ಒಂದು ಪುಟ್ಟ ಹಳ್ಳಿಯಲ್ಲಿ , ಒಂದು ಪುಟ್ಟ ಗುಡಿಸಲಿನಲ್ಲಿ ದೇವಪ್ಪ ಮತ್ತು ಕವಿತಮ್ಮ ಎಂಬ ದಂಪತಿಗಳು ವಾಸವಾಗಿದ್ದರು. ಈ ದಂಪತಿಗಳಿಗೆ ಕೃಷ್ಣ ಎಂಬ ಒಬ್ಬನೇ ಒಬ್ಬ ಮಗನಿದ್ದ. ಅವನು ೪ ನೇ ತರಗತಿಯಲ್ಲಿ ಓದುತ್ತಿದ್ದ. ಇವರು ಅವರದ್ದೇಯಾದ ಪುಟ್ಟ ಪ್ರಪಂಚದಲ್ಲಿ ಬಡತನವಿದ್ದರೂ, ಅದು ಯಾವುದನ್ನು ಲೆಕ್ಕಿಸದೆ ನೆಮ್ಮದಿಯಾಗಿ ದಿನ ಕಳೆಯುತ್ತಿದ್ದರು. ಇವರ ಕುಟುಂಬ ಚೆನ್ನಾಗಿ ಇತ್ತು. ದೇವಪ್ಪ ತೆಂಗಿನ ಕಾಯಿ ತೆಗೆಯುವ ಕೆಲಸ ಮಾಡುತ್ತಿದ್ದ , ಕವಿತಮ್ಮ ಕೃಷ್ಣ ಓದುತ್ತಿದ್ದ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಳು.
ಆದರೆ ಆಘಾತಕಾರಿಯಾದ ವಿಷಯವೇನೆಂದರೆ, ಕವಿತಮ್ಮನಿಗೆ ಒಂದು ಕಣ್ಣು ಇಲ್ಲ. ಆದರೆ ಇವಳು ಒಂದು ಕಣ್ಣು ಇಲ್ಲ ಎಂದು ಯಾವತ್ತೂ ಕೊರಗಿ ಕುಳಿತವಳು ಅಲ್ಲ. ಇವಳಿಗೆ ಒಂದು ಕಣ್ಣು ಇಲ್ಲದಕ್ಕೆ ಕಾರಣ ಗೊತ್ತಿರುವುದು ಅವಳ ಗಂಡನಿಗೆ ಮಾತ್ರ. ಮಿಕ್ಕಿದ್ದವರಿಗೆ ಯಾರಿಗೂ ಗೊತ್ತಿಲ್ಲ. ಇವಳ ಬಳಿ ಯಾರಾದರೂ ಕಣ್ಣಿಗೆ ಏನಾಯಿತು ಅಂತ ಕೇಳಿದರೆ , ಅವಳು ಏನು ಉತ್ತರಕೂಡದೆ ಸುಮ್ಮನಾಗುತ್ತಿದ್ದಳು. ಅವಳ ಮಗ ಕೃಷ್ಣ ಸಹ ಕೇಳಿದರು ಏನು ಉತ್ತರಕೂಡದೆ ಮಾತು ಮರೆಸುತ್ತಿದ್ದಳು. ಆದ್ದರಿಂದ ಕೃಷ್ಣ ಅವಳ ಬಳಿ ಕೇಳುವುದನ್ನೇ ಬಿಟ್ಟು ಬಿಟ್ಟಿದ್ದ. ಒಂದು ದಿನ ಒಂದು ಘಟನೆ ನಡೆಯಿತು ಅದು ಏನೆಂದರೆ, ದೇವಪ್ಪ ತೆಂಗಿನ ಮರದಿಂದ ಬಿದ್ದು ಸಾವನಪ್ಪಿದ. ಈ ವಿಷಯವನ್ನು ಕೇಳಿದ ಕವಿತಮ್ಮನಿಗೆ ಒಂದು ಕ್ಷಣ ಎದೆ ಬಡಿತವೆ ನಿಂತ ಹಾಗೆ ಆಯಿತು .
