Bullet Baba in Kannada Spiritual Stories by Danger Writer books and stories PDF | ಬುಲೆಟ್ ಬಾಬಾ

Featured Books
Categories
Share

ಬುಲೆಟ್ ಬಾಬಾ

ರಾಜಸ್ಥಾನದ ಪಾಲಿಯಿಂದ ಜೋಧ್‌ಪುರಕ್ಕೆ ಸಾಗುವ ಎನ್‌ಹೆಚ್65 ರಾಷ್ಟ್ರೀಯ ಹೆದ್ದಾರಿಯೆಂದರೆ ಹಗಲಿನಲ್ಲಿಯೂ ಮರಳುಗಾಡಿನ ತೀಕ್ಷ್ಣ ಬಿಸಿಲು ಮತ್ತು ಅಸಹನೀಯ ಶೂನ್ಯತೆಯಿಂದ ಕೂಡಿರುತ್ತಿತ್ತು. ಆದರೆ ಸೂರ್ಯ ಮುಳುಗಿ ಕತ್ತಲು ಆವರಿಸುತ್ತಿದ್ದಂತೆ, ಆ ದಾರಿಯಲ್ಲಿ ಸಂಚರಿಸುವ ಟ್ರಕ್ ಚಾಲಕರು, ಸರಕು ಸಾಗಣೆ ಲಾರಿ ಡ್ರೈವರ್‌ಗಳು ಮತ್ತು ರಾತ್ರಿ ಪ್ರಯಾಣಿಕರ ಎದೆಯಲ್ಲಿ ಸಣ್ಣದೊಂದು ಆತಂಕ, ಬೆವರಿನ ಹನಿಗಳು ಮೂಡತೊಡಗುತ್ತಿದ್ದವು. ಕಾರಣ? ಅದೇ ರಸ್ತೆಯ ಚೋಟಿಲಾ ಗ್ರಾಮದ ಗಡಿಯ ಬಳಿ ನಿಂತಿದ್ದ ಆ ಹಳೆಯ ಖೇಜಡಿ' ಮರ. ಹತ್ತಾರು ಭೀಕರ ರಸ್ತೆ ಅಪಘಾತಗಳಿಗೆ ಸಾಕ್ಷಿಯಾಗಿದ್ದ ಆ ವಿಶಾಲ ಖೇಜಡಿ ಮರದ ಬಳಿ ತಲುಪುತ್ತಿದ್ದಂತೆ, ಎಷ್ಟೇ ಅನುಭವಿ ಚಾಲಕನಿದ್ದರೂ ಅವನ ವಾಹನ ಹಾದಿ ತಪ್ಪುತ್ತಿತ್ತು, ಸ್ಟೀರಿಂಗ್ ತಾನಾಗಿಯೇ ಕಂಪಿಸುತ್ತಿತ್ತು. ಆ ಮರದ ಬಳಿ ಕತ್ತಲೆಯಲ್ಲಿ ಯಾವುದೋ ದುಷ್ಟ ಶಕ್ತಿ ಇಣುಕುತ್ತದೆ ಎನ್ನುವುದು ಹಳ್ಳಿಗರ ಮತ್ತು ನಿರಂತರ ಪ್ರಯಾಣಿಕರ ಅಲಿಖಿತ ನಂಬಿಕೆಯಾಗಿತ್ತು.
ಆದರೆ 1988 ರ ಮೇ ತಿಂಗಳ ಆ ಒಂದು ಕಾಳರಾತ್ರಿ, ಆ ಶಾಪಗ್ರಸ್ತ ಮರದ ನಿಗೂಢ ಇತಿಹಾಸವನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಟ್ಟಿತು.
