ಕೊಡಗಿನ ಅಂಚಿನಲ್ಲಿದ್ದ ಆ ಹಳೆಯ ಕಲ್ಯಾಣ ಮಂಟಪವು, ಯಾವುದೋ ದೀರ್ಘಕಾಲದ ಮೌನ ಮತ್ತು ಅಗೋಚರ ಶಕ್ತಿಯನ್ನು ಹೊತ್ತು ತರುತ್ತಿತ್ತು. ಸುತ್ತಲೂ ದಟ್ಟವಾದ ಕಾಡು, ಎತ್ತರದ ಮರಗಳು ಮನುಷ್ಯನ ಅಸ್ತಿತ್ವವನ್ನೇ ನುಂಗಿಹಾಕುವಷ್ಟು ಗಾಢವಾಗಿದ್ದವು. ವಿಕ್ರಮ್, ಆಕಾಶ್, ಸಂಜಯ್ ಮತ್ತು ಸಂದೀಪ್ ತಮ್ಮ ಗೆಳತಿಯರಾದ ಅನ್ವಿತಾ, ಕಾವ್ಯ, ನಿತಿಕಾ ಮತ್ತು ಶ್ರುತಿಯೊಂದಿಗೆ ಮದುವೆಯ ಸಡಗರದಲ್ಲಿ ಮೈಮರೆತಿದ್ದರು. ಆದರೆ, ಆ ನಗುವಿನ ಆಚೆಗೆ ಯಾವುದೋ ಒಂದು ಕರಾಳ ನೆರಳು ಹೊಂಚು ಹಾಕುತ್ತಿತ್ತು.
ಮದುವೆ ಮುಗಿದು ಫೋಟೋಗ್ರಾಫರ್ ಎಂಟು ಜನರನ್ನು ಮಂಟಪದ ಕಂಬಗಳ ಮುಂದೆ ಸಾಲಾಗಿ ನಿಲ್ಲಿಸಿದ. ಆತನ ಕೈಯಲ್ಲಿದ್ದ ಕ್ಯಾಮೆರಾ ದಿಢೀರನೆ ನಡುಗಲು ಆರಂಭಿಸಿತು. ಆತ ತಬ್ಬಿಬ್ಬಾಗಿ, ತನ್ನ ಡಿಜಿಟಲ್ ಸ್ಕ್ರೀನ್ ಅನ್ನು ಮತ್ತೆ ಮತ್ತೆ ಒರೆಸಿಕೊಂಡ. ಅಲ್ಲಿ ಎಂಟು ಮಂದಿ ಮಾತ್ರ ನಿಂತಿದ್ದರು, ಆದರೆ ಅವರ ಹಿಂದೆ, ಮರದ ನೆರಳಿನ ಮರೆಯಲ್ಲಿ, ಮುಖವೇ ಇಲ್ಲದ, ಬೂದಿ ಬಣ್ಣದ ಕಣ್ಣುಗಳಿರುವ ಆ ರಹಸ್ಯ ವ್ಯಕ್ತಿ ನಿಂತಿದ್ದ. ಫೋಟೋಗ್ರಾಫರ್ ಅಸಹಾಯಕನಾಗಿ, ಸಾರ್, ದಯವಿಟ್ಟು ಆ ಒಂಬತ್ತನೇ ವ್ಯಕ್ತಿಯನ್ನು ಪಕ್ಕಕ್ಕೆ ಸರಿಯಲು ಹೇಳಿ, ಎಂದ. ವಿಕ್ರಮ್ ನಗುತ್ತಾ ಆ ಜಾಗಕ್ಕೆ ಹೋಗಿ ನೋಡಿದಾಗ ಅಲ್ಲಿ ಏನೂ ಇರಲಿಲ್ಲ. ಆದರೆ, ಅವನ ಕುತ್ತಿಗೆಯ ಮೇಲೆ ಯಾರೋ ತಣ್ಣನೆಯ ಕೈಗಳನ್ನು ಇಟ್ಟ ಅನುಭವವಾಯಿತು. ಅದು ಮರಣದ ಸ್ಪರ್ಶದಂತೆ ಅವನ ಬೆನ್ನುಮೂಳೆಯನ್ನು ಸೀಳಿ ಹಾದುಹೋಯಿತು. ಆ ಕ್ಷಣದಿಂದ ಅವರ ಜೀವನದಲ್ಲಿ ಭಯದ ಕರಾಳ ಅಧ್ಯಾಯ ಶುರುವಾಗಿತ್ತು.
