ಅದು ಒಂದು ಸಾಮಾನ್ಯವಾದ ಸೋಮವಾರ, ಎಂದಿನಂತೆ ಕೃಷ್ಣ ತನ್ನ ಆಫೀಸ್ ಕೆಲಸದಲ್ಲಿ ಮುಳುಗಿದ್ದೆ. ಅಂದಿನ ಆ ಸಂಜೆ ತನ್ನ ಬದುಕಿನ ದಿಕ್ಕನ್ನೇ ಬದಲಾಯಿಸಬಹುದೆಂದು ಕೃಷ್ಣ ಊಹಿಸಿರಲಿಲ್ಲ. ಕೃಷ್ಣನ ಫೋನ್‌ಗೆ ಒಂದು ಅಪರಿಚಿತ ಸಂಖ್ಯೆಯಿಂದ ಮೆಸೇಜ್ ಬಂತು. ಅದರಲ್ಲಿ ಕೇವಲ ಹಾಯ್ ಎಂದು ಇತ್ತು. ಕೃಷ್ಣ ಯಾರಿರಬಹುದೆಂದು ಯೋಚಿಸುತ್ತಿರುವಾಗ, ಎರಡನೇ ಮೆಸೇಜ್ ಬಂತು: ಸಾರಿ, ನೀವು ನರೇಶ್ ಅಲ್ವಾ? ಕೃಷ್ಣ ಗೊಂದಲಗೊಂಡು, ಇಲ್ಲ, ನೀವು ತಪ್ಪಾದ ನಂಬರ್‌ಗೆ ಮೆಸೇಜ್ ಮಾಡಿದ್ದೀರಿ ಎಂದು ಉತ್ತರಿಸಿದ.ಕ್ಷಣಾರ್ಧದಲ್ಲಿ ಉತ್ತರ ಬಂತು: ಓಹ್, ಕ್ಷಮಿಸಿ. ನಿಮ್ಮ ನಂಬರ್ ನೋಡಿದಾಗ ನನ್ನ ಹಳೆಯ ಸ್ನೇಹಿತ ನರೇಶ್‌ರ ನೆನಪಾಯಿತು. ನಾವಿಬ್ಬರೂ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದೆವು. ಅವಳ ಮಾತಿನಲ್ಲಿ ಒಂದು ರೀತಿಯ ನಿಷ್ಕಲ್ಮಶತೆ ಇತ್ತು, ಹಾಗಾಗಿ ಕೃಷ್ಣ, ಪರವಾಗಿಲ್ಲ, ನನ್ನ ಹೆಸರು ಕೃಷ್ಣ ಎಂದು ಹೇಳಿದ. ಆ ನಂತರ ಅವಳು ತನ್ನನ್ನು ತಾನು ಅನು ಎಂದು ಪರಿಚಯಿಸಿಕೊಂಡಳು. ಆ ಕ್ಷಣದಿಂದ ಇಬ್ಬರ ನಡುವೆ ಮಾತುಕತೆ ಶುರುವಾಯಿತು.ಅವಳ ಮೆಸೇಜ್‌ಗಳಲ್ಲಿ ಒಂದು ರೀತಿಯ ಮ್ಯಾಜಿಕ್ ಇತ್ತು. ಇಬ್ಬರ ಮಾತುಕತೆ ವೃತ್ತಿಜೀವನ, ಹವ್ಯಾಸಗಳು, ಆಸಕ್ತಿಗಳ ಬಗ್ಗೆ ಇರುತ್ತಿತ್ತು. ಇಬ್ಬರ ಅಭಿರುಚಿಗಳು ಅದೆಷ್ಟು ಒಂದೇ ಆಗಿದ್ದವು ಎಂದರೆ, ಇಬ್ಬರೂ ದಶಕಗಳಿಂದ ಒಬ್ಬರನ್ನೊಬ್ಬರು ತಿಳಿದಿರುವವರಂತೆ ಭಾಸವಾಗುತ್ತಿತ್ತು. ಅವಳು ಬೆಂಗಳೂರಿನವಳಾಗಿದ್ದಳು. ಪ್ರತಿದಿನ, ಕೃಷ್ಣ ಆಫೀಸ್‌ನಿಂದ ಮನೆಗೆ ಬರುವಾಗ ಮತ್ತು ಮಲಗುವ ಮೊದಲು ಅವಳ ಜೊತೆ ಮಾತನಾಡುವುದು ಕೃಷ್ಣ ನ ದಿನಚರಿಯ ಭಾಗವಾಯಿತು. ಒಂದೊಂದು ಮೆಸೇಜ್ ಅವನ ಮುಖದಲ್ಲಿ ನಗು ತರುತ್ತಿತ್ತು, ಒಂದೊಂದು ಮಾತೂ ಅವನ ಹೃದಯದಲ್ಲಿ ಹೊಸ ಭಾವನೆ ಮೂಡಿಸುತ್ತಿತ್ತು.
ಕೆಲವು ವಾರಗಳ ನಂತರ, ಇಬ್ಬರ ಮಾತುಗಳು ಗಹನವಾದವು. ಕೃಷ್ಣ ತನ್ನ ಕುಟುಂಬ, ತನ್ನ ಕನಸುಗಳು, ತನ್ನ ಭವಿಷ್ಯದ ಬಗ್ಗೆ ಹೇಳಿದ. ಅವಳೂ ಕೂಡ ತನ್ನ ಕುಟುಂಬದ ಬಗ್ಗೆ ಹೇಳಿದಳು. ಅವಳು ತನ್ನ ಅಣ್ಣನ ಬಗ್ಗೆ ಹೇಳಿದಾಗ ನನ್ನ ಗಮನ ಸೆಳೆಯಿತು. ನನ್ನ ಅಣ್ಣ ತುಂಬಾ ಒಳ್ಳೆಯವನು, ಆದರೆ ಸ್ವಲ್ಪ ಹಠಮಾರಿ. ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾನೆ. ಅವನಿಗೆ ನನ್ನೆಲ್ಲ ವಿಷಯಗಳು ಗೊತ್ತಿರಬೇಕು, ಎಂದು ಹೇಳಿದಳು. ಅವನ ಮನಸ್ಸಿನಲ್ಲಿ ಯಾವುದೇ ಅನುಮಾನಗಳು ಇರಲಿಲ್ಲ.
ಒಂದು ದಿನ ಮಧ್ಯರಾತ್ರಿ, ಕೃಷ್ಣ ಅವಳಿಗೆ ಮೆಸೇಜ್ ಕಳುಹಿಸಿದ ಅನು, ನನಗೆ ಗೊತ್ತಿಲ್ಲ. ಆದರೆ ನಿನ್ನ ಮೇಲೆ ಪ್ರೀತಿ ಹುಟ್ಟುತ್ತಿದೆ. ನಾನೇನು ಮಾಡಲಿ? ಕೆಲವೇ ನಿಮಿಷಗಳಲ್ಲಿ ಉತ್ತರ ಬಂತು ನಾನು ಕೂಡ ನಿನ್ನನ್ನು ಪ್ರೀತಿಸುತ್ತೇನೆ ಕೃಷ್ಣ. ನಿನ್ನ ಪ್ರಾಮಾಣಿಕತೆ ಮತ್ತು ನಿನ್ನ ಹೃದಯ ನನಗೆ ಇಷ್ಟವಾಯಿತು. ಇಬ್ಬರ ಈ ಪ್ರೀತಿ ವಾಟ್ಸ್ಆ್ಯಪ್ ಚಾಟ್‌ನಲ್ಲಿ ಶುರುವಾಗಿದ್ದರೂ, ಇದು ನಿಜವಾದ ಪ್ರೀತಿ. ಆ ಕ್ಷಣ ಕೃಷ್ಣನ ಹೃದಯ ಸಂಭ್ರಮದಿಂದ ಕುಣಿದಿತ್ತು. ಪ್ರಪಂಚವೇ ನಿಂತುಹೋದಂತೆ ಭಾಸವಾಯಿತು. ವಾಟ್ಸ್ಆ್ಯಪ್ ಪ್ರಪಂಚದಲ್ಲಿ ಇಬ್ಬರ ಪ್ರೀತಿ ಶುರುವಾಗಿತ್ತು. ಆದರೆ ಭೇಟಿ ಮಾಡುವುದು ಯಾವಾಗ ಎಂಬ ಪ್ರಶ್ನೆ ಕೃಷ್ಣನನ್ನು ಕಾಡುತ್ತಿತ್ತು.
ಇಬ್ಬರ ನಡುವಿನ ಪ್ರೀತಿ ವಾಟ್ಸ್ಆ್ಯಪ್ ಚಾಟ್ ಮೂಲಕ ದಿನೇ ದಿನೇ ಬೆಳೆಯುತ್ತಿತ್ತು. ಕೃಷ್ಣ ಅವಳನ್ನು ಕನಸಿನಲ್ಲಿಯೇ ಕಂಡಿದ್ದ. ಅವಳ ಧ್ವನಿಯನ್ನು ಆಲಿಸುವುದೇ ಒಂದು ಸುಖವಾಗಿತ್ತು. ಅವಳ ಮಾತುಗಳು ಅವನ ಮನಸ್ಸಿಗೆ ಒಂದು ಹಿತವಾದ ಆನಂದ ನೀಡುತ್ತಿದ್ದವು. ಅವರ ಸಂಬಂಧಕ್ಕೆ ಈಗ ಎರಡನೇ ತಿಂಗಳು. ಕೃಷ್ಣ ಅವಳನ್ನು ಭೇಟಿ ಮಾಡಬೇಕೆಂದು ನಿರ್ಧರಿಸಿದ. ಅನು, ನಾವು ಯಾವಾಗ ಭೇಟಿ ಮಾಡೋಣ? ಎಂದು ಕೇಳಿದ.ಹತ್ತಿರದಲ್ಲಿಯೇ ಇರುವೆ, ಬೆಂಗಳೂರಿನಲ್ಲೇ ಇರುವೆ ಎಂದು ಹೇಳಿದಳು.ಕೃಷ್ಣನ ಉತ್ಸಾಹಕ್ಕೆ ಪಾರವೇ ಇರಲಿಲ್ಲ. "ಯಾವ ಕಡೆ? ನಾನು ಇವತ್ತೇ ನಿನ್ನನ್ನು ಭೇಟಿ ಮಾಡುತ್ತೇನೆ, ಎಂದು ಮೆಸೇಜ್ ಮಾಡಿದ.ಅವಳು ಸ್ವಲ್ಪ ಸಮಯದ ನಂತರ ಉತ್ತರಿಸಿದಳು. ಇಲ್ಲ, ಕೃಷ್ಣ ಇವತ್ತು ಆಗಲ್ಲ. ನಮ್ಮ ಮನೆಯಲ್ಲಿ ಸಡನ್ ಆಗಿ ಅತಿಥಿಗಳು ಬಂದಿದ್ದಾರೆ. ಅಪ್ಪನಿಗೆ ಸ್ವಲ್ಪ ಆರಾಮ ಇಲ್ಲ.ಕೃಷ್ಣನ ಉತ್ಸಾಹಕ್ಕೆ ಬ್ರೇಕ್ ಬಿತ್ತು. ಪರವಾಗಿಲ್ಲ, ನಾಳೆ ಭೇಟಿ ಮಾಡೋಣ, ಎಂದು ಹೇಳಿದ. ಆದರೆ ನಾಳೆ ಕೂಡ ಅವಳು ಯಾವುದೋ ಒಂದು ಕಾರಣ ನೀಡಿ ಭೇಟಿಯನ್ನು ಮುಂದೂಡಿದಳು.
ಇದೇ ರೀತಿ ಕೆಲವು ವಾರಗಳು ಕಳೆದವು. ಅವಳೊಂದಿಗೆ ಭೇಟಿ ಮಾಡುವ ಬಗ್ಗೆ ಕೃಷ್ಣ ಹೇಳಿದಾಗಲೆಲ್ಲಾ ಒಂದಿಲ್ಲೊಂದು ಕಾರಣ ಕೊಡುತ್ತಿದ್ದಳು. ನನ್ನ ಅಣ್ಣನಿಗೆ ಬೇರೆ ಜಿಲ್ಲೆಯಲ್ಲಿ ಕೆಲಸ ಸಿಕ್ಕಿದೆ, ಅವನು ನಮ್ಮನ್ನು ಬಿಟ್ಟು ಹೋಗುತ್ತಿದ್ದಾನೆ, ಹಾಗಾಗಿ ನಾವೆಲ್ಲರೂ ಅವನಿಗೆ ವಿದಾಯ ಹೇಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ, ನನಗೆ ಜ್ವರ ಬಂದಿದೆ, ನನಗೆ ಹುಷಾರಿಲ್ಲ. ಆಸ್ಪತ್ರೆಗೆ ಹೋಗಬೇಕು, ನನ್ನ ಅಮ್ಮನಿಗೆ ಆಪರೇಷನ್ ಇದೆ, ನಾನು ಆಸ್ಪತ್ರೆಯಲ್ಲಿಯೇ ಇರುತ್ತೇನೆ. ಅವಳ ಕಾರಣಗಳು ಸತ್ಯವೇ ಆಗಿರಬಹುದು ಎಂದು ಕೃಷ್ಣ ನಂಬಿದ. ಆದರೆ ಕೃಷ್ಣನ ಮನಸ್ಸಿನ ಮೂಲೆಯಲ್ಲಿ ಒಂದು ಸಣ್ಣ ಅನುಮಾನ ಕಾಡುತ್ತಿತ್ತು.
ಒಂದು ದಿನ ಕೃಷ್ಣನ ಮನಸ್ಸು ದೃಢವಾಗಿ ನಿರ್ಧರಿಸಿತು. ಅನು, ನಿನ್ನ ಭೇಟಿಯಾಗದೆ ನನಗೆ ನೆಮ್ಮದಿ ಇಲ್ಲ. ಈ ವಾರಾಂತ್ಯದಲ್ಲಿ ನಾವು ಖಂಡಿತ ಭೇಟಿಯಾಗಲೇಬೇಕು, ಎಂದು ಕೃಷ್ಣ ಹೇಳಿದ.ಅವಳು ನಿರಾಶೆಗೊಂಡು ಕೃಷ್ಣ, ದಯವಿಟ್ಟು ಅರ್ಥ ಮಾಡಿಕೋ. ನಾನು ನಿನ್ನನ್ನು ಭೇಟಿಯಾಗಲು ಬಯಸುತ್ತೇನೆ. ಆದರೆ ನನ್ನ ಕೆಲವು ವೈಯಕ್ತಿಕ ಸಮಸ್ಯೆಗಳಿಂದಾಗಿ ಸಾಧ್ಯವಾಗುತ್ತಿಲ್ಲ. ಈ ವಾರಾಂತ್ಯದಲ್ಲೂ ನನ್ನ ಅಣ್ಣ ನನ್ನನ್ನು ಬೇರೆಯವರಿಗೆ ತೋರಿಸಲು ಕರೆದುಕೊಂಡು ಹೋಗುತ್ತಿದ್ದಾನೆ, ಎಂದು ಹೇಳಿದಳು.ಈ ಮಾತು ಕೇಳಿ ಕೃಷ್ಣನಿಗೆ ಆಶ್ಚರ್ಯವಾಯಿತು. ಅವಳು ಬೇರೆಯವರನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾಳೆಯೇ? ಹಾಗಾದರೆ ನಮ್ಮ ಪ್ರೀತಿಯ ಸ್ಥಿತಿ ಏನು? ಕೃಷ್ಣನ ಮನಸ್ಸಿನಲ್ಲಿ ಕೋಪ, ನಿರಾಶೆ, ದುಃಖ ಎಲ್ಲವೂ ಒಂದಾಗಿ ಸೇರಿಕೊಂಡಿದ್ದವು. ಅನು, ನನಗೆ ಸತ್ಯ ಹೇಳು. ನೀನು ಬೇರೆಯವರನ್ನು ಮದುವೆ ಆಗುತ್ತಾ ಇದಿಯಾ? ಹಾಗಾದರೆ ನಮ್ಮಿಬ್ಬರ ಪ್ರೀತಿ ಏನು? ಎಂದು ಕೇಳಿದ.ಕೃಷ್ಣನ ಈ ನೇರ ಪ್ರಶ್ನೆಗೆ ಅವಳು ಏನು ಉತ್ತರ ನೀಡಬಹುದು? ಅವಳ ಮದುವೆಯ ನಿಜವಾದ ಕಥೆ ಏನು?
ಮುದುವರೆಯುತ್ತದೆ