ಚೋಟಿಲಾ ಗ್ರಾಮದ ಗೌರವಾನ್ವಿತ ಠಾಕೂರ್ ಜೋಗ್ ಸಿಂಗ್ ರಾಥೋಡ್ ಅವರ ಸುಪುತ್ರ ಓಂ ಸಿಂಗ್ ರಾಥೋಡ್ ಸ್ಥಳೀಯವಾಗಿ ಪ್ರೀತಿಯಿಂದ ಓಂ ಬನ್ನಾ ಎಂದು ಕರೆಯಲ್ಪಡುತ್ತಿದ್ದ ರಜಪೂತ ಯುವಕ ತನ್ನ ನೆಚ್ಚಿನ ಕಡು ಕಪ್ಪು ಬಣ್ಣದ 350 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ನಲ್ಲಿ ಸ್ವಗ್ರಾಮದತ್ತ ಹೊರಟಿದ್ದ. ಎಂಜಿನ್‌ನ ಗಂಭೀರವಾದ ‘ಡಗ್ ಡಗ್’ ಶಬ್ದ ಮರಳುಗಾಡಿನ ಶೀತಲ ರಾತ್ರಿಯ ಮೌನವನ್ನು ಸೀಳುತ್ತಿತ್ತು. ಅಪಾರ ರಜಪೂತ ಗಾಂಭೀರ್ಯ, ಧೈರ್ಯ ಮತ್ತು ಹುಟ್ಟು ಸಾಹಸ ಪ್ರವೃತ್ತಿ ಹೊಂದಿದ್ದ ಓಂ ಬನ್ನಾಗೆ ಆ ಹಳೆಯ ಮರದ ಕುರಿತಿದ್ದ ಜಾನಪದ ಕಥೆಗಳು ಗೊತ್ತಿದ್ದರೂ, ಅವನ ಮನಸ್ಸಿನಲ್ಲಿ ಎಳ್ಳಷ್ಟೂ ಭಯವಿರಲಿಲ್ಲ. ಆದರೆ ದುರದೃಷ್ಟವಶಾತ್, ಒಂದು ರಾತ್ರಿ ಸುಮಾರು 11:45 ರ ಸಮಯಕ್ಕೆ, ಚೋಟಿಲಾ ಗಡಿಯ ಆ ತೀಕ್ಷ್ಣವಾದ ತಿರುವಿನಲ್ಲಿ ಓಂ ಬನ್ನಾನ ಬುಲೆಟ್ ಹದ್ದುಮೀರಿದ ವೇಗದಲ್ಲಿದ್ದಾಗ ತಡೆಗೋಡೆಗೆ ತಾಗಿ ನಿಯಂತ್ರಣ ತಪ್ಪಿತು. ಬೈಕ್ ರಸ್ತೆಯಂಚಿನ ಕಲ್ಲಿಗೆ ಬಡಿದು, ನೇರವಾಗಿ ಆ ಶಾಪಗ್ರಸ್ತ ಖೇಜಡಿ ಮರಕ್ಕೆ ಭಾರಿ ರಭಸದಿಂದ ಡಿಕ್ಕಿ ಹೊಡೆಯಿತು.ಲೋಹ ಮತ್ತು ಮರದ ಭೀಕರ ಘರ್ಷಣೆಯ ಸದ್ದು ಇಡೀ ಅರಣ್ಯದಲ್ಲಿ ಪ್ರತಿಧ್ವನಿಸಿತು. ಬೈಕ್‌ನ ಬಂಪರ್ ಸಂಪೂರ್ಣವಾಗಿ ನಜ್ಜುಗುಜ್ಜಾಯಿತು. ತೀವ್ರ ರಕ್ತಸ್ರಾವದಿಂದ ಓಂ ಬನ್ನಾ ಆ ಕತ್ತಲೆಯಲ್ಲೇ, ಆ ಮರದ ಬುಡದಲ್ಲೇ ಕೊನೆಯುಸಿರೆಳೆದನು. ಇಡೀ ಸೀಮೆಗೆ ಭರವಸೆಯಾಗಿದ್ದ ಯುವಕನೊಬ್ಬ ಕೆಲವೇ ಕ್ಷಣಗಳಲ್ಲಿ ಹೆದ್ದಾರಿಯಲ್ಲಿ ರಕ್ತಸಿಕ್ತ ಶವವಾಗಿ ಬಿದ್ದಿದ್ದ.
ಅರ್ಧ ಗಂಟೆಯ ನಂತರ ಗಸ್ತಿನಲ್ಲಿದ್ದ ಪೋಲಿಸ್ ತಂಡ ಸ್ಥಳಕ್ಕೆ ತಲುಪಿತು. ಶವವನ್ನು ಆಸ್ಪತ್ರೆಗೆ ರವಾನಿಸಿ, ಆಕ್ಸಿಡೆಂಟ್ ಆದ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ತಳ್ಳಿ ತಂದು ಹತ್ತಿರದ ಸಂದೇರಾವ್ ಪೊಲೀಸ್ ಠಾಣೆಯ ವಿಶಾಲವಾದ ಅಂಗಳದಲ್ಲಿ ನಿಲ್ಲಿಸಿತು. ಕೇಸ್ ಡೈರಿ ಬರೆದು, ಬೈಕ್‌ನ ಪ್ರತಿಯೊಂದು ಚಾಸಿಸ್ ನಂಬರ್ ನೋಟ್ ಮಾಡಿಕೊಂಡು, ಠಾಣೆಯ ಮುಖ್ಯ ಗೇಟ್‌ಗೆ ಬೃಹತ್ ಕೀಲಿ ಹಾಕಿ ಪೊಲೀಸರು ನಿದ್ರೆಗೆ ಜಾರಿದರು.
