ನಾನು ಕಲ್ಲು. ಈ ನೆಲದ ಆಳದಲ್ಲಿ ಹುಟ್ಟಿ, ಯುಗಯುಗಾಂತರಗಳಿಂದ ಮೌನವಾಗಿ ಕುಳಿತು ಎಲ್ಲವನ್ನೂ ನೋಡಿದ ಜೀವಂತ ಸಾಕ್ಷಿ. ನನಗೆ ಮಾತಿನ ಅರಿವಿಲ್ಲ, ಆದರೆ ನನ್ನ ಮೈಮೇಲಿನ ಪ್ರತಿಯೊಂದು ಗೆರೆಯಲ್ಲಿ, ಪ್ರತಿ ಒರಟು ಮೇಲ್ಮೈಯಲ್ಲಿ ಸಾವಿರಾರು ಕಥೆಗಳಿವೆ. ಇಂದು ಆ ಕಥೆಗಳನ್ನು ಹೇಳಲು ನನಗೆ ಅವಕಾಶ ಸಿಕ್ಕಿದೆ. ನಾನು ನನ್ನ ಆತ್ಮಕಥೆಯನ್ನು ನಿಮ್ಮ ಮುಂದೆ ತೆರೆದಿಡುತ್ತೇನೆ.
ನಾನು ಹುಟ್ಟಿದ್ದು ಸುಲಭವಾಗಿ ಅಲ್ಲ. ಲಕ್ಷಾಂತರ ವರ್ಷಗಳ ಹಿಂದೆ, ಬೆಂಕಿಯ ಉಸಿರಾಟದ ಭೂಗರ್ಭದಲ್ಲಿ. ತೀವ್ರವಾದ ಶಾಖ ಮತ್ತು ಒತ್ತಡದ ನಡುವೆ ನನ್ನ ದೇಹವು ರೂಪ ಪಡೆಯಿತು. ನಾನು ಅಂದು ಕೇವಲ ಕರಗಿದ ಲಾವಾರಸದ ಒಂದು ಭಾಗವಾಗಿದ್ದೆ. ನಿಧಾನವಾಗಿ, ಭೂಮಿಯೊಳಗೆ ತಣ್ಣಗಾಗುತ್ತಾ ಗಟ್ಟಿಯಾದೆ. ನನ್ನೊಳಗಿನ ಖನಿಜಗಳ ಕಣಗಳು ಜೋಡಣೆಯಾಗಿ, ಬೃಹತ್ ಶಿಲಾಪರ್ವತದ ಒಂದು ಅಂಗವಾದೆ. ನನ್ನ ಮೂಲ ಬಣ್ಣ ತಿಳಿ ಬೂದು, ಗಟ್ಟಿತನವೇ ನನ್ನ ಶಕ್ತಿ. ಆ ಬೃಹತ್ ಪರ್ವತದ ಗರ್ಭದಲ್ಲಿ, ನಾನು ವರ್ಷಗಳವರೆಗೆ ಮಲಗಿದ್ದೆ. ನನ್ನ ಸುತ್ತಲೂ ಮೌನವಿತ್ತು, ಆಳವಾದ ಶಾಂತಿಯಿತ್ತು. ನನ್ನ ಸೃಷ್ಟಿಯ ರಹಸ್ಯವನ್ನು ಅರಿತಿದ್ದೆ. ನಾನೊಬ್ಬ ಆಗ್ನೇಯ ಶಿಲೆ ನನ್ನದೇ ಆದ ಅಸ್ತಿತ್ವದ ಘನತೆಯನ್ನು ಅರಿತುಕೊಂಡಿದ್ದೆ. ಆಳದಲ್ಲಿ ಮಲಗಿದ್ದ ನನ್ನನ್ನು ಹೊರಜಗತ್ತಿಗೆ ಕರೆತಂದದ್ದು ಪ್ರಕೃತಿಯ ಶಕ್ತಿಗಳು. ಭೂಮಿಯ ಮೇಲಾದ ದೊಡ್ಡದಾದ ಚಲನೆ, ತಾಪಮಾನದ ತೀವ್ರ ವ್ಯತ್ಯಾಸ ಮತ್ತು ನೀರು. ಲಕ್ಷಾಂತರ ವರ್ಷಗಳ ಕಾಲ ಮಳೆ, ಗಾಳಿ ಮತ್ತು ಸೂರ್ಯನ ಶಾಖ ನನ್ನನ್ನು ಸವೆಸುತ್ತಾ ಬಂದವು. ಬೃಹತ್ ಪರ್ವತದ ಭಾಗವಾಗಿದ್ದ ನಾನು, ಬಿರುಕುಬಿಟ್ಟು, ಒಡೆದು, ಒಂದು ಗುಂಡುಗಲ್ಲಾಗಿ ಕೆಳಗೆ ಉರುಳಿದೆ. ಅದು ನೋವಿನ ಪಯಣವಾಗಿತ್ತು, ಆದರೆ ಹೊಸ ಜೀವನದ ಆರಂಭವೂ ಆಗಿತ್ತು.
ನದಿಯ ಪ್ರವಾಹ ನನ್ನನ್ನು ಎಳೆದುಕೊಂಡು ಹೋಯಿತು. ಕೆಳಗೆ ಇಳಿಯುವಾಗ ನಾನು ಅಸಂಖ್ಯಾತ ಇತರ ಕಲ್ಲುಗಳೊಂದಿಗೆ ಘರ್ಷಣೆಗೊಳಪಟ್ಟೆ. ಆ ಘರ್ಷಣೆಗಳು ನನ್ನ ಒರಟುತನವನ್ನು ತೆಗೆದು, ನನ್ನನ್ನು ನುಣುಪಾದ ಗುಂಡುಕಲ್ಲುವನ್ನಾಗಿ ಮಾಡಿದವು. ನಾನು ದೊಡ್ಡ ಬೆಟ್ಟದ ಬಂಡೆಯಿಂದ ಒಂದು ಪುಟ್ಟ ನದೀಕಲ್ಲಿನ ರೂಪಕ್ಕೆ ಬದಲಾಗುತ್ತಿದ್ದೆ. ಅಂದು ನನಗೆ ಆ ನೋವು ಅರ್ಥವಾಗಿರಲಿಲ್ಲ, ಆದರೆ ಅದು ನನ್ನನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸುವ ಪರೀಕ್ಷೆಯಾಗಿತ್ತು. ಆ ಸವೆತವೇ ನನಗೆ ಹೊಸ ಅಂದವನ್ನು ನೀಡಿತು.
ನದೀ ಪಾತ್ರದ ತುದಿಯಲ್ಲಿದ್ದ ನನ್ನನ್ನು ಒಂದು ದಿನ ಒಬ್ಬ ಶಿಲ್ಪಿಯ ಕಣ್ಣು ಸೆಳೆಯಿತು. ಅವನ ಹೆಸರು 'ಕೇಶವ'. ಅವನು ತನ್ನ ಕೈಗಳಿಂದ ನನ್ನನ್ನು ಎತ್ತಿ, ನನ್ನ ನುಣುಪಾದ ಮೇಲ್ಮೈಯನ್ನು ಸ್ಪರ್ಶಿಸಿದ. ಆ ಸ್ಪರ್ಶವೇ ವಿಭಿನ್ನವಾಗಿತ್ತು. ನನಗೆ ಹೊಸ ಜೀವನ ಸಿಕ್ಕಿತು. ಕೇಶವ ನನ್ನನ್ನು ತನ್ನ ಕಾರ್ಯಾಗಾರಕ್ಕೆ ತೆಗೆದುಕೊಂಡು ಹೋದ. ಅಲ್ಲಿ ನನ್ನಂತಹ ಅನೇಕ ಕಲ್ಲುಗಳಿದ್ದವು. ಕೆಲವರು ಭಯದಿಂದ ನಡುಗುತ್ತಿದ್ದರು. ನಾನೂ ಭಯಪಟ್ಟಿದ್ದೆ. ನನ್ನ ಮೇಲೆ ಉಳಿ ಮತ್ತು ಸುತ್ತಿಗೆಯ ಪೆಟ್ಟು ಬೀಳಲು ಶುರುವಾಯಿತು. ಮೊದಲ ಪೆಟ್ಟು ತುಂಬಾ ನೋವಿನಿಂದ ಕೂಡಿತ್ತು. ಯಾಕೆ ನನಗೆ ಈ ಹಿಂಸೆ? ಎಂದು ನಾನು ನೊಂದುಕೊಂಡೆ. ಆದರೆ ಕೇಶವನ ಕಣ್ಣುಗಳಲ್ಲಿ ಒಂದು ನಿರ್ದಿಷ್ಟವಾದ ಕನಸಿತ್ತು. ಪ್ರೀತಿ ಮತ್ತು ನಿಶ್ಚಯವಿತ್ತು. ಆ ನೋವನ್ನು ತಾಳಿದರೆ ನನಗೆ ಒಂದು ಹೊಸ ಅರ್ಥ ಸಿಗುತ್ತದೆ ಎಂದು ಅವನು ಹೇಳಿದಂತೆ ಭಾಸವಾಯಿತು. ಅವನು ದಿನಗಟ್ಟಲೆ ನನ್ನ ಮೇಲೆ ಕೆಲಸ ಮಾಡಿದ. ನನ್ನ ಒರಟು ಅಂಚುಗಳನ್ನು ತೆಗೆದುಹಾಕಿದ, ಅನಗತ್ಯ ಭಾಗಗಳನ್ನು ಕತ್ತರಿಸಿದ. ಕೊನೆಗೆ, ಆ ಸಾವಿರಾರು ಪೆಟ್ಟುಗಳ ನಂತರ, ನನಗೆ ಹೊಸ ರೂಪ ಸಿಕ್ಕಿತು. ನಾನು ಕೇವಲ ಕಲ್ಲು ಆಗಿರಲಿಲ್ಲ. ನಾನು ಈಗ ಶ್ರೀಕೃಷ್ಣನ ಸುಂದರವಾದ ವಿಗ್ರಹವಾಗಿದ್ದೆ. ಯಾವುದೇ ಮಹಾನ್ ಕಾರ್ಯಕ್ಕೆ ನೋವು ಸಹಜ. ನಿನಗೆ ನೋವಾದರೂ, ಆ ನೋವಿನ ನಂತರ ನೀನು ಶಾಶ್ವತ ರೂಪ ಪಡೆಯುವೆ. ಈಗ ನೀನು ಕಲ್ಲು ಅಲ್ಲ, ನೀನು 'ದೇವರು'. ಸಾವಿರಾರು ಜನರ ಪೂಜೆ, ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರನಾಗುವೆ.
ಶಿಲ್ಪಿಯ ಆ ಮಾತುಗಳು ನನ್ನ ನೋವನ್ನೆಲ್ಲಾ ಮರೆಸಿಬಿಟ್ಟವು.
ನನ್ನನ್ನು ಒಂದು ದೊಡ್ಡ ಮತ್ತು ಸುಂದರವಾದ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಆ ಸ್ಥಳವು ತುಂಬಾ ಪವಿತ್ರವಾಗಿತ್ತು. ಸುತ್ತಲೂ ಧೂಪ-ದೀಪದ ಪರಿಮಳ, ಶಂಖದ ನಾದ ಮತ್ತು ಭಕ್ತರ ಪಿಸುಮಾತುಗಳು.
ನಾನು ಕೃಷ್ಣನ ವಿಗ್ರಹವಾದ ನಂತರ, ನನ್ನ ಜೀವನವೇ ಬದಲಾಯಿತು.ಶತಮಾನಗಳ ಕಾಲ ನಾನು ನಿಂತಿದ್ದೇನೆ. ಅನೇಕ ರಾಜವಂಶಗಳು ಬಂದು ಹೋದವು. ಶ್ರೇಷ್ಠ ಚಕ್ರವರ್ತಿಗಳು ಬಂದು ನನ್ನ ಮುಂದೆ ತಲೆಬಾಗಿ ಆಶೀರ್ವಾದ ಪಡೆದರು. ಅವರ ಗರ್ವ, ಪಶ್ಚಾತ್ತಾಪ ಮತ್ತು ಪ್ರಾರ್ಥನೆ ಎಲ್ಲವನ್ನೂ ನೋಡಿದ್ದೇನೆ. ಸಾಮ್ರಾಜ್ಯಗಳು ಹೇಗೆ ಹುಟ್ಟುತ್ತವೆ ಮತ್ತು ಹೇಗೆ ನಾಶವಾಗುತ್ತವೆ ಎಂಬುದಕ್ಕೆ ನಾನು ಮೂಕಸಾಕ್ಷಿ. ನನ್ನನ್ನು ಆರಾಧಿಸಲು ಬರುವ ಸಾಮಾನ್ಯ ಜನರ ಕಥೆಗಳೇ ಹೆಚ್ಚು ಮನಮಿಡಿಯುವಂಥವು. ಅಮ್ಮನೊಬ್ಬಳು ತನ್ನ ಮಗನ ಆರೋಗ್ಯಕ್ಕಾಗಿ ಮಾಡಿದ ಕಣ್ಣೀರಿನ ಪ್ರಾರ್ಥನೆ, ಯುವಕನೊಬ್ಬ ಉತ್ತಮ ಉದ್ಯೋಗಕ್ಕಾಗಿ ಮಾಡಿದ ಬೇಡಿಕೆ, ವೃದ್ಧ ದಂಪತಿಗಳು ತಮ್ಮ ಕೊನೆಯ ದಿನಗಳಿಗಾಗಿ ಕೇಳಿದ ಶಾಂತಿ, ಪ್ರತಿಯೊಬ್ಬರ ನಂಬಿಕೆ, ಭಯ, ಭರವಸೆಗಳನ್ನು ನಾನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ಒಮ್ಮೆ, ಬರಗಾಲ ಬಂದಾಗ, ಜನರು ನನ್ನ ಮುಂದೆ ಕುಳಿತು ದಿನಗಟ್ಟಲೆ ಪ್ರಾರ್ಥನೆ ಮಾಡಿದರು. ಆಗ ನಾನು ಕೇವಲ ಕಲ್ಲು ಎಂದು ಅನಿಸಲಿಲ್ಲ. ಆ ನಂಬಿಕೆ ನನ್ನನ್ನು ಬೃಹತ್ ಶಕ್ತಿಯನ್ನಾಗಿ ಮಾಡಿತ್ತು. ಕೆಲವೇ ದಿನಗಳಲ್ಲಿ ಸುರಿದ ಭಾರಿ ಮಳೆಯು ಜನರ ನಂಬಿಕೆಗೆ ಪ್ರತ್ಯುತ್ತರ ನೀಡಿದಾಗ, ಕೃಷ್ಣನಾದ ನಾನು ಆನಂದದಿಂದ ನಕ್ಕಿದ್ದೆ.
ಯುಗಗಳು ಕಳೆದವು. ದೇವಸ್ಥಾನದ ಹೊರಗೆ ಜಗತ್ತು ವೇಗವಾಗಿ ಬದಲಾಗುತ್ತಾ ಹೋಯಿತು. ಕುದುರೆ ಸವಾರಿ ಮಾಡುವ ಸೈನಿಕರ ಬದಲಿಗೆ ಕಾರುಗಳು ಬಂದವು, ಗಂಟೆಯ ಸದ್ದು ದೂರವಾದಾಗ ಫೋನಿನ ಶಬ್ದ ಹೆಚ್ಚಾಯಿತು. ಹೊಸ ಭಾಷೆಗಳು, ಹೊಸ ಸಂಸ್ಕೃತಿಗಳು ಬಂದವು.
ಆದರೂ ನನ್ನಲ್ಲಿ ಆಳವಾದ ಶಾಂತಿ ಇತ್ತು. ಏಕೆಂದರೆ ನಾನು ಬಲ್ಲೆ, ಮನುಷ್ಯನು ಎಷ್ಟು ಬದಲಾದರೂ, ಅವರ ಮೂಲಭೂತ ಅವಶ್ಯಕತೆಗಳು ಎಂದಿಗೂ ಬದಲಾಗುವುದಿಲ್ಲ.
ಒಂದು ಕಲ್ಲು ಸಾವಿರ ಯುಗಗಳ ಕಥೆಯನ್ನು ಹೇಳುತ್ತದೆ. ಪ್ರಕೃತಿಯ ಶಕ್ತಿ, ಪರಿವರ್ತನೆಯ ನೋವು, ಶಿಲ್ಪಿಯ ಕಲೆ ಮತ್ತು ಮಾನವನ ನಿಷ್ಕಳಂಕ ನಂಬಿಕೆ - ಇವೆಲ್ಲವೂ ನನ್ನ ಅಸ್ತಿತ್ವದ ಭಾಗಗಳು. ನಾನು ಕೇವಲ ಒಂದು ಕಲ್ಲು ಅಲ್ಲ, ನಾನು ನಿಮ್ಮೆಲ್ಲರ ಇತಿಹಾಸದ ಪ್ರತಿಬಿಂಬ.
ನಿಮಗೆ ಈ ಕಥೆ ಇಷ್ಟವಾಯಿತೇ? ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸುವಿರಾ.