Prema Jala ( love is blind) in Kannada Horror Stories by Narayan M books and stories PDF | ಪ್ರೇಮ ಜಾಲ (love is blind)

Featured Books
Categories
Share

ಪ್ರೇಮ ಜಾಲ (love is blind)

ಗಾಢ ಕಗ್ಗತ್ತಲೆಯ ಅಂಧಕಾರ… ಭಯ ಹುಟ್ಟಿಸುವ ನಿಶ್ಶಬ್ದ ವಾತಾವರಣ ಮೌನದ ಅಧಿಪತ್ಯವನ್ನು ದಾಟಿ, ಕತ್ತಲಿನಲ್ಲಿ ಸಾಗುತ್ತಿರುವಳು ಒಬ್ಬಂಟಿಯಾಗಿ ಅವಳು… ಸುತ್ತಮುತ್ತಲೂ ಆಕಾಶದೆತ್ತರಕ್ಕೆ ಬೆಳೆದು ನಿಂತಿರುವ ಮರದ ಛಾಯೆ ದೈತ್ಯಾಕಾರವಾಗಿ ಬೆಳೆಯುತ್ತಾ ಅವಳನ್ನು ನುಂಗುವಂತೆ ಕಾಣಿಸುತ್ತಿತ್ತು…

ಆಕಾಶದಲ್ಲಿ ಪೂರ್ಣಚಂದ್ರನ ಆಗಮನವಾಗಿದ್ದರೂ ಕೂಡ, ಅವಳು ನಡೆಯುತ್ತಿದ್ದ ಹಾದಿಯಲ್ಲಿ ಪೂರ್ಣಚಂದ್ರ ತನ್ನ ಬೆಳದಿಂಗಳನ್ನು ನೀಡುವಲ್ಲಿ ವಿಫಲನಾಗಿದ್ದ…

ಸಾಗುತ್ತಿರುವ ಅವಳ ಹಾದಿಯಲ್ಲಿ ಅಡೆತಡೆಗಳು ನೂರಾರು… ಎಲ್ಲವನ್ನೂ ದಾಟಿ ಸುಮ್ಮನೆ ನಡೆಯುತ್ತಿದ್ದಾಳೆ.... ಅಲ್ಲಿನ ಮೌನ — ಅದೆಷ್ಟು ಭಯ ಹುಟ್ಟಿಸುತ್ತದೆ! ನಿಶ್ಶಬ್ದತೆ ಮನಸ್ಸಿನ ಘರ್ಷಣೆಗೆ ಸೂಕ್ತ ಪರಿಹಾರವಾದರೆ, ಅದೇ ಮೌನ ಭಾವನೆಗಳನ್ನು ಸೋಲಿಸುವುದರಲ್ಲಿ ಮೇಲುಗೈ... ಕೆಲವೊಮ್ಮೆ ಅದೇ ಮೌನ ಭಯದ ತೀವ್ರತೆಯನ್ನು ತೋರಿಸಿದರೆ ಮತ್ತೊಮ್ಮೆ ಅದೇ ಮೌನ ಸಾವಿರ ಮಾತಿಗೆ ಒಂದೇ ಅರ್ಥ ನೀಡುತ್ತದೆ.. 

ಸಾಗುತ್ತಿರುವ ಅವಳ ಮುಖದಲ್ಲಿ ಇದ್ದದ್ದು ಕೇವಲ ನಿರ್ಲಿಪ್ತತೆ… ತನ್ನ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಂತಹ ನಿರ್ಲಿಪ್ತತೆ. “ಯಾರೂ ಇಲ್ಲ” ಅನ್ನುವ ಭಾವನೆ ಅವಳನ್ನು ಅತಿ ಹೆಚ್ಚು ಕಾಡುತ್ತಿತ್ತು. ಹಾಗಂತ ಅವಳ ಮನಸ್ಸು ಒಪ್ಪಿಕೊಳ್ಳಲು ಇಷ್ಟಪಡುತ್ತಿರಲಿಲ್ಲ — ಬುದ್ಧಿ ಹೇಳುತ್ತಿತ್ತು “ನಿನಗೆ ಯಾರಿಲ್ಲ” ಎಂದು, ಆದರೆ ಅವಳ ಹೃದಯ ರಚ್ಚೆ ಹಿಡಿದು ನಿಂತಿತ್ತು — “ನಿನಗಾಗಿ ಆ ಒಂದು ಜೀವ ಕಾಯುತಿದೆ” ಎಂದು…

