Avala Horata - 8 in Kannada Motivational Stories by Anjana A Kulkarni books and stories PDF | ಅವಳ ಹೋರಾಟ - 8

Featured Books
  • ಬಯಸದೆ ಬಂದವಳು... - 22

    ಅಧ್ಯಾಯ: ಮಾತಿನ ಬೆಲೆ... ಮನಸಿನ ಬೆಂಕಿ“ಯಾಕೆ ನಮ್ಮ ಹತ್ತಿರ ಹೇಳೋಕೆ ಸಂ...

  • ವಜ್ರದ ನಾಲಿಗೆ

    ಬೆಂಗಳೂರಿನ ಅತ್ಯಾಧುನಿಕ ಓಮಿನಿ ಪ್ರೈಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ...

  • ರಕ್ತ ಲಿಪಿಯ ಚಿರಂಜೀವಿ - 21

    ಮೈಸೂರಿನ ಚಾಮುಂಡಿ ಬೆಟ್ಟವು ಇಂದು ಎಂದಿನಂತೆ ಶಾಂತವಾಗಿ ಕಾಣುತ್ತಿರಲಿಲ್...

  • if... Level 1

    ಅಧ್ಯಾಯ 1: ಸಾಸಿವೆ ಮತ್ತು ಸಂಕಟಅನುಪಮಾಗೆ ಅಂದು ಬೆಳಿಗ್ಗೆಯಿಂದಲೂ ಯಾವು...

  • ಧರಣಿ ಮಂತ್ರ

    ಬೆಂಗಳೂರಿನ ಗದ್ದಲದಿಂದ ಮೈಲುಗಳಷ್ಟು ದೂರವಿರುವ ಆ ಹಳೆಯ ಹಳ್ಳಿಯ ಅಂಚಿನಲ...

Categories
Share

ಅವಳ ಹೋರಾಟ - 8

ನಾರಾಯಣ ಜೋರಾಗಿ "ದುರ್ಗಾ" ಅಂತ ಕೂಗಿದ, ಏಕೆಂದರೆ ಅಪರಿಚಿತ ಎರಚಿದ್ದು ಲಕ್ಷ್ಮಿಯ ಮೇಲೆ ಬೀಳಬೇಕು ಅನ್ನೋ ಅಷ್ಟರಲ್ಲಿ ದುರ್ಗಾ ಅಡ್ಡ ಬಂದಿದ್ದಳು, ಹಾಗಾಗಿ ಅದು ದುರ್ಗಾಳ ಕೈ ಮೇಲೆ ಬಿದ್ದಿತ್ತು. ಎಲ್ಲರೂ ದುರ್ಗಾಳ ಕೈಗೆ ಏನಾಗಿದೆ ಎಂದು ನೋಡುತ್ತಿದ್ದರು, ಆದರೆ ದುರ್ಗಾ ಆ ವ್ಯಕ್ತಿಯ ಬಗ್ಗೆ ಯೋಚಿಸುತ್ತಿದ್ದಳು. ಅವಳ ಕೈ ತುಂಬಾ ನೋವಾಗುತ್ತಿತ್ತು, ಆ ನೋವಿನಲ್ಲಿ ಅವಳಿಗೆ ಹೆಚ್ಚು ಯೋಚಿಸಲು ಆಗಲಿಲ್ಲ.

ನಾರಾಯಣ : ದುರ್ಗಾ ಏನಾಯ್ತು ದುರ್ಗಾ (ಅಂತ ಅಳುತ್ತ ಕೇಳಿದ).

ಲಕ್ಷ್ಮಿ : ಯಾರವನು, ಏನು ಎರಚಿ ಹೋದ (ಎಂದು ಕೋಪದಿಂದ ಕೇಳಿದಳು).

ದುರ್ಗಾ : ಆಸಿಡ್ (ಎಂದು ರೋಷದಿಂದ ಹೇಳಿದಳು).

ಲಕ್ಷ್ಮಿ : ಏನು ಆಸಿಡ್! ದುರ್ಗಾ ನೀನು ಏಕೆ ಅಡ್ಡ ಬಂದೆ (ಎಂದು ಅವಳ ಕೈ ಹಿಡಿದು ಜೋರಾಗಿ ಅಳಲು ಶುರು ಮಾಡಿದಳು).

ದುರ್ಗಾ : ಅಮ್ಮ ಈಗ ನನಗೆ ನೋವಾಗುತ್ತಿದೆ, ಇದನ್ನು ನಾನು ಸಹಿಸಿಕೊಳ್ಳುತ್ತೇನೆ. ಆದರೆ ನಿಮಗೆ ಏನಾದರೂ ಆಗಿದ್ದರೆ ನನಗೆ ಸಹಿಸಿಕೊಳ್ಳಲು ಆಗಲ್ಲ.

