಲಿಲ್ಲ.
ಅವನಿಗೆ ಸಮುದ್ರ ತೀರ ಎಂದರೆ ತುಂಬಾ ಇಷ್ಟ. ಅವನ ಅದೃಷ್ಟವೋ ಏನೋ ಗೊತ್ತಿಲ್ಲ , ಅವನು ಸಮುದ್ರ ತೀರದ ಬಳಿ ಇರುವ ಮನೆಗೆ ಬಂದಿದ್ದಾನೆ. ಹೌದು ನಮ್ಮ ಮನೆ ಸಮುದ್ರ ತೀರದಲ್ಲಿ ಇತ್ತು. ನಾವು ಸಮುದ್ರ ತೀರಕ್ಕೆ ಹೋಗುವುದು ಅಂತ ತಿಳಿದರೆ ಸಾಕು ಅವನಿಗೆ ಖುಷಿಯೇ ಖುಷಿ. ಏನಾದರೂ ಅವನನ್ನು ಕಟ್ಟಿ ಹಾಕಿ ಸಮುದ್ರ ತೀರಕ್ಕೆ ನಾವು ಹೋದರೆ ಅವನಿಗೆ ಎಷ್ಟು ಕೋಪ ಬರುತ್ತ ಇತ್ತು ಅಂದರೆ ಅವನ ಅಕ್ಕ ಪಕ್ಕದಲ್ಲಿ ಇದ್ದ ಗಿಡಗಳನ್ನು ಎಲ್ಲಾ ತುಳಿದು ಅದಕ್ಕೆ ಸುತ್ತು ಹಾಕಿ ಎಲ್ಲಾ ಬಿಡುತ್ತಿದ್ದ. ಸಮುದ್ರಕ್ಕೆ ಅವನನ್ನು ಕರೆದುಕೊಂಡು ಹೋದರೆ ನಮ್ಮಕ್ಕಿಂತ ಜಾಸ್ತಿ ಖುಷಿ ಪಡುತಿದ್ದ. ಮರಳಲ್ಲಿ ಎಲ್ಲ ಹೊರಳಾಡಿ, ನೀರಿನಲ್ಲಿ ಆಟ ಆಡುತ್ತಿದ್ದ.
ಒಂದು ದಿನ ಏನಾಯಿತು ಅಂದರೆ , ಒಬ್ಬರು ಹೇಳಿದರು , ಹುಚ್ಚು ನಾಯಿ ಬಂದಿದೆ ಹುಷಾರಾಗಿ ಇರಿ ಎಂದು. ನಮ್ಮ ನಾಯಿಯನ್ನು ನಾವು ಕಟ್ಟಿ ಹಾಕಿ ಇರುತ್ತಿರಲಿಲ್ಲ. ನಾವು ಅದನ್ನ ಸ್ವಂತ್ರವಾಗಿ ಬಿಡುತ್ತಿದ್ದೆವು . ಯಾಕಂದ್ರೆ ಅವನನ್ನು ಕಟ್ಟಿ ಹಾಕಿದರೆ ಅವನು ತುಂಬಾ ಅಳುತ್ತಿದ್ದ. ಅದಕ್ಕೆ ನಾವು ಬಿಡುತ್ತಿದ್ದೆವು. ಒಂದು ದಿವಸ ಏನು ಆಯಿತು ಅಂದರೆ, ನನ್ನ ಚಿಕ್ಕಪ್ಪ ಮಗಳ ನಾಯಿ ಅಂದ್ರೆ ಜಾಕಿ ಅಲ್ಲ ಅವನು ಯಾವಾಗಲೇ ಸತ್ತು ಹೋಗಿದ್ದ. ನಂತರ ಇನ್ನೊಂದು ನಾಯಿಯನ್ನು ತೆಗೆದುಕೊಂಡು ಬಂದಿದ್ದರು, ಆ ನಾಯಿಗೆ ಒಂದು ಹುಚ್ಚು ನಾಯಿ ಕಡಿಯಿತು . ನಂತರ ಎರಡು ದಿನ ಆದಮೇಲೆ ಆ ನಾಯಿಗೆ ತಲೆಯಲ್ಲಿ ರೋಗ ಬಂದಿತು. ಆ ನಾಯಿ ಸಿಕ್ಕವರಿಗೆ ಎಲ್ಲಾ ಕಚ್ಚಿತು. ಬೇರೆ ನಾಯಿಗಳಿಗೆ ಎಲ್ಲಾ ಕಚ್ಚಿತು. ನನಗೆ ಗೊತ್ತಿರಲಿಲ್ಲ ಆ ನಾಯಿಗೆ ಉಷಾರು ಇರಲಿಲ್ಲ ಅಂತ. ನಾನು ಅದನ್ನ ಹಿಡಿದೆ ನನಗೆ ಕಚ್ಚಿತು. ಆಮೇಲೆ ಚುಚ್ಚುಮದ್ದು ಹಾಕಿ ಎಲ್ಲಾ ಗಾಯ ವಾಸಿಯಾಯಿತು. ಆದರೆ ನಮ್ಮ ರಾಮುವಿಗೆ ಅವನು ಏನು ಮಾಡಲಿಲ್ಲ, ಅವತ್ತು ರಾಮು ಅದನ್ನ ನೋಡಿ ಹೆದರಿ ಅದರ ಗೂಡಿನೊಳಗೆ ಇತ್ತು . ನಾಯಿ ಕಚ್ಚಿದ ಮೇಲೆ ನಾನು ರಾಮುವನ್ನೇ ಮುಟ್ಟಲು ಹೆದರುತ್ತಿದ್ದೆ . ನಂತರ ನಾನು ಯಾವ ನಾಯಿಯನ್ನು ಮುಟ್ಟಲು ಹೋಗುತ್ತಿರಲಿಲ್ಲ. ನಾಯಿಯನ್ನು ಕಂಡರೆ ಹೆದರು ಓಡುತ್ತಿದ್ದೆ.
