ಬೆಂಗಳೂರಿನ ಹೊರವಲಯದ ಆ ಭೂಗತ ಪ್ರಯೋಗಾಲಯದಲ್ಲಿ ಕೇವಲ ಸೂಪರ್‌ಕಂಪ್ಯೂಟರ್‌ಗಳ ಸದ್ದು ಮತ್ತು ನಿಯಾನ್ ದೀಪಗಳ ತಣ್ಣನೆಯ ಬೆಳಕು ಮಾತ್ರ ಮನೆಮಾಡಿತ್ತು. ವಿಜ್ಞಾನಿ ಡಾ. ವಿಕ್ರಮ್ ಆಚಾರ್ಯ ಅವರ ಕಣ್ಣುಗಳಲ್ಲಿ ಹಲವು ರಾತ್ರಿಗಳ ನಿದ್ರೆಯಿಲ್ಲದ ಆಯಾಸ ಎದ್ದು ಕಾಣುತ್ತಿತ್ತು. ಆದರೆ ಆ ದಣಿವಿಗಿಂತ ಹೆಚ್ಚಾಗಿ, ಪ್ರಕೃತಿಯ ಅತಿ ದೊಡ್ಡ ರಹಸ್ಯವಾದ ‘ಕಾಲವನ್ನೇ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಬೇಕೆಂಬ ಉದ್ದೇಶವನ್ನು ಹೊಂದಿದ್ದರು ಐನ್‌ಸ್ಟೈನ್‌ರ ಸಾಪೇಕ್ಷತಾ ಸಿದ್ಧಾಂತಕ್ಕೆ ಹೊಸ ಆಯಾಮ ನೀಡಿ, ಅವರು ರೂಪಿಸಿದ್ದ ಯಂತ್ರವೇ ‘ಟೈಮ್ ಸಿಗ್ನೇಚರ್ ರೆಸೋನೇಟರ್’. ಆ ದೈತ್ಯ ಲೋಹದ ಚಕ್ರದ ಮಧ್ಯೆ ಕ್ವಾಂಟಮ್ ತರಂಗಗಳು ನೀಲಿ ಬೆಳಕಿನಂತೆ ಮಿನುಗುತ್ತಿದ್ದವು. ಅವರ ಪಕ್ಕದಲ್ಲೇ ಲ್ಯಾಪ್‌ಟಾಪ್‌ನಲ್ಲಿ ಡೇಟಾ ಪರಿಶೀಲಿಸುತ್ತಾ ನಿಂತಿದ್ದಳು ಅವರ ಆಪ್ತ ಸಹಾಯಕಿ ಅಕ್ಷತಾ. ಅತಿ ಜಾಣೆ, ಆದರೆ ಆಕೆಯ ಕಣ್ಣುಗಳಲ್ಲಿ ಸದಾ ಒಂದು ನಿಗೂಢ ಮೌನವಿರುತ್ತಿತ್ತು.