ದೇವಪ್ಪ ಆ ಮನೆಯ ಆಧಾರಸ್ತಂಭವಾಗಿದ್ದ . ಈಗ ಆ ಆಧಾರಸ್ತಂಭವೇ ಕುಸಿದು ಬಿದ್ದಿದೆ. ಮನೆ ಎದ್ದು ನಿಂತಿದ್ದು ಕೇವಲ ಇಟ್ಟಿಗೆ-ಗಣಿಗಲ್ಲುಗಳ ಮೇಲೆ ಅಲ್ಲ, ದೇವಪ್ಪನ ಪ್ರೀತಿಯ ಮೇಲೆ. ಕೃಷ್ಣನಿಗೆ ತನ್ನ ಅಪ್ಪ ತೀರಿಹೋದ ವಿಷಯ ಗೊತ್ತಿರಲಿಲ್ಲ. ಕೃಷ್ಣ ಶಾಲೆ ಬಿಟ್ಟು ಮನೆಗೆ ಬಂದಾಗ ಮನೆಯ ಮುಂದುಗಡೆ ಎಲ್ಲಾ ಸಭೆ ಸೇರಿದ್ದರು. ಕೃಷ್ಣ ಯೋಚಿಸಿದ ಯಾಕೆ ಇಷ್ಟು ಜನ ಮನೆ ಮುಂದೆ ಸೇರಿದ್ದಾರೆ ?. ಮನೆಯ ಒಳಗಿನಿಂದ ತನ್ನ ಅಮ್ಮ ಜೋರಾಗಿ ಅಳುವುದನ್ನು ಕೇಳಿ ಕೃಷ್ಣ ಬೇಗನೆ ಮನೆಯೊಳಗೆ ಹೋದ. ಮನೆಯ ಒಳಗಡೆ ಹೋಗಿ ನೋಡಿದಾಗ ಚಾಪೆ ಮೇಲೆ ಬಿಳಿ ಬಣ್ಣದ ಹೊದಿಕೆಯಲ್ಲಿ ಶಾಂತವಾಗಿ ಮಲಗಿರುವ ತನ್ನ ತಂದೆಯನ್ನು ನೋಡುತ್ತಾನೆ. ಅಪ್ಪನ ಮುಖದಲ್ಲಿ ಅಭಿವ್ಯಕ್ತಿ ಇಲ್ಲ, ನಗೆಯು ಇಲ್ಲ, ಕೈಗಳು ನಿಧಾನವಾಗಿ ತಬ್ಬಿಸಿಕೊಂಡಿರುವ ಸ್ಥಿತಿಯಲ್ಲಿ ಇವೆ. ಹತ್ತಿರದಲ್ಲಿರುವವರು ಎಲ್ಲರೂ ತಲೆಬಾಗಿದ್ದಾರೆ. ಕೃಷ್ಣನಿಗೆ ತನ್ನ ಅಪ್ಪನನ್ನು ಈ ಸ್ಥಿತಿಯಲ್ಲಿ ನೋಡಿದಾಗ ಸಿಡಿಲು ಬಡಿದ ಹಾಗೆ ಆಯಿತು.
ಕೃಷ್ಣ ಆಘಾತದಿಂದ ನಿಂತಲ್ಲಿಯೇ ಕುಸಿದಂತಾದ. ಆತ ಅಪ್ಪನನ್ನು , ಎದ್ದೇಳು ಅಪ್ಪ ಎದ್ದೇಳು...... ಕಣ್ಣು ಬಿಡಪ್ಪ ಎಂದು ಜೋರಾಗಿ ಅತ್ತ. ಆದರೆ ಚಿರ ನಿದ್ರೆಯಲ್ಲಿರುವ ದೇವಪ್ಪನ ಕಿವಿಗೆ ಆ ಮಗುವಿನ ಕೂಗು ಮುಟ್ಟಲಿಲ್ಲ. ಕವಿತಮ್ಮನ ಮತ್ತು ಕೃಷ್ಣನ ಆಕ್ರಂದನ ಮುಗಿಲುಮುಟ್ಟಿತು. ನಂತರ ಕೃಷ್ಣ ತನ್ನ ಅಪ್ಪನ ಚಿತೆಗೆ ಬೆಂಕಿ ಇಟ್ಟನು. ದೇವಪ್ಪನ ಚಿತೆ ಹೊತ್ತಿ ಉರಿಯುತಿದ್ದಾಗ, ಕವಿತಮ್ಮನ ಮತ್ತು ಕೃಷ್ಣನ ಮನಸ್ಸಿನಲ್ಲಿ ದೇವಪ್ಪನ ನೆನಪುಗಳು ಸಹ ಆ ಜ್ವಾಲೆಗಳ ನಡುವೆ ಕರಗುತ್ತಾ ಹೋಗುತ್ತಿರುವಂತಾಯಿತು. ಚಿತೆ ಹೊತ್ತಿ ಉರಿದು ಬೂದಿ ಆಗುವವರೆಗೂ ಕೃಷ್ಣ ಮತ್ತು ಕವಿತಮ್ಮ ಅಲ್ಲೇ ಕುಳಿತು ಅಳುತ್ತಿದ್ದರು.
ಕವಿತಮ್ಮ ಕೃಷ್ಣನ ಬಳಿ ಹೇಳಿದಳು, " ಇನ್ನೇನಿದ್ದರೂ ನಾವು ಬರೀ ಅಪ್ಪನ ನೆನಪಿನೊಂದಿಗೆ ಬದುಕ ಬೇಕು ಅಷ್ಟೇ ಕಂದ ".... ಅಂತಾ ಹೇಳಿ ಇಬ್ಬರು ಅಲ್ಲಿಂದ ಮನೆಗೆ ಹೊರಟರು. ರಾತ್ರಿಯಾಯಿತು , ಕವಿತಮ್ಮ ಕೃಷ್ಣನಿಗೆ ಹೇಗಾದರೂ ಊಟ ಮಾಡಿ ಮಲಗಿಸಿದಳು. ಕವಿತಮ್ಮ ಏನು ತಿನ್ನದೇ ಕುಡಿಯದೆ ಉಪವಾಸದಲ್ಲಿ ಹಾಗೆ ಮಲಗಿದಳು. ಆದರೆ ಅವಳಿಗೆ ನಿದ್ದೆ ಬರಲಿಲ್ಲ, ಕಣ್ಣು ಮುಚ್ಚಿದರೆ ತನ್ನ ಗಂಡನ ನೆನಪುಗಳೇ ಕಾಡುತ್ತವೆ. ಅಷ್ಟು ವರ್ಷ ತನ್ನ ಬಾಳ ಸಂಗಾತಿಯೊಂದಿಗೆ ಕಳೆದ ಅಮೂಲ್ಯವಾದ ಕ್ಷಣಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಳು. ಈಚೆ ಕೃಷನಿಗೂ ನಿದ್ದೆ ಬರಲಿಲ್ಲ, ಅವನು ಸಹ ಅಪ್ಪನನ್ನು ನೆನೆಸಿಕೊಂಡು ಮೆಲ್ಲ ಮೆಲ್ಲನೆ ಅಮ್ಮನಿಗೆ ಗೊತ್ತಾಗದ ಹಾಗೆ ಅಳುತ್ತಿದ್ದ. ಮರುದಿನ ಬೆಳಿಗ್ಗೆ ಕವಿತಮ್ಮ ಎದ್ದು ಯೋಚನೆ ಮಾಡಿದಳು, ಇನ್ನೂ ಹೀಗೆ ಪ್ರತಿದಿನ ಅತ್ತು ಕುಳಿತರೆ ಏನು ಪ್ರಯೋಜನವಿಲ್ಲ , ನಾನು ಹೀಗೆ ಅತ್ತು ಕುಳಿತರೆ ಕೃಷ್ಣನಿಗೆ ಯಾರು ಧೈರ್ಯ ಹೇಳುತ್ತಾರೆ?.
ನಾನು ಇನ್ನೂ ಕೃಷ್ಣನ ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕು, ಅವನಿಗೆ ಒಳ್ಳೆಯ ವಿಧ್ಯಾಭ್ಯಾಸ ನೀಡಬೇಕು. ಅವನು ಚೆನ್ನಾಗಿ ಓದಿ ಒಳ್ಳೆ ಕೆಲಸಕ್ಕೆ ಸೇರಬೇಕು.ನಂತರ ಕವಿತಮ್ಮ ಕೃಷ್ಣನನ್ನು ಎದ್ದೇಳಿಸಿ , ಶಾಲೆಗೆ ಹೋಗಲು ತಯಾರು ಮಾಡಿದಳು. ಕವಿತಮ್ಮ ಕೃಷ್ಣನ ಬಳಿ ಹೇಳಿದಳು, " ನೋಡು ಕಂದ ನೀನು ಅಪ್ಪ ಇಲ್ಲ ಅಂತ ಕೊರಗಿ ನಿನ್ನ ವಿಧ್ಯಾಭ್ಯಾಸದ ಮೇಲೆ ಗಮನ ಕೊಡುವುದನ್ನು ನಿಲ್ಲಿಸಬೇಡ. ಅಪ್ಪ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಯಾವಾಗಲೂ ಇರುತ್ತಾರೆ. ನೀನು ಚೆನ್ನಾಗಿ ಓದಿ ಒಳ್ಳೆ ಕೆಲಸ ತಗೊಂಡು ನಿನ್ನ ಅಪ್ಪನ ಹೆಸರು ಉಳಿಸಬೇಕು" ಅದಕ್ಕೆ ಕೃಷ್ಣ ಹೇಳಿದ , " ಆಯಿತು ಅಮ್ಮ ನಾನು ಚೆನ್ನಾಗಿ ಓದಿ ಅಪ್ಪನ ಹೆಸರನ್ನು ಉಳಿಸುತ್ತೇನೆ. ನೀನು ಸಹ ಅಪ್ಪನ ನೆನಪಲ್ಲಿ ಕೊರಗಬೇಡ. ನಾನು ಒಳ್ಳೆ ಓದಿ ಒಳ್ಳೆ ಕೆಲಸ ತಗೊಂಡು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ". ಹೀಗೆ ಇಬ್ಬರು ದೇವಪ್ಪನ ನೆನಪಿನಲ್ಲಿ ವರ್ಷಗಳನ್ನು ಕಳೆದರು .
ಹಲವು ವರ್ಷಗಳ ನಂತರ ......
ಈಗ ಕೃಷ್ಣ ೧೦ನೇ ತರಗತಿಯಲ್ಲಿ ಓದುತ್ತಿದ್ದಾನೆ. ಕವಿತಮ್ಮ ಸಹ ಅವನು ಓದುತಿದ್ದ ಶಾಲೆಯಲ್ಲಿಯೇ ಈಗಲೂ ಕೆಲಸ ಮಾಡುತ್ತಿದ್ದಾಳೆ. ಚೆನ್ನಾಗಿ ದುಡಿದು ತನ್ನ ಮಗನಿಗೆ ಯಾವ ಕೊರತೆ ಬಾರದಂತೆ ನೋಡಿಕೊಳ್ಳುತ್ತಿದ್ದಾಳೆ. ಕೃಷ್ಣನು ಸಹ ತನ್ನ ಅಮ್ಮನಿಗೆ ಭಾಷೆ ಕೊಟ್ಟಂತೆ ಚೆನ್ನಾಗಿ ಓದುತ್ತಿದ್ದಾನೆ. ಒಂದು ದಿವಸ ಏನಾಯಿತು ಎಂದರೆ, ಕೃಷ್ಣನಿಗೆ ಮತ್ತು ಅವನ ಸಹಪಾಠಿಗೆ ಜಗಳ ನಡೆಯಿತು. ಆಗ ಕೃಷ್ಣನ ಸಹಪಾಠಿ ಕವಿತಮ್ಮನನ್ನು ನೋಡಿ ಕೃಷ್ಣನ ಬಳಿ ಹೇಳಿದ ನಿನ್ನ ಅಮ್ಮನಿಗೆ ಕಣ್ಣಿಲ್ಲ, ನಿನ್ನ ಅಮ್ಮ ಅಂಗವಿಕಲೆ ಎಂದು ಹೀಯಾಳಿಸಿದ.
ಆಗ ಕೃಷ್ಣನಿಗೆ ಕೋಪ ಬಂದು ಅವನಿಗೆ ಹೊಡೆಯಲು ಹೋದಾಗ ತರಗತಿಯಲ್ಲಿರುವ ವಿಧ್ಯಾರ್ಥಿಗಳು ಅವನನ್ನು ತಡೆದರು.ನಂತರ ಕೃಷ್ಣ ಸುಮ್ಮನಾದ. ಮಧ್ಯಾನವಾಯಿತು , ಊಟಕ್ಕೆ ಗಂಟೆ ಹೊಡೆಯಿತು ಶಾಲೆ ಮಕ್ಕಳೆಲ್ಲ ಬಟ್ಟಲು ತೆಗೆದುಕೊಂಡು ಸಾಲಾಗಿ ಊಟಕ್ಕೆ ನಿಂತರು. ಆ ಸಾಲಿನಲ್ಲಿ ಕೃಷ್ಣ ಸಹ ನಿಂತಿದ್ದ. ಕವಿತಮ್ಮ ಮಕ್ಕಳಿಗೆ ಎಲ್ಲರಿಗೂ ಊಟ ಬಡಿಸುತ್ತಿದ್ದಳು. ಕೃಷ್ಣನ ಸಹಪಾಠಿಗೆ ಇನ್ ಸಹ ಅವನ ಮೇಲೆ ಕೋಪ ಹೋಗಿರಲಿಲ್ಲ. ಏನಾದರೂ ಇವನಿಗೆ ಮಾಡಬೇಕಲ್ಲ ಎಂದು ಕೃಷ್ಣನ ಸಹಪಾಠಿ ಆಲೋಚಿಸಿದ. ಕೃಷ್ಣನ ಸಹಪಾಠಿ ಏನು ಮಾಡಿದ ಅಂದರೆ, ಅವನು ಮತ್ತೇ ಕೃಷ್ಣನ ತಾಯಿಯನ್ನು ಹೀಯಾಳಿಸಲು ಶುರು ಮಾಡಿದ. ಇದು ಕೃಷ್ಣನ ಮನಸ್ಸಿಗೆ ತುಂಬಾ ಆಳವಾಗಿ ನೋವನ್ನುಂಟು ಮಾಡಿತು. ಊಟಕ್ಕೆ ಸಾಲು ನಿಂತ ಕೃಷ್ಣ ಅಲ್ಲಿಂದಲೇ ಊಟ ಮಾಡದೆ ನೇರ ತರಗತಿಯೊಳಗೆ ಹೋದ.
ಕವಿತಮ್ಮ ಕೃಷ್ಣನನ್ನು ಊಟಕ್ಕೆ ಕರೆದಳು ಆದರೂ ಇವನು ಬರಲಿಲ್ಲ. ಸಂಜೆಯಾಯಿತು ಶಾಲೆ ಬಿಟ್ಟಿತು, ಯಾವಾಗಲೂ ಕೃಷ್ಣ ತಾಯಿಯ ಜೊತೆ ಮನೆಗೆ ಹೋಗುತ್ತಿದ್ದ, ಆದರೆ ಇವತ್ತು ಕೃಷ್ಣ ಬೇಸರದಿಂದ ತನ್ನ ತಾಯಿಗೆ ಮುಖ ತೋರಿಸದೆ , ಅವಳ ಜೊತೆ ಮಾತಾಡದೆ ಅವಳನ್ನು ಬಿಟ್ಟು ಒಬ್ಬನೇ ಮನೆಗೆ ಹೋದ. ಕವಿತಮ್ಮ ಸಹ ಕೃಷ್ಣನನ್ನು ನೋಡಿ ಗಾಬರಿಯಿಂದ ಮನೆಗೆ ಹೋದಳು. ಕವಿತಮ್ಮ ಮನೆಗೆ ಹೋಗಿ ನೋಡಿದಾಗ , ಕೃಷ್ಣ ಒಂದು ಮೂಲೆಯಲ್ಲಿ ಮೊಣಕಾಲಿನ ಮೇಲೆ ತಲೆ ಮಡಚಿಕೊಂಡು ನಿಶ್ಯಬ್ದವಾಗಿ ಅಳುತ್ತಿದ್ದ. ಕವಿತಮ್ಮ ಅವನನ್ನು ಸಮಾಧಾನ ಮಾಡಲು ಹೋದಳು, ಆದರೆ ಕೃಷ್ಣ ಅವಳನ್ನು ದೂರ ತಳ್ಳಿಬಿಟ್ಟ. ಕವಿತಮ್ಮ ಕೇಳಿದಳು, ನನ್ನಿಂದ ಏನು ತಪ್ಪಾಯಿತು ಕಂದ ನಾನು ಏನು ಮಾಡಿದೆ ಹೇಳು ಎಂದಳು. ಅದಕ್ಕೆ ಕೃಷ್ಣ ಹೇಳಿದ, ನಾನು ಅವತ್ತೆ ನಿನ್ನಲ್ಲಿ ಕೇಳಿದೆಯಲ್ಲ ನಿನಗೆ ಯಾಕೆ ಒಂದು ಕಣ್ಣು ಇಲ್ಲ ಅಂತ, ಅದಕ್ಕೆ ನೀನು ನನ್ನ ಮಾತನ್ನೇ ಮರೆಸುತ್ತಿದ್ದೆ , ಈಗಲಾದರೂ ಹೇಳಮ್ಮ ನಿನ್ನ ಕಣ್ಣಿಗೆ ಏನಾಯಿತು ಅಂತ.
ಕೃಷ್ಣ ನಾನು ನಿನಗೆ ಸಮಯ ಬಂದಾಗ ಹೇಳುತ್ತೇನೆ. ಈಗ ನನ್ನಲ್ಲಿ ಏನು ಕೇಳಬೇಡ ಎಂದಳು ಕವಿತಮ್ಮ. ನೀನು ನನ್ನ ಜೊತೆ ಇನ್ನೂ ಮುಂದೆ ಮಾತಾಡಬೇಡ, ನನ್ನ ಜೊತೆ ಶಾಲೆಗೂ ಬರಬೇಡ ನನಗೆ ತುಂಬಾ ಅವಮಾನ ಆಗುತ್ತೆ ಎಂದು ಹೇಳಿ, ಕವಿತಮ್ಮನ ಮನಸ್ಸಿಗೆ ನೋವನ್ನುಂಟು ಮಾಡಿದ. ರಾತ್ರಿಯಾಯಿತು, ಕವಿತಮ್ಮ ಕೃಷ್ಣನ ಯಾವ ಮಾತುಗಳನ್ನು ತಲೆಗೆ ಹಾಕಿಕೊಳ್ಳದೆ ಅವನನ್ನು ಊಟಕ್ಕೆ ಕರೆದಳು . ಆದರೆ ಕೃಷ್ಣ ಕೇಳಿಯೂ ಕೇಳದ ಹಾಗೆ ಮಾಡಿ ಊಟಕ್ಕೆ ಬರಲಿಲ್ಲ . ಕವಿತಮ್ಮ ಸಹ ಅವನಿಕೋಸ್ಕರ ಊಟ ಮಾಡದೆ ಹಾಗೆ ಮಲಗಿದಳು. ಕವಿತಮ್ಮ ಕೃಷ್ಣನನ್ನು ತಬ್ಬಿ ಮಲ್ಕೊಂಡಾಗ , ಕೃಷ್ಣ ಅವಳ ಕೈಯನ್ನು ದೂರ ಸರಿಸಿ ದೂರ ಮಲಗಿಕೊಂಡ. ಮುಂದೆ ಏನಾಗುತ್ತೆ ಎಂದರೆ, ಕೃಷ್ಣ ರಾತ್ರೋ ರಾತ್ರಿಯಲ್ಲಿ ಕವಿತಮ್ಮನಿಗೂ ಹೇಳದೆ ಪಟ್ಟಣದ ಕಡೆ ಒಬ್ಬನೇ ಹೊರಟು ಹೋದ. ಬೆಳಗ್ಗೆ ಎದ್ದು ಕವಿತಮ್ಮ ಚಾಪೆಯಲ್ಲಿ ನೋಡಿದಾಗ ಕೃಷ್ಣ ಅಲ್ಲಿ ಇರಲಿಲ್ಲ, ಕೃಷ್ಣ ಇಷ್ಟು ಬೇಗ ಯಾವತ್ತೂ ಎದ್ದವನಲ್ಲ ಇವತ್ತು ಏನು ಇಷ್ಟು ಬೇಗ ಎದ್ದಿದ್ದಾನೆ ಎಂದು ಯೋಚಿಸಿದಳು. ಕವಿತಮ್ಮ ಕೃಷ್ಣನನ್ನು ಕರೆದಳು , ಆದರೆ ಅವನು ಬರಲಿಲ್ಲ. ಕವಿತಮ್ಮ ಇಡೀ ಹಳ್ಳಿಯಲ್ಲಿ ಹುಡುಕಾಡಿದಳು. ಆದರೂ ಕೃಷ್ಣನ ಒಂದು ಸುಳಿವು ಸಿಗಲಿಲ್ಲ. ಕವಿತಮ್ಮ ಗಾಬರಿ ಗೊಂಡಳು .
ದೂರು ನೀಡುವ ಅಂದರೂ ಅಲ್ಲಿ ಹತ್ತಿರದಲ್ಲಿ ಎಲ್ಲಿಯೂ ಆರಕ್ಷಕರ ಠಾಣೆ ಇರಲಿಲ್ಲ. ದಿನಗಳು ಉರುಳಿದವು ಆದರೆ ಇದು ವರೆಗೂ ಕೃಷ್ಣನ ಸುಳಿವೇ ಸಿಗಲಿಲ್ಲ. ಕವಿತಮ್ಮ ಅವನಿಗೋಸ್ಕರ ಅಲೆದಾಡದ ಜಾಗವೇ ಇಲ್ಲ. ಕವಿತಮ್ಮ ಕೃಷ್ಣ ಇವತ್ತು ಬರುತ್ತಾನೆ ನಾಳೆ ಬರುತ್ತಾನೆ ಎಂಬ ಊಹೆಯಲ್ಲೇ ವರ್ಷಗಳನ್ನೇ ಕಳೆದಳು. ಕೃಷ್ಣನನ್ನು ಯಾವಗಲೂ ನೆನೆದು ಕವಿತಮ್ಮ ಬೇಸತ್ತು ಹೋಗಿದ್ದಳು. ಆದರೆ ಅಲ್ಲಿ ಕೃಷ್ಣನಿಗೊಬ್ಬರು ಸಹಾಯ ಮಾಡುವವರು ಸಿಕ್ಕಿ ಅವನು ಈಗ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿದ್ದಾನೆ. ಮುಂದೆ ಕೃಷ್ಣನಿಗೆ ಕೈ ತುಂಬಾ ಸಂಬಳದ ಕೆಲಸ ಸಿಗುತ್ತೆ, ಒಂದು ಒಳ್ಳೆ ಹುಡುಗಿಯನ್ನು ನೋಡಿ , ಒಂದು ಐಷಾರಾಮಿ ಮದುವೆ ಮಂಟಪದಲ್ಲಿ ಮದುವೆಯಾಗುತ್ತಾನೆ. ಆದರೆ ಕೃಷ್ಣನಿಗೆ ಅವನ ತಾಯಿಯ ಒಂದು ಚೂರು ನೆನಪು ಆಗೋದಿಲ್ಲ. ಹಳ್ಳಿಯಲ್ಲಿ ಕವಿತಮ್ಮ ತನ್ನ ಅರ್ಧ ಜೀವನವನ್ನು ಕೃಷ್ಣನ ನೆನಪಿನಲ್ಲಿಯೇ ಕಳೆಯುತ್ತಾಳೆ. ಆಗ ಯಾರೋ ಅವಳಿಗೆ ಕೃಷ್ಣ ಪಟ್ಟಣದಲ್ಲಿ ಇರುವ ವಿಷಯ ತಿಳಿಸುತ್ತಾರೆ. ಆಗ ಅವಳು ತುಂಬ ಸಂತೋಷ ಪಡುತ್ತಾಳೆ.
ಈ ಸ್ಥಿತಿಯಲ್ಲಿ ಕವಿತಮ್ಮನಿಗೆ ಪಟ್ಟಣಕ್ಕೆ ಹೋಗಲು ತುಂಬಾ ಕಷ್ಟ. ಅದಕ್ಕೆ ಅವಳು ಒಂದು ಪಾತ್ರವನ್ನು ಬರೆದು ಕೃಷ್ಣನಿಗೆ ಕಳಿಸುತ್ತಾಳೆ. ಈ ಪತ್ರ ಬಂದು ಕೃಷ್ಣನಿಗೆ ತಲುಪುತ್ತದೆ ಆದರೆ ಅವನು ಅವನ ಕಚೇರಿ ಕೆಲಸದಲ್ಲಿ ನಿರತನಾಗಿದ್ದರಿಂದ ಅವನು ಆ ಪತ್ರವನ್ನು ತನ್ನ ಕಚೇರಿಯ ದಾಖಲೆಯೊಂದಿಗೆ ಇಡುತ್ತಾನೆ. ಅಲ್ಲಿ ಕವಿತಮ್ಮ ಅನಾರೋಗ್ಯದಿಂದ ಭೂಲೋಕವನ್ನು ತ್ಯಜಿಸುತ್ತಾಳೆ . ಒಂದು ದಿನ ಕೃಷ್ಣ ತನ್ನ ಕಚೇರಿಯ ದಾಖಲೆಗಳನ್ನು ಹುಡುಕಬೇಕಾದರೆ ಅವನಿಗೆ ಆ ಪತ್ರ ಸಿಗುತ್ತದೆ. ಆಗ ಅವನು ಅದನ್ನು ಓದಲು ಮುಂದಾಗುತ್ತಾನೆ. ಪತ್ರವನ್ನು ತೆರೆದ, ಓದಲು ಆರಂಬಿಸಿದ.
ನನ್ನ ಪ್ರೀತಿಯ ಮಗ ಕೃಷ್ಣನಿಗೆ,
ಮಗ ಕೃಷ್ಣ... ನೀನು ಅಲ್ಲಿ ಕ್ಷೇಮವಾಗಿದ್ದೀಯ ಎಂದು ಭಾವಿಸುತ್ತೇನೆ. ನಾನು ಯಾರೆಂದು ನಿನಗೆ ನೆನಪಿದೆಯಲ್ಲ. ನಾನು ನಿನ್ನ ತಾಯಿ ಕಣ್ಣಿಲ್ಲದವಳು. ನನಗೆ ಗೊತ್ತು ನನ್ನಿಂದ ನಿನಗೆ ತುಂಬಾ ನೋವಾಗಿದೆ ಅಂತ. ನನ್ನನ್ನು ಕ್ಷಮಿಸಿ ಬಿಡು ಕಂದಾ.... ನಿನ್ನಲ್ಲಿ ನಾನು ಅವತ್ತೇ ಹೇಳಬೇಕಿತ್ತು, ನನಗೆ ಯಾಕೆ ಒಂದು ಕಣ್ಣು ಇಲ್ಲ ಎಂದು. ಆದರೆ ಈಗ ಆ ವಿಷಯ ಹೇಳಲು ಸಮಯ ಬಂದಿದೆ. ಹೇಳುತ್ತೇನೆ ಕೇಳು.
ನೀನು ಚಿಕ್ಕವನಿದ್ದಾಗ ಒಂದು ದಿನ ನೀನು ಓಡಿಕೊಂಡು ಬರುವಾಗ ಒಂದು ಮರದ ಬೇರನ್ನು ಎಡವಿ ಒಂದು ಕಲ್ಲಿನ ಮೇಲೆ ಬಿದ್ದೆ. ನಿನ್ನ ಮುಖವೆಲ್ಲ ರಕ್ತಮಯವಾಗಿತ್ತು . ನಾನು ನಿನ್ನನ್ನು ಆಸ್ಪತ್ರೆಗೆ ಸೇರಿಸಿದೆ . ಆಗ ವೈದ್ಯರು ಹೇಳಿದರು ನಿಮ್ಮ ಮಗನ ಒಂದು ಕಣ್ಣಿಗೆ ಬಲವಾಗಿ ಏಟು ಬಿದ್ದಿದೆ. ಅವನ ಒಂದು ಕಣ್ಣು ಹೋಗಿದೆ ಅಂದರು. ನನಗೆ ನೋವು ತಡೆಯಲಾಗಲಿಲ್ಲ. ಅದಕ್ಕೆ ನಾನು ನಿನ್ನ ಮುಂದಿನ ಭವಿಷ್ಯವನ್ನು ಯೋಚಿಸಿ , ನನ್ನ ಒಂದು ಕಣ್ಣನ್ನು ನಿನಗೆ ದಾನ ಮಾಡಿದೆ. ಏಕೆಂದರೆ ಅವತ್ತು ನಿನ್ನ ಸ್ನೇಹಿತ ನನಗೆ ಒಂದು ಕಣ್ಣು ಇಲ್ಲ ಎಂದು ಹೀಯಾಳಿಸಿದ ಅಲ್ಲವೇ, ನಿನ್ನ ಮುಂದಿನ ಬದುಕು ನನ್ನಂತೆ ಆಗಬಾರದೆಂದು , ನನ್ನ ಕಣ್ಣುಗಳನ್ನು ನಿನಗೆ ದಾನ ಮಾಡಿದೆ . ನನಗೆ ಏನು ಆದರೂ ಚಿಂತೆ ಇಲ್ಲ, ನಿನಗೆ ಏನು ಆಗಬಾರದು. ನಿನಗೆ ಯಾವ ಕೊರತೆಯೂ ಬರಬಾರದು. ನೀನು ಸಂತೋಷವಾಗಿರುವುದು ನನಗೆ ಮುಖ್ಯ ಕಂದಾ. ನಿನಗೆ ಈ ವಿಷಯ ಹೇಳದಕ್ಕೆ ಒಂದು ಕಾರಣವಿದೆ, ಅದು ಏನೆಂದರೆ , ಈ ವಿಷಯವನ್ನು ನಿನ್ನ ಬಳಿ ಹೇಳಿದರೆ, ಎಲ್ಲಿ ನೀನು ಈ ವಿಷಯದ ಬಗ್ಗೆ ತಲೆಕೆಡಿಸಿಕೊಂಡು, ನೋವಲ್ಲಿ ಕೊರಗುತ್ತೀಯ ಎಂದು ಹೇಳಲಿಲ್ಲ. ಈ ಪತ್ರ ನಿನಗೆ ತಲುಪ್ಪುತ್ತದೆಯೋ ಅಥವಾ ನೀನು ಓದುತ್ತಿಯೋ ನನಗೆ ಗೊತ್ತಿಲ್ಲ. ಈ ಪತ್ರ ತಲುಪುವಾಗ ನಾನು ಬದುಕಿ ಉಳಿಯುತ್ತೇನೋ ಗೊತ್ತಿಲ್ಲ. ನಾನು ಈ ಭೂಮಿ ಮೇಲೆ ಬದುಕಿರುವುದು ಕೇವಲ ೨ ದಿನಗಳು ಮಾತ್ರ.ಅಷ್ಟರೊಳಗೆ ನಿನ್ನ ಬಳಿ ಪತ್ರ ತಲುಪಿದರೆ, ಒಮ್ಮೆ ಹಳ್ಳಿಯ ಕಡೆ ಬಾ. ನಿನ್ನನು ಕೊನೆಯ ಕ್ಷಣ ನೋಡಿ ನೆಮ್ಮದಿಯಾಗಿ ಪ್ರಾಣ ಬಿಡುತ್ತೇನೆ. ನನ್ನ ಕಡೆಯ ಆಸೆ ಏನೆಂದರೆ, ನೀನು ನನ್ನ ಚಿತೆಗೆ ಬೆಂಕಿ ಕೊಡಬೇಕು. ಈ ನಿನ್ನ ಒಂದು ಕಣ್ಣಿನ ತಾಯಿಯ ಕೊನೆಯ ಆಸೆಯನ್ನಾದರೂ ನೆರವೇರಿಸುತ್ತೀಯ ಎಂದು ಭಾವಿಸುತ್ತೇನೆ. ಕೊನೆಯದಾಗಿ ಒಂದು ಮಾತು. "ಕಂದಾ... ನೀನು ಎಲ್ಲೇ ಇರು ಖುಷಿಯಾಗಿರು" ಇನ್ನೂ ಮುಂದೆ ಈ ಒಂದು ಕಣ್ಣಿನ ತಾಯಿ ಯಾವತ್ತೂ ನಿನಗೆ ತೊಂದರೆ ಕೊಡುವುದಿಲ್ಲ.ನನ್ನಿಂದ ಯಾವತ್ತೂ ನಿನಗೆ ಅವಮಾನವಾಗುವುದಿಲ್ಲ. ನನಗೆ ಮುಂದಿನ ಜನುಮ ಏನಾದರೂ ಇದ್ದರೆ ನಾನು ನಿನ್ನ ಮಗುವಾಗಿ ಹುಟ್ಟಲು ಬಯಸುತ್ತೇನೆ....
ಇಂತೀ ನಿನ್ನ ಪ್ರೀತಿಯ ,
ಒಂದು ಕಣ್ಣಿನ ತಾಯಿ
ಇದನ್ನು ಓದಿದ ಕೃಷ್ಣನಿಗೆ ನೋವು ತಡೆಯಲು ಆಗಲಿಲ್ಲ. ಅವನ ಕಣ್ಣಿನ ನೀರಿನಿಂದ ಆ ಪತ್ರ ಒದ್ದೆಯಾಯಿತು. ಅವನ ತಪ್ಪಿಗೆ ಅವನು ಪಶ್ಚಾತ್ತಾಪ ಪಟ್ಟನು.
ತಾಯಿ ತ್ಯಾಗಮಯಿ ಅನ್ನೋದಕ್ಕೆ ಈ ಕಥೆ ಒಂದು ಉದಾಹರಣೆ. ತಾಯಿಯನ್ನು ಯಾವತ್ತೂ ನೋಯಿಸಬೇಡಿ. ಅವಳು ತನ್ನ ಮಕ್ಕಳಿಗೋಸ್ಕರ ತನ್ನ ಜೀವವನ್ನು ಮುಡಿಪಾಗಿಡುತ್ತಾಳೆ. ತಾಯಿ ಬಗ್ಗೆ ಹೇಳಲು ಪದಗಳೇ ಸಲೊಲ್ಲ ಅಲ್ಲವೇ.....
🔱 "ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ"