ಕನಸಿನ ಕನ್ಯೆ
(ಪ್ರೇಮ ಕತೆ- ವಾಮನಾಚಾರ್ಯ)
ಇಂಜಿನಿಯರಿಂಗ್ ಪದವಿ ಮುಗಿಸಿ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಅರುಣ್ ಗೆ ನಸುಕಿನ ಆರು ಗಂಟೆಗೆ ಏಳುವ ಅಭ್ಯಾಸ. ಅಂದು ಏಳು ಗಂಟೆ ಆದರೂ ಏಳಲಿಲ್ಲ. ಮಳೆಗಾಲ ಇರುವದರಿಂದ ಆಕಾಶದಲ್ಲಿ ಮೋಡಗಳು ಕವಿದು ತಂಪಾದ ಹವಾಮಾನ. ಧಾರಾಕಾರ ಮಳೆ ಆಗುವ ಎಲ್ಲ ಲಕ್ಷಣಗಳು ಕಂಡು ಬಂದವು. ಅವನ ತಾಯಿ ಮಗನಿಗೆ ಎಬ್ಬಿಸಲಿಲ್ಲ.
ಅಂದು ಭಾನುವಾರ. ಆ ಸಮಯದಲ್ಲಿ ಅವನು ಕನಸಿನ ಲೋಕದಲ್ಲಿ ವಿಹಾರ ಮಾಡಿದ.
ಪಾರ್ಕಿನಲ್ಲಿ ಬೆಳಗಿನ ವಾಯು ವಿಹಾರಕ್ಕೆ ಆಗಮಿಸಿದ ಬಹಳಷ್ಟು ಜನರು ಮಳೆ ಬರುವವರಿಗೆ ತಂಪಾದ ಹವಾಮಾನದ ಆನಂದ ಅನುಭವಿಸಿದರು. ಎರಡು ಸಲ ಫೋನ್ ರಿಂಗ ಆದಮೇಲೆ ಮನಸ್ಸು ಇಲ್ಲದ ಮನಸ್ಸಿನಿಂದ ಫೋನ್ ಎತ್ತಿದ. ಆ ಕಡೆಯಿಂದ ಹುಡುಗಿಯ ಮಧುರ ಧ್ವನಿ.
"ಗುಡ್ ಮಾರ್ನಿಂಗ್ ಅರುಣ್, ಇನ್ನೂ ಮಲಗಿದ್ದಿಯಾ? ನಾನು ನಿನ್ನ ಡ್ರೀಮ್ ಗರ್ಲ್ ಪಾರ್ಕನಲ್ಲಿ ಕಾಯುತ್ತಾ ಇದ್ದೇನೆ ಬೇಗ ಬಾ."
ಅರುಣ್ ಕೊಡಲೇ ಬಟ್ಟೆ ಬದಲಾಯಿಸದೆ ಹಾಗೆ ಪಾರ್ಕಗೆ ಹೊರಟ. ಹೋಗುವಾಗ ಕೊರಳಿಗೆ ಬ್ಯಾಗ್ ಹಾಕಿಕೊಂಡ. ಅವನಿಗೆ ಆ ಸುಂದರ ಹುಡುಗಿಯಯ ಭೇಟಿ ಆಗುವ ತವಕ. ಆಕೆಯ ಸೌಂದರ್ಯ ಮನಸ್ಸಿನಲ್ಲೇ ರೂಪಿಸಿ ಕೊಂಡು ಆನಂದ ಪಟ್ಟ. ಪಾರ್ಕ ನ ಒಳಗೆ ಎಲ್ಲ ಕಡೆ ನೋಡಿದ. ಎಲ್ಲಿಯೂ ಆಕೆ ಕಾಣಲಿಲ್ಲ. ಪರಿಚಯ ಇರುವ ಕೆಲವರು ಹಾಯ್ ಎಂದರು.
ಅದೇ ಸಮಯಕ್ಕೆ ಆರು ವರ್ಷದ ಪುಟ್ಟ ಹುಡುಗ ಬಂದು
'ಅಂಕಲ್, ನಿಮ್ಮ ವಾಚ್ ಎಷ್ಟು ಚೆನ್ನಾಗಿದೆ. ನೋಡಲು ಕೊಡಿ,' ಎಂದ.
ಪುಟ್ಟ ಹುಡುಗನ ದಿಟ್ಟ ಮಾತು ಕೇಳಿ ಕೈಯಿಂದ ವಾಚ್ ತೆಗೆದು ಕೊಟ್ಟು ತನ್ನ ಬ್ಯಾಗ್ ತೆಗೆದ. ಅದರಲ್ಲಿ ಡ್ರಾಯಿಂಗ್ ಪೇಪರ್, ಅನೇಕ ಬಣ್ಣದ ಪೆನ್ಸಿಲ್ ಗಳು, ಅಳಿಸಲು ರಬ್ಬರ್ ಹಾಗೂ ಇತರ ಸಲಕರಣೆ ಇದ್ದವು. ಡ್ರಿಮ್ ಗರ್ಲ್ ಚಿತ್ರ ತೆಗೆಯುವಾಗ ಪುಟ್ಟ ಹುಡುಗ ವಾಚ್ ಜೊತೆಗೆ ಆಟ ಆಡುತ್ತ ಮುಂದೆ ಎಲ್ಲಿಗೆ ಹೋದ ಗೊತ್ತಾಗಲಿಲ್ಲ. ಕನಸಿನ ಸುಂದರಿ ಚಿತ್ರ ತೆಗೆಯುವಾಗ ಆಕೆಯ ತೆಳ್ಳಗಿನ ಮೈಕಟ್ಟು, ನೀಟಾಗಿ ಬಾಚಿದ ಉದ್ದನೆ ಕೂದಲು, ನೀಳ ವಾದ ಮೂಗು, ಹಣೆ ಮೇಲೇ ಇರುವ ಕುಂಕುಮ, ಕೊರಳಲ್ಲಿ ಒಂದು ಎಳೆಯ ನೆಕ್ಲೆಸ್, ಗುಲಾಬಿ ಬಣ್ಣದ ಸೀರೆ ಹಾಗೂ ಕಾಲಿನಲ್ಲಿ ಡಿಜೈನರ್ ಪಾದರಕ್ಷೆ ಎಲ್ಲವನ್ನೂ ಸಿದ್ಧ ಮಾಡುವದಕ್ಕೂ ಯಾರೋ,
“ಹಾಯ್ ಅರುಣ್,” ಎಂದು ಅವನ ಬೆನ್ನಿನ ಮೇಲೆ ಕೈ ಇಟ್ಟಳು.
ಅವನು ತಿರುಗಿ ನೋಡಿದ.
ಸ್ವಲ್ಪ ಹಿಂದೆ ಫೋನ್ ಮಾಡಿದ ಹುಡುಗಿಯ ಧ್ವನಿ ಗುರುತಿಸಿದ. ಆಶ್ಚರ್ಯವೆಂದರೆ ತಾನು ತೆಗೆದ ಚಿತ್ರ ಹಾಗೂ ಆ ಸುಂದರಿ ಏನೂ ವ್ಯತ್ಯಾಸ ಇಲ್ಲ. ಆ ಚಿತ್ರ ಆಕೆಗೆ ತೋರಿಸಿದ.
“ಆಕೆ ಇದೇನು ಆಶ್ಚರ್ಯ”, ಎಂದಳು.
ಇನ್ನೇನು ಆಕೆಗೆ ಹಸ್ತ ಲಾಘವ, ಪ್ರೀತಿಯ ಅಪ್ಪುಗೆ ಮಾಡಬೇಕು ಎನ್ನುವಾಗ ನಿದ್ರೆಯಿಂದ ಎಚ್ಚರ ವಾಯಿತು.
ಹಾಸಿಗಯಿಂದ ಎದ್ದು ನೋಡಿದರೆ ಹುಡುಗಿ ಇರದೇ ಅಮ್ಮ ಬೇಗ ಏಳು ಎಂದು ಬೆನ್ನು ತಟ್ಟಿದ್ದಳು. ಫೋನ್ ನಲ್ಲಿ ಮಾತಾಡಿದವಳು ನಿಜವಾದ ಹುಡುಗಿ ಅಲ್ಲ ಸ್ವಪ್ನ ಸುಂದರಿ ಎಂದು ತಿಳಿದು ಮನಸ್ಸಿನಲ್ಲಿ ತುಂಬಾ ಬೇಜಾರು ಮಾಡಿಕೊಂಡ. ಆತನ ಬೆಲೆಬಾಳುವ ವಾಚ್ ಅಲ್ಲಿಯೇ ಟೇಬಲ್ ಮೇಲೆ ಇತ್ತು.
'ಯಾಕೋ ಅರುಣ್, ಇಂದು ಹಾಸಿಗೆಯಿಂದ ಏಳುವದಕ್ಕೆ ಒಂದು ಗಂಟೆ ತಡ ಏಕೆ?”
ಅರುಣ್ ತನಗೆ ಆಗಿರುವ ಕನಸಿನ ವಿವರ ಹೇಳಿದ.
'ನೀನು ಕನಸಿನಲ್ಲಿ ನೋಡಿದ ಸುಂದರಿ ಗಿಂತಲೂ ನಿಜವಾದ ಸುಂದರಿ ಇಂದು ಸಾಯಂಕಾಲ ಆರು ಗಂಟೆಗೆ ನಿನ್ನನ್ನು ನೋಡಲು ಬರುವಳು. ಎಲ್ಲಿಗೂ ಹೋಗಬೇಡ. ಆ ಸಮಯದಲ್ಲಿ ಒಳ್ಳೆ ಡ್ರೆಸ್ ಹಾಕಿಕೊಂಡು ರೆಡಿ ಆಗು. ನಾನು ರುಚಿಕರ ತಿಂಡಿ ಸಿದ್ಧ ಮಾಡಿ ರೆಡಿ ಆಗುತ್ತೇನೆ,” ಎಂದಳು.
ಇದನ್ನು ಕೇಳಿದ ಅರುಣ್ ಸಂತೋಷ ತಡೆಯಲು ಆಗದೇ ಕುಣಿದಾಡಿದ.
ಸಾಯಂಕಾಲದ ವರೆಗೆ ಅವನ ತಲೆಯಲ್ಲಿ ಬರಿ ಆ ಸ್ವಪ್ನ ಸುಂದರಿ.
ಸಾಯಂಕಾಲ ಸರಿಯಾಗಿ ಆರು ಗಂಟೆ ಗೆ ಕಾಲಿಂಗ್ ಬೆಲ್ ಶಬ್ದ ಆಯಿತು. ಅರುಣ್ ಗೆ ಖುಷಿ ತಡೆಯಲು ಆಗದೇ,
“ಅಮ್ಮ ಬೇಗನೆ ಬಾಗಿಲು ತೆಗೆ ನಾನು ಆಗಲೇ ರೆಡಿ ಆಗಿದ್ದೇನೆ.” ಎಂದ
ತಿಂಡಿ ಸಿದ್ಧತೆ ಮಾಡುತ್ತಿರುವ ಅವನ ಅಮ್ಮ ಬಾಗಿಲು ತೆಗೆದು ನೋಡಿದ ಮೇಲೆ ಅಸಮಾಧಾನ ವಾಯಿತು. ಅರುಣ್ ಗೆ ನೋಡಲು ಬರುವ ಸುಂದರಿ ಇರದೇ ಆಗಾಗ ಬರುವ ಪಕ್ಕದ ಮನೆ ಅಜ್ಜಿ ಇದ್ದರು. ಹೊರಗೆ ಹೋಗುವಾಗ ಅಜ್ಜಿ ತನ್ನ ಮನೆ ಲಾಕ್ ಮಾಡಿ ಕೀ ಕೊಟ್ಟು ಹೋಗುವಳು. ಅಜ್ಜಿ ಹೋದ ಐದು ನಿಮಿಷ ಆದ ಮೇಲೆ ಮತ್ತೊಮ್ಮೆ ಕಾಲ್ ಬೆಲ್ ಶಬ್ದ. ಈ ಸಲ ಹಾಲು ಮಾರುವ ಹುಡುಗ. ಅವನಿಗೆ ಹಾಲು ಬಿಲ್ ಪಾವತಿ ಮಾಡಿದರು. ನಂತರ ಬಂದವರು ಟಿ ವಿ ಕೇಬಲ್ ಬಿಲ್ ಹಾಗೂ ಪೇಪರ್ ಬಿಲ್ ಕೇಳಲು ಒಂದೇ ಸಲ ಬಂದರು. ಸಮಯ ಏಳು ಗಂಟೆ ಆದರೂ ಕನ್ಯ ಬರದೇ ಇರುವದರಿಂದ ಅರುಣ್ ದಾರಿ ಕಾದ.
ಅರುಣ್ ತಾಳ್ಮೆ ಕಳೆದು ಕೊಂಡ.
ಆಗ ಅವರಿಂದ ಫೋನ್ ಬಂದು ತಡವಾಗಿರುವದಕ್ಕೆ ಕ್ಷಮೆ ಕೇಳಿ ಈಗ ಬರ ಬಹುದಾ ಎಂದು ಕೇಳಿದರು. ಅವರಿಗೆ ಬರಲು ತಿಳಿಸಿದರು. ಅರ್ಧ ಗಂಟೆಯಲ್ಲಿ ಅಪ್ಪ, ಅಮ್ಮ ಜೊತೆಗೆ ಕನ್ಯ ಆಗಮನ ವಾಯಿತು.
ಆಕೆಯನ್ನು ನೋಡಿದ ಕೂಡಲೇ ಅರುಣ್ ಗೆ ಎಲ್ಲಿಲ್ಲದ ಆಶ್ಚರ್ಯ. ಕನಸಿನಲ್ಲಿ ಕಂಡ ಸುಂದರಿ ಹೋಲುವ ಹಾಗೆ ಇರುವಳು. ಎಲ್ಲರೂ ಆಸನದ ಮೇಲೆ ಕುಳಿತರು. ಮದುವೆ ಆಗುವ ಕನ್ಯೆ ಎದ್ದು ನಿಂತು ಎಲ್ಲರಿಗೂ ಕೈ ಮುಗಿದು,
“ನಾನು ವಸುಧ. ಇವರು ನನ್ನ ತಾಯಿ ನಾಗಮಣಿ ಮತ್ತು ತಂದೆ ಕೃಷ್ಣ ರಾಜ,” ಎಂದಳು.
ಅದರಂತೆ ಅರುಣ್ ತನ್ನ ಹಾಗೂ ತಾಯಿಯ ಪರಿಚಯ ಮಾಡಿದ. ವಿಷಯಕ್ಕೆ ಬರುವ ಮೊದಲು ಕನ್ಯೆ ಹಾಗೂ ವರ ನೇರವಾಗಿ ಮಾತನಾಡಲು ಪಕ್ಕದ ರೂಮಿಗೆ ಹೋದರು.
“ಹಾಯ್ ಅರುಣ್.”
“ಹಾಯ್ ವಸುಧ.”
ಇದರೊಂದಿಗೆ ಅವರ ಮಾತು ಪ್ರಾರಂಭ ವಾಯಿತು.
ಶಿಕ್ಷಣ, ಕೆಲಸ, ಆದಾಯ ಹಾಗೂ ಕುಟುಂಬದ ಬಗ್ಗೆ ಇರುವ ವಿವರವಾದ ಮಾಹಿತಿ ಪರಸ್ಪರ ಹಂಚಿ ಕೊಂಡರು. ಮಾತಿನ ಭರದಲ್ಲಿ ಅರುಣ್,
“ಈಗಾಗಲೇ ನನ್ನ ಜೀವನದಲ್ಲಿ ಒಬ್ಬ ಹುಡುಗಿ ಬಂದಿದ್ದಳು. ಬರಿ ಸ್ನೇಹಿತೆ ಎಂದರೆ ಏನೂ ಆಗುತ್ತಿರಲಿಲ್ಲ. ಬಾಯಿ ತಪ್ಪಿ ಒಂದು ಹೆಜ್ಜೆ ಮುಂದೆ ಹೋಗಲಿಲ್ಲ ಎನ್ನುವ ಬದಲು ಹೋದೆ, “ ಎಂದ.
ನಂತರ ತನ್ನ ತಪ್ಪು ಸುಧಾರಿಸಿ ಕೊಳ್ಳುವದರಲ್ಲಿ ಆಕೆ ಹೋಗಿ ಬಿಟ್ಟಿದ್ದಳು.
ಇದೆಲ್ಲ ಬೆಳವಣಿಗೆಗೆ ತಾನೇ ಜವಾಬ್ದಾರ ಎಂದು ತುಂಬಾ ನೊಂದು ಕೊಂಡ. ಏನೂ ಗೊತ್ತಿರದ ಅವನ ಅಮ್ಮ,
“ಇದೇನು ಅರುಣ್ ಅವರು ಹೀಗೇಕೆ ಹೋದರು?”
ಅರುಣ್ ಅಮ್ಮನಿಗೆ ಎಲ್ಲವೂ ತಿಳಿಸಿದ.
“ಆಯಿತು, ಮನಸ್ಸಿಗೆ ಹಚ್ಚಿ ಕೊಳ್ಳಬೇಡ. ಇವಳಿಗಿಂತಲೂ ಸುಂದರವಾದ ಕನ್ಯೆ ನೋಡುವೆ ಹಾಯಾಗಿರು,” ಎಂದಳು.
ಆರು ತಿಂಗಳು ಕಳೆಯಿತು.
ಅರುಣ್ ಗೆ ವಸುಧ ತುಂಬಾ ಮೆಚ್ಚುಗೆ ಆಗಿದ್ದಳು. ವಿರಹ ವೇದನೆಯಿಂದ ಅವನ ಆರೋಗ್ಯ ಹದಗೆಟ್ಟಿತು.
ವಸುಧ ಗೆ ಜ್ಞಾನೋದಯ ವಾಗಿ ಮತ್ತೆ ಅರುಣ್ ಗೆ ಕ್ಷಮಾಪಣೆ ಕೇಳಲು ಬಂದಾಗ ಕಾಲ ಮಿಂಚಿ ಹೋಗಿತ್ತು. ಅರುಣ್ ಮರಳಿ ಬರದೇ ಇರುವ ಲೋಕಕ್ಕೆ ಹೋಗಿದ್ದ.