ಆದರೆ, ನೈಜ ಥ್ರಿಲ್ಲರ್ ಮತ್ತು ಕಲ್ಪನೆಗೂ ಮೀರಿದ ಪವಾಡ ಶುರುವಾಗಿದ್ದೇ ಮರುದಿನ ಬೆಳಿಗ್ಗೆ.
ಬೆಳಿಗ್ಗೆ ಆರು ಗಂಟೆಗೆ ಠಾಣೆಯ ಬಾಗಿಲು ತೆರೆದ ಇನ್ಸ್‌ಪೆಕ್ಟರ್ ಚೌಹಾಣ್ ಕಣ್ಣುಗಳನ್ನು ನಂಬಲು ಸಾಧ್ಯವಾಗಲಿಲ್ಲ. ಠಾಣೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಓಂ ಬನ್ನಾನ ಕಪ್ಪು ಬುಲೆಟ್ ಬೈಕ್ ಕಣ್ಮರೆಯಾಗಿತ್ತು. ಯಾರೋ ಕಿಡಿಗೇಡಿಗಳು ಪೊಲೀಸ್ ಠಾಣೆಯ ಒಳಗಿಂದಲೇ ವಾಹನ ಕದ್ದಿದ್ದಾರೆ ಎಂದು ಭಾವಿಸಿದ ಪೊಲೀಸರು, ತಕ್ಷಣವೇ ಜೀಪ್ ಏರಿ ತನಿಖೆಗೆ ಹೊರಟರು. ಆದರೆ, ಅಪಘಾತ ನಡೆದ ಚೋಟಿಲಾ ಗ್ರಾಮದ ಆ ಖೇಜಡಿ ಮರದ ಹತ್ತಿರ ತಲುಪಿದಾಗ ಇಡೀ ಪೋಲಿಸ್ ತಂಡ ದಿಗ್ಭ್ರಮೆಗೊಂಡು ಕಲ್ಲಿನಂತೆ ನಿಂತುಬಿಟ್ಟಿತು.
ಠಾಣೆಯಲ್ಲಿದ್ದ ಬೈಕ್, ಯಾವುದೇ ಮಾನವ ಸ್ಪರ್ಶವಿಲ್ಲದೆ, ಸಂಪೂರ್ಣವಾಗಿ ಸ್ಟಾರ್ಟ್ ಆಗಿ, ಅದೇ ಅಪಘಾತ ನಡೆದ ಖೇಜಡಿ ಮರದ ಕೆಳಗೆ ಆರಾಮಾಗಿ ನಿಂತಿತ್ತು.
ಇನ್ಸ್‌ಪೆಕ್ಟರ್ ಚೌಹಾಣ್ ಕೋಪ ಮತ್ತು ಆಶ್ಚರ್ಯದಿಂದ, ಯಾರೋ ಊರಿನವರು ನಮ್ಮ ಜೊತೆ ಆಟವಾಡುತ್ತಿದ್ದಾರೆ ಎಂದು ಗದರುತ್ತಾ, ಮತ್ತೆ ಬೈಕ್ ಅನ್ನು ಠಾಣೆಗೆ ಎಳೆದುಕೊಂಡು ಬಂದರು. ಈ ಬಾರಿ ಯಾವುದೇ ಅಪಾಯವಾಗದಂತೆ, ಬೈಕ್‌ನಲ್ಲಿದ್ದ ಅಷ್ಟೂ ಪೆಟ್ರೋಲ್ ಅನ್ನು ಪೈಪ್ ಹಾಕಿ ಸಂಪೂರ್ಣವಾಗಿ ಖಾಲಿ ಮಾಡಿದರು. ಇಂಧನ ಟ್ಯಾಂಕ್ ಒಣಗಿಸಿ, ಹಿಂಭಾಗದ ಚಕ್ರಕ್ಕೆ ಗಟ್ಟಿಯಾದ ಕಬ್ಬಣದ ಸರಪಳಿ  ಸುತ್ತಿ, ಭಾರಿ ಗಾತ್ರದ ಬೀಗ ಜಡಿದರು.