ಮದುವೆ ಮುಗಿಸಿ ಹೊರಡುವಾಗ, ಮಳೆ ಜೋರಾಗಿ ಬರುತ್ತಿತ್ತು. ಆದರೆ ದಟ್ಟವಾದ ಕತ್ತಲು ಆವರಿಸಿದ ಕಾರಣ ಈ ರಾತ್ರಿ ಹತ್ತಿರದ ರೆಸಾರ್ಟ್ ನಲ್ಲಿ ಉಳಿದು ಕೊಂಡು ಮಾರನೆಯ ದಿನ ಹೋಗೋಣ ಎಂದು ನಿರ್ಧರಿಸಿದ 8 ಜನ ಸ್ನೇಹಿತರಿಗೆ ಅದೇ ಸಮಯದಲ್ಲಿ ಕಾಡಿನ ದಟ್ಟ ಮರದ ಸಂದುಗಳಲ್ಲಿ ಅವರಿಗೆ ಕಂಡಿದ್ದು'ಬ್ಲ್ಯಾಕ್ ಫಾರೆಸ್ಟ್ ರೆಸಾರ್ಟ್'. ಆ ಕಟ್ಟಡವು ಹಳೆಯದಾಗಿ, ಬಾಗಿಲುಗಳು ಹಲ್ಲುಗಳಂತೆ ತೆರೆದುಕೊಂಡಿದ್ದವು. ಅಲ್ಲಿನ ಮ್ಯಾನೇಜರ್ ವೃದ್ಧನಾಗಿದ್ದ, ಅವನ ಚರ್ಮ ಒಣಗಿದ ಬೊಡ್ಡೆಯಂತೆ ಬಿರುಕುಬಿಟ್ಟಿತ್ತು. ಅವನು ಕೀಲಿಗಳನ್ನು ಹಂಚುವಾಗ ಸಂದೀಪ್‌ಗೆ ಆ ಕೀಲಿಗಳ ಮೇಲೆ ಅಂಟಿದ್ದ ಒಣಗಿದ ರಕ್ತದ ಕಲೆಗಳು ಕಂಡವು. ನೀವು ಒಂಬತ್ತು ಜನ ಬರಬೇಕಿತ್ತು, ಎಂಟು ಜನ ಬಂದಿದ್ದೀರಾ, ಸರಿ, ಉಳಿದದ್ದು ಆ ರಹಸ್ಯ ವ್ಯಕ್ತಿ ನೋಡಿಕೊಳ್ಳುತ್ತಾನೆ," ಎಂದ ಅವನ ದನಿ, ಕಾಡಿನ ಮೃಗಗಳ ಕೂಗಿನಂತೆ ಭೀಕರವಾಗಿತ್ತು. ಆತ ನೀಡಿದ ಕೀಲಿಗಳ ಮೇಲೆ ಅಂಟಿದ್ದ ಕೊಳೆತ ವಾಸನೆ, ಆ ರೆಸಾರ್ಟ್‌ನೊಳಗೆ ಪ್ರವೇಶಿಸದಂತೆ ಅವರನ್ನು ಎಚ್ಚರಿಸುತ್ತಿತ್ತು.
