ನನ್ನವನೀ - ೧
ಕೆಲವು ಕಥೆಗಳು ಓದಿಸಿಕೊಳ್ಳುವ ವೇಗಕ್ಕಾಗಿ ಇರುತ್ತವೆ, ಇನ್ನು ಕೆಲವು ಕಥೆಗಳು ನಮ್ಮೊಳಗೆ ಉಳಿದುಕೊಳ್ಳುವ ಭಾವನೆಗಳಿಗಾಗಿ ಇರುತ್ತವೆ. ಈ ಆದಿತ್ಯ ❤️ ಅವನಿ ಕಥೆ ಎರಡನೇ ಗುಂಪಿಗೆ ಸೇರಿದ್ದು.
ಇಲ್ಲಿ ಜೀವನದ ಸಣ್ಣ ಸಣ್ಣ ಕ್ಷಣಗಳಿಗೆ, ಮೌನಕ್ಕೆ ಮತ್ತು ಮಾತುಕತೆಗಳಿಗೆ ಹೆಚ್ಚಿನ ಜಾಗವಿದೆ. ಹಾಗಾಗಿ, ಕಥೆಯ ಓಟ ನಿಮಗೆ ಸ್ವಲ್ಪ ನಿಧಾನ ಅನಿಸಬಹುದು ಅಥವಾ ಎಪಿಸೋಡ್‌ಗಳು ದೀರ್ಘವೆನಿಸಬಹುದು. ಆದರೆ, ಆ ದೀರ್ಘತೆಯ ಹಿಂದಿರುವುದು ಪಾತ್ರಗಳ ನಡುವಿನ ಆಳವಾದ ಭಾವನೆಗಳನ್ನು ಮತ್ತು ಅವರ ಮನಸ್ಥಿತಿಯನ್ನು ನಿಮಗೆ ಹತ್ತಿರವಾಗಿಸುವ ಒಂದು ಪುಟ್ಟ ಪ್ರಯತ್ನ ಅಷ್ಟೇ.
ಇದು ಮುಂದೇನಾಗಬಹುದು ? ಎನ್ನುವ ಕುತೂಹಲಕ್ಕಾಗಿ ಬರೆದ ಕಥೆಯಲ್ಲ. ಬದಲಾಗಿ ಈ ಪಾತ್ರಗಳ ಜೊತೆ ನೀವೂ ಒಂದು ಜೀವನವನ್ನು ಬದುಕಲಿ ಎಂಬ ಹಂಬಲದ ಬರಹ. ಇಲ್ಲಿ ನಾಟಕೀಯ ತಿರುವುಗಳಿಗಿಂತ ಸಹಜ ಸಂಬಂಧಗಳ ಸೌಂದರ್ಯಕ್ಕೆ ಒತ್ತು ನೀಡಿದ್ದೇನೆ.
ಯಾರು ಸಂಬಂಧಗಳ ಸೂಕ್ಷ್ಮತೆಯನ್ನು ಮತ್ತು ಭಾವನೆಗಳ ತೀವ್ರತೆಯನ್ನು ತಾಳ್ಮೆಯಿಂದ ಆಸ್ವಾದಿಸಲು ಇಷ್ಟಪಡುತ್ತೀರೋ, ಅವರಿಗೆ ಈ ಆದಿತ್ಯ ❤️ ಅವನಿ ಪಯಣ ಇಷ್ಟವಾಗಬಹುದು ಎಂಬ ನಂಬಿಕೆ.
----------------------------🌱----------------------------
ಮಲೆನಾಡಿನ ಮಡಿಲಲ್ಲಿರುವ ಆ ಹಳೆಯ ಕಾಲದ ಹೆಂಚಿನ ಮನೆ
' ಸಿರಿಮನೆ '. ಆ ಹೆಸರಿಗೆ ತಕ್ಕಂತೆ ಸುತ್ತಲೂ ಹಸಿರು ಸಿರಿ. ಮನೆಗೆ ಅಡಿಪಾಯ ಹಾಕಿದ ಕಾಲದಿಂದಲೂ ಮನೆಯ ಮುಂದೆ ಬೆಳೆದು ನಿಂತಿರುವ ಅಡಿಕೆ ಮರಗಳ ಸಾಲು, ಅವುಗಳ ನಡುವೆ ಅಲ್ಲಲ್ಲಿ ಇಣುಕುವ ತೆಂಗಿನ ಗಿಡಗಳು ಮತ್ತು ಮನೆಯ ಮುಂಭಾಗದ ಹಸಿರು ಹುಲ್ಲುಗಾವಲು ಸಿರಿಮನೆಗೆ ಒಂದು ವಿಶಿಷ್ಟ ಕಳೆ ನೀಡಿದ್ದವು.
ಮುಂಜಾನೆ ಮಳೆ ತುಸು ಬಿಡುವು ನೀಡಿತ್ತು. ಆದರೂ
ಹೆಂಚುಗಳ ಮೇಲೆ ಬೀಳುವ ಮಳೆಹನಿಗಳು ಒಂದು ರೀತಿಯ ತಾಳಬದ್ಧ ಸಂಗೀತವನ್ನು ಸೃಷ್ಟಿಸುತ್ತಿದ್ದವು. ಆ ಹನಿಗಳು ಹೆಂಚಿನ ಮಾಡಿನಿಂದ ಜಾರಿ, ಕೆಳಗಿರುವ ಕಲ್ಲಿನ ಪಡಸಾಲೆಯ ಮೇಲೆ ಬಿದ್ದು ಸಿಡಿಯುತ್ತಿದ್ದವು.
ಹಸುವಿನ ಕೊಟ್ಟಿಗೆಯಿಂದ ಬರುವ ಆ ಸಗಣಿಯ ಕಂಪು, ಮಳೆ ಬಿದ್ದ ನಂತರದ ಮಣ್ಣಿನ ಘಮ ಮತ್ತು ಬಚ್ಚಲ ಮನೆ ಹಂಡೆಗೆ ನೀರು ಕಾಯಿಸಲು ಉರಿಸುತ್ತಿದ್ದ ಸೌದೆಯ ಹೊಗೆಯ ವಾಸನೆ. ಇವೆಲ್ಲವೂ ಸೇರಿ ಸಿರಿಮನೆಗೆ ಒಂದು ಅದ್ಭುತವಾದ ಜೀವಂತಿಕೆಯನ್ನು ನೀಡಿದ್ದವು.
ಮನೆಯ ಒಳಾಂಗಣವು ವಿಶಾಲವಾದ ಚೌಕದ ಅಂಗಳದಿಂದ ಕೂಡಿದ್ದು, ಅದರ ಸುತ್ತಲೂ ಕೆತ್ತನೆ ಕೆಲಸವಿರುವ ಮರದ ಕಂಬಗಳು ನಿಂತಿದ್ದವು. ಆ ಕಂಬಗಳ ಮೇಲೆ ಹಿರಿಯರ ಕಾಲದ ಆ ಗಾಂಭೀರ್ಯದ ನೆರಳುಗಳು ಇಂದಿಗೂ ಹಾಗೆಯೇ ಇವೆ ಎಂಬಂತೆ ಭಾಸವಾಗುತ್ತಿತ್ತು.
ಇಂತಹ ಸುಂದರ ಸಿರಿಮನೆಯ ಒಳಗೆ ಇವತ್ತು ಒಂದು ರೀತಿಯ ಗಡಿಬಿಡಿ.
" ಸ್ಮಿತಾ ! ಇಷ್ಟು ಬೇಗ ಎದ್ದು ರೆಡಿ ಆಗಿಬಿಟ್ಯ ನೀನು ? ನಿನ್ನ ಗೆಳತಿಗೂ ಸ್ವಲ್ಪ ಈ ಸಂಸ್ಕಾರ ಎಲ್ಲ ಹೇಳಿಕೊಡು ಮಾರಾಯ್ತಿ.. ನಾಳೆ ಗಂಡನ ಮನೆಗೆ ಹೋದಮೇಲೆ ಏನು ಮಾಡ್ತಾಳೋ ಏನೋ.. ನೋಡು ಇವತ್ತೂ ಇನ್ನೂ ಎದ್ದಿಲ್ಲ.. ಹೋಗು ಬೇಗ ಎಬ್ಸಿ ಅವಳನ್ನು ರೆಡಿ ಮಾಡು.. " ಎನ್ನುತ್ತಾ ದೋಸೆಗೆ ಚಟ್ನಿ ರೆಡಿ ಮಾಡುತ್ತಿರುವ ಶಾರದಮ್ಮ ಹೇಳಿದರು.
" ಅಯ್ಯೋ ಅವಳಿಗೇನು ಹೇಳಿಕೊಡೋದು ಅತ್ತೆ.. ಒಂದಕ್ಕೆ ಹತ್ತು ಮಾತಾಡ್ತಾಳೆ.. ಇನ್ನೂ ನಾನು ಏನಾದರೂ ಹೇಳಿದರೆ.. ಅಷ್ಟೇ.. ಗೇಟ್ ಪಾಸ್ ಕೊಡ್ತಾಳೆ.. ಆದರೆ ಟೆನ್ಶನ್ ಬೇಡ ಅತ್ತೆ..ಟೈಮ್ ಗೆ ಸರಿಯಾಗಿ.. ನಿಮ್ಮ ಮುದ್ದು ಮಗಳನ್ನ ರೆಡಿ ಮಾಡ್ತೀವಿ.. ನಾನು ಮತ್ತು ಪಾವನಿ.. " ಎನ್ನುತ್ತಾ ಮಹಡಿಯ ಕಡೆ ನಡೆದಳು ಸ್ಮಿತಾ.
