The effect of prestige is disastrous books and stories free download online pdf in Kannada

ಪ್ರತಿಷ್ಠೆ ಯ ಪರಿಣಾಮ ಅನಾಹುತ

ಪ್ರತಿಷ್ಠೆ ಯ ಪರಿಣಾಮ ಅನಾಹುತ

ರಾತ್ರಿ ಒಂಭತ್ತು ಗಂಟೆ ಸಮಯ. ಹುಣ್ಣಿಮೆಯ ಸುಂದರವಾದ ಮನಮೋಹಕ ಬೆಳದಿಂಗಳು. ರಾಘವಪುರ್ ಲಾಯರ್ ಸೇತುರಾಮ್ ಅವರ ಮನೆಯ ವಿಶಾಲವಾದ ಮಾಳಿಗೆ ಮೇಲೆ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ. ಅವರ ಏಕೈಕ ಪುತ್ರಿ ಶ್ರೇಯಾ ವಧು ಹಾಗೂ ರಾಘವಪುರ್ ಮಾಜಿ ಶಾಸಕರು ಗೋಪಿನಾಥ್ ಹಾಗೂ ತ್ರಿವೇಣಿಯವರ ಪುತ್ರ ಅಭಿಷೇಕ್ ವರ. ಸ್ವತಃ ಸೇತುರಾಮ ಮತ್ತು ಅವರ ಪತ್ನಿ ಸತ್ಯಭಾಮಾ ಸ್ವಾಗತ ಮಾಡಲು ಮುಖ್ಯ ದ್ವಾರ ದಲ್ಲಿ ನಿಂತು ಪ್ರತಿಯೊಬ್ಬರಿಗೂ ಮಾಳಿಗೆ ಗೆ ಹೋಗುವ ದಾರಿ ತೋರಿಸಿದರು. ಸಮಯಕ್ಕೆ ಸರಿಯಾಗಿ ಎಲ್ಲರೂ ಆಗಮಿಸಿದರು.

"ನಮಸ್ಕಾರ, ಗೋಪಿನಾಥ್ ರಾಯರೇ, ಸ್ವಾಗತ. ಬಲ ಭಾಗದ ಕಡೆ ಇರುವ ಮೆಟ್ಟಲು ಮೇಲೆ ಹೋಗಬೇಕು," ಎಂದರು ಸೇತುರಾಮ.

ಅದರಂತೆ ಸತ್ಯಭಾಮಾ ಅವರು ತ್ರಿವೇಣಿ ಅವರಿಗೆ ಸ್ವಾಗತ ಕೋರಿದರು. ಇತರ ಅತಿಥಿಗಳನ್ನು ಆದರದಿಂದ ಬರಮಾಡಿ ಕೊಂಡರು. ಭಾವಿ ಬೀಗರು ಮೆಟ್ಟಲು ಹತ್ತಬೇಕು ಎನ್ನುವದರಲ್ಲಿ ಅವರ ಎಡಭಾಗ ದಿಂದ ಒಂದು ಕರಿ ಬೆಕ್ಕು ಕರ್ಕಶ ಧ್ವನಿಯಿಂದ ಕೂಗುತ್ತ ಹಾದು ಹೋಯಿತು. ಅಪಶಕುನ ದಲ್ಲಿ ನಂಬಿಕೆ ಇರುವ ಗೋಪಿ ನಾಥ್ ಅವರ ಮುಖದಮೇಲೆ ಆಗಿರುವ ಬದಲಾವಣೆ ಗಮನಿಸಿದ ಪತ್ನಿ ತ್ರಿವೇಣಿ ಪತಿಯ ದುಗುಡ ಅರ್ಥ ಮಾಡಿಕೊಂಡು ಕೈ ಸನ್ನೆ ಮಾಡಿ ಸುಮ್ಮನೆ ಮೇಲೆ ನಡೆಯಿರಿ ಎಂದಳು. ಮೇಲೆ ಹೋಗಿ ಆಸನದ ಮೇಲೆ ಅವರು ಕುಳಿತ ಕೂಡಲೇ ಹೊರಗಡೆ ರಸ್ತೆ ಮೇಲೆ ನಾಯಿಗಳ ಗುಂಪು ಒಂದೇ ಸಮನೆ ಅಳುವ ಧ್ವನಿ ಕೇಳಿಸಿತು.

