Half-asleep cry in Kannada Horror Stories by Danger Writer books and stories PDF | ಅರ್ಧ ನಿದ್ದೆಯ ಕೂಗು

Featured Books
Categories
Share

ಅರ್ಧ ನಿದ್ದೆಯ ಕೂಗು


ರಾತ್ರಿ ಸರಿಯಾಗಿ ಮೂರು ಗಂಟೆ ಹದಿನೇಳು ನಿಮಿಷ.
 ಬೆಂಗಳೂರಿನ ಹೊರವಲಯದ ಆ ಹಳೆಯ ಬಾಡಿಗೆ ಮನೆಯಲ್ಲಿ ಮಲಗಿದ್ದ ಚೇತನ್‌ಗೆ ನಿದ್ದೆಯಲ್ಲೇ ಎದೆಯ ಮೇಲೆ ಯಾರೋ ಬಂದು ಮಂಡಿಯೂರಿ ಕೂತಂತಾಯಿತು. ಉಸಿರು ಗಂಟಲಲ್ಲೇ ಸಿಕ್ಕಿಹಾಕಿಕೊಂಡಿತು. ಕೈಕಾಲುಗಳನ್ನು ಅಲುಗಾಡಿಸಲು ಹರಸಾಹಸ ಪಟ್ಟ, ಆದರೆ ಇಡೀ ದೇಹಕ್ಕೆ ಪಾರ್ಶ್ವವಾಯು ಹೊಡೆದಂತೆ ಮರದ ಮುದ್ದೆಯಾಗಿತ್ತು. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ ಸ್ಲೀಪ್ ಪ್ಯಾರಾಲಿಸಿಸ್ ಎನ್ನುತ್ತಾರೆ ಎಂಬುದು ಅವನಿಗೆ ಗೊತ್ತಿತ್ತು. ಈ ಹಿಂದೆಯೂ ಒಂದೆರಡು ಬಾರಿ ಹೀಗಾಗಿದೆ.
 ಆದರೆ ಈ ಬಾರಿ ಅದು ಕೇವಲ ಭ್ರಮೆಯಾಗಿರಲಿಲ್ಲ.
 ಅವನ ಕಿವಿಯ ತೀರ ಹತ್ತಿರ, ಕೇವಲ ಒಂದಿಂಚು ದೂರದಲ್ಲಿ ಯಾರೋ ಒಣಗಿದ ಎಲೆಯ ಮೇಲೆ ಉಗುರು ಗೀಚಿದಂತಹ ಕರ್ಕಶ ಧ್ವನಿಯಲ್ಲಿ ದೀರ್ಘವಾಗಿ ಉಸಿರು ಬಿಡುತ್ತಿದ್ದರು. ಆ ಉಸಿರಿನಲ್ಲಿ ಕೊಳೆತ ಹಸಿ ಮಾಂಸದ ಮತ್ತು ಒದ್ದೆ ಮಣ್ಣಿನ ವಾಸನೆ ಇತ್ತು.
 ಚೇತನ್ ಕಣ್ಣಿನ ರೆಪ್ಪೆಗಳನ್ನು ಬಲವಂತವಾಗಿ ಕೊಂಚ ತೆರೆದ. ಮಂಚದ ಅಂಚಿನಲ್ಲಿ, ನೆಲದ ಮೇಲೆ ಯಾರೋ ಕುಳಿತಿದ್ದರು. ಕೇವಲ ಕತ್ತಲೆಯಲ್ಲ, ಆ ಕತ್ತಲೆಗಿಂತಲೂ ದಟ್ಟವಾದ ಕಪ್ಪು ನೆರಳಿನ ಆಕಾರ. ಆ ಆಕಾರದ ಮುಖ ಚೇತನ್ ಮಲಗಿದ್ದ ದಿಂಬಿನ ನೇರಕ್ಕೇ ಇತ್ತು. ಮುಖವೆಲ್ಲ ಬಿಳಿಯಾದ, ನಾರಿನಂತಿರುವ ಉದ್ದನೆಯ ಕೂದಲು ಆವರಿಸಿತ್ತು. ಆ ಕೂದಲಿನ ಸಂದಿಯಿಂದ ಎರಡು ರಕ್ತಸಿಕ್ತ ಗುಳಿಬಿದ್ದ ಕಣ್ಣುಗಳು ರೆಪ್ಪೆಯಿಕ್ಕದೆ ಚೇತನ್‌ನನ್ನೇ ದಿಟ್ಟಿಸುತ್ತಿದ್ದವು.
 ಅದು ನಿಧಾನವಾಗಿ ತನ್ನ ಬಾಯಿಯನ್ನು ತೆರೆಯಿತು. ಆ ಬಾಯಿ ಮನುಷ್ಯರ ಹಾಗಿರಲಿಲ್ಲ. ದವಡೆ ಕಿವಿವರೆಗೂ ಅಗಲವಾಗಿ ಹರಿದುಹೋಗಿ, ಒಳಗಿಂದ ಕಪ್ಪು ರಕ್ತ ತೊಟ್ಟಿಕ್ಕುತ್ತಿತ್ತು. ಚೇತನ್ ನಾಲಿಗೆ ಬಾಯಿಯ ಒಳಭಾಗಕ್ಕೆ ಅಂಟಿಕೊಂಡಿತ್ತು. ಚೀರಲು ನೋಡಿದ, ಬಾಯಿಯಿಂದ ಕೇವಲ ನರಳಿಕೆಯ ಸಣ್ಣ ಶಬ್ದವಷ್ಟೇ ಹೊರಬಂತು.
 ಕ್ಷಣಾರ್ಧದಲ್ಲಿ ಆ ಆಕಾರ ತನ್ನ ಕೊಳೆಯಾದ, ಹಳದಿ ಉಗುರುಗಳಿದ್ದ ಉದ್ದನೆಯ ಕೈಯನ್ನು ಚಾಚಿ, ಚೇತನ್‌ನ ಗಂಟಲಿನ ಮೇಲೆ ಬೆರಳುಗಳನ್ನು ಊರಿತು. ಐಸ್ ತುಂಡಿಗಿಂತಲೂ ತಣ್ಣನೆಯ ಸ್ಪರ್ಶ ಆ ಬೆರಳುಗಳು ಚರ್ಮವನ್ನು ಸೀಳಿ ಒಳಗೆ ಇಳಿಯುವಂತೆ ಭಾಸವಾಗುತ್ತಿದ್ದಂತೆ ಚೇತನ್ ಇಡೀ ಶಕ್ತಿಯನ್ನು ಒಗ್ಗೂಡಿಸಿ ಎದೆಬಡಿತದ ಕಟ್ಟಕಡೆಯ ಆವೇಶದಲ್ಲಿ ಮೈಯನ್ನು ಒಮ್ಮೆಲೆ ಝಾಡಿಸಿದ. ಅಮ್ಮ ಎಂದು ಗಂಟಲೊಡೆದು ಕಿರುಚುತ್ತಾ ಬೆಡ್‌ನಿಂದ ಎದ್ದು ಕುಳಿತ.
 ಮೈಯೆಲ್ಲ ಜಿಡ್ಡಿನ ಬೆವರಿನಿಂದ ತೊಯ್ದುಹೋಗಿತ್ತು. ಎದೆಬಡಿತ ಎಷ್ಟು ಜೋರಾಗಿತ್ತೆಂದರೆ ಎದೆಗೂಡು ಒಡೆದುಹೋಗುವಂತಿತ್ತು.
 ಕೋಣೆಯಲ್ಲಿ ಕತ್ತಲಿತ್ತು. ಫ್ಯಾನ್ ಎಂದಿನಂತೆ ನಿಧಾನವಾಗಿ ತಿರುಗುತ್ತಿತ್ತು. ಯಾರೂ ಇರಲಿಲ್ಲ.
 ಛೇ ಜಸ್ಟ್ ಎ ಬ್ಯಾಡ್ ಡ್ರೀಮ್ ಚೇತನ್ ನಡುಗುವ ಕೈಗಳಿಂದ ಮುಖ ಒರೆಸಿಕೊಂಡು ನಿಟ್ಟುಸಿರು ಬಿಟ್ಟ. ಸೈಡ್ ಟೇಬಲ್ ಮೇಲಿದ್ದ ನೀರಿನ ಬಾಟಲಿ ಎತ್ತಿ, ಒಂದೇ ಉಸಿರಿಗೆ ಅರ್ಧ ಬಾಟಲಿ ನೀರು ಕುಡಿದ. ಮೈ ನಡುಕ ಇನ್ನೂ ನಿಂತಿರಲಿಲ್ಲ. ವಾಶ್‌ರೂಮ್‌ಗೆ ಹೋಗಿ ಮುಖ ತೊಳೆದರೆ ನೆಮ್ಮದಿಯಾದೀತು ಎಂದುಕೊಂಡು ಎದ್ದು ಬೆಡ್‌ರೂಮ್ ಲೈಟ್ ಆನ್ ಮಾಡಿದ.
 ಟ್ಯೂಬ್‌ಲೈಟ್ ಎರಡು ಬಾರಿ ಮಿಣುಕಿ ಉರಿಯಿತು.
 ಚೇತನ್ ನಡುಗುತ್ತಾ ಬಾತ್‌ರೂಮ್‌ನತ್ತ ಹೆಜ್ಜೆ ಇಟ್ಟವನು, ನೆಲವನ್ನು ನೋಡಿ ಕಾಲ ಬುಡದಲ್ಲೇ ಗಿರಕಿ ಹೊಡೆದು ನಿಂತುಬಿಟ್ಟ. ಅವನ ಮಂಚದ ಅಂಚಿನಿಂದ ಬಾತ್‌ರೂಮ್ ಬಾಗಿಲವರೆಗೆ ನೆಲದ ಮೇಲೆ ಒದ್ದೆಯಾದ, ಕಪ್ಪು ಮಣ್ಣಿನ ಹೆಜ್ಜೆಗುರುತುಗಳು ಮೂಡಿ ದ್ದವು. ಆ ಹೆಜ್ಜೆಗಳು ಯಾವುದೇ ಚಪ್ಪಲಿಯದಲ್ಲ. ಐದು ಅಸಹಜ ಉದ್ದನೆಯ ಕಾಲ್ಬೆರಳುಗಳಿರುವ, ಹಿಮ್ಮಡಿ ಮುರಿದು ಹಿಂದಕ್ಕೆ ತಿರುಗಿರುವ ಹೆಣ್ಣಿನ ಹೆಜ್ಜೆಗುರುತುಗಳು.
 ಅದು ಕನಸಲ್ಲ ಚೇತನ್‌ನ ಬೆನ್ನುಮೂಳೆಯಲ್ಲಿ ಹಿಮದ ನೀರು ಹರಿದಂತಾಯಿತು. ಆತನ ಕಣ್ಣುಗಳು ನಿಧಾನವಾಗಿ ಆ ಹೆಜ್ಜೆಗಳ ಕೊನೆಯನ್ನು ಹಿಂಬಾ ಲಿಸಿದವು. ಆ ಹೆಜ್ಜೆಗುರುತುಗಳು ಬಾತ್‌ರೂಮ್ ಒಳಗೆ ಹೋಗಿ ನಿಂತಿದ್ದವು. ಬಾತ್‌ರೂಮ್‌ನ ಮರದ ಬಾಗಿಲು ಅರ್ಧ ಇಂಚು ತೆರೆದುಕೊಂಡಿತ್ತು. ಒಳಗೆ ಕತ್ತಲಿತ್ತು.
 ಚೇತನ್‌ಗೆ ತಕ್ಷಣವೇ ಆ ಮನೆಯಿಂದ, ಆ ಬಾಗಿಲಿನಿಂದ ಹೊರಗೆ ಓಡಿಹೋಗಬೇಕೆನಿಸಿತು. ಆತ ಬಲಭಾಗಕ್ಕೆ ತಿರುಗಿ ಬೆಡ್‌ರೂಮ್‌ನ ಮುಖ್ಯ ಬಾಗಿಲಿಗೆ ಕೈಹಾಕಿದ. ಹ್ಯಾಂಡಲ್ ತಿರುಗಿಸಿದ. ಬಾಗಿಲು ಲಾಕ್ ಆಗಿರಲಿಲ್ಲ, ಆದರೆ ಹೊರಗಿನಿಂದ ಯಾರೋ ಬೆಟ್ಟದಷ್ಟು ಭಾರ ಹಾಕಿ ಹಿಡಿದಂತೆ ಸ್ವಲ್ಪವೂ ಕದಲಲಿಲ್ಲ.
 "ಯಾರಾದರೂ ಕಾಪಾಡಿ ಎಂದು ಬಾಗಿಲಿಗೆ ಡಿಕ್ಕಿ ಹೊಡೆದ. ಹೊರಗಿನಿಂದ ಯಾವುದೇ ಸದ್ದಿಲ್ಲ.
 ಅದೇ ಕ್ಷಣದಲ್ಲಿ ಆತನ ಹಿಂದಿದ್ದ ಬಾತ್‌ರೂಮ್‌ನ ಕತ್ತಲೆಯಿಂದ ಒಂದು ಶಬ್ದ ಬಂತು. ಟಪ್, ಟಪ್, ಟಪ್
 ಬೇಸಿನ್‌ನ ನಲ್ಲಿಯಿಂದ ನೀರು ತೊಟ್ಟಿಕ್ಕುವ ಸದ್ದಲ್ಲ ಅದು. ದಪ್ಪನೆಯ ರಕ್ತ ನೆಲಕ್ಕೆ ಬೀಳುತ್ತಿರುವ ಸದ್ದು. ಅದರ ಜೊತೆಗೇ, ಮಗುವೊಂದು ಹಲ್ಲು ಕಡಿಯು ವಂತಹ ಕಟ ಕಟ ಶಬ್ದ. ಚೇತನ್ ಜೀವಭಯದಿಂದ ಮೈ ನಡುಗುತ್ತಾ, ಗೋಡೆಗೆ ಬೆನ್ನು ಆನಿಸಿ ನಿಂತು ಬಾತ್‌ರೂಮ್ ಬಾಗಿಲನ್ನೇ ನೋಡಿದ.
 ಆ ಅರ್ಧ ತೆರೆದ ಬಾಗಿಲಿನ ಸಂದಿಯಿಂದ ಮೆಲ್ಲನೆ ನಾಲ್ಕು ನೀಲಿಗಟ್ಟಿದ ಬೆರಳುಗಳು ಹೊರಬಂದು ಬಾಗಿಲ ಅಂಚನ್ನು ಹಿಡಿದುಕೊಂಡವು. ಉಗುರುಗಳು ಕಪ್ಪು ಕೊಳೆಯಿಂದ ತುಂಬಿದ್ದವು. ಆ ಬೆರಳುಗಳು ಬಾಗಿಲನ್ನು ನಿಧಾನವಾಗಿ ಇಂಚಿಂಚಾಗಿ ತಳ್ಳಿದವು.
 ಕ್ರೀಚ್ ಎಂಬ ಮರದ ಕರ್ಕಶ ಕಿರುಚಾಟದೊಂದಿಗೆ ಬಾಗಿಲು ಪೂರ್ತಿ ತೆರೆದುಕೊಂಡಿತು.
 ಅಲ್ಲಿ ನಿಂತಿದ್ದ ರೂಪವನ್ನು ನೋಡಿದ ಚೇತನ್‌ನ ಮೂತ್ರಕೋಶದ ಮೇಲಿನ ಹಿಡಿತ ಸಂಪೂರ್ಣವಾಗಿ ತಪ್ಪಿಹೋಯಿತು. ಬೆಚ್ಚನೆಯ ಮೂತ್ರ ಆತನ ಪ್ಯಾಂಟ್ ಒಳಗೆ ಹರಿದು ಕಾಲುಗಳ ಮೂಲಕ ನೆಲಕ್ಕೆ ಇಳಿಯಿತು. ಆತನಿಗೆ ಪ್ರಜ್ಞೆ ತಪ್ಪುವಂತಾಯಿತು, ಆದರೆ ಕಣ್ಣು ಮುಚ್ಚಿಕೊಳ್ಳಲು ದೇಹ ಸಹಕರಿಸುತ್ತಿರಲಿಲ್ಲ.
 ಅಲ್ಲಿ ನಿಂತಿದ್ದ ಹೆಂಗಸಿನ ಕುತ್ತಿಗೆ ಅಸ್ವಾಭಾವಿಕವಾಗಿ ತೊಡೆಗಳ ಮಟ್ಟಕ್ಕೆ ಬಾಗಿ, ಮುರಿದು ನೇತಾಡುತ್ತಿತ್ತು. ಆಕೆಯ ತಲೆ ತಲೆಕೆಳಗಾಗಿತ್ತು. ಆ ತಲೆಕೆಳಗಾದ ಮುಖದಲ್ಲಿ ಕಣ್ಣುಗುಡ್ಡೆಗಳೇ ಇರಲಿಲ್ಲ ಕೇವಲ ಎರಡು ಕಪ್ಪು ರಂಧ್ರಗಳಿದ್ದವು, ಅವುಗಳಿಂದ ಹಸಿ ರಕ್ತ ಕಪಾಲದ ಮೂಲಕ ಕೂದಲಿಗೆ ಹರಿಯುತ್ತಿತ್ತು. ಆಕೆಯ ಎದೆ ಸೀಳಿಹೋಗಿದ್ದು, ಒಳಗಿನ ಪಕ್ಕೆಲುಬುಗಳು ಹೊರಗೆ ಚಾಚಿಕೊಂಡಿದ್ದವು. ಆಕೆ ನಿಧಾನವಾಗಿ ತನ್ನ ಕೈಗಳನ್ನು ಚಾಚಿದಳು. ಆಕೆಯ ಬಾಯಿಯೊಳಗಿಂದ ಆ ಮುಂಚೆ ಕೇಳಿಸಿದ ಅದೇ ಒಣಗಿದ ಉಸಿರಾಟದ ಜೊತೆಗೆ ಒಂದು ಪಿಸುಮಾತು ಹೊರಬಂತು. ಅದು ಯಾವುದೇ ಅಪರಿಚಿತ ದೆವ್ವದ ಧ್ವನಿಯಾಗಿರಲಿಲ್ಲ. ಅದು ಸರಿಯಾಗಿ ಒಂದು ವಾರದ ಹಿಂದೆ ಇದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ, ಆತ ಪ್ರೀತಿಸಿ ಕೈಕೊಟ್ಟಿದ್ದ ಆತನ ಪ್ರೇಯಸಿ ಸುಮನಾಳ ಧ್ವನಿ. 
 ಚೇತನ್ ನಿದ್ದೆ ಬರಲಿಲ್ವಾ ನಿನಗೆ?
 ಆ ಧ್ವನಿ ಕಿವಿಗೆ ಬೀಳುತ್ತಿದ್ದಂತೆ, ಆಕೆ ನೆಲದ ಮೇಲೆ ಕಾಲಿಡದೆ, ಗಾಳಿಯಲ್ಲೇ ತೇಲುತ್ತಾ ಕ್ಷಣಾರ್ಧದಲ್ಲಿ ಚೇತನ್‌ನ ಮುಖದ ಎದುರಿಗೆ ಬಂದು ನಿಂತಳು. ಆಕೆಯ ತಣ್ಣನೆಯ ರಕ್ತಸಿಕ್ತ ಮೂಗು ಚೇತನ್‌ನ ಮೂಗಿಗೆ ತಾಗುತ್ತಿತ್ತು. ಕೊಳೆತ ಹೆಣದ ದುರ್ಗಂಧ ಆತನ ಉಸಿರನ್ನು ಕಟ್ಟಿಸಿತು. ಆಕೆ ತನ್ನ ಕೈಯಲ್ಲಿದ್ದ ಚೂಪಾದ ಗಾಜಿನ ಚೂರನ್ನು ಚೇತನ್‌ನ ಎದೆಯ ಮೇಲೆ ನಿಧಾನವಾಗಿ ಒತ್ತತೊಡಗಿದಳು. ನೋವು ಚರ್ಮವನ್ನು ಸೀಳಿ ಒಳಗೆ ಇಳಿಯುತ್ತಿತ್ತು.
 ನಾನು ಸಾಯುವಾಗಲೂ ಹೀಗೇ ಉಸಿರು ಕಟ್ಟುತ್ತಿತ್ತು ಗೊತ್ತಾ? ಬಾ ಇಬ್ಬರೂ ಒಟ್ಟಿಗೇ ಮಲಗೋಣ.
 ಚೇತನ್‌ಗೆ ಇಡೀ ಜಗತ್ತು ಕಪ್ಪಾಗತೊಡಗಿತು. ಆಕೆಯ ತಲೆಕೆಳಗಾದ ಮುಖದಲ್ಲಿ ಒಂದು ಭಯಾನಕ, ವಿಕೃತ ನಗು ಅರಳಿತು. ಕೊನೆಯ ಕ್ಷಣದಲ್ಲಿ ಆತನಿಗೆ ನೆನಪಾಗಿದ್ದು ಒಂದೇ ಆತ ಮಲಗುವ ಮುನ್ನ ಬೆಡ್‌ರೂಮ್‌ನ ಫ್ಯಾನ್‌ಗೆ ತೂಗುಹಾಕಿದ್ದ ಹಗ್ಗದ ಕುಣಿಕೆ ಇನ್ನೂ ಹಾಗೇ ಇತ್ತು.
 ಮರುದಿನ ಬೆಳಿಗ್ಗೆ, ಮನೆ ಮಾಲೀಕ ಬಾಗಿಲು ಒಡೆದು ಒಳಗೆ ಬಂದಾಗ ಕಂಡ ದೃಶ್ಯ ಚೇತನ್ ಫ್ಯಾನ್‌ನ ಹಗ್ಗಕ್ಕೆ ನೇತಾಡುತ್ತಿದ್ದ. ಆತನ ದೇಹ ಸಂಪೂರ್ಣ ನೀಲಿಗಟ್ಟಿತ್ತು. ಆತನ ಕೆಳಗೆ ನೆಲದ ಮೇಲೆ ಬಿದ್ದಿದ್ದ ಮೂತ್ರ ಮತ್ತು ರಕ್ತದ ನಡುವೆ, ಆತನದೇ ಕೈಬೆರಳುಗಳು ಗೋಡೆಯ ಮೇಲೆ ಕೊನೆಯುಸಿರಿನಲ್ಲಿ ಕೆರೆದು ಬರೆದಿದ್ದ ರಕ್ತದ ಅಕ್ಷರಗಳಿದ್ದವು.
 ಇವಳು ನನ್ನ ಮಲಗಲು ಬಿಡುತ್ತಿಲ್ಲ ಈಗ ನಿನ್ನ ಸರದಿ.