Dog intelligence in Kannada Moral Stories by Danger Writer books and stories PDF | ನಾಯಿ ಬುದ್ಧಿ

Featured Books
Categories
Share

ನಾಯಿ ಬುದ್ಧಿ

ಉಡುಪಿಯ ಆ ಹಳೆಯ ಮೀನು ಮಾರ್ಕೆಟ್‌ನ ಹಿಂಭಾಗದ ಓಣಿಗಳಲ್ಲಿ ಗಾಳಿ ಬೀಸುತ್ತಿರಲಿಲ್ಲ, ಬದಲಾಗಿ ಅಲ್ಲಿ ಅಸಹ್ಯದ ವಾಸನೆ ಘನೀಕರಿಸುತ್ತಿತ್ತು. ಕೊಳೆತ ಮೀನಿನ ಚೂರುಗಳು, ಹರಿದು ಬಿದ್ದ ಪ್ಲಾಸ್ಟಿಕ್ ಹಾಳೆಗಳು ಮತ್ತು ಸಮಾಜ ಎಸೆದ ಕಸದ ರಾಶಿಯ ನಡುವೆ ಒಂದು ಸಿಮೆಂಟ್ ಪೈಪ್ ಇತ್ತು. ಆ ಪೈಪ್‌ನ ಒಳಗೇ ಬಾಬಣ್ಣನ ಸಾಮ್ರಾಜ್ಯ. ಬಾಬಣ್ಣ ಅಂದರೆ ಈ ಊರಿಗೆ ಒಬ್ಬ ಹುಚ್ಚ, ಒಬ್ಬ ಭಿಕ್ಷುಕ ಅಥವಾ ಅವರಿಗಿಂತ ಕೀಳಾಗಿ ಕಂಡರೆ ಒಬ್ಬ ನಾಯಿ ಬುದ್ಧಿಯವನು ಅವನ ಮೈಮೇಲೆ ಸದಾ ಒಂದು ಹಳೆಯ, ಗಲೀಜಾದ ಟಾವೆಲ್ ಸುತ್ತಿಕೊಂಡಿರುತ್ತಿತ್ತು. ಅದೇ ಅವನ ಬಟ್ಟೆ, ಅದೇ ಅವನ ಹೊದಿಕೆ, ಅದೇ ಅವನ ಮರ್ಯಾದೆ. ಅವನ ಸುತ್ತಲೂ ಯಾವಾಗಲೂ ನಾಲ್ಕೈದು ಬೀದಿ ನಾಯಿಗಳಿರುತ್ತಿದ್ದವು. ಅವುಗಳ ಜೊತೆ ಬಾಬಣ್ಣ ಮಾತಾಡುತ್ತಿದ್ದಾಗ ಜನ ನಗುತ್ತಿದ್ದರು, ನೋಡ್ರೋ, ಆ ನಾಯಿಗಳಿಗೆ ಈ ನಾಯಿ ಪಾಠ ಮಾಡ್ತಿದೆ ಎಂದು ಲೇವಡಿ ಮಾಡುತ್ತಿದ್ದರು. ಆದರೆ ಬಾಬಣ್ಣನಿಗೆ ಆ ನಾಯಿಗಳ ಕಣ್ಣಿನಲ್ಲಿ ಕಾಣುವ ಪ್ರೀತಿ, ಬೆಳಿಗ್ಗೆ ಟೈ ಹಾಕಿ ಹೋಗುವ ಮನುಷ್ಯರ ಕಣ್ಣಿನಲ್ಲಿ ಕಾಣುತ್ತಿರಲಿಲ್ಲ.
ಅಂದು ಉಡುಪಿಯ ದೈವಸ್ಥಾನದ ದೊಡ್ಡ ಹಬ್ಬ. ಊರ ಸಾಹುಕಾರ ಶಂಕರಪ್ಪ ತನ್ನ ಮಗ ಚಿನ್ಮಯನ ಜೊತೆ ಬಿಳಿ ರೇಷ್ಮೆ ಪಂಚೆ ಉಟ್ಟು, ಕೈಯಲ್ಲಿ ಬೆಳ್ಳಿಯ ಬೆತ್ತ ಹಿಡಿದು ಅಹಂಕಾರದಿಂದ ನಡೆಯುತ್ತಿದ್ದರು. ಅವರು ನಡೆಯುವ ಹಾದಿಯಲ್ಲಿ ಮನುಷ್ಯರಿಗಿಂತ ಹೆಚ್ಚಾಗಿ ಅವರ ಚಿನ್ನದ ಉಂಗುರಗಳು ಮಿನುಗುತ್ತಿದ್ದವು. ಬಾಬಣ್ಣನ ಅಚ್ಚುಮೆಚ್ಚಿನ ಕಪ್ಪು ನಾಯಿ ಕರಿಯ ಹಸಿವಿನಿಂದ ಅತ್ತಿತ್ತ ಓಡುತ್ತಿದ್ದಾಗ ಅಕಸ್ಮಾತ್ ಸಾಹುಕಾರರ ಬಿಳಿ ಪಂಚೆಗೆ ಸ್ವಲ್ಪ ಕೆಸರು ಮೆತ್ತಿತು. ಅಷ್ಟೇ ಸಾಹುಕಾರನ ಒಳಗಿದ್ದ ಅಹಂಕಾರದ ಜ್ವಾಲೆ ಭುಗಿಲೆದ್ದಿತು. ತನ್ನ ಬೆಳ್ಳಿಯ ಬೆತ್ತದಿಂದ ಕರಿಯನ ಬೆನ್ನಿಗೆ ರಕ್ತ ಬರುವಂತೆ ಹೊಡೆದರು. ಕರಿಯ ನರಳಿ ನೆಲಕ್ಕೆ ಬಿದ್ದಾಗ, ಸಾಹುಕಾರ ಬಾಬಣ್ಣನ ಹತ್ತಿರ ಬಂದು ಅವನ ಕೆನ್ನೆಗೆ ಬಾರಿಸಿದರು. ಲೋ ಹಲಕಟ್ ಈ ನಾಯಿ ಬುದ್ಧಿಯನ್ನ ಬಿಡೋದಿಲ್ವಾ ನೀನು? ಮನುಷ್ಯರು ನಡಿಯೋ ಜಾಗಕ್ಕೆ ಈ ಹೊಲಸು ಪ್ರಾಣಿಗಳನ್ನ ಯಾಕೆ ಬಿಡ್ತೀಯಾ? ನಿನ್ನ ಮತ್ತು ಈ ಪ್ರಾಣಿಗಳ ಜನ್ಮಕ್ಕೆ ಬೆಂಕಿ ಹಾಕ ಎಂದು ಎಲ್ಲರ ಮುಂದೆ ಉಗುಳಿದರು. ಬಾಬಣ್ಣ ನೆಲದಿಂದ ಎದ್ದು ನಿಂತು, ತನ್ನ ಕೆನ್ನೆಯ ಮೇಲಿನ ರಕ್ತವನ್ನು ಒರೆಸಿಕೊಂಡು ಅಂದ, ಸಾಹುಕಾರ್ರೇ, ನೀವು ಹೊಡೆದಿದ್ದು ನನ್ನನ್ನಲ್ಲ, ಈ ನಾಯಿಯ ನಿಷ್ಠೆಯನ್ನ. ಈ ನಾಯಿಗೆ ನೀವು ಹೊಡೆದ ಬೆತ್ತದ ಬೆಲೆ ಗೊತ್ತು, ಆದ್ರೆ ನಿಮ್ಮ ಅಹಂಕಾರದ ಬೆಲೆ ಗೊತ್ತಿಲ್ಲ. ಕಾಲ ಯಾರಿಗೂ ಕಾಯಲ್ಲ, ನೆನಪಿಡಿ ಎಂದ. ಊರಿನ ಜನರೆಲ್ಲ ಬಾಬಣ್ಣನನ್ನ ನೋಡಿ ಆಡಿಕೊಂಡರು, ಸಾಹುಕಾರ ಗತ್ತುಗೆಡದೆ ಹೊರಟುಹೋದರು.
