She came unwillingly... - 22 in Kannada Drama by Kavya Pattar books and stories PDF | ಬಯಸದೆ ಬಂದವಳು... - 22

Featured Books
  • ಬಯಸದೆ ಬಂದವಳು... - 22

    ಅಧ್ಯಾಯ: ಮಾತಿನ ಬೆಲೆ... ಮನಸಿನ ಬೆಂಕಿ“ಯಾಕೆ ನಮ್ಮ ಹತ್ತಿರ ಹೇಳೋಕೆ ಸಂ...

  • ವಜ್ರದ ನಾಲಿಗೆ

    ಬೆಂಗಳೂರಿನ ಅತ್ಯಾಧುನಿಕ ಓಮಿನಿ ಪ್ರೈಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ...

  • ರಕ್ತ ಲಿಪಿಯ ಚಿರಂಜೀವಿ - 21

    ಮೈಸೂರಿನ ಚಾಮುಂಡಿ ಬೆಟ್ಟವು ಇಂದು ಎಂದಿನಂತೆ ಶಾಂತವಾಗಿ ಕಾಣುತ್ತಿರಲಿಲ್...

  • if... Level 1

    ಅಧ್ಯಾಯ 1: ಸಾಸಿವೆ ಮತ್ತು ಸಂಕಟಅನುಪಮಾಗೆ ಅಂದು ಬೆಳಿಗ್ಗೆಯಿಂದಲೂ ಯಾವು...

  • ಧರಣಿ ಮಂತ್ರ

    ಬೆಂಗಳೂರಿನ ಗದ್ದಲದಿಂದ ಮೈಲುಗಳಷ್ಟು ದೂರವಿರುವ ಆ ಹಳೆಯ ಹಳ್ಳಿಯ ಅಂಚಿನಲ...

Categories
Share

ಬಯಸದೆ ಬಂದವಳು... - 22

ಅಧ್ಯಾಯ: ಮಾತಿನ ಬೆಲೆ... ಮನಸಿನ ಬೆಂಕಿ

“ಯಾಕೆ ನಮ್ಮ ಹತ್ತಿರ ಹೇಳೋಕೆ ಸಂಕೋಚ ಪಡತಿದ್ದೀರಾ ಶಶಿ ಅವರೇ?” ಮೋಹನ್ ಅವರ ಗಂಭೀರ ಧ್ವನಿ ಮನೆಯ ನಿಶ್ಯಬ್ಧತೆಯನ್ನು ಚೀರಿಕೊಂಡಿತು.

“ಅದೇನಾದ್ರೂ ಇದ್ದರೆ ನೇರವಾಗಿ ಹೇಳಿ... ಮುಚ್ಚಿಟ್ಟ್ರೆ ಇನ್ನಷ್ಟು ಕಷ್ಟ ಆಗುತ್ತೆ.”

ಆ ಕ್ಷಣದಲ್ಲಿ ಮನೆ ತುಂಬಾ ಒಂದು ವಿಚಿತ್ರ ಮೌನ ಆವರಿಸಿತ್ತು.
ಪ್ರತಿಯೊಬ್ಬರ ಮುಖದಲ್ಲೂ ಅಜ್ಞಾತ ಭಯ, ಕಳವಳ ಮತ್ತು ದುಃಖದ ನೆರಳು ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಸುಧಾಕರ್ ಅಣ್ಣನ ಮುಖದತ್ತ ಗಾಬರಿಯಿಂದ ನೋಡಿದ.

“ಅಣ್ಣಾ... ನೀನು ಏನು ಯೋಚನೆ ಮಾಡ್ತಾ ಇದ್ದೀಯಾ ಅಂತ ನಂಗೆ ಅರ್ಥ ಆಗ್ತಿಲ್ಲ...”

ಅವನ ಧ್ವನಿಯಲ್ಲಿ ಆತಂಕ ಸ್ಪಷ್ಟವಾಗಿತ್ತು.
ಆದರೆ ಶಶಿಧರ್ ಮುಖದಲ್ಲಿ ಮಾತ್ರ ಗಂಭೀರ ನಿರ್ಧಾರದ ಛಾಪು ಕಾಣಿಸುತ್ತಿತ್ತು.

