The body is missing. in Kannada Thriller by Danger Writer books and stories PDF | ದೇಹ ಕಾಣೆಯಾಗಿದೆ

Featured Books
  • ದೇಹ ಕಾಣೆಯಾಗಿದೆ

    ಉಡುಪಿಯ ಆ ಹಳೆಯ ಓಣಿಯಲ್ಲಿ ಗಾಳಿ ಬೀಸುತ್ತಿರಲಿಲ್ಲ, ಬದಲಾಗಿ ಯಾರೋ ಮಂತ್...

  • ರಕ್ತ ಲಿಪಿಯ ಚಿರಂಜೀವಿ - 38

    ಅಜಂತಾದ ಕಲ್ಲುಗಳ ಕಾವ್ಯವನ್ನು ದಾಟಿ ಆದರ್ಶ್ ತನ್ನ ಹಳೆಯ ಹೆಚ್.ಎಫ್ ಡಿಲ...

  • ಹೆಲ್ಮೆಟ್

    ಮಂಗಳೂರಿನ ಕ್ಲಾಕ್ ಟವರ್ ಜಂಕ್ಷನ್ ಎಂದರೆ ಅದು ವಾಹನಗಳ ಸಾಗರ. ಸುಡುವ ಬಿ...

  • ರಕ್ತ ಲಿಪಿಯ ಚಿರಂಜೀವಿ - 37

    ಹೈದರಾಬಾದ್‌ನ ಬಿಸಿ ಗಾಳಿ ಮತ್ತು ಗೋಲ್ಕಂಡದ ಪ್ರತಿಧ್ವನಿಗಳನ್ನು ದಾಟಿ ಆ...

  • ಅನ್ನದ ಋಣ

    ಮಂಗಳೂರಿನ ಆ ಸುಡುವ ಏಪ್ರಿಲ್ ತಿಂಗಳ ಮಧ್ಯಾಹ್ನ. ರಸ್ತೆಗಳು ಬಿಸಿಯಿಂದ ಕ...