ನಾರಾಯಣ : ದುರ್ಗಾ ಬೇಗ ಬಾ, ಆಸ್ಪತ್ರೆಗೆ ಹೋಗೋಣ.

ವಿನೀತ್ : ಅಯ್ಯೋ ದುರ್ಗಾ ಏನಾಯ್ತು, ಬೇಗ ನಡೆರಿ ಆಸ್ಪತ್ರೆಗೆ ಹೋಗೋಣ.

ದುರ್ಗಾ ಅವನನ್ನೇ ದಿಟ್ಟಿಸಿ ನೋಡಿದಳು, ಅವಳ ದೃಷ್ಟಿ ಅವನ ಮೇಲೆ ನಿಂತೇ ಇತ್ತು. ಅವಳ ದೃಷ್ಟಿ ನೋಡಿ ವಿನೀತ್ ಸ್ವಲ್ಪ ಹೆದರಿದ. ಎಲ್ಲರೂ ಆಸ್ಪತ್ರೆಗೆ ಹೋದರು. ವೈದ್ಯರು ಅವಳ ಕೈಗೆ ಚಿಕಿತ್ಸೆ ನೀಡುತ್ತಿದ್ದರು. ಅಷ್ಟರಲ್ಲಿ ಶೌರ್ಯ ಅಲ್ಲಿಗೆ ಬಂದ.

ಶೌರ್ಯ : ದುರ್ಗಾ, ಇದೇನಾಯ್ತು? ಹೇಗಾಯ್ತು? ತುಂಬಾ ನೋವಾಗ್ತಿದೆಯಾ?

ದುರ್ಗಾಗೆ ತುಂಬಾ ನೋವಾಗುತ್ತಿದ್ರೂ ಅವಳು ಶೌರ್ಯನನ್ನೇ ನೋಡುತ್ತಿದ್ದಳು.

ದುರ್ಗಾ : ನನ್ನ ಮೇಲೆ ಆಸಿಡ್ ಬಿದ್ದು ತುಂಬಾ ಹೊತ್ತಾಯಿತು, ಆಸಿಡ್ ಬಿದ್ದಾಗಲೂ ನೀನು ಇರಲಿಲ್ಲ, ಈಗ ಅಚಾನಕ್ ಆಗಿ ಎಲ್ಲಿಂದ ಪ್ರತ್ಯಕ್ಷ ಆದೆ ಶೌರ್ಯ (ಎಂದು ಕೋಪದಿಂದ ಕೇಳಿದಳು).

ಶೌರ್ಯ : ನಾನು ಸ್ವಲ್ಪ ಕೆಲಸ ಇತ್ತು ಅಂತ ಹೊರಗಡೆ ಹೋಗಿದ್ದೆ, ಇದು ಹೇಗಾಯ್ತು ಅಂತ ನನಗೆ ಗೊತ್ತಿಲ್ಲ (ಎಂದು ತಡವರಿಸುತ್ತ ಹೇಳಿದ, ದುರ್ಗಾ ಅದನ್ನು ಗಮನಿಸಿದಳು). ಇದನ್ನು ಯಾರು ಮಾಡಿದರು ಅನ್ನೋದು ಗೊತ್ತಿದ್ದರೆ ಹೇಳಿ, ಪೊಲೀಸರಿಗೆ ಮಾಹಿತಿ ಕೊಡೋಣ.

ದುರ್ಗಾ : ಖಂಡಿತ ಮಾಹಿತಿ ಕೊಡ್ತೀವಿ ಶೌರ್ಯ, ಏಕೆಂದರೆ ಅವನ ಗುರಿ ನಾನಾಗಿದ್ದರೆ ನಾನು ಸುಮ್ಮನೆ ಇರುತ್ತಿದ್ದೆ, ಆದರೆ ಅವನ ಗುರಿ ಅಮ್ಮನ ಮೇಲೆ ಇತ್ತು. ಇನ್ನೂ ಅವನು ಯಾವ ಮೂಲೆಯಲ್ಲಿ ಇದ್ದರೂ ಅವನ ಸತ್ಯ ಹೊರಗೆ ತರುವವರೆಗೆ ನಾನು ನಿದ್ರೆ ಮಾಡಲ್ಲ (ಎಂದು ಕೋಪದಿಂದ ಹೇಳಿದಳು).