ಅಷ್ಟೇ ಅಲ್ಲದೆ, ಆ ರಾತ್ರಿ ಠಾಣೆಯ ಬಾಗಿಲಲ್ಲಿ ಬಂದೂಕು ಹಿಡಿದ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ವಿಶೇಷ ಕಾವಲಿಗೆ ನಿಲ್ಲಿಸಲಾಯಿತು. ರಾತ್ರಿ ಒಂದೂವರೆ ಗಂಟೆಯ ಸಮಯ. ಮಸಣದಂತಹ ಕತ್ತಲೆಯಲ್ಲಿ ಠಾಣೆಯಲ್ಲಿದ್ದ ಕಾನ್‌ಸ್ಟೇಬಲ್‌ಗಳು ತೂಕಡಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ಕತ್ತಲೆಯನ್ನು ಸೀಳುತ್ತಾ ಎಂಜಿನ್ ಸದ್ದು ಕೇಳಿಸಿತು. ಡಗ್, ಡಗ್, ಡಗ್.ಕಾನ್‌ಸ್ಟೇಬಲ್‌ಗಳು ಬೆಚ್ಚಿ ಬಿದ್ದು ನೋಡಿದಾಗ, ಇಂಧನವೇ ಇಲ್ಲದ, ಕಬ್ಬಣದ ಸರಪಳಿಯಿಂದ ಬಂದಿಸಲ್ಪಟ್ಟಿದ್ದ ಆ ರಾಯಲ್ ಎನ್‌ಫೀಲ್ಡ್ ತಾನಾಗಿಯೇ ಕಂಪಿಸುತ್ತಿತ್ತು. ಅದರ ಹೆಡ್‌ಲೈಟ್‌ನ ತೀವ್ರ ಹಳದಿ ಬೆಳಕು ಉರಿದು ಆರಿತು. ಕಾನ್‌ಸ್ಟೇಬಲ್‌ಗಳು ಹೆದರಿ ಕೃಶರಾಗಿ ಹಿಂದೆ ಜಾರುವಷ್ಟರಲ್ಲಿ, ಆ ಬೈಕ್ ಗಾಳಿಯಲ್ಲಿ ಚಲಿಸಿದಂತೆ ಠಾಣೆಯ ಬಂದ್ ಆಗಿದ್ದ ಗೇಟ್‌ಗಳನ್ನು ದಾಟಿ ಮಸಣದಂತಹ ಕತ್ತಲೆಯಲ್ಲಿ ಮಾಯವಾಯಿತು. ಮರುದಿನ ಬೆಳಿಗ್ಗೆ ಪೋಲಿಸ್ ಪಡೆ ಕಣ್ಣುಜ್ಜುತ್ತಾ ಓಡಿ ಹೋಗಿ ನೋಡಿದಾಗ, ಬೈಕ್ ಮತ್ತೆ ಅದೇ ಅಪಘಾತ ನಡೆದ ಖೇಜಡಿ ಮರದ ಕೆಳಗೆ ಸೈಲೆಂಟ್ ಆಗಿ ನಿಂತಿತ್ತು. ಕಬ್ಬಣದ ಸರಪಳಿಯ ಬೀಗ ಮುರಿದಿರಲಿಲ್ಲ, ಆದರೆ ಅದು ಬೈಕ್‌ನಿಂದ ಕಳಚಿ ನೆಲದ ಮೇಲೆ ಬಿದ್ದಿತ್ತು. ಈ ಸುದ್ದಿ ಅಷ್ಟೇ ವೇಗದಲ್ಲಿ ಇಡೀ ರಾಜಸ್ಥಾನ, ಗುಜರಾತ್ ಹಾಗೂ ಪಕ್ಕದ ರಾಜ್ಯಗಳಿಗೆ ಹಬ್ಬಿತು. ವಿಜ್ಞಾನ, ಲಾಜಿಕ್, ಭೌತಶಾಸ್ತ್ರದ ನಿಯಮಗಳನ್ನು ಮೀರಿ ನಡೆಯುತ್ತಿದ್ದ ಈ ಘಟನೆಯನ್ನು ನೋಡಲು ನೂರಾರು ಜನ, ಮಾಧ್ಯಮದವರು ಅಪಘಾತದ ಸ್ಥಳಕ್ಕೆ ನೆರೆದರು.
