ಬೆಂಗಳೂರಿನ ಫ್ರೀಡಂ ಪಾರ್ಕ್‌ನ ಹಳೆಯ ಕಲ್ಲಿನ ಗೋಡೆಗಳ ಅಡಿಯಲ್ಲಿರುವ ಆ ಗುಪ್ತ ಸುರಂಗವು ಯಾವುದೋ ಬೃಹತ್ ಕಾಲಘಟ್ಟದ ಬಾಯಿಯಂತೆ ತೆರೆದುಕೊಂಡಿತ್ತು. ಆದರ್ಶ್ ಮತ್ತು ರಶ್ಮಿ ಒಳಗೆ ಹೆಜ್ಜೆ ಇಟ್ಟಂತೆಲ್ಲಾ, ಹೊರಗಿನ ಬೆಂಗಳೂರಿನ ಟ್ರಾಫಿಕ್ ಸದ್ದು ಮತ್ತು ಆಧುನಿಕತೆಯ ಗದ್ದಲ ಕ್ಷಣಾರ್ಧದಲ್ಲಿ ಮರೆಯಾಗಿ, ಯುಗ ಯುಗಗಳ ಹಳೆಯ ಉಸಿರಾಟದ ಸದ್ದು ಕೇಳಿಸತೊಡಗಿತು. ಸುರಂಗದ ಗೋಡೆಗಳಿಂದ ತೇವಾಂಶದ ಜೊತೆಗೆ ಹಸಿ ರಕ್ತದ ಘಾಟು ವಾಸನೆ ಬರುತ್ತಿತ್ತು. ಆದರ್ಶ್‌ನ ಕೈಯಲ್ಲಿದ್ದ ಆ ಕಪ್ಪು ಆಲ್ಬಂ ಈಗ ತನ್ನಷ್ಟಕ್ಕೆ ತಾನೇ ಕುದಿಯುವ ಕಬ್ಬಿಣದಂತೆ ಬಿಸಿಯಾಗುತ್ತಿತ್ತು, ಅದರ ಪುಟಗಳಿಂದ ಮಂದವಾದ ಕೆಂಪು ಬೆಳಕು ಹೊರಸೂಸಿ ಸುರಂಗದ ಕತ್ತಲೆಯನ್ನು ಸೀಳುತ್ತಿತ್ತು.
ಆದರ್ಶ್, ನನಗೆ ಇಲ್ಲಿ ಉಸಿರುಗಟ್ಟುತ್ತಿದೆ. ಈ ಗೋಡೆಗಳ ಮೇಲೆ ಏನೋ ವಿಚಿತ್ರವಾದ ಕೆತ್ತನೆಗಳಿವೆ ಇವು ನನ್ನ ಪೂರ್ವಜರ ಚಿತ್ರಗಳೇ? ರಶ್ಮಿ ನಡುಗುತ್ತಾ ಕೇಳಿದಳು. ಅವಳ ಧ್ವನಿ ಸುರಂಗದ ಆಳದಲ್ಲಿ ಭಯಾನಕವಾಗಿ ಪ್ರತಿಧ್ವನಿಸುತ್ತಿತ್ತು.
ಆದರ್ಶ್ ತನ್ನ ಮೊಬೈಲ್ ಟಾರ್ಚ್ ಬೆಳಗಿದಾಗ ಕಂಡ ದೃಶ್ಯ ಅತ್ಯಂತ ಭೀಕರವಾಗಿತ್ತು. ಸುರಂಗದ ಕಲ್ಲಿನ ಗೋಡೆಗಳ ಮೇಲೆ ರಶ್ಮಿಯ ವಂಶದ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯ ಚಿತ್ರಗಳನ್ನು ಅತ್ಯಂತ ಸ್ಪಷ್ಟವಾಗಿ ಕೆತ್ತಲಾಗಿತ್ತು. ವಿಚಿತ್ರವೆಂದರೆ, ಆ ಪ್ರತಿಯೊಂದು ಚಿತ್ರದ ಕಣ್ಣುಗಳಿಂದಲೂ ಕಪ್ಪು ಬಣ್ಣದ ವಿಷದಂತಹ ದ್ರವ ಸುರಿಯುತ್ತಿತ್ತು. ಆ ಸುದೀರ್ಘ ಚಿತ್ರಗಳ ಸಾಲಿನ ಕೊನೆಯಲ್ಲಿ ಒಂದು ದೊಡ್ಡ ಖಾಲಿ ಜಾಗವಿತ್ತು ಅಲ್ಲಿ ಆದರ್ಶ್ ನೋಡನೋಡುತ್ತಿದ್ದಂತೆಯೇ ರಶ್ಮಿಯ ಮುಖದ ಆಕೃತಿ ಮಣ್ಣಿನಲ್ಲಿ ತಾನಾಗಿಯೇ ಮೂಡುತ್ತಿತ್ತು ಅದು ಅವಳ ಸಾವಿನ ಮುನ್ಸೂಚನೆಯಂತೆ ಭಾಸವಾಯಿತು.