ಎಲ್ಲ ಅತಿಥಿಗಳು ತಮ್ಮ ತಮ್ಮ ಆಸನದಮೇಲೆ ಕುಳಿತರು. ಇನ್ನೇನು ಸ್ವಾದಿಷ್ಟ ಅಡುಗೆ ಪದಾರ್ಥ ಗಳು ಮಾಳಿಗೆ ಮೇಲೆ ಬರಬೇಕು ಎನ್ನುವ ಸಮಯದಲ್ಲಿ ಅನಿರೀಕ್ಷಿತವಾಗಿ ಆಕಾಶದಲ್ಲಿ ಮೋಡ ಕವಿದ ವಾತಾವರಣ, ಗುಡುಗು, ಮಿಂಚು ಆರ್ಭಟ ದಿಂದ ಧಾರಾಕಾರ ಮಳೆ ಸುರಿಯಿತು. ವಿದ್ಯುಕ್ಷಕ್ತಿ ಸರ ಬರಾಜು ಸ್ಥಗಿತ ವಾಯಿತು. ಪ್ರಕೃತಿ ಸೌಂದರ್ಯ ಬೆಳದಿಂಗಳು ಮಾಯವಾಗಿ ಎಲ್ಲೆಡೆ ಅಂಧ:ಕಾರ. ಮಾಳಿಗೆ ಮೇಲೆ ಇರುವ ಚಿಕ್ಕ ಶೆಡ್ ಒಳಗಡೆ ಎಲ್ಲರೂ ನಿಲ್ಲುವಾಗ ಮಕ್ಕಳಿಗೆ ವೃದ್ಧರಿಗೆ ತೊಂದರೆ ಆಯಿತು. ಪರ್ಯಾಯ ದೀಪದ ವ್ಯವಸ್ಥೆ ಆಗುವದಕ್ಕೆ ಐದು ನಿಮಿಷ. ಚಿಕ್ಕದಾದ ಶೆಡ್ ನಲ್ಲಿ ಎಲ್ಲರಿಗೂ ಆಸರೆ.

ಸುದೈವಕ್ಕೆ ಅತಿಥಿಗಳಲ್ಲಿ ಸುದರ್ಶನ್ ಎನ್ನುವ ಯುವ ಡಾಕ್ಟರ್ ಇದ್ದರು. ಅವರು ಸಣ್ಣ ಪುಟ್ಟ ಗಾಯಗಳು ಗಳಿಗೆ ತಮ್ಮ ಬ್ಯಾಗ್ ನಲ್ಲಿ ಇರುವ ನೋವು ನಿವಾರಣೆ ಮಾತ್ರೆ ಕೊಡುವದಲ್ಲದೆ ಕೆಲವರಿಗೆ ಆಯಿಂಟ್ ಮೆಂಟ್ ಹಚ್ಚಿದರು. ಶ್ರಮ ವಹಿಸಿ ಸುಂದರವಾದ ವಧು ವರ ಕೂಡುವ ಕಟ್ಟೆ ಅದರ ಹಿಂದೆ ಆಕರ್ಷಕ ಬ್ಯಾನರ್ ಅದರಲ್ಲಿ ದೊಡ್ಡದಾದ ಅಕ್ಷರದಲ್ಲಿ ಶ್ರೇಯಾ ಹಾಗೂ ಅಭಿಷೇಕ್ ಮದುವೆ ನಿಶ್ಚಯ ಸಮಾರಂಭ ಅದರ ಕೆಳಗೆ ದಿನಾಂಕ ಹಾಗೂ ಮುಂದುಗಡೆ ಅತಿಥಿಗಳಿಗೆ ಆಸನ ವ್ಯವಸ್ಥೆ ಎಲ್ಲವನ್ನೂ ಹಾಳು ಮಾಡಿದ ಮಳೆರಾಯ.

