Demon Tal in Kannada Horror Stories by Saandeep Joshi books and stories PDF | ರಾಕ್ಷಸ ತಾಲ್‌

Featured Books
Categories
Share

ರಾಕ್ಷಸ ತಾಲ್‌

ಹಿಮಾಲಯದ ಮಡಿಲಲ್ಲಿರುವ ರಾಕ್ಷಸ ತಾಲ್ ಕೇವಲ ಒಂದು ಜಲರಾಶಿಯಲ್ಲ ಅದು ಭೂಮಿಯ ಮೇಲಿರುವ ನರಕದ ದ್ವಾರ. ಮಾನಸ ಸರೋವರವು ದೇವತೆಗಳ ಸನ್ನಿಧಿಯಾದರೆ, ಅದರ ಪಕ್ಕದಲ್ಲೇ ಇರುವ ಈ ಕೆರೆ ರಾಕ್ಷಸರ ಮತ್ತು ಶಾಪಗ್ರಸ್ತ ಆತ್ಮಗಳ ಅಡಗುದಾಣ. ಸ್ಥಳೀಯ ಲಾಮಾಗಳು ಇಂದಿಗೂ ಸೂರ್ಯ ಮುಳುಗಿದ ಮೇಲೆ ಆ ಕಡೆಗೆ ತಲೆ ಹಾಕಿ ಮಲಗುವುದಿಲ್ಲ. ಅಲ್ಲಿ ಹಕ್ಕಿಗಳು ರೆಕ್ಕೆ ಬಡಿಯುವುದಿಲ್ಲ, ಅಲ್ಲಿನ ಗಾಳಿಯಲ್ಲಿ ಆಮ್ಲಜನಕಕ್ಕಿಂತ ಹೆಚ್ಚಾಗಿ ಸತ್ತವರ ಹಸಿ ಮಾಂಸದ ವಾಸನೆ ಇರುತ್ತದೆ.
ಅವಿನಾಶ್ ಒಬ್ಬ ಹಠವಾದಿ ಕಥೆಗಾರ ಮತ್ತು ಸಿನಿಮಾ ನಿರ್ದೇಶಕ. ಲೋಕದ ಕಣ್ಣಿಗೆ ಕಾಣದ ನಿಗೂಢತೆಗಳನ್ನು ಬೆನ್ನಟ್ಟುವುದು ಅವನ ರಕ್ತದಲ್ಲೇ ಇತ್ತು. ಸಾವಿಗೆ ಯಾವುದೇ ಸೈಕಾಲಜಿ ಇರುವುದಿಲ್ಲ, ಅದಕ್ಕಿರುವುದು ಕೇವಲ ಹಸಿವು ಮಾತ್ರ ಎಂಬುದು ಅವನ ಲೇಖನಿಯ ಶಕ್ತಿ. ಸುಮಾರು 200 ಕ್ಕೂ ಅಧಿಕ ಕಥೆಗಳನ್ನು ಬರೆದಿರುವ ಅವನಿಗೆ, ರಾಕ್ಷಸ ತಾಲ್ ಎನ್ನುವ ಹೆಸರೇ ಒಂದು ದೊಡ್ಡ ಸಸ್ಪೆನ್ಸ್ ಥ್ರಿಲ್ಲರ್‌ನಂತೆ ಕಾಣುತ್ತಿತ್ತು. ತನ್ನ ಆತ್ಮೀಯ ಮಿತ್ರ ಮತ್ತು ಕ್ಯಾಮೆರಾಮ್ಯಾನ್ ಸಂಜಯ್ ಜೊತೆಗೂಡಿ, ಒಂದು ಶಾರ್ಟ್ ಮೂವಿಯ ತಯಾರಿಯಲ್ಲಿ ಅವನು ಆ ಕೆರೆಯ ದಡದಲ್ಲಿ ಟೆಂಟ್ ಹಾಕಿದಾಗ ಸಮಯ ರಾತ್ರಿ ಎಂಟು ಗಂಟೆ.
ಅವಿನಾಶ್, ಇಲ್ಲಿನ ಮೌನ ಕಿವಿಗೆ ಅಪ್ಪಳಿಸುತ್ತಿದೆ ಕಣೋ. ಆ ಗೈಡ್ ಹೇಳಿದ್ದು ನೆನಪಿದೆಯೇ? ಇಲ್ಲಿ ರಾವಣ ತನ್ನ ಹತ್ತು ತಲೆಗಳನ್ನು ಶಿವನಿಗೆ ಅರ್ಪಿಸುವಾಗ ಚೆಲ್ಲಿದ ರಕ್ತ ಇಂದಿಗೂ ಕೆರೆಯ ಅಡಿಯಲ್ಲಿ ಕುದಿಯುತ್ತಿದ್ದೆಯಂತೆ ಎಂದು ಸಂಜಯ್ ಬೆಂಕಿಯ ಮುಂದೆ ನಡುಗುತ್ತಾ ಹೇಳಿದ. ಅವಿನಾಶ್ ನಗುತ್ತಾ ತನ್ನ ಸೈಕಾಲಜಿ ಡೈರಿ ತೆರೆದ. ಸಂಜಯ್, ಭಯ ಅನ್ನೋದು ಮನುಷ್ಯನ ಮೆದುಳು ಸೃಷ್ಟಿಸುವ ಕಲ್ಪನೆ ಅಷ್ಟೇ. ನೀನು ಡೈರೆಕ್ಟರ್ ಆಗಬೇಕೆಂದರೆ ಮೊದಲು ಕಣ್ಣಿಗೆ ಕಾಣದ ಕತ್ತಲೆಯನ್ನು ಪ್ರೀತಿಸುವುದನ್ನು ಕಲಿ ಎಂದು ಹೇಳಿ ಸುಮ್ಮನಾದ. ಆದರೆ ಅವನಿಗೆ ಆ ರಾತ್ರಿ ಅವನ ಕಲ್ಪನೆಗಳಿಗಿಂತ ಮೀರಿದ ಒಂದು ಭೀಕರ ವಾಸ್ತವ ಅವನನ್ನು ನುಂಗಲು ಕಾಯುತ್ತಿದೆ ಎಂದು ಗೊತ್ತಿರಲಿಲ್ಲ.
ರಾತ್ರಿ ಹನ್ನೆರಡು ಗಂಟೆ. ಆಕಾಶದಲ್ಲಿ ಚಂದ್ರನಿದ್ದರೂ ಕೆರೆಯ ನೀರು ಕಪ್ಪಾಗಿ, ದಟ್ಟವಾದ ಎಣ್ಣೆಯಂತೆ ಮಲಗಿತ್ತು. ಇದ್ದಕ್ಕಿದ್ದಂತೆ ಕೆರೆಯ ಮಧ್ಯಭಾಗದಲ್ಲಿ ಒಂದು ವಿಚಿತ್ರವಾದ ಸುಳಿ ಕಾಣಿಸಿಕೊಂಡಿತು. ಶಾಂತವಾಗಿದ್ದ ನೀರು ಇದ್ದಕ್ಕಿದ್ದಂತೆ ಕುದಿಯಲು ಆರಂಭಿಸಿತು. ಟೆಂಟ್‌ನ ಹೊರಗೆ ಯಾವುದೋ ಭಾರವಾದ ವಸ್ತುವನ್ನು ಮರಳಿನ ಮೇಲೆ ಎಳೆದ ಶಬ್ದ ಕೇಳಿಸಿತು. ಅವಿನಾಶ್ ಟಾರ್ಚ್ ಹಿಡಿದು ಹೊರಗೆ ಬಂದಾಗ, ಮರಳಿನ ಮೇಲೆ ಉದ್ದವಾದ ಗೆರೆಗಳು ಬಿದ್ದಿದ್ದವು ಅವು ಯಾರೋ ಅಂಬೆಗಾಲಿಡುತ್ತಾ ಕೆರೆಯೊಳಗೆ ಹೋದ ಗುರುತುಗಳಂತಿದ್ದವು. 