ಇದ್ದಕ್ಕಿದ್ದಂತೆ ಸುರಂಗದ ಅತೀ ಆಳದಿಂದ ಅಶ್ವತ್ಥಾಮನ ಅಟ್ಟಹಾಸದ ಧ್ವನಿ ಕೇಳಿಸಿತು. ಬರಹಗಾರನೇ ಈ ಸುರಂಗವು ಕೇವಲ ದಾರಿಯಲ್ಲ, ಇದು ನಿನ್ನ ಪ್ರೀತಿಯ ರಶ್ಮಿಯ ವಂಶದವರ ಐದು ಸಾವಿರ ವರ್ಷಗಳ ಹಳೆಯ ಸ್ಮಶಾನ ನನ್ನ ಮಣಿಯ ಮೂರನೇ ಭಾಗವು ಈ ಸಮಾಧಿಗಳ ಮಧ್ಯದಲ್ಲಿರುವ ಆ ಪುರಾತನ ಶಿಲಾ ಲಿಂಗದ ಶಿರದ ಮೇಲಿದೆ. ಅದನ್ನು ಪಡೆಯಬೇಕಾದರೆ ರಶ್ಮಿಯ ಕೈಯಿಂದಲೇ ಆ ಲಿಂಗಕ್ಕೆ ರಕ್ತಾಭಿಷೇಕವಾಗಬೇಕು ಆಕೆಯ ರಕ್ತ ಸೋಕಿದ ಕ್ಷಣವೇ ಕಲ್ಲಿನೊಳಗಿರುವ ಮಣಿ ಜಾಗೃತವಾಗುತ್ತದೆ. ಅಶ್ವತ್ಥಾಮನ ನೆರಳು ಗೋಡೆಗಳ ಮೇಲೆ ಏಳು ಅಡಿ ಎತ್ತರದ ದೈತ್ಯಾಕಾರವಾಗಿ ಮೂಡಿತು. ಅವನ ಕೈಯಲ್ಲಿದ್ದ ಆ ಕಪ್ಪು ಲೋಹದ ಕತ್ತಿ ಗಾಳಿಯಲ್ಲಿ ಸುಯಿಂಗ್' ಎಂದು ಭಯಾನಕವಾಗಿ ಸದ್ದು ಮಾಡಿತು. ರಶ್ಮಿ ಭಯದಿಂದ ಆದರ್ಶ್‌ನ ಬೆನ್ನಿನ ಹಿಂದೆ ಅಡಗಿಕೊಂಡಳು, ಅವಳ ಉಸಿರಾಟದ ವೇಗ ಹೆಚ್ಚಾಗಿತ್ತು.ನಾನು ಇದನ್ನು ಮಾಡಲು ಎಂದಿಗೂ ಬಿಡುವುದಿಲ್ಲ ಅಶ್ವತ್ಥಾಮ ನೀನು ನನ್ನ ಲೇಖನಿಯನ್ನು ಆಯುಧವನ್ನಾಗಿ ಬಳಸಲು ನೋಡುತ್ತಿದ್ದೀಯಾ, ಆದರೆ ಅದೇ ಲೇಖನಿಯಿಂದ ನಾನು ನಿನ್ನ ಈ ಕರಾಳ ಹಸಿವಿಗೆ ಅಂತಿಮ ವಿರಾಮ ಬರೆಯಬಲ್ಲೆ ಆದರ್ಶ್ ಕೆಚ್ಚಿನಿಂದ ಗರ್ಜಿಸಿದ.
