"ವಿ.ವಿ ಗ್ರೂಪ್ ಆಫ್ ಕಂಪನಿ"ಯ ಸಿ.ಇ.ಓ ಮಧ್ಯರಾತ್ರಿ ಹೊತ್ತಿಗೆ ಫಾರಿನ್ ನಿಂದ ಒಂದು ಮುಖ್ಯವಾದ ಪ್ರಾಜೆಕ್ಟ್ ಮೀಟಿಂಗ್ ಮುಗಿಸಿಕೊಂಡು ಮನೆಗೆ ಹೋಗದೆ ಸೀದ ಅವನ ಕಂಪನಿಗೆ ಹೋದನು. ಮನೆಯಲ್ಲಿ ಇರುವವರಿಗೆ ತೊಂದರೆ ಆಗುತ್ತದೆ ಎಂದು ಅಲ್ಲ..... ಯಾಕಂದ್ರೆ ವಿ.ವಿ ಗ್ರೂಪ್ ಆಫ್ ಕಂಪನಿಯ ಸಿ.ಇ.ಓ ವರ್ಕೋಹಾಲಿಕ್ ಅದಕ್ಕೆ..... ಆಫೀಸ್ ಎಂದರೆ ಊಟ, ತಿಂಡಿ, ನಿದ್ದೆಯನ್ನೂ ಬಿಡುವುದಕ್ಕೆ ಯೋಚನೆ ಮಾಡುವವನಲ್ಲ ಈ ಆಸಾಮಿ.
ಕೇವಲ ಎರಡು ವರ್ಷಗಳಲ್ಲಿ ವಿ.ವಿ ಗ್ರೂಪ್ ಆಫ್ ಕಂಪನಿಯನ್ನು ದೇಶದ ನಂಬರ್ ಮೂರನೇ ಸ್ಥಾನಕ್ಕೆ ತಂದಿದ್ದಾನೆ ಭೂಪ. 23 ವರ್ಷಕ್ಕೆ ತನ್ನ ಓದನ್ನು ಮುಗಿಸಿ 2 ವರ್ಷ ಅಬ್ರಾಡ್ ನಲ್ಲಿ ಹೆಸರಾಂತ ಕಂಪನಿಯ ಸಿ.ಇ.ಓ ಕೈ ಕೆಳಗೆ ಅವರ ಪಿ.ಎ ಆಗಿ ಕೆಲಸವನ್ನು ಕಲಿತು ಅದರ ಜೊತೆ ಜೊತೆಗೆ ತನ್ನ ಸ್ವಂತಿಕೆಯನ್ನು ಉಪಯೋಗಿಸಿ 26 ವರ್ಷಕ್ಕೆ ತನ್ನ ಕಂಪನಿಯನ್ನು ಭಾರತದಲ್ಲಿ ಸ್ಥಾಪಿಸಿ ಈಗ ಉನ್ನತ ಸ್ಥಾನದಲ್ಲಿ ಕೂರಲು ಕಾರಣ ಅವನಿಗೆ ಕೆಲಸದಲ್ಲಿ ಇರುವ ಶ್ರದ್ಧೆ, ಪರಿಶ್ರಮ, ಹಗಲು ರಾತ್ರಿಗಳ ವ್ಯತ್ಯಾಸ ತಿಳಿಯದೆ ಇರುವುದು ಎಂದರೆ ತಪ್ಪಾಗಲಾರದು.
ಬೆಳಗಿನ ಜಾವ ಮೂರು ಗಂಟೆಗೆ ಬಂದವನು ತನ್ನ ಆಫೀಸಿನ ಕ್ಯಾಬಿನ್ ನಲ್ಲಿ ಇರುವ ಪ್ರೈವೇಟ್ ರೂಮ್ ಗೆ ಸೇರಿ ತನ್ನ ಸೂಟ್, ಕೋಟ್ ತೆಗೆದವನು ಫ್ರೆಶ್ ಅಪ್ ಆಗಿ ಮಲಗಿದನು.