ಸ್ವಲ್ಪ ಹೊತ್ತು ತಲೆತಗ್ಗಿಸಿ ನಿಂತ ಶಶಿಧರ್ ಕೊನೆಗೆ ಆಳವಾದ ನಿಟ್ಟುಸಿರು ಬಿಟ್ಟರು.

“ನೋಡಿ ಮೋಹನ್ ಅವರೇ... ನಾನು ಈಗ ಹೇಳೋ ಮಾತು ನಿಮ್ಮ ಮನಸ್ಸಿಗೆ ಎಷ್ಟು ನೋವು ಕೊಡುತ್ತದೋ ಗೊತ್ತಿಲ್ಲ. ಆದರೆ ನನ್ನಿಂದ ಒಂದು ದೊಡ್ಡ ತಪ್ಪಾಗಿದೆ... ದಯವಿಟ್ಟು ನನ್ನನ್ನ ಕ್ಷಮಿಸಿ ಬಿಡಿ.”

ಆ ಮಾತು ಕೇಳುತ್ತಿದ್ದಂತೆಯೇ ಮೋಹನ್ ಅವರ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಓಡಾಡಲು ಶುರು ಮಾಡಿತು.

“ಅಂದ್ರೆ... ನೀವು ಯಾವುದರ ಬಗ್ಗೆ ಹೇಳ್ತಿದೀರಾ?” ಎಂದು ಆತಂಕದಿಂದ ಕೇಳಿದರು.

ಅಷ್ಟರಲ್ಲಿ ಶೇಖರ್‌ಗೆ ಶಶಿಧರ್ ಏನು ಹೇಳಲು ಹೊರಟಿದ್ದಾರೆ ಎಂಬುದು ಅರ್ಥವಾಯಿತು.

“ಭಾವ... ನಿಮ್ಮ ಹತ್ರ ಸ್ವಲ್ಪ ಮಾತಾಡ್ಬೇಕು. ಬರ್ತೀರಾ?” ಎಂದು ಆತ ತುರ್ತಾಗಿ ಕೇಳಿದ.

ಆದರೆ ಶಶಿಧರ್ ತಲೆ ಆಡಿಸಿದರು.

“ಇಲ್ಲ ಶೇಖರ್. ನಾನು ತಗೊಂಡಿರೋ ನಿರ್ಧಾರ ಸರಿಯಾಗಿದೆ.”

ಆ ಮಾತಿನ ಬಳಿಕ ಕ್ಷಣಕಾಲ ಮೌನ ಆವರಿಸಿತು.

“ಮೋಹನ್... ನಮ್ಮ ಮಗಳು ನಿಮ್ಮ ಮನೆ ಸೊಸೆಯಾಗೋಕೆ ಸಾಧ್ಯ ಇಲ್ಲ.”

ಆ ಮಾತು ಕೇಳುತ್ತಿದ್ದಂತೆಯೇ ರೋಹನ್ ದಿಢೀರನೆ ಎದ್ದು ನಿಂತ.

“ಏನು ಹೇಳ್ತಿದ್ದೀರಾ ಅಂಕಲ್?”

ಅವನ ಕಣ್ಣುಗಳಲ್ಲಿ ಕೋಪ ಮಿಂಚುತ್ತಿತ್ತು.

ಆಗ ಜೆಕೆ ಶಾಂತವಾಗಿ ಮಾತನಾಡಿದ.

“ರೋಹನ್ ಅವರೇ... ದೊಡ್ಡಪ್ಪ ಹೇಳೋದು ಇನ್ನೂ ಮುಗಿದಿಲ್ಲ. ಸ್ವಲ್ಪ ಸಮಾಧಾನ ಮಾಡ್ಕೊಳಿ.”

ರೋಹನ್ ಕೋಪದಿಂದ ಜೆಕೆ ಕಡೆ ಕಣ್ಣಾರೆ ನೋಡಿ ಮತ್ತೆ ಕುಳಿತುಕೊಂಡ.

“ಅಣ್ಣಾ... ಇದೇನು ಹೇಳ್ತಿದ್ದೀಯಾ?” ಎಂದು ಸುಧಾಕರ್ ಗಾಬರಿಯಿಂದ ಕೇಳಿದ.

ಆದರೆ ಮನೆಯ ಉಳಿದ ಕೆಲವರ ಮುಖಗಳಲ್ಲಿ ಮಾತ್ರ ಅಡಗಲಾರದ ಸಂತೋಷ ಮೂಡಿತ್ತು.
ವಿಶೇಷವಾಗಿ ಸೂರ್ಯನ ಮುಖದಲ್ಲಿದ್ದ ಆನಂದವನ್ನು ಮುಚ್ಚಿಡುವುದು ಸಾಧ್ಯವಾಗುತ್ತಿರಲಿಲ್ಲ.

ಪವಿತ್ರಾ, ಸರಳಾ ಮತ್ತು ಮೋಹನ್ ಮಾತ್ರ ಗಂಭೀರ ಆತಂಕದಲ್ಲಿ ಮುಳುಗಿದ್ದರು.

ಶಶಿಧರ್ ಮತ್ತೆ ಮಾತನಾಡಲು ಆರಂಭಿಸಿದರು.

“ನೀನು ಸುಮ್ನಿರು ಸುಧಿ... ಮಧ್ಯೆ ಮಾತಾಡ್ಬೇಡ.”

ಅವರ ಧ್ವನಿ ಗಟ್ಟಿಯಾಗಿತ್ತು.

“ಮೋಹನ್ ಅವರೇ... ನಮ್ಮ ಅಂಬ್ರುತಾ ಮತ್ತು ಸೂರ್ಯ ಬಹಳ ದಿನಗಳಿಂದ ಪ್ರೀತಿ ಮಾಡ್ತಿದ್ದಾರೆ. ಆ ವಿಷಯ ಗೊತ್ತಿಲ್ಲದೆ ನಾನು ನಿಮಗೆ ಮಾತು ಕೊಟ್ಟುಬಿಟ್ಟೆ. ಅದಕ್ಕೇ ನಿಮ್ಮಲ್ಲಿ ಕ್ಷಮೆ ಕೇಳ್ತಿದ್ದೀನಿ... ದಯವಿಟ್ಟು ನಮ್ಮನ್ನ ಕ್ಷಮಿಸಿ ಬಿಡಿ.”

ಆ ಮಾತು ಕೇಳುತ್ತಿದ್ದಂತೆಯೇ ಮೋಹನ್ ಅವರ ಕೋಪ ಹೆಚ್ಚಾಯಿತು.

“ಏನ್ರೀ ಇದು? ಎಲ್ಲರೂ ಸೇರಿಕೊಂಡು ತಮಾಷೆ ಮಾಡ್ತಿದಿರಾ? ಈ ವಿಷಯ ಮೊದಲೇ ಹೇಳಬಹುದು ಇತ್ತಲ್ವಾ? ನಮ್ಮ ಮಗ ನಿಮ್ಮ ಹುಡುಗಿಯನ್ನು ಇಷ್ಟಪಟ್ಟಿದ್ದಾನೆ ಅಂತ ನಾವು ಗೌರವದಿಂದ ಮನೆಗೆ ಬಂದಿದ್ವಿ... ಆದರೆ ಈಗ ಪ್ರೀತಿ ಅಂತ ಹೇಳ್ತಿದೀರಾ!”

ಅವರ ಧ್ವನಿಯಲ್ಲಿ ಅವಮಾನ ಮತ್ತು ಬೇಸರ ಬೆರೆತಿತ್ತು.

“ನಿಜವಾಗ್ಲೂ ಅದೇನಾ? ಅಥವಾ ನಮ್ಮ ಜೊತೆ ಸಂಬಂಧ ಬೆಳೆಸೋಕೆ ಇಷ್ಟ ಇಲ್ಲದೆ ಈ ರೀತಿ ಮಾತಾಡ್ತಾ ಇದೀರಾ?”

ಪವಿತ್ರಾ ಕೂಡ ಬೇಸರದಿಂದ ಮಾತನಾಡಿದಳು.

“ಇಡೀ ಊರಲ್ಲೇ ನಿಮ್ಮ ಮನೆತನದ ಬಗ್ಗೆ ಎಷ್ಟು ಗೌರವ ಇದೆ ಗೊತ್ತಾ? ಒಮ್ಮೆ ಮಾತು ಕೊಟ್ಟರೆ ಅದನ್ನ ಯಾವತ್ತೂ ಮುರಿಯಲ್ಲ ಅಂತ ಕೇಳಿದ್ದೆವು... ಆದರೆ ನೀವು...”

ಆ ಮಾತುಗಳೆಲ್ಲ ಮನೆಯ ವಾತಾವರಣವನ್ನು ಇನ್ನಷ್ಟು ಭಾರವಾಗಿಸಿತು.

ಶೇಖರ್ ಏನೋ ಹೇಳಲು ಮುಂದೆ ಬಂದ.

“ನೀವು ತಪ್ಪಾಗಿ ತಿಳ್ಕೊಂಡಿದೀರಾ... ನಮ್ಮ ಭಾವ ಆ ತರ—”

ಆದರೆ ಲಕ್ಕಿ ಮಧ್ಯೆ ಮಾತು ಹಿಡಿದಳು.

“ಯಾಕೋ ಶೇಖರ್... ನಿನಗೆ ಮಕ್ಕಳ ಬಗ್ಗೆ ಸ್ವಲ್ಪನೂ ಯೋಚನೆ ಇಲ್ವಾ?”

ಆ ಪ್ರಶ್ನೆಗೆ ಶೇಖರ್ ಮೌನವಾಗಿ ನಿಂತ.

ಅಷ್ಟರಲ್ಲಿ ಶಶಿಧರ್ ಮತ್ತೆ ಧ್ವನಿ ಎತ್ತಿದರು.

“ಮೋಹನ್ ಅವರೇ... ನಮಗೆ ನಮ್ಮ ಗೌರವ ಪ್ರತಿಷ್ಠೆಗಿಂತ ಮಕ್ಕಳ ಖುಷಿ ಮುಖ್ಯ.”

ರೋಹನ್ ತಕ್ಷಣ ಎದ್ದು ನಿಂತ.

“ಅಪ್ಪ... ನಡೀರಿ. ಇನ್ನೂ ಇಲ್ಲಿ ಇರೋ ಅವಶ್ಯಕತೆ ಇಲ್ಲ.”

ಅವನ ಧ್ವನಿಯಲ್ಲಿ ನೋವು ಸ್ಪಷ್ಟವಾಗಿತ್ತು.

“ರೋಹನ್... ದಯವಿಟ್ಟು ನಮ್ಮನ್ನ ಕ್ಷಮಿಸಿ ಬಿಡು...” ಎಂದು ಶಶಿಧರ್ ಕೇಳಿದರೂ ರೋಹನ್ ಕೋಪದಿಂದ ತಿರುಗಿ ನೋಡಿದ.

“ಸಾಕು ಅಂಕಲ್ಇನ್ನೂ ನನ್ನ ಮರ್ಯಾದೆ ಕಳಕೊಂಡು ಇರೋಕೆ ನಂಗೆ ಇಷ್ಟ ಇಲ್ಲ.”

ಅವನು ಅಲ್ಲಿಂದ ಹೊರಟ.

“ಮಗನೇ ನಿಂತುಕೋ...” ಎಂದು ಮೋಹನ್ ಹಿಂದೆ ಕರೆದರೂ ಪ್ರಯೋಜನವಾಗಲಿಲ್ಲ.

“ಛೇ! ನಾವು ನಿಮ್ಮ ಮೇಲೆ ನಂಬಿಕೆ ಇಟ್ಟು ತಪ್ಪು ಮಾಡ್ಬಿಟ್ವಿ ಶಶಿಧರ್...”

ಸರಳಾ ಕೂಡ ಬೇಸರದಿಂದ ತಲೆ ಆಡಿಸಿದಳು.

“ಲಕ್ಷ್ಮಿ ಅವರೇ... ನಿಮ್ಮ ಮನೆತನದ ಬಗ್ಗೆ ಎಷ್ಟು ಒಳ್ಳೆ ಮಾತುಗಳನ್ನು ಕೇಳಿದ್ದೆ. ಆದರೆ ಅದೆಲ್ಲ ಸುಳ್ಳು ಅಂತ ಈಗ ಗೊತ್ತಾಯ್ತು.”

ಲಕ್ಕಿ ಶಾಂತವಾಗಿ ಉತ್ತರಿಸಿದಳು.

“ನಮಗೂ ನಿಮ್ಮ ಮನೆ ಜೊತೆ ಸಂಬಂಧ ಬೆಳೆಸೋಕೆ ತುಂಬಾ ಖುಷಿ ಇತ್ತು. ಆದರೆ ಇಬ್ಬರು ಮಕ್ಕಳ ಪ್ರೀತಿಯ ಚಿತೆ ಮೇಲೆ ನಮ್ಮ ಪ್ರತಿಷ್ಠೆ ಮೆರವಣಿಗೆ ಮಾಡ್ಬೇಕಾ? ನೀವೇ ಹೇಳಿ.”