ಅವನು ತಕ್ಷಣ ತನ್ನ ಮೊಬೈಲ್‌ನಲ್ಲಿ 'ಮಾತೃಭಾರತಿ' ಆ್ಯಪ್ ಓಪನ್ ಮಾಡಿದ. ಅವನ ಬೆರಳುಗಳು ಈಗ ಸಾವಿನ ಆಜ್ಞೆಯನ್ನು ಬರೆಯಲು ಪೂರ್ಣವಾಗಿ ನಿರಾಕರಿಸುತ್ತಿದ್ದವು. ಅವನು ಅಶ್ವತ್ಥಾಮನನ್ನೇ ವಂಚಿಸಲು ಒಂದು ಹೊಸ ತಂತ್ರ ಹೂಡಿದ. ಅವನು ತನ್ನ ಕಥೆಯ 14ನೇ ಅಧ್ಯಾಯವನ್ನು ಹೀಗೆ ಬರೆಯಲು ಶುರು ಮಾಡಿದ. ಅಧ್ಯಾಯ 14 ಮಾಯೆಯ ಮರೆಮಾಚುವಿಕೆ. ಸುರಂಗದ ಕಗ್ಗತ್ತಲೆಯಲ್ಲಿ ಅಶ್ವತ್ಥಾಮನು ರಶ್ಮಿಯ ರಕ್ತಕ್ಕಾಗಿ ಬಾಯಿ ತೆರೆದು ಕಾಯುತ್ತಿದ್ದಾಗ, ಬರಹಗಾರ ಆದರ್ಶ್ ತನ್ನ ಅಕ್ಷರಗಳಿಂದ ಒಂದು ಭ್ರಮೆಯನ್ನು ಸೃಷ್ಟಿಸುತ್ತಾನೆ. ರಶ್ಮಿಯ ರಕ್ತದ ಬದಲು, ಈ ನೆಲದಡಿಯಿರುವ ಪುರಾತನ ನೀರಿನ ಸೆಲೆಯು ಪವಿತ್ರ ತೀರ್ಥವಾಗಿ ಬದಲಾಗುತ್ತದೆ. ಆ ತೀರ್ಥವು ಲಿಂಗದ ಮೇಲೆ ಬಿದ್ದಾಗ ಅಶ್ವತ್ಥಾಮನ ಶಾಪದ ಉರಿ ತಣ್ಣಗಾಗುತ್ತದೆ ಮತ್ತು ಮಣಿಯ ಶಕ್ತಿ ಬರಹಗಾರನ ವಶವಾಗುತ್ತದೆ.
ಆದರ್ಶ್ ಈ ಸಾಲುಗಳನ್ನು ಪೋಸ್ಟ್ ಮಾಡಿದ ತಕ್ಷಣ, ಸುರಂಗದ ಗೋಡೆಗಳಿಂದ ಹಠಾತ್ತಾಗಿ ನೀರು ಚಿಮ್ಮತೊಡಗಿತು. ಆ ನೀರು ಕೇವಲ ಸಾಮಾನ್ಯ ನೀರಾಗಿರಲಿಲ್ಲ, ಅದು ಪ್ರಕಾಶಮಾನವಾದ ಬೆಳ್ಳಿಯ ಬೆಳಕಿನಂತೆ ಹೊಳೆಯುತ್ತಿತ್ತು. ಅಶ್ವತ್ಥಾಮನ ನೆರಳು ಆ ನೀರು ತಗುಲಿದ ತಕ್ಷಣ ಚೇಳು ಕಚ್ಚಿದಂತೆ ನೋವಿನಿಂದ ಕಿರುಚಿತು. ಮೂಢ ಬರಹಗಾರನೇ ನನ್ನನ್ನು ನಿನ್ನ ಅಕ್ಷರಗಳಿಂದ ಮೋಸಗೊಳಿಸಲು ನೋಡುತ್ತಿದ್ದೀಯಾ? ಈ ಸುರಂಗದ ಆಳದಲ್ಲಿರುವುದು ಕೇವಲ ಮಣ್ಣಲ್ಲ, ಇದು ಈ ವಂಶದ ಸಾವಿರಾರು ವರ್ಷಗಳ ರಕ್ತ ಹೀರಿದ ಭೂಮಿ ಇಲ್ಲಿ ನಿನ್ನ ಮಾಯೆ ನಡೆಯದು. ಸುರಂಗವು ಜೋರಾಗಿ ಭೂಕಂಪನವಾದಂತೆ ನಡುಗತೊಡಗಿತು. ಮೇಲಿಂದ ದೊಡ್ಡ ದೊಡ್ಡ ಕಲ್ಲುಗಳು ಉರುಳಿ ಬೀಳತೊಡಗಿದವು. ರಶ್ಮಿಯ ಕಾಲಿನ ಬಳಿ ನೆಲ ಬಿರುಕು ಬಿಟ್ಟಿತು. ಆ ಬಿರುಕಿನ ಒಳಗಿಂದ ಒಂದು ಪುರಾತನವಾದ, ಕಪ್ಪು ಶಿಲೆಯ ಲಿಂಗ ಮೆಲ್ಲನೆ ಮೇಲೆ ಬಂದಿತು. ಅದರ ಶಿರದ ಮೇಲೆ ಅಶ್ವತ್ಥಾಮನ ಮಣಿಯ ಮೂರನೇ ಭಾಗ ಕಡು ಕೆಂಪು ಬಣ್ಣದಲ್ಲಿ ಜ್ವಾಲೆಯಂತೆ ಉರಿಯುತ್ತಿತ್ತು. ಆ ಬೆಳಕು ಇಡೀ ಸುರಂಗಕ್ಕೆ ರಕ್ತದ ಬಣ್ಣವನ್ನು ಬಳಿದಿತ್ತು. ಅದನ್ನು ತೆಗೆದುಕೋ ಆದರ್ಶ್ ಇಲ್ಲವಾದರೆ ಸುರಂಗ ಪೂರ್ಣವಾಗಿ ಕುಸಿದು ನಾವಿಬ್ಬರೂ ಇಲ್ಲೇ ಸಮಾಧಿಯಾಗುತ್ತೇವೆ ರಶ್ಮಿ ಕಿರುಚಿದಳು.
ಆದರ್ಶ್ ಆ ಮಣಿಯನ್ನು ಮುಟ್ಟಲು ಕೈ ಚಾಚಿದಾಗ, ಅಶ್ವತ್ಥಾಮ ತನ್ನ ಬೃಹತ್ ಕತ್ತಿಯನ್ನು ಅವನ ಮೇಲೆ ಬೀಸಿದ. ಆ ಕ್ಷಣ ಮಾಯಾ ಅಲ್ಲಿಗೆ ಮಿಂಚಿನಂತೆ ಪ್ರತ್ಯಕ್ಷಳಾದಳು. ಅವಳು ತನ್ನ ಅದೃಶ್ಯ ಶಕ್ತಿಯಿಂದ ಆ ಕತ್ತಿಯನ್ನು ತಡೆದಳು. ಆದರ್ಶ್, ಭಯಪಡಬೇಡ ಮಣಿಯನ್ನು ಮುಟ್ಟು ನಿನ್ನ ಬರಹದ ಸೃಷ್ಟಿಕರ್ತ ಶಕ್ತಿ ಮತ್ತು ನಿನ್ನ ಪ್ರೀತಿಯ ಪವಿತ್ರ ಶಕ್ತಿ ಒಂದಾದಾಗ ಮಾತ್ರ ಆ ಮಣಿ ನಿನಗೆ ವಶವಾಗುತ್ತದೆ ಇದು ಸಾಹಿತ್ಯ ಮತ್ತು ಶಾಪದ ನಡುವಿನ ಅಂತಿಮ ಸಮರ
