Dead Love Living Secret 1 in Kannada Thriller by Sandeep Joshi books and stories PDF | ಸತ್ತ ಪ್ರೀತಿ ಜೀವಂತ ರಹಸ್ಯ 1

Featured Books
  • ರೈಲಿನಲ್ಲಿ ಸಿಕ್ಕವಳು

    ಬೆಂಗಳೂರಿನಿಂದ ಹೊರಟಿದ್ದ ಮೈಸೂರು ಎಕ್ಸ್‌ಪ್ರೆಸ್ ರೈಲು ನಿಧಾನವಾಗಿ ಸಾಗ...

  • ಮಹಿ - 13

      ಶಿಲ್ಪಾ ನಾ ಅವಳ ಮನೆ ಹತ್ತಿರ ಡ್ರಾಪ್ ಮಾಡಿ, ನಾನು ಮನೆಗೆ ಬಂದೆ, ಹರಿ...

  • ಸತ್ತ ಪ್ರೀತಿ ಜೀವಂತ ರಹಸ್ಯ 1

    ಕೃಷ್ಣನ ಮತ್ತು ಅವಳ ಮೌನ ಕಥೆಯ ನಾಟಕೀಯ ಅಂತ್ಯದ ನಂತರ, ಕೃಷ್ಣನ ಜೀವನವು...

  • ಮರು ಹುಟ್ಟು 7

    ಕೆಲಸದಲ್ಲಿ ಸಂಪೂರ್ಣ ಸಮರ್ಪಣೆ (ಇಂಟೀರಿಯರ್ - ಕಚೇರಿ)ಆರ್ಯನ್‌ನ ನೋವಿನ...

  • ಈ ಜೀವ ನಿನಗಾಗಿ.

    ಬೆಳಗಿನ ಜಾವ ಮನೆಯ ಅತ್ತಿರ ಪೊಲೀಸರು ಜೀಪಿನಲ್ಲಿ ಬಂದು, ಅ ತಾಯಿ ಮತ್ತು...

Categories
Share

ಸತ್ತ ಪ್ರೀತಿ ಜೀವಂತ ರಹಸ್ಯ 1

ಕೃಷ್ಣನ ಮತ್ತು ಅವಳ ಮೌನ ಕಥೆಯ ನಾಟಕೀಯ ಅಂತ್ಯದ ನಂತರ, ಕೃಷ್ಣನ ಜೀವನವು ಒಂದು ನಿರ್ಜೀವ ವಾತಾವರಣವಾಗಿ ಮಾರ್ಪಟ್ಟಿತ್ತು. ಅನು ಸತ್ತು ಹೋಗಿದ್ದಾಳೆ ಮತ್ತು ತನ್ನ ಮೂರು ವರ್ಷಗಳ ಪ್ರೀತಿ ಒಂದು ಸುಳ್ಳು ಎನ್ನುವ ಪ್ರಿಯಾಳ ಮಾತುಗಳು ಅವನ ಆತ್ಮವನ್ನು ಕೊಂದು ಹಾಕಿದ್ದವು. ಬೆಂಗಳೂರಿನ ಕೃಷ್ಣರಾಜಪುರಂನ ಒಂದು ಜನನಿಬಿಡ ಮೂಲೆಯಲ್ಲಿರುವ, ಸದಾ ಹೊಗೆ ಮತ್ತು ಕಡಿಮೆ ಬೆಳಕಿನಿಂದ ಕೂಡಿದ್ದ, 'ಮಿಡ್‌ನೈಟ್ ಶ್ಯಾಡೋ' ಎಂಬ ಹಳೆಯ ಬಾರ್ ಕೃಷ್ಣನ ಹೊಸ ವಿಳಾಸವಾಗಿತ್ತು.
ಅದು ರಾತ್ರಿ ಸುಮಾರು 11:30 ಇರಬಹುದು. ಮರಗೆಲಸದ ಟೇಬಲ್ ಮೇಲೆ, ಕೃಷ್ಣನ ಮುಂದೆ ಅರ್ಧ ತುಂಬಿದ್ದ ವಿಸ್ಕಿ ಗ್ಲಾಸ್ ನಿಂತಿತ್ತು. ಅವನ ಕಣ್ಣುಗಳಲ್ಲಿ ನಿದ್ದೆಯಿರಲಿಲ್ಲ, ಕೇವಲ ಮೂರು ವರ್ಷಗಳ ನೆನಪುಗಳ ನೋವಿತ್ತು. ಅನುಳ ಧ್ವನಿ, ಅವಳ ಸಂದೇಶಗಳು, ಪ್ರಿಯಾಳ ಕಣ್ಣೀರು  ಈ ಎಲ್ಲವೂ ಅವನ ತಲೆಯಲ್ಲಿ ಸದಾ ಗುನುಗುತ್ತಿದ್ದವು. ಅನುಳ ನೆನಪುಗಳು ಅವನನ್ನು ಇನ್ನಷ್ಟು ಕಾಡುತ್ತಿದ್ದವು. ನೀನು ಸುಳ್ಳು ಹೇಳಲಿಲ್ಲ, ಅನು. ನೀನು ನಿಜವಾಗಿ ನನ್ನನ್ನು ಪ್ರೀತಿಸಿದ್ದೆ, ಆದರೆ ವಿಧಿ ನಿನ್ನನ್ನು ದೂರ ಮಾಡಿದೆ  ಎಂದು ಅವನು ಮನಸ್ಸಿನಲ್ಲೇ ಅಂದುಕೊಂಡನು.
ಈ ನೋವಿನ ನಡುವೆ, ಕೃಷ್ಣನಿಗೆ ಹೊಸದಾಗಿ ಕೊಂಡಿದ್ದ, ಕೇವಲ ಅಪರಿಚಿತರೊಂದಿಗೆ ಮಾತನಾಡಲು ಬಳಸುತ್ತಿದ್ದ ಸೆಕೆಂಡರಿ ಮೊಬೈಲ್ ಧಿಡೀರ್ ಎಂದು ತೀವ್ರವಾಗಿ ವೈಬ್ರೇಟ್ ಆಗಿ ಉರಿಯಿತು. ಆ ಸಂಖ್ಯೆ ಸಂಪೂರ್ಣವಾಗಿ ಅಪರಿಚಿತವಾಗಿತ್ತು. ಕೃಷ್ಣ ಆ ಮೊಬೈಲನ್ನು ಹೆಚ್ಚು ಉಪಯೋಗಿಸುತ್ತಿರಲಿಲ್ಲ. ಹಾಗಾಗಿ ಈ ಕರೆ ಅವನಿಗೆ ಆಶ್ಚರ್ಯ ತಂದಿತು. ಕರೆ ಕಟ್ ಆಗುವ ಹತ್ತಿರ ಬಂದಾಗ, ಅವನ ಮನಸ್ಸಿನಲ್ಲಿ ಒಂದು ಅಸ್ಪಷ್ಟ ಕುತೂಹಲ ಮೂಡಿತು. ಬಹುಶಃ ಇದು ಏನಾದರೂ ವಿಮೆಯ ಕರೆ ಇರಬಹುದು ಎಂದು ಅಂದುಕೊಂಡು, ಆ ನಂಬಿಕೆಯಲ್ಲಿ ಅವನು ನಿಧಾನವಾಗಿ ಫೋನ್ ಸ್ವೀಕರಿಸಿದನು.