*********
ಬೆಳಗ್ಗೆ ಆರು ಗಂಟೆಗೆ ಎದ್ದು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿ, ಮನೆಯ ಬಾಗಿಲಿಗೆ ನೀರು ಹಾಕಿ ಸಾರಿಸಿ ಪುಟ್ಟ ರಂಗೋಲಿ ಬಿಟ್ಟು ಮನೆಯ ಒಳಗೆ ಬಂದವಳು ಕನ್ನಡಿ ಮುಂದೆ ನಿಂತು ತನ್ನ ಒದ್ದೆ ಕೂದಲಿಗೆ ಕಟ್ಟಿದ್ದ ಟವಲ್ ಅನ್ನು ಬಿಚ್ಚಿ ಕೂದಲನ್ನು ಕೊಡವಿಕೊಂಡು ಪುಟ್ಟ ಕ್ಲಿಪ್ ಹಾಕಿ ಬಂಧಿಸಿ ಅಡುಗೆ ಮನೆಗೆ ಹೋದಳು.
ನಂದೂ...... ಕಾಫಿ ಕೊಡು ಮಗಳೇ ಎಂದು ಆಗಷ್ಟೇ ಮುಖ ತೊಳೆದು ತಮ್ಮ ಸೆರಗಿನಲ್ಲೇ ಮುಖ ಒರೆಸುತ್ತಾ ಬಂದರು “ನಂದಿನಿ”ಯ ಅಮ್ಮ ತಾರಾ. ಬಂದೆ ಸ್ಟಾರ್ (ತಾರಾ)ಎಂದು ನಗು ಮುಖದಿಂದ ತನ್ನಮ್ಮನಿಗೆ ಒಂದು ಕಪ್ ಕಾಫಿ ಮತ್ತು ತನಗೊಂದು ಕಪ್ ಕಾಫಿ ಹಿಡಿದು ಬಂದಳು ನಂದಿನಿ.
ಹೇ..... ಸ್ಟಾರ್..... ಯಾಕೆ ಇಷ್ಟು ಬೇಗ ಎದ್ದಿದ್ದು ನೀವು...... ನಿಮಗೆ ಹುಷಾರಿಲ್ಲ ಅಂತ ತಾನೆ ಮಲಗೋಕೆ ಬಿಟ್ಟಿದ್ದು ಅಂತ ಸ್ವೀಟಾಗಿ ಗದರಿದ ಹುಡುಗಿಗೆ..... ಊರು ಹೋಗು ಅನ್ನುತ್ತೆ ಕಾಡು ಬಾ ಅನ್ನುತ್ತೆ ನಂದು.... ನನಗೂ ಸಾಕಾಗುತ್ತೆ ಕಣೆ ಒಂದೇ ಕಡೆ ಮಲಗಿ ಮಲಗಿ..... ಎಂದರು ತಾರಾ. ಹೇ..... ಅಮ್ಮ..... ಬೆಳಗ್ಗೆನೇ ಯಾಕೆ ಈ ತರ ಮಾತಾಡ್ತೀರಾ.....? ನೀವು ಹೋದ್ರೆ ನಿಮ್ಮ ಹಿಂದೆ ನಾನೂ ಕೂಡ ಬಂದು ಬಿಡ್ತೀನಿ ಅಷ್ಟೇ ಎಂದು ಹೇಳುತ್ತಿದ್ದವಳ ಬಾಯಿಯ ಮೇಲೆ ಕೈ ಇಟ್ಟ ತಾರಾ ಅವರು..... ಬಾಳಿ ಬದುಕಬೇಕಾದ ಕೂಸು ಕಣೆ ನೀನು..... ಸಾಯುವ ಮಾತು ಆಡಬೇಡ ಎಂದಾಗ..... ಮತ್ತೆ ನೀವು ಮಾತಾಡಿದ್ದು ಸರೀನಾ.....? ನನ್ನ ಸಾವನ್ನು ನೀವು ಹೇಗೆ ಜೀರ್ಣಿಸಿಕೊಳ್ಳೋದಿಲ್ವೋ ಹಾಗೇ ನಾನೂ ಕೂಡ ಎಂದು ಕಾಫಿ ಕಪ್ ಹಿಡಿದಳು.