ರಾಮುವಿನ ಕೊನೆಯ ದಿನಗಳು:
ರಾಮುವಿನ ಕೊನೆಯ ದಿನಗಳು ತುಂಬಾ ಭಯಾನಕವಾಗಿ ಇತ್ತು. ಏಕೆಂದರೆ ನಮ್ಮ ರಾಮು ಹೊಟ್ಟೆ ನೋವು , ಬೇರೆ ಸಣ್ಣ ಕಾಯಿಲೆಯಿಂದ ಸಾಯಲಿಲ್ಲ. ತುಂಬಾ ಒದ್ದಾಡಿ ಒದ್ದಾಡಿ ಜೀವ ಬಿಟ್ಟಿದ್ದಾನೆ. ಅವನಿಗೆ ಏನಾಗಿತ್ತು ಅಂದರೆ, ಅವನಿಗೂ ಸಹ ತಲೆಯಲ್ಲಿ ರೋಗ ಬಂದಿತ್ತು. ಅವನಿಗೆ ಆ ರೋಗ ಬರುವ ಎರಡು ದಿನಕ್ಕಿಂತ ಮುಂಚೆ, ಊಟ ಮಾಡುತ್ತಿರಲಿಲ್ಲ, ಬಾಲವನ್ನು ಕೆಳಗೆ ಹಾಕಿ ಇಡೀ ಊರು ಸುತ್ತುತ್ತಿದ್ದ, ಅಷ್ಟರವರೆಗೆ ನಮ್ಮನ್ನು ಬಿಟ್ಟು ತುಂಬಾ ದೂರ ಹೋಗದ ನಾಯಿ, ಈಗ ಯಾಕೆ ಈತರ ಹೋಗುತ್ತಿದೆ ಅಂತ ಅನುಮಾನ ಶುರುವಾಯಿತು. ಊರಿನವರು ಎಲ್ಲಾ ಹೇಳಿದರು ಅದನ್ನ ಕಟ್ಟಿ ಹಾಕಿ, ಯಾರಿಗಾದರೂ ಕಚ್ಚಬಹುದು ಎಂದು. ಆ ರೋಗ ಬಂದರೆ ನಾಯಿಯ ಸ್ಮರಣ ಶಕ್ತಿ ಕುಂದು ಹೋಗುತ್ತದೆ. ಯಾರ ಪರಿಚಯವು ಇರೋದಿಲ್ಲ. ಸಿಕ್ಕಿದಲ್ಲಿಗೆ ನೇರ ಹೋಗುತ್ತ ಇರುತ್ತೆ. ಇನ್ನು ಅದನ್ನ ಮುಟ್ಟಲು ಭಯವಾಗುತ್ತೆ , ಹೇಗೆ ಅದನ್ನ ಕಟ್ಟಿ ಹಾಕೋದು ಅಂತ ಯೋಚನೆಯಾಯಿತು. ಆಮೇಲೆ ಹೇಗಾದರೂ ನನ್ನ ಅಮ್ಮ ಅಪ್ಪ ಅದನ್ನ ಗಟ್ಟಿ ಕಟ್ಟಿ ಹಾಕಿದರು. ದೇವರದಯೆಯಿಂದ ರಾಮು ಅಮ್ಮ ಅಪ್ಪನಿಗೆ ಏನು ಮಾಡಲಿಲ್ಲ. ಮರುದಿವಸ ಶುರುವಾಯಿತು ರಾಮುವಿನ ಬೊಬ್ಬೆ. ಯಾಕಂದರೆ ಆ ತರ ರೋಗ ಬಂದರೆ ನಾಯಿಗೆ ತಲೆಯಲ್ಲಿ ಏನೋ ಆಗುತ್ತೆ. ಅದಕ್ಕೆ ಅದನ್ನ ಸಹಿಸಿಕೊಳ್ಳಲು ಆಗುವುದಿಲ್ಲ ಅದಕ್ಕೆ ಅದು ಬೊಬ್ಬೆ ಹಾಕುತ್ತೆ. ಆ ಬೊಬ್ಬೆಯನ್ನು ಕೇಳಲು ಆಗುತ್ತಿರಲಿಲ್ಲ. ನಾನು