ಹಲೋ? ಕೃಷ್ಣನ ಧ್ವನಿ ಮಂದವಾಗಿತ್ತು, ಮದ್ಯದ ಮಾತು ಸ್ಪಷ್ಟವಾಗಿರಲಿಲ್ಲ.
ಆ ಕಡೆಯಿಂದ ಯಾರೋ ಗಂಭೀರವಾದ, ಶಬ್ದ ಪರಿವರ್ತಿತ ಸಾಧನದಿಂದ ಬದಲಾಯಿಸಿದಂತೆ ಕೇಳುವ ಧ್ವನಿ ಇದು ಕೃಷ್ಣನ ಮಾತು ಅಲ್ವಾ ಅಜಯ್ ಕೃಷ್ಣ?
ಕೃಷ್ಣ ತಕ್ಷಣ ಗ್ಲಾಸ್ ಅನ್ನು ಟೇಬಲ್ ಮೇಲೆ ಇಟ್ಟನು. ಹೌದು, ಯಾರು ನೀವು? ಈ ನಂಬರ್ ನಿಮಗೆ ಹೇಗೆ ಸಿಕ್ಕಿತು? ಅವನ ಧ್ವನಿಯಲ್ಲಿ ಆಯಾಸದ ಜೊತೆಗೆ ಈಗ ಭಯ ಬೆರೆತಿತ್ತು.
ಆ ಧ್ವನಿ ಬಾರ್‌ನ ಗದ್ದಲವನ್ನು ಮೀರಿ ಸ್ಪಷ್ಟವಾಗಿ ಕೇಳುತ್ತಿತ್ತು, ಒಂದು ಕಠಿಣವಾದ ವಿಶ್ವಾಸದಿಂದ ನೀನು ಅಲ್ಲಿ ಕುಳಿತು ಆ ನೋವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದೀಯಾ? ನಿನ್ನನ್ನು ಪ್ರೀತಿಸಿದ ಹುಡುಗಿ ಸತ್ತು ಹೋಗಿಲ್ಲ. ಅವಳು ಬದುಕಿದ್ದಾಳೆ.
ಕೃಷ್ಣನ ಕೈ ನಡುಗಿತ್ತು, ದೇಹದಲ್ಲಿ ವಿದ್ಯುತ್ ಸಂಚಾರವಾದಂತೆ ಭಾಸವಾಯಿತು. ಬಾರ್‌ನಲ್ಲಿ ನಡೆಯುತ್ತಿದ್ದ ಎಲ್ಲ ಚಟುವಟಿಕೆಗಳು ಅವನ ಕಿವಿಗೆ ಬೀಳದಂತೆ ಆದವು. ಏನು ಹೇಳುತ್ತಿದ್ದೀಯಾ? ಯಾರು ನೀನು? ಪ್ರಿಯಾ ಸುಳ್ಳು ಹೇಳಿದ್ದಾಳೇ? ಅವಳಿಗೇನು ಗೊತ್ತು ಎಂದು ಕೃಷ್ಣ ಕೂಗಿದನು.
ಧ್ವನಿ ತಣ್ಣಗೆ ಮುಂದುವರೆಯಿತು ಪ್ರಿಯಾ ಸುಳ್ಳು ಹೇಳಿದ್ದಾಳೆ. ಅನುಳ ಅಣ್ಣನು ಅವಳನ್ನು ಎಲ್ಲರ ಕಣ್ಣಿನಿಂದ ದೂರ ಮಾಡಿ, ಜೀತದಾಳಿನಂತೆ ಬದುಕುವಂತೆ ಮಾಡಿದ್ದಾನೆ. ನೀನು ಹೀಗೆ ಕುಳಿತರೆ, ಅವನ ಕ್ರೌರ್ಯಕ್ಕೆ ಬಲಿಯಾಗುವ ಅವಳನ್ನು ಉಳಿಸುವವರು ಯಾರು?
ಕೃಷ್ಣನ ಮುಖದಲ್ಲಿ ಒಂದು ಕ್ಷಣದಲ್ಲಿ ಕಣ್ಣೀರು, ಕೋಪ ಮತ್ತು ಆಶ್ಚರ್ಯಗಳ ಮಿಶ್ರಣವಿತ್ತು. ಎಲ್ಲಿ ಅವಳು? ಹೇಳು ಎಲ್ಲಿ ಅವಳು! ನಾನು ಇವತ್ತೇ ಹೋಗುತ್ತೇನೆ ಅವನ ಗಂಟಲು ಒಣಗಿತ್ತು.
"ಅವಳನ್ನು ತಲುಪುವುದು ನಿನ್ನಿಂದ ಸಾಧ್ಯವಾಗಬೇಕು, ಕೃಷ್ಣ. ಈ ಸತ್ಯವನ್ನು ಬೇಧಿಸು. ಅವಳ ಅಣ್ಣನ ಕಣ್ಣಿಗೆ ನೀನು ಬಿದ್ದರೆ, ನಿನ್ನ ಅಂತ್ಯ ಖಚಿತ. ನಿನಗೆ ಅವಳನ್ನು ಉಳಿಸುವ ಧೈರ್ಯವಿದ್ದರೆ, ನಾಳೆ ಬೆಳಗ್ಗೆ 7 ಗಂಟೆಗೆ, ವಿಕ್ಟೋರಿಯಾ ಆಸ್ಪತ್ರೆಯ ಉತ್ತರ ದ್ವಾರದ ಬಳಿ ಇರುವ ಹಳೆಯ ಮರದ ಕೆಳಗೆ ಬಾ. ನಿನಗೆ ಮುಂದಿನ ಸುಳಿವು ಸಿಗುತ್ತದೆ.
ಮತ್ತೇನೋ ಕೇಳುವ ಮುನ್ನವೇ, ಕರೆ ಕಟ್‌ ಆಯಿತು. ಕೃಷ್ಣ ಎಷ್ಟು ಪ್ರಯತ್ನಪಟ್ಟರೂ ಆ ಸಂಖ್ಯೆಗೆ ಮತ್ತೆ ಕರೆ ಹೋಗಲಿಲ್ಲ. ಆ ಕ್ಷಣ ಕೃಷ್ಣನಿಗೆ ತನ್ನ ಬದುಕು ಮತ್ತೆ ಒಂದು ತಿರುವು ಪಡೆದಿದೆ ಎಂದು ಅನಿಸಿತು. ಅನು ಸತ್ತಿಲ್ಲ. ಪ್ರಿಯಾ ಹೇಳಿದ ಕಥೆ, ಅನುಳ ಅಣ್ಣನ ಕ್ರೌರ್ಯ ಎಲ್ಲವೂ ಒಂದು ದೊಡ್ಡ ಸುಳ್ಳಿನ ಜಾಲವಾಗಿತ್ತು.
ಕೃಷ್ಣ ಬಾರ್‌ನಲ್ಲಿ ಗ್ಲಾಸ್ ಅನ್ನು ಬಿಟ್ಟು ಹೊರಗೆ ಓಡಿದ. ಅವನ ದೇಹದಲ್ಲಿ ಮದ್ಯದ ಅಮಲು ಮಾಯವಾಗಿತ್ತು, ಬದಲಿಗೆ, ದೃಢ ಸಂಕಲ್ಪದ ಹೊಸ ಅಮಲು ತುಂಬಿತ್ತು. ಕಣ್ಣುಗಳಲ್ಲಿ ಪ್ರೀತಿಯ ಹುಡುಕಾಟದ ಜೊತೆಗೆ, ಒಂದು ಹೊಸ ಸತ್ಯದ ಮತ್ತು ಅಪಾಯದ ಜಾಡು ಅವನನ್ನು ಹಿಂಬಾಲಿಸುತ್ತಿತ್ತು. ಆ ಅನಾಮಿಕ ಕರೆ ಮಾಡಿದವನು ಯಾರು? ಆತ ಅನುಳ ಅಣ್ಣನ ಶತ್ರುವೇ? ಈ ರಹಸ್ಯದ ಸುಳಿವು ಏನು?
ರಾತ್ರಿ ಕಳೆದಿದ್ದು ಹೇಗೆಂದು ಕೃಷ್ಣನಿಗೆ ಗೊತ್ತಾಗಲಿಲ್ಲ. ಆ ಅನಾಮಿಕ ಕರೆಯ ನಂತರ ಒಂದು ಕ್ಷಣವೂ ಕೃಷ್ಣ ಕಣ್ಣು ಮುಚ್ಚಲಿಲ್ಲ. ಅನು ಸತ್ತಿಲ್ಲ ಎಂಬ ಮಾತು ಆತನ ನರನಾಡಿಗಳಲ್ಲಿ ಹೊಸ ರಕ್ತ ಸಂಚಾರ ಉಂಟುಮಾಡಿದಂತಿತ್ತು. ಹಳೆಯ ದುಃಖ, ಆಘಾತಗಳೆಲ್ಲವೂ ಹಿನ್ನೆಲೆಗೆ ಸರಿದು, ಈಗ ಕೇವಲ ಒಂದು ದೃಢ ನಿರ್ಧಾರ ಉಳಿದಿತ್ತು. ಸತ್ಯವನ್ನು ಕಂಡುಹಿಡಿಯಬೇಕು ಮತ್ತು ತನ್ನ ಪ್ರೀತಿಯನ್ನು ಕಾಪಾಡಬೇಕು.
ಬೆಳಗ್ಗೆ 6:45 ರ ಸುಮಾರಿಗೆ, ಕೃಷ್ಣ ವಿಕ್ಟೋರಿಯಾ ಆಸ್ಪತ್ರೆಯ ಉತ್ತರ ದ್ವಾರದ ಬಳಿ ಇದ್ದನು. ಆ ಪ್ರದೇಶ ಇಳಿಜಾರಿನಲ್ಲಿದ್ದು, ಹಳೆಯ, ದಟ್ಟವಾದ ಮರಗಳು ಆವರಿಸಿದ್ದವು. ಅಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳಿದ್ದರೂ, ಆ ಜಾಗ ಸ್ವಲ್ಪ ನಿಗೂಢವಾಗಿ ಕಾಣುತ್ತಿತ್ತು. ಕೃಷ್ಣ ತನ್ನ ಹೋಟೆಲ್ ರೂಮಿನಿಂದ ಬರುವಾಗ ಜಾಗರೂಕನಾಗಿದ್ದ, ಅನುಳ ಅಣ್ಣನ ಕಡೆಯವರು ತನ್ನ ಮೇಲೆ ಕಣ್ಣಿಟ್ಟಿರುವ ಸಾಧ್ಯತೆಯನ್ನು ಅವನು ತಳ್ಳಿಹಾಕಿರಲಿಲ್ಲ. ಅನಾಮಿಕ  ಹೇಳಿದಂತೆ, ಆ ದ್ವಾರದ ಪಕ್ಕದಲ್ಲಿ ಒಂದು ಶತಮಾನದಷ್ಟು ಹಳೆಯದಾದ, ಬೃಹತ್ತಾದ ಆಲದ ಮರ ಇತ್ತು. ಕೃಷ್ಣ ಆ ಮರದ ಕೆಳಗೆ ನಿಂತು ಸುತ್ತಲೂ ದೃಷ್ಟಿ ಹಾಯಿಸಿದನು. ಪ್ರತಿ ಮುಖವೂ, ಪ್ರತಿ ಓಡಾಟವೂ ಅವನಿಗೆ ಅನುಮಾನಾಸ್ಪದವಾಗಿ ಕಾಣುತ್ತಿತ್ತು.
7:00 ಗಂಟೆಯಾದಾಗ, ಯಾವುದೇ ವ್ಯಕ್ತಿ ಕೃಷ್ಣನ ಬಳಿ ಬರಲಿಲ್ಲ. ಬಹುಶಃ ಕರೆ ಮಾಡಿದವನು ಸುಳ್ಳು ಹೇಳಿರಬಹುದು ಅಥವಾ ನನ್ನನ್ನು ಪರೀಕ್ಷಿಸುತ್ತಿರಬಹುದು ಎಂದು ಕೃಷ್ಣ ಯೋಚಿಸಿದನು. ನಿರಾಶೆ ಆವರಿಸುತ್ತಿದ್ದಂತೆ, ಅವನು ಮರದ ಕಾಂಡವನ್ನು ಗಮನಿಸಿದನು. ಅಲ್ಲಿ, ಯಾರೋ ಹೊಸದಾಗಿ ಚಿಕ್ಕದಾದ, ನುಣುಪಾದ ಪ್ಲಾಸ್ಟಿಕ್ ಚೀಲವನ್ನು ಗಮ್ ಬಳಸಿ ಅಂಟಿಸಿದ್ದರು. ಅದನ್ನು ಸುತ್ತಲೂ ನೋಡಿದ ಕೃಷ್ಣ, ತಕ್ಷಣ ಕೈಹಾಕಿ ತೆಗೆದನು.
ಆ ಚೀಲದೊಳಗೆ ಒಂದು ಹಳೆಯ, ಸುರುಳಿಯಾಕಾರದ ಪತ್ರಿಕೆಯ ಕಟಿಂಗ್ ಇತ್ತು. ಜೊತೆಗೆ, ಒಂದು ಸಣ್ಣ ಕಾಗದದ ತುಣುಕು ಇತ್ತು. ಕೃಷ್ಣ ತರಾತುರಿಯಲ್ಲಿ ಕಟಿಂಗ್ ಅನ್ನು ಬಿಚ್ಚಿದನು. ಅದು ಸುಮಾರು ಎರಡು ವರ್ಷಗಳ ಹಿಂದಿನ ಸುದ್ದಿ ವರದಿಯ ತುಣುಕು.
ಶೀರ್ಷಿಕೆ: "ಯುವ ಉದ್ಯಮಿ ಅಜಯ್ ಕುಮಾರ್ ರಸ್ತೆ ಅಪಘಾತದಿಂದ ನಿಧನ - ಕುಟುಂಬದಲ್ಲಿ ಶೋಕ
ಇದು ಅನುಳ ಗಂಡನ ಸಾವಿನ ಸುದ್ದಿ. ಆದರೆ ಈ ಕಟಿಂಗ್‌ನ ಹಿಂಭಾಗದಲ್ಲಿ, ಸುದ್ದಿ ವರದಿಯ ಒಂದು ಭಾಗವನ್ನು ಕೆಂಪು ಪೆನ್ನಿನಿಂದ ಮಾರ್ಕ್ ಮಾಡಲಾಗಿತ್ತು. ಆ ಮಾರ್ಕ್‌ಡ್ ಸಾಲು ಹೀಗಿತ್ತು. ಈ ಅಪಘಾತವು ಕೇವಲ ಆಕಸ್ಮಿಕವೇ ಅಥವಾ ಇದರ ಹಿಂದೆ ಬೇರೆ ಯಾವುದೋ ಕೈವಾಡ ಇದೆಯೇ ಎಂಬುದರ ಕುರಿತು ಪೋಲೀಸರ ತನಿಖೆ ಮುಂದುವರಿದಿದೆ.
ಕೃಷ್ಣನಿಗೆ ತಲೆ ಗಿರಕಿ ಹೊಡೆಯಿತು. ಅನುಳ ಗಂಡನ ಸಾವು ಸಹಜವಾಗಿರಲಿಲ್ಲವೇ? ಹಾಗಾದರೆ ಈ ರಹಸ್ಯದ ಸುಳಿವು ಏನು?
ಕಾಗದದ ತುಣುಕನ್ನು ತೆರೆದನು. ಅದರಲ್ಲಿ, ಸುಂದರವಾದ, ಆದರೆ ನಡುಗುವ ಕೈಬರಹದಲ್ಲಿ ಒಂದು ವಾಕ್ಯವನ್ನು ಬರೆಯಲಾಗಿತ್ತು. ಅದು ಅನುಳ ಕೈಬರಹದಂತೆಯೇ ಇತ್ತು.
ಗ್ರೀನ್‌ವುಡ್ ಎಸ್ಟೇಟ್, ಕೋಲಾರದಿಂದ 2 ಕಿ.ಮೀ. ಅಲ್ಲಿ ನನ್ನ ಕಣ್ಗಾವಲು ಇದೆ. - ಎ.ಎಂ
ಎ.ಎಂ ಎಂದರೆ ಯಾರು? ಅನುಳೇ ಕಳುಹಿಸಿದ್ದಾಳೇ? ಅವಳು ಕಣ್ಗಾವಲಿನಲ್ಲಿ ಇದ್ದಾಳೆಯೇ? ಕೋಲಾರದ ಆ ಎಸ್ಟೇಟ್‌ಗೆ ಈ ರಹಸ್ಯಕ್ಕೂ ಇರುವ ಸಂಬಂಧವೇನು?
ಕೃಷ್ಣನಿಗೆ ಆ ಕ್ಷಣದಲ್ಲಿಯೇ ದಾರಿ ಸ್ಪಷ್ಟವಾಯಿತು. ಈ ರಹಸ್ಯದ ಮೂಲ ಅನುಳ ಅಣ್ಣನ ಕರಾಳ ವ್ಯವಹಾರಗಳಲ್ಲಿದೆ. ಮತ್ತು ಆ ಅನಾಮಿಕ ಕರೆದಾರ, ಅನು, ಅಥವಾ ಇವರಿಬ್ಬರಿಗೂ ಅನುಳ ಗಂಡನ ಸಾವಿನ ರಹಸ್ಯ ಗೊತ್ತಿದೆ.
ಕೃಷ್ಣ ತಕ್ಷಣ ಆ ಸ್ಪಾಟ್‌ನಿಂದ ದೂರವಾದ. ಅವನ ಮನಸ್ಸಿನಲ್ಲಿ ಒಂದು ನಿರ್ಧಾರ ಇತ್ತು. ನೇರವಾಗಿ ಕೋಲಾರದತ್ತ ಹೋಗಬೇಕು. ಆದರೆ, ಈ ಎಲ್ಲದರ ಹಿಂದೆ ಇರುವ ಎ.ಎಂ ಯಾರು? ಆತ ಸ್ನೇಹಿತನೇ ಅಥವಾ ಮತ್ತೊಬ್ಬ ಶತ್ರುವೇ? ಮತ್ತು ಈ ರಹಸ್ಯವನ್ನು ಬೇಧಿಸುವ ದಾರಿಯಲ್ಲಿ ಅವನಿಗೆ ಯಾವ ಅಪಾಯ ಕಾದಿದೆ?

ಮುಂದಿನ ಅಧ್ಯಾಯದಲ್ಲಿ ನೋಡೋಣ.