ಇಲ್ಲ ಕೂಸೇ..... ಇನ್ನು ಮುಂದೆ ನಿನ್ನಮ್ಮ ಸಾವಿನ ಬಗ್ಗೆ ಮಾತಾಡೋದಿಲ್ಲ ಎಂದು ವಿಷಯವನ್ನು ಮರೆಸಿದರು. ಸ್ಟಾರ್ ಈಗ ಏನು ತಿಂಡಿ ಬೇಕು ಕೇಳು..... ನಿನ್ನ ಮಗಳು ಮಾಡಿ ಕೊಡುತ್ತಾಳೆ ಎಂದು ಹೇಳಿದಳು.
ದಿನಾ ಅದೇ ಉಪ್ಪಿಲ್ಲದ ಸಪ್ಪೆ ಇಡ್ಲಿ ಮತ್ತು ಬೇಳೆ ಸಾಂಬಾರ್ ತಿಂದು ನಾಲಿಗೆ ಜಿಡ್ಡು ಹಿಡಿದಿದೆ ಕೂಸೇ..... ಇವತ್ತು ಮಸಾಲೆ ಕಡಿಮೆ ಹಾಕಿ ಪಲಾವ್ ಮಾಡೇ ಎಂದರು. ಸರಿ ಆಯ್ತು ಎಂದು ಹೇಳಿದ ನಂದಿನಿ ಅಡುಗೆ ಮನೆಗೆ ಹೋಗಿ ಮಸಾಲೆ ಕಡಿಮೆ ಹಾಕಿ, ಹಸಿಮೆಣಸಿನ ಕಾಯಿ ಬದಲು ಖಾರದಪುಡಿ ಹಾಕಿ ಚಂದದ ಪಲಾವ್ ಮಾಡಿ ತನ್ನಮ್ಮನಿಗೆ ಕೊಟ್ಟು ತಾನೂ ತಿಂದು ರಡಿಯಾದವಳು ತನ್ನಮ್ಮನಿಗೆ ಮಾತ್ರೆಗಳನ್ನು ಕೊಟ್ಟು ಮಲಗಿಸಲು ರೂಮಿಗೆ ಕರೆದುಕೊಂಡು ಹೋದಳು.
ಅಮ್ಮಾ...... ಹೆಚ್ಚು ಓಡಾಡಬೇಡಿ..... ಯಾವ ಕೆಲಸವೂ ಇಲ್ಲ ನಿಮಗೆ, ಪುಸ್ತಕ ಓದಿ, ಟಿ.ವಿ ನೋಡಿ, ಇಲ್ಲಾಂದ್ರೆ ಮೊಬೈಲ್ ನೋಡಿ, ಗಾಳಿಗೆ ಸ್ವಲ್ಪ ಹೊತ್ತು ಕೂರಿ..... ಮನೆಯಲ್ಲಿ ಯಾವ ಕೆಲಸವೂ ಇಲ್ಲ, ಹಾಗೆ ಹುಡುಜಿಕೊಂಡು ಮಾಡುವ ಹಾಗೂ ಇಲ್ಲ ಎಂದು ಹೇಳಿ ತನ್ನ ಸ್ಕೂಟಿ ತೆಗೆದುಕೊಂಡು ಕೆಲಸಕ್ಕೆ ಹೊರಟಳು.