Categories
Share

ದೇಹ ಕಾಣೆಯಾಗಿದೆ

ಉಡುಪಿಯ ಆ ಹಳೆಯ ಓಣಿಯಲ್ಲಿ ಗಾಳಿ ಬೀಸುತ್ತಿರಲಿಲ್ಲ, ಬದಲಾಗಿ ಯಾರೋ ಮಂತ್ರಿಸಿದಂತೆ ಸ್ಥಬ್ದವಾಗಿತ್ತು. ಕೃಷ್ಣನ ಬಾಡಿಗೆ ಮನೆಯ ಗೋಡೆಗಳು ರಾತ್ರಿಯ ಕತ್ತಲಲ್ಲಿ ದೆವ್ವಗಳಂತೆ ಭಾಸವಾಗುತ್ತಿದ್ದವು. ಗೋಡೆಯ ಮೇಲಿನ ಹಳೆಯ ಗಡಿಯಾರ ಟಿಕ್ ಟಿಕ್ ಎನ್ನುತ್ತಾ ತನ್ನ ಅಂತಿಮ ಗುರಿಯತ್ತ ಸಾಗುತ್ತಿತ್ತು. ಸಮಯ ಸರಿಯಾಗಿ ರಾತ್ರಿ 2:22 ಅದೇ ಸಂಖ್ಯೆ, ಕೃಷ್ಣನ ಬದುಕನ್ನು ಕಾಡುತ್ತಿರುವ ಅದೇ ಏಂಜೆಲ್ ನಂಬರ್. ಕೃಷ್ಣ ಗಾಢ ನಿದ್ರೆಯಿಂದ ಎಚ್ಚರವಾದಾಗ ಮೈಯೆಲ್ಲಾ ಬೆವತು ಹೋಗಿತ್ತು. ಆದರೆ ಆ ಬೆವರಿನಲ್ಲಿ ಒಂದು ವಿಚಿತ್ರವಾದ ತಂಪು ಇತ್ತು.
ಅವನು ಹಾಸಿಗೆಯಿಂದ ಎದ್ದೇಳಲು ಪ್ರಯತ್ನಿಸಿದ. ಆದರೆ ಏನಿದು? ಅವನ ಕೈಕಾಲುಗಳಿಗೆ ಭಾರವೇ ಇಲ್ಲದಂತೆ ಭಾಸವಾಯಿತು. ಅವನು ನೆಲದ ಮೇಲೆ ಕಾಲಿಟ್ಟರೆ, ಪಾದಗಳು ನೆಲಕ್ಕೆ ತಾಕುತ್ತಿರಲಿಲ್ಲ. ಗಾಳಿಯಲ್ಲಿ ಒಂದು ಹೊಗೆಯ ತುಂಡಿನಂತೆ ಅವನು ತೇಲುತ್ತಿದ್ದ. ಗಾಬರಿಯಿಂದ ರೂಮಿನ ಮೂಲೆಯಲ್ಲಿದ್ದ ಹಳೆಯ ಕನ್ನಡಿಯನ್ನು ನೋಡಲು ಹೋದ. ಆ ಕನ್ನಡಿ ಅವನ ತಂದೆಯ ಕಾಲದ್ದು, ಯಾವಾಗಲೂ ಅವನ ಪ್ರತಿಬಿಂಬವನ್ನು ಸ್ಪಷ್ಟವಾಗಿ ತೋರಿಸುತ್ತಿತ್ತು. ಆದರೆ ಇಂದು ಕನ್ನಡಿಯಲ್ಲಿ ಏನೂ ಇರಲಿಲ್ಲ.
ಕನ್ನಡಿಯ ಒಳಗೆ ಅವನ ಹಿಂದಿರುವ ಗೋಡೆ ಕಾಣುತ್ತಿತ್ತು, ಅಲ್ಲಿ ನೇತುಹಾಕಿದ 'ಅಖಿಲ ಉಡುಪಿ ಬ್ರಹ್ಮಚಾರಿ ಸಂಘ'ದ ಲೋಗೋ ಕಾಣುತ್ತಿತ್ತು, ಟೇಬಲ್ ಮೇಲೆ ಅರ್ಧಕ್ಕೆ ನಿಂತಿದ್ದ ಸಹಿ ಹಾಕಿದ ಸಂಕಲ್ಪದ ಸ್ಕ್ರಿಪ್ಟ್ ಕಾಣುತ್ತಿತ್ತು. ಆದರೆ ಆರು ಅಡಿ ಎತ್ತರದ ಈ ಕೃಷ್ಣ ಮಾತ್ರ ಅಲ್ಲಿ ಮಾಯವಾಗಿದ್ದ. ಅಂದರೆ ಅವನ  ದೇಹ ಕಾಣೆಯಾಗಿತ್ತು. 
ಅವನು ಅಸಹಾಯಕನಾಗಿ ಮನೆಯಿಂದ ಹೊರಬಂದ. ಮಲ್ಪೆ ಕಡಲತೀರದ ಕಡೆಯಿಂದ ಬರುತ್ತಿದ್ದ ತಣ್ಣನೆಯ ಗಾಳಿ ಅವನ ಆತ್ಮವನ್ನು ಚುಚ್ಚುತ್ತಿತ್ತು. ದೂರದಲ್ಲಿ ಒಂದು ಬೈಕ್ ಸದ್ದು ಕೇಳಿಸಿತು. ಅದು ಅವನದೇ ಡೆಲಿವರಿ ಬೈಕ್. ಅದರ ಮೇಲೆ ಒಬ್ಬ ವ್ಯಕ್ತಿ ಕುಳಿತಿದ್ದ. ಅವನು ತನ್ನದೇ ಯೂನಿಫಾರ್ಮ್ ಧರಿಸಿದ್ದ, ತಲೆಗೆ ಹೆಲ್ಮೆಟ್ ಇತ್ತು. ಅವನು ನಿಧಾನವಾಗಿ ಅವನ ಮನೆಯ ಮುಂದೆ ಬಂದು ಬೈಕ್ ನಿಲ್ಲಿಸಿದ. ಹೆಲ್ಮೆಟ್ ತೆಗೆದಾಗ ಆವನ ಮೆದುಳಿನ ನರಗಳೇ ಸಡಿಲವಾದಂತೆ ಭಾಸವಾಯಿತು.
ಅಲ್ಲಿ ನಿಂತಿದ್ದ ಮುಖ ಅವನಿಗಷ್ಟೇ ಅಲ್ಲ, ಒಂದು ಖಾಸಗಿ ಪ್ರಾಜೆಕ್ಟ್‌ನಲ್ಲಿ ಅವನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಚಿರಪರಿಚಿತವಾಗಿತ್ತು. ಅದು ಮೊನ್ನೆ ತಾನೇ ಹೃದಯಾಘಾತದಿಂದ ಸಾವನ್ನಪ್ಪಿದ ಅವನ ಅದೇ ಸಹೋದ್ಯೋಗಿ, ಅವನ ಕಣ್ಣುಗಳಲ್ಲಿ ಜೀವವಿರಲಿಲ್ಲ, ಆದರೆ ಒಂದು ವಿಚಿತ್ರವಾದ ಹೊಳಪಿತ್ತು. ಅವನು ಕೃಷ್ಣನನ್ನು ಅಂದರೆ ಅವನ ಆತ್ಮವನ್ನು ನೋಡಿ ವಿಕಾರವಾಗಿ ನಕ್ಕ.
ಕೃಷ್ಣ, ಯಮ ಯಾವಾಗ ಪಿಕ್ ಅಪ್ ಮಾಡ್ತಾನೆ ಅಂತ ಯಾರಿಗೆ ಗೊತ್ತು ಅಂದೆ ಅಲ್ವಾ? ಇವತ್ತು ನಿನ್ನ ದೇಹವನ್ನು ಪಿಕ್ ಅಪ್ ಮಾಡೋಕೆ ನಾನೇ ಬಂದಿದ್ದೇನೆ. ಈ ದೇಹ ಇನ್ಮೇಲೆ ನಂದು, ಅಂದ. ಅವನು ಕೃಷ್ಣನ ದೇಹದ ಒಳಗೆ ಪರಕಾಯ ಪ್ರವೇಶ ಮಾಡಿದ್ದ. ಅಂದರೆ, ಸತ್ತವನು ಕೃಷ್ಣನ ದೇಹವನ್ನು ಕದ್ದು ಬದುಕುತ್ತಿದ್ದ, ಬದುಕಿರುವ ಕೃಷ್ಣ ದೇಹವಿಲ್ಲದೆ ಅಲೆದಾಡುತ್ತಿದ್ದ.
ಅವನು ಕೃಷ್ಣನ ದೇಹವನ್ನೇ ಚಲಾಯಿಸಿಕೊಂಡು ಕೃಷ್ಣನ ಪ್ರೇಮಿ ರಜನಿ  ಮನೆಯ ಕಡೆಗೆ ಹೊರಟನು. ಕೃಷ್ಣ ಅತೃಪ್ತ ಆತ್ಮದಂತೆ ಅವನನ್ನು ಹಿಂಬಾಲಿಸಿದ. ರಜಿನಿ ಮನೆಯ ಕಿಟಕಿ ಹತ್ತಿರ ಬಂದಿದ್ದಳು. ಅವಳು ಇಷ್ಟು ದಿನ ಅವನ ಮೆಸೇಜ್‌ಗಳಿಗೆ ರಿಪ್ಲೈ ಮಾಡದವಳು, ಇಂದು ಆ ಶವ ಧರಿಸಿದ್ದ ಕೃಷ್ಣನ ದೇಹವನ್ನು ಕಂಡು ಕಿರುನಗೆ ಬೀರಿದಳು. ಅವಳು ಆ ದೇಹದ ಕೈ ಹಿಡಿದು ಒಳಗೆ ಕರೆದಳು. ಕೃಷ್ಣ ಕಿರುಚಿದ ರಜಿನಿ ಅದು ನಾನಲ್ಲ,  ನನ್ನ ದೇಹವನ್ನು ಆ ಶವ ಕದ್ದಿದೆ ಆದರೆ ಅವನ ಧ್ವನಿ ಗಾಳಿಯಲ್ಲಿ ಕರಗುತ್ತಿತ್ತು.
ಒಳಗೆ ಹೋದ ನಂತರ ಕಂಡ ದೃಶ್ಯವಂತೂ ಭೀಕರವಾಗಿತ್ತು. ರಜಿನಿ ಹತ್ತಿರ ಹೋಗುತ್ತಿದ್ದಂತೆ ಆ ಸಹೋದ್ಯೋಗಿಯ ಮುಖ ಕಳಚಿ ಬಿದ್ದಿತು. ಅವನ ಒಳಗೆ ಕೃಷ್ಣ ಬರೆಯುತ್ತಿದ್ದ ಸಿದ್ಧನ ಪಾತ್ರವೇ ಕುಳಿತಿತ್ತು ಸಿದ್ಧ ಹೇಳಿದ, ಕೃಷ್ಣ ನೀನು ಕಥೆ ಬರೆಯುವಾಗ ನನ್ನನ್ನು ಕ್ರೂರವಾಗಿ ಕೊಂದಿದ್ದೀಯಾ. ಈಗ ನಿನ್ನ ದೇಹದ ಮೂಲಕ ನಾನು ಮತ್ತೆ ಬದುಕುತ್ತಿದ್ದೇನೆ. ಇವತ್ತು ನಿನ್ನ ಅಕ್ಷರಗಳು ಸಾಯುತ್ತವೆ, ಈ ಸಿದ್ಧ ಮಾತ್ರ ಬದುಕುತ್ತಾನೆ.
ರಜಿನಿ ಒಂದು ಹರಿತವಾದ ಚಾಕು ತೆಗೆದು ಆ ದೇಹದ ಬೆನ್ನಿಗೆ ಚುಚ್ಚಿದಳು. ರಕ್ತ ಚಿಮ್ಮಿತು. ಆ ರಕ್ತ ಕೃಷ್ಣನ ಆತ್ಮದ ಮೇಲೆ ಬೀಳುತ್ತಿರುವಂತೆ ಅವನಿಗನ್ನಿಸಿತು. ರಜಿನಿ ಕೃಷ್ಣನ ಆತ್ಮದ ಕಡೆ ನೋಡಿ ನಕ್ಕಳು.  ಕೃಷ್ಣ ನಿನ್ನ ದೇಹ ಕಾಣೆಯಾಗಿದ್ದಲ್ಲ, ನಾನು ಮೊದಲೇ ಅದನ್ನು ಕದ್ದು ಈ ಸಿದ್ಧನಿಗೆ ಕೊಟ್ಟಿದ್ದೆ. ಯಾಕೆಂದರೆ ನೀನು ಬರೆಯುತ್ತಿರುವ ಸಹಿ ಹಾಕಿದ ಸಂಕಲ್ಪಕ್ಕೆ ಜೀವಂತ ರಕ್ತದ ಅವಶ್ಯಕತೆಯಿತ್ತು. ಈಗ ನೀನು ಕೇವಲ ಒಂದು ಅನಾಮಧೇಯ ಅಕ್ಷರ.
ಕೃಷ್ಣನಿಗೆ ಆಗ ಅರ್ಥವಾಯಿತು ಅವನು ಬರೆಯುತ್ತಿದ್ದ ಕಥೆಯೇ ಅವನನ್ನು ನುಂಗಿ ಹಾಕುತ್ತಿದೆ. ಅವನು ಸೃಷ್ಟಿಸಿದ ಪಾತ್ರಗಳೇ ಅವನನ್ನು ಬಲಿ ತೆಗೆದುಕೊಂಡಿವೆ. ಕೃಷ್ಣ ಕೇವಲ ಒಂದು ಅಕ್ಷರವಾಗಿ ಅಲ್ಲಿ ಉಳಿದಿದ್ದ. ಆ ರಜಿನಿ, ಆ ಸತ್ತ ಗೆಳೆಯ, ಆ ಸಿದ್ಧ. ಎಲ್ಲರೂ ಅವನನ್ನು ಮುಗಿಸಲು ಮೊದಲೇ ಸಂಚು ರೂಪಿಸಿದ್ದರು.
ಅವನು ಅಲ್ಲಿಂದ ಓಡಿ ಮಲ್ಪೆ ಸಮುದ್ರದ ಹತ್ತಿರ ಬಂದ. ಸಮುದ್ರದ ಅಲೆಗಳು ಅವನನ್ನು ಕರೆಯುತ್ತಿದ್ದವು. ಅಲೆಗಳ ಮಧ್ಯೆ ಒಂದು ದೊಡ್ಡ ಆಕೃತಿ ಕಾಣಿಸಿತು. ಅದು ಸಾಕ್ಷಾತ್ ಯಮಧರ್ಮರಾಯನಲ್ಲ, ಬದಲಾಗಿ ಅವನ ಅಮ್ಮ ಅಮ್ಮನ ಕೈಯಲ್ಲಿ ಒಂದು ಲೇಖನಿಯಿತ್ತು. ಮಗನೇ, ಬರಹಗಾರನಿಗೆ ಸಾವಿಲ್ಲ. ನಿನ್ನ ದೇಹವನ್ನು ಅವರು ಕದ್ದಿರಬಹುದು, ಆದರೆ ನಿನ್ನ ಅಕ್ಷರಗಳನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಬರೆ, ನಿನ್ನ ಈ ಸಾವಿನ ಕಥೆಯನ್ನೇ ಬರೆ ಎಂದರು.
ಅವನು ಕತ್ತಲಲ್ಲಿ ಕುಳಿತು ಅವನ ಬೆರಳುಗಳನ್ನೇ ಲೇಖನಿಯನ್ನಾಗಿ ಮಾಡಿ ಗಾಳಿಯಲ್ಲಿ ಬರೆಯಲು ಶುರು ಮಾಡಿದ.  ಅವನು ಬರೆದ ಪ್ರತಿಯೊಂದು ಅಕ್ಷರವೂ ಬೆಂಕಿಯಂತೆ ಜ್ವಲಿಸತೊಡಗಿತು. ರಜಿನಿಯ ಮನೆಯಲ್ಲಿದ್ದ ಅವನ ದೇಹ ಮತ್ತೆ ಚಲಿಸಲು ಶುರು ಮಾಡಿತು. ಸಿದ್ಧನ ಪಾತ್ರ ಅವನ ದೇಹದಿಂದ ಹೊರಬಂದು ಕಿರುಚತೊಡಗಿತು. ಅಕ್ಷರಗಳ ಶಕ್ತಿ ದೇಹವನ್ನು ಮತ್ತೆ ಶುದ್ಧೀಕರಿಸುತ್ತಿತ್ತು.

ಈಗ ಈ ಕಥೆಯನ್ನು ಓದುತ್ತಿರುವವರು, ನೀವು ಮೊಬೈಲ್ ಸ್ಕ್ರೀನ್ ಮೇಲೆ ನಿಮ್ಮ ಪ್ರತಿಬಿಂಬ ಕಾಣುತ್ತಿದೆಯೇ? ಒಮ್ಮೆ ಸರಿಯಾಗಿ ನೋಡಿ. ಯಾಕೆಂದರೆ ಈಗ ಈ ಕಥೆಯನ್ನು ಓದುತ್ತಿರುವ ನೀವು ಅಸಲಿ ಅಲ್ಲ. ಅಸಲಿ ನೀವು ಯಾವಾಗಲೋ ದೇಹ ಕಳೆದುಕೊಂಡು ಈ ಅಕ್ಷರಗಳ ಒಳಗೆ ಸೇರಿಕೊಂಡಿದ್ದೀರಿ. ನೀವು ಈಗ ಕನ್ನಡಿಯ ಮುಂದೆ ಹೋದರೆ ನಿಮ್ಮ ದೇಹವೂ ಅಲ್ಲಿ ಇರುವುದಿಲ್ಲ.
ಯಾಕೆಂದರೆ ಈ ಕಥೆಯನ್ನು ಪೂರ್ತಿ ಓದಿ ಮುಗಿಸಿದ ತಕ್ಷಣ, ನಿಮ್ಮ ಹಿಂದಿನ ಬಾಗಿಲು ತೆರೆಯುತ್ತದೆ. ಅಲ್ಲಿ ನಿಂತಿರುವ ಡೆಲಿವರಿ ಬಾಯ್ ಕೈಯಲ್ಲಿ ಪಾರ್ಸೆಲ್ ಇಲ್ಲ, ಬದಲಾಗಿ ನಿಮ್ಮ ದೇಹದ ಬದಲಿಗೆ ಸಿದ್ಧನ ಆತ್ಮವನ್ನು ಕೊಡಲು ಬಂದಿದ್ದಾನೆ. ಪಿಕ್ ಅಪ್ ಮುಗಿಯಿತು, ಈಗ ಡೆಲಿವರಿ ನಿಮ್ಮ ಸರದಿ.