ರಾತ್ರಿ ಹನ್ನೆರಡು ಗಂಟೆಯಾಗುತ್ತಿದ್ದಂತೆ, ರೆಸಾರ್ಟ್‌ನ ಸ್ವರೂಪ ಬದಲಾಗತೊಡಗಿತು. ಕಾರಿಡಾರ್‌ಗಳು ಅನಂತವಾಗಿ ಉದ್ದವಾಗುತ್ತಾ, ಗೋಡೆಗಳ ಮೇಲಿನ ವರ್ಣಚಿತ್ರಗಳಲ್ಲಿನ ವ್ಯಕ್ತಿಗಳ ಕಣ್ಣುಗಳು ಅತ್ತಿತ್ತ ಚಲಿಸುತ್ತಿದ್ದವು. ಶ್ರುತಿ ತನ್ನ ಕೋಣೆಯಲ್ಲಿ ಕುಳಿತು ಫೋನ್ ನೋಡುತ್ತಿದ್ದಾಗ, ಅದರಲ್ಲಿ ಆ ಮದುವೆಯ ಫೋಟೋ ತಾನೇ ತಾನಾಗಿ ತೆರೆದುಕೊಂಡಿತು. ಈಗ ಆ ಕಪ್ಪು ಆಕೃತಿ ಎಂಟು ಜನರ ಹಿಂದೆ ಇರಲಿಲ್ಲ, ಅದು ನೇರವಾಗಿ ಫೋಟೋದ ಮುಂಭಾಗಕ್ಕೆ ಬಂದು ಶ್ರುತಿಯ ಭುಜದ ಮೇಲೆ ಕೈ ಹಾಕಿತ್ತು. ಭಯದಿಂದ ಕಿರುಚಲು ಹೋದವಳಿಗೆ ದನಿ ಬರಲಿಲ್ಲ, ಕೋಣೆಯ ಗೋಡೆಗಳು ಕಿರಿದಾಗುತ್ತಾ ಆಕೆಯನ್ನು ನುಂಗಲು ಪ್ರಯತ್ನಿಸುತ್ತಿದ್ದವು. ಆಕೆ ಬಾಗಿಲು ತೆರೆಯಲು ಪ್ರಯತ್ನಿಸಿದರೂ, ಅದು ಕಬ್ಬಿಣದಂತೆ ಜಮಾಯಿಸಿತ್ತು.
ಆಕಾಶ್ ಬಾತ್ರೂಮ್‌ಗೆ ಹೋದವನು ಮರಳಿ ಬರಲಿಲ್ಲ. ವಿಕ್ರಮ್ ಮತ್ತು ಸಂದೀಪ್ ಅವನ ಬಾತ್ ರೂಮ್ ಬಾಗಿಲನ್ನು ಒಡೆದಾಗ, ಅಲ್ಲಿ ಕಂಡ ದೃಶ್ಯ ಅವರ ಪ್ರಜ್ಞೆಯನ್ನು ತಪ್ಪಿಸಿತು. ಆಕಾಶ್‌ನ ಮೈಯಲ್ಲಿದ್ದ ಚರ್ಮವೆಲ್ಲವನ್ನೂ ಯಾರೋ ಸುಲಿದಿದ್ದರು. ಅವನ ರಕ್ತದಿಂದ ಗೋಡೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆದಿತ್ತು. 'ನನ್ನ ಬಾಯಾರಿಕೆ ಇನ್ನು ತೀರಲಿಲ್ಲ. ಸಂದೀಪ್ ಭಯದಿಂದ ಲೈಬ್ರರಿಯ ಹಳೆಯ ಡೈರಿಯನ್ನು ಹುಡುಕಿದ. ಅದರಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಕಾಣೆಯಾದ ಎಂಟು ಮಂದಿ ಸ್ನೇಹಿತರ ಪಟ್ಟಿ ಇತ್ತು, ಅದರಲ್ಲಿ ಇದ್ದ ಹೆಸರುಗಳು ಇಂದಿನ ಈ ಎಂಟು ಜನರದ್ದೇ ಆಗಿತ್ತು. ಇದು ಕಾಕತಾಳೀಯವಲ್ಲ, ಇದು ಆ ರಹಸ್ಯ ವ್ಯಕ್ತಿ ಹೂಡಿದ ಒಂದು ನಿರಂತರವಾದ ಶಾಪದ ಬಲೆ, ಅವರು ಬದುಕಲು ಬಂದಿದ್ದಲ್ಲ, ಬಲಿಯಾಗಲು ಬಂದಿದ್ದರು.
ನಿತಿಕಾ ತನ್ನ ಫೋನ್‌ನಲ್ಲಿ ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗ, ವಿಡಿಯೋದಲ್ಲಿ ತನ್ನ ಪಕ್ಕದಲ್ಲಿ ನಿಂತಿದ್ದ ಆ ರಹಸ್ಯ ವ್ಯಕ್ತಿ ಅವಳ ಕೂದಲನ್ನು ಸವರಿದ ದೃಶ್ಯವನ್ನು ಕಂಡು ಆಕೆ ಮೂರ್ಛೆ ಹೋದಳು. ಕಾವ್ಯಳ ರೂಪವೇ ಬದಲಾಗಿ ಹೋಗಿತ್ತು. ಅವಳು ಅಡುಗೆಮನೆಯಲ್ಲಿ ಅನ್ವಿತಾಳನ್ನು ಕಂಡಾಗ, ಅವಳ ಕೈಯಲ್ಲಿದ್ದ ಚಾಕು ಹಸಿ ಮಾಂಸವನ್ನು ಕತ್ತರಿಸುತ್ತಿತ್ತು. ಕಾವ್ಯಳ ದನಿಯೇ ಬದಲಾಗಿತ್ತು, ಆಕೆ ನಗುತ್ತಿದ್ದಾಗ ನೂರಾರು ಸತ್ತ ಆತ್ಮಗಳ ಆರ್ತನಾದ ಕೇಳಿಸುತ್ತಿತ್ತು. ಅವನು ನಿಮ್ಮನ್ನು ಕರೆಯುತ್ತಿದ್ದಾನೆ, ಆ ಬಲಿಪೀಠವೇ ನಿಮ್ಮ ಕೊನೆಯ ವಿಳಾಸ, ಎಂದು ಆಕೆ ಕೂಗಿದಾಗ, ಅವಳ ಕಣ್ಣುಗಳಲ್ಲಿ ಕಾವ್ಯ ಇರಲಿಲ್ಲ, ಆ ರಹಸ್ಯ ವ್ಯಕ್ತಿಯ ಕ್ರೌರ್ಯವಿತ್ತು. ರೆಸಾರ್ಟ್‌ನ ಪ್ರತಿಯೊಂದು ಮೂಲೆಯಲ್ಲೂ ಅವರ ಸ್ನೇಹಿತರ ಆರ್ತನಾದ ಮಾರ್ದನಿಸುತ್ತಿತ್ತು.
ವಿಕ್ರಮ್ ನೆಲದಡಿಯ ಬಲಿಪೀಠವನ್ನು ಕಂಡುಹಿಡಿದಾಗ, ಅಲ್ಲಿ ಉರಿಯುತ್ತಿದ್ದ ಏಳು ದೀಪಗಳು ಮಂಕಾಗಿದ್ದವು. ಒಂದು ದೀಪ ಆರಿಹೋಗಿತ್ತು - ಅದು ಆಕಾಶ್‌ನ ದೀಪ. ಅದು ಕೇವಲ ಹೋರಾಟವಾಗಿರಲಿಲ್ಲ, ಅವರ ಆತ್ಮಗಳ ಅಸ್ತಿತ್ವಕ್ಕಾಗಿ ನಡೆದ ಯುದ್ಧವಾಗಿತ್ತು. ವಿಕ್ರಮ್ ರೆಸಾರ್ಟ್‌ನ ಪವರ್ ಸ್ಟೇಷನ್ ಅನ್ನು ಸ್ಫೋಟಿಸಲು ಮುಂದಾದಾಗ, ಆ ಆತ್ಮ ಕಾವ್ಯಳ ದೇಹವನ್ನೇ ಆಯುಧವಾಗಿ ಬಳಸಿ ವಿಕ್ರಮ್‌ನನ್ನು ಬಿಗಿದಪ್ಪಿತು. ಆ ಸ್ಪರ್ಶ ಬದುಕಿನ ಕೊನೆಯ ಸ್ಪರ್ಶವಾಗಿತ್ತು. ಆ ರಹಸ್ಯ ವ್ಯಕ್ತಿ ವಿಕ್ರಮ್‌ನ ಕಿವಿಯಲ್ಲಿ ಪಿಸುಗುಟ್ಟಿದ ನೀವು ಸತ್ತ ಮೇಲೂ ನನ್ನ ಗುಲಾಮರಾಗುತ್ತೀರಿ. ಆದರೆ ವಿಕ್ರಮ್ ಹಿಂಜರಿಯಲಿಲ್ಲ, ತನ್ನ ಪ್ರಾಣವನ್ನು ಪಣಕ್ಕಿಟ್ಟು, ಆ ರೆಸಾರ್ಟ್‌ನ ಇಂಧನ ಟ್ಯಾಂಕ್‌ಗೆ ಬೆಂಕಿ ಹಚ್ಚಿದ. ಕೆನ್ನಾಲಿಗೆಗಳು ರೆಸಾರ್ಟ್‌ನ ಪ್ರತಿ ಕಂಬವನ್ನೂ ನುಂಗತೊಡಗಿದವು.
ಸೂರ್ಯೋದಯವಾಯಿತು, ರೆಸಾರ್ಟ್ ಬೂದಿಯಾಗಿತ್ತು. ನಾಲ್ವರು ಸ್ನೇಹಿತರು ಪ್ರಾಣ ಉಳಿಸಿಕೊಂಡು ರಸ್ತೆಗೆ ಬಂದರು. ಆದರೆ ಶ್ರುತಿ ಆ ಫೋಟೋವನ್ನು ಮತ್ತೆ ನೋಡಿದಾಗ, ಆ ಖಾಲಿ ಕುರ್ಚಿಗಳ ಮೇಲೆ ಎಂಟು ಜನರ ಕಣ್ಣುಗಳ ಜಾಗದಲ್ಲಿ ಕಪ್ಪು ರಂಧ್ರಗಳಿದ್ದವು. ಇಂದಿಗೂ ಆ ನಾಲ್ವರು ಸ್ನೇಹಿತರು ಮಧ್ಯಾಹ್ನದ ಬಿಸಿಲಿನಲ್ಲಿ ನಡೆಯುವಾಗ, ತಮ್ಮ ನೆರಳುಗಳನ್ನೇ ನೋಡಲು ಭಯಪಡುತ್ತಾರೆ. ಯಾಕೆಂದರೆ, ಅವರ ನೆರಳುಗಳು ಕೇವಲ ಅವರ ನೆರಳುಗಳಲ್ಲ, ಅವು ಆ ರಹಸ್ಯ ವ್ಯಕ್ತಿಯ ಪಾದದ ಗುರುತುಗಳು. ಅವರು ಬದುಕಿದ್ದಾರಾ ಅಥವಾ ಸತ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಸಿಗುವ ಮುನ್ನವೇ, ಅವರ ಫೋನ್‌ಗಳ ಸ್ಕ್ರೀನ್ ಮೇಲೆ ಮತ್ತೆ ಆ ಸಂದೇಶ ಬಂತು. ನಾನು ಸತ್ತಿಲ್ಲ, ನಾನು ನಿಮ್ಮ ನೆರಳಿನಲ್ಲಿದ್ದೇನೆ. ಮುಂದಿನ ಇಪ್ಪತ್ತು ವರ್ಷಗಳ ನಂತರ ಮತ್ತೆ ಸಿಗೋಣ.
ನಿಮ್ಮ ಮನೆಯಲ್ಲೂ ನಿಮ್ಮ ಹಿಂದೆ ಒಂದಕ್ಕಿಂತ ಹೆಚ್ಚು ನೆರಳು ಬೀಳುತ್ತಿದ್ದರೆ, ಎಚ್ಚರ, ಆ ರಹಸ್ಯ ವ್ಯಕ್ತಿ ನಿಮಗೂ ಅತಿಥಿಯಾಗಿದ್ದಾನೆ. ಈ ಕಥೆಯು ಕೇವಲ ಒಂದು ದುರಂತವಲ್ಲ, ಇದು ಮನುಷ್ಯನ ಮನಸ್ಸಿನ ಆಳದಲ್ಲಿ ಹುದುಗಿರುವ ಭಯದ ಪ್ರತಿರೂಪ. ರೆಸಾರ್ಟ್ ಮಾಯವಾಯಿತು, ಆದರೆ ಆ ರಹಸ್ಯ ವ್ಯಕ್ತಿ ಮಾತ್ರ ಎಂದಿಗೂ ಮಾಯವಾಗಲಿಲ್ಲ. ಅವನು ಈಗ ನಿಮ್ಮ ಪಕ್ಕದಲ್ಲೇ ನಿಂತು, ಈ ಕಥೆಯನ್ನು ಓದುತ್ತಿರುವ ನಿಮ್ಮನ್ನೇ ಗಮನಿಸುತ್ತಿದ್ದಾನೆ. ನಿಮ್ಮ ನೆರಳು ನಿಮ್ಮದಲ್ಲ, ಅದು ಆ ರಹಸ್ಯ ವ್ಯಕ್ತಿಯ ಅಸ್ತಿತ್ವ.