ದಾರಿಯಲ್ಲಿ ಹೋಗುವಾಗ ಯಾವಾಗಲೂ ಹೋಗುವ ಮೆಡಿಕಲ್ ಗೆ ಹೋಗಿ..... ಅಣ್ಣ..... ಅಮ್ಮನ ಮಾತ್ರೆಗಳು ಖಾಲಿಯಾಗಿದೆ ಸಂಜೆ ಷ್ಟರಲ್ಲಿ ತರಿಸಿ ಇಡಿ..... ಹಾಗೆ ಈ ತಿಂಗಳಿನಿಂದ ಅವರಿಗೆ ಅಸ್ತಮಾ ಮಾತ್ರೆಗಳನ್ನು ತರಿಸಿ.... ತಗೊಳ್ಳಿ ಇದು ಪ್ರಿಸ್ಕ್ರಿಪ್ಶನ್ ಎಂದು ಮಾತ್ರೆ ಚೀಟಿ ಕೊಟ್ಟಳು ನಂದಿನಿ.
ಮೆಡಿಕಲ್ ನವನು ಅವಳ ಮುಖವನ್ನೊಮ್ಮೆ ನೋಡಿ..... ಏನಮ್ಮ ನಂದೂ..... ಈಗಾಗಲೇ ಹೃದಯಕ್ಕೆ ಸಂಬಂದಿಸಿದ್ದು, ಅಲ್ಸರ್ ಗೆ, ಕಿಡ್ನಿಗೆ ಸಂಬಂಧಿಸಿದ್ದು, ಗಂಟಲಿನ ಕ್ಯಾನ್ಸರ್ ಜೊತೆಗೆ ಈ ಮಳೆಗಾಲ, ಚಳಿಗಾಲಕ್ಕೆ ಇದು ಕೂಡ ಸೇರುತ್ತೆ ಹೇಗಮ್ಮ ನಿಭಾಯಿಸುತ್ತೀಯ ಎಂದು ಕೇಳಿದರು ಮೆಡಿಕಲ್ ನವರು. ಅವನ ಮಾತಿಗೆ ಸಣ್ಣಗೆ ವಿಷಾದದ ನಗೆ ನಕ್ಕು, ಎಷ್ಟೇ ಆಗಲಿ ಅವರು ನನ್ನಮ್ಮ ಅಲ್ವಾ ಅಣ್ಣಾ..... ಮೈ ತುಂಬ ರೋಗ ಇದೆ ಅಂತ ಬಿಟ್ಟು ಬಿಡೋಕೆ ಆಗತ್ತಾ.....? ನಾನು ಇವತ್ತು ಇಷ್ಟು ದೊಡ್ಡ ಮೊತ್ತದ ಸಂಬಳ ತಗೊಳ್ತಾ ಇದ್ದೀನಿ ಅಂದ್ರೆ ಅದಕ್ಕೆ ಅವರೇ ತಾನೇ ಕಾರಣ ಎಂದಳು.
ಏನೇ ಆದರೂ ನಿನ್ನಂತಹ ಮಗಳು ಮನೆಗೆ ಒಬ್ಬಳು ಇರಬೇಕು ಕಣಮ್ಮಾ..... ನಿನ್ನನ್ನು ನನ್ನ ತಂಗಿ ಅಂತ ಹೇಳಿಕೊಳ್ಳೋಕೆ ನನಗೆ ಹೆಮ್ಮೆ ಅನಿಸುತ್ತೆ ನಂದಿನಿ ಎಂದರು ಆ ವ್ಯಕ್ತಿ. ನಗುವೇ ಅವಳ ಉತ್ತರ. ಸಂಜೆ ಅಷ್ಟರಲ್ಲಿ ಮೆಡಿಸಿನ್ ರಡಿ ಇರತ್ತೆ ಬಂದು ತಗೊಂಡು ಹೋಗು ಪುಟ್ಟ ಎಂದು ಹೇಳಿದರು. ಥ್ಯಾಂಕ್ಸ್ ಅಣ್ಣ ಎಂದು ಅಲ್ಲಿಂದ ಹೋದಳು ನಂದಿನಿ.
*****
ವಿ.ವಿ ಗ್ರೂಪ್ ಆಫ್ ಕಂಪನಿಯ ಮುಂದೆ ಗಾಡಿಯನ್ನು ಪಾರ್ಕ್ ಮಾಡಿದ ನಂದಿನಿ ಎಂದಿನಂತೆ ಹತ್ತು ನಿಮಿಷ ಬೇಗ ಬಂದು ಪಂಚ್ ಮಾಡಿ ಕುತ್ತಿಗೆಗೆ ಐ.ಡಿ ಕಾರ್ಡ್ ಹಾಕಿಕೊಂಡು ತನ್ನ ಕ್ಯಾಬಿನ್ ಗೆ ಹೋಗಿ ತನ್ನ ಬ್ಯಾಗ್ ಇಟ್ಟವಳು ಆಫೀಸಿನ ಟ್ಯಾಬ್ ತೆಗೆದು ಆನ್ ಮಾಡಿ ಅಂದಿನ ಮೀಟಿಂಗ್ಸ್ ಬಗ್ಗೆ ಗಮನಿಸಿ ಬಾಸ್ ಕ್ಯಾಬಿನ್ ಹತ್ರ ಬಂದಾಗ ಅಲ್ಲಿ ಬರೆದಿದ್ದನ್ನು ನೋಡಿದ ನಂದಿನಿ ಎದ್ನೋ ಬಿದ್ನೋ ಅಂತ ಕ್ಯಾಂಟೀನ್ ಕಡೆ ಓಡಿ ಹೋಗಿ ಒಂದು ಕಪ್ ಕಾಫಿ ಜೊತೆಗೆ ಒಂದು ಪ್ಲೇಟ್ ಒಂದು ಸ್ಪೂನ್ ತಂದು ಅವನ ಕ್ಯಾಬಿನ್ ಒಳಗೆ ಬಂದು ತಟ್ಟೆಗೆ ತಾನೇ ಮಾಡಿಕೊಂಡು ತಂದಿದ್ದ ಪಲಾವ್ ಅನ್ನು ಹಾಕಿಟ್ಟು ಅವನ ಕ್ಯಾಬಿನ್ ನಲ್ಲಿ ಇದ್ದ ಪ್ರೈವೇಟ್ ರೂಮ್ ಡೋರ್ ನ ನಾಕ್ ಮಾಡಿದಳು.
ಕಮಿನ್ ಎಂದಾಗ ಒಳಗೆ ಹೋಗಿ ಅಲ್ಲೇ ಇದ್ದ ಪುಟ್ಟ ಡೈನಿಂಗ್ ಟೇಬಲ್ ಮೇಲೆ ತಿಂಡಿ ಮತ್ತು ಕಾಫಿ ಇಟ್ಟು “ಗುಡ್ ಮಾರ್ನಿಂಗ್ ಸರ್” ಎಂದು ವಿಶ್ ಮಾಡಿ ತಲೆ ತಗ್ಗಿಸಿ ನಿಂತಳು. ಅಷ್ಟರಲ್ಲಾಗಲೇ ಅವಳ ಬಾಸ್ ರಡಿಯಾಗುತ್ತಿದ್ದನು. ಫೈನಲ್ ಟಚ್ ಎನ್ನುವ ಹಾಗೆ ತಲೆಗೆ ಹೇರ್ ಜೆಲ್ ಹಾಕಿ ಕೂದಲನ್ನು ಸೆಟ್ ಮಾಡುತ್ತಿದ್ದನು. ಅವನ ಟೈಮಿಗೆ ಯಾವಾಗಲೂ ಸಮಯವನ್ನು ಹೊಂದಿಸಲು ನಂದಿನಿಯಿಂದ ಮಾತ್ರವೇ ಸಾಧ್ಯ.
ಗುಡ್ ಮಾರ್ನಿಂಗ್ ಮಿಸ್ ನಂದಿನಿ ಎಂದಾಗ ಅವಳ ಹೃದಯದ ಬಡಿತ ನೂರರ ಗಡಿ ದಾಟಿತು. ಅವನ ಧ್ವನಿಯಲ್ಲಿ ಅವಳ ಹೆಸರನ್ನು ಕೇಳಿದವಳಿಗೆ ಮೈಯ್ಯೆಲ್ಲಾ ಪುಳಕ, ಕೆನ್ನೆ ಕೆಂಪಾಗಿತ್ತು. ಅದನ್ನು ಕನ್ನಡಿಯಿಂದಲೇ ಅವನು ಗಮನಿಸಿದ. ಅವನ ತುಟಿ ಅಂಚಲ್ಲಿ ಕಂಡೂ ಕಾಣದಂತಹ ನಗು ಮೂಡಿ ಮರೆಯಾಯಿತು. ಆದರೆ ಆ ನಗುವನ್ನು ಎಂದಿಗೂ ನಂದಿನಿ ನೋಡಿಲ್ಲ. ಅವಳ ಬಾಸ್ ನ ಗಂಭೀರ ಮುಖವನ್ನಷ್ಟೇ ನೋಡಿರುವುದು ಅವಳು.
ಅವನು ಬಂದು ತಿಂಡಿಗೆ ಕೂತಾಗ ಅಲ್ಲೇ ಇದ್ದ ನೀರಿನ ಬಾಟಲ್ ಅನ್ನು ಅವನ ಮುಂದೆ ಇಟ್ಟು ಸರ್ ಶಲ್ ಐ ಲೀವ್ ಎಂದು ಪರ್ಮಿಷನ್ ಕೇಳಿದಳು. ಹ್ಮ್ ಎಂದಷ್ಟೇ ಹೇಳಿದನು. ಅವನ ರೂಮಿನಿಂದ ಹೊರಗೆ ಬಂದು ಜೋರಾದ ಉಸಿರು ದಬ್ಬಿ ಕೆಲಸದ ಕಡೆ ಗಮನ ಹರಿಸಿದಳು.
ಹಲೋ..... ಕ್ಯಾನ್ ಯು ಪ್ಲೀಸ್ ಕನೆಕ್ಟ್ ದ ಫೋನ್ ಟು ಮಿಸ್ಟರ್ “ವಿಶೃತ್ ವಿರಾಜ್” ದ ಸಿ.ಇ.ಓ ಆಫ್ ವಿ.ವಿ ಗ್ರೂಪ್ ಆಫ್ ಕಂಪನಿ ಎಂದರು ಫೋನ್ ನಲ್ಲಿದ್ದ ವ್ಯಕ್ತಿ. ಈ ಕಡೆ ಕಾಲ್ ನಲ್ಲಿದ್ದ ನಂದಿನಿ ಅವರ ಡೀಟೇಲ್ಸ್ ತಿಳಿದುಕೊಂಡು ಅವರ ನಂಬರ್ ಪಡೆದು ಸರ್ ಈಗ ಬ್ರೇಕ್‌ಫಾಸ್ಟ್ ಮಾಡ್ತಾ ಇದ್ದಾರೆ, ಅವರನ್ನು ಕೇಳಿ ನಿಮಗೆ ಕಾಲ್ ಮಾಡುವೆ ಎಂದು ಮೃದುವಾಗಿ ಹೇಳಿ ಕಾಲ್ ಕಟ್ ಮಾಡಿ ತನ್ನ ಟ್ಯಾಬ್ ನಲ್ಲಿ ಇದನ್ನೂ ಸೇರಿಸಿಕೊಂಡಳು.
********
ತನ್ನ ರೂಮಲ್ಲಿ ಕೂತು ತಿಂಡಿ ತಿನ್ನುತ್ತಿದ್ದ ವಿಶೃತ್ ಗೆ ತಿಂಡಿ ತುಂಬಾ ಇಷ್ಟ ಆಗಿತ್ತು. ನಮ್ಮ ಆಫೀಸಿನ ಕ್ಯಾಂಟೀನ್ ನಲ್ಲಿ ಇಷ್ಟು ಚಂದ ತಿಂಡಿ ಮಾಡ್ತಾರೆ ಅನ್ನೋ ವಿಷಯವೇ ನನಗೆ ಗೊತ್ತಿಲ್ಲ ಎಂದು ಅಷ್ಟೂ ತಿಂಡಿಯನ್ನು ತಿಂದು ಮುಗಿಸಿ ಕಾಫಿ ಕುಡಿದನು. ಆದರೆ ಅವನಿಗೇನು ಗೊತ್ತು ಅದು ತನ್ನ ಪಿ.ಎ ನಂದಿನಿ ಮನೆಯ ತಿಂಡಿ ಎಂದು.
ತನ್ನ ಕ್ಯಾಬಿನ್ ಗೆ ಬಂದು ಕೂತವನು ಲ್ಯಾಪ್‌ಟಾಪ್ ಆನ್ ಮಾಡುತ್ತಾ ಇಂಟರ್‌ಕಾಮ್ ಮೂಲಕ ತನ್ನ ಪಿ.ಎ ನಂದಿನಿಯನ್ನು ಕರೆದನು. ಅವಳು ಟ್ಯಾಬ್ ಜೊತೆಗೆ ಇವತ್ತು ಸೈನ್ ಆಗಬೇಕಿದ್ದ ಫೈಲ್‌ಗಳನ್ನು ತಂದು ಅವನ ಮುಂದೆ ಇಡುತ್ತಾ..... ಸರ್ ರಾಮ್ ಸರ್ ಕಾಲ್ ಮಾಡಿದ್ರು..... ನಿಮ್ಮ ಹತ್ರ ಮಾತಾಡಬೇಕು ಅಂದ್ರು ಹೇಳಿದಳು. ಅಪಾಂಯಿಂಟ್‌ಮೆಂಟ್ ಕೊಡಿ ಮಿಸ್ ನಂದಿನಿ. ಕಾಲ್ ಮಾಡಿ ಮಾತಾಡಬೇಕು ಅಂದ ತಕ್ಷಣ ಅವರಿಗಾಗಿ ನಾನು ಕಾಯುತ್ತಾ ಕೂತಿಲ್ಲ ಅಂತ ಅವರಿಗೂ ತಿಳಿಯಲಿ..... ನಮ್ಮಿಂದ ಅವರಿಗೆ ಕೆಲಸ ಆಗಬೇಕಾಗಿರುವುದು ಅವರಿಂದ ನನಗಲ್ಲ ಎಂದು ದರ್ಪದಲ್ಲಿ ಹೇಳಿದ ಮಾತುಗಳು ನಂದಿನಿಗೆ ಹೊಸದೇನಲ್ಲ.
ಓಕೆ ಸರ್ ಎಂದು ಟ್ಯಾಬ್ ನಲ್ಲಿ ಇದ್ದ ಮೊದಲನೇ ಅರ್ಧ ದಿನದ ಮೀಟಿಂಗ್ ಶೆಡ್ಯೂಲ್ ಒಪ್ಪಿಸಿದಳು. ಗುಡ್ ಎಂದವನು ಅವಳು ಕೊಟ್ಟ ಫೈಲ್ ನೋಡಿ ಸಹಿ ಹಾಕುತ್ತಾ..... ಅಂದಹಾಗೆ ಮಿಸ್ ನಂದಿನಿ..... ನಮ್ಮ ಕ್ಯಾಂಟೀನ್ ನ ಕುಕ್ ಯಾರು....? ಹಸಬರಾ.....? ಇವತ್ತಿನ ತಿಂಡಿ ತುಂಬಾ ಟೇಸ್ಟಿಯಾಗಿತ್ತು ಎಂದನು.