ಡಾಕ್ಟರ್ : ದುರ್ಗಾ ನೀನು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕು, ಚರ್ಮ ಪೂರ್ತಿಯಾಗಿ ಕಿತ್ತು ಹೋಗಿದೆ.

ದುರ್ಗಾ : ಆಯ್ತು ಡಾಕ್ಟರ್.

ಡಾಕ್ಟರ್ : ನೋಡಿ ನೀವು ಎಲ್ಲರೂ ಹೊರಗಡೆ ಹೋಗಿ, ಅವಳು ಸ್ವಲ್ಪ ನಿದ್ರೆ ಮಾಡಲಿ.

ಎಲ್ಲರೂ ಹೊರಗಡೆ ಹೋದರು.

ಶೌರ್ಯ : ಅಂಕಲ್ ನಿಮಗೆ ತಿನ್ನೋಕೆ ಏನಾದರೂ ತೆಗೆದುಕೊಂಡು ಬರುತ್ತೇನೆ, ನೀವು ವಿಶ್ರಾಂತಿ ತಗೊಳ್ಳಿ ತುಂಬಾ ಸುಸ್ತಾಗಿದ್ದೀರಿ.

ನಾರಾಯಣ : ನೀನು ಮನೆಗೆ ಹೋಗು ಶೌರ್ಯ, ಇಲ್ಲಿ ನಾನು ನೋಡಿಕೊಳ್ಳುತ್ತೇನೆ.

ಶೌರ್ಯ : ಅರೆ ನೀವು ಒಬ್ಬರೇ ಎಷ್ಟು ಅಂತ ನೋಡಿಕೊಳ್ಳುತ್ತೀರಿ, ನಾನು ವಿನೀತ್ ಸ್ವಲ್ಪ ಸಹಾಯ ಮಾಡುತ್ತೇವೆ.

ನಾರಾಯಣ : ನಾನು ಹೇಳಿದ್ದೇನೆಲ್ಲ ಶೌರ್ಯ, ಹೊರಡು (ಎಂದು ಸ್ವಲ್ಪ ಕಠೋರವಾಗಿ ಹೇಳಿದ).

ಅವರ ಮಾತು ಕೇಳಿ ಶೌರ್ಯ ಮತ್ತು ವಿನೀತ್ ಅಲ್ಲಿಂದ ಹೋದರು.

ಎಲ್ಲರೂ ಮಲಗಿದ್ದರು, ಆಗ ನಾರಾಯಣ ದುರ್ಗಾ ಇರುವ ಕೋಣೆಗೆ ಬಂದನು, ಅಲ್ಲಿ ದುರ್ಗಾ ಏನೋ ಯೋಚಿಸುತ್ತ ಕುಳಿತಿದ್ದಳು.

ನಾರಾಯಣ : ದುರ್ಗಾ ಯಾಕೆ ನಿದ್ರೆ ಬರುತ್ತಿಲ್ಲವಾ?

ದುರ್ಗಾ : ಇನ್ನೂ ನನಗೆ ನಿದ್ರೆ ಬರಲ್ಲ ಅಪ್ಪಾ.

ನಾರಾಯಣ : ಸರಿಯಾಗಿ ಹೇಳಿದೆ, ಇದನ್ನು ಹೀಗೇ ಬಿಡಬಾರದು, ಏನಾದರೂ ಮಾಡಲೇಬೇಕು. ನಿನ್ನ ಮೇಲೆ ಆಸಿಡ್ ಹಾಕಿದವನ ಮುಖ ಏನಾದರೂ ನೆನಪಿದೆಯಾ?

ದುರ್ಗಾ : ಅವನ ಮುಖ ಪೂರ್ತಿಯಾಗಿ ಮುಚ್ಚಿತ್ತು, ಆದರೆ (ಎಂದು ಅಲ್ಲಿಗೆ ನಿಲ್ಲಿಸಿದಳು).

ನಾರಾಯಣ : ನಿನಗೆ ಏನಾದರೂ ಹೇಳೋದಿದೆಯಾ?

ದುರ್ಗಾ : ಅಪ್ಪಾ, ಅವನ ಕೈಯಲ್ಲಿ ಶೌರ್ಯನ ಕೈಯಲ್ಲಿರುವ ಟ್ಯಾಟೂ ನೋಡಿದೆ.

ನಾರಾಯಣಗೆ ತುಂಬಾ ಆಶ್ಚರ್ಯ ಆಯಿತು, ಅವನಿಗೆ ನಂಬೋಕೆ ಆಗಲಿಲ್ಲ.

ನಾರಾಯಣ : ಒಂದೇ ಟ್ಯಾಟೂ ಬೇರೆ ಬೇರೆವರ ಕೈಯಲ್ಲಿ ಇರಬಹುದು ದುರ್ಗಾ, ಇದೊಂದೇ ಆಧಾರದ ಮೇಲೆ ನಾವು ಏನೂ ಮಾಡೋಕೆ ಆಗಲ್ಲ.

ದುರ್ಗಾ : ಹ್ಮ್ ಅದು ಸರಿಯೇ, ಆದರೆ ಈಗ ಏನು ಮಾಡೋದು ನನಗೆ ಮತ್ತೇನು ನೆನಪಾಗ್ತಿಲ್ಲ.

ನಾರಾಯಣ : ಚಿಂತಿಸಬೇಡ, ಯಾವುದಾದರೂ ಒಂದು ದಾರಿ ಸಿಗುತ್ತದೆ.

ಅಷ್ಟರಲ್ಲಿ ದುರ್ಗಾಗೆ ಒಂದು ಕಾಲ್ ಬಂತು. ಕಾಲ್ ಮಾಡಿದವರ ಹೆಸರನ್ನು ನೋಡಿ ದುರ್ಗಾಗೆ ತುಂಬಾ ಆಶ್ಚರ್ಯ ಆಯಿತು. ಅವಳು ಕಾಲ್ ರಿಸೀವ್ ಮಾಡಿ ಸ್ಪೀಕರ್ ಇಟ್ಟಳು. ಅಕಡೆಯಿಂದ ಮಾತಾಡಿದುದನ್ನು ಕೇಳಿ ನಾರಾಯಣ ಮತ್ತು ದುರ್ಗಾ ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡರು.

ನಾರಾಯಣ : ಈಗ ಏನು ಮಾಡೋದು ದುರ್ಗಾ?

ದುರ್ಗಾ : ಅಪ್ಪಾ ನಾನು ಅಜ್ಜಿ ಮನೆಗೆ ಹೋಗಬೇಕು.

(ನಾರಾಯಣ ಮತ್ತು ಸುಲೋಚನಾಳ ಮನೆ ಬೇರೆ ಬೇರೆ ಆಗಿದ್ದರೂ ದುರ್ಗಾ ಮತ್ತು ಸುಲೋಚನಾಳ ಸಂಬಂಧ ಚೆನ್ನಾಗಿತ್ತು. ಏನೇ ಆದರೂ ಮೊಮ್ಮಗಳು ಅಲ್ಲವಾ, ಹಾಗಾಗಿ ಸುಲೋಚನಾ ದುರ್ಗಾಳ ಜೊತೆ ಚೆನ್ನಾಗಿ ಮಾತಾಡುತ್ತಿದ್ದಳು. ನಾರಾಯಣ ಮನೆ ಬಿಟ್ಟು ಹೋದ ಮೇಲೆ ಸುಲೋಚನಾಗೆ ಅವಳ ತಪ್ಪಿನ ಅರಿವಾಗಿತ್ತು, ಆದರೆ ಶಿವರಾಜ್‌ಗಾಗಿ ಅವಳು ನಾರಾಯಣನ ಜೊತೆ ಮಾತಾಡುತ್ತಿರಲಿಲ್ಲ.)

ನಾರಾಯಣ : ಸರಿ ದುರ್ಗಾ, ನೀನು ಏನು ಮಾಡಬೇಕೆಂದಿದ್ದೀಯೋ ಅದನ್ನು ಮಾಡು, ಆದರೆ ಎಚ್ಚರಿಕೆ ಇರಲಿ.

ದುರ್ಗಾ : ಸರಿ ಅಪ್ಪಾ, ಆದರೆ ಇಲ್ಲಿ ಎಲ್ಲ ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳಿ, ಏಕೆಂದರೆ ಮುಂದೆ ಏನಾದರೂ ಆಗಬಹುದು.

ನಾರಾಯಣ : ನೀನು ಅದರ ಬಗ್ಗೆ ಯೋಚಿಸಬೇಡ, ನಾನು ಎಲ್ಲ ನೋಡಿಕೊಳ್ಳುತ್ತೇನೆ, ನೀನು ಹೊರಡುವ ತಯಾರಿ ಮಾಡಿಕೋ.

ಆ ಕಾಲ್‌ನಲ್ಲಿ ದುರ್ಗಾ ಮತ್ತು ನಾರಾಯಣ ಏನು ಕೇಳಿಸಿಕೊಂಡರು, ಮುಂದೆ ಏನಾಗುತ್ತದೆ ಅನ್ನೋದನ್ನ ಮುಂದಿನ ಅಧ್ಯಾಯದಲ್ಲಿ ನೋಡೋಣ…