" ಏಯ್ !! ಅವನಿ ಎದ್ದೇಳೇ !! ಬೇಗ ರೆಡಿ ಆಗ್ಬೇಕು.. ಹತ್ತು ಗಂಟೆ ಒಳಗೆ. ಆಗಲೇ ಏಳು ಗಂಟೆ ಆಗೋಯ್ತು.. " ಎಂದು ಅವನಿಯನ್ನು ಎಬ್ಬಿಸುವ ಪ್ರಯತ್ನ ಮಾಡಿದಳು ಸ್ಮಿತಾ.
" ಯಪ್ಪಾ.. ಏನೇ ಸ್ಮಿತಾ !!! ಇಷ್ಟು ಬೆಳಿಗ್ಗೆ ಬೆಳಿಗ್ಗೆ ಗೋಳು ನಿಂದು.." ಎನ್ನುತ್ತಾ ನಿಧಾನವಾಗಿ ಮೈ ಮುರಿಯುತ್ತಾ ಆಕಳಿಸುತ್ತಾ ಎದ್ದು ಕೂತಳು ಅವನಿ.
" ಅವನಿ, ಬೇಗ ಹೋಗೆ ಸ್ನಾನ ಮಾಡು.. ಹುಡುಗನ ಕಡೆಯವರು ಬರ್ತಾರೆ ಇವತ್ತು ನೆನಪಿದೆ ಅಲ್ವಾ ?? " ಎಂದು ಗಡಿಬಿಡಿ ಮಾಡಿದಳು ಗೆಳತಿ ಸ್ಮಿತಾ.
" ಆಯ್ತೇ ಆಯ್ತು..ಇರು ಸ್ನಾನ ಮಾಡಿ ಬರ್ತೀನಿ.. " ಎಂದವಳು ಸರ ಸರನೆ ಮಹಡಿ ಇಳಿದು ನೇರವಾಗಿ ಬಚ್ಚಲ ಮನೆಗೆ ನಡೆದಿದ್ದಳು ಅವನಿ.
ಹಾಸಿಗೆಯನ್ನೆಲ್ಲ ಸರಿಯಾಗಿ ಮಡಚಿ ಇಟ್ಟ, ಸ್ಮಿತಾ ನೇರವಾಗಿ ಅಡುಗೆ ಮನೆಗೆ ಬಂದಿದ್ದಳು. ಸ್ಮಿತಾ ಅವನಿಯ ಗೆಳತಿ. ಡಿಗ್ರಿಯಿಂದ ಶುರುವಾದ ಗೆಳೆತನ ಈಗಲೂ ಮುಂದುವರೆದಿತ್ತು. ಈಗಷ್ಟೇ ಒಂದು ವರ್ಷದ ಹಿಂದೆ ಮದುವೆಯಾಗಿ ಅಪ್ಪಟ ಗೃಹಿಣಿಯಾಗಿದ್ದಳು. ಅಂದು ಅವನಿಯನ್ನು ನೋಡಲು ಗಂಡಿನ ಕಡೆಯವರು ಬರುತ್ತಾರೆಂದು ಗೆಳತಿಯನ್ನು ಮನೆಗೆ ಕರೆಸಿಕೊಂಡಿದ್ದಳು ಅವನಿ.
ಅವನಿ ಸಿರಿಮನೆಯ ದೊಡ್ಡ ಮಗಳು. ಇಪ್ಪತ್ತೈದು ಇಪ್ಪತ್ತಾರರ ಹರೆಯ. ಬ್ಯಾಂಕಿನಲ್ಲಿ ಉದ್ಯೋಗ. ಮನೆ ಕೆಲಸ ಎಂದರೆ ಅಲರ್ಜಿ. ಸ್ವಭಾವದಲ್ಲಿ ಸ್ವಲ್ಪ ಮೊಂಡು. ಆದರೆ ಗುಣದಲ್ಲಿ ಅಪ್ಪಟ ಚಿನ್ನ.
ಮಾತು ಒರಟು ಎನಿಸಿದರೂ ಮನಸು ಮೃದು. ಪ್ರೀತಿ, ಕರುಣೆ ಎಲ್ಲವೂ ಇತ್ತು. ಆದರೆ ಮಾತು ಮಾತ್ರ ಯಾವಾಗಲೂ ಒರಟು. ಮೊಂಡು ಸ್ವಭಾವದ್ದರಿಂದ ಹೀಗಾಗುತ್ತಿತ್ತು. ಅಪ್ಪಾಜಿಯ ಮುದ್ದಿನ ಮಗಳು.