ಈಗ ಉಗುಳು ನುಂಗುವ ಸರದಿ ನಂದಿನಿಯದ್ದು. ಸುಳ್ಳು ಹೇಳಿ ಅವನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗೊತ್ತು ಅವಳಿಗೂ..... ಅದರಲ್ಲೂ ವಿಶೃತ್ ಗೆ ಸುಳ್ಳು ಹೇಳುವವರನ್ನು ಕಂಡರೇ ಕಡು ಕೋಪ ಅವನಿಗೆ. ಸಣ್ಣಗೆ ಬೆವರಿದ ನಂದಿನಿ, ಸಾರಿ ಸರ್ ಅದು ಕ್ಯಾಂಟೀನ್ ಫುಡ್ ಅಲ್ಲ.... ಇವತ್ತು ಕ್ಯಾಂಟೀನ್ ನಲ್ಲಿ ನೀವು ಹೇಟ್ ಮಾಡುವ ವಾಂಗಿಭಾತ್ ಮಾಡಿದ್ದರು. ಅದಕ್ಕೆ ನಾನೇ ಮನೆಯಿಂದ ಮಾಡಿಕೊಂಡು ತಂದಿದ್ದ ತಿಂಡಿಯನ್ನು ನಿಮಗೆ ಕೊಟ್ಟೆ ಎಂದಳು. ಫೈಲ್ ಗೆ ಸಹಿ ಹಾಕುತ್ತಿದ್ದವ ಹಾಗೆ ಸ್ಟçಕ್ ಆಗಿ ನಿಲ್ಲಿಸಿದನು.
ಅವಳನ್ನೊಮ್ಮೆ ನೋಡಿದನು..... ಹೆದರಿಕೆಗೆ ಬೆವರಿತ್ತು ಹುಡುಗಿ. ಅವನೇನು ಮಾಡುತ್ತಾನೋ ಎಂದು ಮನಸ್ಸಿನಲ್ಲೇ ತನ್ನ ಇಷ್ಟದ ದೇವರು ಆಂಜನೇಯನನ್ನು ನೆನೆದಳು. ಆದರೆ ಅವಳ ಊಹೆಯನ್ನು ತಕೆ ಕೆಳಗೆ ಮಾಡಿದ ವಿಶೃತ್, ತಿಂಡಿ ತುಂಬಾ ಚನ್ನಾಗಿತ್ತು..... ಥ್ಯಾಂಕ್ಸ್ ಎಂದವನು ಲ್ಯಾಂಡ್‌ಲೈನ್ ನ ಹಿಡಿದು ಯಾರಿಗೋ ಕಾಲ್ ಮಾಡಿ..... ಈ ತಿಂಗಳು ನನ್ನ ಪಿ.ಎ ನಂದಿನಿ ಅಕೌಂಟ್ ಗೆ 5000 ಹೆಚ್ಚಿಗೆ ದುಡ್ಡನ್ನು ಹಾಕಿ ಎಂದು ಕಾಲ್ ಕಟ್ ಮಾಡಿದನು.
ಅವನ ಮುಂದೆ ಪ್ರಶ್ನೆ ಮಾಡುವ ಅಧಿಕಾರ ಅಥವಾ ಧೈರ್ಯ ಇಲ್ಲ ಅವಳಿಗೆ. ಮನಸ್ಸು ನೊಂದಿತು. ಒಂದು ಹೊತ್ತಿನ ಊಟಕ್ಕೆ 5000 ಬೆಲೆ ಕಟ್ಟುತ್ತಾ ಇದ್ದಾರಲ್ದಲ ಈ ಸರ್ ಎಂದು.
ಅವನಿರುವುದೇ ಹಾಗೆ..... ಹುಟ್ಟಿನಿಂದಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವನಾದರೂ ಎಲ್ಲದ್ದಕ್ಕೂ ಬೆಲೆ ಕಟ್ಟುವವನು. ಬೆಲೆ ಇಲ್ಲದೆ ಇರುವ ವಸ್ತುವಿಗೆ ಸಾಸಿವೆ ಕಾಳಿನಷ್ಟು ಮಮಾಡಿರ್ಯಾದೆ ಕೊಡದವನು “ವಿಶೃತ್ ವಿರಾಜ್” ಎಂಬ ಹುಂಬ.