ಟಾರ್ಚ್ ಬೆಳಕು ನೀರಿನ ಮೇಲೆ ಬಿದ್ದಾಗ, ದಡದಲ್ಲಿ ಒಬ್ಬ ಮುದಿ ಹೆಂಗಸು ಬೆನ್ನು ಹಾಕಿ ಕುಳಿತಿದ್ದಳು. ಹರಿದ ಬಿಳಿ ಬಟ್ಟೆ, ಮಣ್ಣು ಮೆತ್ತಿಕೊಂಡಿದ್ದ ಕೆದರಿದ ಕೂದಲು. ಅವಿನಾಶ್ ಕ್ಯಾಮೆರಾ ಆನ್ ಮಾಡಿ ಮೆಲ್ಲನೆ ಅವಳ ಹತ್ತಿರ ಹೋದ. ಅಜ್ಜಿ, ಈ ಸಮಯದಲ್ಲಿ ಇಲ್ಲಿ ಏನು ಮಾಡುತ್ತಿದ್ದೀರಾ?" ಎಂದು ಕೇಳಿದ. ಆ ಹೆಂಗಸು ತಿರುಗಲಿಲ್ಲ, ಆದರೆ ಅವಳು ತನ್ನ ಬೆರಳುಗಳಿಂದ ಮರಳನ್ನು ಕೆರೆಯುತ್ತಾ ಅತೀಂದ್ರಿಯ ರಾಗದಲ್ಲಿ ಹಾಡತೊಡಗಿದಳು. ಆ ಹಾಡು ಮನುಷ್ಯರ ಭಾಷೆಯಂತಿರಲಿಲ್ಲ ಅದು ಸಾವಿರಾರು ಗೋರಿಗಳಿಂದ ಒಟ್ಟಿಗೆ ಕೇಳಿಬರುವ ಆಕ್ರಂದನದಂತಿತ್ತು. ಅವಿನಾಶ್ ಇನ್ನೊಂದು ಹೆಜ್ಜೆ ಹತ್ತಿರ ಹೋದಾಗ, ಅವಳು ಇದ್ದಕ್ಕಿದ್ದಂತೆ ಅದೃಶ್ಯಳಾದಳು. ಅವಳು ಕುಳಿತಿದ್ದ ಜಾಗದಲ್ಲಿ ಕೇವಲ ಕೊಳೆತ ಹಸಿ ಮಾಂಸದ ವಾಸನೆ ಮತ್ತು ಒಂದು ಹಳೆಯ ಬಳೆ ಬಿದ್ದಿತ್ತು.
ಗಾಬರಿಯಿಂದ ಟೆಂಟ್‌ನೊಳಗೆ ಓಡಿ ಬಂದ ಅವಿನಾಶ್‌ಗೆ ಲೋಕವೇ ತಲೆಕೆಳಗಾದ ಅನುಭವವಾಯಿತು. ಅಲ್ಲಿ ಸಂಜಯ್ ಇರಲಿಲ್ಲ. ಬದಲಾಗಿ ಸಂಜಯ್ ಬಳಸುತ್ತಿದ್ದ ಕ್ಯಾಮೆರಾ ಆನ್ ಆಗಿತ್ತು. ಅವಿನಾಶ್ ಆತಂಕದಿಂದ ಆ ಕ್ಯಾಮೆರಾದ ರೀಪ್ಲೇ ಬಟನ್ ಒತ್ತಿದ. ಅದರಲ್ಲಿ ರೆಕಾರ್ಡ್ ಆಗಿದ್ದ ದೃಶ್ಯ ಅವನ ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸಿತು. ಸಂಜಯ್ ಮಲಗಿದ್ದಾಗಲೇ ಅವನ ಬೆನ್ನಿನಿಂದ ಎರಡು ಕಪ್ಪು ಕೈಗಳು ಹೊರಬಂದು ಅವನನ್ನು ಅಕ್ಷರಶಃ ಸೀಳುತ್ತಿದ್ದವು. ಸಂಜಯ್ ಕಿರುಚಲು ಪ್ರಯತ್ನಿಸುತ್ತಿದ್ದರೂ ಅವನ ಬಾಯಿಯಿಂದ ರಕ್ತದ ಗುಳ್ಳೆಗಳಷ್ಟೇ ಬರುತ್ತಿದ್ದವು. ಆ ದೃಶ್ಯದ ಕೊನೆಯಲ್ಲಿ ಆ ಕಪ್ಪು ಕೈಗಳು ಕ್ಯಾಮೆರಾವನ್ನು ನೋಡಿ ಇನ್ನು ನಿನ್ನ ಸರದಿ ಎಂಬಂತೆ ಬೆರಳು ತೋರಿದ್ದವು.
ಅವಿನಾಶ್ ತಲೆ ಎತ್ತಿ ನೋಡಿದಾಗ ಟೆಂಟ್‌ನ ಮೇಲ್ಭಾಗದಿಂದ ರಕ್ತದ ಹನಿಗಳು ಅವನ ಮುಖದ ಮೇಲೆ ಬಿದ್ದವು. ಸಂಜಯ್‌ನ ನಿರ್ಜೀವ ದೇಹ ಟೆಂಟ್‌ನ ಮಾಡಿಗೆ ಅಂಟಿಕೊಂಡಿತ್ತು ಅವನ ಕಣ್ಣುಗಳಿರಲಿಲ್ಲ, ಕೇವಲ ಬರಿದಾದ ರಂಧ್ರಗಳಿದ್ದವು. ಅವನ ಬಾಯಿ ಅಸಹಜವಾಗಿ ದೊಡ್ಡದಾಗಿ ತೆರೆದಿತ್ತು. ಅವಿನಾಶ್ ನಿನಗೆ ಕ್ಲೈಮ್ಯಾಕ್ಸ್ ಬೇಕಿತ್ತಲ್ಲವೇ? ಈಗ ನೋಡು ಸಂಜಯ್‌ನ ಶವ ಮಾತನಾಡತೊಡಗಿತು. ಆ ಧ್ವನಿ ಅವನ ತಾಯಿಯ ಧ್ವನಿಯಂತಿತ್ತು.
ಬರಹಗಾರನಾಗಿ ಅವಿನಾಶ್‌ಗೆ ಒಂದು ವಿಷಯ ಗೊತ್ತು ಕಥೆಯಲ್ಲಿ ತಾಯಿ ಎಂದರೆ ಪ್ರೀತಿ. ಆದರೆ ಇಲ್ಲಿ ಆ ಧ್ವನಿಯಲ್ಲಿ ರಾಕ್ಷಸೀ ದ್ವೇಷವಿತ್ತು. ಬರೆಯುವ ಕಲೆ ಅಮ್ಮನಿಂದ ಬಂದಿದ್ದು ಅಂದೆಯಲ್ಲಾ ಮಗನೇ ಈಗ ನಿನ್ನ ಜೀವನದ ಕೊನೆಯ ಅಧ್ಯಾಯವನ್ನು ನಾನು ಬರೆಯುತ್ತೇನೆ ನೋಡು ಎಂದು ಆ ಶವ ಅಟ್ಟಹಾಸದಿಂದ ನಕ್ಕಿತು.
ಅವಿನಾಶ್ ಪ್ರಾಣಭಯದಿಂದ ಹೊರಗೆ ಓಡಿದ. ಹೊರಗೆ ನೋಡಿದರೆ ರಾಕ್ಷಸ ತಾಲ್‌ನ ನೀರಿನಿಂದ ನೂರಾರು ಸಾವಿರಾರು ಆಕೃತಿಗಳು ಮೇಲೆ ಬರುತ್ತಿದ್ದವು. ಅವೆಲ್ಲಕ್ಕೂ ಕಣ್ಣುಗಳಿರಲಿಲ್ಲ, ಕೇವಲ ಹಸಿವಿನಿಂದ ಕಾಯುತ್ತಿರುವ ಬಾಯಿಗಳಿದ್ದವು. ಅವಿನಾಶ್ ತನ್ನ ಜೀಪ್ ಹತ್ತಿ ಸ್ಟಾರ್ಟ್ ಮಾಡಲು ಪ್ರಯತ್ನಿಸಿದ. ಆದರೆ ಜೀಪ್‌ನ ವಿಂಡ್ ಶೀಲ್ಡ್ ಮೇಲೆ ಒಳಗಿನಿಂದಲೇ ರಕ್ತದ ಕೈಗುರುತುಗಳು ಮೂಡತೊಡಗಿದವು. ಅವನು ಪಕ್ಕದ ಸೀಟನ್ನು ನೋಡಿದಾಗ ಅಲ್ಲಿ ಅವನದೇ ಪ್ರತಿಬಿಂಬ ಕುಳಿತಿತ್ತು ಅವನ ಎರಡನೇ ರೂಪ ಅವನನ್ನೇ ನೋಡಿ ವಿಚಿತ್ರವಾಗಿ ನಗುತ್ತಾ, ತನ್ನ ಉಗುರುಗಳಿಂದ ತನ್ನದೇ ಮುಖದ ಚರ್ಮವನ್ನು ಸುಲಿಯತೊಡಗಿತು.