" ಸ್ಮಿತಾ , ನೀನು ತಿಂಡಿ ತಿನ್ನು ಅವಳು ಆಮೇಲೆ ಬರ್ತಾಳೆ.. ಬಾ " ಎಂದು ಶಾರದಾ ಅವಳನ್ನು ಕರೆದು, ಬಿಸಿ ಬಿಸಿ ದೋಸೆಯನ್ನು ಬಾಳೆ ಎಲೆಗೆ ಹಾಕಿದರು.
ಅಷ್ಟರಲ್ಲೇ ಮನೆಯ ಯಜಮಾನ ಕೃಷ್ಣಮೂರ್ತಿ ಸಹ ಬಂದಿದ್ದರು.
" ನೀವು ಬಂದ್ರ.. ಛಲೋ ಆಯ್ತು. ಬನ್ನಿ ನೀವು ಮತ್ತೆ ಸ್ಮಿತಾ ತಿಂಡಿ ಮಾಡಿಬಿಡಿ.. " ಎಂದು ಶಾರದಾ ಅವರನ್ನೂ ಸಹ ಕೂರಿಸಿದರು.
" ಶಾರದಾ, ಎಲ್ಲಿ ನಮ್ಮ ಮುದ್ದಿನ ಮಗಳು.. ಇನ್ನೂ ಎದ್ದಿಲ್ಲವ ? " ಎಂದು ತುಸು ಗಂಭೀರವಾಗಿಯೇ ಕೇಳಿದರು.
" ಮಾವ ಅವಳನ್ನು ಎಬ್ಬಿಸಿದೀನಿ.. ಸ್ನಾನಕ್ಕೆ ಹೋಗಿದಾಳೆ.. " ಎಂದಳು ಸ್ಮಿತಾ.
ಹೀಗೆ ತಿಂಡಿಯಂತೂ ಮುಗಿದಿತ್ತು. ಕೃಷ್ಣಮೂರ್ತಿ ತೋಟದ ಕಡೆಗೆ ಹೋಗಿ ಸ್ವಲ್ಪ ಸಮಯದಲ್ಲಿ ಬರುತ್ತೇನೆ ಎಂದು ಹೋದರು. ಸ್ಮಿತಾ ಅವನಿಯ ರೂಮಿಗೆ ನಡೆದಳು.
ಅವನಿ ಬ್ಲೌಸ್ ಮತ್ತು ಲಂಗ ಹಾಕಿಕೊಂಡು, ಕನ್ನಡಿಯ ಮುಂದೆ ಕುಳಿತು, ಸೀರೆಯನ್ನು ರೂಮಿನ ತುಂಬಾ ಹರಡಿಕೊಂಡು,
ಪಿನ್, ಕ್ಲಿಪ್, ಬೊಟ್ಟು, ಬಳೆಗಳು, ಕಿವಿ ಓಲೆ ಎಲ್ಲ ಇದ್ದ ಬಾಕ್ಸ್ ಅಲ್ಲಿ ಏನೋ ಹುಡುಕುತ್ತಿದ್ದಳು.
" ಏನೇ ಇದು ನಿನ್ನ ಅವತಾರ !! " ಎನ್ನುತ್ತಲೇ ರೂಮಿನೊಳಕ್ಕೆ ಕಾಲಿಟ್ಟಳು ಸ್ಮಿತಾ.
" ಏ ಸ್ಮಿತು ಬಂದ್ಯಾ ನೀನು.. ಬೇಗ ಸೀರೆ ಉಡೋಕೆ ಸಹಾಯ ಮಾಡು.. " ಎನ್ನುತ್ತಾ ನೆಲದ ಮೇಲಿದ್ದ ಸೀರೆಯನ್ನು ಎತ್ತಿ ಸ್ಮಿತಾ ಕೈಗೆ ಕೊಟ್ಟಿದ್ದಳು.
" ಸಹಾಯ ಅಂತ ಏನು ಹೇಳೋದು ಅವನಿ.. ಗೊತ್ತು ನಿನ್ನ ಹಣೆಬರಹ.. ನೀನೇ ಪೂರ್ತಿಯಾಗಿ ಉಡಿಸಿಕೊಡಬೇಕು.. ಅಂತ ಹೇಳು.. " ಎನ್ನುತ್ತಾ ಅವಳಿಗೆ ಸೀರೆ ಉಡಿಸಲು ಶುರು ಮಾಡಿದಳು.
ಅವನಿ ಗೊಂಬೆಯ ತರ ನಿಂತಿದ್ದಳು.
" ಅಲ್ವೇ ಅವನಿ.. ಇದನ್ನೆಲ್ಲಾ ಕಲ್ತೋಬೇಕು.. ಆಮೇಲೆ ಮುಂದೆ ಕಷ್ಟ ಆಗತ್ತೆ.. " ಎನ್ನುತ್ತಾ ಅಂದವಾಗಿ ಸೀರೆ ಉಡಿಸಿದಳು ಸ್ಮಿತಾ.
" ಅವನಿ, ಇವತ್ತು ಬಂದವರನ್ನು ನೀನು ರಿಜೆಕ್ಟ್ ಮಾಡಿದ್ರೆ, ಇಪ್ಪತ್ತೈದು ಕಂಪ್ಲೀಟ್ ಆಗತ್ತೆ.. ಆಮೇಲೆ ಹಾಫ್ ಸೆಂಚುರಿಗೆ ಹತ್ರ ಆಗ್ತೀಯಾ.." ಎಂದು ಅವಳ ಕೂದಲು ಬಾಚುತ್ತಾ ಹೇಳಿದಳು ಸ್ಮಿತಾ.
" ಅಯ್ಯೋ ! ಅದೆಲ್ಲ ಸಾಧ್ಯ ಇಲ್ಲ, ಸ್ಮಿತು .. ಇಪ್ಪತ್ತೈದಕ್ಕೆ ನಾನು ಬೋಲ್ಡ್ ಆಗ್ತಾ ಇದೀನಿ.. " ಎಂದಳು ತಲೆ ಕೂದಲಿಗೆ ಕ್ಲಿಪ್ ಹಾಕಿಕೊಳ್ಳುತ್ತಾ.
" ಯಾಕೆ ? ಮಾವ ಏನು ನಿಂಗೆ ಎಳೆದುಕೊಂಡು ಹೋಗಿ ಮದುವೆ ಮಾಡ್ತಾರಾ.. ನೀನು ಬೇಡ ಅಂದ್ರೆ ಸರಿ ಅಂತ ಹೇಳ್ತಾರೆ.. ಗೊತ್ತಲ್ವಾ.. " ಎಂದ ತಕ್ಷಣ,
" ಈ ಸಲ ಅದೆಲ್ಲ ನಡೆಯಲ್ಲ ಸ್ಮಿತಕ್ಕ..ಅಪ್ಪ ಸ್ಟ್ರಿಕ್ಟ್ ಆಗಿ ವಾರ್ನಿಂಗ್ ಕೊಟ್ಟಿದಾರೆ.. " ಎನ್ನುತ್ತಾ ಅವನಿಯ ತಂಗಿ ಪಾವನಿ ಮಲ್ಲಿಗೆ ಮಾಲೆ ಹಿಡಿದು ರೂಮಿನೊಳಕ್ಕೆ ಬಂದಳು.
" ಯಾಕೆ ನಡೆಯಲ್ಲ.. ಏನು ವಾರ್ನಿಂಗ್ !! " ಎಂದು ಸ್ಮಿತಾ ಆಶ್ಚರ್ಯದಿಂದ ಅವರಿಬ್ಬರನ್ನೇ ನೋಡಿದಾಗ,
" ಈ ಸಲ ಅಕ್ಕ ಏನಾದರೂ ಇವನನ್ನು ರಿಜೆಕ್ಟ್ ಮಾಡಿದರೆ, ಕಿರಣ್ ಬಾವನ ಜೊತೆ ಬೆಂಗಳೂರು ಬಸ್ ಹತ್ತೋಕೆ ರೆಡಿ ಆಗ್ಬೇಕಾಗತ್ತೆ !! " ಎಂದು ನಕ್ಕಳು ಪಾವನಿ.
" ನಿಂಗೆ ನಗು ಬರುತ್ತಿದೆ.. ನನ್ನ ಕಷ್ಟ ನಂಗೆ.. " ಎಂದು ಕಿರಿಕಿರಿಯಿಂದ ಹೇಳಿದಳು ಅವನಿ.
" ಓಹ್ ಹೀಗಾ ಸಮಾಚಾರ !! ಆದ್ರೂ ನಿನ್ನ ಅದೃಷ್ಟನ ಹಣೆಬರಹನಾ.. ಗೊತ್ತಿಲ್ಲ.. ಆ ಜಗಳಗಂಟನೆ ನಿಂಗೆ ಫಿಕ್ಸ್ ಆಗಿದ್ದಾನೆ... ನೋಡು.. " ಎಂದು ನಗಲು ಶುರು ಮಾಡಿದ್ದಳು ಸ್ಮಿತಾ. ಅವನಿಯ ಕೆಂಗಣ್ಣಿನ ನೋಟ ಅವಳ ನಗುವನ್ನು ನುಂಗಿ ಹಾಕಿತ್ತು.
" ಅದೇ ನೋಡು ನಂಗೆ ಉರಿತ ಇರೋದು, ಅವರೆಷ್ಟು ನನ್ನ ಗೋಳು ಹೋಯ್ಕೊಂಡಿದ್ದಾರೆ. ಈ ಅಪ್ಪಾಜಿಗೂ ಅವರೇ ಸಿಗಬೇಕಿತ್ತು. ಅವನರಿಗೂ ಯಾರೂ ಸಿಗಲಿಲ್ಲ ಅನ್ಸತ್ತೆ. ನೋಡೋಕೆ ಬರ್ತೀನಿ ಅಂದುಬಿಟ್ಟಿದ್ದಾರೆ. " ಎಂದು ಮೂಗು ಮುರಿದಳು ಅವನಿ.
" ಅಕ್ಕ ! ಅವರು ಈಗ ಮೊದಲಿನ ತರ ಇಲ್ಲ. ಪಕ್ಕ ಹ್ಯಾಂಡ್ಸಮ್ ಮ್ಯಾನ್ !! ನಾನು ಇನ್ಸ್ಟಾಗ್ರಾಮ್ ಅಲ್ಲಿ ನೋಡಿದೀನಿ..ಆ ಕನ್ನಡಕ ಹಾಕ್ಕೊಂಡು ಅವರು ಕೊಡೋ ಪೋಸ್ ಇದ್ಯಲ್ಲ ..ಅಬ್ಬಾ !! ನೀನು ಇವರನ್ನು ರಿಜೆಕ್ಟ್ ಮಾಡಿದ್ರೆ ಪಕ್ಕ ನಿಂಗೆ ನಷ್ಟ. " ಎಂದು ಅಕ್ಕನ ಮೂತಿಗೆ ಪೌಡರ್ ಬಳಿಯುತ್ತಾ ಹೇಳಿದಳು ಪಾವನಿ.
" ಏಯ್ ಬಾಯಿ ಮುಚ್ಚೆ !! ಅವರು ಹ್ಯಾಂಡ್ಸಮ್ ಆಗಿದ್ದರೆ ಏನು ?? ದೊಡ್ಡ ಜಗಳಗಂಟ. ಈಗ ಅಪ್ಪಾಜಿ ಎದುರಿಗೆ ನಾನೇನಾದ್ರೂ ಹುಯ್ ಅಂದ್ರೆ ಮುಗೀತು.. ಈ ಸಲ ಪಕ್ಕ ಆ ಕಿರಣ್ ಜೊತೆ ನನ್ನ ಗಂಟು ಹಾಕಿ ಬಿಡ್ತಾರೆ.. ಅವನಿಗಿಂತ ಈ ಜಗಳಗಂಟನೆ ವಾಸಿ ಅನ್ಸಿ, ಸೀರೆ ಉಟ್ಟುಕೊಂಡು ಪೋಸ್ ಕೊಡ್ತಾ ಇರೋದು.. " ಎಂದಳು ಅವನಿ.
" ಅಕ್ಕ ಸ್ವಲ್ಪ ಸುಮ್ನೆ ಇರು. ಸೀರೆಗೆಲ್ಲ ಪೌಡರ್ ಆಗತ್ತೆ. ನನ್ನ ಮೇಲೆ ಕೆಂಡ ಕಾರಬೇಡ ಆಮೇಲೆ.. " ಎಂದು ಅವನಿಯನ್ನು ಸುಮ್ಮನಿರಿಸಿದಳು ತಂಗಿ.
ಅವನಿ ಸೀರೆ ಉಟ್ಟು ಕನ್ನಡಿಯ ಮುಂದೆ ನಿಂತಿದ್ದರೂ ಅವಳ ಮನಸು ಮಾತ್ರ ಬೇರೆಲ್ಲೋ ಇತ್ತು. ಎದೆಯಲ್ಲೊಂದು ಹೊಸ ಬಗೆಯ ತಳಮಳ. ಸುಮಾರು ವರ್ಷಗಳ ನಂತರ ಅವನನ್ನು ಮುಖಾಮುಖಿ ನೋಡಬೇಕು ಅಂದಾಗ ಅದೆಂತಹದೋ ಸಂಕೋಚ ಅವಳನ್ನು ಆವರಿಸಿತ್ತು. ಆ ಬಜಾರಿ ಗುಣವೆಲ್ಲಾ ಸದ್ಯಕ್ಕೆ ಮಂಜಿನಂತೆ ಕರಗಿ ಹೋಗಿತ್ತು.
" ಏನೇ ಅವನಿ, ಸುಮ್ಮನೆ ನಿಂತುಬಿಟ್ಟೆ ? ಅಷ್ಟೊಂದು ಟೆನ್ಶನ್ ಮಾಡ್ಕೋಬೇಡ ಮಾರಾಯ್ತಿ !! " ಎಂದು ಸ್ಮಿತಾ ಅವಳ ಹೆಗಲ ಮೇಲೆ ಕೈ ಇಟ್ಟಳು.
" ಸ್ಮಿತಾ... ನನಗೆ ಯಾಕೋ ಒಂತರ ಆಗ್ತಿದೆ. ಕಾಲೇಜಲ್ಲಿ ನಾವು ಕಿತ್ತಾಡಿದ್ದು ಬೇರೆ, ಇವತ್ತು ಅವರು ನನ್ನನ್ನ ' ಹೆಣ್ಣು ' ನೋಡೋಕೆ ಬರ್ತಿರೋದೇ ಬೇರೆ ಅಲ್ವಾ ? " ಎಂದು ಅವನಿ ತಗ್ಗು ಧ್ವನಿಯಲ್ಲಿ ಕೇಳಿದಳು.
" ಏಯ್ ಅವನಿ, ಬಿಡೆ ಮಾರಾಯ್ತಿ. ನೀನು ಯಾಕೆ ತಲೆ ಕೆಡಿಸಿಕೊಳ್ತೀಯಾ ? ನೀನು ಅಷ್ಟೆಲ್ಲಾ ಟೆನ್ಶನ್ ಮಾಡ್ಬೇಡ, ನಿನಗಿಂತ ಮೊದಲು ಅವನೇ ನಿನ್ನನ್ನ ರಿಜೆಕ್ಟ್ ಮಾಡಬಹುದು ಅಲ್ವಾ ? ನೀನು ಎಷ್ಟು ಮೊಂಡು ಅಂತ ಅವನಿಗೆ ಮೊದಲೇ ಗೊತ್ತಿದೆ ! " ಎಂದು ಸಮಾಧಾನ ಮಾಡಿದಳು ಸ್ಮಿತಾ.
ಅದಕ್ಕೆ ಪಾವನಿ ಮಧ್ಯ ಪ್ರವೇಶಿಸಿ, ಮುಸಿಮುಸಿ ನಗುತ್ತಾ,
" ಅಯ್ಯೋ ಸ್ಮಿತಕ್ಕ, ಸಾಧ್ಯವೇ ಇಲ್ಲ ! ಈವರೆಗೆ ಬಂದ ೨೪ ಗಂಡುಗಳು ಅಕ್ಕನ ಮೊಂಡು ಹಠ ನೋಡಿ ಹೆದರಿ ಓಡಿ ಹೋದ್ರು. ಆದ್ರೆ ಈ ಆದಿತ್ಯ ಮಾಸ್ಟರ್ ಬಗ್ಗೆ ನಿಂಗೆ ಗೊತ್ತು ತಾನೆ, ಅವನಿಗೆ ಗೊತ್ತಲ್ವಾ ಅಕ್ಕನ್ನ ಹೇಗೆ ಹ್ಯಾಂಡಲ್ ಮಾಡಬೇಕು ಅಂತ. ಅಕ್ಕನ ಜಗಳಕ್ಕೆಲ್ಲಾ ಇವನು ತಲೆ ಬಿಸಿ ಮಾಡಿಕೊಳ್ತಾನಾ, ಅಕ್ಕನ ತಲೆಯ ಸ್ಕ್ರೂ ಟೈಟ್ ಮಾಡೋಕೆ, ಅಕ್ಕನ ಒರಟು ಬುದ್ಧಿಗೆ ಅವನೇ ಸರಿ ಬಿಡು ! " ಎಂದಳು.
ಪಾವನಿಯ ಮಾತಿಗೆ ಅವನಿ ಏನೂ ಉತ್ತರ ಕೊಡಲಿಲ್ಲ. ಅವಳ ಮನಸ್ಸಿನಲ್ಲಿ ಈಗ ಅಪ್ಪಾಜಿ ಹೇಳಿದ ಮಾತುಗಳು ಓಡುತ್ತಿದ್ದವು.
' ಆದಿತ್ಯ ತುಂಬಾ ಒಳ್ಳೆ ಹುಡುಗ ಅಂತ ಊರವರೆಲ್ಲ ಹೇಳ್ತಿದ್ದಾರೆ ಅವನಿ, ಅವನಿಗೆ ಅಮ್ಮನ ಮೇಲೆ ಅತೀವ ಗೌರವ ' ಎಂದು ಅಪ್ಪ ಹೇಳಿದ ಮಾತುಗಳು ಅವಳ ಕಿವಿಯಲ್ಲಿ ಗುಂಯ್ ಎನ್ನುತ್ತಿದ್ದವು.
ಅಪ್ಪಾಜಿಗೆ ಆದಿತ್ಯನ ಮೇಲೆ ಅಷ್ಟೊಂದು ನಂಬಿಕೆ ಹೇಗೆ ಬಂತೋ ಅವಳಿಗೆ ಅರ್ಥವಾಗುತ್ತಿರಲಿಲ್ಲ.
ಒಂದೆಡೆ ಅತ್ತೆ ಮಗ ಕಿರಣ್... ಅವಳ ಹಿಂದೆ ಹುಚ್ಚನಂತೆ ಬಿದ್ದು ಪ್ರೀತಿ ಪ್ರೀತಿ ಅಂತ ಪೀಡಿಸುತ್ತಿದ್ದ. ಅವನ ಆ ಅತಿಯಾದ ಸಕ್ಕರೆ ಮಾತಿನ ಪ್ರೀತಿಗಿಂತ, ಈ ಆದಿತ್ಯನ ನೇರವಾದ ಮಾತು, ಆ ಒರಟುತನವೇ ವಾಸಿ ಅನ್ಸುತ್ತೆ ಅಂತ ಅವಳಿಗೆ ಒಂದು ಕ್ಷಣ ಅನ್ನಿಸಿತು.
ಕಿರಣ್‌ನ ಆ ನಯವಂಚಕ ನಡವಳಿಕೆಗಿಂತ, ಸದಾ ಜಗಳವಾಡಿದರೂ ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದ ಆದಿತ್ಯನೇ ಮೇಲೆನೋ ಎಂಬ ಸಣ್ಣ ಆಲೋಚನೆ ಅವಳ ಮನಸ್ಸಿನಲ್ಲಿ ಮೂಡಿತು.
ಆದರೆ ಅವಳಿಗೆ ಇನ್ನೂ ಸ್ಪಷ್ಟತೆ ಇರಲಿಲ್ಲ. ಇವತ್ತಿನ ಭೇಟಿ ಏನಾಗುತ್ತೋ ? ಅವನು ನನ್ನನ್ನ ಹೇಗೆ ನೋಡ್ತಾನೋ ? ಎಂಬ ಕನ್ಫ್ಯೂಷನ್‌ನಲ್ಲಿ ಅವಳು ತನ್ನ ಕೈಬೆರಳುಗಳನ್ನೇ ಹೊಸೆಯುತ್ತಿದ್ದಳು.
ಅಷ್ಟರಲ್ಲಿ ಕೆಳಗಿನಿಂದ ಶಾರದಮ್ಮನ ಧ್ವನಿ ಕೇಳಿಸಿತು.
" ಪಾವನಿ, ಅವಳನ್ನ ಕರ್ಕೊಂಡು ಬನ್ನಿ... ಎಲ್ಲ ಬಂದಿದ್ದಾರೆ "
( ಮುಂದುವರೆಯುವುದು 🌱 )
----------------------------🌱----------------------------
ಕೆಲವೊಮ್ಮೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಅಡಗಿದ್ದ ಯೋಚನೆಗಳು ಇದ್ದಕ್ಕಿದ್ದಂತೆ ಪುಟಿದೇಳುತ್ತವೆ. ಗೀಚೋಣ ಅನಿಸಿಬಿಡುತ್ತದೆ.
ರೈಲಿನಲ್ಲಿ ಸುದೀರ್ಘ ಪಯಣವಿತ್ತು, ಆದರೆ ಕಣ್ಣಲ್ಲಿ ನಿದ್ರಾ ದೇವಿಯ ಸುಳಿವೇ ಇರಲಿಲ್ಲ. ನೆನಪುಗಳ ಹಾದಿ ಹಿಡಿಯಿತು.
ಆ ಪಯಣದ ಮೌನದಲ್ಲಿ ಹುಟ್ಟಿದ್ದೇ "ನನ್ನವನೀ". ಕಥೆಯ ಪೂರ್ತಿ ಚಿತ್ರಣ ತಲೆಯಲ್ಲಿದೆ, ಅದನ್ನು ಇವತ್ತಲ್ಲ ನಾಳೆ ಖಂಡಿತವಾಗಿಯೂ ಪೂರ್ಣಗೊಳಿಸುತ್ತೇನೆ ಎಂಬ ಭರವಸೆ ಇದೆ.
ಸದ್ಯಕ್ಕೆ ಮನಸ್ಸಿನ ಸಮಾಧಾನಕ್ಕಾಗಿ ಬರೆದ ಈ ಸಣ್ಣ ಪ್ರಯತ್ನ ಇಲ್ಲಿದೆ. ಸಮಯವಿದ್ದರೆ ಓದಿ ನಿಮ್ಮ ಅನಿಸಿಕೆ ತಿಳಿಸಿ.
ಹಾರೈಕೆ ಇರಲಿ. ❤️