ಕೇಶವ್ ಕೈಮುಗಿದು ಮುಂದೆ ಬಂದ.

“ಮೋಹನ್ ಅವರೇ... ದಯವಿಟ್ಟು ನಮ್ಮನ್ನ ಕ್ಷಮಿಸಿ ಬಿಡಿ.”

ಶಶಿಧರ್ ಕೂಡ ಕೈಮುಗಿದರು.

“ನಮಗೂ ನಿಮ್ಮ ಜೊತೆ ಸಂಬಂಧ ಬೆಳೆಸೋಕೆ ತುಂಬಾ ಆಸೆ ಇತ್ತು... ಆದರೆ ನಮಗೆ ಆ ಅದೃಷ್ಟ ಇಲ್ಲ. ದಯವಿಟ್ಟು ನಮ್ಮ ಮಕ್ಕಳಿಗೆ ಆಶೀರ್ವಾದ ಮಾಡಿ.”

ಅವರನ್ನು ಹೀಗೆ ಕೈಮುಗಿದು ನಿಂತಿರುವುದನ್ನು ನೋಡಿ ಇಡೀ ಮನೆ ತಲೆತಗ್ಗಿಸಿತು.

ಯಾಕೆಂದರೆ ಇದುವರೆಗೂ ಶಶಿಧರ್ ಯಾರ ಮುಂದೆಯೂ ತಲೆತಗ್ಗಿಸಿದವರಲ್ಲ.

ಸೂರ್ಯನ ಕಣ್ಣಂಚಲ್ಲಿ ನೀರು ತುಂಬಿಕೊಂಡಿತ್ತು.
“ಜೆಕೆ... ನಮ್ಮಿಂದನೇ ದೊಡ್ಡ ಮಾವನ ಮರ್ಯಾದೆಗೆ ದಕ್ಕೆ ಬಂತು...”

ಜೆಕೆ ಅವನ ಭುಜದ ಮೇಲೆ ಕೈ ಇಟ್ಟು ಸಮಾಧಾನಪಡಿಸಿದ “ಅದರ ಬಗ್ಗೆ ಯೋಚನೆ ಮಾಡ್ಬೇಡ.”

ಆದರೆ ಮೋಹನ್ ಅವರ ನೋವು ಮಾತ್ರ ಕಡಿಮೆಯಾಗಿರಲಿಲ್ಲ

“ನಾವು ಎಷ್ಟೆಲ್ಲ ಆಸೆ ಇಟ್ಟು ಬಂದಿದ್ವಿ... ಆದರೆ ಎಲ್ಲ ಹಾಳಾಗಿ ಹೋಯ್ತು. ಇನ್ನು ಮುಂದೆ ನಮಗೂ ನಿಮಗೂ ಯಾವುದೇ ಸಂಬಂಧ ಇಲ್ಲ.”

ಅವರು ಮನೆಯವರನ್ನೆಲ್ಲ ಕರೆದುಕೊಂಡು ಹೊರಡಲು ಮುಂದಾದರು.

ಅಷ್ಟರಲ್ಲಿ ಶಶಿಧರ್ ತಡೆದರು.

“ದಯವಿಟ್ಟು ಊಟ ಮಾಡ್ಕೊಂಡು ಹೋಗಿ. ಮನೆಗೆ ಬಂದ ಅಥಿತಿಗಳನ್ನ ಹಾಗೇ ಕಳಿಸೋದು ಪಾಪ.”

ಮನೆಯ ಹೆಣ್ಣು ಮಕ್ಕಳು ಕೂಡ ವಿನಂತಿಸಿಕೊಂಡರು.

ಆದರೆ ಅವರ ನೋವು ಅಷ್ಟರ ಮಟ್ಟಿಗೆ ಹೋಗಿತ್ತು; ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

“ಅಯ್ಯೋ... ನೀವು ಈಗಾಗಲೇ ಹೊಟ್ಟೆ ತುಂಬಿಸಿರೋದೆ ಸಾಕು,” ಎಂದು ಮೋಹನ್ ವ್ಯಂಗ್ಯವಾಗಿ ಹೇಳಿದರು.

