ಮಲೆನಾಡಿನ ಮಡಿಲಲ್ಲಿ ಪೂರ್ಣಾ ನದಿಯ ದಂಡೆಯ ಮೇಲೆ ನೆಲೆಸಿತ್ತು ‘ಶಿವಾಜಿಪುರ’ ಎಂಬ ಪುಟ್ಟ ಗ್ರಾಮ. ಆ ಊರಿನ ಮಧ್ಯದಲ್ಲಿದ್ದ ಪುರಾತನ ನಾಗಲಿಂಗೇಶ್ವರ ದೇವಾಲಯವೇ ಇಡೀ ಹಳ್ಳಿಯ ಜೀವನಾಡಿಯಾಗಿತ್ತು. ಕರಿಕಲ್ಲಿನಿಂದ ಕೆತ್ತಲ್ಪಟ್ಟಿದ್ದ ಆ ವಿಶಾಲ ದೇವಾಲಯದ ಗರ್ಭಗುಡಿಯಲ್ಲಿ ಕಪ್ಪು ಶಿಲೆಯ ಸ್ವಯಂಭೂ ಶಿವಲಿಂಗವಿತ್ತು. ಆ ಈಶ್ವರನಿಗೆ ಬೆಳಗಿನ ವೇಳೆಯಲ್ಲಿ ನೆರವೇರುವ ಪೂಜೆಯನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ. ಸೂರ್ಯನ ಮೊದಲ ರಶ್ಮಿ ನದಿಯ ನೀರನ್ನು ಮುಟ್ಟಿ, ದೇವಾಲಯದ ಕಳಸದ ಮೇಲೆ ಬಿದ್ದಾಗ ಮೂಡುವ ವಾತಾವರಣವೇ ರೋಮಾಂಚನಕಾರಿ.
ಆ ದೇವಾಲಯದಲ್ಲಿ ಅರ್ಚಕರಾಗಿದ್ದವರು ಶಂಭು ಶಾಸ್ತ್ರಿಗಳು. ಎಂಭತ್ತು ವರ್ಷ ವಯಸ್ಸಾಗಿದ್ದರೂ ಅವರ ಭಕ್ತಿಯಲ್ಲಿ, ಶಿವಸೇವೆಯಲ್ಲಿ ಎಳ್ಳಷ್ಟೂ ನಿಷ್ಠೆ ಕಡಿಮೆಯಾಗಿರಲಿಲ್ಲ. ಪ್ರತಿದಿನ ಸೂರ್ಯೋದಯಕ್ಕೂ ಮುನ್ನ ಎದ್ದು, ನದಿಯಲ್ಲಿ ಸ್ನಾನ ಮಾಡಿ, ಶುಭ್ರವಾದ ಮಡಿ ಬಟ್ಟೆಯುಟ್ಟು ಕಾಡಿನಂಚಿನಲ್ಲಿ ಅರಳುವ ರತ್ನಗಂಧಿ, ಬಿಲ್ವಪತ್ರೆ, ಮಲ್ಲಿಗೆ ಮತ್ತು ತಾವರೆ ಹೂವುಗಳನ್ನು ತಂದು ಈಶ್ವರನಿಗೆ ಅತ್ಯಂತ ಪ್ರೀತಿಯಿಂದ ಅಲಂಕಾರ ಮಾಡುತ್ತಿದ್ದರು. ಶಾಸ್ತ್ರಿಗಳ ಪ್ರಕಾರ, ಹೂವು ಎಂದರೆ ಬರಿ ರಸ-ರೂಪವಿರುವ ವಸ್ತುವಲ್ಲ, ಅದು ಜೀವಿಯ ಅಹಂಕಾರವನ್ನು ಕಳೆದು ದೇವರಿಗೆ ಸಮರ್ಪಿಸುವ ನಿರ್ಮಲ ಮನಸ್ಸಿನ ಸಂಕೇತ. ಅವರ ಶಾಂತ ಮುಖ ಮತ್ತು ಪ್ರಸನ್ನ ಕಂಠದಿಂದ ಹೊರಹೊಮ್ಮುತ್ತಿದ್ದ ಮಂತ್ರ ಘೋಷಗಳು ಇಡೀ ಊರಿಗೆ ಒಳಿತನ್ನು ತರುತ್ತವೆ ಎಂಬುದು ಹಳ್ಳಿಗರ ದೃಢ ನಂಬಿಕೆಯಾಗಿತ್ತು. ಅದೇ ಊರಿನಲ್ಲಿ ಧನಪಾಲ ಎಂಬ ಭಾರಿ ಆಸ್ತಿವಂತ ಜಮೀನ್ದಾರನಿದ್ದ. ನೂರಾರು ಎಕರೆ ಅಡಿಕೆ ತೋಟ, ಎತ್ತರದ ಮಹಲು, ಹತ್ತಾರು ಆಳು-ಕಾಳುಗಳಿದ್ದ ಧನಪಾಲನಿಗೆ ಹಣದ ಗರ್ವ ತಲೆಯಿಂದ ಕಾಲಿನವರೆಗೆ ತುಂಬಿತ್ತು. ಊರಿನಲ್ಲಿ ಏನೇ ಶುಭ ಕಾರ್ಯಗಳು ನಡೆದರೂ ತನ್ನ ಹೆಸರು ಮುಂಚೂಣಿಯಲ್ಲಿರಬೇಕು, ತಾನೇ ಶ್ರೇಷ್ಠ ಎನಿಸಿಕೊಳ್ಳಬೇಕು ಎಂಬುದು ಅವನ ದುರಾಸೆಯಾಗಿತ್ತು. ಧನಪಾಲನ ಕಣ್ಣಿಗೆ ಧರ್ಮ ಮತ್ತು ಭಕ್ತಿಗಳೂ ಸಹ ವ್ಯಾಪಾರದಂತೆಯೇ ಕಾಣಿಸುತ್ತಿದ್ದವು. ದುಡ್ಡಿದ್ದರೆ ಜಗತ್ತಿನಲ್ಲಿ ಎಂತಹ ದೇವರನ್ನಾದರೂ ಒಲಿಸಿಕೊಳ್ಳಬಹುದು ಎಂಬುದು ಅವನ ಕಟು ಅಹಂಕಾರದ ಮಾತಾಗಿತ್ತು.
ಒಂದು ದಿನ ಧನಪಾಲನಿಗೆ ತೀವ್ರವಾದ ಮೈಕೈ ನೋವು, ನಿದ್ರಾಹೀನತೆ ಮತ್ತು ವ್ಯಾಪಾರದಲ್ಲಿ ನಿರಂತರ ನಷ್ಟ ಉಂಟಾಗತೊಡಗಿತು. ವೈದ್ಯರ ಔಷಧಿಯಿಂದಲೂ ಗುಣವಾಗದಿದ್ದಾಗ, ಅವನು ಪ್ರಸಿದ್ಧ ಜೋಯಿಸರ ಬಳಿ ಹೋದ. ಜೋಯಿಸರು ಅವನ ಜಾತಕ ನೋಡಿ, ಧನಪಾಲರೇ, ನಿಮ್ಮ ಅಹಂಕಾರದಿಂದ ಹಿರಿಯರಿಗೆ ಮತ್ತು ಈಶ್ವರನಿಗೆ ಅಪಚಾರವಾಗಿದೆ. ನಾಗಲಿಂಗೇಶ್ವರನಿಗೆ ಮಹಾ ‘ಹೂವಿನ ಪೂಜೆ’ ನಡೆಸಿ. ಊರಿನಲ್ಲಿ ಯಾರೂ ಮಾಡಿರದಷ್ಟು ವಿಜೃಂಭಣೆಯಿಂದ ಪೂಜೆ ಮಾಡಿದರೆ ನಿನ್ನ ದೋಷಗಳೆಲ್ಲ ಪರಿಹಾರವಾಗುತ್ತವೆ ಎಂದು ಸಲಹೆ ನೀಡಿದರು. ಇದನ್ನೇ ದೊಡ್ಡ ಸವಾಲಾಗಿ ಸ್ವೀಕರಿಸಿದ ಧನಪಾಲ, ಇಡೀ ಜಿಲ್ಲೆಯಲ್ಲೇ ಯಾರೂ ಕಂಡುಕೇಳರಿಯದ ಹೂವಿನ ಪೂಜೆ ಮಾಡಲು ನಿರ್ಧರಿಸಿದ. ತಕ್ಷಣವೇ ತನ್ನ ಆಳುಗಳನ್ನು ನಗರಕ್ಕೆ ಕಳುಹಿಸಿ, ವಿದೇಶಿ ತಳಿಯ ದುಬಾರಿ ಗುಲಾಬಿ, ಆರ್ಕಿಡ್ಸ್, ಕಾರ್ನೇಷನ್ ಮತ್ತು ಕೃತಕ ಸುಗಂಧ ದ್ರವ್ಯಗಳನ್ನು ತರಿಸಲು ಭಾರಿ ಪ್ರಮಾಣದ ಹಣವನ್ನು ವ್ಯಯಿಸಿದ. ಮಂಗಳೂರು, ಬೆಂಗಳೂರುಗಳಿಂದ ನೂರಾರು ಬುಟ್ಟಿಗಳಲ್ಲಿ ಬಣ್ಣ ಬಣ್ಣದ ಹೂವುಗಳು ಬಂದಿಳಿದವು. ಊರ ಜನರೆಲ್ಲ ಆ ಹೂವುಗಳ ರಾಶಿಯನ್ನು ನೋಡಿ ಆಶ್ಚರ್ಯಚಕಿತರಾದರು. ಧನಪಾಲ ಮೀಸೆ ತಿರುಗಿಸುತ್ತಾ ಅರ್ಚಕ ಶಂಭು ಶಾಸ್ತ್ರಿಗಳ ಹತ್ತಿರ ಬಂದು ಗರ್ವದಿಂದ ಹೇಳಿದ ಶಾಸ್ತ್ರಿಗಳೇ, ನಾಳೆ ಸೋಮವಾರ. ಆ ಶಿವನಿಗೆ ನಾನು ಮಹಾ ಹೂವಿನ ಪೂಜೆ ಹಮ್ಮಿಕೊಂಡಿದ್ದೇನೆ. ನಗರದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅಪರೂಪದ ಹೂವುಗಳನ್ನು ತರಿಸಿದ್ದೇನೆ. ನಾಳೆ ಬೇರೆ ಯಾರ ಹೂವನ್ನೂ ದೇವರಿಗೆ ಅರ್ಪಿಸಬಾರದು. ಬರೀ ನನ್ನ ಹೂವುಗಳಿಂದಲೇ ಶಿವಲಿಂಗವನ್ನು ಸಂಪೂರ್ಣವಾಗಿ ಮುಚ್ಚಬೇಕು. ಊರಿನ ಜನರೆಲ್ಲ ನನ್ನ ಈ ಮಹತ್ಕಾರ್ಯವನ್ನು ನೋಡಿ ಬೆರಗಾಗಬೇಕು. ಶಂಭು ಶಾಸ್ತ್ರಿಗಳು ಶಾಂತವಾಗಿ ನಕ್ಕು, ಧನಪಾಲರೇ, ಭಗವಂತನಿಗೆ ಬೇಕಾಗಿರುವುದು ಹೂವಿನ ಮೌಲ್ಯವಲ್ಲ, ಭಕ್ತನ ಅಂತರಂಗದ ಭಾವ. ಪ್ರಕೃತಿ ಸಹಜವಾಗಿ ನೀಡಿದ ಒಂದು ಬಿಲ್ವಪತ್ರೆ ಅಥವಾ ಒಂದಿಷ್ಟು ತುಳಸಿಯನ್ನು ನಿಷ್ಕಲ್ಮಶ ಮನಸ್ಸಿನಿಂದ ನೀಡಿದರೆ ಆ ಭೋಳಾಶಂಕರ ಒಲಿಯುತ್ತಾನೆ. ನಿಮ್ಮ ಆಡಂಬರ ಅವನಿಗೆ ಬೇಕಿಲ್ಲ ಎಂದರು. ಆದರೆ ಧನಪಾಲ ಅವರ ಮಾತನ್ನು ಅಹಂಕಾರದಿಂದ ತಿರಸ್ಕರಿಸಿ ಹೊರಟುಹೋದ.
ಅದೇ ಊರಿನ ಕೊನೆಯಲ್ಲಿದ್ದ ಒಂದು ಪುಟ್ಟ ಗುಡಿಸಲಿನಲ್ಲಿ ಮಲ್ಲಿ ಎಂಬ ಹತ್ತು ವರ್ಷದ ಅನಾಥ ಹುಡುಗಿ ವಾಸಿಸುತ್ತಿದ್ದಳು. ಹುಟ್ಟಿನಿಂದಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಅವಳು ಊರಿನ ಜನರ ಸಣ್ಣಪುಟ್ಟ ಕೆಲಸ ಮಾಡಿ ಸಿಗುವ ಗಂಜಿಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು. ಆದರೆ ಅವಳಿಗೆ ನಾಗಲಿಂಗೇಶ್ವರನೇ ತಂದೆ, ತಾಯಿ, ಬಂಧು ಎಲ್ಲವೂ ಆಗಿದ್ದ. ಪ್ರತಿದಿನ ಬೆಳಿಗ್ಗೆ ಶಾಸ್ತ್ರಿಗಳು ಪೂಜೆ ಮಾಡುವಾಗ ದೇವಾಲಯದ ಮೆಟ್ಟಿಲ ಹೊರಗೆ ನಿಂತು, ಕಣ್ಣು ಮುಚ್ಚಿ ಕೈಜೋಡಿಸಿ ಪ್ರಾರ್ಥಿಸುತ್ತಿದ್ದಳು. ಆ ದಿನ ಧನಪಾಲ ನಡೆಸುವ 'ಮಹಾ ಹೂವಿನ ಪೂಜೆ'ಯ ಸುದ್ದಿ ಇಡೀ ಊರಿಗೆ ಹಬ್ಬಿತ್ತು. ಮಲ್ಲಿಗೂ ಅತೀವ ಆಸೆಯಾಯಿತು. ಇಷ್ಟೆಲ್ಲಾ ಜನ ದೇವರಿಗೆ ಹೂವು ಕೊಡ್ತಿದ್ದಾರೆ. ನಾನು ನನ್ನ ಈಶ್ವರನಿಗೆ ನಾಳೆ ಒಂದು ಸಣ್ಣ ಹೂವನ್ನಾದರೂ ಅರ್ಪಿಸಬೇಕು. ಅದರಿಂದ ಆ ಶಿವನಿಗೆ ಎಷ್ಟು ಸಂತೋಷವಾಗಬಹುದು ಎಂದು ಮನಸ್ಸಿನಲ್ಲೇ ಸಂಭ್ರಮಿಸಿದಳು. ಸಂಜೆ ವೇಳೆ ಅವಳು ಹೂವು ಹುಡುಕಿಕೊಂಡು ಕಾಡಿನ ಕಡೆಗೆ ಹೋದಳು. ಆದರೆ ಧನಪಾಲನ ಆಳುಗಳು ಪೂಜೆಯ ಪ್ರದರ್ಶನಕ್ಕಾಗಿ ಕಾಡಿನಲ್ಲಿದ್ದ ಎಲ್ಲಾ ಒಳ್ಳೆಯ ಗಿಡಗಳನ್ನು ಜಾಲಾಡಿ, ಸಿಕ್ಕ ಸಿಕ್ಕ ಹೂವುಗಳನ್ನು ಕಿತ್ತುಕೊಂಡು ಹೋಗಿದ್ದರು. ಮಲ್ಲಿ ಎಷ್ಟು ಹುಡುಕಿದರೂ ಗಿಡಗಳಲ್ಲಿ ಒಂದೇ ಒಂದು ಹೂವೂ ಇರಲಿಲ್ಲ. ಕತ್ತಲಾಗುತ್ತಾ ಬಂತು, ಕಾಡಿನ ಹಾದಿಯಲ್ಲಿ ಮಲ್ಲಿಗೆ ಹತಾಶೆಯಾಯಿತು. ಕಣ್ಣಲ್ಲಿ ನೀರು ತುಂಬಿಕೊಂಡು ವಾಪಸ್ ಬರುವಾಗ, ದಾರಿಯಂಚಿನ ಮುಳ್ಳು ಕಂಟಿಯೊಂದರ ಮಧ್ಯೆ ಸಣ್ಣದಾಗಿ ಅರಳಿದ್ದ ಒಂದೇ ಒಂದು ಕಡು ಬಿಳಿ ಬಣ್ಣದ ನಂದಿಬಟ್ಟಲು ಎಂಬ ಹೂವು ಅವಳ ಕಣ್ಣಿಗೆ ಬಿದ್ದಿತು. ಆದರೆ ಆ ಹೂವನ್ನು ತಲುಪಲು ಸರಳವಾಗಿರಲಿಲ್ಲ. ಸುತ್ತಲೂ ಚೂಪಾದ ಮುಳ್ಳುಗಳಿದ್ದವು. ಮಲ್ಲಿ ಹಿಂಜರಿಯದೆ ಮುಳ್ಳುಗಳ ನಡುವೆ ಕೈಹಾಕಿ ಹೂವನ್ನು ಕೀಳಲು ಯತ್ನಿಸಿದಳು. ಚೂಪಾದ ಮುಳ್ಳುಗಳು ಅವಳ ಪುಟ್ಟ ಬೆರಳುಗಳಿಗೆ ಚುಚ್ಚಿ ರಕ್ತ ಚಿಮ್ಮಿತು. ಆದರೂ ನೋವನ್ನು ತಡೆದುಕೊಂಡು, ರಕ್ತಸ್ರಾವವಾಗುತ್ತಿದ್ದ ಬೆರಳಿನಿಂದಲೇ ಆ ಹೂವನ್ನು ರಕ್ಷಿಸಿ ತಂದಳು. ಹರಿದ ತನ್ನ ಹಳೆಯ ಲಂಗದ ಅಂಚಿನಲ್ಲಿ ಆ ಹೂವನ್ನು ಅತ್ಯಂತ ಜಾಗರೂಕತೆಯಿಂದ ಸುತ್ತಿಟ್ಟುಕೊಂಡಳು. ಶಿವನೇ, ನಿನ್ನ ಪೂಜೆಗೆ ಅಂತ ಈ ಹೂ ತಂದಿದ್ದೀನಿ, ನಾಳೆ ನಿನಗೆ ಅರ್ಪಿಸ್ತೀನಿ ಎಂದು ಪ್ರೀತಿಯಿಂದ ಅಂದುಕೊಂಡಳು.
ಸೋಮವಾರದ ಶುಭ ಮುಹೂರ್ತ ಬಂದೇ ಬಿಟ್ಟಿತು. ದೇವಾಲಯವನ್ನು ಧನಪಾಲ ತರಿಸಿದ್ದ ಸಾವಿರಾರು ವಿದೇಶಿ ಹೂವುಗಳಿಂದ, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಇಡೀ ಗರ್ಭಗುಡಿ ಹೂವಿನ ಹಾರಗಳಿಂದ ಕಂಗೊಳಿಸುತ್ತಿತ್ತು. ಕೃತಕ ಸುಗಂಧ ದ್ರವ್ಯದ ವಾಸನೆ ಇಡೀ ಪರಿಸರದಲ್ಲೆಲ್ಲ ಆವರಿಸಿತ್ತು. ಧನಪಾಲ ಧವಳ ವಸ್ತ್ರಗಳನ್ನುಟ್ಟು, ಬಂಗಾರದ ಸರ ಮತ್ತು ಉಂಗುರಗಳನ್ನು ಧರಿಸಿ, ಗರ್ಭಗುಡಿಯ ಮುಂದೆ ಸಿಂಹಾಸನದಂತಹ ಆಸನದಲ್ಲಿ ಕುಳಿತಿದ್ದ. ಊರಿನ ನೂರಾರು ಜನ ಆ ವೈಭವವನ್ನು ನೋಡಲು ನೆರೆದಿದ್ದರು.
ಧನಪಾಲ ತನ್ನ ದಂಡು-ದಾಳಿಗಳಿಗೆ ಆಜ್ಞೆ ಮಾಡಿದ್ದ ಯಾರೂ ಗರ್ಭಗುಡಿಯ ಹತ್ತಿರ ಬರಬಾರದು. ನನ್ನ ಹೂವುಗಳನ್ನು ಬಿಟ್ಟು ಬೇರೆ ಯಾರ ಹೂವನ್ನೂ ಒಳಗೆ ಬಿಡಬೇಡಿ. ಶಿವಲಿಂಗದ ಮೇಲೆ ಬರೀ ನನ್ನ ಶ್ರೀಮಂತಿಕೆಯ ಹೂವುಗಳು ಮಾತ್ರ ಇರಬೇಕು. ಅದೇ ಸಮಯಕ್ಕೆ ಮಲ್ಲಿ ಅತ್ಯಂತ ಮುಗ್ಧತೆಯಿಂದ ತನ್ನ ಹರಿದ ಬಟ್ಟೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಆ ಒಂದೇ ಒಂದು ‘ನಂದಿಬಟ್ಟಲು’ ಹೂವನ್ನು ಕೈಯಲ್ಲಿ ಹಿಡಿದು ದೇವಾಲಯದ ಒಳಗಡೆ ಬಂದಳು. ಅವಳು ಭಕ್ತಿಯಿಂದ ಶಿವಲಿಂಗದ ಹತ್ತಿರ ಹೋಗಿ ಹೂವನ್ನಿಡಲು ಯತ್ನಿಸಿದಾಗ, ಧನಪಾಲನ ಆಳುಗಳು ಅವಳನ್ನು ತಡೆದರು.
ಏ ಕೊಳಕು ಹುಡುಗಿ ಆಚೆ ಹೋಗು. ಜಮೀನ್ದಾರರ ಲಕ್ಷಾಂತರ ರೂಪಾಯಿಯ ಪೂಜೆ ನಡೀತಿದೆ. ನಿನ್ನ ಹರಿದ ಬಟ್ಟೆ ಮತ್ತು ಆ ಬೀದಿ ಬದಿಯ ಸಣ್ಣ ಹೂವಿನಿಂದ ಸ್ವಾಮಿಗೆ ಮೈಲಿಗೆಯಾಗುತ್ತದೆ ಎಂದು ಗದರಿ ಅವಳನ್ನು ಜೋರಾಗಿ ದೂರ ತಳ್ಳಿದರು.ಮಲ್ಲಿ ದೇವಸ್ಥಾನದ ಕಲ್ಲಿನ ನೆಲದ ಮೇಲೆ ಬಿದ್ದಳು. ಅವಳ ಕೈಯಲ್ಲಿದ್ದ ನಂದಿಬಟ್ಟಲು ಹೂವು ಮಣ್ಣಿನ ಮೇಲೆ ಬಿತ್ತು. ಅವಳ ಮೊಣಕಾಲಿಗೆ ಪೆಟ್ಟಾಯಿತು, ಕಣ್ಣುಗಳಿಂದ ನೀರು ಕೋಡಿಯಾಗಿ ಹರಿಯತೊಡಗಿತು. ಶಿವನೇ ನಿನಗೆ ಕೊಡ್ಲಿಕ್ಕೆ ನನ್ನ ಹತ್ತಿರ ಇದೊಂದೇ ಹೂವಿತ್ತು. ಅದನ್ನು ಕೊಡೋಕೂ ಇವರು ಬಿಡುತ್ತಿಲ್ಲ ಎಂದು ಮನಸ್ಸಿನಲ್ಲೇ ಅತ್ತಳು. ಇದನ್ನು ಕಂಡ ಶಂಭು ಶಾಸ್ತ್ರಿಗಳ ಮನಸ್ಸು ಮಿಡಿಯಿತು. ಅವರು ತಕ್ಷಣ ಧಾವಿಸಿ ಬಂದು ಮಲ್ಲಿಯನ್ನು ಎಬ್ಬಿಸಿದರು. ಮಣ್ಣಿನಲ್ಲಿದ್ದ ಆ ಹೂವನ್ನು ಪ್ರೀತಿಯಿಂದ ಎತ್ತಿ, ಶುದ್ಧ ನೀರಿನಿಂದ ತೊಳೆದು ಅವಳ ಕೈಗಿಟ್ಟು ಮಗಳೇ, ಅಳಬೇಡ. ಪ್ರಪಂಚದ ಕಣ್ಣಿಗೆ ಇದು ಸಣ್ಣ ಹೂವಿರಬಹುದು, ಆದರೆ ಆ ಮಹಾದೇವನಿಗೆ ಇದು ಅಮೂಲ್ಯ. ನೀನು ಇಲ್ಲೇ ನಿಂತು ಪೂಜೆ ನೋಡು, ಭಗವಂತ ಎಲ್ಲವನ್ನೂ ಗಮನಿಸ್ತಿದ್ದಾನೆ ಎಂದು ಸಮಾಧಾನಪಡಿಸಿದರು.
ಪೂಜೆ ಪ್ರಾರಂಭವಾಯಿತು. ಶಂಭು ಶಾಸ್ತ್ರಿಗಳು ಮಂತ್ರ ಘೋಷಗಳನ್ನು ಪಠಿಸುತ್ತಾ, ಧನಪಾಲ ತಂದಿದ್ದ ರಾಶಿ ರಾಶಿ ವಿದೇಶಿ ಹೂವುಗಳನ್ನು ಶಿವಲಿಂಗದ ಮೇಲೆ ಅರ್ಪಿಸಲು ತೊಡಗಿದರು. ಆಳುಗಳು ಬುಟ್ಟಿ ಬುಟ್ಟಿ ಹೂವುಗಳನ್ನು ತಂದು ಕೊಡುತ್ತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಅಲ್ಲಿ ಒಂದು ವಿಸ್ಮಯ ನಡೆಯಿತು. ಶಾಸ್ತ್ರಿಗಳು ಎಷ್ಟು ಹೂವುಗಳನ್ನು ಶಿವಲಿಂಗದ ಮೇಲೆ ಹಾಕಿದರೂ, ಆ ಹೂವುಗಳು ಲಿಂಗದ ಮೇಲೆ ಒಂದಿಷ್ಟೂ ನಿಲ್ಲುತ್ತಿರಲಿಲ್ಲ. ಪವಾಡದಂತೆ ಕೆಳಗೆ ಜಾರಿ ಬೀಳುತ್ತಿದ್ದವು. ಅಷ್ಟೇ ಅಲ್ಲ, ಕೆಲವೇ ಕ್ಷಣಗಳಲ್ಲಿ ಆ ದುಬಾರಿ ಹೂವುಗಳು ಕಪ್ಪಗಾಗಿ, ಬಾಡಿ, ದುರ್ವಾಸನೆ ಬೀರಲು ತೊಡಗಿದವು. ಇಡೀ ಗರ್ಭಗುಡಿಯಲ್ಲಿದ್ದ ಕೃತಕ ಸುಗಂಧ ಮಾಯವಾಗಿ, ಹೂವುಗಳ ಕೊಳೆತ ವಾಸನೆ ಆವರಿಸಿತು. ಬಂದಿದ್ದ ಜನರೆಲ್ಲ ಮೂಗು ಮುಚ್ಚಿಕೊಳ್ಳತೊಡಗಿದರು. ಧನಪಾಲ ಗಾಬರಿಯಿಂದ ಎದ್ದು ನಿಂತು ಶಾಸ್ತ್ರಿಗಳೇ, ಏನಿದು ಅನರ್ಥ? ನನ್ನ ಲಕ್ಷಾಂತರ ರೂಪಾಯಿಯ ಅತ್ಯಪರೂಪದ ಹೂವುಗಳು ಹೀಗೆ ಕಪ್ಪಗಾಗಿ ಬಾಡಿ ಹೋಗುತ್ತಿವೆಯಲ್ಲ. ಇಡೀ ಗರ್ಭಗುಡಿಯಲ್ಲಿ ದುರ್ವಾಸನೆ ಬರುತ್ತಿದೆ ನಿಮ್ಮ ಪೂಜಾ ವಿಧಾನದಲ್ಲಿ ಏನಾದರೂ ತಪ್ಪಾಯಿತೇ ಎಂದು ಕೂಗಾಡಿದ. ಶಾಸ್ತ್ರಿಗಳು ಪ್ರಶಾಂತವಾಗಿ ಕಣ್ಣು ಮುಚ್ಚಿ ಧ್ಯಾನದಲ್ಲಿ ಕುಳಿತರು. ಶಿವಲಿಂಗದ ಮುಂದೆ ಜಪಿಸಿ, ನಂತರ ಕಣ್ಣು ತೆರೆದು ಗಂಭೀರ ಧ್ವನಿಯಲ್ಲಿ ಹೇಳಿದರು. ಧನಪಾಲರೇ, ನನ್ನ ಪೂಜೆಯಲ್ಲಿ ತಪ್ಪಾಗಿಲ್ಲ, ನಿಮ್ಮ ಭಾವನೆಯಲ್ಲಿ ತಪ್ಪಾಗಿದೆ. ನೀವು ದೇವರಿಗೆ ಹೂವನ್ನು ಅರ್ಪಿಸುತ್ತಿಲ್ಲ, ಬದಲಾಗಿ ನಿಮ್ಮ ಧನಮದ, ಅಧಿಕಾರ ಮತ್ತು ಅಹಂಕಾರವನ್ನು ಅರ್ಪಿಸುತ್ತಿದ್ದೀರಾ. ನಾನು ತಂದ ಹೂವು, ನನ್ನ ದುಡ್ಡು ಎಂಬ ಭ್ರಮೆ ನಿಮ್ಮಲ್ಲಿದೆ. ಭಗವಂತನಿಗೆ ಬೇಕಾಗಿರುವುದು ಬೆಲೆಬಾಳುವ ಹೂವುಗಳ ಆಡಂಬರವಲ್ಲ,ಅಹಂಕಾರವಿಲ್ಲದ ನಿರ್ಮಲವಾದ ಭಕ್ತಿ. ಈ ಕೃತಕ ಸುಗಂಧದ ಹಿಂದೆ ಅಡಗಿರುವ ನಿಮ್ಮ ಅಹಂಕಾರದ ದುರ್ವಾಸನೆಯನ್ನು ಶಿವ ಸ್ವೀಕರಿಸುತ್ತಿಲ್ಲ. ಧನಪಾಲನಿಗೆ ಇಡೀ ಸಭೆಯ ಮುಂದೆ ಮುಖಭಂಗವಾಯಿತು. ಆದರೆ ಅವನ ಅಹಂಕಾರ ಇನ್ನೂ ಪೂರ್ತಿ ಇಳಿದಿರಲಿಲ್ಲ. ಹಾಗಾದರೆ ಈ ಈಶ್ವರನಿಗೆ ಯಾವ ಹೂವು ಬೇಕು? ನಾನು ಬೇಕಿದ್ದರೆ ಚಿನ್ನದ ಹೂವುಗಳನ್ನೇ ಮಾಡಿಸಿ ತರುತ್ತೇನೆ ಎಂದು ಗರ್ವದಿಂದಲೇ ಕೇಳಿದ.
ಶಾಸ್ತ್ರಿಗಳು ಮೆಲ್ಲನೆ ನಕ್ಕು, ದೇವಾಲಯದ ಮೂಲೆಯಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಾ ನಿಂತಿದ್ದ ಮಲ್ಲಿಯ ಕಡೆ ಬೆರಳು ತೋರಿಸಿದರು ಧನಪಾಲರೇ, ಭಗವಂತನಿಗೆ ಬೇಕಾಗಿರುವುದು ನಿಮ್ಮ ಚಿನ್ನದ ಹೂವಲ್ಲ. ಆ ಮಗುವಿನ ಕೈಯಲ್ಲಿದೆಯಲ್ಲ ಆ ನಂದಿಬಟ್ಟಲು ಹೂವು ಬೇಕು ಏಕೆಂದರೆ ಆ ಹೂವನ್ನು ಪಡೆಯಲು ಆ ಮಗು ತನ್ನ ರಕ್ತವನ್ನೇ ಸುರಿಸಿದ್ದಾಳೆ. ಆ ಹೂವಿನಲ್ಲಿ ಯಾವುದೇ ಸ್ವಾರ್ಥವಿಲ್ಲ, ಬರೀ ನಿಷ್ಕಲ್ಮಶ ಪ್ರೀತಿಯಿದೆ ಎಂದರು. ಧನಪಾಲನಿಗೆ ಆ ಕ್ಷಣದಲ್ಲಿ ದೊಡ್ಡ ಆಘಾತವಾಯಿತು. ತಾನು ಮೆರೆಸಿದ ವೈಭವ, ವೆಚ್ಚ ಮಾಡಿದ ಹಣ, ತೋರಿದ ಅಧಿಕಾರ ಎಲ್ಲವೂ ಆ ಬಡ ಹುಡುಗಿಯ ಒಂದು ಸಣ್ಣ ಹೂವಿನ ಮುಂದೆ ಶೂನ್ಯವಾಗಿ ಕಂಡವು. ಅವನ ಅಹಂಕಾರದ ಕೋಟೆ ಸಂಪೂರ್ಣವಾಗಿ ಕುಸಿದುಬಿದ್ದಿತು. ಅವನು ತಕ್ಷಣ ಮಲ್ಲಿಯ ಹತ್ತಿರ ಹೋಗಿ, ಮಂಡಿಯೂರಿ ಕುಳಿತು ತಂಗಿ, ನನ್ನನ್ನು ಕ್ಷಮಿಸು. ಹಣದ ಕೊಬ್ಬಿನಿಂದ ನಿನ್ನನ್ನು ತಳ್ಳಿಸಿದೆ. ನಿನ್ನ ಭಕ್ತಿಯ ಮುಂದೆ ನನ್ನ ಶ್ರೀಮಂತಿಕೆ ಸೋತುಹೋಯಿತು. ದಯವಿಟ್ಟು ನಿನ್ನ ಹೂವನ್ನು ಸ್ವಾಮಿಗೆ ಅರ್ಪಿಸು ಎಂದು ಕೈಜೋಡಿಸಿ ವಿನಂತಿಸಿಕೊಂಡ.
ಮಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಾ, ಅತ್ಯಂತ ಭಕ್ತಿಯಿಂದ ಗರ್ಭಗುಡಿಯ ಹತ್ತಿರ ಬಂದಳು. ಶಂಭು ಶಾಸ್ತ್ರಿಗಳು ಅವಳ ಕೈಯಲ್ಲಿದ್ದ ಆ ಒಂದೇ ಒಂದು ‘ನಂದಿಬಟ್ಟಲು’ ಹೂವನ್ನು ಪಡೆದು, 'ಓಂ ನಮಃ ಶಿವಾಯ' ಎಂದು ಉಚ್ಚರಿಸುತ್ತಾ ಶಿವಲಿಂಗದ ಶಿರಸ್ಸಿನ ಮೇಲೆ ಇಟ್ಟರು. ಮರುಕ್ಷಣವೇ ನಾಗಲಿಂಗೇಶ್ವರ ದೇವಾಲಯದಲ್ಲಿ ಅಚ್ಚರಿಯ ಪವಾಡ ಸಂಭವಿಸಿತು. ಆ ಒಂದೇ ಒಂದು ಸಣ್ಣ ಹೂವು ಶಿವಲಿಂಗವನ್ನು ಮುಟ್ಟುತ್ತಿದ್ದಂತೆಯೇ, ಗರ್ಭಗುಡಿಯಲ್ಲಿದ್ದ ಬಾಡಿ ಕೊಳೆತು ಹೋಗಿದ್ದ ವಿದೇಶಿ ಹೂವುಗಳೆಲ್ಲಾ ಮಾಯವಾದವು. ಕೇವಲ ಒಂದು ಕ್ಷಣದಲ್ಲಿ ಇಡೀ ದೇವಾಲಯದಲ್ಲಿ ನೈಸರ್ಗಿಕ ಶ್ರೀಗಂಧ, ಜಸವಂತಿ ಮತ್ತು ಮಲ್ಲಿಗೆಯ ದಿವ್ಯ ಸುಗಂಧ ಪಸರಿಸಿತು. ಲಿಂಗದ ಮೇಲಿದ್ದ ಆ ನಂದಿಬಟ್ಟಲು ಹೂವು ಕೋಟಿ ಸೂರ್ಯರ ತೇಜಸ್ಸಿನಂತೆ ಕಂಗೊಳಿಸತೊಡಗಿತು. ಶಿವಲಿಂಗದಿಂದ ಹೊರಹೊಮ್ಮಿದ ದಿವ್ಯ ಪ್ರಭೆಯು ಮಲ್ಲಿ ಮತ್ತು ಪಶ್ಚಾತ್ತಾಪದಲ್ಲಿದ್ದ ಧನಪಾಲನ ಮೇಲೆ ಬಿತ್ತು. ಇಡೀ ವಾತಾವರಣದಲ್ಲಿ ಶಿವನ ಸಾನ್ನಿಧ್ಯದ ಅನುಭವವಾಯಿತು.ಅಲ್ಲಿದ್ದ ಇಡೀ ಊರಿನ ಜನ ರೋಮಾಂಚನಗೊಂಡು ಹರ ಹರ ಮಹಾದೇವ ನಾಗಲಿಂಗೇಶ್ವರನಿಗೆ ಜೈ ಎಂದು ಜಯಘೋಷ ಮಾಡಿದರು.
ಧನಪಾಲನ ಕಣ್ಣುಗಳಿಂದ ಆನಂದ ಮತ್ತು ಪಶ್ಚಾತ್ತಾಪದ ಕಣ್ಣೀರು ಧಾರಾಕಾರವಾಗಿ ಹರಿಯಿತು. ಅವನು ಮಲ್ಲಿಯ ಪಾದಗಳಿಗೆ ನಮಸ್ಕರಿಸಿ, ತಾಯಿ, ನಿಜವಾದ ಪೂಜೆ ಎಂದರೆ ಏನೆಂದು ಇಂದು ನನಗೆ ಕಣ್ಣು ತೆರೆಸಿ ತೋರಿಸಿದೆ. ಧನ-ಕನಕಗಳಿಂದ ದೇವರನ್ನು ಕೊಳ್ಳಲು ಸಾಧ್ಯವಿಲ್ಲ, ಭಕ್ತಿಯಿಂದ ಮಾತ್ರ ಪಡೆಯಬಹುದು ಎಂಬುದನ್ನು ಅರ್ಥ ಮಾಡಿಕೊಂಡೆ ಎಂದ. ಅಂದಿನಿಂದ ಧನಪಾಲ ತನ್ನ ಅಹಂಕಾರವನ್ನು ಸಂಪೂರ್ಣವಾಗಿ ತೊರೆದ. ಮಲ್ಲಿಯನ್ನು ತನ್ನ ಸ್ವಂತ ಮಗಳಂತೆ ತನ್ನ ಮನೆಗೆ ಕರೆದೊಯ್ದು ದತ್ತು ತೆಗೆದುಕೊಂಡ. ಅವಳ ಹೆಸರಿನಲ್ಲಿ ಊರಿನ ಬಡ ಮಕ್ಕಳಿಗೆ ವಿದ್ಯಾಭ್ಯಾಸ, ಆಸ್ಪತ್ರೆ ಮತ್ತು ಪ್ರತಿದಿನ ದೇವಾಲಯದಲ್ಲಿ ಬಡವರಿಗೆ ಅನ್ನದಾನ ಮಾಡುವ ಧರ್ಮ ಕಾರ್ಯಕ್ಕೆ ಕೈಹಾಕಿದ. ಅಂದಿನಿಂದ ಶಿವಾಜಿಪುರದಲ್ಲಿ 'ಹೂವಿನ ಪೂಜೆ' ಎಂದರೆ ಅದು ಬರಿ ಹೂವುಗಳ ಪ್ರದರ್ಶನವಾಗಲಿಲ್ಲ ಪ್ರತಿಯೊಬ್ಬರೂ ತಮ್ಮ ಒಳಗಿನ ಅಹಂಕಾರವನ್ನು ತ್ಯಜಿಸಿ, ನಿರ್ಮಲ ಮನಸ್ಸಿನಿಂದ ದೇವರನ್ನು ಪೂಜಿಸುವ ಪರಮ ಪವಿತ್ರ ಆಚರಣೆಯಾಗಿ ಬದಲಾಯಿತು.