ಐದು ನಿಮಿಷಗಳಲ್ಲಿ ಸೇತುರಾಮ್ ಅವರು ಎಲ್ಲರಿಗೂ ಕೆಳಗೆ ಊಟಕ್ಕೆ ಕೂಡುವ ವ್ಯವಸ್ಥೆ ಮಾಡಿದರು. ಮದುವೆ ನಿಶ್ಚಯ ಶ್ರೀಕಾಂತ್ ಪುರೋಹಿತ ಅವರಿಂದ ಶಾಸ್ತ್ರೀಯ ವಾಗಿ ಸಂಪನ್ನ ವಾಯಿತು. ಊಟವಾದ ಮೇಲೆ ಅತಿಥಿಗಳು ತಾಂಬೂಲ ಸ್ವೀಕರಿಸಿ ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು. ತುಂಬಿದ ಮನೆ ಬಿಕೋ ಎನ್ನುವ ಹಾಗಾಯಿತು.

ಅದೇ ತಾನೇ ಊಟ ಮುಗಿಸಿದ ಸೇತುರಾಮ್, ಪತ್ನಿ ಹಾಗೂ ಮಗಳು ಸೋಫಾದ ಮೇಲೆ ಕುಳಿತು ವಿಶ್ರಾಂತಿ ತೆಗೆದು ಕೊಳ್ಳುವಾಗ ಮನೆಯಲ್ಲಿ ಕೆಲಸ ಮಾಡುವ ಪಾಲಾಕ್ಷಮ್ಮ ಓಡುತ್ತ ಬಂದು,

"ಅಮ್ಮಾವರೇ, ಅಮ್ಮಾವರೇ, ಭಾವಿ ಬೀಗರು ಮೆಟ್ಟಲು ಹತ್ತುವಾಗ ಕರಿ ಬೆಕ್ಕು ಹಾದು ಹೋಗಿದ್ದು, ನಾಯಿಗಳು ಅಳುವ ಅಪಶಕುನಗಳು ಆಗಿರುವದಕ್ಕೆ ಅವರು ಬೇಜಾರು ಮಾಡಿಕೊಂಡರು. ಮದುವೆ ಮಾಡುವದು ಬೇಡ ಎಂದು ಮಾತಾಡುವದನ್ನು ನಾನು ಕೇಳಿದೆ," ಎಂದಳು.

ಆಕಾಶವೇ ಕಳಚಿ ಬಿದ್ದ ಹಾಗಾಗಿ ಮುಂದೇನಪ್ಪ ಎನ್ನುವ ಚಿಂತೆ ಸೇತುರಾಮ್ ಅವರಿಗೆ ಕಾಡಿದರೆ, ಸತ್ಯಭಾಮಗೆ ಮಗಳ ಭವಿಷ್ಯದ ಚಿಂತೆ. ಆದರೆ ಮಗಳು ಶ್ರೇಯಾ ನಿಶ್ಚಿ0ತೆ ಯಿಂದ ಇದ್ದಳು.

