A Pitstop at Memories in Kannada Human Science by Raghunandan S books and stories PDF | ನೆನಪಿನ ನಿಲ್ದಾಣದಲ್ಲಿ

Featured Books
Categories
Share

ನೆನಪಿನ ನಿಲ್ದಾಣದಲ್ಲಿ

ಅಧ್ಯಾಯ ೧: ಹೊಸ ಹಾದಿಯಲಿ ಹಳೆಯ ನೆರಳು
 

ಸಂಜೆ ಸೂರ್ಯನು ಗುಡ್ಡದ ಹಿಂದೆ ಮುಳುಗುತ್ತಿದ್ದ. ಆಕಾಶದಲ್ಲಿ ಕಿತ್ತಳೆ ಬಣ್ಣದ ಕಾಂತಿ ಹರಡಿತ್ತು. ರಸ್ತೆಯ ಇಕ್ಕೆಲೂ ಹಳೆಯ ಮರಗಳು ನಿಂತು, ತಮ್ಮ ನೆರಳುಗಳನ್ನು ನೆಲಕ್ಕೆ ಚಾಚಿಕೊಂಡಿದ್ದವು. ಜ್ಯೋತಿಪುರದ ಬಸ್ ನಿಲ್ದಾಣದಲ್ಲಿ ಬಸ್ ಬಂದು ನಿಂತಾಗ ಕೆಮ್ಮಿದಂತೆ ಶಬ್ದ ಮಾಡಿ ಧೂಳನ್ನು ಎಬ್ಬಿಸಿತು. ರಾಜೇಶ್ ಉತ್ಸಾಹದಿಂದ ಕೆಳಗಿಳಿದು ದೀರ್ಘವಾಗಿ ಉಸಿರಾಡಿದ. ಗಾಳಿಯಲ್ಲಿ ಮಣ್ಣಿನ ಮತ್ತು ಹೂವುಗಳ ಹಿತವಾದ ವಾಸನೆಯಿತ್ತು. ಆದರೆ ಅವನ ಹಿಂದೆ ಇಳಿದ ಸುಧಾಳ ಮುಖದಲ್ಲಿ ಕಿರಿಕಿರಿ ಎದ್ದು ಕಾಣುತ್ತಿತ್ತು. ತನ್ನ ರೇಷ್ಮೆ ಸೀರೆಯ ಸೆರಗಿನಿಂದ ಮೂಗನ್ನು ಮುಚ್ಚಿಕೊಳ್ಳುತ್ತಾ, ""ಇದೇ ಜ್ಯೋತಿಪುರವಾ?" ಸುಧಾ ಕೇಳಿದಳು. ಧ್ವನಿಯಲ್ಲಿ ಸ್ವಲ್ಪ ಅಸಮಾಧಾನ. ಬೆಂಗಳೂರಿನ ಗದ್ದಲದಿಂದ ಇಲ್ಲಿಗೆ ಬಂದ ಮೇಲೆ ಈ ಸಣ್ಣ ಊರಿನ ನಿಶ್ಶಬ್ದ ಅವಳಿಗೆ ಅಪರಿಚಿತವಾಗಿತ್ತು. "ಇಲ್ಲಿಗೆ ತಲುಪುವಷ್ಟರಲ್ಲಿ ಸಾಕು ಸಾಕಾಯಿತು," ಎಂದು ಗೊಣಗಿದಳು.

 

"ನೋಡು ಸುಧಾ, ಆಕಾಶ ಎಷ್ಟು ಸ್ಪಷ್ಟವಾಗಿದೆ! ಬೆಂಗಳೂರಿನಲ್ಲಿ ಇಂತಹ ಸಂಜೆ ನೋಡಲು ಸಾಧ್ಯವೇ?" ರಾಜೇಶ್ ಕೈ ಚಾಚಿ ಅನತಿ ದೂರದ ಗುಡ್ಡದ ಮೇಲೆ ಕಾಣುತ್ತಿದ್ದ ಆಂಜನೇಯನ ಗುಡಿಯ ದೀಪವನ್ನು ತೋರಿಸಿದ. ಸುಧಾ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಸಿಗ್ನಲ್ ಹುಡುಕುತ್ತಾ, "ಆಕಾಶ ಆಮೇಲೆ ನೋಡೋಣ ರಾಜೇಶ್, ಇಲ್ಲಿ ಮೊಬೈಲ್ ನೆಟ್‌ವರ್ಕ್ ಕೂಡ ಇಲ್ಲ. ಇನ್ನು ಎರಡು ವರ್ಷ ನಾನು ಈ ಕಾಡಿನಲ್ಲಿ ಹೇಗೆ ಕಳೆಯಬೇಕು?" ಎಂದಳು. ರಾಜೇಶ್ ನಕ್ಕು ಅವಳ ಹೆಗಲ ಮೇಲೆ ಕೈ ಹಾಕಿದ. ರಾಜೇಶನಿಗೆ ಇಲ್ಲಿಯ ಬ್ಯಾಂಕಿಗೆ ವರ್ಗಾವಣೆ ಆಗಿತ್ತು. ಅವನಿಗೆ ಇದು ಕೇವಲ ವರ್ಗಾವಣೆಯಲ್ಲ; ತನ್ನ ಬಾಲ್ಯದ ಬೇಸಿಗೆ ರಜೆಗಳನ್ನು ಕಳೆಯುತ್ತಿದ್ದ ತಾತನ ಮನೆಯ ನೆನಪುಗಳನ್ನು ಮರುಕಳಿಸುವ ತಾಣವಾಗಿತ್ತು. ಆದರೆ ಸುಧಾಳಿಗೆ ಇದು ಅಭಿವೃದ್ಧಿಯಿಲ್ಲದ, ಮಂದಗತಿಯ ಹಳ್ಳಿ ಮಾತ್ರವಾಗಿತ್ತು.

 

ದಂಪತಿಗಳು ನಡೆಯುತ್ತಾ ತಾವು ಬಾಡಿಗೆಗೆ ಪಡೆದ ಮನೆಯ ಕಡೆಗೆ ಹೊರಟರು. ಸುಧಾ ಬ್ರಾಂಡೆಡ್ ಟ್ರಾಲಿ ಬ್ಯಾಗ್ ಅನ್ನು ಎಳೆದುಕೊಂಡು ಹೋಗುತ್ತಾ, "ಇಲ್ಲಿಗೆ ಟ್ರಾನ್ಸ್‌ಫರ್ ಮಾಡಿಸಿಕೊಳ್ಳುವ ಮುನ್ನ ನನ್ನನ್ನು ಒಮ್ಮೆಯಾದರೂ ಕೇಳಬೇಕಿತ್ತು ರಾಜೇಶ್," ಎಂದು ಸಿಡಿಮಿಡಿಗೊಂಡಳು. "ಸುಧಾ, ಇದು ಸುಂದರವಾದ ಊರು. ನಿನಗೆ ಇಲ್ಲಿನ ಗಾಳಿ ತಗುಲಿದರೆ ಸಾಕು, ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಮರೆತು ಹೋಗುತ್ತದೆ," ಎಂದ ರಾಜೇಶ್ ಸಮಾಧಾನ ಪಡಿಸಲು ಯತ್ನಿಸಿದ. "ನನಗೆ ಟ್ರಾಫಿಕ್ ಬೇಕು ರಾಜೇಶ್! ಅಲ್ಲಿ ಕನಿಷ್ಠ ಪಕ್ಷ ಇಂಟರ್ನೆಟ್ ಆದರೂ ಇತ್ತು. ನನ್ನ ಕರಿಯರ್ ಬಗ್ಗೆ ನಿಮಗೆ ಚಿಂತೆಯೇ ಇಲ್ಲವೇ?" ಸುಧಾಳ ವಾದ ಜೋರಾಯಿತು.

 

ರಸ್ತೆಯ ಇಕ್ಕೆಲೂ ಇದ್ದ ಬ್ರಿಟಿಷರ ಕಾಲದ ಹಳೆಯ ಬಂಗಲೆಗಳು ಸುಧಾಳಿಗೆ ಪಾಳುಬಿದ್ದ ಕಟ್ಟಡಗಳಂತೆ ಕಂಡರೆ, ರಾಜೇಶನಿಗೆ ಅವು ಇತಿಹಾಸದ ಸಾಕ್ಷಿಗಳಂತೆ ಕಂಡವು. 'ಜ್ಯೋತಿ ಬೇಕರಿ'ಯ ಮುಂದೆ ರೋಸ್ ಅಮ್ಮ ಕೆಂಪು ಬಣ್ಣದ ಗೌನ್ ಧರಿಸಿ ಬೇಕರಿಯ ಗಾಜನ್ನು ಒರೆಸುತ್ತಿದ್ದರು. ಅವರು ಇವರನ್ನು ಕಂಡು ಕೈ ಬೀಸಿ "ವೆಲ್‌ಕಮ್ ಟು ಜ್ಯೋತಿಪುರ! ಎಂದು ಮುಗುಳ್ನಕ್ಕಾಗ ರಾಜೇಶ್ ಕೈ ಬೀಸಿದ, ಸುಧಾ ಮಾತ್ರ ಅಪರಿಚಿತರಂತೆ ಮುಖ ತಿರುಗಿಸಿಕೊಂಡಳು.

 

ಅಷ್ಟರಲ್ಲಿ ಬೈಸಿಕಲ್ ಮೇಲೆ ಹಾಲಿನ ಕ್ಯಾನ್ ಏರಿಸಿಕೊಂಡು ಬಂದ ಹಾಲಿನ ಗಂಗಪ್ಪ, "ಓ... ಹೊಸ ಬ್ಯಾಂಕ್ ಮ್ಯಾನೇಜರ್ ಸಾಹೇಬರೇ ಅಲ್ವಾ? ಬನ್ನಿ ಬನ್ನಿ! ಇಲ್ಲಿಂದ ಸ್ವಲ್ಪ ಮುಂದೆ ಹೋದರೆ ನಿಮ್ಮ ಮನೆ ಸಿಗುತ್ತೆ. ನಾಳೆಯಿಂದ ಹಾಲಿನ ಚಿಂತೆ ಬೇಡ, ನಾನು ಕರೆದ ಹಾಲನ್ನೇ ತರ್ತೀನಿ," ಎಂದು ನಗುತ್ತಾ ಮಾತು ಕೊಟ್ಟ. ಪಕ್ಕದಲ್ಲೇ ತಳ್ಳು ಗಾಡಿಯಲ್ಲಿ ತರಕಾರಿ ಮಾರುತ್ತಿದ್ದ ರಮೇಶ, "ಅಮ್ಮಾವ್ರೆ, ಈ ಬೆಂಡೆಕಾಯಿ ನೋಡಿ, ನಮ್ಮದೇ ತೋಟದಲ್ಲಿ ಬೆಳೆದದ್ದು. ಸಿಟಿಯ ಹಳಸಿದ ತರಕಾರಿ ತರ ಅಲ್ಲ ಇದು," ಎಂದು ಒಂದು ಕವರ್ ಸುಧಾಳ ಕೈಗೆ ತುರುಕಿದ. ಈ ಹಳ್ಳಿಯ ಜನರ ಅತಿ ಎನಿಸುವ ಆತ್ಮೀಯತೆ ಸುಧಾಳಿಗೆ ಹೊಸದಾಗಿ ಮತ್ತು ಸ್ವಲ್ಪ ವಿಚಿತ್ರವಾಗಿ ಕಂಡಿತು.

 

ಅವರ ಹೊಸ ಮನೆ ಕೆರೆಯ ದಡದ ಹತ್ತಿರವಿತ್ತು. ಮನೆಯ ಕೀಲಿ ತೆಗೆಯುವಾಗ ರಾಜೇಶ್ ಹೇಳಿದ, "ಗೊತ್ತಾ ಸುಧಾ? ಈ ಊರಿನಲ್ಲಿ ಜೀವನ ಸಾವಧಾನವಾಗಿ ಸಾಗುತ್ತದೆ. ಇಲ್ಲಿ ಯಾರೂ ಯಾರಿಗೂ ಸ್ಪರ್ಧೆಯಿಲ್ಲ. ನನಗೆ ನನ್ನ ತಾತನ ಮನೆಗೆ ಬಂದ ಹಾಗೆ ಅನಿಸುತ್ತಿದೆ." "ನಿಮ್ಮ ತಾತನ ಮನೆ ಪ್ರೀತಿ ನನಗೇಕೆ ಬರಬೇಕು? ನನಗೆ ಜಿಮ್ ಬೇಕು, ಮಾಲ್ ಬೇಕು, ವೀಕೆಂಡ್‌ನಲ್ಲಿ ಹೊರಗೆ ಹೋಗಲು ಕೆಫೆಗಳು ಬೇಕು. ಇಲ್ಲಿ ನೋಡಿದರೆ ಬರೀ ಕಪ್ಪೆಗಳ ಶಬ್ದ," ಸುಧಾ ಮನೆಯೊಳಗಿನ ಹಳೆಯ ಶೈಲಿಯ ಸ್ವಿಚ್ ಬೋರ್ಡ್ ನೋಡುತ್ತಾ ಅಸಮಾಧಾನ ವ್ಯಕ್ತಪಡಿಸಿದಳು.

 

ಅಂದು ರಾತ್ರಿ ದಂಪತಿಗಳ ನಡುವೆ ಮೌನ ಆವರಿಸಿತ್ತು. ಸುಧಾ ಮನೆಯ ಎದುರು ಗೋಡೆಗೆ ಅಂಟಿಸಿದ್ದ ಟಾಕೀಸ್‌ನ ಹಳೆಯ ಪೋಸ್ಟರ್‌ಗಳನ್ನು ಕಿಟಕಿಯಿಂದ ನೋಡುತ್ತಾ ತನ್ನ ಕಳೆದುಹೋದ ನಗರದ ಜೀವನವನ್ನು ನೆನೆಯುತ್ತಿದ್ದರೆ, ರಾಜೇಶ್ ಹೊರಗೆ ಜಗಲಿಯಲ್ಲಿ ಕುಳಿತು ಕೆರೆಯ ನೀರಿನಲ್ಲಿ ಪ್ರತಿಫಲಿಸುತ್ತಿದ್ದ ನಕ್ಷತ್ರಗಳನ್ನು ನೋಡುತ್ತಿದ್ದ. ಇಬ್ಬರ ನಡುವೆ ಒಮ್ಮತದ ಕೊರತೆಯಿತ್ತು, ಆದರೆ ಜ್ಯೋತಿಪುರ ಅವರಿಬ್ಬರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸದ್ದಿಲ್ಲದೆ ಸಿದ್ಧವಾಗುತ್ತಿತ್ತು.

 

ಮಾರನೇ ದಿನ ಬೆಳಿಗ್ಗೆ ರಾಜೇಶ್ ಬ್ಯಾಂಕಿಗೆ ಹೋದ. ಬೆಂಗಳೂರಿನ ಎಂ.ಜಿ. ರಸ್ತೆಯ ಬ್ಯಾಂಕಿನಲ್ಲಿ ಕ್ಯೂ ನಿಂತ ಜನ, ಫೋನ್ ಕರೆಗಳ ಕಿರಿಕಿರಿ, ಟಾರ್ಗೆಟ್ ಮುಟ್ಟುವ ಒತ್ತಡ - ಯಾವುದೂ ಇಲ್ಲಿ ಇರಲಿಲ್ಲ. ಈ ಬ್ಯಾಂಕ್ ಒಂದು ಹಳೆಯ ಕಟ್ಟಡದಲ್ಲಿತ್ತು, ಗೋಡೆಯ ಮೇಲೆ ಗಡಿಯಾರ ಟಿಕ್-ಟಿಕ್ ಎನ್ನುತ್ತಿತ್ತು. ಅಲ್ಲಿನ ಅಟೆಂಡರ್ ಮುದ್ದಣ್ಣ ಬಿಸಿ ಬಿಸಿ ಶುಂಠಿ ಟೀ ತಂದುಕೊಟ್ಟು, "ಸಾರ್, ಇಲ್ಲಿ ಕೆಲಸ ಆರಾಮಾಗಿ ಆಗುತ್ತೆ. ಜನ ಪ್ರೀತಿಯಿಂದ ಮಾತಾಡ್ತಾರೆ," ಎಂದ. ರಾಜೇಶನಿಗೆ ಮೊದಲ ಬಾರಿಗೆ ಬ್ಯಾಂಕ್ ಕೆಲಸದಲ್ಲಿ ಒಂದು ರೀತಿಯ ನಿರಾಳತೆ ಕಂಡಿತು. ಸಂಜೆ ಮನೆಗೆ ಬಂದಾಗ ಸುಧಾ ಇನ್ನೂ ಕೋಣೆಯಲ್ಲಿ ಲಗೇಜ್ ಬಿಡಿಸದೆ ಕುಳಿತಿದ್ದಳು. "ಇಲ್ಲಿ ನೋಡು ಸುಧಾ, ಇವತ್ತು ಬ್ಯಾಂಕಿನಲ್ಲಿ ಒಂದೂ ಜಗಳವಾಗಲಿಲ್ಲ. ನಾಳೆಯಿಂದ ನಾವಿಬ್ಬರೂ ಬೇಕಿದ್ದರೆ ಕೆರೆಯ ದಡದಲ್ಲಿ ನಡೆಯಲು ಹೋಗೋಣ," ಎಂದ ರಾಜೇಶ್. "ನೀವು ಆರಾಮವಾಗಿದ್ದೀರಿ ರಾಜೇಶ್. ಆದರೆ ನನಗೆ ಈ ಊರು ಒಗ್ಗುತ್ತಿಲ್ಲ. ಇಲ್ಲಿನ ಬೇಕರಿ ರೋಸ್ ಅಮ್ಮನ ಹತ್ತಿರ ಮಾತನಾಡಲು ಹೋದರೆ ಅವರು ಅವರ ಕಾಲದ ಬ್ರಿಟಿಷ್ ಕಥೆ ಹೇಳ್ತಾರೆ. ಟಾಕೀಸ್ ಮಾಲೀಕನೋ ತನ್ನ ಹಳೆಯ ಸಿನೆಮಾ ದಿನಗಳಲ್ಲೇ ಬದುಕುತ್ತಿದ್ದಾನೆ. ಇವರೆಲ್ಲರೂ ಗತಕಾಲದಲ್ಲಿ ಬದುಕುತ್ತಿರುವವರು, ನನಗೆ ಫ್ಯೂಚರ್ ಬೇಕು!" ಎಂದು ಸುಧಾ ಮತ್ತೆ ವಾದಕ್ಕೆ ಇಳಿದಳು.

 

ರಾಜೇಶ್ ನಕ್ಕು ಅವಳ ಕೈ ಹಿಡಿದು ಕಿಟಕಿಯ ಹತ್ತಿರ ಕರೆದೊಯ್ದ. ದೂರದಲ್ಲಿ ಗುಡ್ಡದ ಮೇಲಿನ ಆಂಜನೇಯನ ಗುಡಿಯ ದೀಪ ಪ್ರಕಾಶಮಾನವಾಗಿ ಬೆಳಗುತ್ತಿತ್ತು. "ಸುಧಾ, ಗತಕಾಲದ ನೆನಪುಗಳೇ ಈ ಊರಿನ ಅಡಿಪಾಯ. ಅದರ ಮೇಲೆ ನಮ್ಮ ಹೊಸ ಭವಿಷ್ಯವನ್ನು ಕಟ್ಟೋಣ. ಸ್ವಲ್ಪ ಸಮಯ ಕೊಡು ಅಷ್ಟೇ," ಎಂದ. ಮನೆಯ ಹೊರಗೆ ಕೆರೆಯ ನೀರಿನ ಅಲೆಗಳು ದಡಕ್ಕೆ ಬಡಿದು ಶಬ್ದ ಮಾಡುತ್ತಿದ್ದವು. ಸುಧಾ ಮನಸಿಲ್ಲದ ಮನಸ್ಸಿನಿಂದಲೇ "ಆಗಲಿ ಇನ್ನು ಸ್ವಲ್ಪ ದಿನ ನೋಡೋಣ, ಹೊಂದಿಕೆ ಆಗಲಿಲ್ಲ ಅಂದರೆ ಮತ್ತೆ ಬೆಂಗಳೂರಿಗೆ ವರ್ಗಾವಣೆ ಕೇಳಬೇಕು ಮತ್ತೆ" ಎಂದು ಕೇಳಿದಳು. ಮರುದಿನ ಬೆಳಿಗ್ಗೆ ಸುಧಾ ಎದ್ದಾಗ ರಾಜೇಶ್ ತೋಟದಲ್ಲಿ ಗಿಡಗಳಿಗೆ ನೀರು ಹಾಕುತ್ತಿದ್ದ. "ಇಲ್ಲಿ ನೋಡು ಸುಧಾ, ಈ ಪಾರಿಜಾತದ ಗಿಡ ಎಷ್ಟು ಚೆನ್ನಾಗಿ ಹೂ ಬಿಟ್ಟಿದೆ," ಎಂದು ಕರೆದ. ಸುಧಾ ಅರೆಮನಸ್ಸಿನಿಂದಲೇ ಅಲ್ಲಿಗೆ ಹೋದಳು. ಅವಳು ಅಂದುಕೊಂಡಂತೆ ಜ್ಯೋತಿಪುರ ಸುಲಭವಾಗಿ ಅವಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ ಅಥವಾ ಅವಳು ಜ್ಯೋತಿಪುರವನ್ನು ಒಪ್ಪುತ್ತಿರಲಿಲ್ಲ. ದಂಪತಿಗಳ ಈ ತುಮುಲ, ಜ್ಯೋತಿಪುರದ ನಿಗೂಢ ಶಾಂತಿಯ ನಡುವೆ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತ್ತು. ಜ್ಯೋತಿಪುರಕ್ಕೆ ಈ ದಂಪತಿಗಳ ವಾದ-ವಿವಾದ ಹೊಸದೇನೂ ಆಗಿರಲಿಲ್ಲ, ಆದರೆ ಅವರ ಜೀವನದ ದಿಕ್ಕನ್ನು ಬದಲಿಸುವ ಶಕ್ತಿ ಅದಕ್ಕಿತ್ತು.

 

ಅಧ್ಯಾಯ ೨: ಕೆರೆಯ ಏರಿಯ ಮೇಲೆ ಒಂದು ಸಂಜೆ
ಜ್ಯೋತಿಪುರಕ್ಕೆ ಬಂದು ಒಂದು ವಾರ ಕಳೆದಿತ್ತು. ಮನೆಯೊಳಗೆ ಸಾಮಾನುಗಳನ್ನು ಜೋಡಿಸಿ ಸುಧಾಳಿಗೆ ಸುಸ್ತಾಗಿತ್ತು. ಅಂದು ಸಂಜೆ ಕರೆಂಟ್ ಕೈಕೊಟ್ಟಿದ್ದರಿಂದ, ರಾಜೇಶ್ ಬಲವಂತವಾಗಿ ಅವಳನ್ನು ಕೆರೆಯ ದಡಕ್ಕೆ ಕರೆದುಕೊಂಡು ಬಂದಿದ್ದ. ಸುಧಾ ಮುಖ ಉದಾಸೀನವಾಗಿದ್ದರೂ, ಕೈಯಲ್ಲಿದ್ದ ಸ್ಮಾರ್ಟ್‌ಫೋನ್‌ನ ಫ್ಲ್ಯಾಶ್‌ಲೈಟ್ ನಂದಿಸಿ ಕೆರೆಯ ಏರಿಯ ಮೇಲೆ ಹೆಜ್ಜೆ ಹಾಕಿದಳು.

ಅಲ್ಲಿನ ದೃಶ್ಯ ಸುಧಾಳನ್ನು ಕ್ಷಣಕಾಲ ಮೌನವಾಗಿಸಿತು. ವಿಶಾಲವಾದ 'ಜ್ಯೋತಿ ಸರೋವರ' ಬೆಳ್ಳಿಯ ಹಾಳೆಯಂತೆ ಮಿನುಗುತ್ತಿತ್ತು. ಕೆರೆಯ ಸುತ್ತಲೂ ಅಶ್ವತ್ಥ ಮತ್ತು ಬೇವಿನ ಮರಗಳು ಸಾಲಾಗಿ ನಿಂತು ಗಾಳಿಗೆ ಅಲೆದಾಡುತ್ತಿದ್ದವು. ತಂಪಾದ ಗಾಳಿ ಸುಧಾಳ ಮುಖಕ್ಕೆ ಅಪ್ಪಳಿಸಿದಾಗ, ಬೆಂಗಳೂರಿನ ಎಸಿ ಗಾಳಿಗಿಂತ ಇದು ವಿಭಿನ್ನವಾಗಿದೆ ಎಂಬುದು ಅವಳಿಗೆ ಅರಿವಾಯಿತು.

"ನೋಡು ಸುಧಾ, ಈ ಕೆರೆಗೆ ಸಾವಿರ ವರ್ಷಗಳ ಇತಿಹಾಸವಿದೆ," ರಾಜೇಶ್ ಕೆರೆಯ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುತ್ತಾ ಹೇಳಿದ. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಮುದಿ ವ್ಯಕ್ತಿ, ಕೈಯಲ್ಲೊಂದು ಹಳೆಯ ಲಾಂದ್ರ (lantern) ಹಿಡಿದು ಬಂದರು. ಅವರು ಊರಿನ ಹಳೆಯ ಪಟೇಲರ ಮಗ ಶಂಕರಪ್ಪ.

"ಹೊಸಬರಂತೆ ಕಾಣ್ತೀರಿ? ಮ್ಯಾನೇಜರ್ ಸಾಹೇಬ್ರಾ?" ಎಂದು ಶಂಕರಪ್ಪ ಮುಗುಳ್ನಕ್ಕರು. ರಾಜೇಶ್ ಹೌದೆಂದು ತಲೆದೂಗಿದಾಗ ಶಂಕರಪ್ಪ ಕೆರೆಯ ಕಡೆಗೆ ಬೆರಳು ತೋರಿ ಮಾತು ಮುಂದುವರಿಸಿದರು. "ಅಮ್ಮಾವ್ರೆ, ಈ ಕೆರೆಯನ್ನು ಯಾರೋ ಒಬ್ಬ ರಾಜ ಕಟ್ಟಿದ್ದಲ್ಲ. ಊರಿನ ಜನರು ತಮ್ಮ ಬೆವರಿನಿಂದ ಕಟ್ಟಿದ್ದು. ಎಷ್ಟೋ ವರ್ಷಗಳ ಹಿಂದೆ ಇಲ್ಲಿ ಭೀಕರ ಬರಗಾಲ ಬಂದಿತ್ತಂತೆ. ಆಗ ಊರಿನ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿನ ಒಂದು ಹಿಡಿ ಮಣ್ಣನ್ನು ತಂದು ಇಲ್ಲಿ ಸುರಿದು ಏರಿ ಕಟ್ಟಿದರಂತೆ. ಇಲ್ಲಿನ ಮಣ್ಣಿನಲ್ಲಿ ಪ್ರೀತಿಯಿದೆ, ಅದಕ್ಕೇ ಈ ಕೆರೆ ಎಂದೂ ಬತ್ತಲ್ಲ."

ಸುಧಾ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಾ, "ಹಾಗಾದರೆ ಇದಕ್ಕೆ ಜ್ಯೋತಿ ಸರೋವರ ಅಂತ ಯಾಕೆ ಹೆಸರು ಬಂತು?" ಎಂದು ಕೇಳಿದಳು.

ಶಂಕರಪ್ಪ ನಗುತ್ತಾ, "ಹುಣ್ಣಿಮೆಯ ದಿನ ಆ ಗುಡ್ಡದ ಮೇಲಿರುವ ಆಂಜನೇಯನ ದೇವಸ್ಥಾನದ ದೀಪ ಕೆರೆಯ ನೀರಿನಲ್ಲಿ ಪ್ರತಿಫಲಿಸುತ್ತದೆ. ಇಡೀ ಕೆರೆ ಒಂದು ಜ್ಯೋತಿಯಂತೆ ಕಾಣುತ್ತದೆ. ಅದಕ್ಕೇ ಇದು ಜ್ಯೋತಿಪುರ, ಇದು ಜ್ಯೋತಿ ಸರೋವರ," ಎಂದರು.

ಶಂಕರಪ್ಪ ಹೊರಟು ಹೋದ ಮೇಲೆ ಸುಧಾ ಮೌನವಾಗಿ ಕೆರೆಯ ಅಲೆಗಳನ್ನು ನೋಡತೊಡಗಿದಳು. ಕೆರೆಯ ದಡದಲ್ಲಿ ಸಣ್ಣ ಮಕ್ಕಳು ಕಲ್ಲುಗಳನ್ನು ನೀರಿನ ಮೇಲೆ ಎಸೆಯುತ್ತಾ ನಗುತ್ತಿದ್ದರು. ಹಿರಿಯರು ಕುಳಿತು ಊರಿನ ಹರಟೆ ಹೊಡೆಯುತ್ತಿದ್ದರು. ಅಲ್ಲಿ ಯಾವುದೇ ಗದ್ದಲವಿರಲಿಲ್ಲ, ಆದರೆ ಒಂದು ರೀತಿಯ ಜೀವಂತಿಕೆಯಿತ್ತು. ನಗರದ ಕೆರೆಗಳಂತೆ ಇದು ಕೇವಲ ಪ್ರವಾಸಿ ತಾಣವಾಗಿರಲಿಲ್ಲ, ಅದು ಊರಿನ ಉಸಿರಾಗಿತ್ತು.

ಮನೆಗೆ ಹಿಂದಿರುಗುವಾಗ ಸುಧಾ ಕೇಳಿದಳು, "ರಾಜೇಶ್, ಇಂಟರ್ನೆಟ್ ಇಲ್ಲದಿದ್ದರೂ ಈ ಜನರಿಗೆ ಬದುಕಲು ಹೇಗೆ ಸಾಧ್ಯವಾಗುತ್ತದೆ?" ರಾಜೇಶ್ ನಕ್ಕು ಹೇಳಿದ, "ಅವರಿಗೆ ಇಂಟರ್ನೆಟ್ ಕನೆಕ್ಷನ್ ಇಲ್ಲದಿರಬಹುದು ಸುಧಾ, ಆದರೆ ಒಬ್ಬರಿಗೊಬ್ಬರು ಹಾರ್ಟ್ ಕನೆಕ್ಷನ್ ಇದೆ."

ಸುಧಾ ಅಂದು ಮೊದಲ ಬಾರಿಗೆ ತನ್ನ ಫೋನಿನ ನೋಟಿಫಿಕೇಶನ್ ಚೆಕ್ ಮಾಡದೆ, ಕಿಟಕಿಯಿಂದ ಕೆರೆಯ ನೀರಿನ ಮೇಲೆ ಬೀಳುತ್ತಿದ್ದ ಚಂದಿರನ ಬೆಳಕನ್ನು ನೋಡುತ್ತಾ ನಿದ್ರೆಗೆ ಜಾರಿದಳು. ಜ್ಯೋತಿಪುರದ ಪ್ರಕೃತಿ ಸದ್ದಿಲ್ಲದೆ ಅವಳ ಮನಸ್ಸಿನ ಕವಚವನ್ನು ಸಡಿಲಗೊಳಿಸಲು ಶುರು ಮಾಡಿತ್ತು.

 

ಅಧ್ಯಾಯ ೩: ರೋಸ್ ಅಮ್ಮನ ಬೇಕರಿ ಮತ್ತು ಮಧುರ ನೆನಪುಗಳು
ಜ್ಯೋತಿಪುರದ ಬೆಳಿಗ್ಗೆಗಳು ಬೆಂಗಳೂರಿನಂತೆ ಗಡಿಯಾರದ ಮುಳ್ಳಿನ ಹಿಂದೆ ಓಡುವುದಿಲ್ಲ; ಬದಲಾಗಿ ಹಕ್ಕಿಗಳ ಚಿಲಿಪಿಲಿ ಮತ್ತು ಹಳೆಯ ದೇವಸ್ಥಾನದ ಗಂಟೆಯ ಶಬ್ದದೊಂದಿಗೆ ಹದವಾಗಿ ತೆರೆದುಕೊಳ್ಳುತ್ತವೆ.

 

ಒಂದು ಬೆಳಿಗ್ಗೆ, ರಾಜೇಶ್ ಕೆಲಸಕ್ಕೆ ಹೋದ ಮೇಲೆ ಮನೆಯಲ್ಲಿ ಒಂಟಿಯಾಗಿ ಕುಳಿತಿದ್ದ ಸುಧಾಳಿಗೆ ಏನೋ ಒಂದು ರೀತಿಯ ಬೇಸರದ ಅನುಭೂತಿ ಆಗತೊಡಗಿತು. ಸುಧಾ ತನಗೆ ತಾನೇ ಅಂದುಕೊಂಡಳು, ಬೆಂಗಳೂರಿನಲ್ಲಿದ್ದರೆ ಈ ಹೊತ್ತಿಗೆ ತನ್ನ ಕಾರ್ಪೊರೇಟ್ ಆಫೀಸ್ನಲ್ಲಿ ಕಾಫಿ ಬ್ರೇಕ್, ಎಲ್ಲ ಸಹೋದ್ಯೋಗಿಗಳು ತಮ್ಮ ಹೊಸ ಯೋಜನೆಗಳ ಬಗ್ಗೆ ಮಾತಾಡಲೋ ಇಲ್ಲವೇ ತಾವು ಕೊಂಡ ಹೊಸ ವಸ್ತುವನ್ನು ತೋರಿಸಲೋ ಸಿಗುವ ಸಮಯ. ತಾನಾದರೂ ಹಾಗೆಯೇ ಮಾಡುತ್ತಾ ಇದ್ದದ್ದು, ನಿಜಕ್ಕೂ ಅದು ಒಂದು ರೀತಿ ಅಸೂಯೆ ಹಾಗೆಯೇ ಖುಷಿ ಎರಡು ಹುಟ್ಟಿಸುವ ಸಂದರ್ಭ ಎನಿಸಿತು. ಎಲ್ಲರು ತಾವು ಹೋದ ಮಾಲ್ ಬಗೆಗೋ ಇಲ್ಲವೇ ತಾವು ಕೊಳ್ಳಲು ಯೋಜಿಸಿರುವ ಅಪಾರ್ಟ್ಮೆಂಟ್ ಬಗ್ಗೆಯೂ ಮಾತಾಡುವಾಗ, ಒಮ್ಮೆ ಅಸೂಯೆ ಅನಿಸಿದರೆ ಮತ್ತೊಮ್ಮೆ ತಾನು ಕೂಡ ಕಮ್ಮಿ ಇಲ್ಲ ಅನ್ನಿಸುತಿತ್ತು. ಇಲ್ಲಿ ಯಾವುದೂ ಇಲ್ಲ. ಅದೇ ಬೇಸರದಲ್ಲಿ ಸುಧಾ ಸುಮ್ಮನೆ ರಸ್ತೆಯಲ್ಲಿ ನಡೆಯುತ್ತಾ ಹೊರಟಳು.

 

ಆಕೆಯ ಹೆಜ್ಜೆಗಳು ತಿಳಿಯದೆಯೇ ಪಟ್ಟಣದ ಕೊನೆಯಲ್ಲಿದ್ದ ಬ್ರಿಟಿಷ್ ಶೈಲಿಯ ಹಳೆಯ ಬಂಗಲೆಗಳ ಕಡೆಗೆ ಸಾಗಿದವು. ಅಲ್ಲಿ ಹಸಿರು ಬಣ್ಣದ ಗೇಟು ಮತ್ತು ಅಂಗಳದ ತುಂಬಾ ಬೆಳೆದಿದ್ದ ಕೆಂಪು ಗುಲಾಬಿಗಳ ನಡುವೆ ಒಂದು ಪುಟ್ಟ ಫಲಕವಿತ್ತು: 'ಜ್ಯೋತಿ ಬೇಕರಿ - 1945 ರಿಂದ'. ಒಳಗೆ ಹೆಜ್ಜೆ ಇಡುತ್ತಿದ್ದಂತೆ ತಾಜಾ ಬೆಣ್ಣೆ ಮತ್ತು ದಾಲ್ಚಿನ್ನಿಯ (Cinnamon) ಸುವಾಸನೆ ಸುಧಾಳನ್ನು ಬರಮಾಡಿಕೊಂಡಿತು. ಅಲ್ಲಿ ಬಿಳಿ ಬಣ್ಣದ ಗೌನ್ ಧರಿಸಿದ್ದ 'ರೋಸ್ ಅಮ್ಮ' ಮತ್ತು ಅವರ ಪತಿ 'ಮಿಲ್ಟನ್' ಬೇಕರಿಯ ಗಾಜಿನ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ರೋಸ್ ಅಮ್ಮನ ಬಿಳಿ ಕೂದಲು ಮತ್ತು ಅವರ ಮುಖದ ಮೇಲಿನ ಸುಕ್ಕುಗಳು ನೂರಾರು ಕಥೆಗಳನ್ನು ಹೇಳುವಂತಿದ್ದವು.

 

"ಬಾ ಮಗು, ನೀನು ಆ ಹೊಸ ಬ್ಯಾಂಕ್ ಮ್ಯಾನೇಜರ್ ಪತ್ನಿಯಲ್ಲವೇ?" ರೋಸ್ ಅಮ್ಮ ಇಂಗ್ಲಿಷ್ ಮಿಶ್ರಿತ ಕನ್ನಡದಲ್ಲಿ ಕೇಳಿದರು. ಸುಧಾ ಆಶ್ಚರ್ಯದಿಂದ ತಲೆದೂಗಿದಳು. "ಬಾ, ಇಲ್ಲಿ ಕುಳಿತು ಈ ತಾಜಾ ಆಪಲ್ ಕೇಕ್ ಸವಿದು ನೋಡು."

ಸುಧಾ ಒಂದು ತುಂಡು ಕೇಕ್ ಬಾಯಿಗೆ ಹಾಕಿಕೊಂಡಳು. ಅದು ಕೇವಲ ರುಚಿಯಾಗಿರಲಿಲ್ಲ, ಅದರಲ್ಲಿ ಒಂದು ರೀತಿಯ ಮನೆಯ ಮಮತೆಯಿತ್ತು. "ಇದು ಅದ್ಭುತವಾಗಿದೆ ರೋಸ್ ಅಮ್ಮ! ಇಂತಹ ರುಚಿ ನಾನು ಸಿಟಿಯ ದೊಡ್ಡ ಬೇಕರಿಗಳಲ್ಲೂ ನೋಡಿಲ್ಲ," ಸುಧಾ ಅಪ್ರಯತ್ನವಾಗಿ ಹೊಗಳಿದಳು.

 

ರೋಸ್ ಅಮ್ಮ ನಗುತ್ತಾ ಮಿಲ್ಟನ್ ಕಡೆಗೆ ಕೈ ತೋರಿಸಿದರು. "ಇದು ಮಿಲ್ಟನ್ ಕುಟುಂಬದ ಗುಟ್ಟು. ಈ ಬಂಗಲೆ ಮತ್ತು ಈ ಬೇಕರಿ ಬ್ರಿಟಿಷರ ಕಾಲದ್ದು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಎಲ್ಲರೂ ಇಂಗ್ಲೆಂಡ್‌ಗೆ ಮರಳಿದರು. ಆದರೆ ನನ್ನ ತಂದೆ ಈ ಮಣ್ಣನ್ನು ಬಿಟ್ಟು ಹೋಗಲು ಒಪ್ಪಲಿಲ್ಲ. ಅವರಿಗೆ ಜ್ಯೋತಿಪುರದ ಪ್ರೀತಿ ದೊಡ್ಡದಾಗಿತ್ತು. ನಂತರ ಮಿಲ್ಟನ್ ಕೂಡ ನನ್ನನ್ನು ಮದುವೆಯಾಗಿ ಇಲ್ಲೇ ಉಳಿದುಕೊಂಡರು."

 

ಮಿಲ್ಟನ್ ಅಂಕಲ್ ಪಕ್ಕದಲ್ಲೇ ಕುಳಿತು ತಮ್ಮ ಹಳೆಯ ಫೋಟೋ ಆಲ್ಬಮ್ ತೆರೆದರು. "ನೋಡು ಸುಧಾ, ಈ ಬಂಗಲೆಯಲ್ಲಿ ಒಮ್ಮೆ ದೊಡ್ಡ ಹಬ್ಬಗಳಾಗುತ್ತಿದ್ದವು. ಈಗ ನಾವಿಬ್ಬರೇ. ನಮ್ಮ ಮಕ್ಕಳು ಲಂಡನ್‌ನಲ್ಲಿ ನೆಲೆಸಿದ್ದಾರೆ, ಪ್ರತಿ ವರ್ಷ ಅಲ್ಲಿಗೆ ಬರಲು ಕರೆಯುತ್ತಾರೆ. ಆದರೆ ನಮಗೆ ಇಲ್ಲಿನ ಕೆರೆ, ಇಲ್ಲಿನ ದೇವಾಲಯದ ಗಂಟೆ ಮತ್ತು ಈ ಜನರ ಪ್ರೀತಿ ಬಿಟ್ಟು ಹೋಗಲು ಮನಸ್ಸಿಲ್ಲ. ಇಲ್ಲಿ ನಾವು ಅಲ್ಪತೃಪ್ತರು, ಆದರೆ ತುಂಬಾ ಸುಖವಾಗಿದ್ದೇವೆ." ರೋಸ್ ಅಮ್ಮ ಸುಧಾಳ ಕೈ ಹಿಡಿದು ಹೇಳಿದರು, "ಮಗು, ಸಂತೋಷ ಅನ್ನೋದು ಸಿಟಿಯ ವೇಗದಲ್ಲಿಲ್ಲ, ಅದು ನಾವು ಇರುವ ಜಾಗವನ್ನು ಎಷ್ಟು ಪ್ರೀತಿಸುತ್ತೇವೆ ಅನ್ನೋದರಲ್ಲಿದೆ. ಈ ಊರು ನಿನಗೂ ಏನನ್ನೋ ಕೊಡಲು ಕಾಯುತ್ತಿದೆ, ನೀನು ಅದನ್ನು ಸ್ವೀಕರಿಸಬೇಕಷ್ಟೇ."

 

ಅಂದು ಮಧ್ಯಾಹ್ನ ಮನೆಗೆ ಹಿಂದಿರುಗುವಾಗ ಸುಧಾಳ ಕೈಯಲ್ಲಿ ರೋಸ್ ಅಮ್ಮ ಪ್ರೀತಿಯಿಂದ ಕೊಟ್ಟಿದ್ದ ಬಿಸಿ ಬಿಸಿ ಬ್ರೆಡ್ ಪ್ಯಾಕೆಟ್ ಇತ್ತು. ಮನಸ್ಸಿನಲ್ಲಿ ರೋಸ್ ಅಮ್ಮನ ಮಾತುಗಳು ಗುಂಯ್ಗುಡುತ್ತಿದ್ದವು. ತಮಗೆ ಸಿಕ್ಕ ದೊಡ್ಡ ಕಾಸ್ಮೋಪೊಲಿಟಿನ್ ನಗರವಾಸದ ಅವಕಾಶ ಬಿಟ್ಟು, ಸಣ್ಣ ಬೇಕರಿ ನಡೆಸುತ್ತಾ ಜ್ಯೋತಿಪುರದಲ್ಲಿ ನೆಮ್ಮದಿ ಕಂಡುಕೊಂಡ ಆ ದಂಪತಿಗಳ ಜೀವನ ಸುಧಾಳಿಗೆ ಒಂದು ಹೊಸ ಅನುಭವ ಹಾಗು ಯೋಚನೆ ಕೊಟ್ಟಿತ್ತು.

 

ಅಂದು ಸಂಜೆ ರಾಜೇಶ್ ಮನೆಗೆ ಬಂದಾಗ, ಸುಧಾ ಎಂದಿನಂತೆ ಪೇಲವ ನೋಟ ಬೀರುವ ಬದಲು, "ರಾಜೇಶ್, ರೋಸ್ ಅಮ್ಮ ಕೊಟ್ಟ ಬ್ರೆಡ್ ಇದು, ಟೀ ಜೊತೆ ಸವಿಯೋಣ ಬಾ," ಎಂದು ನಕ್ಕಾಗ ರಾಜೇಶನಿಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ.

 

ಅಧ್ಯಾಯ ೪: ಗುಡ್ಡದ ಮೇಲಿನ ಗುಡಿ ಮತ್ತು ನಂಬಿಕೆಯ ಬೆಳಕು


ಜ್ಯೋತಿಪುರದ ಸೌಂದರ್ಯವಿರುವುದೇ ಆ ಗುಡ್ಡದ ಮೇಲೆ. ಊರಿನ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಕಾಣುವ ಆಂಜನೇಯನ ಗುಡಿ, ಪಟ್ಟಣದ ಕಾವಲುಗಾರನಂತೆ ಭಾಸವಾಗುತ್ತಿತ್ತು. ಸುಧಾಳಿಗೆ ಗುಡಿ-ಗುಂಡಾರಗಳ ಮೇಲೆ ಅಷ್ಟೇನು ಆಸಕ್ತಿ ಇರಲಿಲ್ಲ, ಆದರೆ ಪಟೇಲರ ಮಗ ಶಂಕರಪ್ಪ ಮತ್ತು ರೋಸ್ ಅಮ್ಮನ ಭೇಟಿಯ ನಂತರ ಅವಳಿಗೆ ಊರನ್ನು ಅರಿಯುವ ಕುತೂಹಲ ಮೂಡಿತ್ತು.

 

ಒಂದು ಶನಿವಾರದ ಸಂಜೆ, ರಾಜೇಶ್ ಮತ್ತು ಸುಧಾ ಗುಡ್ಡದ ಮೆಟ್ಟಿಲುಗಳನ್ನು ಹತ್ತಲು ನಿರ್ಧರಿಸಿದರು. ಸುಮಾರು ನೂರಾ ಐವತ್ತು ಮೆಟ್ಟಿಲುಗಳ ಚಿಕ್ಕ ಗುಡ್ಡ. ಆ ಹಾದಿಯಲ್ಲಿ ಅಲ್ಲಲ್ಲಿ ಹಳೆಯ ಕಲ್ಲಿನ ಕೆತ್ತನೆಗಳಿದ್ದವು. ಸುಧಾ ಮೆಟ್ಟಿಲು ಹತ್ತುತ್ತಾ ಸುಸ್ತಾಗಿ ಒಂದು ಕಡೆ ಕುಳಿತಾಗ, ಅಲ್ಲಿಯೇ ಹೂವು ಮಾರುತ್ತಿದ್ದ ಒಬ್ಬ ಮುದಿ ವ್ಯಕ್ತಿ ಕಂಡರು. ಅವರ ಹೆಸರು 'ಸಿದ್ದಪ್ಪ'. "ಏನಮ್ಮಾ, ನಗರದ ಗಾಳಿ ಸೇವಿಸಿ ಅಭ್ಯಾಸವಾಗಿ ಇಲ್ಲಿ ಹತ್ತೋದು ಕಷ್ಟ ಆಗ್ತಿದೆಯಾ?" ಎಂದು ಸಿದ್ದಪ್ಪ ನಗುತ್ತಾ ಕೇಳಿದರು. ಸುಧಾ ನಕ್ಕು, "ಹೌದು ಅಜ್ಜ, ಅಲ್ಲಿ ಅಪಾರ್ಟ್ಮೆಂಟ್ ಮೆಟ್ಟಿಲುಗಳು, ಇಲ್ಲಿ ಗುಡ್ಡದ ಮೆಟ್ಟಿಲುಗಳು ಅಷ್ಟೇ ವ್ಯತ್ಯಾಸ, ಆದರೂ ಅಭ್ಯಾಸ ತಪ್ಪಿಹೋಗಿದೆ ಅದಕ್ಕೆ" ಎಂದಳು. "ಇದು ಬರೀ ಮೆಟ್ಟಿಲಲ್ಲಮ್ಮ, ನಂಬಿಕೆಯ ದಾರಿ. ಈ ಗುಡಿ ಬಗ್ಗೆ ಗೊತ್ತಾ? ಕೆಲವರು ಇದು ಹನುಮಂತ ಸಂಜೀವಿನಿ ತರುವಾಗ ಬಿದ್ದ ಪುಟ್ಟ ಗುಡ್ಡ ಅಂತಾರೆ, ಇನ್ನು ಕೆಲವರು ಪಾಂಡವರು ವನವಾಸದಲ್ಲಿದ್ದಾಗ ಇಲ್ಲಿ ಭೀಮಸೇನ ಈ ಗುಡಿ ಕಟ್ಟಿಸಿದ ಅಂತಾರೆ. ದ್ವಾಪರ ಇರಲಿ, ತ್ರೇತಾ ಇರಲಿ... ಈ ಮಣ್ಣಲ್ಲಿ ಒಂದು ಶಕ್ತಿ ಇದೆ," ಎಂದರು ಸಿದ್ದಪ್ಪ.

 

ಸುಧಾ ಗುಡ್ಡದ ತುತ್ತತುದಿ ತಲುಪಿದಾಗ ಅವಳ ಕಣ್ಣಮುಂದೆ ಕಂಡ ದೃಶ್ಯ ಅವಳನ್ನು ಬೆರಗುಗೊಳಿಸಿತು. ಅಲ್ಲಿಂದ ಇಡೀ ಜ್ಯೋತಿಪುರ ಒಂದು ನಕ್ಷೆಯಂತೆ ಕಾಣುತ್ತಿತ್ತು. ದೂರದಲ್ಲಿ ಕನ್ನಡಿಯಂತೆ ಹೊಳೆಯುವ ಜ್ಯೋತಿ ಸರೋವರ, ತೆಂಗಿನ ತೋಟಗಳು, ಬ್ರಿಟಿಷ್ ಬಂಗಲೆಗಳ ಕೆಂಪು ಹಂಚಿನ ಮಾಡುಗಳು ಮತ್ತು ಜನರ ಸಣ್ಣ ಸಣ್ಣ ಚಟುವಟಿಕೆಗಳು. ಬೆಂಗಳೂರಿನ ಎತ್ತರದ ಕಟ್ಟಡದ ಮೇಲಿಂದ ಕಾಣುವ ಟ್ರಾಫಿಕ್ ಜಾಮ್‌ಗಿಂತ ಇದು ಎಷ್ಟೋ ಪಟ್ಟು ಸುಂದರವಾಗಿತ್ತು.

 

ಗುಡಿಯ ಆವರಣದಲ್ಲಿ ಕುಳಿತಿದ್ದಾಗ, ಆ ಪವಿತ್ರ ಮೌನದಲ್ಲಿ ಸುಧಾಳಿಗೆ ತನ್ನೊಳಗಿನ ಅಸಮಾಧಾನ ಕರಗಿದಂತೆ ಭಾಸವಾಯಿತು. ತಾನು ನಗರದ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ತಾನು ಯಾರಿಗಿಂತ ಏನು ಕಮ್ಮಿ ಎಂಬ ಅವಳ ಭಾವನೆ, ಆ ಸಾವಿರಾರು ವರ್ಷಗಳ ಇತಿಹಾಸವಿರುವ ಗುಡಿಯ ಮುಂದೆ ಅತ್ಯಂತ ಸಣ್ಣದಾಗಿ ಕಂಡಿತು.  ಅಷ್ಟರಲ್ಲಿ ಅಲ್ಲಿಗೆ ಬಂದ ಅರ್ಚಕರು ಇವರಿಗೆ ಪ್ರಸಾದ ನೀಡಿ, "ಇಲ್ಲಿಗೆ ಬರುವಾಗ ಬಹಳ ಜನ ಮನಸಿನಲ್ಲಿ ಭಾರ ಹೊತ್ತು ಬರುತ್ತಾರೆ, ಆದರೆ ಈ ಗುಡ್ಡ ಹತ್ತಿ ಇಳಿಯುವಾಗ ಎಲ್ಲರೂ ಹಗುರವಾಗಿ ಕೆಳಗೆ ಹೋಗುತ್ತಾರೆ. ಅಮ್ಮಾವ್ರೆ, ಈ ಗುಡ್ಡದ ಮೇಲಿನ ಪಕ್ಷಿನೋಟ ನಮಗೆ ನಮ್ಮ ಸುತ್ತಲಿನ ಜಗತ್ತನ್ನು ಪ್ರೀತಿಯಿಂದ ನೋಡಲು ಕಲಿಸುತ್ತೆ," ಎಂದರು. ಆ ಮಾತು ನೇರವಾಗಿ ಸುಧಾಳ ಮನಸ್ಸಿಗೆ ನಾಟಿತು.

 

ರಾಜೇಶ್ ಕೇಳಿದ, "ಏನು ಯೋಚನೆ ಮಾಡ್ತಿದ್ದೀಯಾ ಸುಧಾ?" ಸುಧಾ ಗುಡ್ಡದ ಕೆಳಗೆ ಬೆಳಗುತ್ತಿದ್ದ ಪಟ್ಟಣದ ದೀಪಗಳನ್ನು ನೋಡುತ್ತಾ ಹೇಳಿದಳು, "ನಾನು ಇಷ್ಟು ದಿನ 'ನಾನು' ಅನ್ನೋ ಸಣ್ಣ ಜಗತ್ತಿನಲ್ಲಿ ಬದುಕುತ್ತಿದ್ದೆ ಅನ್ಸುತ್ತೆ ರಾಜೇಶ್. ಇಲ್ಲಿನ ಈ ಮೌನದಲ್ಲಿ ಏನೋ ಒಂದು ಹೊಸ ಪಾಠ ಇದೆ."

 

ಅಂದು ಕೆಳಗೆ ಇಳಿಯುವಾಗ ಸುಧಾಳ ಹೆಜ್ಜೆಗಳಲ್ಲಿ ಮೊದಲಿನ ಅವಸರವಿರಲಿಲ್ಲ, ಬದಲಾಗಿ ಒಂದು ರೀತಿಯ ಸ್ಥಿಮಿತವಿತ್ತು. ಜ್ಯೋತಿಪುರ ಅವಳನ್ನು ತನ್ನ ಕಥೆಗಳ ಮೂಲಕ ಮೆಲ್ಲನೆ ಆವರಿಸಿಕೊಳ್ಳುತ್ತಿತ್ತು.

 

ಅಧ್ಯಾಯ ೫: 'ಚಿತ್ರಾಲಯ' ಟಾಕೀಸ್ ಮತ್ತು ಕಲಾಭಿಮಾನಿ ರಾಮಚಂದ್ರ
 

ಒಂದು ಭಾನುವಾರ ಮಧ್ಯಾಹ್ನ ಊಟವಾಗಿತ್ತು, ರಾಜೇಶ್ ಏನನ್ನೋ ಯೋಚಿಸುತ್ತ ಕೂತಿದ್ದ ಸುಧಾಳನ್ನು ನೋಡಿದ. "ಸುಧಾ, ಏನಿದು ಇಷ್ಟೊಂದು ಗಂಭೀರವಾಗಿ ಯೋಚನೆ ಮಾಡ್ತಾ ಕೂತಿದೀಯ" ಎಂದು ಮಾತಾಡಿಸಿದ. "ಏನು ಇಲ್ಲ ರಾಜೇಶ್ ನಾವು ಇಲ್ಲಿಗೆ ಬಂದು ನಮ್ಮ ಬೆಂಗಳೂರಿನ ಜೀವನದ ಲಾಭಗಳನ್ನು ಕಳೆದು ಕೊಂಡೆವು ಅನ್ನಿಸುತ್ತೆ. ಅಲ್ಲಿಯೇ ಇದ್ದಿದ್ದರೆ, ಎಚ್ ಆರ್ ಎ ಜಾಸ್ತಿ ಬರ್ತಾ ಇತ್ತು ಹಾಗೆಯೇ ನನಗೂ ಕೂಡ ಬಿಡುವಿನ ವೇಳೆಯಲ್ಲಿ ಸಂಪಾದನೆ ಮಾಡುವ ಅವಕಾಶ ಇತ್ತು ಅನ್ನಿಸುತ್ತೆ" ಎಂದು ಹೇಳಿದಳು. ರಾಜೇಶ್ ಆಗ ಯೋಚಿಸುತ್ತ, ಈಗ ಒಂದು ಕೆಲಸ ಮಾಡೋಣ ಹೀಗೆ ಮನೆಯಲ್ಲೇ ಯೋಚನೆ ಮಾಡುತ್ತ ಕೂರುವ ಬದಲು ಹೊರಗೆ ಅಡ್ಡಾಡಿಕೊಂಡು ಬರೋಣ. ಇವತ್ತು ನಿನಗೆ ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಸುತ್ತೇನೆ, ಮೊನ್ನೆಯೆಷ್ಟೇ ನಮ್ಮ ಬ್ಯಾಂಕಲ್ಲಿ ನನಗೆ ಪರಿಚಯ ಆದವರು ಎಂದು ಹೇಳಿದ. ಇಬ್ಬರು ಮನೆಯಿಂದ ಹೊರಗೆ ಹೊರಟರು.

 

ಜ್ಯೋತಿಪುರದ ಮುಖ್ಯ ರಸ್ತೆಯ ಕೊನೆಯಲ್ಲಿ, ಹಳೆಯ ಶೈಲಿಯ ಕಲ್ಲಿನ ಕಟ್ಟಡವೊಂದರ ಮೇಲೆ ಕೆಂಪು ಬಣ್ಣದ ಅಕ್ಷರಗಳಲ್ಲಿ 'ಚಿತ್ರಾಲಯ ಟಾಕೀಸ್' ಎಂದು ಬರೆಯಲಾಗಿತ್ತು. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ ಗಾಜಿನ ಕಟ್ಟಡಗಳನ್ನು ನೋಡಿ ರೂಢಿಯಾಗಿದ್ದ ಸುಧಾಳಿಗೆ, ಈ ಟಾಕೀಸ್ ಒಂದು ವಸ್ತುಸಂಗ್ರಹಾಲಯದಂತೆ ಕಂಡಿತು. ಟಾಕೀಸ್‌ನ ಒಳಗಿನ ಸಣ್ಣ ಕೋಣೆಯಲ್ಲಿ ಎಪ್ಪತ್ತು ವರ್ಷದ ರಾಮಚಂದ್ರ ಅವರು ಹಳೆಯ ಸಿನೆಮಾ ರೀಲ್‌ಗಳನ್ನು ಶುಚಿಗೊಳಿಸುತ್ತಾ ಕುಳಿತಿದ್ದರು. ಗೋಡೆಯ ತುಂಬಾ ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್ ಮತ್ತು ಡಾ. ಅಂಬರೀಶ್ ಅವರ ಹಳೆಯ ಬ್ಲ್ಯಾಕ್ ಅಂಡ್ ವೈಟ್ ಫೋಟೋಗಳಿದ್ದವು.

 

"ಒಹೋ ಬನ್ನಿ ಬನ್ನಿ, ಬ್ಯಾಂಕ್ ಮ್ಯಾನೇಜರ್ ಸಾಹೇಬ್ರೆ, ಬನ್ನಿ ಅಮ್ಮಾವ್ರೆ," ಎಂದು ರಾಮಚಂದ್ರ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಅವರ ಧ್ವನಿಯಲ್ಲಿ ಗಾಂಭೀರ್ಯ ಮತ್ತು ನಾಟಕೀಯ ಲಹರಿಯಿತ್ತು. "ಸಿನೆಮಾ ಅಂದ್ರೆ ಬರೀ ಮನರಂಜನೆ ಅಲ್ಲಮ್ಮ, ಅದು ನಮ್ಮ ಸಂಸ್ಕೃತಿಯ ಕನ್ನಡಿ," ಎಂದು ಮಾತು ಶುರು ಮಾಡಿದರು.

 

ಸುಧಾ ಕುತೂಹಲದಿಂದ ಕೇಳಿದಳು, "ಅಂಕಲ್, ನೀವು ಈ ಊರಲ್ಲಿ ಇಷ್ಟು ದೊಡ್ಡ ಟಾಕೀಸ್ ಕಟ್ಟಲು ಏನು ಪ್ರೇರಣೆ?"

ರಾಮಚಂದ್ರ ಅವರ ಕಣ್ಣುಗಳು ಹೊಳೆಯತೊಡಗಿದವು. "ನಾನು ಯುವಕನಿದ್ದಾಗ ಮೈಸೂರಿನಲ್ಲಿ ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದೆ. ತೆರೆಯ ಮೇಲೆ ನನ್ನ ಮುಖ ಕಂಡಾಗ ಸಿಗುತ್ತಿದ್ದ ಆನಂದಕ್ಕೆ ಬೆಲೆ ಕಟ್ಟಲಾಗದು. ಆದರೆ ನನಗೆ ಕೇವಲ ನಟನಾಗಿ ಉಳಿಯುವುದು ಇಷ್ಟವಿರಲಿಲ್ಲ. ನಮ್ಮ ಜ್ಯೋತಿಪುರದ ಜನರಿಗೆ ಕನ್ನಡದ ಶ್ರೇಷ್ಠ ಸಿನಿಮಾಗಳನ್ನು ತೋರಿಸಬೇಕು ಎಂಬ ಹಠವಿತ್ತು. ಹಾಗೆ ಹುಟ್ಟಿದ್ದೇ ಈ ಚಿತ್ರಾಲಯ."

 

ಅವರು ಒಂದು ಹಳೆಯ ಫೋಟೋ ತೋರಿಸುತ್ತಾ ಹೇಳಿದರು, "ಒಮ್ಮೆ ಡಾ. ರಾಜ್‌ಕುಮಾರ್ ಅವರು ಇಲ್ಲಿಗೆ ಬಂದಿದ್ದರು. ಈ ನೆಲದ ಗುಣವೇ ಹಾಗಿದೆ, ಇಲ್ಲಿನ ಕಲೆಗೆ ಅಷ್ಟು ಗೌರವವಿದೆ. ಬೆಂಗಳೂರಿನಲ್ಲಿ ಜನ ವೀಕೆಂಡ್ ಕಳೆಯಲು ಸಿನಿಮಾ ನೋಡ್ತಾರೆ, ಆದ್ರೆ ಇಲ್ಲಿ ಜನ ಕಥೆಯೊಂದಿಗೆ ಬೆರೆಯಲು ಬರ್ತಾರೆ. ಇಂದಿಗೂ ನಾನು ಶನಿವಾರ ಯಾವುದಾದರೂ ಹಳೆಯ ಸಿನಿಮಾ ಹಾಕಿದ್ರೆ, ಊರಿನ ಜನರೆಲ್ಲಾ ಬಂದು ಚಪ್ಪಾಳೆ ತಟ್ಟೋದನ್ನ ನೋಡಿದ್ರೆ ನನ್ನ ನಟನಾ ಜೀವನ ಸಾರ್ಥಕ ಅನ್ನಿಸುತ್ತೆ."

 

ಸುಧಾಳಿಗೆ ಅವರ ಮಾತುಗಳಲ್ಲಿನ ಕನ್ನಡ ಚಿತ್ರರಂಗದ ಮೇಲಿನ ಅಭಿಮಾನ ಕಂಡು ಆಶ್ಚರ್ಯವಾಯಿತು. ಓಟಿಟಿ ಮತ್ತು ಇಂಟರ್ನೆಟ್ ಜಗತ್ತಿನಲ್ಲಿ ಈ ಮನುಷ್ಯ ಇನ್ನೂ ಈ 'ಸಿಂಗಲ್ ಸ್ಕ್ರೀನ್' ಟಾಕೀಸ್ ಅನ್ನು ಹಳೆಯ ನೆನಪುಗಳ ಮೂಲಕ ಹೇಗೆ ಜೀವಂತವಾಗಿಟ್ಟಿದ್ದಾರೆ ಎಂಬುದು ಬೆರಗುಗೊಳಿಸಿತು.

 

"ನೋಡಮ್ಮ, ಈಗಿನ ಸಿನೆಮಾಗಳು ಬರುತ್ತೆ, ಹೋಗುತ್ತೆ. ಆದ್ರೆ ನಮ್ಮ 'ಬಂಗಾರದ ಮನುಷ್ಯ' ಅಥವಾ 'ಶರಪಂಜರ'ದಂತಹ ಚಿತ್ರಗಳಲ್ಲಿ ಒಂದು ಜೀವ ಇತ್ತು. ಇಂದಿಗೂ ನಾನು ಆ ರೀಲ್‌ಗಳನ್ನು ಕೈಯಲ್ಲಿ ಮುಟ್ಟಿದಾಗ ನನಗೆ ಆ ಕಾಲದ ನೆನಪುಗಳು ಮರುಕಳಿಸುತ್ತವೆ. ಈ ಟಾಕೀಸ್ ನನ್ನ ಕಲಾಭಿಮಾನದ ದೇವಾಲಯ," ಎಂದರು ರಾಮಚಂದ್ರ ಅಂಕಲ್ ಭಾವುಕರಾಗಿ.

ಅಲ್ಲಿಂದ ಹೊರಬರುವಾಗ ಸುಧಾ ಕೇಳಿದಳು, "ಅಂಕಲ್, ಇಷ್ಟೆಲ್ಲಾ ಖರ್ಚು ಮಾಡಿ ಈ ಹಳೆಯ ಟಾಕೀಸ್ ನಡೆಸೋದು ಕಷ್ಟ ಅನ್ಸೋದಿಲ್ವಾ?" ರಾಮಚಂದ್ರ ಅಂಕಲ್ ನಕ್ಕು ಹೇಳಿದರು, "ಕೆಲವೊಂದು ಕೆಲಸಗಳನ್ನ ಲಾಭಕ್ಕಾಗಿ ಮಾಡಬಾರದಮ್ಮ, ತೃಪ್ತಿಗಾಗಿ ಮಾಡಬೇಕು. ಜ್ಯೋತಿಪುರದ ಜನರಿಗೆ ಈ ಚಿತ್ರಾಲಯ ಅಂದ್ರೆ ಒಂದು ಸಂಭ್ರಮ. ಆ ಸಂಭ್ರಮ ಉಳಿಸೋದು ನನ್ನ ಕರ್ತವ್ಯ."

 

ರಾಮಚಂದ್ರ ಅವರ ಈ ಕಲಾಭಿಮಾನ ಮತ್ತು ಕನ್ನಡ ಭಾಷೆಯ ಮೇಲಿನ ಪ್ರೇಮ ಸುಧಾಳಲ್ಲಿ ಒಂದು ಹೊಸ ಚಿಂತನೆ ಮೂಡಿಸಿತು. ಬೆಂಗಳೂರಿನಲ್ಲಿ ಎಲ್ಲವನ್ನೂ 'ವ್ಯಾಪಾರ' ಮತ್ತು 'ಲಾಭ'ದ ದೃಷ್ಟಿಯಿಂದ ನೋಡುತ್ತಿದ್ದ ಅವಳಿಗೆ, ಜ್ಯೋತಿಪುರದ ಈ ಮನುಷ್ಯ ಕೇವಲ 'ಪ್ರೀತಿ'ಗಾಗಿ ಒಂದು ಉದ್ಯಮವನ್ನು ಉಳಿಸಿಕೊಳ್ಳುತ್ತಿರುವುದು ದೊಡ್ಡ ವಿಷಯವಾಗಿ ಕಂಡಿತು.

ಅಧ್ಯಾಯ ೬: ರಂಗಮಂದಿರದ ನಾಟಕ ಮತ್ತು ಸೌಹಾರ್ದತೆಯ ಪಾಠ
ಜ್ಯೋತಿಪುರದ ಹೃದಯಭಾಗದಲ್ಲಿ ಒಂದು ಸಣ್ಣ ರಂಗಮಂದಿರವಿದೆ. ಅದು ಕೇವಲ ಇಟ್ಟಿಗೆ ಮತ್ತು ಸಿಮೆಂಟ್‌ನ ಕಟ್ಟಡವಲ್ಲ; ಬದಲಾಗಿ ಆ ಊರಿನ ಭಾವನೆಗಳ ಸಂಗಮ. ವರ್ಷಕ್ಕೊಮ್ಮೆ ನಡೆಯುವ 'ಜ್ಯೋತಿಪುರ ಜಾತ್ರೆ'ಯ ಅಂಗವಾಗಿ ಅಲ್ಲಿ ಒಂದು ಬೃಹತ್ ನಾಟಕ ಪ್ರದರ್ಶನ ಏರ್ಪಾಡಾಗಿತ್ತು. ಈ ಬಾರಿ ಆರಿಸಿಕೊಂಡಿದ್ದ ನಾಟಕ 'ಸಂಸಾರ ನೌಕೆ'.

 

ಸುಧಾಳಿಗೆ ಆಶ್ಚರ್ಯವಾಗಿದ್ದು ನಾಟಕದ ತಯಾರಿ ನಡೆಯುತ್ತಿದ್ದ ರೀತಿ ನೋಡಿ. ರಂಗಮಂದಿರದ ಹಿಂಭಾಗದಲ್ಲಿ ನಾಟಕದ ತಾಲೀಮು (Rehearsal) ನಡೆಯುತ್ತಿತ್ತು. ರಾಜೇಶ್ ಸುಧಾಳನ್ನು ಅಲ್ಲಿಗೆ ಕರೆದೊಯ್ದಾಗ ಅವಳು ಕಂಡ ದೃಶ್ಯ ನಿಜಕ್ಕೂ ಅವಳ ಕಣ್ಣು ತೆರೆಸುವಂತಿತ್ತು. ನಾಟಕದ ನಿರ್ದೇಶನ ಮಾಡುತ್ತಿದ್ದವರು ಸೈಯದ್ ಭಾಯಿ. ಅವರು ಮಸೀದಿಯ ಪಕ್ಕದಲ್ಲೇ ಸಣ್ಣ ಟೈಲರ್ ಅಂಗಡಿ ಇಟ್ಟುಕೊಂಡಿದ್ದರೂ, ನಾಟಕದ ವಿಷಯ ಬಂದಾಗ ಅವರು ಶಿಸ್ತಿನ ಮಾಸ್ಟರ್. ವೇದಿಕೆಯ ಮೇಲಿದ್ದ ಅರ್ಚಕರ ಮಗ ರವಿ, 'ರಾಮ'ನ ಪಾತ್ರಕ್ಕೆ ಮಾತುಗಳನ್ನು ಅಭ್ಯಾಸ ಮಾಡುತ್ತಿದ್ದರೆ, ಚರ್ಚಿನ ಫಾದರ್ ಅವರ ಸೋದರಳಿಯ ಆಂಟೋನಿ ವೇದಿಕೆಯ ಹಿನ್ನೆಲೆ ವಿನ್ಯಾಸದಲ್ಲಿ ಬ್ಯುಸಿಯಾಗಿದ್ದ.

 

"ಸುಧಾ," ರಾಜೇಶ್ ಮೆಲ್ಲನೆ ಹೇಳಿದ, "ಇಲ್ಲಿ ಪಾತ್ರಗಳಿಗೆ ಜಾತಿ ಇಲ್ಲ. ಸೈಯದ್ ಭಾಯಿ ನಾಟಕ ಬರೆಯುತ್ತಾರೆ, ರವಿ ಅಭಿನಯಿಸುತ್ತಾನೆ, ಆಂಟೋನಿ ಸಂಗೀತ ನೀಡುತ್ತಾನೆ. ಇವರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರುವುದಿಲ್ಲ ಅಂತಲ್ಲ, ಆದರೆ ಕಲೆ ಮತ್ತು ಊರಿನ ಸಂಭ್ರಮದ ಮುಂದೆ ಅವೆಲ್ಲವೂ ನಗಣ್ಯ." ಅಷ್ಟರಲ್ಲಿ ಅಲ್ಲಿ ಒಂದು ಸಣ್ಣ ಗದ್ದಲವಾಯಿತು. ಮಾರುಕಟ್ಟೆಯ ರಮೇಶ ಮತ್ತು ಹಾಲಿನ ಗಂಗಪ್ಪ ಯಾವುದೋ ಹಳೆಯ ಸಾಲದ ವಿಷಯಕ್ಕೆ ಜಗಳಕ್ಕೆ ನಿಂತಿದ್ದರು. ಒಬ್ಬರನ್ನೊಬ್ಬರು ಗಟ್ಟಿಯಾಗಿ ಬಯ್ಯುತ್ತಿದ್ದರು. ಸುಧಾ ಅಂದುಕೊಂಡಳು, "ಇನ್ನು ಇವತ್ತಿನ ನಾಟಕದ ಅಭ್ಯಾಸ ಮುಗಿಯಿತು, ಇವರೆಲ್ಲಾ ಕಿತ್ತಾಡಿ ಈಗ ಮನೆಗೆ ಹೋಗುತ್ತಾರೆ." ಆದರೆ ಅವಳು ಅಂದುಕೊಂಡದ್ದು ಸುಳ್ಳಾಯಿತು. ಐದು ನಿಮಿಷಗಳಲ್ಲಿ ಸೈಯದ್ ಭಾಯಿ ಜೋರಾಗಿ ಶಿಳ್ಳೆ ಹೊಡೆದು, "ಏಯ್! ನಿಮ್ಮ ವೈಯಕ್ತಿಕ ಜಗಳ ಹೊರಗೆ ಇಟ್ಟು ಬನ್ನಿ. ಈಗ ನೀವು ಪಾತ್ರಧಾರಿಗಳು, ಜಗಳ ಮರೆತು ಬಣ್ಣ ಹಚ್ಚಿ," ಎಂದು ಗದರಿಸಿದರು. ಅಚ್ಚರಿಯೆಂದರೆ, ಸಿಟ್ಟಿನಿಂದ ಕೆಂಪಾಗಿದ್ದ ಇಬ್ಬರೂ ತಕ್ಷಣ ಶಾಂತರಾಗಿ ತಮ್ಮ ಸಂಭಾಷಣೆಗಳನ್ನು ಹೇಳಲು ಶುರು ಮಾಡಿದರು.

 

ಈ ಸನ್ನಿವೇಶ ಸುಧಾಳಿಗೆ ಒಂದು ದೊಡ್ಡ ಪಾಠ ಕಲಿಸಿತು. ಬೆಂಗಳೂರಿನಲ್ಲಿ ನೆರೆಹೊರೆಯವರ ಜೊತೆ ಮಾತನಾಡುವುದಕ್ಕೂ ಮೊದಲು ಅವರ ಅಂತಸ್ತು, ಕೆಲಸ ಮತ್ತು ಹಿನ್ನೆಲೆ ನೋಡುತ್ತಿದ್ದ ಸುಧಾಳಿಗೆ, ಇಲ್ಲಿನ ಜನರ ನಡುವಿನ 'ಸೌಹಾರ್ದತೆ' ಅಚ್ಚರಿ ತಂದಿತು. ಇಲ್ಲಿನ ಜನರು ಅಲ್ಪ ತೃಪ್ತರು, ಒಮ್ಮೊಮ್ಮೆ ಕಲಹ ಮಾಡುತ್ತಾರೆ, ಆದರೆ ಕಷ್ಟ ಬಂದಾಗ ಅಥವಾ ಊರಿನ ಗೌರವದ ಪ್ರಶ್ನೆ ಬಂದಾಗ ಅವರೆಲ್ಲರೂ ಒಂದೇ ಕುಟುಂಬದಂತೆ ನಿಲ್ಲುತ್ತಾರೆ.

 

ಸಂಜೆ ಮನೆಗೆ ಬಂದ ಮೇಲೆ ಸುಧಾ ರಾಜೇಶನಿಗೆ ಹೇಳಿದಳು, "ರಾಜೇಶ್, ಈ ಊರಿನಲ್ಲಿ ಯಾವುದೋ ಒಂದು ಅಗೋಚರ ಶಕ್ತಿ ಇದೆ ಅನ್ಸುತ್ತೆ. ಚರ್ಚ್, ಮಸೀದಿ, ದೇವಸ್ಥಾನ ಎಲ್ಲವೂ ಇದ್ದರೂ, ಅವೆಲ್ಲಕ್ಕಿಂತ ಮಿಗಿಲಾದ 'ಜ್ಯೋತಿಪುರ' ಅನ್ನೋ ಭಾವನೆ ಇವರನ್ನ ಒಂದಾಗಿಸಿದೆ. ನಾನು ಇಷ್ಟು ದಿನ ಸಿಟಿಯಲ್ಲಿ ಬರೀ ಕಾಂಪಿಟೇಷನ್ ಮಾತ್ರ ನೋಡಿದ್ದೆ, ಇಲ್ಲಿ ಕೋ-ಆಪರೇಷನ್ ಅಂದ್ರೆ ಏನು ಅಂತ ಅರ್ಥವಾಗ್ತಿದೆ." ಜ್ಯೋತಿಪುರ ಈಗ ಸುಧಾಳಿಗೆ ಕೇವಲ ಒಂದು ವರ್ಗಾವಣೆಯ ತಾಣವಾಗಿರಲಿಲ್ಲ; ಅದು ಮಾನವೀಯ ಸಂಬಂಧಗಳ ಪಾಠಶಾಲೆಯಾಗುತ್ತಿತ್ತು. ಅವಳ ಮನಸ್ಸಿನಲ್ಲಿದ್ದ ಆಧುನಿಕ ಜಗತ್ತಿನ ಕಠಿಣತೆ ಮೆಲ್ಲನೆ ಕರಗಿ, ಹಳ್ಳಿಯ ಸರಳ ಸೌಹಾರ್ದತೆಗೆ ಜಾಗ ಮಾಡಿಕೊಡುತ್ತಿತ್ತು.

