ಸೊಪ್ಪು ಮಾರುವ ಭೂಪರು
(ಚಿಕ್ಕ ಹಾಸ್ಯ ಕಥೆ)
ಲೇಖಕ - ವಾಮನಾಚಾರ್ಯ
ಮುರುಕಲು ಹಳೆಯ ಸಾಯಕಲ್ ಮೇಲೆ ಹಿಂದುಗಡೆ, ಮುಂದುಗಡೆ, ಮಧ್ಯದಲ್ಲಿ ತರಕಾರಿ ತುಂಬಿದ ಬ್ಯಾಗ್ ಗಳು, ನೀರಿನ ಬಾಟಲ್ ಇಟ್ಟುಕೊಂಡು ಪೆಡಲ್ ತುಳಿಯುತ್ತ ರಸ್ತೆ ಮೇಲೆ ವಯಸ್ಸಾದ ಮನುಷ್ಯ ‘ಸೊಪ್ಪು, ಸೊಪ್ಪು’ ಎಂದು ಕೂಗುತ್ತಿದ್ದ. ಬಿಸಿಲು ತಾಪ ದಿಂದ ತೊಂದರೆ ಆಗಬಾರದು ಎಂದು ತಲೆಗೆ ಪಂಚೆ ಸುತ್ತಿ ಕೊಂಡಿದ್ದ. ಪವನ್ ಪುರ ನಗರದ ಪ್ರಶಾಂತ್ ಬಡಾವಣೆ ಯ ಮೂರನೇ ರಸ್ತೆ ಯಲ್ಲಿ ಇರುವ ಮನೆ ನಂಬರ್ 1645 ಮುಂದೆ ನಿಲ್ಲುವದು ಅವನ ದಿನ ನಿತ್ಯದ ಕಾರ್ಯಕ್ರಮ. ಆಗ ಸಮಯ ಬೆಳಗಿನ ಒಂಭತ್ತು ಗಂಟೆ. ಮನೆಯಲ್ಲಿದ್ದ ಹಿರಿಯ ಮನುಷ್ಯ ಬಾಗಿಲು ತೆಗೆದು ತರಕಾರಿ ವ್ಯಾಪಾರ ಮಾಡಿ ಹಣ ಕೊಡುವಾಗ,
“ಏನಯ್ಯ, ನಿನ್ನ ಹೆಸರು?” ಎಂದು ಕೇಳಿದ.
“ಸಾರ್, ನನ್ನ ಹೆಸರು ದೊಡ್ಡ ಭೂಪಯ್ಯ.”
“ಈ ಪ್ರಖರವಾದ ಬಿಸಿಲಿನಲ್ಲಿ, ಭಾರವಾದ ತರಕಾರಿ ಚೀಲಗಳು ಇಟ್ಟುಕೊಂಡು ಸಾಯಕಲ್ ನಡೆಸುತ್ತ ಬೀದಿ, ಬೀದಿ ಅಲೆದಾಡುತ್ತ ಕೂಗುತ್ತ ಇದ್ದಿ. ವಯಸ್ಸಾದ ನಿನಗೆ ಇಂತಹ ಕಷ್ಟವಾದ ಕೆಲಸ ಬೇಕಾ? ಮನೆಯಲ್ಲಿ ಹಾಯಾಗಿ ಕೂಡಬೇಕು.”
“ಸಾರ್,ನಾನು ಬಡವ. ಇಲ್ಲಿಂದ ಎರಡು ಕಿಲೋಮೀಟರ್ ದೂರದಲ್ಲಿ ಇರುವ ಚಂದನಹಳ್ಳಿ ನನ್ನ ಊರು. ನಮ್ಮ ಅಜ್ಜ ನಿಂದ ಬಂದ ಈ ಕಸಬು ಬಿಡಲು ಆಗುವದಿಲ್ಲ. ಗೇಣು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಕಷ್ಟ ಪಡುವದು ಬಿಟ್ಟರೆ ಬೇರೆ ದಾರಿ ಇಲ್ಲ.”
ಅಂದು ಅವನು ಬೇಗನೆ ವ್ಯಾಪಾರ ಮುಗಿಸುವ ಅವಸರದಲ್ಲಿ ಇರುವಾಗ ನಾನು ಬೇಕಾಗಿರುವ ಸೊಪ್ಪು ತೆಗೆದುಕೊಂಡು ದುಡ್ಡು ಕೊಟ್ಟಾದ ಮೇಲೆ ನೀರು ಕೇಳಿ ಬಾಟಲ್ ನೀರು ತುಂಬಿಕೊಂಡ.
“ಯಾವ ತರಹದ ಶ್ರಮ ಇಲ್ಲದೆ ಬಹಳಷ್ಟು ಮನೆಗೆ ಭೇಟಿ ಕೊಟ್ಟು ವ್ಯಾಪಾರ ಹೆಚ್ಚಿಗೆ ಮಾಡಿಕೊಳ್ಳುವ ಅನೇಕ ವಿಧಾನ ಗಳಿವೆ. ಬ್ಯಾಂಕ್ ನವರು ಸಾಲ ಕೊಡುವರು, “ಎಂದು ಹಿರಿಯ ಮನುಷ್ಯ ಹೇಳಿದ.
ಅದಕ್ಕೆ ಆತ,
"ಸ್ವಾಮಿ, ಎಷ್ಟೋ ಆಗುತ್ತೋ ಅಷ್ಟೇ ಮಾಡಿದರೆ ಸಾಕು. ನನಗೆ ಬಹಳ ಗಳಿಸುವ ಆಸೆ ಇಲ್ಲ. ಚಂದನ ಹಳ್ಳಿಯಲ್ಲಿ ಒಂದು ಎಕರೆ ಬರಡು ಜಮೀನು ಇದೆ. ವರ್ಷದಲ್ಲಿ ಒಂದು ಬೆಳೆ ಮಳೆ ಬಂದರೆ ಬೆಳೆ. ಸೊಪ್ಪು ಮಾರುವದು ಬಿಡುವ ಹಾಗಿಲ್ಲ. ನಮ್ಮಪ್ಪ ಸಾಯುವಾಗ ಎಷ್ಟೇ ಶ್ರೀಮಂತ ನಾದರೂ ಸೊಪ್ಪು ಮಾರುವದನ್ನು ಬಿಡ ಬಾರದು. ಎಂದು ವಚನ ತೆಗೆದುಕೊಂಡು ಜೀವ ಬಿಟ್ಟ. ಏಕೆಂದರೆ ಇದು ನಮ್ಮ ಮುತ್ತಾತನಿಂದ ಬಂದ ವ್ಯಾಪಾರ. ಅದನ್ನು ಈಗ ನಾನು ಹಾಗೂ ನನ್ನ ಮಗ ಹಾಗೆ ಮುಂದುವರೆಸಿ ದ್ದೇವೆ," ಎಂದು ಹೇಳಿ ಸಾಯಕಲ್ ಪೆಡಲ್ ಹೊಡೆದು ಹೊರಟೇ ಬಿಟ್ಟ.
ಅದೇ ಸಮಯದಲ್ಲಿ ಒಬ್ಬ ಸುಮಾರು ಇಪ್ಪತ್ತು ವರ್ಷದ ಯುವಕ ತೆರೆದ ಆಟೋ ದಲ್ಲಿ ‘ಫ್ರೆಷ್ ತರಕಾರಿ ಕಡಿಮೆ ರೇಟ್ ಗೆ ಬನ್ನಿ ಅಮ್ಮ, ಬನ್ನಿ ಅಕ್ಕ ಬನ್ನಿ, ಆಂಟಿ ಬನ್ನಿ ಎನ್ನುವ ರೆಕಾರ್ಡೆಡ್ ಮೈಕ್ ಫಿಕ್ಸ್ ಮಾಡಿ ಶಬ್ದ ಮಾಡುತ್ತ ನಡು ನಡುವೆ ರಾಜ್ ಕುಮಾರ್ ಅವರು ಹಾಡಿದ ‘ನಗು ನಗುತಾ ನಲಿ ನಲಿ’ ಹಾಕುತ್ತ ಹಿರಿಯ ಮನುಷ್ಯ ಇದ್ದಲ್ಲಿ ಬಂದು ಗಾಡಿ ನಿಲ್ಲಿಸಿದ. ಅವನು ಅರ್ಧ0ಭರ್ಧ ಇಂಗ್ಲಿಷ ನಲ್ಲಿ ಮಾತ ನಾಡಿದ. ಪೇಮೆಂಟ್ ಮಾಡಲಿಕ್ಕೆ ಕ್ಯೂ ಆರ್ ಕೋಡ್ ಹಾಗೂ ಡೆಬಿಟ್ ಕಾರ್ಡ್ ಸ್ವಾಪ್ ಮಾಡಲು ಯಂತ್ರ ಇಟ್ಟಿದ್ದ.
“ಸಾರ್, ನಾನು ಚಿಕ್ಕ ಭೂಪಯ್ಯ. ಈಗ ತಾನೇ ಹೋದ ಮುದುಕನ ಏಕೈಕ ಪುತ್ರ. . ನನ್ನ ಅಪ್ಪ ಹೇಳಿದ್ದು ನಿಜವೋ ಅಥವಾ ಸುಳ್ಳೋ? ಎನ್ನುವ ಯೋಚನೆಯಲ್ಲಿ ಇದ್ದೀರಾ ಸಾರ್, ?" ಎಂದ ನನಗೆ.
"ಹೌದಪ್ಪ." ಎಂದೆ.
"ಒಂದು ನಿಮಿಷ ನಿಲ್ಲಿ. ಅಪ್ಪ ಹೇಳೋದು ಅರ್ಧ ನಿಜ ಅರ್ಧ ಸುಳ್ಳು," ಎಂದ ನಗುತ್ತ.
ನನಗೂ ಕುತೂಹಲ ವಾಗಿ,
"ಅದೇನಯ್ಯ ಬಿಡಿಸಿ ಹೇಳು?" ಎಂದೆ.
"ಒಂದು ಎಕರೆ ಭೂಮಿ ಹಾಗೂ ಬಾವಿ ಇರುವದು ನಿಜ. ಹಾಳು ಬಿದ್ದ ಬಾವಿ ಇದೆ. ಬರಡು ಭೂಮಿ ಇರುವದರಿಂದ ವರ್ಷದಲ್ಲಿ ಒಂದೇ ಬೆಳೆ ಬರುವದು ತುಂಬಾ ಕಷ್ಟ. ಮಳೆ ಇಲ್ಲ ಎಂದರೆ ಅದು ಇಲ್ಲ. ಅಜ್ಜನು ಅಪ್ಪನಿಂದ ವಚನ ತೆಗೆದು ಕೊಂಡಿ ರುವದು ನಿಜ. ಆದರೆ ವ್ಯಾಪಾರ ವೃದ್ಧಿ ಮಾಡಲು ತೆರೆದ ಆಟೋ, ಮೈಕ್ ಮಾಡಬೇಡ ಎಂದು ಹೇಳಿಲ್ಲ. ಸಮಯಕ್ಕೆ ತಕ್ಕಂತೆ ವ್ಯಾಪಾರ ಮಾಡುವ ಪದ್ಧತಿ ಬದಲಾಯಿಸಬೇಕು. ಅದನ್ನು ನಾನು ಮಾಡಿದ್ದೇನೆ. ನಮಗೆ ಭೂಮಿಯನ್ನು ಸಾಗುವಳಿ ಮಾಡಲು ಆಗುವದಿಲ್ಲ ಎಂದು ಇನ್ನೊಬ್ಬರಿಗೆ ಅದನ್ನು ವಹಿಸಿ ಅದಕ್ಕಾಗಿ ಒಪ್ಪಂದ ಆಗಿದೆ. ಇದು ನಮ್ಮ ಜಮೀನಲ್ಲಿ ಬೆಳೆದ ಸೊಪ್ಪು ವ್ಯಾಪಾರ ಮಾಡುತ್ತಿ ದ್ದೇವೆ. ಇನ್ನೊಂದು ವಿಷಯ. ಅಪ್ಪ ನಿಗೆ ಮಧುಮೇಹ, ರಕ್ತ ಒತ್ತಡ ದ ರೋಗ ಇದೆ. ಅಮ್ಮ ಅನೇಕ ಸಲ ಸುಮ್ಮನೆ ಮನೆಯಲ್ಲಿ ಕೂಡು ಎಂದು ಅಪ್ಪನ ಜೊತೆಗೆ ಜಗಳ ವಾಡಿದ್ದಾಳೆ. ಅವನು ಯಾರ ಮಾತು ಕೇಳುವದಿಲ್ಲ. ಅವನ ಬಾಡಿ ಗಾರ್ಡ ಆಗಿ ಹಿಂದೆ ನಾನು ಇರುತ್ತೇನೆ. ಅವನಿಗೆ ಏನಾದರೂ ಆದರೆ ಅವನ ಸಾಯಿಕಲ್ ಕೈ ಕೊಟ್ಟರೆ ನನ್ನ ಆಟೋ ಕ್ಕೆ ಅದನ್ನು ಕಟ್ಟಿ ನನ್ನ ಪಕ್ಕದಲ್ಲಿ ಅವನನ್ನು ಕೂಡಿಸಿಕೊಂಡು ಆಸ್ಪತ್ರೆಗೆ ಹೋಗುತ್ತೇನೆ,”ಎಂದು ಹೇಳಿ ಆಟೋ ಸ್ಟಾರ್ಟ್ ಮಾಡಿ ನಿಲ್ಲದೇ ಹೋದ.
ಬಾಗಿಲಲ್ಲಿ ನಿಂತು ಹಿರಿಯ ಮನುಷ್ಯನ ಸಂಭಾಷಣೆ ಕೇಳುತ್ತಿದ್ದ ಅವರ ಮಡದಿ ತಡ ವಾಗಿರುವದಕ್ಕೆ ಹೊರಗೆ ಬಂದಳು.
"ಮಧುಸೂದನ್ ರಾವ್ ಅವರೇ, ನಿಮಗೆ ಬೇರೆ ಕೆಲಸ ಇಲ್ಲವೇ? ಬೆಳಗಿನ ಸಮಯದಲ್ಲಿ ಸೊಪ್ಪಿನವರ ಕಥೆ ಕೇಳಿ ನಿಮಗೇನಾಗ ಬೇಕಾಗಿದೆ? ಇಂದು ಕಾರ ಹುಣ್ಣಿಮೆ. ನಾನು ವಿಶೇಷ ಅಡುಗೆ ಮಾಡಬೇಕು. ನೀವು ಸ್ನಾನ ಪೂಜೆ ಮಾಡಬೇಕು. ಸುಮ್ಮನೆ ಒಳಗೆ ಬನ್ನಿ," ಎಂದಳು ಜೋರಾಗಿ ಪತ್ನಿ ಸೀತಾ ನಗುತ್ತಾ ಅದು ರಸ್ತೆ ಮೇಲೆ.
ಪುಣ್ಯಕ್ಕೆ ರಸ್ತೆ ಮೇಲೆ ಹಿರಿಯ ದಂಪತಿ ಬಿಟ್ಟರೆ ಬೇರೆ ಯಾರೂ ಇದ್ದಿಲ್ಲ.
"ಆಯಿತು ಒಳಗೆ ಬಂದೆ' ಎಂದೆ ನಗುತ್ತ.
ಬೆಳಗಿನ ಸಮಯ ಮಡದಿ ಬಯ್ದರೆ ಒಳ್ಳೇದಾಗು ವದು ತಲೆ ಕೆಡಿಸಿ ಕೊಳ್ಳ ಬೇಡ ಎಂದು ಹಾಸ್ಯಗಾರ ಹೇಳಿದ್ದು ನೆನಪು ಬಂದು ಮನಸ್ಸಿನಲ್ಲಿ ಖುಷಿ ಮಾಡಿಕೊಂಡು ಚಿಕ್ಕ ಭೂಪಯ್ಯ ಹಚ್ಚಿದ ರಾಜ್ ಕುಮಾರ್ ಹಾಡು ‘ನಗು ನಗುತಾ ನಲಿ ನಲಿ’ ಹಾಡುತ್ತ ಬಾತ್ ರೂಮ್ ಒಳಗೆ ಹೋದ.