"ಇಷ್ಟೇನಾ? ಅಮ್ಮ, ಅಪ್ಪ ನೀವು ತಲೆ ಕೆಡಿಸಿಕೊಳ್ಳುವ ಕಾರಣ. ನಿಮಗೆ ಗೊತ್ತಿರುವಂತೆ ನಾನು ಹಾಗೂ ಅಭಿಷೇಕ್ ಇಬ್ಬರೂ ಬಾಲ್ಯ ಸ್ನೇಹಿತರು. ಶಾಲೆ, ಕಾಲೇಜ್ ನಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದವರು. ನನ್ನ ರೂಪ, ಲಾವಣ್ಯ, ಬುದ್ಧಿವಂತಿಕೆ ನೋಡಿ ನಿನಗೆ ಮನಸಾರೆ ಪ್ರೀತಿಸುವೆ ಮದುವೆ ಆಗೋಣ ಎಂದು ನನಗೆ ದುಂಬಾಲು ಬಿದ್ದ. ಪ್ರಿಯಕರ, ಪ್ರಿಯತಮೆಗೆ ಸಿನೆಮಾದಲ್ಲಿ ಕೇಳುವ ಹಾಗೆ ನಟನೆ ಮಾಡಿದ. ಆಗ ನಾನು ಅವನಿಗೆ ಈ ಸಂಭಂದ ಬೇಡ ಎಂದೆ. ಕಾರಣ ನಮ್ಮ ಅಂತಸ್ತು ಅವನ ಅಂತಸ್ಸು ಅಜಗಜಾ0ತರ ವ್ಯತ್ಯಾಸ. ಅವನ ಅಪ್ಪ ರಾಜಕಾರಣಿ. ಮುಂದಿನ ಮೂರು ಪೀಳಿಗೆ ಕುಳಿತು ತಿನ್ನವಷ್ಟು ಗಳಿಸಿದ್ದಾರೆ. ಅಭಿಷೇಕ್

ಬಿ ಇ ಸಿವಿಲ್ ಇದ್ದು ಕಂಟ್ರಾಕ್ಟರ್ ಆಗುವ ಇಚ್ಛೆ. ನಾನು ಬಿ ಇ ಅರ್ಕಿಟೆಕ್ಚರ್ ಇರು ವದರಿಂದ ಒಳ್ಳೆ ಜಾಬ್ ಮಾಡುವೆ ಎಂದೆ. ಮದುವೆ ವಿಷಯದ ಮೇಲೆ ಅನೇಕ ಸಲ ಇಬ್ಬರಲ್ಲಿ ಸಿರಿಯಸ್ ಆಗಿ ಚರ್ಚೆ ಆಯಿತು. ಪ್ರಸ್ತುತ ಅವನ ಅಪ್ಪ ಅಮ್ಮ ಈ ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದರೆ ಮುರಿಯಲು ಬಿಡಿ," ಎಂದಳು ನಗುತ್ತ.

ಆಗ ಸೇತುರಾಮ ಮಗಳ ಧೈರ್ಯ ಗಮನಿಸಿ,

"ಭೇಷ್, ಮಗಳೇ," ಎಂದರು.

"ಶ್ರೇಯಾ, ನೀನು ನನ್ನ ಮಗಳು. ಸೇತುರಾಮ್ ಅವರ ಜೊತೆಗೆ ನನ್ನ ಮದುವೆ ನಿಶ್ಚಯ ಮಾಡುವಾಗ ನಾನು ಏನು ಮಾಡಿದೆ ಗೊತ್ತೇ?"

"ಅಮ್ಮ ಆ ಪ್ರಸಂಗ ಹೇಳುವದು ಇದು ಎಷ್ಟನೇ ಸಲ? ನನಗೆ ಬೇಜಾರು ಆಗುವದಿಲ್ಲ ಮತ್ತೊಮ್ಮೆ ಹೇಳು," ಎಂದಳು.

ಎಲ್ಲರಿಗೂ ನಗು ತಡೆಯುವದು ಆಗಲಿಲ್ಲ. ಅವರ ಜೊತೆಗೆ ಪಾಲಾಕ್ಷಮ್ಮ ಬಿದ್ದು ಬಿದ್ದು ನಕ್ಕಳು.

******

ಮದುವೆ ನಿಶ್ಚಯ ಆಗಿ ಮೂರು ತಿಂಗಳಾದರೂ ಶ್ರೇಯಾ ಹಾಗೂ ಅಭಿಷೇಕ್ ನಡುವೆ ಮೊಬೈಲ್ ಸಂಭಾಷಣೆ ಆಗಲಿ, ಭೇಟಿ ಆಗುವದಾಗಲಿ ಆಗಲಿಲ್ಲ. ಈ ಮಧ್ಯ ಎರಡೂ ಕುಟುಂಬಗಳ ಮಧ್ಯ ಆಗಿರುವ ಬೆಳವಣಿಗೆ ಗಳು ಯಾರಿಗೂ ಗೊತ್ತಾಗದೇ ಹೋಯಿತು.

ಒಂದು ದಿವಸ ಗೋಪಿನಾಥ್ ಅವರ ಮನೆಯಲ್ಲಿ ಬಿರುಸಿನ ಸಂಭಾಷಣೆ.

"ಮಮ್ಮಿ, ಡ್ಯಾಡಿ, ನನ್ನ ಮಾತು ಸರಿಯಾಗಿ ಕೇಳಿ. ಮದುವೆ ನಿಶ್ಚಯ ದಿವಸ ಆದ ಅಪಶಕುಗಳಿಗೂ ನನ್ನ ಮದುವೆಗೂ ಏನೂ ಸಂಭಂದ ಇಲ್ಲ. ಈಗ ನಾವಿರುವದು ಆಧುನಿಕ ಯುಗ. ಮುಢ ನಂಬಿಕೆಗಳನ್ನು ಯಾರೂ ನಂಬುವದಿಲ್ಲ. ಅದಕ್ಕಾಗಿ ಮದುವೆ ಕ್ಯಾನ್ಸಲ್ ಮಾಡಬೇಡಿ." ಎಂದ ಅಂಗಲಾಚಿ ಬೇಡಿಕೊಂಡ.

"ಅಭಿ ನೀನು ಚಿಕ್ಕವನು. ಹಿರಿಯರು ಹೇಳಿದ ಮಾತು ಕೇಳುವದು ನಿನ್ನ ಕರ್ತವ್ಯ. ಪ್ರೀತಿ, ಪ್ರೇಮ ಇದು ಯಾವುದೂ ನಾವು ಮಾಡಿಲ್ಲ. ಹಿರಿಯರ ಮಾತು ನಮಗೆ ವೇದ ವಾಕ್ಯ. ನಿನಗೆ ಒಳ್ಳೆಯದು ಆಗುವದಕ್ಕೆ ನಾವು ಈ ಮದುವೆ ಬೇಡ. ನಮ್ಮ ಪ್ರತಿಷ್ಠೆ ಗೆ ಧಕ್ಕೆ ಬರಬಾರದು. ನೀನು ಒಪ್ಪುವ ಬೇರೆ ಹುಡುಗಿ ನೋಡಿದ ರಾಯಿತು,"ಎಂದರು ಗೋಪಿನಾಥ್.

ಒಳಗಿದ್ದ ತ್ರಿವೇಣಿ ಹೊರಗೆ ಬಂದು,

"ಅಭಿ, ನಿನ್ನ ಅಪ್ಪ ಈ ಸಲ ಚುನಾವಣೆ ಯಲ್ಲಿ ಗೆದ್ದರೆ ಮಂತ್ರಿ ಆಗುವದು ಖಂಡಿತ. ನಾನು ಸಮಾಜ ಕಾರ್ಯಕರ್ತೆ ಇರುವದರಿಂದ ನನಗೂ ಒಳ್ಳೆಯ ಸ್ಥಾನ ಮಾನ ಸಿಗುವದು. ಆಗ ನಮಗೆ ಸರಿ ಸಮಾನ ಇರುವ ಹುಡುಗಿಯನ್ನು ಹುಡುಕಿ ನಿನ್ನ ಮದುವೆ ಆಗು. ಶ್ರೇಯಾಳನ್ನು ಮರೆತು ಬಿಡು," ಎಂದಳು.