 

ಅಧ್ಯಾಯ ೭: ಮಳೆಯ ನಡುವೆ ಒಂದು ತುಮುಲ


ಜ್ಯೋತಿಪುರದಲ್ಲಿ ಸತತ ಮೂರು ದಿನಗಳಿಂದ ಆಕಾಶಕ್ಕೆ ತೂತು ಬಿದ್ದಂತೆ ಮಳೆ ಸುರಿಯುತ್ತಿತ್ತು. ಬೆಂಗಳೂರಿನಲ್ಲಿ ಮಳೆ ಎಂದರೆ ಸುಧಾಳಿಗೆ ನೆನಪಾಗುತ್ತಿದ್ದುದು ಟ್ರಾಫಿಕ್ ಜಾಮ್ ಮತ್ತು ಕಿಟಕಿಯ ಪಕ್ಕ ಕುಳಿತು ಕಾಫಿ ಕುಡಿಯುವುದು ಮಾತ್ರ. ಆದರೆ ಇಲ್ಲಿ ಮಳೆ ಎಂದರೆ ಅದು ಜಲಪ್ರಳಯದ ರೀತಿ ಕಾಣುತಿತ್ತು. ಜ್ಯೋತಿ ಸರೋವರದ ನೀರಿನ ಮಟ್ಟ ಅಪಾಯದ ಹಂತ ಮೀರಿ ಬೆಳೆದಿತ್ತು. ಇಡೀ ಊರಿನಲ್ಲಿ ಒಂದು ರೀತಿಯ ಆತಂಕ ಮನೆಮಾಡಿತ್ತು.

 

ರಾಜೇಶ್ ಬ್ಯಾಂಕಿನ ಕೆಲಸವನ್ನು ಬದಿಗೊತ್ತಿ, ಊರಿನ ಯುವಕರೊಂದಿಗೆ ಸೇರಿ ಕೆರೆಯ ಏರಿಯ ಮೇಲೆ ಮರಳು ಮೂಟೆಗಳನ್ನು ಜೋಡಿಸಲು ಹೋಗಿದ್ದ. ಸುಧಾ ಮನೆಯಲ್ಲಿ ಕುಳಿತು ಹೊರಗಿನ ಆರ್ಭಟವನ್ನು ನೋಡುತ್ತಿದ್ದಳು. ಅವಳಿಗೆ ಮೊದಲ ಬಾರಿಗೆ ಅನ್ನಿಸಿತು - ಈ ಊರಿನ ಜನರ ಬದುಕು ಈ ಕೆರೆಯ ಮೇಲೆ ಎಷ್ಟು ಅವಲಂಬಿತವಾಗಿದೆ ಎಂದು. ಅವಳು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಮನಸ್ಸಾಗದೆ, ಛತ್ರಿ ಹಿಡಿದು ರೋಸ್ ಅಮ್ಮನ ಬೇಕರಿಗೆ ಹೋದಳು. ಅಲ್ಲಿ ರೋಸ್ ಅಮ್ಮ ಗುಡಿಸಲು ಮಗುಚಿಕೊಂಡ ಸಂತ್ರಸ್ತರಿಗಾಗಿ ಬಿಸಿ ಬಿಸಿ ಟೀ ಮತ್ತು ಬ್ರೆಡ್ ಸಿದ್ಧಪಡಿಸುತ್ತಿದ್ದರು. ಸುಧಾ ಕೂಡ ಅವರ ಜೊತೆ ಕೈಜೋಡಿಸಿದಳು.

 

ಮಳೆಯ ಅಬ್ಬರ ಹೆಚ್ಚಾದಾಗ, ಕೆರೆಯ ಕೆಳಭಾಗದ ಹಳ್ಳಗಳಲ್ಲಿ ನೀರು ವೇಗವಾಗಿ ನುಗ್ಗಲು ಶುರುವಾಗಿತ್ತು. ಅಷ್ಟರಲ್ಲಿ ಒಂದು ದೊಡ್ಡ ಕಿರುಚಾಟ ಕೇಳಿಸಿತು. ಸುಣ್ಣದ ವ್ಯಾಪಾರಿ ದೇವಪ್ಪನ ಮಗ, ಐದು ವರ್ಷದ ಪುಟ್ಟ ಬಾಲಕ ಮಳೆಯಲ್ಲಿ ಕಾಗದದ ದೋಣಿ ಆಟವಾಡುತ್ತಾ ಕೆರೆಯ ಏರಿಯ ಪಕ್ಕದ ಹಳ್ಳಕ್ಕೆ ಜಾರಿ ಬಿದ್ದಿದ್ದ. ನೀರಿನ ಸೆಳೆತ ಹೆಚ್ಚಿದ್ದರಿಂದ ಮಗು ಮೆಲ್ಲನೆ ಕೊಚ್ಚಿ ಹೋಗುತ್ತಿತ್ತು. ಜನರೆಲ್ಲಾ ದೂರದಲ್ಲಿ ಏರಿ ಕಟ್ಟುವ ಕೆಲಸದಲ್ಲಿದ್ದರಿಂದ ಯಾರಿಗೂ ತಕ್ಷಣಕ್ಕೆ ಇದು ಗಮನಕ್ಕೆ ಬರಲಿಲ್ಲ. ಸುಧಾ ರಸ್ತೆಯ ಬದಿಯಲ್ಲಿ ನಿಂತು ಇದನ್ನು ನೋಡಿದವಳೇ, ಒಂದು ಕ್ಷಣವೂ ಯೋಚಿಸದೆ ತನ್ನ ಛತ್ರಿಯನ್ನು ಎಸೆದು ನೀರಿನ ಹಳ್ಳದ ಕಡೆಗೆ ಓಡಿದಳು. ಅವಳಿಗೆ ಈಜು ಸರಿಯಾಗಿ ಬರುತ್ತಿರಲಿಲ್ಲ, ಆದರೂ ಆ ಮಗುವನ್ನು ಉಳಿಸಲೇಬೇಕು ಎಂಬ ಹಠ ಅವಳಲ್ಲಿತ್ತು. ಅವಳು ಹಳ್ಳದ ಬದಿಯಲ್ಲಿದ್ದ ಹಳೆಯ ಮರದ ಕೊಂಬೆಯನ್ನು ಗಟ್ಟಿಯಾಗಿ ಹಿಡಿದು, ನೀರಿಗೆ ಇಳಿದು ಮಗುವಿನ ಅಂಗಿಯನ್ನು ಹಿಡಿದು ಎಳೆದಳು. ತನ್ನ ಪ್ರಾಣದ ಹಂಗು ತೊರೆದು, ಮೈಯೆಲ್ಲಾ ಕೆಸರಾದರೂ ಲೆಕ್ಕಿಸದೆ ಮಗುವನ್ನು ದಡಕ್ಕೆ ತಂದಳು.

 

ಅಷ್ಟರಲ್ಲಿ ದೇವಪ್ಪ ಮತ್ತು ಊರಿನವರು ಓಡಿ ಬಂದರು. ಮಗುವನ್ನು ಸುರಕ್ಷಿತವಾಗಿ ಸುಧಾಳ ಮಡಿಲಿನಲ್ಲಿ ಕಂಡ ದೇವಪ್ಪನ ಕಣ್ಣಲ್ಲಿ ನೀರು ತುಂಬಿತ್ತು. ಮಗುವನ್ನು ತಬ್ಬಿಕೊಂಡ ದೇವಪ್ಪ, ಸುಧಾಳ ಮುಂದೆ ಕೈಮುಗಿದು, "ಅಮ್ಮಾವ್ರೆ, ನೀವು ಸಾಕ್ಷಾತ್ ಆ ಗುಡ್ಡದ ಆಂಜನೇಯನಂತೆ ಬಂದು ನನ್ನ ಮಗನನ್ನು ಉಳಿಸಿದ್ರಿ. ನೀವು ನಮ್ಮ ಊರಿನ ಜೀವ ಉಳಿಸಿದ ತಾಯಿ," ಎಂದು ಬಿಕ್ಕಿ ಬಿಕ್ಕಿ ಅತ್ತನು.

 

ಸುಧಾಳ ಮೈ ನಡುಗುತ್ತಿತ್ತು, ಕೆಸರಿನಿಂದ ಅವಳ ಹೊಸ ಬಟ್ಟೆ ಹಾಳಾಗಿತ್ತು. ಆದರೆ ಅವಳ ಮನಸ್ಸಿನಲ್ಲಿ ಇಂದಿನವರೆಗೆ ಕಾಣದ ಒಂದು ರೀತಿಯ ಧನ್ಯತಾ ಭಾವವಿತ್ತು. ರಾಜೇಶ್ ಓಡಿ ಬಂದು ಅವಳನ್ನು ಹಿಡಿದುಕೊಂಡಾಗ, ಸುಧಾ ಅವನ ಹೆಗಲ ಮೇಲೆ ತಲೆಯಿಟ್ಟು, "ರಾಜೇಶ್, ಇವತ್ತು ನನಗೆ ಅಕ್ಕರೆ ಮಮಕಾರ ಏನು ಅಂತ ಅರ್ಥವಾಯಿತು," ಎಂದಳು.

 

ಅಂದು ರಾತ್ರಿ ಮಳೆ ಸ್ವಲ್ಪ ಕಡಿಮೆಯಾಗಿತ್ತು. ಇಡೀ ಊರು ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿತು. ಆದರೆ ಸುಧಾಳಿಗೆ ಮಾತ್ರ ಅಂದು ನಿದ್ರೆ ಬರಲಿಲ್ಲ. ಅವಳ ಕಣ್ಣಮುಂದೆ ದೇವಪ್ಪನ ಕೃತಜ್ಞತೆಯ ನೋಟ ಮರುಕಳಿಸುತ್ತಿತ್ತು. ಜ್ಯೋತಿಪುರ ಈಗ ಅವಳಿಗೆ ಕೇವಲ ನಕ್ಷೆಯ ಮೇಲಿನ ಒಂದು ಪಟ್ಟಣವಾಗಿರಲಿಲ್ಲ; ಅದು ಅವಳ ರಕ್ತದ ಸಂಬಂಧದಷ್ಟೇ ಹತ್ತಿರವಾಗಿತ್ತು. ನಗರದ ಸುಧಾ ಮತ್ತು ಜ್ಯೋತಿಪುರದ ಜನರ ನಡುವೆ ಈಗ ಒಂದು ಮಧುರವಾದ ಅನುಬಂಧ ಮೂಡಿತ್ತು.

 
ಅಧ್ಯಾಯ ೮: ಹೊಸ ಚಿಗುರು
 

ಮಳೆಯ ಆರ್ಭಟ ಕಡಿಮೆಯಾಗಿ ಜ್ಯೋತಿಪುರ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿತ್ತು. ಆದರೆ ಸುಧಾಳ ಮನಸ್ಸು ಮಾತ್ರ ಮೊದಲಿನಂತಿರಲಿಲ್ಲ. ಮಗುವನ್ನು ರಕ್ಷಿಸಿದ ಆ ಘಟನೆ ಅವಳಲ್ಲಿ ಒಂದು ಜವಾಬ್ದಾರಿಯ ಅರಿವು ಮೂಡಿಸಿತ್ತು. ತನಗೆ ತಿಳಿದಿರುವ ಜ್ಞಾನವನ್ನು ಈ ಊರಿಗಾಗಿ ಹೇಗೆ ಬಳಸಬಹುದು ಎಂದು ಅವಳು ಯೋಚಿಸತೊಡಗಿದಳು.

 

ಒಂದು ದಿನ ರಾಜೇಶ್ ಕೆಲಸ ಮುಗಿಸಿ ಮನೆಗೆ ಬಂದಾಗ, ಸುಧಾ ಹಳೆಯ ಪತ್ರಿಕೆಗಳನ್ನು ಹರಡಿಕೊಂಡು ಯಾವುದೋ ಯೋಜನೆ ಹಾಕುತ್ತಿರುವುದನ್ನು ಕಂಡು "ಏನು ಸುಧಾ, ಬೆಂಗಳೂರಿಗೆ ಹೋಗುವ ಪ್ಲಾನ್ ಮಾಡ್ತಿದ್ದೀಯಾ?" ಎಂದು ತಮಾಷೆ ಮಾಡಿದನು. ಸುಧಾ ನಕ್ಕು ಹೇಳಿದಳು, "ಇಲ್ಲ ರಾಜೇಶ್, ನಾನು ಇಲ್ಲಿನ ಮಕ್ಕಳ ಬಗ್ಗೆ ಯೋಚಿಸುತ್ತಿದ್ದೇನೆ. ಇಲ್ಲಿನ ಮಕ್ಕಳಿಗೆ ಪ್ರತಿಭೆ ಇದೆ ಆದರೆ ಅವರಿಗೆ ಕಲಿಯುವ ಆಸಕ್ತಿ ಮೂಡಿಸುವ ಹಾಗು ಪ್ರೋತ್ಸಾಹ ಕೊಡುವ ಒಂದು ಮಾಧ್ಯಮ ಬೇಕು ಅನ್ನಿಸುತ್ತೆ. ಬರಿ ಪಠ್ಯಪುಸ್ತಕ, ಲೆಕ್ಕ ತಿದ್ದುವ ಹಾಗು ಬರಿ ನೆನಪಿನ ಶಕ್ತಿ ಪರೀಕ್ಷಿಸುವ ಜ್ಞಾನಕಿಂತಲೂ ಬೇರೆಯಾದ STEM (ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್) ಪಾಠಗಳನ್ನು ಕಲಿಸಬೇಕೆಂದುಕೊಂಡಿದ್ದೇನೆ." ರಾಜೇಶನಿಗೆ ಆಶ್ಚರ್ಯ ಮತ್ತು ಸಂತೋಷ ಎರಡೂ ಆಯಿತು.

 

ಊರಿನ ರಂಗಮಂದಿರದ ಪಕ್ಕದಲ್ಲಿದ್ದ ಒಂದು ಸಣ್ಣ ಕೊಠಡಿಯಲ್ಲಿ 'ಜ್ಯೋತಿ ಜ್ಞಾನ ಕೇಂದ್ರ' ಆರಂಭವಾಯಿತು. ಆರಂಭದಲ್ಲಿ ಕೇವಲ ನಾಲ್ಕೈದು ಮಕ್ಕಳು ಬಂದರು. ಸುಧಾ ಅವರಿಗೆ ಕೇವಲ ಪಠ್ಯಪುಸ್ತಕದ ಪಾಠ ಮಾಡಲಿಲ್ಲ; ಬದಲಾಗಿ ವಿಜ್ಞಾನದ ಪ್ರಯೋಗಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದಳು. ಒಂದು ದಿನ ಅವಳು ಕೆರೆಯ ನೀರನ್ನು ಬಳಸಿ ಸಣ್ಣ 'ವಾಟರ್ ಫಿಲ್ಟರ್' ಮಾಡುವುದನ್ನು ಕಲಿಸಿದಾಗ, ಮಕ್ಕಳು ಬೆರಗಿನಿಂದ ನೋಡುತ್ತಿದ್ದರು. ಗಣಿತದ ಸೂತ್ರಗಳನ್ನು ಆಟಗಳ ಮೂಲಕ ವಿವರಿಸಿದಾಗ, ಮಕ್ಕಳಿಗೆ ಗಣಿತದ ಮೇಲಿದ್ದ ಭಯ ದೂರವಾಯಿತು. ದೇವಪ್ಪನ ಮಗ (ಅವಳು ರಕ್ಷಿಸಿದ್ದ ಮಗು) ಈಗ ಅವಳ ನೆಚ್ಚಿನ ಶಿಷ್ಯನಾಗಿದ್ದನು. ಪ್ರತಿದಿನ ಸಂಜೆ "ಮೇಡಂ, ಇವತ್ತು ಹೊಸದೇನು ಕಲಿಸ್ತೀರಾ?" ಎಂದು ಮಕ್ಕಳು ಅವಳ ಮನೆ ಮುಂದೆ ಸಾಲು ನಿಲ್ಲುತ್ತಿದ್ದರು.

 

ಸುಧಾ ಇಂಟರ್ನೆಟ್ ಇಲ್ಲ ಎಂದು ಮೊದಲು ಗೊಣಗುತ್ತಿದ್ದವಳು, ಈಗ ಲೈಬ್ರರಿಯ ಹಳೆಯ ಪುಸ್ತಕಗಳನ್ನು ಹುಡುಕಿ ತೆಗೆಯುತ್ತಿದ್ದಳು. ಊರಿನ ಜನರು ಅವಳ ಬದಲಾವಣೆಯನ್ನು ನೋಡಿ ಬೆರಗಾದರು. ಹಾಲಿನ ಗಂಗಪ್ಪ ಬೆಳಿಗ್ಗೆ ಹಾಲು ಕೊಡುವಾಗ, "ನಮ್ಮ ಮೇಡಂ ನಮ್ಮ ಮಕ್ಕಳಿಗೆ ಇಂಗ್ಲಿಷ್ ಮಾತಾಡೋದನ್ನ ಕಲಿಸ್ತಿದ್ದಾರೆ, ಇನ್ನು ಮುಂದೆ ನಮ್ಮ ಮಕ್ಕಳು ಸಿಟಿಯವರ ಜೊತೆ ಧೈರ್ಯವಾಗಿ ಮಾತಾಡ್ತಾರೆ," ಎಂದು ಊರೆಲ್ಲಾ ಬಡಾಯಿ ಕೊಚ್ಚುತ್ತಿದ್ದನು.

 

ಒಂದು ಸಂಜೆ ರಂಗಮಂದಿರದ ಮುಂದೆ ಸುಧಾ ಹೋಗುತ್ತಿದ್ದಾಗ, ಊರಿನ ಹಿರಿಯರು ಮತ್ತು ಮಹಿಳೆಯರು ಗುಂಪುಗೂಡಿ ಅವಳನ್ನು ಬರಮಾಡಿಕೊಂಡರು. "ಅಮ್ಮಾವ್ರೆ, ನಿಮ್ಮಿಂದಾಗಿ ನಮ್ಮ ಮಕ್ಕಳಿಗೆ ಓದಿನ ಮೇಲೆ ಆಸಕ್ತಿ ಬಂದಿದೆ. ನೀವೊಬ್ಬರು ನಮಗೆ ಸಿಕ್ಕ ದೇವತೆ," ಎಂದು ಮುತ್ತಮ್ಮ ಎಂಬ ವೃದ್ಧೆ ಅವಳ ಕೈ ಹಿಡಿದು ಹರಸಿದರು. ಈಗ ಅವಳು ಕೇವಲ ಬ್ಯಾಂಕ್ ಮ್ಯಾನೇಜರ್ ಪತ್ನಿಯಾಗಿರಲಿಲ್ಲ, ಇಡೀ ಊರಿನ 'ಸುಧಾ ಮೇಡಂ' ಆಗಿದ್ದಳು.

 

ರಾತ್ರಿ ಸುಧಾ ರಾಜೇಶನಿಗೆ ಹೇಳಿದಳು, "ರಾಜೇಶ್, ನಗರದಲ್ಲಿ ನಾನು ಸಾವಿರಾರು ರೂಪಾಯಿ ಸಂಬಳ ಪಡೆಯುತ್ತಿದ್ದಾಗ ಸಿಗದ ತೃಪ್ತಿ, ಇವತ್ತು ಈ ಮಕ್ಕಳು 'ಥ್ಯಾಂಕ್ ಯು ಮೇಡಂ' ಅಂದಾಗ ಸಿಗುತ್ತಿದೆ. ಜೀವನ ಅಂದ್ರೆ ಕೇವಲ ಸೌಲಭ್ಯಗಳಲ್ಲ, ಅದು ಬೇರೆಯವರ ಬದುಕಿನಲ್ಲಿ ನಾವು ತರುವ ಬದಲಾವಣೆ ಅಂತ ಈಗ ಅನ್ನಿಸುತ್ತಿದೆ." ಜ್ಯೋತಿಪುರದಲ್ಲಿ ಹೊಸ ಚಿಗುರು ಒಡೆಯುತ್ತಿತ್ತು. ಸುಧಾ ಹಚ್ಚಿದ ಈ ಜ್ಞಾನದ ಜ್ಯೋತಿ, ಪಟ್ಟಣದ ಹಳೆಯ ನೆನಪುಗಳ ನಡುವೆ ಹೊಸ ಭವಿಷ್ಯದ ಭರವಸೆಯನ್ನು ಮೂಡಿಸಿತ್ತು.

 

ಅಧ್ಯಾಯ ೯: ಸ್ತ್ರೀ ಶಕ್ತಿ
ಮಕ್ಕಳಿಗೆ ಪಾಠ ಮಾಡುತ್ತಿದ್ದ ಸುಧಾಳಿಗೆ ಒಂದು ವಿಷಯ ಗಮನಕ್ಕೆ ಬಂತು. ಸಂಜೆ ಮಕ್ಕಳನ್ನು ಕರೆದುಕೊಂಡು ಹೋಗಲು ಬರುತ್ತಿದ್ದ ತಾಯಂದಿರು ಪರಸ್ಪರ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದರು, ಆದರೆ ಅವರಲ್ಲಿ ಒಂದು ರೀತಿಯ ಅಸಹಾಯಕತೆ ಇತ್ತು. ಊರಿನ ಪುರುಷರು ವ್ಯವಸಾಯ ಅಥವಾ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು, ಆದರೆ ಮಹಿಳೆಯರು ಮನೆಯ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದರು.

 

ಒಂದು ದಿನ ಮುತ್ತಮ್ಮ ಮತ್ತು ದೇವಪ್ಪನ ಪತ್ನಿ ಲಕ್ಷ್ಮಿ ಸುಧಾ ಬಳಿ ಬಂದು ಕುಳಿತಾಗ, ಸುಧಾ ಕೇಳಿದಳು, "ಲಕ್ಷ್ಮಕ್ಕ, ನೀವೆಲ್ಲಾ ಬಿಡುವಿನ ವೇಳೆಯಲ್ಲಿ ಏನು ಮಾಡ್ತೀರಾ?" "ಏನು ಮಾಡೋದು ಅಮ್ಮಾವ್ರೆ, ಅಡುಗೆ ಮನೆ, ಪಾತ್ರೆ ಅಷ್ಟೇ ನಮ್ಮ ಜೀವನ. ಕೈಯಲ್ಲಿ ನಾಲ್ಕು ಕಾಸು ಇರಲ್ಲ, ಯಾವುದಕ್ಕೂ ಅವರನ್ನೇ ಕೇಳಬೇಕು," ಎಂದು ಲಕ್ಷ್ಮಿ ನಿಟ್ಟುಸಿರು ಬಿಟ್ಟಳು. ಸುಧಾಳಲ್ಲಿನ ಕಾರ್ಪೊರೇಟ್ ಮ್ಯಾನೇಜರ್ ಎಚ್ಚರಗೊಂಡಳು. ಅವಳು ಮರುದಿನವೇ ಊರಿನ ಒಂದು ಸಣ್ಣ ಸಭೆ ಕರೆದಳು. ರೋಸ್ ಅಮ್ಮನ ಬೇಕರಿಯ ಮುಂಭಾಗದಲ್ಲಿ ಸುಮಾರು ಇಪ್ಪತ್ತು ಹೆಂಗಸರು ಜಮಾಯಿಸಿದ್ದರು. ಸುಧಾ ಅವರಿಗೆ 'ಸ್ವಸಹಾಯ ಸಂಘ' ಮತ್ತು 'ಗೃಹ ಕೈಗಾರಿಕೆ'ಯ ಬಗ್ಗೆ ವಿವರಿಸಿದಳು. "ನೋಡಿ, ನಿಮ್ಮಲ್ಲಿ ಕೆಲವರಿಗೆ ಹಪ್ಪಳ-ಸಂಡಿಗೆ ಮಾಡೋದು ಗೊತ್ತು, ಕೆಲವರಿಗೆ ಹೊಲಿಗೆ ಕೆಲಸ ಗೊತ್ತು, ರೋಸ್ ಅಮ್ಮನಿಗೆ ಬೇಕರಿ ಉತ್ಪನ್ನಗಳ ಜ್ಞಾನವಿದೆ. ನಾವೆಲ್ಲಾ ಒಂದಾಗಿ 'ಸ್ತ್ರೀ ಶಕ್ತಿ ಸಂಘ' ಯಾಕೆ ಶುರು ಮಾಡಬಾರದು?" ಸುಧಾ ಕೇಳಿದಳು.

 

ಆರಂಭದಲ್ಲಿ ಹೆಂಗಸರಿಗೆ ಅನುಮಾನವಿತ್ತು. "ನಮಗೆ ಇದೆಲ್ಲಾ ಆಗುತ್ತಾ ಅಮ್ಮಾವ್ರೆ?" ಎಂದು ಕೇಳಿದರು. ಸುಧಾ ಬಿಡಲಿಲ್ಲ, ಬ್ಯಾಂಕಿನಿಂದ ಸಾಲ ಪಡೆಯುವ ವಿಧಾನ, ಮಾರುಕಟ್ಟೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುವ ತಂತ್ರಗಳನ್ನು ಸರಳವಾಗಿ ಹೇಳಿಕೊಟ್ಟಳು. ರಾಜೇಶನ ಸಹಾಯದಿಂದ ಬ್ಯಾಂಕಿನಲ್ಲಿ ಅವರಿಗಾಗಿಯೇ ಒಂದು ಖಾತೆ ತೆರೆಯಿಸಿದಳು. ಕೆಲವೇ ವಾರಗಳಲ್ಲಿ ಜ್ಯೋತಿಪುರದ ಮನೆಮನೆಗಳಲ್ಲಿ ಒಂದು ಹೊಸ ಉತ್ಸಾಹ ಕಂಡುಬಂತು. ಕೆಲವರು ಆರ್ಗ್ಯಾನಿಕ್ ಅರಿಶಿನ ಪುಡಿ ತಯಾರಿಸಿದರೆ, ಇನ್ನು ಕೆಲವರು ಹಳ್ಳಿಯ ಸೊಗಡಿನ ರುಚಿಕರ ಖಾದ್ಯ ತಯಾರಿಸಿದರು, ಮತ್ತೆ ಕೆಲವರು ಕೈಮಗ್ಗದ ಬಟ್ಟೆಗಳನ್ನು ಹೊಲಿಯಲು ಶುರು ಮಾಡಿದರು. ರೋಸ್ ಅಮ್ಮ ಅವರ ಈ ಉತ್ಪನ್ನಗಳಿಗೆ ತಮ್ಮ ಬೇಕರಿಯಲ್ಲೇ ಒಂದು ಪುಟ್ಟ ಮಳಿಗೆ ಮಾಡಿಕೊಟ್ಟರು.

 

ಒಂದು ಸಂಜೆ, ಲಕ್ಷ್ಮಿ ಓಡಿ ಬಂದು ಸುಧಾಳ ಕೈಗೆ ನೂರು ರಪಾಯಿ ನೋಟು ಇಟ್ಟಳು. "ಅಮ್ಮಾವ್ರೆ, ಇದು ನನ್ನ ಮೊದಲ ಸಂಪಾದನೆ. ಜೀವನದಲ್ಲಿ ಮೊದಲ ಬಾರಿ ನನ್ನ ಸ್ವಂತ ಕಾಸನ್ನ ನಾನು ನೋಡ್ತಿದ್ದೀನಿ," ಎಂದು ಕಣ್ಣೀರು ಹಾಕಿದಳು. ಸುಧಾಳಿಗೆ ಅಂದು ಸಿಕ್ಕ ಆನಂದ ಬೆಂಗಳೂರಿನಲ್ಲಿ ಲಕ್ಷಾಂತರ ರೂಪಾಯಿ ಬೋನಸ್ ಸಿಕ್ಕಾಗಲೂ ಸಿಕ್ಕಿರಲಿಲ್ಲ. ಸುಧಾ ಈಗ ಜ್ಯೋತಿಪುರದ ಜನರ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಕೇಂದ್ರಬಿಂದುವಾಗಿದ್ದಳು.

 

ಅಧ್ಯಾಯ ೧೦: ವರ್ಗಾವಣೆಯ ಪತ್ರ ಮತ್ತು ಮೌನ
ಆ ಸಂಜೆ ಜ್ಯೋತಿಪುರದಲ್ಲಿ ಗಾಳಿ ನಿಶ್ಚಲವಾಗಿತ್ತು. ರಾಜೇಶ್ ಬ್ಯಾಂಕಿನಿಂದ ಮನೆಗೆ ಬಂದಾಗ ಅವನ ಮುಖದಲ್ಲಿ ಎಂದಿನ ನಗು ಇರಲಿಲ್ಲ. ಕೈಯಲ್ಲೊಂದು ಲಕೋಟೆ ಇತ್ತು. ಸುಧಾ ಅಡುಗೆ ಮನೆಯಲ್ಲಿ ಸ್ತ್ರೀ ಶಕ್ತಿ ಸಂಘದ ಮುಂದಿನ ತಿಂಗಳ ಲೆಕ್ಕಾಚಾರದಲ್ಲಿ ಮುಳುಗಿದ್ದಳು.

 

"ಸುಧಾ..." ರಾಜೇಶ್ ಮೆಲ್ಲನೆ ಕರೆದ.

ಸುಧಾ ತಲೆ ಎತ್ತಿ ನೋಡಿದಳು. "ಏನು ರಾಜೇಶ್? ಇವತ್ತು ಮುಖ ಯಾಕೋ ಸುಸ್ತಾದ ಹಾಗೆ ಕಾಣ್ತಿದೆ? ಇರಿ, ಬಿಸಿ ಬಿಸಿ ಶುಂಠಿ ಟೀ ಮಾಡ್ತೀನಿ," ಎಂದಳು.

 

ರಾಜೇಶ್ ಆ ಲಕೋಟೆಯನ್ನು ಅವಳ ಮುಂದಿಟ್ಟ. "ನನ್ನ ವರ್ಗಾವಣೆಯ ಪತ್ರ ಬಂದಿದೆ ಸುಧಾ. ನನಗೆ ಮತ್ತೆ ಬೆಂಗಳೂರಿನ ಮುಖ್ಯ ಕಚೇರಿಗೆ ಟ್ರಾನ್ಸ್‌ಫರ್ ಆಗಿದೆ. ಮುಂದಿನ ವಾರವೇ ನಾವು ಜ್ಯೋತಿಪುರ ಬಿಡಬೇಕು." ಆ ಕ್ಷಣ ಸುಧಾಳ ಕೈಯಲ್ಲಿದ್ದ ಪೆನ್ನು ಕೆಳಗೆ ಬಿತ್ತು. ಮೊದಲ ಅಧ್ಯಾಯದಲ್ಲಿ ಇದೇ ಸುದ್ದಿಗಾಗಿ ಅವಳು ಹಂಬಲಿಸಿದ್ದಳು, ರಾಜೇಶನ ಜೊತೆ ಜಗಳವಾಡಿದ್ದಳು. "ಈ ಕಾಡಿನಿಂದ ನನಗೆ ಯಾವಾಗ ಬಿಡುಗಡೆ?" ಎಂದು ಕೇಳುತ್ತಿದ್ದ ಅವಳಿಗೆ, ಇಂದು ಈ ಸುದ್ದಿ ಸಿಹಿ ಎನಿಸಲಿಲ್ಲ. ಬದಲಾಗಿ ಎದೆಯ ಯಾವುದೋ ಮೂಲೆಯಲ್ಲಿ ಭಾರವಾದ ಅನುಭವವಾಯಿತು.

 

ಅವಳು ಮೌನವಾಗಿ ಕಿಟಕಿಯ ಹೊರಗೆ ನೋಡಿದಳು. ದೂರದಲ್ಲಿ ಆಂಜನೇಯನ ಗುಡಿಯ ದೀಪ ಕಾಣುತ್ತಿತ್ತು. ರಸ್ತೆಯಲ್ಲಿ ಮಕ್ಕಳು "ಸುಧಾ ಮೇಡಂ..." ಎಂದು ಕೂಗುತ್ತಾ ಆಟವಾಡುತ್ತಿದ್ದರು. ಸ್ತ್ರೀ ಶಕ್ತಿ ಸಂಘದ ಮಹಿಳೆಯರು ನಾಳೆ ಮಾಡಬೇಕಾದ ಕೆಲಸಗಳ ಬಗ್ಗೆ ಚರ್ಚಿಸುತ್ತಾ ಹೋಗುತ್ತಿದ್ದರು. ಈ ದೃಶ್ಯಗಳೆಲ್ಲವೂ ಈಗ ಅವಳ ಬದುಕಿನ ಅವಿಭಾಜ್ಯ ಅಂಗವಾಗಿದ್ದವು.

 

"ಖುಷಿಯಾಗಲಿಲ್ವಾ ಸುಧಾ? ನೀನು ಕೇಳುತ್ತಿದ್ದ ಮಾಲ್, ಹೈ-ಸ್ಪೀಡ್ ಇಂಟರ್ನೆಟ್, ಕಾರ್ಪೊರೇಟ್ ಆಫೀಸ್... ಎಲ್ಲವೂ ಮತ್ತೆ ಸಿಗುತ್ತೆ," ರಾಜೇಶ್ ಕೇಳಿದ. ಸುಧಾ ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದಳು, "ರಾಜೇಶ್, ಅಂದು ನನಗೆ ಸೌಲಭ್ಯಗಳು ಬೇಕಿತ್ತು. ಆದರೆ ಇಂದು ನನಗೆ ಈ ಸಂಬಂಧಗಳು ಬೇಕು. ಅಲ್ಲಿ ನನಗಾಗಿ ಯಾರೂ ಕಾಯುತ್ತಿರುವುದಿಲ್ಲ. ಆದರೆ ಇಲ್ಲಿ... ನಾನು ಮನೆ ಬಿಟ್ಟು ಹೊರಬಂದರೆ ಹತ್ತು ಜನ ಪ್ರೀತಿಯಿಂದ ಮಾತಾಡಿಸುತ್ತಾರೆ. ಮುತ್ತಮ್ಮನ ಮಮತೆ, ದೇವಪ್ಪನ ಕೃತಜ್ಞತೆ, ರೋಸ್ ಅಮ್ಮನ ಹಿತವಚನ... ಇವನ್ನೆಲ್ಲ ಬಿಟ್ಟು ಆ ಯಾಂತ್ರಿಕ ಜಗತ್ತಿಗೆ ಹೇಗೆ ಹೋಗಲಿ?" ಅವಳ ಮಾತಿನಲ್ಲಿ ಜ್ಯೋತಿಪುರದ ಮೇಲಿನ ಅತೀವವಾದ ಪ್ರೀತಿ ವ್ಯಕ್ತವಾಗುತ್ತಿತ್ತು. ಅಂದು ರಾತ್ರಿ ದಂಪತಿಗಳ ನಡುವೆ ಮಾತಿರಲಿಲ್ಲ.

 

ಮಾರನೆಯ ದಿನ ಸುಧಾ ತನ್ನ ಸಾಮಾನುಗಳನ್ನು ಪ್ಯಾಕ್ ಮಾಡಲು ಶುರು ಮಾಡಿದಳು. ಒಂದೊಂದು ವಸ್ತುವನ್ನು ಎತ್ತಿಡುವಾಗಲೂ ಆ ವಸ್ತುವಿನ ಹಿಂದೆ ಜ್ಯೋತಿಪುರದ ಒಂದು ನೆನಪಿತ್ತು. ಕೆರೆಯ ದಡದಲ್ಲಿ ತೆಗೆದ ಫೋಟೋ, ರೋಸ್ ಅಮ್ಮ ಕೊಟ್ಟ ಹಳೆಯ ಡಬ್ಬಿ, ಮಕ್ಕಳು ಕೊಟ್ಟ ಕೈಬರಹದ ಪತ್ರಗಳು...

 

ಈಗ ಅವಳಿಗೆ ಬೆಂಗಳೂರು ಅಪರಿಚಿತವಾಗಿ ಕಾಣುತ್ತಿತ್ತು ಮತ್ತು ಜ್ಯೋತಿಪುರ ಸ್ವಂತ ಮನೆಯಂತೆ ಭಾಸವಾಗುತ್ತಿತ್ತು. ವರ್ಗಾವಣೆಯ ಪತ್ರ ಅವರ ಕೈ ಸೇರಿತ್ತು ನಿಜ, ಆದರೆ ಅವಳ ಆತ್ಮ ಮಾತ್ರ ಜ್ಯೋತಿಪುರದ ಮಣ್ಣಿನಲ್ಲಿ ಆಳವಾಗಿ ಬೇರೂರಿತ್ತು.

 

ಅಧ್ಯಾಯ ೧೧: ಬೀಳ್ಕೊಡುಗೆ ಮತ್ತು ಬೆಳಗುವ ಜ್ಯೋತಿಪುರ
ಜ್ಯೋತಿಪುರದ ಬಸ್ ನಿಲ್ದಾಣದ ಹತ್ತಿರ ಎಂದೂ ಇರದಷ್ಟು ಜನ ಸೇರಿದ್ದರು. ರಾಜೇಶ್ ಮತ್ತು ಸುಧಾ ಹೊರಡಲು ಸಿದ್ಧವಾಗಿದ್ದರು. ಟ್ಯಾಕ್ಸಿಯ ಟಾಪ್ ಮೇಲೆ ಅವರ ಲಗೇಜ್‌ಗಳನ್ನು ಏರಿಸಲಾಗಿತ್ತು.

ಮುತ್ತಮ್ಮ ಸುಧಾಳ ಕೈಗೆ ಒಂದು ಬುತ್ತಿ ಕೊಟ್ಟರು. "ಅಮ್ಮಾವರೇ, ದಾರಿಯಲ್ಲಿ ಹಸಿವಾದರೆ ತಿನ್ನಿ. ಸಿಟಿಗೆ ಹೋದಮೇಲೆ ಈ ಮುದುಕಿಯನ್ನ ಮರೆಯಬೇಡಿ," ಎನ್ನುತ್ತಾ ಕಣ್ಣೊರೆಸಿಕೊಂಡರು. ದೇವಪ್ಪ ಮತ್ತು ಅವನ ಮಗ ಸುಧಾಳ ಕಾಲಿಗೆ ನಮಸ್ಕರಿಸಿದರು. ಸ್ತ್ರೀ ಶಕ್ತಿ ಸಂಘದ ಮಹಿಳೆಯರೆಲ್ಲರೂ ಅಳುತ್ತಿದ್ದರು. ರೋಸ್ ಅಮ್ಮ ಮತ್ತು ಮಿಲ್ಟನ್ ಅಂಕಲ್ ಬಂದು ಸುಧಾಳನ್ನು ಅಪ್ಪಿಕೊಂಡರು. "ನೀವು ಎಲ್ಲಿಗೆ ಹೋದರೂ ಈ ಜ್ಯೋತಿಪುರದ ಬೆಳಕು ನಿನ್ನ ಜೊತೆ ಇರುತ್ತೆ," ಎಂದರು ರೋಸ್ ಅಮ್ಮ. ರಾಮಚಂದ್ರ ಅಂಕಲ್ ಚಿತ್ರಾಲಯ ಟಾಕೀಸ್‌ನಿಂದ ಒಂದು ಹಳೆಯ ಸಿನೆಮಾ ಪೋಸ್ಟರ್ ತಂದು ಸುಧಾಳಿಗೆ ನೆನಪಿಗಾಗಿ ಕೊಟ್ಟರು.

 

ಊರಿನ ಜನರು ತಂದಿದ್ದ ಹೂವು, ಹಣ್ಣುಗಳಿಂದ ಟ್ಯಾಕ್ಸಿ ತುಂಬಿ ಹೋಗಿತ್ತು. ಊರ ಬಾಗಿಲಿನಿಂದ ಟ್ಯಾಕ್ಸಿ ಹೊರಟಾಗ, ಸುಧಾ ಹಿಂದೆ ತಿರುಗಿ ನೋಡಿದಳು. ಇಡೀ ಊರು ಕೈ ಬೀಸುತ್ತಾ ನಿಂತಿತ್ತು. ಟ್ಯಾಕ್ಸಿ ಕೆರೆಯ ಏರಿಯ ಮೇಲೆ ಸಾಗುವಾಗ, ಕೆರೆಯ ನೀರು ಶಾಂತವಾಗಿ ಪ್ರತಿಫಲಿಸುತ್ತಿತ್ತು. ಗುಡ್ಡದ ಮೇಲಿನ ಆಂಜನೇಯನ ಗುಡಿ ಮರೆಯಾಗುವವರೆಗೂ ಸುಧಾ ನೋಡುತ್ತಲೇ ಇದ್ದಳು.

 

ಅವಳ ಕಣ್ಣುಗಳು ತೇವವಾಗಿದ್ದವು. ಅವಳು ರಾಜೇಶನ ಕೈ ಹಿಡಿದು ಮೆಲ್ಲನೆ ಹೇಳಿದಳು, "ರಾಜೇಶ್, ನಾವು ಇಲ್ಲಿಂದ ಹೋಗುತ್ತಿದ್ದೇವೆ ಅಷ್ಟೇ. ಆದರೆ ನಮ್ಮ ಮನಸ್ಸಿನ ಒಂದು ಭಾಗ ಇಲ್ಲೇ ಉಳಿದಿದೆ. ನಾವು ಮತ್ತೆ ಇಲ್ಲಿಗೆ ಬರುತ್ತೇವೆ ಅಲ್ವಾ?"

ರಾಜೇಶ್ ನಕ್ಕು ಅವಳ ತಲೆ ಸವರಿದ. ಟ್ಯಾಕ್ಸಿ ದೂರ ಹೋದಂತೆ ಜ್ಯೋತಿಪುರ ಒಂದು ಸಣ್ಣ ಚುಕ್ಕೆಯಂತೆ ಕಂಡಿತು. ಆದರೆ ಸುಧಾಳ ಬದುಕಿನಲ್ಲಿ ಆ ಪಟ್ಟಣ ಒಂದು ಮಹಾಕಾವ್ಯದಂತೆ ಅಚ್ಚೊತ್ತಿತ್ತು. ಆಧುನಿಕ ಜಗತ್ತಿನ ಸುಧಾ ಈಗ ಜ್ಯೋತಿಪುರದ ಮಗಳಾಗಿ ಬದಲಾಗಿದ್ದಳು. ಅವಳ ಪಯಣ ಹೊಸ ಹಾದಿಯತ್ತ ಸಾಗುತ್ತಿದ್ದರೂ, ಅವಳ ಎದೆಯಲ್ಲಿ ಜ್ಯೋತಿಪುರದ ಜ್ಯೋತಿ ಎಂದೆಂದಿಗೂ ಬೆಳಗುತ್ತಿತ್ತು.

 

ಉಪಸಂಹಾರ: ಜ್ಯೋತಿಪುರದ ನಿರಂತರ ಜ್ಯೋತಿ

ಋತುಗಳು ಉರುಳಿದವು, ಮರಗಳಲ್ಲಿ ಹೊಸ ಚಿಗುರು ಮೂಡಿತು. ಜ್ಯೋತಿಪುರದ ಜನರ ಜೀವನ ಇನ್ನಷ್ಟು ಹಸನಾಗುತ್ತಾ ಸಾಗುತ್ತಿದೆ. ಇವೆಲ್ಲಕ್ಕೂ ಜ್ಯೋತಿಪುರ ಮೌನ ಸಾಕ್ಷಿಯಾಗಿ ನಿಂತಿದೆ. ಗುಡ್ಡದ ಮೇಲಿನ ಆಂಜನೇಯ ಎಲ್ಲ ನೆನಪುಗಳನ್ನು ತನ್ನಲ್ಲಿ ಅಡಗಿಸಿಕೊಂಡು ಗಂಭೀರವಾಗಿ ನೆಲೆಸಿದ್ದರೆ, ಕೆರೆಯು ಯಾವುದೋ ಮಧುರ ನೆನಪುಗಳನ್ನು ಮೆಲುಕು ಹಾಕುವಂತೆ ಆಗಾಗ ನೀರಿನಲ್ಲಿ ಅಲೆಗಳ ಉಂಗುರವನ್ನು ಮೂಡಿಸುತ್ತಿದೆ.

 

ಒಂದು ಬೆಳಿಗ್ಗೆ, ಜ್ಯೋತಿಪುರದ ಬಸ್ ನಿಲ್ದಾಣದ ಹತ್ತಿರ ಮತ್ತೊಂದು ಟ್ಯಾಕ್ಸಿ ಬಂದು ನಿಂತಿತು. ಅದರಿಂದ ಹೊಸ ದಂಪತಿಗಳು ತಮ್ಮ ಲಗೇಜುಗಳ ಜೊತೆ ಇಳಿದರು. ಊರಿನ ಪ್ರವೇಶದಲ್ಲಿರುವ "ಜ್ಯೋತಿಪುರಕ್ಕೆ ಸ್ವಾಗತ" ಎನ್ನುವ ಹಳೆಯ ನಾಮಫಲಕ ಅವರಿಗೆ ಸ್ವಾಗತ ಕೋರುತ್ತಿತ್ತು. ಅದರ ಪಕ್ಕದಲ್ಲೇ ಇದ್ದ 'ಸ್ತ್ರೀ ಶಕ್ತಿ ಸಹಕಾರ ಮಂಡಳಿ'ಯ ಮಳಿಗೆಯು, ಈ ಊರಿನಲ್ಲಿ ಹೇಳಲು ಸಾವಿರಾರು ಸಾಧನೆಯ ಕಥೆಗಳಿವೆ ಎನ್ನುವಂತೆ ಗರ್ವದಿಂದ ನಗುತಿತ್ತು.

 

ಆ ಹೊಸ ದಂಪತಿಗಳು ನಡೆದುಕೊಂಡು ರೋಸ್ ಅಮ್ಮನ ಬೇಕರಿಯ ಮುಂದೆ ಸಾಗಿದಾಗ, ಅಂಗಳದಲ್ಲಿ ಗಿಡಗಳಿಗೆ ನೀರು ಹಾಕುತ್ತಿದ್ದ ರೋಸ್ ಅಮ್ಮ ಅದೇ ನಗುವಿನೊಂದಿಗೆ ತಲೆ ಎತ್ತಿ ನೋಡಿದರು. "ಹೊಸಬರಾ? ಜ್ಯೋತಿಪುರಕ್ಕೆ ಸ್ವಾಗತ!" ಎಂದು ಆತ್ಮೀಯವಾಗಿ ಬರಮಾಡಿಕೊಂಡರು.

 

ಆ ಹೊಸ ದಂಪತಿಗಳ ಮುಖದಲ್ಲೂ ಅಂದು ಸುಧಾಳ ಮುಖದಲ್ಲಿದ್ದಂತೆಯೇ ಸ್ವಲ್ಪ ಗೊಂದಲ, ಸ್ವಲ್ಪ ಆತಂಕವಿತ್ತು. ಆದರೆ ಜ್ಯೋತಿಪುರಕ್ಕೆ ಗೊತ್ತು - ತನ್ನ ಮಡಿಲಿಗೆ ಬಂದವರನ್ನು ಹೇಗೆ ತನ್ನವರನ್ನಾಗಿ ಮಾಡಿಕೊಳ್ಳಬೇಕು ಎಂದು. ಇಲ್ಲಿ ಬದಲಾವಣೆಗಳು ಸಹಜ, ಆದರೆ ಅನುಬಂಧ ಶಾಶ್ವತ. ಸದ್ಯಕ್ಕೆ ಇದು ಅಂತ್ಯವಲ್ಲದ ಚಿಕ್ಕ ವಿರಾಮ ಅಷ್ಟೇ.