ಮೋಸಗಾರರು ಎಲ್ಲೆಡೆ — ಯಾರು ಕೂಡ ಒಳ್ಳೆಯವರು ಇಲ್ಲ. ಎಲ್ಲರೂ ತಮ್ಮ ಜೀವನವನ್ನು ನೋಡಿಕೊಳ್ಳುವ ಸ್ವಾರ್ಥಿಗಳು. ಮನುಷ್ಯರ ಮೇಲೆ ನಂಬಿಕೆ ಕಳೆದುಕೊಳ್ಳುವಂತಹ ಜಿಗುಪ್ಸೆಯ ಭಾವನೆ ಅವಳಲ್ಲಿ ಹುಟ್ಟಿಬಿಟ್ಟಿತ್ತು…

ತಪ್ಪು ಯಾರದು? ಅವಳಂದೋ ಅಥವಾ ಸಮಯದೋ? ಇಲ್ಲವೆ ಎಲ್ಲವನ್ನೂ ಆಡಿಸುವ ವಿಧಿಯದೋ? ಸ್ವತಃ ಅವಳಿಗೂ ಗೊತ್ತಿರಲಿಲ್ಲ… ಆದರೆ ಸಮಯದ ಕೈಗೊಂಬೆ ಅವಳು — ವಿಧಿ ಆಡಿಸುತ್ತಿರುವ ಆಟದಲ್ಲಿ ಪಾತ್ರಧಾರಿ ಅವಳು. ಎಲ್ಲವನ್ನೂ ಕಳೆದುಕೊಂಡು ಸೋತವಳು. ಸೋಲಿನಲ್ಲೂ ಗೆದ್ದವಳು. ಹೀಗೆ ಅಂದುಕೊಂಡಿದ್ದಾಳೆ — ಹೊರತು ಅವಳು ನಿಜಕ್ಕೂ ಗೆದ್ದಳೋ, ಸೋತಳೋ — ಸ್ವತಃ ಅವಳಿಗೂ ಗೊತ್ತಿಲ್ಲ.

ಇಲ್ಲಿಯವರೆಗೆ ಅವಳು ಇದ್ದದ್ದು ಸುಳ್ಳಿನ ಅರಮನೆಯಲ್ಲಿ. ಸುಳ್ಳಿನ ಅಂಗಿನ ಅರಮನೆ ಕ್ಷಣದಲ್ಲಿ ನಾಶವಾಗಿ ಬಿಟ್ಟಿತು. ಸತ್ಯ ಅನ್ನುವ ವಾಸ್ತವದ ಪ್ರಪಂಚ ಅವಳ ಸುಳ್ಳಿನ ಅರಮನೆಯನ್ನು ಕ್ಷಣದಲ್ಲಿ ನೆಲಸಮ ಮಾಡಿತು. ಅವಳ ಸುತ್ತಲೂ ಇದ್ದದ್ದೆಲ್ಲವೂ ಮಿಥ್ಯಾ ಅನ್ನೋದು ತಿಳಿದಾಗ, ಅವಳ ಕಾಲಡಿಯ ಭೂಮಿ ಕುಸಿದು ಹೋದ ಅನುಭವ — ಸಂಪೂರ್ಣವಾಗಿ ಸೋತೆ ಅನ್ನುವ ಅನುಭವ…

ಸೋತಳಾದಳು — ತನ್ನ ಸುತ್ತಲೂ ನಿರ್ಮಿಸಿದ ಸುಳ್ಳಿನ ಮಾಯಾಜಾಲದಿಂದ ಹೊರಬಂದಳು. ಆದರೆ ಬಂದವಳೆ ಇಲ್ಲ. ಮನದ ತುಂಬಾ ಅದೇ ಸುಳ್ಳಿನ ಪ್ರಪಂಚವನ್ನು ತನ್ನದಾಗಿಸಿಕೊಂಡು ಜೀವಿಸಿಕೊಂಡು ಬಂದವಳಿಗೆ, ಅಷ್ಟು ಸುಲಭವಲ್ಲ — ಆ ಸುಳ್ಳಿನ ಪ್ರಪಂಚವನ್ನು ಮರೆಯುವುದು…

ಆದರೂ ಮರೆಯುವ ಪ್ರಯತ್ನದಲ್ಲಿ ಸಾಗುತ್ತಿದ್ದಾಳೆ ಅವಳು... ಎಷ್ಟು ಸಾಗಿದರೂ ದಾರಿ ಮಾತ್ರ ಸಿಗುತ್ತಿಲ್ಲ. “ದೂರದ ಬೆಟ್ಟ ನುಣ್ಣಗೆ” ಎನ್ನುವ ಗಾದೆ ಮಾತಿನಂತೆ, ಅವಳು ಸಾಗುತ್ತಿರುವ ದಾರಿಯ ಅಂತ್ಯ ಕೂಡ ಸಿಗದೇ ಇರುವಂತೆ ಮತ್ತಷ್ಟು ದೂರವಾಗುತ್ತಿದೆ. ಅವಳಂತೂ ನಡೆಯುತ್ತಿದ್ದಾಳೆ. ಕಾಲಿಗೆ ಸಿಗುತ್ತಿರುವ ಮುಳ್ಳುಗಳು ಅವಳ ಕಾಲುಗಳನ್ನು ಸೀಳಿ ರಕ್ತ ಹರಿಸುತ್ತಿದ್ದವು, ಅದರ ಕಡೆ ಅವಳಿಗೆ ಗಮನವಿಲ್ಲ…

ಮನದಲ್ಲಿ ಭಾವನೆಗಳ ಸಂಘರ್ಷ ನಡೆಯುತ್ತಿದೆ. ಅವಳ ರಕ್ತ ಕುದಿಯುತ್ತಿದೆ. ಆದರೂ ಏನು ಮಾಡಲು ಆಗುತ್ತಿಲ್ಲ… ಅಸಹಾಯಕಳು — ಆದರೆ ಅಸಹಾಯಕತೆ ಒಪ್ಪಿಕೊಳ್ಳಲು ಸಿದ್ಧಳಲ್ಲ ಅವಳು.

ಅವಳು ಸಾಗುತ್ತಿದ್ದ ದಾರಿ ಸಂಪೂರ್ಣ ನಿಶ್ಶಬ್ದಮಯವಾಗಿತ್ತು. ಆದರೆ ಏಕಾಏಕಿ ಅವಳ ಚಿತ್ತವನ್ನು ಕದಲಿಸುವಂತೆ ದೂರದಲ್ಲಿ ಕೇಳಿ ಬರುತ್ತಿತ್ತು ಕಾಡುಪ್ರಾಣಿಗಳ ಭಯಂಕರ ಕೊಗುವಿಕೆ…

ಅದರ ಕಡೆ ಗಮನವಿಲ್ಲದೆ ಮತ್ತೆ ಮುಂದಕ್ಕೆ ನಡೆದಳು. ಆದರೆ ಈ ಬಾರಿ ಕಗ್ಗತ್ತಲನ್ನು ಸೀಳಿಕೊಂಡು, ಬಲು ಸಮೀಪದಲ್ಲಿ ಕೇಳಿಸುತ್ತಿತ್ತು — ಅತಿ ಭಯಂಕರ ಕ್ರೂರ ತೋಳದ ಘರ್ಜನೆ!

ಕಳೆದುಹೋದ ಪ್ರಪಂಚದಿಂದ ವಾಸ್ತವದ ಪ್ರಪಂಚಕ್ಕೆ ಮರಳಿದಳು. ಎದುರು ನೋಡಿದಳು — ತೋಳಗಳ ದಿಂಡು ಬಂದು ನಿಂತಿತ್ತು ಭಯ ಹುಟ್ಟಿಸುವಂತೆ… ಕ್ಷಣಕಾಲ ಅವಳ ಉಸಿರು ನಿಂತಂತಾಯಿತು. ಭೀತಿ ಹುಟ್ಟಿಸುವ ದೊಡ್ಡ ಆಕಾರ, ಅದರ ಕೆಂಪು ಕಣ್ಣುಗಳನ್ನು ಕಂಡಾಗ ಅವಳ ಇಡೀ ಶರೀರ ಭಯದಿಂದ ತತ್ತರಿಸಿತು…

ಉಸಿರೇ ನಿಂತು ಹೋದಂತಹ ಅನುಭವ… “ಇನ್ನೂ ನನಗೆ ಉಳಿಗಾಲವಿಲ್ಲ” ಅನ್ನೋದರ ಅರಿವಾದಾಗ, ಸಾವಿಗೆ ಹತ್ತಿರವಾಗುವುದೇ ಒಂದೇ ದಾರಿಯಾಗಿತ್ತು. ಸಾವು ಕಣ್ಣೆದುರು ಬಂದಂತೆ ಕಾಣಿಸುತ್ತಿತ್ತು. ಜವರಾಯನೇ ತೋಳಗಳ ರೂಪದಲ್ಲಿ ಅವಳ ಮೇಲೆ ಆಕ್ರಮಣ ಮಾಡಲು ತನ್ನ ಕ್ರೂರ ಹಲ್ಲುಗಳನ್ನು ಬಿಟ್ಟು ತೋರಿಸುತ್ತಿದ್ದಂತಿತ್ತು…

“ತೋಳಗಳ ಗುಂಪಿಗೆ ಆಹಾರವಾದರೆ ಮೂಳೆ ಸಿಗುವುದಿಲ್ಲ, ಯಾರಿಗೂ ತಿಳಿಯುವುದಿಲ್ಲ ಒಂದು ಅಸ್ತಿತ್ವ ಇತ್ತು ಅನ್ನುವುದೇ. ಹಾ, ರೀತಿ ಆ ತೋಳಗಳ ಹೊಟ್ಟೆಗೆ ಆಹಾರವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬೇಕು…”

“ಉಳಿಸಿಕೊಳ್ಳಲು ಇರುವುದಾದರೂ ಏನು? ಹೇಳಿಕೊಳ್ಳುವ ಅಸ್ತಿತ್ವ ಕೇವಲ ಸ್ವಾರ್ಥದ ಅಸ್ತಿತ್ವ ಅದು. ಅದರ ಅವಶ್ಯಕತೆ ನನಗಿಲ್ಲ. ಸಾವಿನಲ್ಲಾದರೂ ನನಗೊಂದು ಅಸ್ತಿತ್ವ ಸಿಗಬಹುದೇನೋ — ನೋಡಿಬಿಡೋಣ…”

ಅವಳ ಮಸ್ತಿಷ್ಕದಲ್ಲಿ ನೂರಾರು ಆಲೋಚನೆಗಳು ಹಾದುಹೋಗುತ್ತಿವೆ. ಅದರ ಜೊತೆಗೆ ಇಲ್ಲಿಯವರೆಗೆ ನಂಬಿಕೊಂಡಿದ್ದ “ಸಂಬಂಧಗಳು” ಎಂಬ ಸ್ವಾರ್ಥ ತುಂಬಿದ ಜನರು ಕೂಡ ಅವಳ ಕಣ್ಣೆದುರು ಹಾದುಹೋಗುತ್ತಿದ್ದಾರೆ. ಎಲ್ಲದಕ್ಕಿಂತ ಕೊನೆಯಲ್ಲಿ ಬಂದವನು — ಅವನು…

ಅವಳ ಉಸಿರಿನ ಕಣಕಣದಲ್ಲೂ ಬೆರೆತಿದ್ದ, ಮಧುರ ಭಾವನೆಗಳೆಂಬ ಪ್ರೇಮದ ಜಾಲದಲ್ಲಿ ಅವಳನ್ನು ಸಿಲುಕಿಸಿದವನು… ಅವಳ ಸರ್ವಸ್ವವನ್ನು ತನ್ನದಾಗಿಸಿಕೊಂಡವನು… ಅವನ ಪ್ರೇಮದ ಜಾಲದಲ್ಲಿ ಎಷ್ಟರ ಮಟ್ಟಿಗೆ ಮುಳುಗಿ ಹೋಗಿದ್ದಳೆಂದರೆ — “ಪ್ರೀತಿ ಕುರುಡು” ಅನ್ನುವುದೇ ಅರಿಯದಷ್ಟು… ಅವನಲ್ಲಿ ಬೆರೆತುಹೋಗುವಷ್ಟು… ಆದರೆ ಕೊನೆಯಲ್ಲಿ ಸಿಕ್ಕಿದ್ದು ಏನು? ಅದೇ ಮೋಸ!

ಸ್ವಾರ್ಥಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಅವಳನ್ನು ಪ್ರತಿಕ್ಷಣ ಮೋಸದ ಹಾದಿಯಲ್ಲಿಟ್ಟಿದ್ದರು. ಆದರೆ ಅವನು — ಅವಳ ಅಸ್ತಿತ್ವವೇ ಆದವನು… ಆದರೆ ಅವನೇ ಸುಳ್ಳು ಅನ್ನುವುದರ ಅರಿವಾದಾಗ — ಅವಳ ಸ್ಥಿತಿ ನಿಜಕ್ಕೂ ದೇವರಿಗೂ ಪ್ರೀತಿ ಹುಟ್ಟಿಸುವಂತಿತ್ತು…!!!

ಕಥೆ ಇನ್ನು ಉಳಿದಿದೆ ❣️