"ಹೌದು, ರಾಜ್ಯ ದಲ್ಲಿ ಚುನಾವಣೆ ನಾಲ್ಕು ತಿಂಗಳು ನಂತರ ದಿನಾಂಕ ಘೋಷಣೆ ಆಗಿರುವದರಿಂದ ನನಗೆ ಈ ಸಲ ಗೆಲ್ಲುವ ಅವಕಾಶ ಇದೆ. ಅಲ್ಲದೆ ನಾನು ಮಂತ್ರಿ ಆಗುವ ಎಲ್ಲ ಸಾಧ್ಯತೆ ಇದೆ. ಈಗ ಪ್ರತಿಷ್ಠೆಯನ್ನು ನೋಡಬೇಕು. ಸರಿಯಾದ ಸಮಯ ಬರುವವರೆಗೆ ಸುಮ್ಮನೆ ಇರು."

"ಅಪ್ಪ ನಿಮಗೆ ಗೆಲವು ತರಲು ನಾನು ಹಗಲು ರಾತ್ರಿ ಶ್ರಮ ಪಡುತ್ತೇನೆ. ನನ್ನ ಮದುವೆ ಶ್ರೇಯಾ ಜೊತೆಗೆ ಮಾತ್ರ ಆಗದೇ ಹೋದರೆ ಆಜನ್ಮ ಬ್ರಹ್ಮಚಾರಿ ಆಗುವೆ. ಶ್ರೇಯಾ ಜೊತೆಗೆ ಮದುವೆ ಆದರೆ ಇಬ್ಬರೂ ಕೂಡಿ ನಿಮ್ಮ ಪರವಾಗಿ ಪ್ರಚಾರ ಮಾಡುತ್ತೇವೆ."

ಗೋಪಿನಾಥ್ ಹಾಗೂ ಆತನ ಪತ್ನಿ ಸಿಟ್ಟಿನಿಂದ ಎದ್ದು ಹೋದರು. ಇದರಿಂದ ಅಭಿಷೇಕ್ ನಿಗೆ ತುಂಬಾ ಅಸಮಾಧಾನವಾಗಿ ಮುಂದೆ ಏನು ಮಾಡಬೇಕು ಎನ್ನುವ ಚಿಂತೆ ಕಾಡಿತು.

******

ಆರು ತಿಂಗಳು ಕಳೆಯಿತು.

ಗೋಪಿನಾಥ್ ಶಾಸಕರಾಗಿ ಚುನಾಯಿತ ರಾದರು. ಮುಂದೆ ಪಶು ಸಂಗೋಪನೆ ಸಚಿವರಾದರು. ತ್ರಿವೇಣಿಯವರು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಆದರು. ಇಬ್ಬರೂ ತಮ್ಮ ಕೆಲಸದ ಒತ್ತಡದಲ್ಲಿ ಒಬ್ಬನೇ ಮಗ ಅಭಿಷೇಕ್ ನ ಕಡೆ ಗಮನ ಹರಿಸುವದು ಆಗಲೇ ಇಲ್ಲ. ಅಭಿಷೇಕ್ ನಿಗೆ ಒಂದು ಕಡೆ ಅಪ್ಪ ಸಚಿವರಾಗಿರುವದು, ಅಮ್ಮ ನಿಗಮದ ಅಧ್ಯಕ್ಷೆ ಆಗಿರುವದು ಅವನಿಗೆ ಬಹಳ ಸಂತೋಷ ವಾಯಿತು. ಇನ್ನೊಂದು ಕಡೆ ಶ್ರೇಯಾ ಜೊತೆಗೆ ಮದುವೆ ಗ್ರೀನ್ ಸಿಗ್ನಲ್ ಕೊಡದೆ ಇರುವದು ಅವನನ್ನು ಚಿಂತೆಯಲ್ಲಿ ಮುಳುಗಿಸಿತು.