ಇದು ಕನಸು ಇದು ಕೇವಲ ಸೈಕಾಲಜಿ ಎಂದು ಅವಿನಾಶ್ ಕಿರುಚಿದ. ಆದರೆ ಅವನ ಮೈಮೇಲೆ ಆಗುತ್ತಿದ್ದ ಗಾಯಗಳು ಮತ್ತು ಅಲ್ಲಿ ಹರಿಯುತ್ತಿದ್ದ ರಕ್ತ ಮಾತ್ರ ನೈಜವಾಗಿತ್ತು. ಜೀಪ್ ತಾನಾಗಿಯೇ ಹಿಂದಕ್ಕೆ ಚಲಿಸಿ ನೇರವಾಗಿ ರಾಕ್ಷಸ ತಾಲ್‌ನ ಆಳಕ್ಕೆ ಬಿದ್ದಿತು. ನೀರಿನ ಒಳಗೆ ಹೋದಂತೆಲ್ಲಾ ಅವಿನಾಶ್‌ಗೆ ಸಾವಿರಾರು ಆತ್ಮಗಳ ಕೈಗಳು ತನ್ನನ್ನು ತಬ್ಬಿಕೊಳ್ಳುತ್ತಿರುವುದು ಭಾಸವಾಯಿತು. ಆ ನೀರು ತಣ್ಣಗಿರಲಿಲ್ಲ, ಅದು ರಾವಣನ ಕ್ರೋಧದಂತೆ ಕುದಿಯುತ್ತಿತ್ತು. ಅವನ ಉಸಿರು ಕಟ್ಟುತ್ತಿತ್ತು, ಶ್ವಾಸಕೋಶದೊಳಗೆ ಆ ಪಾಪಿ ಕೆರೆಯ ನೀರು ನುಗ್ಗುತ್ತಿತ್ತು.
ಮರುದಿನ ಬೆಳಿಗ್ಗೆ ಸೂರ್ಯ ಉದಯಿಸಿದಾಗ ರಾಕ್ಷಸ ತಾಲ್ ಮೊದಲಿನಂತೆ ಶಾಂತವಾಗಿತ್ತು. ಅಲ್ಲಿ ಯಾವುದೇ ಜೀಪ್ ಇರಲಿಲ್ಲ, ಯಾವುದೇ ಟೆಂಟ್ ಇರಲಿಲ್ಲ. ದಡದಲ್ಲಿ ಕೇವಲ ಅವಿನಾಶ್ ಬರೆಯುತ್ತಿದ್ದ ಆ ಸೈಕಾಲಜಿ ಡೈರಿ ಮಾತ್ರ ಬಿದ್ದಿತ್ತು. ಆ ಡೈರಿಯ ಕೊನೆಯ ಪುಟದಲ್ಲಿ ಯಾರು ಬರೆದರೋ ಗೊತ್ತಿಲ್ಲ, ಆದರೆ ರಕ್ತದ ಅಕ್ಷರಗಳಲ್ಲಿ ಹೀಗಿತ್ತು.
200 ಕ್ಕೂ ಕಥೆಗಳನ್ನು ಬರೆದವನಿಗೆ ತನ್ನದೇ ಸಾವಿನ ಕಥೆಯನ್ನು ಮುಗಿಸಲು ಸಾಧ್ಯವಾಗಲಿಲ್ಲ. ಈಗ ಅವನೂ ಈ ಕೆರೆಯ ಮೌನದ ಒಂದು ಭಾಗ.
ಈ ಕಥೆಯನ್ನು ಓದಿದ ಮೇಲೆ ಯಾರಿಗಾದರೂ ಬೆನ್ನಿನ ಹಿಂದೆ ಯಾರೋ ನಿಂತಿದ್ದಾರೆ ಎಂಬ ಅನುಭವವಾದರೆ, ಅದು ರಾಕ್ಷಸ ತಾಲ್'ನ ಪ್ರಭಾವ.