ಆ ರಾತ್ರಿ, ಓಂ ಬನ್ನಾನ ತಂದೆ ಠಾಕೂರ್ ಜೋಗ್ ಸಿಂಗ್ ರಾಥೋಡ್ ಅವರಿಗೆ ಕನಸಿನಲ್ಲಿ ಓಂ ಬನ್ನಾನ ದಿವ್ಯ, ತೇಜೋಮಯ ರೂಪ ಕಾಣಿಸಿಕೊಂಡಿತು. ಕನಸಿನಲ್ಲಿ ಓಂ ಬನ್ನಾ ಸ್ಪಷ್ಟವಾಗಿ ಹೇಳಿದ ತಂದೆಯೇ, ನನ್ನ ದೇಹ ನಿರ್ಜೀವವಾಗಿರಬಹುದು, ಆದರೆ ನನ್ನ ಆತ್ಮ ಈ ಶಾಪಗ್ರಸ್ತ ಹೆದ್ದಾರಿಯನ್ನು ಕಾಯಲು ಬಯಸುತ್ತದೆ. ಇನ್ಮುಂದೆ ಈ ಖೇಜಡಿ ಮರದ ಬಳಿ ಯಾವುದೇ ಅಮಾಯಕ ಪ್ರಯಾಣಿಕ ಅಪಘಾತಕ್ಕೆ ಬಲಿಯಾಗಬಾರದು. ಈ  ನನ್ನ ವಾಹನವನ್ನು ಠಾಣೆಗೆ ಕೊಂಡೊಯ್ಯಬೇಡಿ, ಅದು ಇರುವ ಜಾಗದಲ್ಲೇ ಇರಲಿ. ಆ ಮಾತು ಕೇವಲ ಕನಸಾಗಿ ಉಳಿಲಿಲ್ಲ. ಮಾರನೇ ದಿನದಿಂದಲೇ ಆ ಹೆದ್ದಾರಿಯಲ್ಲಿ ಚಮತ್ಕಾರಗಳು ಸಾಲು ಸಾಲಾಗಿ ನಡೆಯತೊಡಗಿದವು.
ಒಮ್ಮೆ ತೀವ್ರ ಮಂಜು ಮುಸುಕಿದ, ಕತ್ತಲೆಯ ರಾತ್ರಿ ಭಾರಿ ವೇಗವಾಗಿ ಬಂದ ತೈಲ ಟ್ಯಾಂಕರ್ ಲಾರಿಯೊಂದರ ಬ್ರೇಕ್ ಫೇಲ್ ಆಯಿತು. ಲಾರಿ ನೇರವಾಗಿ ಆ ಖೇಜಡಿ ಮರಕ್ಕೆ ಬಡಿದು, ಪಕ್ಕದ ಆಳವಾದ ಕಂದಕಕ್ಕೆ ಬೀಳಬೇಕಿತ್ತು. ಆದರೆ ಲಾರಿ ಚಾಲಕ ನಂತರ ಕಣ್ಣೀರು ಹಾಕುತ್ತಾ ಹೇಳಿದ ಪ್ರಕಾರ ಆ ಕತ್ತಲೆಯಲ್ಲಿ ಕಪ್ಪು ಬೈಕ್ ಏರಿದ ಯುವಕನೊಬ್ಬ ಲಾರಿಯ ಮುಂಭಾಗದಲ್ಲಿ ಪ್ರತ್ಯಕ್ಷನಾಗಿ, ತನ್ನ ಕೈ ಸನ್ನೆಯಿಂದ ಲಾರಿಯ ಹಾದಿಯನ್ನು ಬದಲಾಯಿಸಿ, ದೊಡ್ಡ ದುರಂತದಿಂದ ಪಾರು ಮಾಡಿದನು.
ಮತ್ತೊಮ್ಮೆ ರಾತ್ರಿ ವೇಳೆ ಕಾರಿನಲ್ಲಿ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಕುಟುಂಬವೊಂದು ದಾರಿ ತಪ್ಪಿ ರಸ್ತೆಗಳ್ಳರ  ಕೈಗೆ ಸಿಕ್ಕಿಬೀಳುವ ಸಂದರ್ಭದಲ್ಲಿ, ದೂರದಲ್ಲಿ ಕೇಳಿಸಿದ ಬುಲೆಟ್‌ನ ಭಾರಿ ಡಗ್ ಡಗ್ ಸದ್ದು ಮತ್ತು ನಿಗೂಢವಾಗಿ ಆವರಿಸಿದ ಲೈಟ್‌ನ ಪ್ರಭೆಗೆ ಹೆದರಿ ಕಳ್ಳರು ಓಡಿಹೋದರು.