“ನಾವು ಹೊರಡ್ತೀವಿ... ಇನ್ಯಾವತ್ತೂ ಬರೋದಿಲ್ಲ.”

ಅವರು ಮನೆ ಬಾಗಿಲು ದಾಟಲು ಹೊರಟ ಕ್ಷಣದಲ್ಲಿ

“ನಿಂತ್ಕೊಳ್ಳಿ!”

ಎಲ್ಲರೂ ಹಿಂದೆ ತಿರುಗಿ ನೋಡಿದರು ಅದು ಶೇಖರ್.

“ನಮ್ಮ ಮನೆತನದಲ್ಲಿ ಯಾರು ಕೊಟ್ಟ ಮಾತನ್ನೂ ತಪ್ಪಿಲ್ಲ,” ಎಂದು ಅವನು ಗಂಭೀರವಾಗಿ ಹೇಳಿದ.

“ಅದರಲ್ಲೂ ದೊಡ್ಡ ಭಾವ ಕೊಟ್ಟ ಮಾತು... ಖಂಡಿತ ಸತ್ಯ ಆಗುತ್ತೆ.”

ಆ ಮಾತು ಕೇಳಿ ಎಲ್ಲರೂ ಕ್ಷಣಮಾತ್ರಕ್ಕೆ ನಿಶ್ಯಬ್ಧರಾದರು.

ಶಶಿಧರ್ ಕೋಪದಿಂದ ಕೇಳಿದರು.

“ಶೇಖರ್... ನೀನೇನಾದ್ರೂ ಅಮ್ಮು ಮತ್ತು ಸೂರ್ಯನ ದೂರ ಮಾಡ್ತೀನಿ ಅನ್ನೋ ಯೋಚನೆ ಇದ್ದರೆ ಅದನ್ನ ಈಗಲೇ ಮರೆತುಬಿಡು.”

“ನನಗೆ ನನ್ನ ಭಾವನ ಮರ್ಯಾದೆ ಎಲ್ಲಕ್ಕಿಂತ ಮುಖ್ಯ,” ಎಂದು ಶೇಖರ್ ಶಾಂತವಾಗಿ ಉತ್ತರಿಸಿದ.

ಮೋಹನ್ ಗೊಂದಲದಿಂದ ಕೇಳಿದರು.

“ಅಂದ್ರೆ... ನಿಮ್ಮ ಭಾವನ ಮರ್ಯಾದೆಗಾಗಿ ಅಂಬ್ರುತಾನ ನಮ್ಮ ಮಗನ ಜೊತೆ ಮದುವೆ ಮಾಡ್ತೀರಾ?”

ಶೇಖರ್ ತಲೆ ಅಲ್ಲಾಡಿಸಿದ “ಖಂಡಿತಾ ಇಲ್ಲ.”ಅವನ ಧ್ವನಿ ಗಂಭೀರವಾಗಿತ್ತು.

“ನಮ್ಮ ಮನೆಯಿಂದ ನಿಮ್ಮ ಮನೆಗೆ ಸೊಸೆ ಬರ್ತಾಳೆ. ಆದರೆ... ಅಂಬ್ರುತಾ ಅಲ್ಲ.”

“ಹಾಗಿದ್ರೆ ಯಾರು?” ಎಂದು ಮೋಹನ್ ಆಶ್ಚರ್ಯದಿಂದ ಕೇಳಿದರು.

ಶೇಖರ್ ನಿಧಾನವಾಗಿ ಉತ್ತರಿಸಿದ.

“ನನ್ನ ಮಗಳು... ಜಾಹ್ನವಿ.”

ಆ ಒಂದು ಮಾತು ಇಡೀ ಮನೆಯನ್ನೇ ದಂಗಾಗಿಸಿತು.

ಮುಂದುವರೆಯುವುದು...


ಮಾತು, ಗೌರವ, ಪ್ರೀತಿ ಮತ್ತು ಕುಟುಂಬದ ಭಾವನೆಗಳ ನಡುವೆ ಸಿಲುಕಿದ ಕೆಲ ಹೃದಯಗಳ ಕಥೆಯಿದು...
ಈ ತಿರುವು ನಿಮಗೆ ಹೇಗನಿಸಿತು ಅನ್ನೋದನ್ನ ತಪ್ಪದೇ ಹಂಚಿಕೊಳ್ಳಿ. ಧನ್ಯವಾದಗಳು.