ಅಭಿಷೇಕ್ ನಿಂದ ಮದುವೆ ಬಗ್ಗೆ ಪ್ರತಿಕ್ರಿಯೆ ಬರದೇ ಇರುವದರಿಂದ ಶ್ರೇಯಾ ತನ್ನ ಬಾಳ ಸಂಗಾತಿ ಯನ್ನು ತಾನೇ ಆಯ್ಕೆ ಮಾಡಿ ಕೊಂಡಳು. ಅವನು ಬೇರೆ ಯಾರೂ ಇರದೇ ಅಂದು ಬೆಳದಿ0ಗಳು ಭೋಜನಕ್ಕೆ ಬಂದ ಗಾಯ ಆದವರಿಗೆ ಚಿಕಿತ್ಸೆ ಮಾಡಿದ ಮಕ್ಕಳ ರೋಗ ತಜ್ಞ ಡಾಕ್ಟರ್ ಸುದರ್ಶನ್, ನಿಶ್ಚಯ ಕಾರ್ಯಕ್ರಮ ನಡೆಸಿಕೊಟ್ಟ ಶ್ರೀಕಾಂತ್ ಪುರೋಹಿತ ಅವರ ಮಗ. 'ರಘು ಮಕ್ಕಳ ಆಸ್ಪತ್ರೆ' ಕಳೆದ ಎರಡು ವರ್ಷದಿಂದ ಗಾಂಧಿ ಸರ್ಕಲ್ ರಾಘವಪುರ್ ಇದರ ಯಜಮಾನ. ಶ್ರೇಯಾ ಹಾಗೂ ಸುದರ್ಶನ್ ಅವರ ಕಂಕಣಬಲ ಕೂಡಿ ಬಂದು ಶುಭ ದಿವಸ ಸರಳ ಸಮಾರಂಭ ದಲ್ಲಿ ಮದುವೆ ಆಗಿ ಪತಿ ಪತ್ನಿ ಆದರು.

ರಾಘವಪುರ್ ಚಿಕ್ಕ ಊರು ಇರುವದರಿಂದ ಇವರು ಮದುವೆ ಆಗಿರುವದು ಅಭಿಷೇಕ್ ಗೆ ತಿಳಿಯುವದು ತಡ ವಾಗಲಿಲ್ಲ. ಈ ಸಮಾಚಾರ ತಿಳಿದ ಅವನಿಗೆ ಶಾಕ್ ಆಗಿ ನೆಲದಮೇಲೆ ಕುಸಿದು ಬಿದ್ದ. ಅಲ್ಲಿಯೇ ಇದ್ದ ಗೋಪಿನಾಥ್ ಅವರ ನಂಬಿಕಸ್ತ ಪರ್ಸ್ ನಲ್ ಸೆಕ್ರೆಟರಿ ಮಂಜುನಾಥ್ ನೋಡಿ ಗಾಬರಿ ಆಗಿ ಪಕ್ಕದಲ್ಲಿ ಇರುವ ಡಾಕ್ಟರ್ ಅವರನ್ನು ಕರೆದುಕೊಂಡು ಬಂದರು. ಅವರು ಅಭಿಷೇಕ್ ನ ಹಾರ್ಟ್ ಬಿಟಿಂಗ್, ಟೆಂಪರೇ ಚರ್ ಹಾಗೂ ಬಿ ಪಿ ಚೆಕ್ ಮಾಡಿ ಗಾಬರಿ ಆಗಿ ಬೇಗನೆ ಬೆಂಗಳೂರು ಗೆ ಶಿಫ್ಟ್ ಮಾಡಿ ಎಂದರು. ಆ ಸಮಯ ದಲ್ಲಿ ಗೋಪಿನಾಥ್ ಅವರು ವಿಧಾನಸಭೆ ಕಲಾಪ ದಲ್ಲಿ ಇದ್ದರೇ ತ್ರಿವೇಣಿ ಅವರು ಮಹತ್ವದ ಮೀಟಿಂಗ್ ನಲ್ಲಿ ಇದ್ದು ಯಾವ ದೂರವಾಣಿ ಕರೆ ಇಬ್ಬರೂ ಸ್ವೀಕರಿಸುತ್ತಿದ್ದಿಲ್ಲ. ಮಂಜುನಾಥ್ ತನ್ನ ಸಾಹೇಬರಿಗೆ ಕಾಲ್ ಮಾಡಿದ. ಅವರು ಉತ್ತರ ಕೊಡಲಿಲ್ಲ. ಬೇಸತ್ತು ಕೊನೆಗೆ ಅಮ್ಮಾವರಿಗೆ ಮೇಲಿಂದ ಮೇಲೆ ಕಾಲ್ ಮಾಡಿದ. ಅಮ್ಮಾವರು ಕೋಪದಿಂದ ಮಂಜುನಾಥ್ ಗೆ ಹಿಗ್ಗಾ ಮುಗ್ಗಾ ಬಯ್ದು ವಿಷಯ ಕೇಳದೆ ಡಿಸ್ಕನೆಕ್ಟ್ ಮಾಡಿದರು. ಆದರೂ ಅವನು ಕರೆಗೆ ಉತ್ತರ ಕೊಡುವ ವರೆಗೆ ಬಿಡಲಿಲ್ಲ.