ಅಂದು ಆ ಯಂತ್ರದ ಅಂತಿಮ ಹಂತದ ಪರೀಕ್ಷೆ. ವಿಕ್ರಮ್ ಉತ್ಸಾಹದಿಂದ ಕಂಟ್ರೋಲ್ ಪ್ಯಾನಲ್‌ನ ಬಟನ್ ಒತ್ತಿ, ಶಕ್ತಿಶಾಲಿ ತರಂಗಗಳನ್ನು ಸಕ್ರಿಯಗೊಳಿಸಿದರು. ಆದರೆ ನಿರೀಕ್ಷೆಗಿಂತ ಭಿನ್ನವಾಗಿ, ಮಾನಿಟರ್‌ನಲ್ಲಿ ಕೇವಲ ನೆನಪುಗಳಷ್ಟೇ ಅಲ್ಲದೆ, ಭೂಮಿಯ ಮೇಲೆ ಇದುವರೆಗೂ ಸಂಭವಿಸದ, ಅಸ್ಪಷ್ಟವಾದ ಭವಿಷ್ಯದ ಭಯಾನಕ ನೆರಳುಗಳು ಕಣ್ಣುಮುಚ್ಚಿ ತೆರೆಯುವುದರೊಳಗೆ ಹಾದು ಹೋದವು. ಏನೋ ತಪ್ಪಾಗಿದೆ ಎಂದು ವಿಕ್ರಮ್ ಎಮರ್ಜೆನ್ಸಿ ಸ್ವಿಚ್ ಕಡೆ ಕೈಚಾಚುವಷ್ಟರಲ್ಲಿ, ಕಿವಿಕಿವುಡಾಗಿಸುವ ಕರ್ಕಶ ಸದ್ದಿನೊಂದಿಗೆ ನೀಲಿ ಬೆಳಕು ಸ್ಫೋಟಿಸಿತು. ಆ ಕೋಣೆಯ ಗುರುತ್ವಾಕರ್ಷಣವೇ ಕಣ್ಮರೆಯಾಗಿ, ವಿಕ್ರಮ್ ಮತ್ತು ಅಕ್ಷತಾ ಇಬ್ಬರೂ ಕಾಲದ ಕಪ್ಪುಸುಳಿಯೊಳಗೆ ಎಸೆಯಲ್ಪಟ್ಟರು.
ಪ್ರಜ್ಞೆ ಬಂದಾಗ ವಿಕ್ರಮ್‌ಗೆ ಕಂಡಿದ್ದು ಲ್ಯಾಬಿನ ಕಾಂಕ್ರೀಟ್ ಗೋಡೆಗಳಲ್ಲ ಹಸಿರು ಬಯಲು, ಮಣ್ಣಿನ ಸುವಾಸನೆ ಮತ್ತು ಹಕ್ಕಿಗಳ ಚಿಲಿಪಿಲಿ. ಪಕ್ಕದಲ್ಲಿದ್ದ ಕೈಗಡಿಯಾರ ಮತ್ತು ರೆಸೋನೇಟರ್‌ನ ಸಂವೇದಕಗಳು ಕ್ರಿ.ಶ. 1776 ರ ಇಸವಿಯನ್ನು ತೋರಿಸುತ್ತಿದ್ದವು. ಅಂದರೆ ಅವರು ಸುಮಾರು ಇನ್ನೂರೈವತ್ತು ವರ್ಷಗಳಷ್ಟು ಹಿಂದಿನ ಮೈಸೂರು ಸಂಸ್ಥಾನದ ಗಡಿಯಲ್ಲಿದ್ದ ಒಂದು ಪುಟ್ಟ, ಶಾಂತ ಹಳ್ಳಿಯಲ್ಲಿ ಬಂದು ಬಿದ್ದಿದ್ದರು. ಆದರೇನು, ಅವರ ಕೈಯಲ್ಲಿದ್ದ ಪೋರ್ಟಬಲ್ ಯಂತ್ರದ ಪರದೆಯ ಮೇಲೆ ಕಾಲದ ವಿಚಿತ್ರ ರೇಖೆಗಳು ಮಿನುಗುತ್ತಾ ಒಂದು ಭೀಕರ ಭವಿಷ್ಯವನ್ನು ತೆರೆದಿಟ್ಟವು. ಕೆಲವೇ ದಿನಗಳಲ್ಲಿ ಆ ಹಳ್ಳಿಗೆ ಅಪರಿಚಿತ ವೈರಸ್‌ವೊಂದು ಅಪ್ಪಳಿಸಲಿದೆ ಜನರ ಮುಖ ದೇಹಗಳು ಆಸಿಡ್ ಬಿದ್ದಂತೆ ಕರಗಿ, ಎಲುಬುಗಳು ಸೀಳಿ ನರಳಿ ಸಾಯುವಂತಹ ಮಹಾಮಾರಿ ಅದು. ಆ ನರಳಾಟದ ಚಿತ್ರಣ ವಿಕ್ರಮ್‌ನ ಎದೆಯನ್ನು ನಡುಗಿಸಿತು. ಒಬ್ಬ ವಿಜ್ಞಾನಿಯಾಗಿ ಈ ಮುಗ್ಧರನ್ನು ನನ್ನ ಕಣ್ಣೆದುರೇ ಸಾಯಲು ಬಿಡಲಾರೆ ಎಂದು ಶಪಥ ಮಾಡಿದ ವಿಕ್ರಮ್, ತಮ್ಮ ಬಳಿಯಿದ್ದ ಆಧುನಿಕ ವೈದ್ಯಕೀಯ ನ್ಯಾನೋ-ಉಪಕರಣಗಳ ಜೊತೆಗೆ ಆ ಹಳ್ಳಿಯ ಅರಣ್ಯದಲ್ಲಿದ್ದ ಅಪರೂಪದ ಆಯುರ್ವೇದ ಬೇರು ಮೂಲಿಕೆಗಳನ್ನು ಸಂಯೋಜಿಸಿ ಒಂದು ಅದ್ಭುತ ಔಷಧ ತಯಾರಿಸಿದರು. ಅದನ್ನು ಹಳ್ಳಿಯ ಪ್ರಮುಖ ನೀರಿನ ಸೆಲೆಗೆ ಬೆರೆಸಿ ರೋಗ ಹರಡುವುದನ್ನು ಬೇರುಸಹಿತ ಚಿವುಟಿ ಹಾಕಿದರು. ಹಳ್ಳಿಗರು ಬದುಕುಳಿದರು. ತಮ್ಮ ಪ್ರಯೋಗ ಯಶಸ್ವಿಯಾಯಿ ತೆಂದು ವಿಕ್ರಮ್ ನಿಟ್ಟುಸಿರುಬಿಟ್ಟರು.
ಆದರೆ, ಅದೇ ಕ್ಷಣದಲ್ಲಿ ಅವರ ಕೈಯಲ್ಲಿದ್ದ ಯಂತ್ರ ಒಮ್ಮೆಲೆ ಕೆಂಪು ಬಣ್ಣಕ್ಕೆ ತಿರುಗಿ ಅಸಹಜವಾಗಿ ಕಿರುಚತೊಡಗಿತು.
ಅದರ ಪರದೆಯ ಮೇಲೆ ಕಾಲದ ಹರಿವು ತಲೆಕೆಳಗಾಗಿ ಹೊಸ ಭವಿಷ್ಯವೊಂದು ಅನಾವರಣಗೊಂಡಿತು. ಆ ದೃಶ್ಯವನ್ನು ನೋಡಿದ ವಿಕ್ರಮ್‌ನ ಎದೆಬಡಿತವೇ ನಿಂತಂತಾಯಿತು. ಅದು ಭವಿಷ್ಯದ ಬೆಂಗಳೂರು ಮಹಾನಗರ. ಗಗನಚುಂಬಿ ಕಟ್ಟಡಗಳ ನಡುವೆ, ಮೆಟ್ರೋ ಹಳಿಗಳ ಮೇಲೆ, ರಸ್ತೆ ರಸ್ತೆಗಳಲ್ಲಿ ಲಕ್ಷಾಂತರ ಮೃತದೇಹಗಳು ಕೊಳೆತು ಬಿದ್ದಿದ್ದವು. ಅದೇ ರೋಗ, ಅದೇ ಕರಗಿದ ಮುಖಗಳು. ಆ ಹಳ್ಳಿಯಲ್ಲಿ ಸಾಯಬೇಕಿದ್ದ ವೈರಸ್, ವಿಕ್ರಮ್ ಮಾಡಿದ ಔಷಧಿಯ ಕಾರಣದಿಂದ ರೂಪಾಂತರಗೊಂಡು ನೂರಾರು ವರ್ಷಗಳ ಕಾಲ ಭೂಮಿಯ ಆಳದಲ್ಲಿ ನಿಷ್ಕ್ರಿಯವಾಗಿ ಮಲಗಿ ನಂತರ ಭವಿಷ್ಯದ ಬೆಂಗಳೂರಿನಲ್ಲಿ ಇಡೀ ಮಾನವಕುಲವನ್ನೇ ನುಂಗುವ ಹೆಮ್ಮಾರಿಯಾಗಿ ಸ್ಫೋಟಗೊಳ್ಳುತ್ತದೆ, ಅರೇ ಇದೇನು ನಾನೇನು ಮಾಡಿಬಿಟ್ಟೆ? ರೋಗವನ್ನು ತಡೆಯಲು ಹೋಗಿ ಇಡೀ ಜಗತ್ತನ್ನೇ ಚಿತೆಯಾಗಿಸಿಬಿಟ್ಟೆನಾ? ಎಂದು ವಿಕ್ರಮ್ ಮಂಡಿಯೂರಿ ತಲೆಹಿಡಿದು ಅರಚಿದರು.
ಅವರ ಹಿಂದಿನಿಂದ ತಣ್ಣನೆಯ, ಅಸಹಜವಾದ ನಗುವೊಂದು ಕೇಳಿಸಿತು. ತಿರುಗಿ ನೋಡಿದರೆ, ಅಕ್ಷತಾ ಕೈಕಟ್ಟಿ ನಿಂತಿದ್ದಳು. ಆಕೆಯ ಮುಖದಲ್ಲಿ ಕಿಂಚಿತ್ತೂ ಆತಂಕವಿರಲಿಲ್ಲ, ಬದಲಿಗೆ ಒಂದು ವಿಚಿತ್ರ ಕೃತಕ ನಗು ತೇಲುತ್ತಿತ್ತು.
ವಿಕ್ರಮ್, ಈ ಎಲ್ಲವೂ ಕೇವಲ ಆಕಸ್ಮಿಕವೆಂದು ನೀನಿನ್ನೂ ಭಾವಿಸಿದ್ದೀಯಾ? ಆಕೆಯ ಧ್ವನಿ ಎಂದಿನಂತಿರಲಿಲ್ಲ, ಅದರಲ್ಲಿ ಲೋಹದ ಝೇಂಕಾರವಿತ್ತು. ನಾನು ನಿನ್ನ ಲ್ಯಾಬಿಗೆ ಕೆಲಸಕ್ಕೆಂದು ಬಂದ ಸಾಮಾನ್ಯ ವಿದ್ಯಾರ್ಥಿನಿಯಲ್ಲ. ನಾನು ಬಂದಿರುವುದು ಈ ಮಹಾಮಾರಿಯಿಂದ ಸರ್ವನಾಶವಾಗಿ ಹೋದ ನಿನ್ನ ಭವಿಷ್ಯದ ಜಗತ್ತಿನಿಂದ. ನಿನ್ನ ಈ ಕಾಲಯಂತ್ರದ ಹುಚ್ಚು ಆವಿಷ್ಕಾರವೇ ಮುಂದೆ ವೈರಸ್ ಕಾಲಾಂತರದಲ್ಲಿ ರೂಪಾಂತರಗೊಳ್ಳಲು ಕಾರಣವಾಯಿತು. ಇತಿಹಾಸದ ಪುಟಗಳನ್ನು ತಿರುಚಿ, ನೀನು ಈ ಯಂತ್ರವನ್ನು ತಯಾರಿಸುವುದನ್ನೇ ತಡೆಯಲು ನಾನು ಬಂದಿದ್ದೆ. ಆದರೆ ವಿಧಿಯ ಆಟದ ಪರಿಣಾಮ ನಿನ್ನನ್ನು ತಡೆಯುವ ಬದಲು, ನೀನು ಕಾಲದ ಬಾಗಿಲು ತೆರೆಯಲು ನಾನೇ ಪ್ರೇರಕಳಾದೆ. ಕಾಲದ ಚಕ್ರವನ್ನು ಯಾರೂ ಬದಲಿಸಲಾಗದು. ಆ ಹಳ್ಳಿಗೆ ರೋಗ ತಂದಿದ್ದು ಬೇರಾರೂ ಅಲ್ಲ, ಭವಿಷ್ಯದಿಂದ ನಮ್ಮಿಬ್ಬರ ದೇಹದ ಕಣಗಳಲ್ಲಿ ಅಂಟಿ ಬಂದಿದ್ದ ಅದೇ ವೈರಸ್.
ವಿಕ್ರಮ್‌ಗೆ ಮಾತುಗಳೇ ಹೊರಡಲಿಲ್ಲ. ನಡುಗುತ್ತಾ, ಹಾಗಾದರೆ ಈ ವಿನಾಶಕ್ಕೆ ನಾನೇ ಕಾರಣನಾ? ಈಗೇನು ಮಾಡುವುದು? ಎಂದು ಗೋಗರೆದರು.
ಅಕ್ಷತಾಳ ಕಣ್ಣುಗಳಲ್ಲಿ ನೀಲಿ ಕಿರಣಗಳು ಮಿಂಚಿದವು. ಈಗ ಕಾಲ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದೆ. ಈ ಕಾಲಘಟ್ಟದಲ್ಲಿ ನನ್ನ ಅಸ್ತಿತ್ವಕ್ಕೆ ಜಾಗವಿಲ್ಲ ಆಕೆ ಹೇಳುತ್ತಿದ್ದಂತೆ, ಆಕೆಯ ದೇಹ ಗಾಜಿನಂತೆ ಬಿರುಕುಬಿಟ್ಟು, ನಿಧಾನವಾಗಿ ಬೆಳಕಿನ ಕಣಗಳಾಗಿ ಕಳಚಿ ಬೀಳತೊಡಗಿತು. ಕ್ಷಣಾರ್ಧದಲ್ಲಿ ಆಕೆ ಧೂಳಾಗಿ ಕಾಲದ ಶೂನ್ಯದಲ್ಲಿ ಲೀನವಾಗಿ ಹೋದಳು.
ಕೈಯಲ್ಲಿದ್ದ ಯಂತ್ರ ಸುಟ್ಟು ಕರಕಲಾಗಿ ಹೊಗೆಯಾಡುತ್ತಿತ್ತು. ಎರಡುನೂರಾ ಐವತ್ತು ವರ್ಷಗಳ ಹಿಂದಿನ ಆ ಅಜ್ಞಾತ ಹಳ್ಳಿಯ ಕಾಡಿನ ಕತ್ತಲಲ್ಲಿ ಡಾ. ವಿಕ್ರಮ್ ಆಚಾರ್ಯ ಅನಾಥವಾಗಿ ನಿಂತಿದ್ದರು. ಕಾಲವನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿಯಲು ಹೊರಟ ಮನುಷ್ಯ, ತಾನೇ ಕಾಲದ ಕೈಗೊಂಬೆಯಾಗಿ ಇಡೀ ಭವಿಷ್ಯದ ಸರ್ವನಾಶಕ್ಕೆ ಮುನ್ನುಡಿ ಬರೆದುಬಿಟ್ಟಿದ್ದ. ಬೀಸುವ ತಣ್ಣನೆಯ ಗಾಳಿಯಲ್ಲಿ ಅವರ ಮನಸ್ಸನ್ನು ಒಂದೇ ಒಂದು ಕರಾಳ ಸತ್ಯ ಕೊರೆಯುತ್ತಿತ್ತು ಪ್ರಕೃತಿಯ ಗತಿಯನ್ನು ನಿಯಂತ್ರಿಸುವ ಶಕ್ತಿ ಮನುಷ್ಯನಿಗಿಲ್ಲ ಕಾಲದ ಮುಂದೆ ನಾವೆಲ್ಲರೂ ಕೇವಲ ಅಸಹಾಯಕ ಪಗಡೆಯ ದಾಳಗಳು.