ಮತ್ತು ನನ್ನ ಅಮ್ಮ ಎಷ್ಟು ಅತ್ತಿದ್ದೆವೆ ಆ ಬೊಬ್ಬೆಯನ್ನು ಕೇಳಿ. ಮಾರನೆ ದಿನ ಅದು ತುಂಬಾ ಕೋಪದಲ್ಲಿ ಇತ್ತು ಪಕ್ಕದಲ್ಲಿ ಇದ್ದ ಮರಗಳ ಹಲಗೆಯನ್ನು ಸಿಕ್ಕ ವಸ್ತುಗಳನ್ನು ಕಚ್ಚಿ ಕಚ್ಚಿ ಚೂರು ಚೂರು ಮಾಡಿತು. ನಮಗೆ ಹೆದರಿಕೆ ಆಗುತಿತ್ತು ಎಲ್ಲಿ ಅದು ಹಗ್ಗ ಬಿಚ್ಚಿ ಬರುತ್ತೆ ಅಂತ. ಅದರ ಹಗ್ಗವನ್ನು ಸಹ ಕಚ್ಚಿತ್ತು. ಕಚ್ಚಿ ಕಚ್ಚಿ ಅದರ ಬಾಯಲ್ಲಿ ರಕ್ತ ಬಂದಿತ್ತು. ನಾನು ಅದರ ಬೊಬ್ಬೆ ಕೇಳಲು ಆಗದೆ ನಾನು ಅಜ್ಜಿಮನೆಗೆ ಹೋದೆ. ಅದು ಹುಚ್ಚು ನಾಯಿಯ ಹಾಗೆ ವರ್ತಿಸುತಿತ್ತು. ಜೊಲ್ಲೆ ಎಲ್ಲಾ ಕಾರಿ , ಕಣ್ಣುಗಳು ಕೆಂಪು ಆಗಿತ್ತು. ನನ್ನ ಅಮ್ಮ ಮತ್ತು ಚಿಕ್ಕಮ್ಮ ಏನು ಮನೆಕೆಲಸ ಮಾಡದೇ ಬಾಗಿಲು ಹಾಕಿ ಮನೆಯ ಒಳಗೆ ಕೂತಿದ್ದರು. ಯಾಕಂದರೆ ಯಾವ ಕ್ಷಣದಲ್ಲಿ ಬೇಕಾದರೂ ಹಗ್ಗ ಬಿಚ್ಚಿ ಬರಬಹುದು ಎಂದು ಯಾರಿಗೆ ಗೊತ್ತು . ದಿನದಿಂದ ದಿನಕ್ಕೆ ಅದರ ರೋಗ ಜಾಸ್ತಿ ಆಗುತಿತ್ತು. ನಮಗೆ ಹೆದರಿಕೆ ಆಯಿತು ಹಗ್ಗ ಬಿಚ್ಚಿ ಹೋಗಿ ಮಕ್ಕಳಿಗೆ ಏನಾದರೂ ಕಚ್ಚಿದರೆ ಅಂತ. ಯಾಕಂದ್ರೆ ಅದರ ಹಲ್ಲುಗಳು ತುಂಬ ದೊಡ್ಡದಾಗಿ ಇದ್ದವು. ಏನಾದರೂ ಕಚ್ಚಿದರೆ ಅಷ್ಟೇ ಮುಗೀತು ಕಥೆ. ಅದಕ್ಕೆ ಏನಾದರೂ ಔಷಧಿ ಕೊಡುವ ಅಂದರೆ ಹೇಗೆ ಕೊಡುವುದು ಆ ರೀತಿ ಮಾಡುವಾಗ. ಒಬ್ಬರು ಅಪ್ಪನ ಬಳಿ ಹೇಳಿದರು ಡಾಕ್ಟರ್ ಅನ್ನು ಕರೆದುಕೊಂಡು ಬನ್ನಿ ಅವರು ಶೂಟ್ ಮಾಡಿ ಸಾಯಿಸುತ್ತಾರೆ ಅಂತ. ನಮಗೆ ಮನಸ್ಸು ಬರುತ್ತಾ ಅದನ್ನ ಸಾಯಿಸಲು. ಮತ್ತೆ ನಾನೇ ಕಲ್ಲು ಮನಸ್ಸು ಮಾಡಿ ಸಾಯಿಸಲು ಹೇಳಿದೆ. ಯಾಕಂದರೆ ಮಕ್ಕಳಿಗೆ ಎಲ್ಲಾ ಕಚ್ಚಿದರೆ ಏನು ಮಾಡುವುದು ಅಂತ ಯೋಚನೆ ಬಂತು ಅದಕ್ಕೆ ಅದನ್ನ ಸಾಯಿಸಲು ಹೇಳಿದೆ. ಅದಕ್ಕೆ ಅಮ್ಮ ಒಪ್ಪಲಿಲ್ಲ . ಅದು ಊಟ ಸಹ ಮಾಡುತ್ತಿರಲಿಲ್ಲ, ಆದ್ದರಿಂದ ಅದರ ದೇಹದಲ್ಲಿ ಶಕ್ತಿ ಇರಲಿಲ್ಲ , ಆಮೇಲೆ ರಾಮು ನಿಶ್ಯಕ್ತಿಯಿಂದ ಬಿದ್ದ. ಆಮೇಲೆ ಮರುದಿವಸ ಸಾಯುವುದಕ್ಕಿಂತ ಮೊದಲು ಎರಡು ಸಲ ಕೂಗಿ ಪ್ರಾಣ ಬಿಟ್ಟ. ಆದರೆ ಅವನ ಕೊನೆ ದಿನಗಳಲ್ಲಿ ನಾನು ಇರಲಿಲ್ಲ. ಅವನು ಸತ್ತಾಗ ಅವನ ಹೆಣ ಸಹ ನೋಡಲು ಆಗಲಿಲ್ಲ. ಈಗ ಸಹ ಅದುವೇ ಕಾಡುತ್ತಾ ಇದೆ. ತುಂಬಾ ಅತ್ತಿದ್ದೇನೆ ನಾನು. ನನ್ನ ಅಪ್ಪನಿಗೆ ಸಹ ತುಂಬ ಬೇಜಾರು ಆಗಿದೆ. ನನ್ನ ಅಮ್ಮ ಅಂತು ತುಂಬ ಕೂಗಿದ್ದಾರೆ. ಯಾಕಂದ್ರೆ ನಮ್ಮ ಕುಟುಂಬದಲ್ಲಿ ಒಬ್ಬ ಆಗಿದ್ದ ಅವನು. ಸಾಮಾನ್ಯವಾಗಿ ನಾಯಿ ಹನ್ನೆರಡು ವರುಷ ಬದುಕುತ್ತವೆ. ಆದರೆ ರಾಮು ಹದಿನೈದು ವರುಷ ಬದುಕಿದ್ದಾನೆ. ನಂತರ ಅಮ್ಮ ಅಪ್ಪ ಹೇಳಿದರು ಇನ್ನೂ ಮುಂದೆ ನಮ್ಮ ಮನೆಯಲ್ಲಿ ಯಾವ ನಾಯಿಯನ್ನು ಸಾಕುವುದು ಬೇಡ ಅಂದರು. ಇದಾಗಿತ್ತು ನನ್ನ ಮುಂದಾದ ರಾಮುವಿನ ಕಥೆ.
ಅವನ ನೆನಪು ನನ್ನ ಹೃದಯದಲ್ಲಿ ಮರೆಯಲಾಗದ ಸೂರ್ಯಬೆಳಕಿನಂತೆ ಉಳಿದಿದೆ. ಅವನು ದೈಹಿಕವಾಗಿ ನನ್ನ ಜೊತೆ ಇಲ್ಲದಿದ್ದರೂ, ಮಾನಸಿಕವಾಗಿ ನನ್ನ ಜೊತೆ ಯಾವಾಗಲೂ ಇರುತ್ತಾನೆ. ನಾನು ನನ್ನ ಬಾಲ್ಯದಿಂದ ಇಲ್ಲಿಯವರೆಗೆ ಅವನೊಂದಿಗೆ ಕಳೆದ ಪ್ರತಿಯೊಂದು ಕ್ಷಣವೂ ಅಮೂಲ್ಯವಾದದ್ದು.