"ಏನಯ್ಯ ಬೇಗ ಹೇಳು. ಅಮ್ಮಾವರೇ, ಅಭಿಷೇಕ್ ಆರೋಗ್ಯ ಗಂಭೀರ ವಾಗಿದೆ. ಬೆಂಗಳೂರು ಶಿಫ್ಟ್ ಮಾಡಲು ಡಾಕ್ಟರ್ ಹೇಳಿದ್ದಾರೆ."

ಆ ಸಮಯ ತ್ರಿವೇಣಿ ಗಾಬರಿ ಆಗಿ ಮೀಟಿಂಗ್ ಸ್ಥಗಿತ ಗೊಳಿಸಿ ಮನೆಗೆ ಬರಲು ಎರಡು ಗಂಟೆ ಆಯಿತು. ವಿಷಯ ತಿಳಿದು ತ್ರಿವೇಣಿ ಅವರು ಆಂಬುಲೆನ್ಸ್ ಮಾಡಿ ಬೆಂಗಳೂರು ಹೊರಟು ಗೋಪಿನಾಥ್ ಅವರಿಗೆ ಫೋರ್ಟಿಸ್ ಆಸ್ಪತ್ರೆ ಬನ್ನೇರುಘಟ್ಟ ಬರಲು ಹೇಳಿದರು. ಬೆಂಗಳೂರು ಮುಟ್ಟಿದಾಗ ರಾತ್ರಿ ಹತ್ತು ಗಂಟೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಆದಕೂಡಲೇ ICU ದಲ್ಲಿ ಶಿಫ್ಟ್ ಆಯಿತು. ಆಗಲೇ ಗೋಪಿನಾಥ್ ಅಲ್ಲಿಗೆ ಬಂದು ದಾರಿ ಕಾಯುತ್ತಿದ್ದರು. ರಾತ್ರಿ ಸುಮಾರು ಹನ್ನೆರಡು ಗಂಟೆ ಗೆ ಅಭಿಷೇಕ್ ಬಾರದ ಲೋಕಕ್ಕೆ ಹೋಗಿದ್ದ. ಗೋಪಿನಾಥ್, ತ್ರಿವೇಣಿ ಅವರಿಗೆ ಅತೀವ ದು:ಖದಿಂದ ಮೂಢ ನಂಬಿಕೆ ನೆಪ ಮಾಡಿ ಪ್ರತಿಷ್ಠೆಗಾಗಿ ಮಗನ ನ್ನು ಕಳೆದು ಕೊಂಡಿರುವದಕ್ಕೆ ತುಂಬಾ ಪಶ್ಚಾತ್ತಾಪ ಪಟ್ಟರು. ಮಗನ ಇಚ್ಛೆಯಂತೆ ನಡೆಯಲಿಲ್ಲ ಎನ್ನುವ ಕೊರಗು ಅವರನ್ನು ಜೀವನ ಪರ್ಯಂತ ಕಾಡಿತು.