ಆದರ್ಶ್ ತನ್ನ ಒಂದು ಕೈಯಿಂದ ರಶ್ಮಿಯ ಕೈಯನ್ನು ಬಿಗಿಯಾಗಿ ಹಿಡಿದು, ಇನ್ನೊಂದು ಕೈಯಿಂದ ಆ ಉರಿಯುವ ಮಣಿಯನ್ನು ಸ್ಪರ್ಶಿಸಿದ. ಕ್ಷಣಾರ್ಧದಲ್ಲಿ ಅವನ ಶರೀರದಲ್ಲಿ ಸಾವಿರಾರು ವೋಲ್ಟ್ ವಿದ್ಯುತ್ ಹರಿದಂತಾಯಿತು. ಅವನ ಹಣೆಯ ಮೇಲಿದ್ದ ಆ ಸಣ್ಣ ಮಚ್ಚೆ ಈಗ ಪೂರ್ಣ ಪ್ರಮಾಣದ ಮಣಿಯಾಗಿ ರೂಪಾಂತರಗೊಳ್ಳಲು ಶುರು ಮಾಡಿತು. ಮಣಿಯ ಮೂರನೇ ಭಾಗವು ಶಬ್ದದ ವೇಗದಲ್ಲಿ ಆದರ್ಶ್‌ನ ಶರೀರವನ್ನು ಪ್ರವೇಶಿಸಿತು. ಆದರೆ ಮಣಿ ಅವನ ದೇಹ ಸೇರಿದ ತಕ್ಷಣ ಆದರ್ಶ್‌ನ ಕಣ್ಣುಗಳು ಪೂರ್ಣವಾಗಿ ಬಿಳಿಯಾದವು. ಅವನಿಗೆ ಬೆಂಗಳೂರಿನ ಇತಿಹಾಸದ ಕರಾಳ ಮತ್ತು ರಹಸ್ಯ ಪುಟಗಳು ಕಣ್ಣಮುಂದೆ ಸುಳಿಯತೊಡಗಿದವು. ಈ ಫ್ರೀಡಂ ಪಾರ್ಕ್‌ನ ಅಡಿಯಲ್ಲಿ ಸಾವಿರಾರು ಮಂದಿಯ ರಕ್ತ ಹರಿದಿತ್ತು, ಆ ರಕ್ತವನ್ನೇ ಅಶ್ವತ್ಥಾಮನು ತನ್ನ ಶಾಪಗ್ರಸ್ತ ಅಸ್ತಿತ್ವವನ್ನು ಪೋಷಿಸಲು ಬಳಸುತ್ತಿದ್ದ ಎಂಬ ಸತ್ಯ ಅವನಿಗೆ ಸಾಕ್ಷಾತ್ಕಾರವಾಯಿತು. ಆದರ್ಶ್‌ನ ದೇಹವು ಗಾಳಿಯಲ್ಲಿ ತೇಲತೊಡಗಿತು.
ಅಶ್ವತ್ಥಾಮ ಸೋಲನ್ನು ಒಪ್ಪದೆ ಅಟ್ಟಹಾಸಗೈದ. ಮೂರು ಭಾಗಗಳು ನಿನ್ನ ಬಳಿ ಇರಬಹುದು ಬರಹಗಾರನೇ, ಆದರೆ ನಾಲ್ಕನೇ ಭಾಗ, ಅಸಲಿ ರಹಸ್ಯವಿರುವ ಆ ಕಡೆಯ ಮಣಿಯ ತುಂಡು ಇರುವುದು ಮನುಷ್ಯರ ಬಳಿಯಲ್ಲ ಅದು ಈ ಬೆಂಗಳೂರಿನ ಅತ್ಯಂತ ಹಳೆಯ ಸ್ಮಶಾನದ ಕಾವಲುಗಾರನ ಬಳಿಯಿದೆ ಅದನ್ನು ಪಡೆಯಬೇಕಾದರೆ ನೀನು ನಿನ್ನ ಪ್ರೀತಿಯ ರಶ್ಮಿಯನ್ನು ಪೂರ್ಣವಾಗಿ ಮರೆಯಲೇಬೇಕು ಪ್ರೀತಿ ಮತ್ತು ಶಕ್ತಿ ಎರಡರಲ್ಲಿ ಒಂದನ್ನು ಆರಿಸಿಕೊ. ಅಶ್ವತ್ಥಾಮ ಧೂಳಿನಂತೆ ಕತ್ತಲೆಯಲ್ಲಿ ಮಾಯವಾದ. ಸುರಂಗವು ಪೂರ್ಣವಾಗಿ ಕುಸಿಯತೊಡಗಿತು. ಆದರ್ಶ್ ರಶ್ಮಿಯನ್ನು ಎತ್ತಿಕೊಂಡು ಹೇಗೋ ಹರಸಾಹಸ ಪಟ್ಟು ಹೊರಬಂದ. ಫ್ರೀಡಂ ಪಾರ್ಕ್‌ನ ಹೊರಗೆ ಬಂದಾಗ ಸಂಜೆ ಕಳೆದು ಭೀಕರವಾದ ರಾತ್ರಿ ಆವರಿಸಿತ್ತು. ಆದರ್ಶ್‌ನ ಶರೀರ ಈಗ ಸಾಮಾನ್ಯ ಮನುಷ್ಯನಂತಿರಲಿಲ್ಲ. ಅವನ ಸುತ್ತಲೂ ಒಂದು ನೀಲಿ ಬಣ್ಣದ ಅದೃಶ್ಯ ವಲಯವಿತ್ತು. ಅವನು ತನ್ನ ಮೊಬೈಲ್ ನೋಡಿದಾಗ, ಮಾತೃಭಾರತಿಯಲ್ಲಿ ಅವನ ಕಥೆಗೆ ಲಕ್ಷಾಂತರ ವೀಕ್ಷಣೆಗಳು ಮತ್ತು ಸಾವಿರಾರು ಕಾಮೆಂಟ್‌ಗಳು ಬಂದಿದ್ದವು. ಆದರೆ ಆ ಕಾಮೆಂಟ್‌ಗಳಲ್ಲಿ ಜನರು ಕೇಳುತ್ತಿದ್ದುದು ಒಂದೇ ಕ್ರೂರ ಮಾತು ರಶ್ಮಿ ಸಾಯಬೇಕೇ ಅಥವಾ ಆದರ್ಶ್ ಸಾಯಬೇಕೇ? ಅಶ್ವತ್ಥಾಮ ಯಾರನ್ನು ಬಲಿ ತೆಗೆದುಕೊಳ್ಳುತ್ತಾನೆ? ನಮಗೆ ರಕ್ತ ಬೇಕು
ಓದುಗರೇ ಈಗ ಅಶ್ವತ್ಥಾಮನ ಅರಿವಿಲ್ಲದ ಸೈನ್ಯವಾಗುತ್ತಿದ್ದರು. ಕಥೆಯು ಈಗ ಲೇಖಕನ ಕೈ ತಪ್ಪಿ ಓದುಗರ ಕ್ರೂರ ಕುತೂಹಲ ಮತ್ತು ಅಶ್ವತ್ಥಾಮನ ಮಾಯೆಗೆ ಬಲಿಯಾಗುತ್ತಿತ್ತು. ಆದರ್ಶ್ ರಶ್ಮಿಯ ಕಡೆಗೆ ನೋಡಿದ. ಅವಳ ಕಣ್ಣುಗಳಲ್ಲಿ ಪ್ರೀತಿಯ ಬದಲು ಈಗ ಒಂದು ರೀತಿಯ ಭೀತಿ ಕಾಣುತ್ತಿತ್ತು. ಅವಳು ಆದರ್ಶ್‌ನನ್ನು ಒಬ್ಬ ಮನುಷ್ಯನಂತೆ ನೋಡುತ್ತಿರಲಿಲ್ಲ, ಬದಲಾಗಿ ಒಬ್ಬ ಕರಾಳ ಶಕ್ತಿಯಂತೆ ನೋಡುತ್ತಿದ್ದಳು. ಅವಳ ಮೌನ ಆದರ್ಶ್‌ನ ಎದೆಯನ್ನು ಸೀಳುತ್ತಿತ್ತು. ಆದರ್ಶ್ ನಿನ್ನ ಹಣೆಯನ್ನು ನೋಡು ರಶ್ಮಿ ನಡುಗುತ್ತಾ ಹೇಳಿದಳು. ಆದರ್ಶ್ ಕನ್ನಡಿಯ ಅವಶ್ಯಕತೆಯಿಲ್ಲದೆಯೇ ತನ್ನ ಹಣೆಯ ಮೇಲೆ ಮೂರು ಭಾಗಗಳ ಪೂರ್ಣಗೊಂಡ ಮಣಿಯ ಭಾರವನ್ನು ಅನುಭವಿಸಿದ. ಆದರೆ ಅಸಲಿ ಯುದ್ಧ ಈಗ ಬೆಂಗಳೂರಿನ ಸ್ಮಶಾನಗಳ ಕಡೆಗೆ ತಿರುಗಿತ್ತು.