ಅಂದು ರಾತ್ರಿ ಉಡುಪಿಯಲ್ಲಿ ಪ್ರಳಯವೇ ಶುರುವಾಯಿತು. ಅರಬ್ಬೀ ಸಮುದ್ರ ಆರ್ಭಟಿಸುತ್ತಿದ್ದರೆ, ಮೇಲಿಂದ ಆಕಾಶವೇ ಹರಿದು ಬಿದ್ದಂತೆ ಮಳೆ ಸುರಿಯುತ್ತಿತ್ತು. ರಾತ್ರಿ ಎರಡು ಗಂಟೆಯ ಸಮಯ. ಸಾಹುಕಾರ ಶಂಕರಪ್ಪನವರ ಬೃಹತ್ ಬಂಗಲೆಯ ಹಿಂಭಾಗದ ಗುಡ್ಡ ಕುಸಿಯಲು ಶುರು ಮಾಡಿತು. ಬೆಳಿಗ್ಗೆ ಶೋಕಿ ಮಾಡಿದ್ದ ಆ ಬಿಳಿ ಬಂಗಲೆ ಕ್ಷಣಾರ್ಧದಲ್ಲಿ ಮಣ್ಣಿನ ರಾಶಿಯಾಗಿ ಬದಲಾಯಿತು. ಸಾಹುಕಾರ ಮತ್ತು ಅವರ ಹೆಂಡತಿ ಹೇಗೋ ಪ್ರಾಣಾಪಾಯದಿಂದ ಹೊರಬಂದರು, ಆದರೆ ಅವರ ಕಣ್ಣುಗಳು ಹುಡುಕುತ್ತಿದ್ದುದು ಮಗ ಚಿನ್ಮಯನನ್ನು. ಮಣ್ಣಿನ ರಾಶಿಯ ಅಡಿಯಲ್ಲಿ ಬಂಗಲೆಯ ಒಂದು ಭಾಗ ಪೂರ್ತಿ ಹೂತುಹೋಗಿತ್ತು. ಮಳೆ ಸುರಿಯುತ್ತಿತ್ತು, ಕತ್ತಲೆ ಆವರಿಸಿತ್ತು. ಮಗುವಿನ ಧ್ವನಿ ಕೇಳುತ್ತಿರಲಿಲ್ಲ. ಸಾಹುಕಾರ ಅರಚಿದ, ಕಿರುಚಿದ. ಅಲ್ಲಿ ನೂರಾರು ಮನುಷ್ಯರು ಜಮಾಯಿಸಿದ್ದರು. ಆದರೆ ಆ ಮಣ್ಣಿನ ರಾಶಿಯೊಳಗೆ ಕೈ ಹಾಕಲು ಯಾರಿಗೂ ಧೈರ್ಯವಿರಲಿಲ್ಲ. ಯಾರಾದರೂ ನನ್ನ ಮಗನನ್ನು ಬದುಕಿಸಿ, ನನ್ನ ಪೂರ್ತಿ ಆಸ್ತಿ ಬರೆದುಕೊಡ್ತೀನಿ ಎಂದು ಸಾಹುಕಾರ ಮನುಷ್ಯರ ಕಾಲು ಹಿಡಿದು ಬೇಡಿಕೊಂಡ. ಆದರೆ ಮನುಷ್ಯರಿಗೆ ಆಸ್ತಿಗಿಂತ ಸ್ವಂತ ಪ್ರಾಣದ ಮೇಲೆ ಆಸೆ ಹೆಚ್ಚಿತ್ತು. ಮನುಷ್ಯ ಬುದ್ಧಿ ಅಂದರೆ ಅದೇ ಸ್ವಾರ್ಥ ಮತ್ತು ಅಹಂಕಾರ.
ಆ ಭೀಕರ ಕತ್ತಲಲ್ಲಿ, ಮಳೆಯ ಹನಿಯನ್ನು ಸೀಳಿಕೊಂಡು ಒಬ್ಬ ವ್ಯಕ್ತಿ ಬಂದ. ಅದು ಬಾಬಣ್ಣ. ಅವನ ಹಿಂದೆ ಬೆಳಿಗ್ಗೆ ಬೆತ್ತದ ಏಟು ತಿಂದಿದ್ದ ಅದೇ ಕರಿಯ ನಾಯಿ ಇತ್ತು. ಕರಿಯನಿಗೆ ಆ ಮಗುವಿನ ವಾಸನೆ ಗೊತ್ತಿತ್ತು. ಅದು ಮಣ್ಣಿನ ರಾಶಿಯ ಮೇಲೆ ಹಾರಿ ತನ್ನ ಗಾಯಗೊಂಡ ಕಾಲುಗಳಿಂದ ಮಣ್ಣನ್ನು ಅಗೆಯಲು ಶುರು ಮಾಡಿತು. ಸಾಹುಕಾರನಿಗೆ ಒಂದು ಕ್ಷಣ ಅವಮಾನವಾಯಿತು, ಆದರೆ ಪುತ್ರವ್ಯಾಮೋಹ ಅವನನ್ನು ಮೌನವಾಗಿಸಿತು. ಕರಿಯ ಒಂದು ಜಾಗದಲ್ಲಿ ನಿಂತು ಗಟ್ಟಿಯಾಗಿ ಬೊಗಳಿತು. ಬಾಬಣ್ಣ ಹಠಕ್ಕೆ ಬಿದ್ದವನಂತೆ ತನ್ನ ಬರಿಗೈಯಿಂದ ಮಣ್ಣನ್ನು ಸರಿಸತೊಡಗಿದ. ಕಬ್ಬಿಣದ ತುಂಡುಗಳು ಅವನ ಕೈಗಳನ್ನು ಸೀಳುತ್ತಿದ್ದವು, ರಕ್ತ ಹರಿಯುತ್ತಿತ್ತು, ಆದರೂ ಅವನ ಸಂಕಲ್ಪ ಬಂಡೆಯಂತೆ ಗಟ್ಟಿಯಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಆ ನಾಯಿ ಮತ್ತು ಆ ಮನುಷ್ಯ ಮೃತ್ಯುವಿನ ಜೊತೆ ಹೋರಾಡಿದರು. ಕೊನೆಗೆ ಮಣ್ಣಿನ ಅಡಿಯಲ್ಲಿದ್ದ ಒಂದು ಕಿಟಕಿ ಸಂದಿನಿಂದ ಮಗುವನ್ನು ಹೊರಕ್ಕೆ ಎಳೆದಾಗ ಮಗುವಿನ ನಾಡಿಬಡಿತ ಕ್ಷೀಣಿಸಿತ್ತು. ಮಗುವನ್ನು ಸಾಹುಕಾರನ ಕೈಗೆ ನೀಡಿದ ಬಾಬಣ್ಣ, ಮಳೆಯಲ್ಲಿ ನೆನೆಯುತ್ತಾ ಹಣ್ಣಾಗಿ ಕುಳಿತಿದ್ದ. 
ಮಾರನೆಯ ದಿನ ಊರಿನ ಪಂಚಾಯಿತಿ ಕಟ್ಟೆಯ ಮೇಲೆ ಇಡೀ ಊರೇ ಸ್ತಬ್ಧವಾಗಿತ್ತು. ಸಾಹುಕಾರ ಶಂಕರಪ್ಪ ತಾನು ಬೆಳಿಗ್ಗೆ ಬಡಿದಿದ್ದ ಅದೇ ಬಾಬಣ್ಣನ ಕಾಲಿಗೆ ಬಿದ್ದು ಅಳುತ್ತಿದ್ದರು. ಬಾಬಣ್ಣ, ನನ್ನನ್ನು ಕ್ಷಮಿಸು. ಇಡೀ ಊರಿದ್ದರೂ ನನ್ನ ಮಗನನ್ನು ಕಾಪಾಡಲು ಯಾರೂ ಬರಲಿಲ್ಲ. ಆದರೆ ನಾನು ಹೊಡೆದ ನಾಯಿ ಮತ್ತು ನಾನು ಉಗುಳಿದ ನೀನು ನನ್ನ ಪ್ರಾಣ ಉಳಿಸಿದ್ರಿ. ಈ ಮನುಷ್ಯ ಬುದ್ಧಿಗಿಂತ ನಿನ್ನ ನಾಯಿ ಬುದ್ಧಿಯೇ ಎಷ್ಟೋ ಪಟ್ಟು ಮೇಲು ಎಂದು ಗೋಳಾಡಿದರು. ಬಾಬಣ್ಣ ತನ್ನ ಮೈಮೇಲಿದ್ದ ಅದೇ ಹರಿದ ಟಾವೆಲ್‌ನಿಂದ ಮಗುವಿನ ಮೈಮೇಲಿದ್ದ ಮಣ್ಣನ್ನು ಒರೆಸುತ್ತಾ ಸಾಹುಕಾರನ ಕಣ್ಣುಗಳಲ್ಲಿ ಕಣ್ಣಿಟ್ಟು ಹೇಳಿದ, ಸಾಹುಕಾರ್ರೇ, ನೀವು ಹೊಡೆದಾಗಲೂ ಈ ನಾಯಿ ನಿಮ್ಮ ಮೇಲೆ ದ್ವೇಷ ಸಾಧಿಸಲಿಲ್ಲ, ಯಾಕೆ ಗೊತ್ತಾ? ಇದಕ್ಕೆ ನಾಯಿ ಬುದ್ಧಿ ಇದೆ. ಅದಕ್ಕೆ ನಿಷ್ಠೆ ಮಾತ್ರ ಗೊತ್ತು. ನೀವು ಪ್ರಾಣ ಉಳಿಸಿ ಅಂತ ಹಣ ಕೊಡೋಕೆ ಬಂದಾಗ ನಿಮ್ಮ ಜೊತೆಗಿದ್ದ ಮನುಷ್ಯರು ಯಾರೂ ಬರಲಿಲ್ಲ, ಯಾಕೆ ಗೊತ್ತಾ? ಅವರಿಗೆ ಮನುಷ್ಯ ಬುದ್ಧಿ ಇದೆ. ಅವರಿಗೆ ಸ್ವಾರ್ಥ ಮಾತ್ರ ಗೊತ್ತು. ಈಗ ನೋಡಿ ಸಾಹುಕಾರ್ರೇ,  ಈ ಹರಿದ ಟಾವೆಲ್ ಈಗ ನಿಮ್ಮ ಮಗನ ಮೈಮೇಲಿನ ಕೊಳೆಯನ್ನು ಒರೆಸುತ್ತಿದೆ. ನಿಮ್ಮ ರೇಷ್ಮೆ ಪಂಚೆಗಿಂತ ಮನುಷ್ಯತ್ವ ಇರೋ ಈ ಟಾವೆಲ್ ದೊಡ್ಡದು ಅಲ್ವಾ? ಸಾಹುಕಾರನ ಅಹಂಕಾರ ಅಕ್ಷರಶಃ ಟಾವೆಲ್ ಸುತ್ತಿ ಹೊಡೆದ ಹಾಗೆ ಚೂರಾಗಿ ಹೋಗಿತ್ತು.
ಬಾಬಣ್ಣ ತನ್ನ ನಾಯಿಗಳ ಜೊತೆ ಅನಾಮಧೇಯನಾಗಿ ಅದೇ ಮೀನು ಮಾರ್ಕೆಟ್‌ನ ಓಣಿಯೊಳಗೆ ನಡೆದು ಹೋದ. ಅಂದಿನಿಂದ ಆ ಊರಿನಲ್ಲಿ ನಾಯಿ ಬುದ್ಧಿ ಎನ್ನುವ ಪದ ಒಂದು ಗೌರವದ ಸಂಕೇತವಾಯಿತು. ಒಬ್ಬ  Writer' ನ ಕಥೆಯಲ್ಲಿ ಸಾವು ಬಂದು ಹೋದರೂ, ಮನುಷ್ಯತ್ವದ ಪಾಠ ಮಾತ್ರ ಶಾಶ್ವತವಾಗಿ ಉಳಿದಿತ್ತು.