ಈ  ಪವಾಡಗಳನ್ನು ಸ್ವತಃ ಕಣ್ಣಾರೆ ಕಂಡ ಪೊಲೀಸರು ಮತ್ತು ಹಳ್ಳಿಗರು, ಆ ಬೈಕ್ ಅನ್ನು ಮತ್ತೆ ಠಾಣೆಗೆ ಕೊಂಡೊಯ್ಯದಿರಲು ನಿರ್ಧರಿಸಿದರು. ಬೈಕ್ ನಿಂತಿದ್ದ ಅದೇ ಅಪಘಾತದ ಸ್ಥಳದಲ್ಲೇ ಒಂದು ಪವಿತ್ರ ಮಂಟಪವನ್ನು ನಿರ್ಮಿಸಲಾಯಿತು. ಆ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಗಾಜಿನ ಕವಚದೊಳಗೆ ಅತ್ಯಂತ ಗೌರವದಿಂದ ಪ್ರತಿಷ್ಠಾಪಿಸಲಾಯಿತು. ಅದಕ್ಕೆ ‘ಬುಲೆಟ್ ಬಾಬಾ ದೇವಾಲಯ’ ಅಥವಾ ಓಂ ಬನ್ನಾ ಧಾಮ್ ಎಂದು ಹೆಸರಿಡಲಾಯಿತು.
ಇಂದು ಈ ದೇವಸ್ಥಾನ ಕೇವಲ ಧಾರ್ಮಿಕ ಮಂದಿರವಲ್ಲ.  ರಸ್ತೆ ಭದ್ರತೆ ಮತ್ತು ಚಾಲಕರ ಜೀವಂತ ನಂಬಿಕೆಯ ಕೇಂದ್ರ. ಪಾಲಿ ಜೋಧ್‌ಪುರ ಹೆದ್ದಾರಿಯಲ್ಲಿ ಸಾಗುವ ಯಾವುದೇ ವಾಹನವಾಗಲಿ,ಅದು ಸಣ್ಣ ಸ್ಕೂಟರ್ ಆಗಿರಲಿ, ಐಷಾರಾಮಿ ಕಾರಾಗಿರಲಿ ಅಥವಾ ಬೃಹತ್ 18-ವೀಲ್ ಟ್ರಕ್ ಆಗಿರಲಿ ಬುಲೆಟ್ ಬಾಬಾನ ಮುಂದೆ ನಿಂತು, ಹಾರನ್ ಬಾರಿಸಿ, ಪ್ರಾರ್ಥಿಸದೆ ಮುಂದೆ ಹೋಗುವುದಿಲ್ಲ. ಭಕ್ತರು ಓಂ ಬನ್ನಾನ ಆ ಬೈಕ್‌ಗೆ ಧೂಪ, ಹೂವು, ಸಕ್ಕರೆ ಹಾಗೂ ರಜಪೂತ ಯೋಧರ ಸಾಂಪ್ರದಾಯಿಕ ಗೌರವದ ಸಂಕೇತವಾಗಿ ಮದ್ಯದ ಬಾಟಲಿಗಳನ್ನು ಅರ್ಪಿಸುತ್ತಾರೆ. ಓಂ ಬನ್ನಾರ ಜಾನಪದ ಲಾವಣಿಗಳು ಮತ್ತು ಹಾಡುಗಳನ್ನು ಚಾಲಕರು ತಮ್ಮ ಪ್ರಯಾಣದುದ್ದಕ್ಕೂ ಕೇಳುತ್ತಾ ಸುರಕ್ಷಿತವಾಗಿ ಸಾಗುತ್ತಾರೆ.
ರಸ್ತೆ ಅಪಘಾತದಲ್ಲಿ ದೇಹ ತೊರೆದ ಒಬ್ಬ ಯುವಕ, ತನ್ನ ಅತೀಂದ್ರಿಯ ಆತ್ಮಶಕ್ತಿಯ ಮೂಲಕ ಸಾವಿರಾರು ಚಾಲಕರ ರಕ್ಷಕನಾಗಿ, ದೇವತ್ವ ಪಡೆದ ಕಥೆ ಇದು. ವಿಜ್ಞಾನಕ್ಕೇ ಸವಾಲಾಗಿ ನಿಂತಿರುವ ಬುಲೆಟ್ ಬಾಬಾ ಎನ್ನುವ ಈ ಶಕ್ತಿ, ಭಾರತದ ನಂಬಿಕೆ ಮತ್ತು ಅಧ್ಯಾತ್ಮದ ಶ್ರೇಷ್ಠತೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ.